Home Blog Page 50

ಶೃಂಗೇರಿ ಕ್ಷೇತ್ರದಲ್ಲಿ ಅಂಚೆ ಮತ ಅಕ್ರಮ ನಡೆದಿದೆ: ದೇಶದಲ್ಲೇ ದೊಡ್ಡ ಷಡ್ಯಂತ್ರ – ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ಬೆಂಗಳೂರು: ಶೃಂಗೇರಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಿದ್ದಿರುವ ಅಂಚೆ ಮತಗಳನ್ನು ತಿದ್ದುವ ಮೂಲಕ ಮರುಎಣಿಕೆಯಲ್ಲಿ ಅಸಿಂಧುಗೊಳಿಸಲಾಗಿದೆ. ಇಡೀ ದೇಶದಲ್ಲಿ ಇಂತಹ ಅಪರಾಧ ನಡೆದಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಶೃಂಗೇರಿ ಕ್ಷೇತ್ರದ ಮರುಎಣಿಕೆಯ ಬಗ್ಗೆ ಕೇಳಿದಾಗ, “ಚುನಾವಣೆ ಮತ ಎಣಿಕೆ ಸಮಯದಲ್ಲಿ ಪ್ರತಿ ಅಂಚೆ ಮತವನ್ನು ತೆರೆದು ಎರಡೂ ಪಕ್ಷಗಳ ಏಜೆಂಟರು ಹಾಗೂ ಅಧಿಕಾರಿಗಳಿಗೆ ತೋರಿಸಿ ಅದನ್ನು ಮಾನ್ಯ ಮಾಡಿ ಎಣಿಕೆ ಮಾಡಲಾಗಿರುತ್ತದೆ.

ಈ ರೀತಿ ಮತ ಎಣಿಕೆ ಮಾಡಿದ ಬಳಿಕ ಬಿಜೆಪಿ ಅಭ್ಯರ್ಥಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಅಂಚೆ ಮತಗಳನ್ನು ತಿದ್ದಲಾಗಿದೆ. ಹೀಗಾಗಿಯೇ ಅವರು ನಿರ್ದಿಷ್ಟ ಮತಗಳ ಬಂಡಲ್ ಅನ್ನೇ ಮರು ಎಣಿಕೆ ಮಾಡಿ ಎಂದು ಪಟ್ಟು ಹಿಡಿದಿದ್ದರು.

ಅಧಿಕಾರಿಗಳು ಹಾಗೂ ಬಿಜೆಪಿ ಅಭ್ಯರ್ಥಿ ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಗಂಭೀರವಾದ ತನಿಖೆ ನಡೆಯಬೇಕಿದೆ. ಚುನಾವಣಾ ಆಯೋಗವು ಈ ವಿಚಾರದಲ್ಲಿ ನ್ಯಾಯ ಒದಗಿಸಬೇಕಿದೆ. ಇದು ದೇಶದಲ್ಲೇ ಅತಿ ದೊಡ್ಡ ಷಡ್ಯಂತ್ರವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಇಂತಹ ಕೆಲಸದಲ್ಲಿ ಭಾಗಿಯಾಗಿದ್ದು, ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ರಾಜಕೀಯ ಹೇಗೆ ಮಾಡಬೇಕು ಎಂದು ನಮಗೆ ಗೊತ್ತಿದೆ” ಎಂದು ಕಿಡಿಕಾರಿದರು.

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: ಲೋಕಾಯುಕ್ತದಿಂದ ವಿಶೇಷ ತನಿಖಾ ತಂಡ ರಚನೆ

ಬೆಂಗಳೂರು: ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದು 7 ಮಂದಿ ಸಾವನ್ನಪ್ಪಿದ ದಾರುಣ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಘಟನೆಯ ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ, ಈಗ ಸಮಗ್ರ ತನಿಖೆಗೆ ಮುಂದಾಗಿದೆ.

ಈ ವಿಶೇಷ ತನಿಖಾ ತಂಡದಲ್ಲಿ ಪೊಲೀಸ್ ಅಧೀಕ್ಷಕ (SP) ದರ್ಜೆಯ ಅಧಿಕಾರಿಯನ್ನು ಮುಖ್ಯ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ, ತಂಡದಲ್ಲಿ ಒಬ್ಬ ಜಿಲ್ಲಾ ನ್ಯಾಯಾಧೀಶರು ಮತ್ತು ಲೋಕಾಯುಕ್ತ ತಾಂತ್ರಿಕ ವಿಭಾಗದ ಮುಖ್ಯ ಇಂಜಿನಿಯರ್ ಕೂಡ ಭಾಗಿಯಾಗಿದ್ದಾರೆ. ಇದೇ ತಿಂಗಳ 16ರೊಳಗೆ ಸಂಪೂರ್ಣ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಪಾಟೀಲ್ ಸೂಚನೆ ನೀಡಿದ್ದಾರೆ.

ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತನಿಖಾ ತಂಡ ಸಭೆ ನಡೆಸುತ್ತಿದ್ದು, ವಿಚಾರಣೆಗಾಗಿ ಯಾರಿಗೆ ನೋಟಿಸ್ ನೀಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಸಭೆಯಲ್ಲಿ ಬೌರಿಂಗ್ ಆಸ್ಪತ್ರೆಯ ಡೀನ್ ಕೂಡ ಭಾಗವಹಿಸಲಿದ್ದು, ಅಗತ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಈ ನಡುವೆ, ಘಟನಾ ಸ್ಥಳದಿಂದ ಸಿಮೆಂಟ್, ಮಣ್ಣು, ಕಲ್ಲು ಸೇರಿದಂತೆ ವಿವಿಧ ಮಾದರಿಗಳನ್ನು ಇಂಜಿನಿಯರ್‌ಗಳ ತಂಡ ಸಂಗ್ರಹಿಸಿದೆ. ಈ ಮಾದರಿಗಳ ಆಧಾರದ ಮೇಲೆ ಆಸ್ಪತ್ರೆ ಆಡಳಿತ ಮಂಡಳಿಯವರನ್ನು ವಿಚಾರಣೆ ನಡೆಸಲಾಗುತ್ತದೆ. ಒಂದೆಡೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ನಡೆಯುತ್ತಿದ್ದರೆ, ಇನ್ನೊಂದೆಡೆ ಇಂಜಿನಿಯರ್‌ಗಳ ತಂಡ ಹಾಗೂ ಲೋಕಾಯುಕ್ತದ ವಿಶೇಷ ತಂಡದಿಂದ ಸಮಗ್ರ ಪರಿಶೀಲನೆ ಮುಂದುವರಿದಿದೆ.

ಶೃಂಗೇರಿ ಅಂಚೆ ಮತ ಮರುಎಣಿಕೆ ವಿವಾದ: BJP ವಿರುದ್ಧ ‘ವೋಟ್ ಚೋರಿ’ ಆರೋಪ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತಗಳ ಮರುಎಣಿಕೆ ಸಂಬಂಧ ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಸಿದ್ದರಾಮಯ್ಯ ಹೊರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರುಎಣಿಕೆ ಪ್ರಕ್ರಿಯೆಯಲ್ಲಿ “ವೋಟ್ ಚೋರಿ” ನಡೆದಿದೆ ಎಂದು ಆರೋಪಿಸಿದರು.

ಶೃಂಗೇರಿ ಕ್ಷೇತ್ರದಲ್ಲಿ ಕೋರ್ಟ್ ಆದೇಶದ ಮೇರೆಗೆ ಅಂಚೆ ಮತಗಳ ಮರುಎಣಿಕೆ ನಡೆದಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಗೌಡ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅವರಿಗೆ ಇವಿಎಂನಲ್ಲಿ 59,171 ಮತಗಳು ಹಾಗೂ 569 ಅಂಚೆ ಮತಗಳು ಲಭಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಜೀವರಾಜ್ ಅವರಿಗೆ 58,970 ಇವಿಎಂ ಮತಗಳು ಮತ್ತು 692 ಅಂಚೆ ಮತಗಳು ಲಭಿಸಿದ್ದವು.

ಈ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ಮಾನ್ಯಗೊಳಿಸಿದ ನಂತರ, ಜೀವರಾಜ್ ಚುನಾವಣಾ ಅಕ್ರಮ ನಡೆದಿದೆ ಎಂದು ಕರ್ನಾಟಕ ಹೈಕೋರ್ಟ್ ಗೆ ಮೊರೆ ಹೋಗಿ ಮರುಎಣಿಕೆಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ 2026ರ ಮಾರ್ಚ್ 6ರಂದು ಅರ್ಜಿಯನ್ನು ಪುರಸ್ಕರಿಸಿ, 279 ಅಂಚೆ ಮತಗಳ ಮರುಎಣಿಕೆಗೆ ಆದೇಶ ನೀಡಿತ್ತು.

ಅದನ್ವಯ ಮೇ 2ರಂದು ಮರುಎಣಿಕೆ ನಡೆದಿದ್ದು, ಪರಿಶೀಲನೆ ವೇಳೆ 314 ಮತಗಳು ಮಾತ್ರ ಮಾನ್ಯವಾಗಿವೆ ಎಂದು ತಿಳಿದುಬಂದಿದೆ. ಉಳಿದ 255 ಮತಗಳನ್ನು ಅಮಾನ್ಯಗೊಳಿಸಲಾಗಿದೆ. ಈ ಬೆಳವಣಿಗೆ ಕುರಿತು ಪ್ರಶ್ನೆ ಎತ್ತಿದ ಮುಖ್ಯಮಂತ್ರಿ, 2023ರಲ್ಲಿ ಜೀವರಾಜ್ ಅವರಿಗೆ 692 ಅಂಚೆ ಮತಗಳು ಬಂದಿದ್ದರೆ, ಮರುಎಣಿಕೆಯಲ್ಲಿ 690 ಮತಗಳು ಮಾತ್ರ ಲಭಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಈ ಎಲ್ಲ ಅಂಶಗಳನ್ನು ಆಧರಿಸಿ, ಬಿಜೆಪಿ “ಕ್ರಿಮಿನಲ್ ಪಿತೂರಿ” ಮೂಲಕ ಮತಗಳ ಅಕ್ರಮ ನಡೆಸಿದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಆಭರಣ ಪ್ರಿಯರಿಗೆ ಬಂಪರ್ ಸಿಹಿಸುದ್ದಿ: ಎಲೆಕ್ಷನ್ ಮರುದಿನವೇ ಚಿನ್ನದ ಬೆಲೆ ಕುಸಿತ!

