Home Blog Page 52

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಮುಂದಿನ ಎರಡು ತಿಂಗಳಲ್ಲಿ 2023-24 ಮತ್ತು 2024-25ನೇ ಉದ್ಯೋಗಿನಿ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬಜೆಟ್‌ ಅಧಿವೇಶನದ ವಿಧಾನಸಭೆಯ ಕಲಾಪದಲ್ಲಿ ಬುಧವಾರ ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆ ಆಗುವುದು ವಿಳಂಬವಾಗಿದ್ದರಿಂದ ಸಹಾಯಧನ ಪಾವತಿಗೆ ತಡವಾಗಿದೆ. ಈ ಸಂಬಂಧ ಸಮಿತಿ ಸಭೆಗಳನ್ನು ತುರ್ತಾಗಿ ನಡೆಸಿ,‌ ಶಾಸಕರನ್ನು ಖುದ್ದಾಗಿ ಭೇಟಿ ಮಾಡಿ ಆಯ್ಕೆ ಸಮಿತಿ ಸಭೆಯನ್ನು ನಡೆಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.‌

ಈ ವರ್ಷದ ಉದ್ಯೋಗಿನಿ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿರುವುದೇ ಮಹಿಳಾ ಸಬಲೀಕರಣಕ್ಕಾಗಿ. ಜೊತೆಗೆ ಗೃಹಲಕ್ಷ್ಮೀ, ಶಕ್ತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.‌

ಉದ್ಯೋಗಿ‌ನಿ ಯೋಜನೆಯ ಸಹಾಯಧನ ತಲುಪಲು ಬ್ಯಾಂಕ್‌ಗಳು ಕೂಡ ಸರಿಯಾಗಿ ಸಹಕರಿಸುತ್ತಿಲ್ಲ. ಶಾಸಕರು ಆಯ್ಕೆ ಮಾಡಿದ ಫಲಾನುಭವಿಗಳಲ್ಲಿ ಸಿಬಿಲ್‌ ಸ್ಕೋರ್‌ ಆಧಾರದ ಮೇಲೆ ಬ್ಯಾಂಕ್‌ಗಳೂ ಫಲಾನುಭವಿಗಳನ್ನು ಆಯ್ಕೆ ಮಾಡಲು ವಿಳಂಬ ಮಾಡುತ್ತಿವೆ.‌ ಈ ಕುರಿತು ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಬ್ಯಾಂಕ್ಸ್ (SLBC) ಕಮಿಟಿಯಲ್ಲಿ ಈ ಸಂಬಂಧ ಸಾಲ ಮಂಜೂರಾತಿಯನ್ನು ತುರ್ತಾಗಿ ಕ್ರಮವಹಿಸಲು ತಿಳಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ನೀಡಿದರು.

ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ: ತಂಡದಿಂದ 8 ಆಟಗಾರರು ಔಟ್!

0

ಟಿ20 ವಿಶ್ವಕಪ್ ಫೈನಲ್ ಸೋಲಿನ ಬಳಿಕ ನ್ಯೂಜಿಲೆಂಡ್ ತಂಡ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ. ಈ ಸರಣಿಗಾಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿದ್ದು, ವಿಶ್ವಕಪ್ ತಂಡದ ಹಲವು ಪ್ರಮುಖ ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ.

ವಿಶ್ವಕಪ್‌ನಲ್ಲಿ ಆಡಿದ್ದ ಎಂಟು ಪ್ರಮುಖ ಆಟಗಾರರು ಈ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಗಮನಾರ್ಹವಾಗಿದೆ. ಜೊತೆಗೆ ಕೆಲವು ಹೊಸ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಈ ಸರಣಿಗೆ ಮಿಚೆಲ್ ಸ್ಯಾಂಟ್ನರ್ ತಂಡದ ನಾಯಕನಾಗಿದ್ದು, ಅವರು ಮೂರು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಉಳಿದ ಎರಡು ಪಂದ್ಯಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲ್ಯಾಥಮ್ ತಂಡವನ್ನು ಮುನ್ನಡೆಸಲಿದ್ದಾರೆ.

