Home Blog Page 48

ನರಗಳ ಸಮಸ್ಯೆಯಿಂದ ಬಳಲುತ್ತಿದ್ದರೂ ಸ್ಟೇಜ್ ಏರಲು ಸಜ್ಜಾದ ಸೋನು ನಿಗಮ್

ಮುಂಬೈ: ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಖ್ಯಾತ ಗಾಯಕ ಸೋನು ನಿಗಮ್ ಅವರು ಚಿಕಿತ್ಸೆ ನಡುವೆಯೂ ತಮ್ಮ ಲೈವ್ ಪರ್ಫಾರ್ಮೆನ್ಸ್ ಮುಂದುವರಿಸಲು ನಿರ್ಧರಿಸಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮುಂಬೈನಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮಕ್ಕೂ ಮುನ್ನ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಸೋನು ನಿಗಮ್, ನರಗಳ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಕಳೆದ ಒಂದು ವಾರದಿಂದ ಎಂಆರ್‌ಐ, ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದು, ನಿರಂತರ ಔಷಧಿ ಮತ್ತು ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಫಿಸಿಯೋಥೆರಪಿ ವೇಳೆ ತೀವ್ರ ನೋವು ಅನುಭವಿಸುತ್ತಿರುವುದಾಗಿ ಹೇಳಿರುವ ಅವರು, ಸದ್ಯ ನೋವು ನಿವಾರಕ ಔಷಧಿಗಳ ಸಹಾಯದಿಂದ ಚಿಕಿತ್ಸೆಯನ್ನು ಮುಂದುವರಿಸುತ್ತಿದ್ದಾರೆ.

ಇದೇ ವೇಳೆ ವೈದ್ಯರು ನೀಡಿರುವ ಹೈ-ಡೋಸ್ ಔಷಧಿಗಳ ಪರಿಣಾಮ ಗಂಟಲಿನ ಧ್ವನಿಯ ಮೇಲೂ ಬಿದ್ದಿದ್ದು, ‘ಗಂಟಲು ಸ್ವಲ್ಪ ಭಾರವಾಗಿರುವ ಅನುಭವವಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಗಾಯಕರಿಗೆ ಧ್ವನಿಯಲ್ಲಿ ಸಣ್ಣ ಬದಲಾವಣೆಯಾದರೂ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದರೆ ಸೋನು ನಿಗಮ್ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸದೆ ಅಭಿಮಾನಿಗಳ ಮುಂದೆ ಹಾಡಲು ಸಿದ್ಧರಾಗಿದ್ದಾರೆ. ಅವರ ಆರೋಗ್ಯ ಶೀಘ್ರವಾಗಿ ಸುಧಾರಿಸಲಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾರೈಸುತ್ತಿದ್ದಾರೆ.

ನಾಯಕರಿಗೆ ನೇರ ಟಾರ್ಗೆಟ್: ಬಿಡದಿಯಲ್ಲಿ ಕಾಂಗ್ರೆಸ್ ಪೋಸ್ಟರ್ ಅಟ್ಯಾಕ್ ವೈರಲ್

0

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧದ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ನೀಡಿರುವ ಬೆಂಬಲಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಪೋಸ್ಟರ್ ವಾರ್ ಮೂಲಕ ತೀವ್ರ ರಾಜಕೀಯ ಪ್ರತ್ಯುತ್ತರ ನೀಡಿದೆ.

ಬಿಡದಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅಂಟಿಸಲಾದ ಪೋಸ್ಟರ್‌ಗಳಲ್ಲಿ ಮೈತ್ರಿಪಕ್ಷ ನಾಯಕರ ವಿರುದ್ಧ ನೇರ ಮತ್ತು ವ್ಯಂಗ್ಯಾತ್ಮಕ ಟೀಕೆಗಳು ಕಾಣಿಸಿಕೊಂಡಿವೆ. ರೈತರ ಭೂಮಿ ವಿಚಾರದಿಂದ ಆರಂಭವಾಗಿ ವಿವಿಧ ಆರೋಪಗಳನ್ನು ಒಳಗೊಂಡ ಸಂದೇಶಗಳು ಪೋಸ್ಟರ್‌ಗಳಲ್ಲಿ ಪ್ರಕಟವಾಗಿವೆ.

