Home Blog Page 50

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೇವಸ್ಥಾನ ಜೀರ್ಣೋದ್ಧಾರಕ್ಕೆ ₹2 ಲಕ್ಷ ನೆರವು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗೊಜನೂರು ವಲಯದ ಅಕ್ಕಿಗುಂದ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ₹2 ಲಕ್ಷ ಅನುದಾನ ಮಂಜೂರಾಗಿದ್ದು, ಚೆಕ್ ವಿತರಣಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ಗದಗ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ದೇವಸ್ಥಾನ ಸಮಿತಿಗೆ ಚೆಕ್ ಹಸ್ತಾಂತರಿಸಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆ ಹೂಳೆತ್ತುವಿಕೆ, ಶುದ್ಧ ಕುಡಿಯುವ ನೀರಿನ ಯೋಜನೆ, ನಿರ್ಗತಿಕರಿಗೆ ಮನೆ ನಿರ್ಮಾಣ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಅಕ್ಕಿಗುಂದದ ದೇವಸ್ಥಾನ ಜೀರ್ಣೋದ್ಧಾರಕ್ಕೂ ನೀಡಿರುವ ಈ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಸುಂದರ ದೇವಾಲಯ ನಿರ್ಮಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಣ್ಣದಯ್ಯ ಶಂಕಿನಮಠ, ಉಪಾಧ್ಯಕ್ಷ ನೀಲಪ್ಪ ಪಣಿ, ತಾಲೂಕು ಯೋಜನಾಧಿಕಾರಿ ಪುನೀತ್ ಓಲೇಕಾರ್, ಸಮಿತಿ ಸದಸ್ಯರಾದ ಬಸಯ್ಯ ಮಲಿಮಠ, ಬಸವಣ್ಣೆಪ್ಪ ತೋಟದ, ಶಂಕ್ರಪ್ಪ ಬೆಂತೂರು, ವೀರಭದ್ರಯ್ಯ ಪೂಜಾರ, ಶೇಖಪ್ಪ ಬಟ್ಟೂರು, ವೆಂಕಪ್ಪ ಲಮಾಣಿ, ಶರಣಯ್ಯ ಹಿರೇಮಠ, ವಲಯದ ಮೇಲ್ವಿಚಾರಕಿ ಗಂಗೋತ್ರಿ ಗೌಡ, ಸೇವಾ ಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

“ದೇವಸ್ಥಾನಗಳ ಜೀರ್ಣೋದ್ಧಾರವೂ ಸಮಾಜಮುಖಿ ಸೇವೆಯ ಒಂದು ಭಾಗವಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ಕಾರ್ಯಕ್ಕೆ ನಿರಂತರ ಬೆಂಬಲ ನೀಡುತ್ತಿದೆ.”

ಕೇಶವ ದೇವಾಂಗ, ಜಿಲ್ಲಾ ನಿರ್ದೇಶಕರು

ಲಕ್ಷ್ಮೇಶ್ವರವನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ; ಸರ್ಕಾರಕ್ಕೆ ಕರವೇ ಆಗ್ರಹ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ವೈಫಲ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ಆಗ್ರಹಿಸಿದೆ.