ನ್ಯೂಝಿಲೆಂಡ್ ಟಿ20 ತಂಡ:
ಮಿಚೆಲ್ ಸ್ಯಾಂಟ್ನರ್ (ನಾಯಕ), ಕ್ಯಾಟೀನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೇನ್ ಕ್ಲೀವರ್ (ವಿಕೆಟ್ ಕೀಪರ್), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಲಾಕಿ ಫರ್ಗುಸನ್, ಜ್ಯಾಕ್ ಫೌಲ್ಕ್ಸ್, ಬೆವೊನ್ ಜೇಕಬ್ಸ್, ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಜೇಡೆನ್ ಲೆನಾಕ್ಸ್, ಕೋಲ್ ಮೆಕ್‌ಕೊನಿ, ಜಿಮ್ಮಿ ನೀಶಮ್, ಟಿಮ್ ರಾಬಿನ್ಸನ್, ಬೆನ್ ಸಿಯರ್ಸ್, ನಾಥನ್ ಸ್ಮಿತ್, ಇಶ್ ಸೋಧಿ.

ಅಲಭ್ಯ ಆಟಗಾರರು:
ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಟಿಮ್ ಸೈಫರ್ಟ್, ಜೇಕಬ್ ಡಫಿ ಹಾಗೂ ಮ್ಯಾಟ್ ಹೆನ್ರಿ.

5 ಪಂದ್ಯಗಳ ಸರಣಿ:
ನ್ಯೂಜಿಲೆಂಡ್ ಮತ್ತು ಸೌತ್ ಆಫ್ರಿಕಾ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಈ ಸರಣಿ ಮಾರ್ಚ್ 15ರಿಂದ ಆರಂಭವಾಗಲಿದ್ದು, ಕೊನೆಯ ಪಂದ್ಯ ಮಾರ್ಚ್ 25ರಂದು ನಡೆಯಲಿದೆ.

ರೈತರ ಸಬಲೀಕರಣಕ್ಕೆ PM-KUSUM 2.0: ಕೇಂದ್ರ ಸರ್ಕಾರದ ಹೊಸ ಯೋಜನೆ

0

ನವದೆಹಲಿ: ಸೌರ ವಿದ್ಯುತ್ ಮೂಲಕ ರೈತರ ಸಬಲೀಕರಣಕ್ಕಾಗಿ ಕೃಷಿ ಪಿವಿ (Agrivoltaic) ಯೋಜನೆಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ PM-KUSUM 2.0 ಯೋಜನೆಯನ್ನು ಸಿದ್ಧಪಡಿಸುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ದೆಹಲಿ‌ನಲ್ಲಿ ನಡೆದ 4ನೇ ರಾಷ್ಟ್ರೀಯ ಕೃಷಿ-ಪರಿಸರ ತಂತ್ರಜ್ಞಾನ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಯಡಿ 10 ಗಿಗಾವಾಟ್ (GW) ಕೃಷಿ ಪಿವಿ ಘಟಕಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಹೇಳಿದರು.

ಈ ಯೋಜನೆಯ ಮೂಲಕ ರೈತರು ಒಂದೇ ಭೂಮಿಯಲ್ಲಿ ಬೆಳೆ ಬೆಳೆಸುವ ಜೊತೆಗೆ ವಿದ್ಯುತ್ ಉತ್ಪಾದಿಸಲು ಅವಕಾಶ ಸಿಗಲಿದೆ. “PM-KUSUM 2.0” ಗ್ರಾಮೀಣ ಭಾರತದಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೊಸ ಮಾದರಿ ಸೃಷ್ಟಿಸಲಿದೆ. ಇದರಿಂದ ಗ್ರಾಮೀಣ ಆರ್ಥಿಕತೆ ಉತ್ತೇಜನ ಪಡೆಯುವ ಜೊತೆಗೆ ರೈತರ ಆದಾಯ ಹೆಚ್ಚಲು ಸಹಾಯವಾಗಲಿದೆ ಎಂದು ಅವರು ತಿಳಿಸಿದರು.

