Home Blog Page 51

ಅಕ್ರಮ ಮಣ್ಣು ಗಣಿಗಾರಿಕೆಗೆ ಕಡಿವಾಣ ಹಾಕಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮಣ್ಣು ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ್ರ ಬಣ) ಜಿಲ್ಲಾಧ್ಯಕ್ಷ ಎಂ.ಪಿ. ಪರ್ವತಗೌಡ್ರ ಎಚ್ಚರಿಕೆ ನೀಡಿದರು.

ಈ ಕುರಿತು ಕರವೇ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ಇತರ ಜಿಲ್ಲೆಗಳಿಗಿಂತ ಗದಗ ಜಿಲ್ಲೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದರಿಂದ ಅಕ್ರಮ ದಂಧೆ ನಿರಾತಂಕವಾಗಿ ಸಾಗುತ್ತಿದೆ ಎಂದು ಆರೋಪಿಸಿದರು.

ಕಾನೂನು ಹಾಗೂ ನಿಯಮಾವಳಿಗಳನ್ನು ಸಂಪೂರ್ಣ ಉಲ್ಲಂಘಿಸಿ ಹಗಲಿರುಳು ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದ್ದು, ಇದರಿಂದ ಸರ್ಕಾರದ ಆದಾಯಕ್ಕೂ ನಷ್ಟವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ದಾಳಿ ನಡೆಸಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸಯ್ಯ ಗುಡ್ಡಿಮಠ, ಶರಣಪ್ಪ ಹೊನ್ನಪ್ಪನವರ, ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪಾರ್ವತಿ ಪಾಟೀಲ, ಲಕ್ಷ್ಮಿ ಶಿವಸಿಂಪಿಗೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಶುರಾಮ ಬನ್ನುರ, ರೈತ ಸಂಘದ ಬಸವರಾಜ ಬಜಂತ್ರಿ, ಮಂಜುನಾಥ ಹೊನ್ನಪ್ಪನವರ, ಮಂಜುನಾಥ ಭಜಂತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಅಕ್ರಮ ಮಣ್ಣು ಗಣಿಗಾರಿಕೆಗೆ ಜಿಲ್ಲಾಡಳಿತ ತಕ್ಷಣ ಕಡಿವಾಣ ಹಾಕಬೇಕು. ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ತೀವ್ರ ಹೋರಾಟ ಆರಂಭಿಸಲಾಗುವುದು.”

– ಎಂ.ಪಿ. ಪರ್ವತಗೌಡ್ರ, ಜಿಲ್ಲಾಧ್ಯಕ್ಷ, ಕರವೇ (ಎಚ್. ಶಿವರಾಮೇಗೌಡ್ರ ಬಣ)

ವಿದ್ಯಾರ್ಥಿಗಳೊಂದಿಗೆ ಪರಿಸರ ಸಂರಕ್ಷಣೆಯ ಅಭಿಯಾನ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ತಂಬ್ರಹಳ್ಳಿ ಪೊಲೀಸ್ ಠಾಣೆ ಹಾಗೂ ವಸತಿ ಗೃಹದ ಆವರಣದಲ್ಲಿ ಕೆಪಿಜಿ ಶಾಲೆಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸುಮಾರು 200 ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್, ಮುಂದಿನ ಪೀಳಿಗೆಗೂ ಉತ್ತಮ ಪರಿಸರವನ್ನು ಉಳಿಸಬೇಕಾದರೆ ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಹೇಳಿದರು. “ಪರಿಸರಕ್ಕಾಗಿ ನಾವು, ನಮಗಾಗಿ ಪರಿಸರ” ಎಂಬ ಸಂದೇಶದೊಂದಿಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪಿಎಸ್‌ಐ ನಾಗರಾಜ ಕೊಟಗಿ, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಜಿ. ಗಿರೀಶ್, ವಿಎಸ್‌ಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಮಂಜುನಾಥ ಪಾಟೀಲ್, ಬಣಕಾರ ಕೊಟ್ರೇಶ್, ಪೊಲೀಸ್ ಸಿಬ್ಬಂದಿಗಳಾದ ಪ್ರಸನ್ನ, ಕಿರಣ್, ಚೇತನ್, ಚೌಡಪ್ಪ, ಕೊಟ್ರೇಶ್, ಗಣೇಶ್, ಹೈಸ್ಕೂಲ್‌ನ ಪ್ರಶಾಂತ ಹಾಗೂ ಗಡ್ಡಿ ಚನ್ನಬಸವ ಸೇರಿದಂತೆ ಹಲವರು ಭಾಗವಹಿಸಿದ್ದರು.