ಜಿಲ್ಲಾಧ್ಯಕ್ಷ ಶರಣು ಗೋಡಿ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಮನವಿ ಸಲ್ಲಿಸಿ, ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಶರಣು ಗೋಡಿ, 2026-27ರ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಹೆಸರು, ಜೋಳ, ಮೆಣಸಿನಕಾಯಿ, ಬೆಳ್ಳುಳ್ಳಿ, ಮೆಕ್ಕೆಜೋಳ, ಹತ್ತಿ, ತೊಗರಿ ಹಾಗೂ ಶೇಂಗಾ ಸೇರಿದಂತೆ ಬಹುತೇಕ ಬೆಳೆಗಳು ಒಣಗುತ್ತಿವೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸಮಸ್ಯೆಯೂ ಗಂಭೀರವಾಗಿದ್ದು, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ರೈತರಿಂದ ಬೆಳೆ ವಿಮೆ ಪರಿಹಾರದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಏಜೆಂಟರ ಹಸ್ತಕ್ಷೇಪವನ್ನು ತಡೆಗಟ್ಟಬೇಕು. 2025-26ರ ಹಿಂಗಾರು ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡಬೇಕು. ರಾಷ್ಟ್ರ ಹಾಗೂ ರಾಜ್ಯ ಬೆಳೆ ವಿಮೆ ಯೋಜನೆಯಡಿ ಅರ್ಹ ರೈತರಿಗೆ ಶೀಘ್ರ ಪರಿಹಾರ ನೀಡಬೇಕು. ಏಜೆಂಟರ ಮೂಲಕವಲ್ಲದೆ ನೇರವಾಗಿ ವಿಮೆ ಮಾಡಿಸಿರುವ ರೈತರಿಗೆ ಬಾಕಿ ಇರುವ ವಿಮೆ ಮೊತ್ತವನ್ನು ಕೂಡಲೇ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಹಾಂತೇಶ ಮಣಕವಾಡ, ಮಲ್ಲಿಕಾರ್ಜುನ ನಿರಾಲೋಟಿ, ವಿನಯ ಪಾಟೀಲ, ಆನಂದ ಅಮರಶೆಟ್ಟಿ, ಸಿರಾಜ್ ಡಾಲಾಯತ, ಪ್ರವೀಣ ಆಚಾರಿ, ಲುಕಮಾನ ಬೆಟಗೇರಿ, ಕೈಸರ ಮಹಮ್ಮದ್ ಅಲಿ, ಮಹಾಂತೇಶ ಇಟಗಿ, ನಾಗರಾಜ ಸಾಲಾವಳಿಮಠ, ಕಿರಣ ಬಡಿಗೇರ, ಅಷ್ಪಾಕ್ ಬಾಗೋಡಿ, ಮಲ್ಲೇಶ ಬನ್ನಿ, ದುದ್ದು ಅಕ್ಕಿ, ಆಕಾಶ ಭಜಂತ್ರಿ, ಬಸವರಾಜ ಬೂದಿಹಾಳ, ಮಲ್ಲಿಕಜಾನ್ ಗದವಾಲ್, ನವಾಜ್ ಅತ್ತಾರ ಹಾಗೂ ಧರ್ಮಸಿಂಗ್ ಕಿಲ್ಲೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಬೆಳೆ ವಿಮೆ ಹಾಗೂ ಪರಿಹಾರವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು.”

ಶರಣು ಗೋಡಿ, ಕರವೇ (ಸ್ವಾಭಿಮಾನಿ ಸೇನೆ) ಜಿಲ್ಲಾಧ್ಯಕ್ಷ

ಗೂಗಲ್‌ನಲ್ಲಿ ಈ 7 ವಿಷಯಗಳನ್ನು ಎಂದಿಗೂ ಸರ್ಚ್ ಮಾಡಬೇಡಿ; ಅಪಾಯಕ್ಕೆ ಸಿಲುಕಬಹುದು!

ಗೂಗಲ್‌ ಇಂದು ವಿಶ್ವದ ಅತ್ಯಂತ ಜನಪ್ರಿಯ ಸರ್ಚ್ ಎಂಜಿನ್‌ಗಳಲ್ಲಿ ಒಂದಾಗಿದೆ.

ಯಾವುದೇ ಮಾಹಿತಿ ಬೇಕಾದರೂ ಕ್ಷಣಾರ್ಧದಲ್ಲಿ ಹುಡುಕಿ ತಿಳಿದುಕೊಳ್ಳಲು ಜನರು ಇದನ್ನು ಬಳಸುತ್ತಾರೆ. ರೆಸಿಪಿ, ಪ್ರಯಾಣ, ಕಾನೂನು ಮಾಹಿತಿ ಸೇರಿದಂತೆ ಹಲವು ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಲಾಗುತ್ತದೆ.

ಆದರೆ ಕೆಲವು ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕುವುದು ಅಪಾಯಕಾರಿಯಾಗಬಹುದು. ಇಂತಹ ಹುಡುಕಾಟಗಳು ನಿಮ್ಮ ಖಾಸಗಿ ಮಾಹಿತಿಗೆ ಧಕ್ಕೆ ತರಬಹುದು ಅಥವಾ ಕಾನೂನು ಸಮಸ್ಯೆಗೂ ಕಾರಣವಾಗಬಹುದು.

ಕಾನೂನುಬಾಹಿರ ಹಾಗೂ ಹಿಂಸಾತ್ಮಕ ವಿಷಯಗಳು:

ಬಾಂಬ್, ಸ್ಫೋಟಕ, ಶಸ್ತ್ರಾಸ್ತ್ರಗಳ ತಯಾರಿಕೆ ಅಥವಾ ಅಕ್ರಮ ವಸ್ತುಗಳ ತಯಾರಿಕೆ ಕುರಿತು ಮಾಹಿತಿ ಹುಡುಕುವುದನ್ನು ತಪ್ಪಿಸಬೇಕು. ಇಂತಹ ಹುಡುಕಾಟಗಳು ಭದ್ರತಾ ಸಂಸ್ಥೆಗಳ ಗಮನಕ್ಕೆ ಬರಬಹುದಾಗಿದ್ದು, ಕಾನೂನು ತೊಂದರೆ ಎದುರಾಗುವ ಸಾಧ್ಯತೆ ಇದೆ.