ಬಿಜೆಪಿ ನಾಯಕ ಆರ್. ಅಶೋಕ್, ನಾರಾಯಣಸ್ವಾಮಿ ಹಾಗೂ ವಿಜಯೇಂದ್ರ ಅವರನ್ನು ಉಲ್ಲೇಖಿಸಿ ಕಠಿಣ ಭಾಷೆಯ ಟೀಕೆಗಳು ಪೋಸ್ಟರ್‌ನಲ್ಲಿ ಬಳಕೆ ಮಾಡಲಾಗಿದೆ. ಜೊತೆಗೆ ಜೆಡಿಎಸ್ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರ ಚಿತ್ರಗಳನ್ನು ಸೇರಿಸಿ ರಾಜಕೀಯ ಆರೋಪಾತ್ಮಕ ಸಂದೇಶಗಳನ್ನು ಹಾಕಲಾಗಿದೆ.

ಈ ಪೋಸ್ಟರ್ ಅಭಿಯಾನದಿಂದ ಬಿಡದಿಯಲ್ಲಿ ರಾಜಕೀಯ ತಾಪಮಾನ ಹೆಚ್ಚಿದ್ದು, ಬಿಜೆಪಿ-ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಮಾತಿನ ಕದನ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಯುಜಿಸಿ ನೆಟ್ ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆ: ಅಭ್ಯರ್ಥಿಗಳು ಹೀಗೆ ಸುಲಭವಾಗಿ ಡೌನ್ಲೋಡ್ ಮಾಡಬಹುದು!

ನವದೆಹಲಿ: ಜೂನ್ 2026ರ ಯುಜಿಸಿ ನೆಟ್ (UGC NET) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರವೇಶ ಪತ್ರ (Admit Card) ಬಿಡುಗಡೆ ಮಾಡಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಹಾಲ್‌ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಜೂನ್ 22, 23, 24, 25, 29 ಹಾಗೂ 30ರಂದು ನಡೆಯಲಿರುವ ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ಪ್ರಕಟಿಸಲಾಗಿದ್ದು, ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ (CBT) ವಿಧಾನದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಪರೀಕ್ಷೆಯ ವೇಳಾಪಟ್ಟಿ

ಯುಜಿಸಿ ನೆಟ್ ಜೂನ್ 2026 ಪರೀಕ್ಷೆಯು ಪ್ರತಿದಿನ ಎರಡು ಶಿಫ್ಟ್‌ಗಳಲ್ಲಿ ನಡೆಯಲಿದೆ.

  • ಮೊದಲ ಶಿಫ್ಟ್: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:00ರವರೆಗೆ
  • ಎರಡನೇ ಶಿಫ್ಟ್: ಮಧ್ಯಾಹ್ನ 3:00 ರಿಂದ ಸಂಜೆ 6:00ರವರೆಗೆ

ಪ್ರವೇಶ ಪತ್ರ ಡೌನ್‌ಲೋಡ್ ಮಾಡುವ ವಿಧಾನ

ಅಭ್ಯರ್ಥಿಗಳು ತಮ್ಮ Application Number ಹಾಗೂ ಅಗತ್ಯ ಲಾಗಿನ್ ವಿವರಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಬಹುದು.

ಡೌನ್‌ಲೋಡ್ ಮಾಡುವ ಹಂತಗಳು:

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ‘UGC NET Admit Card 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅರ್ಜಿ ಸಂಖ್ಯೆ ಹಾಗೂ ಅಗತ್ಯ ಮಾಹಿತಿಯನ್ನು ನಮೂದಿಸಿ ‘Submit’ ಬಟನ್ ಒತ್ತಿ.
  • ಪರದೆಯ ಮೇಲೆ ಕಾಣುವ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ, ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಿ.

ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಗಮನಿಸಬೇಕಾದ ಅಂಶಗಳು

ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿದ ಬಳಿಕ ಅದರಲ್ಲಿ ಅಭ್ಯರ್ಥಿಯ ಹೆಸರು, ಫೋಟೋ, ಪರೀಕ್ಷೆಯ ದಿನಾಂಕ, ಸಮಯ ಹಾಗೂ ಪರೀಕ್ಷಾ ಕೇಂದ್ರದ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಪ್ರವೇಶ ಪತ್ರದ ಮುದ್ರಿತ ಪ್ರತಿ ಹಾಗೂ ಮಾನ್ಯವಾದ ಫೋಟೋ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಈ ದಾಖಲೆಗಳಿಲ್ಲದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡುವುದಿಲ್ಲ. ಆದ್ದರಿಂದ ಪರೀಕ್ಷೆಗೆ ತೆರಳುವ ಮೊದಲು ಅಗತ್ಯ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅಭ್ಯರ್ಥಿಗಳಿಗೆ ಸೂಚಿಸಿದೆ.

ರಾಜ್ಯ ಸರ್ಕಾರದ ಆದ್ಯತೆ ರಿಯಲ್ ಎಸ್ಟೇಟ್, ಹೊರತು ರೈತರಲ್ಲ: ಬಿ.ವೈ. ವಿಜಯೇಂದ್ರ

ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಆದ್ಯತೆ ರೈತರ ಕಲ್ಯಾಣವಲ್ಲ, ರಿಯಲ್ ಎಸ್ಟೇಟ್ ಅಭಿವೃದ್ಧಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆಗಾಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಧವಳಗಿರಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಆರಂಭಿಕ ಹಂತದಲ್ಲಿಯೇ ಸರ್ಕಾರದ ಆದ್ಯತೆ ಏನೆಂಬುದು ಸ್ಪಷ್ಟವಾಗಿದೆ ಎಂದು ಟೀಕಿಸಿದರು.

ಬಿಡದಿಯಲ್ಲಿ ಟೌನ್‌ಶಿಪ್ ನಿರ್ಮಾಣದ ಹೆಸರಿನಲ್ಲಿ ರೈತರ ಭೂಮಿಯನ್ನು ಬಲವಂತವಾಗಿ ಹಾಗೂ ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ ಅವರು, ರೈತರ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನೆರವಾಗಬೇಕಾದ ಸರ್ಕಾರ, ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡುತ್ತಿದೆ. ಇದು ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈತರ ಸಮಸ್ಯೆಗಳನ್ನು ಆಲಿಸಿ, ಅವರನ್ನು ಭೂಮಿಯಿಂದ ಒಕ್ಕಲೆಬ್ಬಿಸುವ ಬದಲು ಅವರ ಹಿತಾಸಕ್ತಿಯನ್ನು ಕಾಪಾಡಬೇಕು. ಬಿಡದಿ ಟೌನ್‌ಶಿಪ್ ಯೋಜನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ತಮ್ಮ ಹಾಗೂ ಬಿಜೆಪಿ ನಾಯಕರ ವಿರುದ್ಧ ನಡೆಯುತ್ತಿರುವ ಪೋಸ್ಟರ್ ಅಭಿಯಾನಕ್ಕೂ ವಿಜಯೇಂದ್ರ ಪ್ರತಿಕ್ರಿಯೆ ನೀಡಿದರು. ವಿರೋಧ ಪಕ್ಷದ ನಾಯಕರ ವಿರುದ್ಧ ಪೋಸ್ಟರ್ ಅಂಟಿಸುವ ಮೂಲಕ ಬೆದರಿಕೆ ತರುವ ಪ್ರಯತ್ನ ನಡೆಯುತ್ತಿದೆ. ಆದರೆ ಇಂತಹ ಕ್ರಮಗಳಿಗೆ ಬಿಜೆಪಿ ನಾಯಕರು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎದೆ ಉರಿಯಿಂದ ಬಿಜೆಪಿ ಮುಖಂಡನ ಪುತ್ರ 4 ವರ್ಷದ ಬಾಲಕ ಸಾವು

0

ಚಿತ್ರದುರ್ಗ: ನಾಲ್ಕು ವರ್ಷದ ಬಾಲಕನೊಬ್ಬ ಎದೆ ಉರಿ ಬಗ್ಗೆ ಹೇಳಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ.