ದುಷ್ಕರ್ಮಿಗಳಿಂದ ಸರಸ್ವತಿ ದೇವಿ ಮೂರ್ತಿ ಭಗ್ನ: ಆರೋಪಿಗಳ ಬಂಧನಕ್ಕೆ ಆಗ್ರಹ

0

ಗದಗ: ಜಿಲ್ಲೆಯಲ್ಲಿ ಮತ್ತೆ ದೇವರ ಮೂರ್ತಿ ವಿಕೃತಿಗೊಳಿಸಿದ ಘಟನೆ ಬೆಳಕಿಗೆ ಬಂದಿದ್ದು, ದುಷ್ಕರ್ಮಿಗಳು ನಗರದ ಐತಿಹಾಸಿಕ ಶ್ರೀ ಸರಸ್ವತಿ ದೇವಿ ಮೂರ್ತಿಯ ಎದೆಭಾಗವನ್ನು ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾರೆ.

ಗದಗ ನಗರದ ಐತಿಹಾಸಿಕ ಶ್ರೀ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀ ಸರಸ್ವತಿ ದೇವಸ್ಥಾನದಲ್ಲಿ ಈ ಕೃತ್ಯ ನಡೆದಿದ್ದು, ಘಟನೆ ನಿನ್ನೆ ರಾತ್ರಿ ನಡೆದಿರಬಹುದೆಂದು ಶಂಕಿಸಲಾಗಿದೆ. ಶನಿವಾರ ಮಧ್ಯಾಹ್ನ ಪ್ರಕರಣ ಬೆಳಕಿಗೆ ಬಂದಿದೆ.

8ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯ ಕೇಂದ್ರ ಪುರಾತತ್ವ ಇಲಾಖೆಯ ಅಧೀನದಲ್ಲಿದೆ. ದೇವಾಲಯದ ಐತಿಹಾಸಿಕ ಮಹತ್ವದ ನಡುವೆಯೇ ಮೂರ್ತಿಗೆ ಹಾನಿ ಉಂಟುಮಾಡಿರುವುದು ಭಕ್ತರು ಹಾಗೂ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಐತಿಹಾಸಿಕ ದಾಖಲೆಗಳ ಪ್ರಕಾರ, 16ನೇ ಶತಮಾನದ ಯುದ್ಧದ ಸಂದರ್ಭದಲ್ಲಿಯೂ ಈ ಮೂರ್ತಿಗೆ ಹಾನಿಯಾಗಿತ್ತು. ಇದೀಗ ಮತ್ತೊಮ್ಮೆ ಮೂರ್ತಿ ವಿಕೃತಿಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರಕರಣ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ.