ಮಕ್ಕಳಿಗೆ ಸಂಬಂಧಿಸಿದ ಆಕ್ಷೇಪಾರ್ಹ ವಿಷಯಗಳು

ಮಕ್ಕಳ ಶೋಷಣೆ ಅಥವಾ ದೌರ್ಜನ್ಯಕ್ಕೆ ಸಂಬಂಧಿಸಿದ ಯಾವುದೇ ಆಕ್ಷೇಪಾರ್ಹ ವಿಷಯಗಳನ್ನು ಹುಡುಕುವುದು ಗಂಭೀರ ಅಪರಾಧವಾಗಿದೆ. ಇಂತಹ ಚಟುವಟಿಕೆಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಗಳಿವೆ.

ಹ್ಯಾಕಿಂಗ್ ಮತ್ತು ಸೈಬರ್ ಅಪರಾಧದ ಮಾಹಿತಿ

ಯಾರದ್ದಾದರೂ ಫೋನ್, ಬ್ಯಾಂಕ್ ಖಾತೆ, ವೈ-ಫೈ ಅಥವಾ ಪಾಸ್‌ವರ್ಡ್ ಹ್ಯಾಕ್ ಮಾಡುವುದು ಹೇಗೆ ಎಂಬಂತಹ ಮಾಹಿತಿಗಳನ್ನು ಹುಡುಕುವುದರಿಂದ ದೂರವಿರಿ. ಇಂತಹ ಹುಡುಕಾಟಗಳು ಸೈಬರ್ ಅಪರಾಧದ ಉದ್ದೇಶ ಎಂದು ಪರಿಗಣಿಸಲ್ಪಡುವ ಸಾಧ್ಯತೆ ಇದೆ.

ಅಪರಿಚಿತ ಆ್ಯಪ್‌ಗಳು ಮತ್ತು ಸಾಫ್ಟ್‌ವೇರ್‌ಗಳು

ಗೂಗಲ್‌ನಲ್ಲಿ ಸಿಕ್ಕ ಯಾವುದೇ ಅಪರಿಚಿತ ಅಪ್ಲಿಕೇಶನ್ ಅಥವಾ ಸಾಫ್ಟ್‌ವೇರ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ನಕಲಿ ಆ್ಯಪ್‌ಗಳ ಮೂಲಕ ಸೈಬರ್ ಅಪರಾಧಿಗಳು ನಿಮ್ಮ ವೈಯಕ್ತಿಕ ಮಾಹಿತಿ ಕದಿಯುವ ಸಾಧ್ಯತೆ ಇದೆ.

ತ್ವರಿತ ಹಣದ ಭರವಸೆ ನೀಡುವ ಹೂಡಿಕೆ ಯೋಜನೆಗಳು

ಕಡಿಮೆ ಸಮಯದಲ್ಲಿ ಹಣ ದುಪ್ಪಟ್ಟು ಮಾಡುವುದಾಗಿ ಹೇಳುವ ಹೂಡಿಕೆ ಯೋಜನೆಗಳ ಬಗ್ಗೆ ಎಚ್ಚರಿಕೆ ವಹಿಸಿ. ಇಂತಹ ಹಲವು ಲಿಂಕ್‌ಗಳು ವಂಚನೆಯ ಜಾಲವಾಗಿರಬಹುದು. ಹೂಡಿಕೆ ಮಾಡುವ ಮೊದಲು ಅಧಿಕೃತ ಸಂಸ್ಥೆಗಳ ಸಲಹೆ ಪಡೆಯುವುದು ಉತ್ತಮ.

ಕಸ್ಟಮರ್ ಕೇರ್ ಸಂಖ್ಯೆಗಳ ಹುಡುಕಾಟ

ಬ್ಯಾಂಕ್, ಕಂಪನಿ ಅಥವಾ ಸೇವೆಗಳ ಕಸ್ಟಮರ್ ಕೇರ್ ಸಂಖ್ಯೆಯನ್ನು ಗೂಗಲ್‌ನಲ್ಲಿ ಹುಡುಕುವಾಗ ಎಚ್ಚರಿಕೆ ಅಗತ್ಯ. ನಕಲಿ ಸಂಖ್ಯೆಗಳ ಮೂಲಕ ವಂಚಕರು ನಿಮ್ಮ ಬ್ಯಾಂಕ್ ಮಾಹಿತಿ ಅಥವಾ ವೈಯಕ್ತಿಕ ವಿವರಗಳನ್ನು ಪಡೆದುಕೊಳ್ಳಬಹುದು. ಯಾವಾಗಲೂ ಅಧಿಕೃತ ವೆಬ್‌ಸೈಟ್‌ನಿಂದಲೇ ಸಂಖ್ಯೆ ಪಡೆಯಿರಿ.