ಮೃತ ಬಾಲಕನನ್ನು ವೈಷ್ಣವ್ (4) ಎಂದು ಗುರುತಿಸಲಾಗಿದ್ದು, ಆತ ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಅವರ ಪುತ್ರನಾಗಿದ್ದಾನೆ.

ಬಾಲಕ ಎದೆ ಉರಿಯುತ್ತಿದೆ ಎಂದು ಹೇಳುತ್ತಿದ್ದಂತೆಯೇ ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ಚಿಕಿತ್ಸೆ ದೊರೆಯುವ ಮೊದಲುವೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯಿಂದ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ. ಬಾಲಕನ ಆಕಸ್ಮಿಕ ನಿಧನ ಹಿರಿಯೂರು ನಗರದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ.

NEET-UG ಮರು ಪರೀಕ್ಷಾರ್ಥಿಗಳಿಗೆ ಬಸ್ ದರದಲ್ಲಿ 50% ರಿಯಾಯಿತಿ: ಯೋಗಿ ಆದಿತ್ಯನಾಥ್ ಘೋಷಣೆ

0

ಲಕ್ನೋ: ಜೂನ್ 21ರಂದು ನಡೆಯಲಿರುವ NEET-UG ಮರುಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉತ್ತರ ಪ್ರದೇಶ ಸರ್ಕಾರ ಮಹತ್ವದ ಸೌಲಭ್ಯ ಘೋಷಿಸಿದ್ದು, ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ದರ ರಿಯಾಯಿತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಸಿದ್ಧತೆಗಳ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಯೋಗ ದಿನಾಚರಣೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ರಾಜ್ಯದ ಎಲ್ಲಾ 57 ಸಾವಿರ ಗ್ರಾಮ ಪಂಚಾಯಿತಿಗಳು ಹಾಗೂ 762 ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಶೇಷ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಈ ವರ್ಷದ ಯೋಗ ದಿನವನ್ನು ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಂಬ ಧ್ಯೇಯವಾಕ್ಯದಡಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಅಮೃತ ಸರೋವರಗಳು, ಐತಿಹಾಸಿಕ ತಾಣಗಳು ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಜೂನ್ 26ರಂದು ಆಚರಿಸಲಿರುವ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಮೊಹರಂ ಅನ್ನು ಶಿಸ್ತಿನಿಂದ ಹಾಗೂ ಗಾಂಭೀರ್ಯದಿಂದ ಆಚರಿಸಬೇಕು. ಇದು ಶೋಕಾಚರಣೆಯ ಸಂದರ್ಭವಾಗಿದ್ದು, ಶಕ್ತಿ ಪ್ರದರ್ಶನದ ವೇದಿಕೆಯಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಸಿಎಂ ಆದ ಮೇಲೂ ಪೋಸ್ಟರ್ ರಾಜಕಾರಣ ನಿಲ್ಲಿಸಿಲ್ಲ: ಡಿ.ಕೆ. ಶಿವಕುಮಾರ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ತಮ್ಮ ಹಾಗೂ ಕುಟುಂಬದ ವಿರುದ್ಧ ಪೋಸ್ಟರ್ ಅಂಟಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಏರಿದ ಬಳಿಕವಾದರೂ ಇಂತಹ ರಾಜಕೀಯ ಪ್ರಚಾರಗಳನ್ನು ನಿಲ್ಲಿಸುತ್ತಾರೆ ಎಂದು ನಿರೀಕ್ಷಿಸಿದ್ದೆ, ಆದರೆ ಆ ಮನೋಭಾವ ಇನ್ನೂ ಬದಲಾಗಿಲ್ಲ ಎಂದು ಟೀಕಿಸಿದರು.

ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ತಮ್ಮ ಹಾಗೂ ಕುಟುಂಬ ಸದಸ್ಯರ ಭಾವಚಿತ್ರಗಳನ್ನು ಬಳಸಿಕೊಂಡು ಜಮೀನು ವಿಚಾರವಾಗಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂದು ಆಕ್ಷೇಪಿಸಿದರು.

“ನನ್ನದು ಮಾತ್ರವಲ್ಲ, ನನ್ನ ಪತ್ನಿಯ ಫೋಟೋವನ್ನೂ ಪೋಸ್ಟರ್‌ಗಳಲ್ಲಿ ಬಳಸಿದ್ದಾರೆ. 100 ಎಕರೆ ಜಮೀನು ಹೊಂದಿದ್ದೇವೆ ಎಂದು ಪ್ರಚಾರ ಮಾಡಲಾಗುತ್ತಿದೆ. ವಾಸ್ತವವಾಗಿ ಸುಮಾರು 40 ವರ್ಷಗಳ ಹಿಂದೆ 46 ಎಕರೆ ಜಮೀನನ್ನು ಕಾನೂನುಬದ್ಧವಾಗಿ ಖರೀದಿಸಲಾಗಿದೆ. ನನ್ನ ಹೆಸರಿನಲ್ಲಿ 100 ಎಕರೆ ಜಮೀನು ಎಲ್ಲಿದೆ ಎಂಬುದನ್ನು ತೋರಿಸಲಿ” ಎಂದು ಸವಾಲು ಹಾಕಿದರು.

ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿರುವ ಜಮೀನನ್ನೂ ಕಾನೂನುಬದ್ಧವಾಗಿ ಖರೀದಿಸಲಾಗಿದೆ. ಖರೀದಿಸಿರುವ ಆಸ್ತಿಯನ್ನು ತಪ್ಪಾಗಿ ಬಿಂಬಿಸಿ ಪೋಸ್ಟರ್‌ಗಳ ಮೂಲಕ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದು ಅವರು ಹೇಳಿದರು.

ಪೋಸ್ಟರ್ ರಾಜಕಾರಣದ ಮೂಲಕ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಹುದ್ದೆಯಲ್ಲಿರುವವರು ಒಂದು ಮಟ್ಟದ ರಾಜಕೀಯ ಸಂಸ್ಕೃತಿ ಮತ್ತು ಜವಾಬ್ದಾರಿಯನ್ನು ಪಾಲಿಸಬೇಕು ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

“ತಪ್ಪುಗಳಿದ್ದರೆ ಸರ್ಕಾರ ತನಿಖೆ ನಡೆಸಲಿ, ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಿ. ಅದನ್ನು ಬಿಟ್ಟು ಪೋಸ್ಟರ್‌ಗಳ ಮೂಲಕ ವೈಯಕ್ತಿಕ ದಾಳಿ ನಡೆಸುವುದು ಸರಿಯಲ್ಲ. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೂ ಇದೇ ರೀತಿಯ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ” ಎಂದು ಆರೋಪಿಸಿದರು.