14 ವರ್ಷದ ಅಪ್ರಾಪ್ತೆಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ

0

ಹುಬ್ಬಳ್ಳಿ: 14 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮನೆಯಲ್ಲೇ ಮಗುವಿಗೆ ಜನ್ಮ ನೀಡಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಜುಲೈ 8ರಂದು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಬಾಲಕಿಗೆ ಮನೆಯಲ್ಲೇ ಹೆರಿಗೆಯಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸದ್ಯ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದು, ಅಪ್ರಾಪ್ತೆಯಾದ ಕಾರಣ ಆಕೆಗೆ ‘ನಿರ್ಭಯಾ ವಾರ್ಡ್‌’ನಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಯ ಪ್ರಕಾರ, ಬಾಲಕಿ ಗರ್ಭಿಣಿಯಾಗಿದ್ದ ವಿಷಯವನ್ನು ಪೋಷಕರು ಮುಂಚಿತವಾಗಿ ತಿಳಿಸಿರಲಿಲ್ಲ. ಅಲ್ಲದೆ, ಆಸ್ಪತ್ರೆಗೆ ದಾಖಲಾಗಿರುವ ಬಾಲಕಿಯೊಂದಿಗೆ ಪಾಲಕರು ಇಲ್ಲದಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಪ್ರಾಪ್ತೆಯ ಗರ್ಭಧಾರಣೆಗೆ ಕಾರಣವಾದ ಸಂದರ್ಭಗಳು, ಲೈಂಗಿಕ ದೌರ್ಜನ್ಯ ಅಥವಾ ಇತರೆ ಕಾನೂನು ಉಲ್ಲಂಘನೆಗಳ ಕುರಿತು ತನಿಖೆ ನಡೆಸುವ ಸಾಧ್ಯತೆ ಇದೆ.

‘ಸಂಭಾವನೆ ಕೊಟ್ಟ ಬಳಿಕವೂ ಡಬ್ಬಿಂಗ್ ಬೇಡ ಎಂದರು’; ‘ಕರಾವಳಿ’ ವಿವಾದಕ್ಕೆ ಪ್ರಜ್ವಲ್ ಉತ್ತರ

ಬೆಂಗಳೂರು: ‘ಕರಾವಳಿ’ ಚಿತ್ರದ ಸುತ್ತ ನಡೆಯುತ್ತಿರುವ ವಿವಾದದ ಮಧ್ಯೆ ನಟ ಪ್ರಜ್ವಲ್ ದೇವರಾಜ್ ತಮ್ಮ ಮೌನ ಮುರಿದಿದ್ದಾರೆ. ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಅವರು, ನಿಜವಾದ ಕಾರಣಗಳನ್ನು ಬಹಿರಂಗಪಡಿಸುವ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಟ್ರೇಲರ್ ಬಿಡುಗಡೆಯ ವೇಳೆ ತಮ್ಮ ಪಾತ್ರಕ್ಕೆ ಅನುಮತಿಯಿಲ್ಲದೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಲಾಗಿತ್ತು. ಇದೇ ವೇಳೆ ತಮ್ಮ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಈ ಎರಡೂ ಕಾರಣಗಳಿಂದಲೇ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.

ಸಿಕ್ಸ್ ಪ್ಯಾಕ್ ವಿಚಾರವನ್ನು ಮುಂದಿಟ್ಟಿರುವ ಚಿತ್ರತಂಡದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ದೈಹಿಕ ತಯಾರಿಗೂ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಾಕಿ ಹಣ ಪಾವತಿಸಿದ ತಕ್ಷಣ ಡಬ್ಬಿಂಗ್ ಮಾಡಲು ಮತ್ತು ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳಲು ತಾವು ಸಿದ್ಧವಾಗಿದ್ದೆ ಎಂದಿದ್ದಾರೆ.

ಸಂಭಾವನೆ ಪಾವತಿಯಾದ ನಂತರ ಚಿತ್ರತಂಡವೇ ತಮ್ಮ ಮ್ಯಾನೇಜರ್‌ಗೆ ಕರೆ ಮಾಡಿ ಡಬ್ಬಿಂಗ್ ಹಾಗೂ ಪ್ರಚಾರಕ್ಕೆ ಬರಬೇಕಿಲ್ಲ ಎಂದು ತಿಳಿಸಿತ್ತು. ಹೀಗಾಗಿ ಚಿತ್ರದಿಂದ ದೂರ ಉಳಿದಿರುವುದು ತಮ್ಮ ನಿರ್ಧಾರವಲ್ಲ, ಚಿತ್ರತಂಡದ ನಿರ್ಧಾರ ಎಂದು ಪ್ರಜ್ವಲ್ ಹೇಳಿದ್ದಾರೆ.