ವೈದ್ಯಕೀಯ ಸಮಸ್ಯೆಗಳಿಗೆ ಸ್ವಯಂ ಚಿಕಿತ್ಸೆ ಬೇಡ

ಆರೋಗ್ಯ ಸಮಸ್ಯೆಗಳಿಗೆ ಯಾವ ಔಷಧಿ ತೆಗೆದುಕೊಳ್ಳಬೇಕು ಎಂಬುದನ್ನು ಗೂಗಲ್‌ನಲ್ಲಿ ಹುಡುಕಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು ಅಪಾಯಕಾರಿ. ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವಿಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ತಂತ್ರಜ್ಞಾನ ಬಳಸುವಾಗ ಎಚ್ಚರಿಕೆ ವಹಿಸುವುದು ಮುಖ್ಯ. ಯಾವುದೇ ಮಾಹಿತಿಯನ್ನು ಹುಡುಕುವ ಮೊದಲು ಅದರ ಮೂಲ ವಿಶ್ವಾಸಾರ್ಹವೇ ಎಂಬುದನ್ನು ಪರಿಶೀಲಿಸಿ.

ಶಾಸಕ ಪ್ರದೀಪ್ ಈಶ್ವರ್‌ಗೆ ಚಪ್ಪಲಿ ಎಸೆದ ಪ್ರಕರಣ: ನಾಲ್ವರ ವಿರುದ್ಧದ ಕೇಸ್‌ಗೆ ಹೈಕೋರ್ಟ್ ತಡೆ

ಬೆಂಗಳೂರು/ಚಿಕ್ಕಬಳ್ಳಾಪುರ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆ ಕೂಗಿ ಚಪ್ಪಲಿ ಎಸೆದ ಘಟನೆ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠವು, “ಶಾಸಕರಿಗೆ ಅಪಮಾನವಾಗಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸಬಹುದಿತ್ತು. ಆದರೆ 800 ಜನರಿದ್ದ ಸ್ಥಳದಲ್ಲಿ ಕೇವಲ ಈ ನಾಲ್ವರ ವಿರುದ್ಧವೇ ಪ್ರಕರಣ ದಾಖಲಿಸಿರುವುದೇಕೆ?” ಎಂದು ಚಿಕ್ಕಬಳ್ಳಾಪುರ ಪೊಲೀಸರನ್ನು ಪ್ರಶ್ನಿಸಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಪೊಲೀಸರಿಗೆ ಸೂಚಿಸಿರುವ ನ್ಯಾಯಾಲಯ, ಮೋಹನ್ ರಾಜ್, ಅಕ್ಕುಲ ರೆಡ್ಡಿ, ಟಿ.ಎಸ್​.ಮಹೇಂದ್ರ ಮತ್ತು ಟಿ.ಎಸ್‌.ಪ್ರಕಾಶ್ ವಿರುದ್ಧದ ಪ್ರಕರಣಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಏನಾಗಿತ್ತು ಘಟನೆ?

ಚಿಕ್ಕಬಳ್ಳಾಪುರದಲ್ಲಿ ಜೂನ್ 27ರಂದು ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು.

ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಕುರಿತು ಶಾಸಕ ಪ್ರದೀಪ್ ಈಶ್ವರ್ ನೀಡಿದ್ದ ಹೇಳಿಕೆಗೆ ಆಕ್ರೋಶಗೊಂಡಿದ್ದ ಜೆಡಿಎಸ್ ಕಾರ್ಯಕರ್ತರು, ಕನ್ನಡ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದರು.

ಶಾಸಕರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ಘೋಷಣೆ ಕೂಗಿದ ಹಿನ್ನೆಲೆ ಗೊಂದಲ ಉಂಟಾಗಿತ್ತು. ಬಳಿಕ ಸ್ವಾಮೀಜಿ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾಗಿತ್ತು.

ಆದರೆ ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಗಲಾಟೆ ಆರಂಭವಾಗಿದ್ದು, ಶಾಸಕ ಪ್ರದೀಪ್ ಈಶ್ವರ್ ಅವರು ಕಾರಿನ ಸನ್‌ರೂಫ್ ತೆರೆದು ನಿಂತು ತೆರಳುತ್ತಿದ್ದ ವೇಳೆ ಪ್ರತಿಭಟನಾಕಾರರೊಂದಿಗೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಈ ವೇಳೆ ಕೆಲವರು ಶಾಸಕರ ವಿರುದ್ಧ ಘೋಷಣೆ ಕೂಗಿ ಚಪ್ಪಲಿ ಎಸೆದ ಆರೋಪ ಕೇಳಿಬಂದಿತ್ತು. ಪೊಲೀಸರು ಸ್ಥಳದಲ್ಲೇ ಕೆಲವರನ್ನು ವಶಕ್ಕೆ ಪಡೆದಿದ್ದರು.

ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಠಾಣೆಯ ಪಿಎಸ್‌ಐ ಅಮರ್ ಅವರು ಸ್ವಯಂಪ್ರೇರಿತವಾಗಿ (Suo Moto) ಪ್ರಕರಣ ದಾಖಲಿಸಿದ್ದರು. ಚಪ್ಪಲಿ ಎಸೆದು, ಅವಾಚ್ಯ ಪದಗಳಿಂದ ನಿಂದನೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು.

ಇದೀಗ ಹೈಕೋರ್ಟ್ ಪ್ರಕರಣಕ್ಕೆ ತಡೆ ನೀಡಿದ್ದು, ಮುಂದಿನ ವಿಚಾರಣೆ ಬಳಿಕ ಪ್ರಕರಣದ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಮಳೆ ಕಡಿಮೆಯಾಗುವ ಲಕ್ಷಣವಿಲ್ಲ! ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ವರ್ಷಧಾರೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಮಳೆಯ ಅಬ್ಬರ ಮುಂದುವರಿಯಲಿದ್ದು, ಇನ್ನೂ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿ ಜಿಲ್ಲೆಗಳಲ್ಲಿ ಜುಲೈ 9 ಮತ್ತು 10ರಂದು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜುಲೈ 9ರಂದು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜುಲೈ 8 ಮತ್ತು 9ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಬೆಳಕಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿಲೋ ಮೀಟರ್ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್:

ಮುಂದಿನ 24 ಗಂಟೆಗಳಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಭಾರಿ ಗಾಳಿ ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇನ್ನು ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಉತ್ತಮ ಮಳೆಯ ನಿರೀಕ್ಷೆ ಇದೆ.

ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ:

ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಇದಲ್ಲದೆ ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನೆಲ ಒರೆಸುವ ನೀರಿಗೆ ಚಿಟಿಕೆ ಉಪ್ಪು ಹಾಕಿ ನೋಡಿ; ಮನೆಯ ಸ್ವಚ್ಛತೆಗೆ ಈ ಸರಳ ಟ್ರಿಕ್!

ಪ್ರತಿನಿತ್ಯ ನೆಲ ಒರೆಸಿದರೂ ಕೆಲವೊಮ್ಮೆ ಕೊಳಕು, ಕಲೆಗಳು ಮತ್ತು ದುರ್ವಾಸನೆ ಹಾಗೆಯೇ ಉಳಿಯುತ್ತವೆ. ದುಬಾರಿ ಕೆಮಿಕಲ್ ಕ್ಲೀನರ್‌ಗಳನ್ನು ಬಳಸುವ ಬದಲು ಅಡುಗೆ ಮನೆಯಲ್ಲಿ ಸಿಗುವ ಉಪ್ಪಿನಿಂದಲೇ ಸುಲಭ ಪರಿಹಾರ ಪಡೆಯಬಹುದು.

ಒಂದು ಬಕೆಟ್ ನೀರಿಗೆ 2 ಟೀ ಚಮಚ ಉಪ್ಪು ಹಾಕಿ ಚೆನ್ನಾಗಿ ಕರಗಿಸಿ. ಈ ನೀರಿನಿಂದ ನೆಲ ಒರೆಸುವುದರಿಂದ ಮನೆಯ ಸ್ವಚ್ಛತೆ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಉಪ್ಪು ನೀರಿನ ಪ್ರಯೋಜನಗಳು:

ಬ್ಯಾಕ್ಟೀರಿಯಾ ಕಡಿಮೆ ಮಾಡಲು ಸಹಕಾರಿ:
ಉಪ್ಪಿನಲ್ಲಿ ನೈಸರ್ಗಿಕ ಸೋಂಕುನಿರೋಧಕ ಗುಣಗಳಿವೆ. ಇದು ನೆಲದ ಮೇಲಿರುವ ಕೆಲವು ಸೂಕ್ಷ್ಮಜೀವಿಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಕಲೆ ಮತ್ತು ಹಳದಿ ಬಣ್ಣ ಕಡಿಮೆ ಮಾಡಲು ಸಹಕಾರಿ:
ಟೈಲ್ಸ್‌ ಮೇಲಿನ ಕೆಲವು ಕಲೆಗಳನ್ನು ತೆಗೆಯಲು ಉಪ್ಪು ನೀರು ಸಹಾಯ ಮಾಡಬಹುದು. ನಿಯಮಿತ ಸ್ವಚ್ಛತೆಯಿಂದ ನೆಲ ಹೊಳೆಯುವಂತೆ ಕಾಣಬಹುದು.

ನೊಣ ಮತ್ತು ಕೀಟಗಳನ್ನು ದೂರವಿಡಲು ಸಹಾಯ:
ಉಪ್ಪು ನೀರಿನಿಂದ ನೆಲ ಒರೆಸುವುದರಿಂದ ಕೆಲವು ಕೀಟಗಳು ದೂರ ಉಳಿಯಲು ಸಹಾಯವಾಗಬಹುದು.