ಬೆಂಗಳೂರು: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರವಾಗುತ್ತಿರುವ ಹಿನ್ನೆಲೆ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಅಸ್ಥಿರತೆ ಮುಂದುವರಿದಿದೆ. ಇರಾನ್ ಗಲ್ಫ್ ಪ್ರದೇಶದ ಮೇಲೆ ದಾಳಿ ನಡೆಸಿದ ಬಳಿಕ, ಹಾರ್ಮುಜ್ ಜಲಸಂಧಿ ನಿರ್ಬಂಧದ ಆತಂಕ ಹೆಚ್ಚಿದ್ದು, ತೈಲ ಬೆಲೆಗಳು ಗಗನಕ್ಕೇರಿವೆ. ಇದರ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ.

ಮೇ 5, 2026 ಮಂಗಳವಾರದಂದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 440 ರೂಪಾಯಿ ಇಳಿಕೆ ಕಂಡು 1,49,180 ರೂಪಾಯಿಗೆ ತಲುಪಿದೆ. ಅದೇ ರೀತಿ 1 ಗ್ರಾಂ ಚಿನ್ನದ ಬೆಲೆ 44 ರೂಪಾಯಿ ಇಳಿಕೆಯಿಂದ 14,918 ರೂಪಾಯಿಗೆ ದಾಖಲಾಗಿದೆ.

22 ಕ್ಯಾರೆಟ್ ಚಿನ್ನದ ದರದಲ್ಲಿಯೂ ಇಳಿಕೆ ಕಂಡುಬಂದಿದ್ದು, 1 ಗ್ರಾಂಗೆ 40 ರೂಪಾಯಿ ಇಳಿಕೆಯಿಂದ 13,675 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆ 400 ರೂಪಾಯಿ ಇಳಿಕೆಯಿಂದ 1,36,750 ರೂಪಾಯಿಗೆ ತಲುಪಿದೆ.

ಇನ್ನೊಂದೆಡೆ, ಬೆಳ್ಳಿ ಬೆಲೆಯಲ್ಲೂ ಭಾರೀ ಕುಸಿತ ಕಂಡುಬಂದಿದ್ದು, ಇಂದು ಸುಮಾರು 10,000 ರೂಪಾಯಿ ಇಳಿಕೆಯಾಗಿದೆ. ಪ್ರತಿ ಗ್ರಾಂ ಬೆಲೆ 255 ರೂಪಾಯಿಯಾಗಿ ದಾಖಲಾಗಿದ್ದು, ಪ್ರತಿ ಕಿಲೋಗ್ರಾಂ ಬೆಲೆ 2,55,000 ರೂಪಾಯಿಗೆ ಇಳಿದಿದೆ.

ಜಾಗತಿಕ ರಾಜಕೀಯ ಉದ್ವಿಗ್ನತೆ, ವಿಶೇಷವಾಗಿ ಅಮೆರಿಕ-ಇರಾನ್ ಸಂಘರ್ಷ ಮತ್ತು ಡಾಲರ್ ಮೌಲ್ಯದ ಏರಿಳಿತದ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಚಲನವಲನ ಮುಂದುವರಿಯುತ್ತಿದೆ.

ಸಚಿವ ಜಮೀರ್ ನಿವಾಸದಲ್ಲಿ 1.13 ಕೋಟಿ ರೂ. ಚಿನ್ನಾಭರಣ ಕಳ್ಳತನ: ಇಬ್ಬರು ಆರೋಪಿಗಳು ಅರೆಸ್ಟ್

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಿವಾಸದಲ್ಲಿ ನಡೆದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಶಿವಾಜಿನಗರ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸಯ್ಯದ್ ಅಮೀರ್ ಮತ್ತು ಅಮೀರ್ ಅಹ್ಮದ್ ಎಂದು ಗುರುತಿಸಲಾಗಿದೆ. ಇಬ್ಬರೂ ಸಚಿವರ ಪರಿಚಯಸ್ಥರಾಗಿದ್ದು, ವಿಶ್ವಾಸದ ದುರುಪಯೋಗಪಡಿಸಿಕೊಂಡು ಕಳ್ಳತನ ನಡೆಸಿರುವುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಹಿನ್ನೆಲೆ ಆರೋಪಿಗಳು ಈ ಕೃತ್ಯಕ್ಕೆ ಮುಂದಾಗಿದ್ದರು. ಅಮೀರ್ ಅಹ್ಮದ್ ಟ್ರಾವೆಲ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ಸಯ್ಯದ್ ಅಮೀರ್ ಜೊತೆಗೂಡಿ ಸಚಿವರ ಮನೆಯಲ್ಲಿ ಪ್ರವೇಶಿಸಿ ಕಳ್ಳತನ ನಡೆಸಿದ್ದಾನೆ ಎನ್ನಲಾಗಿದೆ.