ತಮ್ಮ ಧ್ವನಿ ಪಾತ್ರಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿರುವುದು ನೋವುಂಟು ಮಾಡಿದೆ. ಅವಕಾಶ ನೀಡದೆ ಈ ರೀತಿಯ ಹೇಳಿಕೆ ನೀಡಿರುವುದು ತಮ್ಮ ವೃತ್ತಿಪರ ಗೌರವಕ್ಕೆ ಧಕ್ಕೆ ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಿವಾದವನ್ನು ಇಲ್ಲಿಗೇ ಮುಕ್ತಾಯಗೊಳಿಸುವುದಾಗಿ ಘೋಷಿಸಿರುವ ಪ್ರಜ್ವಲ್ ದೇವರಾಜ್, ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳು ಚಿತ್ರದ ಪರಿಶ್ರಮವನ್ನು ಮರೆಮಾಚಬಾರದು ಎಂದು ಹೇಳಿ, ‘ಕರಾವಳಿ’ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ಅಕ್ಟೋಬರ್ ಅಥವಾ ನವೆಂಬರ್ʼನಲ್ಲಿ ಗ್ರಾಮ ಪಂಚಾಯತ್ ಚುನಾವಣೆ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ರಾಜ್ಯದ ಬಹುತೇಕ ಗ್ರಾಮ ಪಂಚಾಯತ್‌ಗಳ ಆಡಳಿತಾವಧಿ ಪೂರ್ಣಗೊಂಡಿದ್ದು, ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಪಂಚಾಯತ್ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಗ್ರಾಮ ಪಂಚಾಯತ್‌ಗಳು ಮೇಲ್ದರ್ಜೆಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಅಗತ್ಯವಾಗಿದೆ. ಈ ಪ್ರಕ್ರಿಯೆಯನ್ನು ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದೊಳಗೆ ಪೂರ್ಣಗೊಳಿಸಿ, ಮೀಸಲಾತಿ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು. ಬಳಿಕ ಆಯೋಗವು 45 ದಿನಗಳೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲಿದೆ ಎಂದು ಮಾಹಿತಿ ನೀಡಿದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿರುವುದರಿಂದ ಹೆಚ್ಚಿನ ಸರ್ಕಾರಿ ಸಿಬ್ಬಂದಿ ಆ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ ಕಾರಣಕ್ಕೆ ಚುನಾವಣೆಗೆ ಕಾಲಾವಕಾಶ ಕೋರಲಾಗಿದೆ ಎಂದು ತಿಳಿಸಿದರು.

ಪಂಚಾಯತ್ ರಾಜ್ ವ್ಯವಸ್ಥೆಯ ಮಹತ್ವವನ್ನು ವಿವರಿಸಿದ ಅವರು, ಮಹಾತ್ಮ ಗಾಂಧೀಜಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಪ್ರತಿಪಾದಿಸಿದ್ದರು. ಕರ್ನಾಟಕದಲ್ಲಿ 1980ರಲ್ಲಿ ನಜೀರ್ ಸಾಬ್ ಅಧಿಕಾರ ವಿಕೇಂದ್ರೀಕರಣಕ್ಕೆ ನಾಂದಿ ಹಾಡಿದ್ದರು.

ಬಳಿಕ ದಿವಂಗತ ಪ್ರಧಾನಿ ರಾಜೀವ್ ಗಾಂಧಿ 1989ರಲ್ಲಿ 64ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಿದ್ದರು. ನಂತರ 1992ರಲ್ಲಿ 73ನೇ ಸಾಂವಿಧಾನಿಕ ತಿದ್ದುಪಡಿ ಅಂಗೀಕಾರಗೊಂಡು, 1993ರ ಏಪ್ರಿಲ್ 24ರಿಂದ ದೇಶಾದ್ಯಂತ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂತು ಎಂದು ವಿವರಿಸಿದರು.