ಆದರೆ, ಉಪ್ಪು ನೀರು ಸಂಪೂರ್ಣವಾಗಿ ಎಲ್ಲಾ ಬ್ಯಾಕ್ಟೀರಿಯಾ ಅಥವಾ ಕೀಟಗಳನ್ನು ನಾಶ ಮಾಡುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಮನೆಯ ಸ್ವಚ್ಛತೆಗಾಗಿ ನಿಯಮಿತ ಒರೆಸುವುದು, ಕಸವನ್ನು ಸರಿಯಾಗಿ ವಿಲೇವಾರಿ ಮಾಡುವುದು ಮತ್ತು ಅಗತ್ಯವಿದ್ದಾಗ ಸೂಕ್ತ ಕ್ಲೀನರ್ ಬಳಸುವುದು ಉತ್ತಮ.

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ: ರಾಜ್ಯಕ್ಕೆ 1 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು, ಪ್ರವಾಹದ ಆತಂಕ

ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಕಳೆದ ಆರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಕರ್ನಾಟಕದತ್ತ ನದಿಗಳ ಒಳಹರಿವು ಗಣನೀಯವಾಗಿ ಹೆಚ್ಚಿದೆ. ರಾಜ್ಯಕ್ಕೆ ಒಟ್ಟು 98 ಸಾವಿರದಿಂದ 1 ಲಕ್ಷ ಕ್ಯೂಸೆಕ್‌ಗಿಂತ ಅಧಿಕ ನೀರು ಹರಿದು ಬರುತ್ತಿದ್ದು, ಕಳೆದ ಒಂದೇ ರಾತ್ರಿ ಕೃಷ್ಣಾ ನದಿಗೆ ಹೆಚ್ಚುವರಿಯಾಗಿ ಸುಮಾರು 28 ಸಾವಿರ ಕ್ಯೂಸೆಕ್ ನೀರು ಸೇರ್ಪಡೆಯಾಗಿದೆ.

ಭಾರೀ ಒಳಹರಿವಿನ ಪರಿಣಾಮ ಬೆಳಗಾವಿ ಜಿಲ್ಲೆಯ ಕೃಷ್ಣಾ, ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ, ಘಟಪ್ರಭಾ, ಮಲಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.

ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಎಂಟು ಕೆಳಹಂತದ ಸೇತುವೆಗಳು ಜಲಾವೃತಗೊಂಡಿವೆ. ಮುಲ್ಲಾಂಕಿ–ದತ್ತವಾಡ, ಕಾರದಗಾ–ಬೋಜ್, ಅಕ್ಕೋಳ–ಸಿದ್ನಾಳ, ಜತ್ರಾಟ್–ಭೀವಶಿ, ಬಾರವಾಡ–ಕನ್ನೂರ ಹಾಗೂ ಬೋಜವಾಡಿ–ಗಜವರವಾಡಿ ಸೇರಿದಂತೆ ಹಲವು ಸಂಪರ್ಕ ಸೇತುವೆಗಳು ನೀರಿನಲ್ಲಿ ಮುಳುಗಿವೆ. ಇದರ ಪರಿಣಾಮವಾಗಿ 16ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ದೂದಗಂಗಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ನದಿ ಪಾತ್ರದ ಪಕ್ಕದ ಕೃಷಿ ಜಮೀನುಗಳಿಗೆ ನೀರು ನುಗ್ಗಿದೆ. ನಿಪ್ಪಾಣಿ ತಾಲೂಕಿನ ಶಿರದವಾಡ ಗ್ರಾಮದ ಹೊಲಗಳಲ್ಲಿ ಬೆಳೆದಿದ್ದ ಜೋಳ, ಉದ್ದು ಹಾಗೂ ಸೊಯಾಬೀನ್ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ರೈತರು ಭಾರೀ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ.

ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಇದೀಗ ಅತಿಯಾದ ಮಳೆ ಮತ್ತು ಪ್ರವಾಹವೇ ಸಂಕಷ್ಟ ತಂದೊಡ್ಡಿದ್ದು, ಬೆಳೆ ಹಾನಿಯಿಂದ ಆತಂಕ ಹೆಚ್ಚಾಗಿದೆ. ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಎಂಗೇಜ್ ಮೆಂಟ್ ಒಂದೆಡೆ, ರಹಸ್ಯ ಮದುವೆ ಮತ್ತೊಂದೆಡೆ: ಕ್ರಿಮಿನಲ್ ಬ್ಯೂಟಿ ಸಿಯಾ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಯಲು

ಮುಂಬೈ: ಭಾವಿ ಪತಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ನಾಲ್ಕು ತಿಂಗಳ ಹಿಂದೆಯೇ ರಹಸ್ಯವಾಗಿ ವಿವಾಹವಾಗಿದ್ದರು ಎಂಬ ಹೊಸ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪುಣೆ ಗ್ರಾಮೀಣ ಪೊಲೀಸರು ಈ ಮಾಹಿತಿಯನ್ನು ಪರಿಶೀಲಿಸುತ್ತಿದ್ದು, ಸ್ಥಳೀಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಇಬ್ಬರೂ ವಿವಾಹ ನೋಂದಣಿ ಮಾಡಿಕೊಂಡಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮದುವೆ ನೋಂದಣಿಗೆ ಸಾಕ್ಷಿಗಳಾಗಿ ಸಹಿ ಹಾಕಿದ್ದಾರೆ ಎನ್ನಲಾದ ಸಿಯಾ ಅವರ ಇಬ್ಬರು ಕಾಲೇಜು ಸ್ನೇಹಿತರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಪತ್ತೆಯಾದ ಫೋಟೋವೊಂದರಲ್ಲಿ ಸಿಯಾ ಮತ್ತು ಚೇತನ್ ಹಾರ ಧರಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಂ ಖಾತೆಯಿಂದ ಅಳಿಸಲಾದ ಫೋಟೋಗಳನ್ನು ಮರುಪಡೆಯಲು ಪೊಲೀಸರ ತಾಂತ್ರಿಕ ತಂಡ ಪ್ರಯತ್ನಿಸುತ್ತಿದೆ.

ಪ್ರಕರಣದ ತನಿಖೆ ಪ್ರಕಾರ, ಜೂನ್ 18ರಂದು ಪುಣೆ ಸಮೀಪದ ಲೋಹಗಡ ಕೋಟೆಯ ಎತ್ತರದ ಪ್ರದೇಶದಿಂದ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ (20) ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ (22) ತಳ್ಳಿದ ಪರಿಣಾಮ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಈ ಪ್ರಕರಣದಲ್ಲಿ ಸಿಯಾ ಮತ್ತು ಚೇತನ್ ಇಬ್ಬರ ಪಾತ್ರವೂ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದು, ಸದ್ಯ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

4 ದಿನಗಳ ಬಳಿಕ ಹುಂಡಿ ಎಣಿಕೆ ಪತ್ರಿಕಾ ಪ್ರಕಟಣೆ: ಅನುಮಾನಕ್ಕೆ ಕಾರಣವಾದ ತಾಲೂಕು ಆಡಳಿತದ ನಡೆ

ಕೊಪ್ಪಳ: ವಿಶ್ವವಿಖ್ಯಾತ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ನಡೆದ ನಾಲ್ಕು ದಿನಗಳ ಬಳಿಕ ತಾಲೂಕು ಆಡಳಿತ ಪತ್ರಿಕಾ ಪ್ರಕಟಣೆ ಹೊರಡಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವನ್ನು ಹನುಮಂತನ ಜನ್ಮಸ್ಥಳವೆಂದು ಭಕ್ತರು ನಂಬುತ್ತಾರೆ. ಜುಲೈ 3ರಂದು ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದರೂ, ಅದರ ವಿವರಗಳನ್ನು ನಾಲ್ಕು ದಿನಗಳ ಬಳಿಕ ಮಾತ್ರ ಅಧಿಕೃತವಾಗಿ ಪ್ರಕಟಿಸಲಾಗಿದೆ.

ತಾಲೂಕು ಆಡಳಿತದ ಈ ವಿಳಂಬದ ನಡೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮಾಹಿತಿ ಪ್ರಕಟಿಸಲು ತಡವಾದ ಕಾರಣವೇನು ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಇದಕ್ಕೂ ಮೊದಲು ಮಾರ್ಚ್ 23ರಂದು ಹುಂಡಿ ಎಣಿಕೆ ನಡೆದಿತ್ತು. ಕಳೆದ 94 ದಿನಗಳ ಅವಧಿಯಲ್ಲಿ ಭಕ್ತರಿಂದ ಒಟ್ಟು 71,77,460 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹುಂಡಿಯಲ್ಲಿ ಭಾರತೀಯ ಕರೆನ್ಸಿಯ ಜೊತೆಗೆ ನೇಪಾಳ, ಅಮೆರಿಕಾ, ಥೈಲ್ಯಾಂಡ್ ಹಾಗೂ ಹಾಂಕಾಂಗ್ ದೇಶಗಳ ಕರೆನ್ಸಿಗಳೂ ಪತ್ತೆಯಾಗಿದ್ದು, ದೇಶ-ವಿದೇಶಗಳಿಂದ ಆಗಮಿಸುವ ಭಕ್ತರ ಸಂಖ್ಯೆಗೆ ಇದು ಸಾಕ್ಷಿಯಾಗಿದೆ.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಹತ್ಯೆ ಮಾಡಿದ ನರ್ಸ್!