ಆರೋಪಿಗಳು ಸಚಿವ ಜಮೀರ್ ಅಹ್ಮದ್ ಅವರ ತಾಯಿಗೆ ಸೇರಿದ ಸುಮಾರು 1.13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದರು. ಬಳಿಕ ಆಭರಣಗಳನ್ನು ಅಡವಿಟ್ಟು ಹಣ ಪಡೆದು, ಆ ಮೊತ್ತವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸಂದೇಹದ ಆಧಾರದ ಮೇಲೆ ಆರೋಪಿಗಳನ್ನು ಸಂಪರ್ಕಿಸಲು ಯತ್ನಿಸಿದಾಗ ಕರೆ ಸ್ವೀಕರಿಸದಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ವಿಚಾರಣೆ ಮುಂದುವರಿದಿದೆ.

ರೋಹಿತ್, ರಿಕಲ್ಟನ್​ ಸಿಡಿಲಬ್ಬರಕ್ಕೆ ಲಖನೌ ಧೂಳೀಪಟ! ಸೋಲಿಗೆ ಕಾರಣ ಬಿಚ್ಚಿಟ್ಟ ರಿಷಭ್ ಪಂತ್

ಐಪಿಎಲ್ 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸೋಲಿನ ಸರಣಿ ಮುಂದುವರೆದಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ತಂಡ ಗೆಲುವು ಸಾಧಿಸಲು ವಿಫಲವಾಗಿದೆ. ಸೋಮವಾರ ನಡೆದ ಈ ಪಂದ್ಯದಲ್ಲಿ ಲಕ್ನೋ 228 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿದ್ದರೂ, ಜಯ ತನ್ನದಾಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದು ಲಕ್ನೋ ತಂಡದ ಒಟ್ಟು 9 ಪಂದ್ಯಗಳಲ್ಲಿ ಸತತ ಆರನೇ ಸೋಲಾಗಿದೆ. ಭರ್ಜರಿ ಆರಂಭದ ನಂತರವೂ ತಂಡದ ಪ್ರದರ್ಶನ ಕುಸಿತ ಕಂಡಿದ್ದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.

ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ತಂಡದ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿದ್ದು, ಉತ್ತಮ ಆರಂಭವಿದ್ದರೂ ಮಧ್ಯಭಾಗದಲ್ಲಿ ವೇಗ ಕಳೆದುಕೊಂಡಿದ್ದು ಮುಖ್ಯ ಕಾರಣ ಎಂದು ಹೇಳಿದ್ದಾರೆ.

“ನಾವು ಆರಂಭಿಸಿದ ರೀತಿಯಲ್ಲಿ ನೋಡಿದರೆ ಇನ್ನಷ್ಟು ರನ್ ಗಳಿಸಬೇಕಿತ್ತು. ಆದರೆ ಈ ಪಂದ್ಯದಲ್ಲಿ ಹಲವಾರು ಪಾಸಿಟಿವ್ ಅಂಶಗಳೂ ಇವೆ. ಆಟಗಾರರು ಸ್ವಾತಂತ್ರ್ಯದಿಂದ ಆಡಿದರು. ಕೊನೆಯಲ್ಲಿ ಮುಂಬೈ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ನಾವು ಅಂದುಕೊಂಡಿದ್ದಕ್ಕಿಂತ 10 ರಿಂದ 15 ರನ್ ಕಡಿಮೆಯಾದವು,” ಎಂದು ಪಂತ್ ಹೇಳಿದರು.

ಈ ಪಿಚ್‌ನಲ್ಲಿ 220 ರಿಂದ 230 ರನ್ ಗುರಿ ಸುರಕ್ಷಿತ ಎಂದು ಅವರು ಅಭಿಪ್ರಾಯಪಟ್ಟರು. ಜೊತೆಗೆ, ತಂಡಕ್ಕೆ ಸ್ವಲ್ಪ ಅದೃಷ್ಟವೂ ಬೇಕು ಎಂದು ಹೇಳಿದ ಅವರು, ಹೆಚ್ಚು ಪ್ರಯತ್ನವೂ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಮುಂಬೈ ವಿರುದ್ಧದ ಪಂದ್ಯದಲ್ಲಿ ನಿಕೋಲಸ್ ಪೂರನ್ (21 ಎಸೆತಗಳಲ್ಲಿ 63 ರನ್) ಹಾಗೂ ಮಿಚೆಲ್ ಮಾರ್ಷ್ (25 ಎಸೆತಗಳಲ್ಲಿ 44 ರನ್) ಸ್ಫೋಟಕ ಆರಂಭ ನೀಡಿದ್ದರು. ಕೇವಲ 8 ಓವರ್‌ಗಳಲ್ಲಿ ಲಕ್ನೋ 123/1 ರನ್ ಗಳಿಸಿ 300 ರನ್ ಗಡಿ ದಾಟುವ ಸಾಧ್ಯತೆ ತೋರಿಸಿತ್ತು.

ಆದರೆ ಕಾರ್ಬಿನ್ ಬಾಷ್ ಒಂದೇ ಓವರ್‌ನಲ್ಲಿ ಪೂರನ್ ಹಾಗೂ ಮಾರ್ಷ್ ಅವರನ್ನು ಔಟ್ ಮಾಡುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು. ನಂತರ ನಾಯಕ ಪಂತ್ (15 ರನ್) ಕೂಡ ಬೇಗನೆ ವಿಕೆಟ್ ಒಪ್ಪಿಸಿದರು.