ಗ್ರಾಮಗಳ ಆಡಳಿತವನ್ನು ಗ್ರಾಮಸ್ಥರೇ ನಿರ್ವಹಿಸುವುದು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲ ಉದ್ದೇಶವಾಗಿದ್ದು, ಸ್ಥಳೀಯ ಆಡಳಿತವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

HDK ಪ್ರಧಾನಿ, ಕೇಂದ್ರ ಜಲ ಶಕ್ತಿ ಸಚಿವರಿಂದ ಮಾಹಿತಿ ಪಡೆದು ನದಿ ಜೋಡಣೆ ಯೋಜನೆ ಬಗ್ಗೆ ಮಾತನಾಡಲಿ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: “ಕುಮಾರಸ್ವಾಮಿ ಅವರು ಮೊದಲು ಪ್ರಧಾನಮಂತ್ರಿ ಹಾಗೂ ಕೇಂದ್ರದ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಿ. ಈ ಯೋಜನೆ ಬಗ್ಗೆ ಮಾಹಿತಿ ಪಡೆದು ನಂತರ ಮಾತನಾಡಲಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿರುಗೇಟು ನೀಡಿದರು.

ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು. ನದಿ ಜೋಡಣೆ ವಿಚಾರ ರಿಯಲ್ ಎಸ್ಟೇಟ್ ವ್ಯವಹಾರವಲ್ಲ, ನೀರಿನ ಪ್ರಮಾಣ ನಿಗದಿಯಾಗಬೇಕು ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಯಾವ ಸಮಯದಲ್ಲಿ ಯಾರಿಗೆ ಉತ್ತರ ಕೊಡಬೇಕೋ ಕೊಡುತ್ತೇನೆ” ಎಂದು ತಿಳಿಸಿದರು.

ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಸಂಕಲ್ಪ

“ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಯುವಕರಲ್ಲಿ ಹಾಗೂ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಎಲ್ಲರೂ ಪೊಲೀಸರಿಗೆ ಸಹಕಾರ ನೀಡಬೇಕು. ಹೀಗಾಗಿ ಪೊಲೀಸ್ ಇಲಾಖೆಯಿಂದ ‘ಬೇಡ ಬ್ರೋ’ ಅಭಿಯಾನ ನಡೆಸುತ್ತಿದೆ” ಎಂದರು.

ಬದ್ರಿನಾಥ ದೇಣಿಗೆ ದುರ್ಬಳಕೆ ಆರೋಪ: ಉನ್ನತ ಮಟ್ಟದ ತನಿಖೆಗೆ ಉತ್ತರಾಖಂಡ ಸರ್ಕಾರ ಆದೇಶ

0

ಡೆಹ್ರಾಡೂನ್: ಬದ್ರಿನಾಥ ದೇವಸ್ಥಾನದಲ್ಲಿ ಭಕ್ತರ ದೇಣಿಗೆ ಹಾಗೂ ಕಾಣಿಕೆಗಳ ದುರ್ಬಳಕೆ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಉನ್ನತ ಮಟ್ಟದ ಮೂರು ಸದಸ್ಯರ ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸಿದೆ.

ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಮಧ್ಯಪ್ರವೇಶಿಸಿದ್ದು, ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ. ಪ್ರಕರಣದ ಸತ್ಯಾಸತ್ಯತೆ ಬಹಿರಂಗಪಡಿಸುವ ಉದ್ದೇಶದಿಂದ ಈ ತನಿಖೆ ನಡೆಸಲಾಗುತ್ತಿದೆ.

ದೇವಾಲಯದ ಹಣಕಾಸು ವಿಭಾಗದಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಬದ್ರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯು ಈಗಾಗಲೇ ಒಬ್ಬ ಹಿರಿಯ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.

ಆರಂಭದಲ್ಲಿ ದೇವಸ್ಥಾನ ಸಮಿತಿಯೇ ನಾಲ್ಕು ಸದಸ್ಯರ ಆಂತರಿಕ ತನಿಖಾ ಸಮಿತಿಯನ್ನು ರಚಿಸಿತ್ತು. ಆದರೆ, ಇದು ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಎಂದು ಭಕ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಪಾರದರ್ಶಕ ತನಿಖೆ ನಡೆಸಲು ಸರ್ಕಾರವೇ ನೇರವಾಗಿ ಸ್ವತಂತ್ರ ಸಮಿತಿಯನ್ನು ನೇಮಿಸಿದೆ.