ಹೈದರಾಬಾದ್: ಪ್ರಿಯಕರನೊಂದಿಗಿನ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ ನರ್ಸ್ ಪತ್ನಿಯೊಬ್ಬಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡನ ದೇಹಕ್ಕೆ ಕ್ಯಾನುಲಾ ಮೂಲಕ ಟಾಯ್ಲೆಟ್ ಕ್ಲೀನರ್ ಸೇರಿದಂತೆ ರಾಸಾಯನಿಕ ದ್ರವವನ್ನು ಸೇರಿಸಿ ಹತ್ಯೆ ಮಾಡಿರುವ ಆಘಾತಕಾರಿ ಪ್ರಕರಣ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.

ನಿಜಾಮಾಬಾದ್ ಜಿಲ್ಲೆಯ ನ್ಯಾಲ್ಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 35 ವರ್ಷದ ಪ್ರಶಾಂತ್ ಮೃತಪಟ್ಟವರು. ಇತ್ತೀಚೆಗಷ್ಟೇ ಗಲ್ಫ್ ದೇಶದಿಂದ ಊರಿಗೆ ಮರಳಿದ್ದ ಪ್ರಶಾಂತ್, ಪತ್ನಿ ಸಂಧ್ಯಾ ಮತ್ತು ಆಕೆಯ ಪ್ರಿಯಕರ ಅನಿಲ್ ನಡುವಿನ ಸಂಬಂಧಕ್ಕೆ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಂಧ್ಯಾ ತನ್ನ ಪರಿಚಯದ ವೆಂಕಟ ಸಾಯಿ ಅಲಿಯಾಸ್ ಬಂಟಿಗೆ ಪ್ರಶಾಂತ್‌ನೊಂದಿಗೆ ಸ್ನೇಹ ಬೆಳೆಸಿ ಮದ್ಯಪಾನ ಮಾಡಿಸುವಂತೆ ಸೂಚಿಸಿದ್ದಳು. ಜೂನ್ 29ರಂದು ಇಬ್ಬರೂ ಮದ್ಯ ಸೇವಿಸಿದ ಬಳಿಕ ಕಟ್ಟಡದ ಮೇಲ್ಛಾವಣಿಗೆ ತೆರಳಿದ್ದು, ಅಲ್ಲಿ ಸಂಧ್ಯಾ ಮತ್ತು ಬಂಟಿ ಸೇರಿ ಪ್ರಶಾಂತ್‌ನನ್ನು ಕೆಳಕ್ಕೆ ತಳ್ಳಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಪ್ರಶಾಂತ್‌ನನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಮೊದಲ ಸಂಚು ವಿಫಲವಾದ ಬಳಿಕ, ನರ್ಸ್ ಆಗಿರುವ ಸಂಧ್ಯಾ ತನ್ನ ವೈದ್ಯಕೀಯ ಜ್ಞಾನವನ್ನು ದುರುಪಯೋಗಪಡಿಸಿಕೊಂಡು ಆಸ್ಪತ್ರೆಯಲ್ಲೇ ಕ್ಯಾನುಲಾ ಮೂಲಕ ಟಾಯ್ಲೆಟ್ ಕ್ಲೀನರ್ ಹಾಗೂ ಇತರೆ ರಾಸಾಯನಿಕಗಳನ್ನು ದೇಹಕ್ಕೆ ಸೇರಿಸಿದ್ದಾಳೆ. ಇದರಿಂದ ಪ್ರಶಾಂತ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಪ್ರಶಾಂತ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರ ತಾಯಿ ಜುಲೈ 1ರಂದು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ಪ್ರಕರಣದ ಹಿಂದಿನ ಸಂಚನ್ನು ಬಯಲಿಗೆಳೆದಿದ್ದಾರೆ.

ವಿಚಾರಣೆ ವೇಳೆ ವೆಂಕಟ ಸಾಯಿ ಅಲಿಯಾಸ್ ಬಂಟಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದು, ಸಂಧ್ಯಾಳ ಸೂಚನೆಯಂತೆ ಪ್ರಶಾಂತ್‌ನನ್ನು ಟೆರೆಸ್‌ನಿಂದ ತಳ್ಳಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯಕ್ಕಾಗಿ ಸಂಧ್ಯಾಳೇ ಹಣ ನೀಡಿದ್ದಳು ಎಂಬ ಮಾಹಿತಿಯನ್ನೂ ಆತ ನೀಡಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 4ರಂದು ಸಂಧ್ಯಾ, ಆಕೆಯ ಪ್ರಿಯಕರ ಅನಿಲ್ ಹಾಗೂ ವೆಂಕಟ ಸಾಯಿ ಅಲಿಯಾಸ್ ಬಂಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂವರ ವಿರುದ್ಧ ಕೊಲೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.