PM-KUSUM ಯೋಜನೆಯಡಿ ಈಗಾಗಲೇ ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಸೌರ ಕೃಷಿ ಪಂಪ್‌ಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ 13 ಲಕ್ಷಕ್ಕೂ ಹೆಚ್ಚು ಗ್ರಿಡ್ ಸಂಪರ್ಕಿತ ಕೃಷಿ ಪಂಪ್‌ಗಳನ್ನು ಸೌರೀಕರಣಗೊಳಿಸಲಾಗಿದೆ.

ಈ ಮೂಲಕ ರೈತರು ಇಂದು ಕೇವಲ “ಅನ್ನದಾತ” ಮಾತ್ರವಲ್ಲದೆ “ಉರ್ಜದಾತ” (ಇಂಧನ ಪೂರೈಕೆದಾರರು) ಆಗುವ ಅವಕಾಶವನ್ನು ಪಡೆಯುತ್ತಿದ್ದಾರೆ ಎಂದು ಜೋಶಿ ಹೇಳಿದರು.

ನವೀಕರಿಸಬಹುದಾದ ಇಂಧನ ಬಳಕೆ ಕೃಷಿ ಭೂಮಿ ಮತ್ತು ಮನೆಗಳಿಗೆ ಹೆಚ್ಚಾಗಿ ತಲುಪುತ್ತಿದ್ದು, ನೀರಾವರಿ ವೆಚ್ಚವನ್ನು ಕಡಿಮೆ ಮಾಡುವ ಜೊತೆಗೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಜೊತೆಗೆ ರೈತರಿಗೆ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ದೊರಕಲು ಸಹಾಯ ಮಾಡುತ್ತಿದೆ ಎಂದು ಹೇಳಿದರು.

ಕೃಷಿಯಲ್ಲಿ ಸೌರಶಕ್ತಿ ಬಳಕೆ ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ ಕೃಷಿ ವೆಚ್ಚವನ್ನು ಕೂಡ ಇಳಿಸುತ್ತದೆ. ಡೀಸೆಲ್ ಬಳಸಿ ನೀರಾವರಿ ಮಾಡಿದರೆ ಗೋಧಿಗೆ ಎಕರೆಗೆ ಸುಮಾರು ₹6,790 ಹಾಗೂ ಹತ್ತಿಯಂತಹ ಬೆಳೆಗಳಿಗೆ ₹8,000ಕ್ಕಿಂತ ಹೆಚ್ಚು ವೆಚ್ಚವಾಗಬಹುದು. ಆದರೆ ಸೌರ ಪಂಪ್ ಬಳಕೆ ಮಾಡಿದರೆ ಎಕರೆಗೆ ₹5,000ರಿಂದ ₹6,500ರವರೆಗೆ ಉಳಿತಾಯ ಸಾಧ್ಯವಾಗುತ್ತದೆ. ಜೊತೆಗೆ ಕಾರ್ಬನ್ ಹೊರಸೂಸುವಿಕೆ ಕಡಿಮೆಯಾಗುತ್ತದೆ ಎಂದು ಹೇಳಿದರು.

13 ವರ್ಷಗಳಿಂದ ಕೋಮಾದಲ್ಲಿದ್ದ ವ್ಯಕ್ತಿಗೆ ದಯಾಮರಣಕ್ಕೆ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ!