ತನಿಖಾ ಸಮಿತಿಯು ಕಳೆದ ಕೆಲವು ವರ್ಷಗಳಿಂದ ಭಕ್ತರಿಂದ ನಗದು, ಚಿನ್ನ, ಬೆಳ್ಳಿ ಹಾಗೂ ಆನ್‌ಲೈನ್ ಮೂಲಕ ಬಂದಿರುವ ಎಲ್ಲಾ ದೇಣಿಗೆ ಮತ್ತು ಕಾಣಿಕೆಗಳ ಲೆಕ್ಕಪರಿಶೀಲನೆ ನಡೆಸಲಿದೆ. ದೇವಸ್ಥಾನದ ಬ್ಯಾಂಕ್ ಖಾತೆಗಳು, ರಸೀದಿ ಪುಸ್ತಕಗಳು ಹಾಗೂ ಹಣಕಾಸು ದಾಖಲೆಗಳಲ್ಲಿ ಯಾವುದೇ ತಿರುಚುವಿಕೆ ಅಥವಾ ಅಕ್ರಮ ನಡೆದಿದೆಯೇ ಎಂಬುದನ್ನು ಪರಿಶೀಲಿಸಲಿದೆ.

ಇದರ ಜೊತೆಗೆ, ಭಕ್ತರು ನೀಡಿದ ಹಣವನ್ನು ಧಾರ್ಮಿಕ ಕಾರ್ಯಗಳ ಹೊರತಾಗಿ ವೈಯಕ್ತಿಕ ಅಥವಾ ಅನಧಿಕೃತ ಉದ್ದೇಶಗಳಿಗೆ ಬಳಸಲಾಗಿದೆಯೇ ಎಂಬುದರ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುತ್ತದೆ.

ವಿಶ್ವವಿಖ್ಯಾತ ಬದ್ರಿನಾಥ ಧಾಮದ ಪಾವಿತ್ರ್ಯತೆ ಹಾಗೂ ಭಕ್ತರ ನಂಬಿಕೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ. ತನಿಖಾ ಸಮಿತಿಯು ನಿಗದಿತ ಅವಧಿಯೊಳಗೆ ವರದಿ ಸಲ್ಲಿಸಲಿದ್ದು, ದೇಣಿಗೆ ದುರ್ಬಳಕೆ ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಉತ್ತರಾಖಂಡ ಸರ್ಕಾರ ಸ್ಪಷ್ಟಪಡಿಸಿದೆ.

ಹೆರಿಗೆಯ ಬಳಿಕ ಬಾಣಂತಿ ಸಾವು: ಜೆಸಿ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ, ಪ್ರತಿಭಟನೆ

0

ಶಿವಮೊಗ್ಗ: ಸಹಜ ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವದಿಂದ ಬಾಣಂತಿ ಮೃತಪಟ್ಟ ಪ್ರಕರಣ ತೀರ್ಥಹಳ್ಳಿಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದಲೇ ಯುವತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು ಜೆಸಿ ತಾಲೂಕು ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಹೊಸನಗರ ತಾಲೂಕಿನ ಶಾಖವಳ್ಳಿ ಗ್ರಾಮದ ಸುಮಾ (27) ಜುಲೈ 1ರಂದು ಆಸ್ಪತ್ರೆಗೆ ದಾಖಲಾಗಿದ್ದು, ಎರಡು ದಿನಗಳ ಬಳಿಕ ಸಹಜ ಹೆರಿಗೆ ನಡೆಸಲಾಗಿತ್ತು. ಹೆರಿಗೆಯ ನಂತರ ರಕ್ತಸ್ರಾವ ಹೆಚ್ಚಾಗಿ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಮೊದಲು ಮೆಗ್ಗಾನ್ ಆಸ್ಪತ್ರೆಗೆ, ನಂತರ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಮಾ ಮೃತಪಟ್ಟಿದ್ದಾರೆ. ನವಜಾತ ಶಿಶು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಪ್ರಕರಣದಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅರಗ ಜ್ಞಾನೇಂದ್ರ, ಪ್ರಕರಣದ ಸಮಗ್ರ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ತುಟಿಗೆ ಹೊಲಿಗೆ ಹಾಕಲು ಅರಿವಳಿಕೆ: 18 ತಿಂಗಳ ಮಗು ಸಾವು, ವೈದ್ಯರ ವಿರುದ್ಧ ಕೇಸ್