ರಾಜ್ಯದಲ್ಲಿ ರಾಜಕೀಯ ಚರ್ಚೆಗಳು ಮತ್ತು ಆರೋಪ-ಪ್ರತ್ಯಾರೋಪಗಳು ಪ್ರಜಾಪ್ರಭುತ್ವದ ಮೌಲ್ಯಗಳ ವ್ಯಾಪ್ತಿಯಲ್ಲೇ ನಡೆಯಬೇಕು. ಮುಖ್ಯಮಂತ್ರಿ ಹುದ್ದೆಯ ಗೌರವವನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಟೆಲಿಗ್ರಾಮ್ ನಿಷೇಧ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಂಸ್ಥೆ: ಇಂದು ಅರ್ಜಿ ವಿಚಾರಣೆ

0

ನವದೆಹಲಿ: ನೀಟ್ (UG) ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್‌ಗೆ ವಿಧಿಸಲಾಗಿರುವ ತಾತ್ಕಾಲಿಕ ನಿರ್ಬಂಧವನ್ನು ಪ್ರಶ್ನಿಸಿ ಟೆಲಿಗ್ರಾಮ್ ಸಂಸ್ಥೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಕೇಂದ್ರ ಸರ್ಕಾರದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಸಂಸ್ಥೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಟೆಲಿಗ್ರಾಮ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ನೇತೃತ್ವದ ಪೀಠ ಇಂದು ಕೈಗೆತ್ತಿಕೊಳ್ಳಲಿದೆ. ಕೇಂದ್ರ ಸರ್ಕಾರದ ನಿರ್ಧಾರದ ಕಾನೂನುಬದ್ಧತೆ ಮತ್ತು ಅದರ ಪರಿಣಾಮಗಳ ಕುರಿತು ನ್ಯಾಯಾಲಯದಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶಿಫಾರಸಿನ ಮೇರೆಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜೂನ್‌ 22ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಸೇವೆಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಈ ಆದೇಶ ಜಾರಿಗೊಳಿಸಲಾಗಿದೆ.

ಇದರ ಜೊತೆಗೆ, ಜೂನ್‌ 30ರವರೆಗೆ ಟೆಲಿಗ್ರಾಮ್‌ನ ಹಳೆಯ ಸಂದೇಶಗಳನ್ನು ತಿದ್ದುಪಡಿ (Message Editing) ಮಾಡುವ ವೈಶಿಷ್ಟ್ಯವನ್ನೂ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಪ್ರಕಟವಾಗಿರುವ ಸಂದೇಶಗಳನ್ನು ನಂತರ ಬದಲಾಯಿಸಿ ಪ್ರಶ್ನೆಪತ್ರಿಕೆ ಸೋರಿಕೆಯ ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸುವ ಸಾಧ್ಯತೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಜೂನ್‌ 21ರಂದು ನಡೆಯಲಿರುವ ನೀಟ್ (UG) 2026 ಮರುಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಕ್ರಮಮುಕ್ತವಾಗಿ ನಡೆಸಲು ಎನ್‌ಟಿಎ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕಳೆದ ಬಾರಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಿಂದ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದ್ದ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಲೋಪ ಉಂಟಾಗದಂತೆ ಸರ್ಕಾರ ಮತ್ತು ಎನ್‌ಟಿಎ ವಿಶೇಷ ಎಚ್ಚರಿಕೆ ವಹಿಸಿವೆ.

ಇದೇ ವೇಳೆ, ಪರೀಕ್ಷೆಗೆ ಸಂಬಂಧಿಸಿದ ಅನುಮಾನಾಸ್ಪದ ಚಟುವಟಿಕೆಗಳು, ನಕಲಿ ವೆಬ್‌ಸೈಟ್‌ಗಳು, ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಸುಳ್ಳು ಭರವಸೆ ನೀಡುವ ವ್ಯಕ್ತಿಗಳು ಅಥವಾ ಎನ್‌ಟಿಎ ಅಧಿಕಾರಿಗಳ ಹೆಸರಿನಲ್ಲಿ ವಂಚನೆ ನಡೆಸುವವರ ಕುರಿತು ಮಾಹಿತಿ ನೀಡುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಎನ್‌ಟಿಎ ಮನವಿ ಮಾಡಿದೆ. ಇದಕ್ಕಾಗಿ ವಿಶೇಷ ದೂರು ಪೋರ್ಟಲ್‌ನ್ನೂ ಆರಂಭಿಸಲಾಗಿದೆ.