0

ನವದೆಹಲಿ: ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದ 31 ವರ್ಷದ ವ್ಯಕ್ತಿಗೆ ದಯಾಮರಣ ನೀಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಈ ಮೂಲಕ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ರೋಗಿಯ ಆರೋಗ್ಯ ಸ್ಥಿತಿಯ ಕುರಿತು ಎರಡು ವೈದ್ಯಕೀಯ ಮಂಡಳಿಗಳ ಅಭಿಪ್ರಾಯಗಳನ್ನು ಪರಿಗಣಿಸಿದ ಬಳಿಕ ನ್ಯಾಯಾಲಯ ಈ ತೀರ್ಪು ನೀಡಿದೆ. ನ್ಯಾಯಾಲಯದ ಮಾರ್ಗಸೂಚಿಗಳ ಅಡಿಯಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿದ ಮೊದಲ ಪ್ರಕರಣ ಇದಾಗಿದೆ.

ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ 2013ರಲ್ಲಿ ಪೇಯಿಂಗ್ ಗೆಸ್ಟ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ  ಕೋಮಾಗೆ ಜಾರಿದ್ದರು. ಹರೀಶ್ ರಾಣಾ ಪೋಷಕರು ಮಗನಿಗೆ ದಯಾಮರಣ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಪ್ರಕರಣವನ್ನು ವಿಚಾರಣೆ ನಡೆಸಿ, ದಯಾಮರಣ ಕುರಿತಂತೆ ಸ್ಪಷ್ಟ ಕಾನೂನು ತರಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಪ್ರಾಥಮಿಕ ಮತ್ತು ದ್ವಿತೀಯ ವೈದ್ಯಕೀಯ ಮಂಡಳಿಗಳು ರೋಗಿಯ ಜೀವ ಬೆಂಬಲವನ್ನು ಹಿಂತೆಗೆದುಕೊಳ್ಳಲು ಅನುಮತಿ ನೀಡಿದ ಬಳಿಕ ನ್ಯಾಯಾಂಗ ಹಸ್ತಕ್ಷೇಪ ಸಾಮಾನ್ಯವಾಗಿ ಅಗತ್ಯವಿರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಜೊತೆಗೆ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರಗಳ ಕುರಿತು ವೈದ್ಯಕೀಯ ಮಂಡಳಿಗಳಿಂದ ಸಲಹೆ ಪಡೆಯುವಂತೆ ಹೈಕೋರ್ಟ್‌ಗಳಿಗೆ ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ:
ಚಂಡೀಗಢದಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದ ಹರೀಶ್ ರಾಣಾ ನಾಲ್ಕನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಕೋಮಾಗೆ ಜಾರಿದ್ದರು.

ಅವರಿಗೆ ಪಿಜಿಐ ಚಂಡೀಗಢ, ದೆಹಲಿಯ ಏಮ್ಸ್, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ, ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆ ಹಾಗೂ ಫೋರ್ಟಿಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಯಾವುದೇ ಸುಧಾರಣೆ ಕಂಡುಬರಲಿಲ್ಲ. ದೀರ್ಘಕಾಲದ ಚಿಕಿತ್ಸೆ ಕುಟುಂಬಕ್ಕೆ ಭಾರವಾಗಿದ್ದ ಕಾರಣ ಹರೀಶ್ ರಾಣಾ ಕುಟುಂಬವು ದಯಾಮರಣ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಕೇರಳಕ್ಕೆ ಇಂದು ಪ್ರಧಾನಿ ಮೋದಿ ಭೇಟಿ: ಕಾರ್ಯಕ್ರಮದಿಂದ ದೂರವಿರಲು ಸಿಎಂ, ಸಚಿವರ ನಿರ್ಧಾರ

0

ಕೇರಳ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ಈ ಅಧಿಕೃತ ಕಾರ್ಯಕ್ರಮದಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೆಲವು ಸಚಿವರು ದೂರವಿರಲು ನಿರ್ಧರಿಸಿದ್ದಾರೆ.