0

ತಿರುವನಂತಪುರಂ: ಕೆಳತುಟಿಯ ಸಣ್ಣ ಗಾಯಕ್ಕೆ ಹೊಲಿಗೆ ಹಾಕುವ ವೇಳೆ ಅರಿವಳಿಕೆ ನೀಡಿದ ಬಳಿಕ 18 ತಿಂಗಳ ಗಂಡು ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ವೈದ್ಯಕೀಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಅರಿವಳಿಕೆ ತಜ್ಞರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೃತ ಮಗುವನ್ನು ದೇವನ್ಶ್ ಶೌರ್ಯ (18 ತಿಂಗಳು) ಎಂದು ಗುರುತಿಸಲಾಗಿದೆ. ಇರಾಮಮ್-ಕುಟ್ಟೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇರಂಗಲ್ ನಿವಾಸಿಗಳಾದ ಟಿ. ಸೂರಜ್ ಹಾಗೂ ವಿಜಿಶಾ ದಂಪತಿಯ ಏಕೈಕ ಪುತ್ರನಾಗಿದ್ದ ದೇವನ್ಶ್, ಮದುವೆಯಾದ ಎಂಟು ವರ್ಷಗಳ ಬಳಿಕ ಜನಿಸಿದ್ದ ಮಗು ಎಂದು ತಿಳಿದುಬಂದಿದೆ.

ಜುಲೈ 5ರಂದು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಬಿದ್ದು ದೇವನ್ಶ್‌ನ ಕೆಳತುಟಿಗೆ ಗಾಯವಾಗಿತ್ತು. ಬಳಿಕ ಪೋಷಕರು ಪಯ್ಯನ್ನೂರಿನ ಬೇಬಿ ಮೆಮೋರಿಯಲ್ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಗಾಯಕ್ಕೆ ಹೊಲಿಗೆ ಹಾಕಲು ವೈದ್ಯರು ಅರಿವಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಮಗು ಪ್ರಜ್ಞೆ ಕಳೆದುಕೊಂಡಿತ್ತು.

ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನ ಮತ್ತೊಂದು ಆಸ್ಪತ್ರೆ ಘಟಕಕ್ಕೆ ದಾಖಲಿಸಲಾಗಿತ್ತು. ಐದು ದಿನಗಳ ಕಾಲ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಿದರೂ ಶುಕ್ರವಾರ ರಾತ್ರಿ ಮಗು ಮೃತಪಟ್ಟಿದೆ.

ಮಗುವಿಗೆ ಅರಿವಳಿಕೆಯ ಅತಿಯಾದ ಡೋಸ್ ನೀಡಿದ್ದರಿಂದ ಮೆದುಳು ಹಾನಿಗೊಳಗಾಗಿ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಪಯ್ಯನ್ನೂರು ಪೊಲೀಸರು ಅರಿವಳಿಕೆ ತಜ್ಞೆ ಡಾ. ಅಂಜಲಿ ಪೊದುವಾಳ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆದರೆ ವೈದ್ಯಕೀಯ ನಿರ್ಲಕ್ಷ್ಯದ ಆರೋಪವನ್ನು ಆಸ್ಪತ್ರೆ ತಳ್ಳಿಹಾಕಿದೆ. ಅರಿವಳಿಕೆ ನೀಡಿದ ಬಳಿಕ ಮಗುವಿಗೆ ಅನಿರೀಕ್ಷಿತ ಹೃದಯ ಸ್ತಂಭನ ಉಂಟಾಗಿದ್ದು, ಎಲ್ಲಾ ವೈದ್ಯಕೀಯ ಪ್ರೋಟೋಕಾಲ್‌ಗಳನ್ನು ಪಾಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.

ಘಟನೆಯ ಬಳಿಕ ಆಸ್ಪತ್ರೆ ಎದುರು ಡಿವೈಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಸಂಬಂಧಿತ ವೈದ್ಯರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.