ಮುಂಬೈ ಪರ ರಿಕಲ್ಟನ್ (32 ಎಸೆತಗಳಲ್ಲಿ 83 ರನ್) ಮತ್ತು ರೋಹಿತ್ ಶರ್ಮಾ (44 ಎಸೆತಗಳಲ್ಲಿ 84 ರನ್) ಭರ್ಜರಿ ಆಟ ಆಡಿದ್ದು, 18.4 ಓವರ್‌ಗಳಲ್ಲಿ 229 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದರು.

ಪಿಂಚಣಿದಾರರನ್ನು ವಿಭಜಿಸುವುದು ಅಸಂವಿಧಾನಿಕ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ನಿವೃತ್ತ ನೌಕರರನ್ನು ನಿವೃತ್ತಿಯ ದಿನಾಂಕದ ಆಧಾರದ ಮೇಲೆ ಎರಡು ವರ್ಗಗಳಾಗಿ ವಿಭಜಿಸುವುದು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ 2005ರ ಜುಲೈ 1ಕ್ಕೂ ಮುನ್ನ ನಿವೃತ್ತರಾದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ನೌಕರರ ಕುಟುಂಬಗಳಿಗೂ ಪರಿಷ್ಕೃತ ಪಿಂಚಣಿ ಸೌಲಭ್ಯ ನೀಡುವಂತೆ ಆದೇಶಿಸಿದೆ.

ಕೆಪಿಸಿಎಲ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ತಾರಾ ವಿತಸ್ತ ಗಂಜು ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

ಪಿಂಚಣಿ ಪರಿಷ್ಕರಣೆಯಿಂದ ಸಂಸ್ಥೆಗೆ ಸುಮಾರು 250 ಕೋಟಿ ರೂಪಾಯಿ ಹೊರೆ ಬೀಳುತ್ತದೆ ಎಂಬ ಕೆಪಿಸಿಎಲ್ ವಾದವನ್ನು ಪೀಠ ತಳ್ಳಿಹಾಕಿದೆ. ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದವರು ಬಾಕಿ ಮೊತ್ತದ ಹಕ್ಕನ್ನು ತ್ಯಜಿಸಿರುವುದರಿಂದ ಕೇವಲ 4 ಕೋಟಿ ರೂಪಾಯಿ ವೆಚ್ಚದಲ್ಲೇ ಈ ಸೌಲಭ್ಯ ನೀಡಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ನ ಡಿ.ಎಸ್. ನಕಾರಾ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ಪಿಂಚಣಿ ಪರಿಷ್ಕರಣೆಯ ಲಾಭವು ಎಲ್ಲ ನಿವೃತ್ತರಿಗೂ ಸಮಾನವಾಗಿ ಲಭ್ಯವಾಗಬೇಕು ಎಂದು ಅಭಿಪ್ರಾಯಪಟ್ಟಿದೆ. ಆದ್ದರಿಂದ 2005 ಜುಲೈ 1ಕ್ಕೂ ಮುನ್ನ ನಿವೃತ್ತರಾದ ನೌಕರರ ಕುಟುಂಬಗಳಿಗೂ ಪರಿಷ್ಕೃತ ಪಿಂಚಣಿ ನೀಡಬೇಕು ಎಂದು ಸೂಚಿಸಿದೆ.

ಆದರೆ ಬಾಕಿ ಮೊತ್ತವನ್ನು ಏಕಸದಸ್ಯ ಪೀಠದ ತೀರ್ಪು ಬಂದ ದಿನಾಂಕದಿಂದಲೇ ಪಾವತಿಸಬೇಕು ಹಾಗೂ ಈ ಪ್ರಕ್ರಿಯೆಯನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಪ್ರಕರಣದ ಹಿನ್ನೆಲೆಯಂತೆ, ಕೆಪಿಸಿಎಲ್ ಹೊರಡಿಸಿದ್ದ ಆದೇಶದಲ್ಲಿ 2005ರ ಜುಲೈ 1ರ ನಂತರ ನಿವೃತ್ತರಾದವರಿಗೆ ಮಾತ್ರ ಪರಿಷ್ಕೃತ ಪಿಂಚಣಿ ನೀಡಲಾಗುತ್ತಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಎಂ.ಎಸ್. ರಾಜೇಶ್ವರಿ ಸೇರಿದಂತೆ ಹಲವು ನಿವೃತ್ತರ ಕುಟುಂಬಸ್ಥರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಏಕಸದಸ್ಯ ಪೀಠವು ಈ ಹಿಂದೆ ನಿವೃತ್ತಿ ದಿನಾಂಕ ಆಧರಿಸಿ ಪಿಂಚಣಿ ವಿಭಜನೆ ಮಾಡುವುದು ತಾರತಮ್ಯ ಎಂದು ಹೇಳಿ ಸರ್ಕಾರದ ಸುತ್ತೋಲೆಯನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಕೆಪಿಸಿಎಲ್ ಮೇಲ್ಮನವಿ ಸಲ್ಲಿಸಿದ್ದ ಪ್ರಕರಣದಲ್ಲಿ ಈಗ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಬೇಸಿಗೆಯಲ್ಲಿ ಫ್ರಿಡ್ಜ್ ಸದಾ ತಾಜಾ ವಾಸನೆ ಬರಬೇಕೇ? ಈ ಸಿಂಪಲ್ ಟಿಪ್ಸ್ ಅನುಸರಿಸಿ ಸಾಕು!