ಕೇರಳದ ಲೋಕೋಪಯೋಗಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಅವರನ್ನು ಕಾರ್ಯಕ್ರಮದಿಂದ ಹೊರಗಿಟ್ಟ ಆರೋಪದ ಹಿನ್ನೆಲೆಯಲ್ಲಿ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಷಟ್ಪಥ ವಿಸ್ತರಣೆಯ ಮೊದಲ ಹಂತ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಮೋದಿ ಮಧ್ಯಾಹ್ನ 12.30ಕ್ಕೆ ಉದ್ಘಾಟಿಸಲಿದ್ದಾರೆ. ತಲಪ್ಪಾಡಿ–ಚೆಂಗಲ ಮಾರ್ಗ ಹಾಗೂ ಕೋಯಿಕ್ಕೋಡ್ ಬೈಪಾಸ್‌ನ ವೆಂಗಲಂ–ರಾಮನಟ್ಟುಕರ ಮಾರ್ಗಗಳನ್ನು ಆರು ಪಥಗಳಿಗೆ ಉನ್ನತೀಕರಿಸಲಾಗಿದ್ದು, ಅದರ ಉದ್ಘಾಟನೆ ನಡೆಯಲಿದೆ.

ಈ ಅಧಿಕೃತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವುದಿಲ್ಲ. ಕಾರ್ಯಕ್ರಮದ ಅಧಿಕೃತ ಪಟ್ಟಿಯಲ್ಲಿ ಸಿಎಂ ಹೆಸರಿದ್ದರೂ ಅವರು ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಆದರೆ ಈ ಕುರಿತು ಯಾವುದೇ ನಿರ್ದಿಷ್ಟ ಕಾರಣವನ್ನು ಪ್ರಕಟಿಸಲಾಗಿಲ್ಲ.

ಪ್ರಧಾನಿ ಕಾರ್ಯಕ್ರಮಕ್ಕೆ ರಾಜ್ಯ ಸಚಿವರಾದ ಎಂ.ಬಿ. ರಾಜೇಶ್ ಮತ್ತು ಕೆ. ಕೃಷ್ಣಕುಟ್ಟಿ ಅವರಿಗೆ ಆಹ್ವಾನ ನೀಡಲಾಗಿದ್ದರೂ, ಅವರು ವೈಯಕ್ತಿಕ ಕಾರಣಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್, ಈ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ನೀಡಲಾಗಿಲ್ಲ ಎಂದು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಭೂ ಸ್ವಾಧೀನ ಮತ್ತು ನಿಧಿ ಹಂಚಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ.

ಹೆದ್ದಾರಿ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವರನ್ನು ಆಹ್ವಾನಿಸದ ಕಾರಣದಿಂದ ಈ ವಿವಾದ ಭುಗಿಲೆದ್ದಿದ್ದು, ಅದರ ಹಿನ್ನೆಲೆ ಸಿಎಂ ಹಾಗೂ ಕೆಲ ಸಚಿವರು ಕಾರ್ಯಕ್ರಮದಿಂದ ದೂರವಿರುವ ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇರಾನ್–ಇಸ್ರೇಲ್ ಸಂಘರ್ಷ: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ! ಇಂದಿನ ದರ ಹೀಗಿದೆ

ಬೆಂಗಳೂರು: ಇರಾನ್–ಇಸ್ರೇಲ್ ಹಾಗೂ ಅಮೆರಿಕ ನಡುವಿನ ಸಂಘರ್ಷದ ಹಿನ್ನೆಲೆ ಸುರಕ್ಷಿತ ಹೂಡಿಕೆಯಾಗಿ ಚಿನ್ನ ಹಾಗೂ ಬೆಳ್ಳಿಯತ್ತ ಬೇಡಿಕೆ ಹೆಚ್ಚಾಗಿರುವುದರಿಂದ ಚಿನ್ನದ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಮಾರ್ಚ್ 11, 2026 ಬುಧವಾರದಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ದರದಲ್ಲಿ ₹930 ಏರಿಕೆ ಕಂಡು ₹1,63,310ಕ್ಕೆ ತಲುಪಿದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ₹93 ಏರಿಕೆಯಾಗಿದ್ದು ₹16,331ಕ್ಕೆ ದಾಖಲಾಗಿದೆ.