 

ಕೋಲಾರದಲ್ಲಿ ಬೆಚ್ಚಿಬೀಳಿಸಿದ ಘಟನೆ: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ!

0

ಕೋಲಾರ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಪತಿ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿಂಡಹಳ್ಳಿ ಕೆರೆ ಸಮೀಪ ನಡೆದಿದೆ. ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ 21 ವರ್ಷದ ಯೋಗಿನಿ ಮೃತ ಯುವತಿ ಎಂದು ಗುರುತಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವಲಹಳ್ಳಿ ಮೂಲದ ಗಣೇಶ್ ಎಂಬಾತ ಹತ್ಯೆ ಆರೋಪಿಯಾಗಿದ್ದು, ಘಟನೆ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಯೋಗಿನಿ ಮತ್ತು ಗಣೇಶ್ ಸುಮಾರು ಎರಡು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಮದುವೆಯ ಬಳಿಕ ದಂಪತಿ ಜೀವನ ಸಾಗಿಸುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಪತ್ನಿಯ ಮೇಲೆ ಅನುಮಾನಗೊಂಡಿದ್ದ ಗಣೇಶ್ ಆಗಾಗ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.

ಯೋಗಿನಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಅದು ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಘಟನೆಯ ದಿನ ಪತ್ನಿಯೊಂದಿಗೆ ವಾಗ್ವಾದ ನಡೆಸಿದ ಗಣೇಶ್, ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯೋಗಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಮಾಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು, ಹತ್ಯೆಯ ನಿಖರ ಕಾರಣ ಹಾಗೂ ಘಟನೆಗೆ ಸಂಬಂಧಿಸಿದ ಇತರ ಆಯಾಮಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಗ್ರೈಂಡರ್ ಮುಟ್ಟಿದ ನಾಲ್ಕು ವರ್ಷದ ಬಾಲಕಿಗೆ ವಿದ್ಯುತ್ ಶಾಕ್: ಚಿಕಿತ್ಸೆ ಫಲಿಸದೆ ದುರ್ಮರಣ

ಚಾಮರಾಜನಗರ: ಮನೆಯಲ್ಲಿ ಗ್ರೈಂಡರ್ ಮುಟ್ಟಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ದುರ್ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲ್ಲಿಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪುಟ್ಟಮ್ಮ ಮತ್ತು ಆನಂದ ದಂಪತಿಯ ನಾಲ್ಕು ವರ್ಷದ ಪುತ್ರಿ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಮನೆಯಲ್ಲಿದ್ದ ವೇಳೆ ತಾಯಿ ಗ್ರೈಂಡರ್ ಬಳಸುತ್ತಿದ್ದರು. ಈ ಸಂದರ್ಭದಲ್ಲಿ ಬಾಲಕಿ ಗ್ರೈಂಡರ್ ಅನ್ನು ಮುಟ್ಟಿದಾಗ ವಿದ್ಯುತ್ ಪ್ರವಹಿಸಿ ತೀವ್ರ ಶಾಕ್ ಹೊಡೆದಿದೆ ಎನ್ನಲಾಗಿದೆ.

ವಿದ್ಯುತ್ ಶಾಕ್‌ನಿಂದ ಅಸ್ವಸ್ಥಗೊಂಡ ಬಾಲಕಿಯನ್ನು ಕೂಡಲೇ ಪೋಷಕರು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಘಟನೆಯಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ತಂದೆ-ತಾಯಿಯ ಕಣ್ಮುಂದೆಯೇ ಮಗಳು ಮೃತಪಟ್ಟಿರುವುದು ಕುಟುಂಬವನ್ನು ತೀವ್ರ ದುಃಖಕ್ಕೆ ದೂಡಿದೆ. ಗ್ರಾಮದಲ್ಲಿಯೂ ಶೋಕದ ವಾತಾವರಣ ನಿರ್ಮಾಣವಾಗಿದೆ.

ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.