ಬೇಸಿಗೆ ಕಾಲದಲ್ಲಿ ಮನೆಯಲ್ಲೇ ಹೆಚ್ಚು ಬಳಕೆಯಾಗುವ ಉಪಕರಣಗಳಲ್ಲಿ ರೆಫ್ರಿಜರೇಟರ್ ಪ್ರಮುಖವಾದುದು. ತಣ್ಣೀರು, ಐಸ್‌ಕ್ರೀಮ್, ಹಣ್ಣು-ತರಕಾರಿಗಳಿಗಾಗಿ ಪದೇಪದೆ ಫ್ರಿಡ್ಜ್ ಬಾಗಿಲು ತೆರೆಯುವುದರಿಂದ ಕೆಲವೊಮ್ಮೆ ಅದರೊಳಗೆ ವಿಚಿತ್ರವಾದ ದುರ್ವಾಸನೆ ಉಂಟಾಗಬಹುದು. ಈ ವಾಸನೆ ಆಹಾರಕ್ಕೂ ಅಂಟಿಕೊಂಡು ಅದರ ರುಚಿಯನ್ನೇ ಬದಲಾಯಿಸಬಹುದು. ಆದರೆ ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ವಸ್ತುಗಳ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ನಿಂಬೆ ಸಿಪ್ಪೆಯಿಂದ ತಾಜಾತನ
ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲವು ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುವುದರ ಜೊತೆಗೆ ದುರ್ವಾಸನೆಯನ್ನು ಹೀರಿಕೊಳ್ಳುವ ಗುಣ ಹೊಂದಿದೆ. ನಿಂಬೆ ರಸ ತೆಗೆದ ಬಳಿಕ ಉಳಿದ ಸಿಪ್ಪೆಗಳನ್ನು ಒಂದು ಸಣ್ಣ ತಟ್ಟೆಯಲ್ಲಿ ಇಟ್ಟು ಅದರ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ ಫ್ರಿಡ್ಜ್‌ನ ಮಧ್ಯಭಾಗದಲ್ಲಿ ಇಟ್ಟರೆ ಒಳಗಿನ ಗಾಳಿ ತಾಜಾವಾಗುತ್ತದೆ.

ಬೇಕಿಂಗ್ ಸೋಡಾ ಬಳಕೆ
ಬೇಕಿಂಗ್ ಸೋಡಾ ದುರ್ವಾಸನೆಯನ್ನು ತಟಸ್ಥಗೊಳಿಸುವ ಅತ್ಯುತ್ತಮ ನೈಸರ್ಗಿಕ ವಸ್ತು. ಒಂದು ಸಣ್ಣ ಪಾತ್ರೆಯಲ್ಲಿ ಬೇಕಿಂಗ್ ಸೋಡಾವನ್ನು ಹಾಕಿ ಮುಚ್ಚಳವಿಲ್ಲದೆ ಫ್ರಿಡ್ಜ್‌ನ ಮೂಲೆಯಲ್ಲಿ ಇಡಬೇಕು. ಇದನ್ನು ವಾರಕ್ಕೊಮ್ಮೆ ಬದಲಾಯಿಸಿದರೆ ಫ್ರಿಡ್ಜ್‌ನೊಳಗೆ ಸದಾ ತಾಜಾತನ ಉಳಿಯುತ್ತದೆ.

ಕಾಫಿ ಪುಡಿಯಿಂದ ಸುವಾಸನೆ
ಕಾಫಿ ಪುಡಿ ಅಥವಾ ಕಾಫಿ ಬೀಜಗಳು ದುರ್ವಾಸನೆಯನ್ನು ಹೀರಿಕೊಂಡು ಮೃದುವಾದ ಪರಿಮಳವನ್ನು ಹರಡುತ್ತವೆ. ಸ್ವಲ್ಪ ಕಾಫಿ ಪುಡಿಯನ್ನು ತೆಳುವಾದ ಬಟ್ಟೆಯಲ್ಲಿ ಕಟ್ಟಿ ಫ್ರಿಡ್ಜ್‌ನಲ್ಲಿ ಇಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ.

ವೆನಿಲ್ಲಾ ಸಾರದ ಸಿಹಿ ಪರಿಮಳ
ವೆನಿಲ್ಲಾ ಸಾರವು ಆಹಾರಕ್ಕೆ ಮಾತ್ರವಲ್ಲ, ಫ್ರಿಡ್ಜ್‌ಗೆ ಸುಗಂಧ ನೀಡಲು ಸಹ ಸಹಾಯಕ. ಹತ್ತಿಯ ತುಂಡಿನ ಮೇಲೆ ಕೆಲವು ಹನಿ ವೆನಿಲ್ಲಾ ಸಾರ ಹಾಕಿ ಅದನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಸಿಹಿ ಪರಿಮಳ ಹರಡುತ್ತದೆ.