ಇನ್ನೊಂದೆಡೆ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹85 ಏರಿಕೆ ಕಂಡು ₹14,970ಕ್ಕೆ ಏರಿಕೆಯಾಗಿದೆ. ಅದರಂತೆ 10 ಗ್ರಾಂ ಚಿನ್ನದ ದರ ₹1,49,700ಕ್ಕೆ ತಲುಪಿದೆ.

ಬೆಳ್ಳಿ ಬೆಲೆ ಇಂದು ತಟಸ್ಥವಾಗಿದ್ದು, ಕೆಜಿಗೆ ₹2,90,000 ದರ ಮುಂದುವರಿದಿದೆ. ಇರಾನ್–ಅಮೆರಿಕ ಸಂಘರ್ಷ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದ ಏರಿಳಿತದ ಹಿನ್ನೆಲೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಚಲನವಲನ ಕಾಣಿಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ: 600 ವರ್ಷ ಹಳೆಯ ದೇವಾಲಯ ಆಭರಣಗಳಿಗೆ 8 ಕೋಟಿ ಮೌಲ್ಯ!

0

ಗದಗ: ಲಕ್ಕುಂಡಿ ಗ್ರಾಮದಲ್ಲಿ ಈ ವರ್ಷದ ಜನವರಿ 10ರಂದು ಪತ್ತೆಯಾದ ಚಿನ್ನದ ನಿಧಿ ಇದೀಗ ಐತಿಹಾಸಿಕ ಸಂಶೋಧಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಗದಗ ಜಿಲ್ಲೆಯ ರಿತ್ತಿ ಕುಟುಂಬದ ಮನೆಯ ಪಾಯ ತೋಡುವ ವೇಳೆ ಸಿಕ್ಕಿದ್ದ ಈ ಆಭರಣಗಳು ಕೇವಲ ಚಿನ್ನದ ಸಂಗ್ರಹವಲ್ಲದೆ, ದಕ್ಷಿಣ ಭಾರತದ ಮಧ್ಯಯುಗದ ಸಂಸ್ಕೃತಿ ಮತ್ತು ಕಲೆಯ ಅಮೂಲ್ಯ ಸಾಕ್ಷಿಗಳಾಗಿವೆ ಎಂದು ಪುರಾತತ್ವ ತಜ್ಞರು ತಿಳಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ನಡೆದ ಪರಿಶೀಲನೆಯಲ್ಲಿ ತಜ್ಞರ ಸಮಿತಿ ಈ ಆಭರಣಗಳ ಮೂಲ ಹಾಗೂ ಮಹತ್ವವನ್ನು ವಿವರಿಸಿದೆ. ಸುಮಾರು 500ರಿಂದ 600 ವರ್ಷಗಳಷ್ಟು ಹಳೆಯದಾದ ಈ ಒಡವೆಗಳು ಕಲ್ಯಾಣ ಚಾಲುಕ್ಯರು ಮತ್ತು ವಿಜಯನಗರ ಸಾಮ್ರಾಜ್ಯ ಕಾಲಘಟ್ಟದ ಕಲಾತ್ಮಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ.