ಫ್ರಿಡ್ಜ್ ತಾಜಾವಾಗಿಡಲು ಪಾಲಿಸಬೇಕಾದ ಕ್ರಮಗಳು

  • ಗಾಳಿಯಾಡದ ಪಾತ್ರೆಗಳ ಬಳಕೆ: ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್ ಅಥವಾ ಉಳಿದ ಆಹಾರವನ್ನು ಯಾವಾಗಲೂ ಗಾಳಿಯಾಡದ ಡಬ್ಬಿಗಳಲ್ಲಿ ಇಡಿ.
  • ಹಾಳಾದ ಆಹಾರ ಪರಿಶೀಲನೆ: ವಾರಕ್ಕೊಮ್ಮೆ ಫ್ರಿಡ್ಜ್ ಪರಿಶೀಲಿಸಿ ಹಾಳಾಗಿರುವ ತರಕಾರಿ, ಹಣ್ಣು ಅಥವಾ ಅವಧಿ ಮೀರಿದ ವಸ್ತುಗಳನ್ನು ತೆಗೆದುಹಾಕಿ.
  • ವಿನೆಗರ್‌ನಿಂದ ಸ್ವಚ್ಛತೆ: ತಿಂಗಳಿಗೊಮ್ಮೆ ಫ್ರಿಡ್ಜ್ ಖಾಲಿ ಮಾಡಿ ನೀರಿಗೆ ಸ್ವಲ್ಪ ವಿನೆಗರ್ ಬೆರೆಸಿ ಒಳಭಾಗವನ್ನು ಒರೆಸಿದರೆ ಕಲೆಗಳು ಹಾಗೂ ಬ್ಯಾಕ್ಟೀರಿಯಾ ನಿವಾರಣೆಯಾಗುತ್ತವೆ.

ಈ ಸರಳ ಕ್ರಮಗಳನ್ನು ಅನುಸರಿಸಿದರೆ ಬೇಸಿಗೆಯಲ್ಲೂ ನಿಮ್ಮ ಫ್ರಿಡ್ಜ್ ಸದಾ ತಾಜಾ ಹಾಗೂ ಪರಿಮಳಯುಕ್ತವಾಗಿರುತ್ತದೆ.

ತೂಕ ಇಳಿಕೆಗೆ ದಿನಕ್ಕೆ 10,000 ಹೆಜ್ಜೆ ಸಾಕೇ? ತಜ್ಞರಿಂದ ಮಹತ್ವದ ಸಲಹೆ

ಇತ್ತೀಚಿನ ದಿನಗಳಲ್ಲಿ ಫಿಟ್‌ನೆಸ್‌ಗಾಗಿ ದಿನಕ್ಕೆ 10,000 ಹೆಜ್ಜೆ ನಡೆಯುವುದು ಸಾಮಾನ್ಯ ಗುರಿಯಾಗಿ ಪರಿಗಣಿಸಲಾಗಿದೆ.

ಆದರೆ ಆರೋಗ್ಯ ತಜ್ಞರು ಹೇಳುವಂತೆ, ಕೇವಲ ಹೆಜ್ಜೆಗಳ ಸಂಖ್ಯೆ ಮಾತ್ರವಲ್ಲ, ನೀವು ಹೇಗೆ ನಡೆಯುತ್ತೀರಿ ಎಂಬುದೇ ಹೆಚ್ಚು ಮಹತ್ವದಾಗಿದೆ.

ಅಧ್ಯಯನಗಳ ಪ್ರಕಾರ, ಸಾಮಾನ್ಯವಾಗಿ ದಿನಕ್ಕೆ 7,000 ರಿಂದ 8,000 ಹೆಜ್ಜೆಗಳು ಉತ್ತಮ ಆರೋಗ್ಯಕ್ಕೆ ಸಾಕು ಎಂದು ಹೇಳಲಾಗುತ್ತದೆ. ಆದರೆ 2024ರಲ್ಲಿ ಪ್ರಕಟವಾದ ಸಂಶೋಧನೆಯೊಂದು ಹೇಳುವಂತೆ, ವ್ಯಾಯಾಮದ ತೀವ್ರತೆ ಮತ್ತು ಗುಣಮಟ್ಟವೂ ಅಷ್ಟೇ ಮುಖ್ಯ. ಅಂದರೆ ನಿಧಾನವಾಗಿ ಹೆಚ್ಚು ನಡೆಯುವುದಕ್ಕಿಂತ, ವೇಗವಾಗಿ ಮತ್ತು ಶ್ರಮದೊಂದಿಗೆ ನಡೆಯುವುದು ದೇಹಕ್ಕೆ ಹೆಚ್ಚು ಪ್ರಯೋಜನಕಾರಿ.

ವೈದ್ಯರು ಹೇಳುವಂತೆ, ದಿನದ ನಡಿಗೆಯಲ್ಲಿ ಕನಿಷ್ಠ 30 ನಿಮಿಷಗಳ ವೇಗದ ನಡಿಗೆ ಅಥವಾ ಸ್ವಲ್ಪ ಜಾಗಿಂಗ್ ಸೇರಿಸುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಜೊತೆಗೆ, ಒಂದು ನಿಮಿಷದ ತೀವ್ರ ಚಟುವಟಿಕೆಯೂ ಸಹ ದೇಹದ ಮೆಟಾಬಾಲಿಕ್ ಆರೋಗ್ಯಕ್ಕೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ತಿಳಿಸಲಾಗಿದೆ.

ಪ್ರಮುಖ ಆರೋಗ್ಯ ಪ್ರಯೋಜನಗಳು:

  • ತೂಕ ಇಳಿಕೆ: ವೇಗದ ನಡಿಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ
  • ರಕ್ತದೊತ್ತಡ ನಿಯಂತ್ರಣ: ವ್ಯಾಯಾಮದ ನಂತರವೂ ಪರಿಣಾಮ ಮುಂದುವರಿಯಬಹುದು
  • ರಕ್ತದಲ್ಲಿನ ಸಕ್ಕರೆ ನಿಯಂತ್ರಣ: 48 ಗಂಟೆಗಳವರೆಗೆ ಸಹಕಾರಿ ಪರಿಣಾಮ
  • ಹೃದಯ ಆರೋಗ್ಯ ಸುಧಾರಣೆ: ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಕಡಿಮೆ

ತಜ್ಞರ ಸಲಹೆಯಂತೆ, WHO ಮಾರ್ಗಸೂಚಿಯ ಪ್ರಕಾರ ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮ ಅಥವಾ 75 ನಿಮಿಷಗಳ ಹೆಚ್ಚಿನ ತೀವ್ರತೆಯ ವ್ಯಾಯಾಮ ಅಗತ್ಯ.

ಸರಳ ಬದಲಾವಣೆಗಳು ಸಾಕು:

ಲಿಫ್ಟ್ ಬದಲು ಮೆಟ್ಟಿಲು ಬಳಸುವುದು, ಸ್ವಲ್ಪ ವೇಗವಾಗಿ ನಡೆದು ಹೋಗುವುದು ಅಥವಾ ಪ್ರಯಾಣದ ಸಮಯದಲ್ಲಿ ಹೆಚ್ಚು ಚುರುಕಾಗಿ ಇರುವುದು ಆರೋಗ್ಯಕ್ಕೆ ದೊಡ್ಡ ಲಾಭ ನೀಡುತ್ತದೆ.

ಅಂತಿಮವಾಗಿ ಹೇಳುವುದಾದರೆ, ಕೇವಲ ಹೆಜ್ಜೆಗಳ ಸಂಖ್ಯೆಯನ್ನು ಗುರಿಯಾಗಿಸದೇ, ನಿಮ್ಮ ನಡಿಗೆಗೆ ವೇಗ ಮತ್ತು ಶಕ್ತಿ ಸೇರಿಸಿದರೆ ಆರೋಗ್ಯದ ಲಾಭಗಳು ಇನ್ನಷ್ಟು ಹೆಚ್ಚುತ್ತವೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಗು ತೋರಿಸಿಲ್ಲ ಎಂಬ ಸಿಟ್ಟಿಗೆ ಭೀಕರ ದಾಳಿ: ಅತ್ತೆಗೆ ಅಳಿಯನಿಂದ ಚಾಕು ಇರಿತ!

ಬೆಳಗಾವಿ: ಕ್ಷುಲ್ಲಕ ಕಾರಣಕ್ಕಾಗಿ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದ ಭೀಕರ ಘಟನೆ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.

ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲ ಎಂಬ ಕಾರಣಕ್ಕೆ ಆರೋಪಿ ಅರವಿಂದ ಗವಳಿ ಸಿಟ್ಟಿಗೆದ್ದಿದ್ದು, ತನ್ನ ಅತ್ತೆ ಮಹಾದೇವಿ (45) ಅವರಿಗೆ ಚಾಕುವಿನಿಂದ ದಾಳಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಗೆ ಎರಡು ತಿಂಗಳ ಹಿಂದೆ ಹೆರಿಗೆಯಾಗಿದ್ದು, ಆಕೆ ತವರು ಮನೆಯಲ್ಲಿ ಉಳಿದಿದ್ದಳು. ಅರವಿಂದ ನಿರಂತರವಾಗಿ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸುವಂತೆ ಒತ್ತಾಯಿಸುತ್ತಿದ್ದನು. ಇದಕ್ಕೆ ಅತ್ತೆ ವಿರೋಧ ವ್ಯಕ್ತಪಡಿಸಿ ಬುದ್ಧಿವಾದ ಹೇಳಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಇದೇ ದ್ವೇಷದಿಂದ ಅರವಿಂದ ಅತ್ತೆಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಹಾದೇವಿಯನ್ನು ಕೂಡಲೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಬಳಿಕ ಆರೋಪಿ ಅರವಿಂದ ಸಾಮಾಜಿಕ ಜಾಲತಾಣದಲ್ಲಿ “ಇಂದು ಜೈಲು, ನಾಳೆ ಬೇಲ್… ನಿನ್ನನ್ನು ಬಿಡಲ್ಲ” ಎಂದು ಸ್ಟೇಟಸ್ ಹಾಕಿಕೊಂಡು ಅಹಂಕಾರ ಪ್ರದರ್ಶಿಸಿದ್ದಾನೆ ಎಂದು ತಿಳಿದುಬಂದಿದೆ.

ಮುರಗೋಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

error: Content is protected !!