ಈ ಆಭರಣಗಳು ಸಾಮಾನ್ಯ ಬಳಕೆಗೆ ಸಂಬಂಧಿಸಿದವುಗಳಲ್ಲದೆ ದೇವಾಲಯಗಳಲ್ಲಿ ದೇವತೆಗಳಿಗೆ ಅಲಂಕರಿಸುವ ವಿಶೇಷ ಒಡವೆಗಳಾಗಿವೆ ಎಂದು ತಜ್ಞರು ತಿಳಿಸಿದ್ದಾರೆ. ಈ ಸಂಗ್ರಹದಲ್ಲಿ ಹೆಣ್ಣು ದೇವರ ಮೂರ್ತಿಯೂ ಪತ್ತೆಯಾಗಿದ್ದು, ಅವುಗಳ ಧಾರ್ಮಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ಒಟ್ಟು 465 ಗ್ರಾಂ ತೂಕದ ಈ ಆಭರಣಗಳಲ್ಲಿ ಚಿನ್ನದ ಜೊತೆಗೆ ನೀಲಮಣಿ, ಸ್ಪಟಿಕ ಹಾಗೂ ಹವಳದಂತಹ ಅಮೂಲ್ಯ ರತ್ನಗಳನ್ನು ಬಳಸಲಾಗಿದೆ. ಇಂದಿನ ಮಾರುಕಟ್ಟೆ ದರದ ಪ್ರಕಾರ ಚಿನ್ನದ ಮೌಲ್ಯ ಸುಮಾರು 35–40 ಲಕ್ಷ ರೂಪಾಯಿ ಇದ್ದರೂ, ಇದರ ಪ್ರಾಚೀನ ಹಾಗೂ ಕಲಾತ್ಮಕ ಮೌಲ್ಯ ಸುಮಾರು 8 ಕೋಟಿ ರೂಪಾಯಿವರೆಗೆ ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಸಮಿತಿ ಅಧ್ಯಕ್ಷ ಎಂ.ಎಸ್. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಕಲಾ ಇತಿಹಾಸಗಾರ ರಾಘವೇಂದ್ರ ಕುಲಕರ್ಣಿ, ಪ್ರೊ. ಚೂಡಾಮಣಿ ನಂದಗೋಪಾಲ, ಶಾಸನ ತಜ್ಞ ಹನುಮಾಪಕ್ಷಿ ಗೋಗಿ, ರತ್ನಶಾಸ್ತ್ರಜ್ಞ ಪ್ರಭು ಕಮ್ಮಾರ ಹಾಗೂ ಡಾ. ಶೇಜೇಶ್ವರ ಸೇರಿದ್ದ ತಜ್ಞರ ತಂಡ ಹಲವು ಗಂಟೆಗಳ ಕಾಲ ಸೂಕ್ಷ್ಮ ಪರಿಶೀಲನೆ ನಡೆಸಿದೆ. ಈ ಪತ್ತೆ ಲಕ್ಕುಂಡಿಯ ಪುರಾತನ ಪರಂಪರೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿರುವ ಮಹತ್ವದ ಘಟನೆ ಎಂದು ವಿಶ್ಲೇಷಿಸಲಾಗಿದೆ.

ಮಹಿಳಾ ಉದ್ಯೋಗಿಗಳಿಗೆ ‘ಕಮ್ ಅರ್ಲಿ-ಗೋ ಅರ್ಲಿ’ ಯೋಜನೆ: ಮಹಾರಾಷ್ಟ್ರ ಸರ್ಕಾರದ ಹೊಸ ಘೋಷಣೆ

0

ಮುಂಬೈ: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಾರಾಷ್ಟ್ರ ಸರ್ಕಾರ ಮಹಿಳಾ ಉದ್ಯೋಗಿಗಳಿಗಾಗಿ ‘ಕಮ್ ಅರ್ಲಿ-ಗೋ ಅರ್ಲಿ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮುಂಬೈ ಮಹಾನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸರ್ಕಾರಿ ನೌಕರರಿಗೆ ಈ ಯೋಜನೆ ಅನ್ವಯವಾಗಲಿದೆ.

ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಮಹಿಳಾ ಸಬಲೀಕರಣ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಈ ಯೋಜನೆಯನ್ನು ಘೋಷಿಸಿದರು. ಮುಂಬೈನ ಸ್ಥಳೀಯ ರೈಲುಗಳು ಮತ್ತು ರಸ್ತೆಗಳಲ್ಲಿ ಇರುವ ಜನದಟ್ಟಣೆ ಹಾಗೂ ಪ್ರಯಾಣದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

‘ಕಮ್ ಅರ್ಲಿ-ಗೋ ಅರ್ಲಿ’ ಯೋಜನೆಯಡಿ ಮಹಿಳಾ ಉದ್ಯೋಗಿಗಳು ಬೆಳಗ್ಗೆ 9.15 ರಿಂದ 9.45ರ ನಡುವೆ ಕಚೇರಿಗೆ ಹಾಜರಾಗಬಹುದು. ಜೊತೆಗೆ ಸಂಜೆ ಕಚೇರಿಯಿಂದ ಸುಮಾರು 30 ನಿಮಿಷಗಳಷ್ಟು ಮುಂಚಿತವಾಗಿ ಮನೆಗೆ ತೆರಳುವ ಅವಕಾಶವೂ ನೀಡಲಾಗಿದೆ. ಇದರಿಂದ ಮಹಿಳೆಯರ ಪ್ರಯಾಣದ ಒತ್ತಡ ಕಡಿಮೆಯಾಗುವುದರ ಜೊತೆಗೆ ಕೆಲಸ ಮತ್ತು ಕುಟುಂಬದ ನಡುವಿನ ಸಮತೋಲನ ಸಾಧಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಇದೇ ವೇಳೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ ಎಂದು ಸುನೇತ್ರಾ ಪವಾರ್ ಹೇಳಿದರು. ಜುಲೈ 2015 ರಿಂದ ಫೆಬ್ರವರಿ 2026ರವರೆಗೆ ನಡೆಸಿದ ‘ಆಪರೇಷನ್ ಮುಸ್ಕಾನ್’ ಕಾರ್ಯಾಚರಣೆಯ 14 ಹಂತಗಳಲ್ಲಿ 42,594 ಮಕ್ಕಳು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಹಾಗೇ ‘ಆಪರೇಷನ್ ಸರ್ಚ್’ ಮೂಲಕ 5,066 ಮಹಿಳೆಯರು ಮತ್ತು 2,771 ಮಕ್ಕಳನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಸೇರಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾಣೆಯಾದವರ ಕೋಶಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, 51 ಭರೋಸಾ ಕೋಶಗಳು ಮಹಿಳೆಯರ ದೂರುಗಳನ್ನು ಪರಿಹರಿಸುತ್ತಿವೆ.

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಲಡ್ಕಿ ಬೆಹೆನ್, ನಮೋ ಮಹಿಳಾ ಸಾಕ್ಷರತಾ ಮತ್ತು ಅನ್ನಪೂರ್ಣ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸ್ವಸಹಾಯ ಗುಂಪುಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ‘ಉಮೈದ್ ಮಾಲ್’ ಮತ್ತು ಆನ್‌ಲೈನ್ ವೇದಿಕೆಗಳನ್ನು ಆರಂಭಿಸಲಾಗಿದೆ.

ಇದಲ್ಲದೆ, ರಾಜ್ಯದ 17,254 ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಆಧುನಿಕ ತಂತ್ರಜ್ಞಾನ ಬಳಕೆಯನ್ನು ವಿಸ್ತರಿಸಲಾಗುತ್ತಿದ್ದು, ಸೈಬರ್ ಅಪರಾಧ ತಡೆಗಟ್ಟಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಚರ್ಚ್‌ಗೇಟ್ ಮತ್ತು ಬೋರಿವಲಿ ರೈಲು ನಿಲ್ದಾಣಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ.

ಮಹಿಳಾ ಉದ್ಯೋಗಿಗಳಿಗೆ 180 ದಿನಗಳ ಹೆರಿಗೆ ರಜೆ ನೀಡುವುದರ ಜೊತೆಗೆ ಅಗತ್ಯವಿದ್ದರೆ ಒಂದು ವರ್ಷದ ಅರ್ಧ ವೇತನ ರಜೆ ಪಡೆಯುವ ಅವಕಾಶವೂ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ತಡೆಗಟ್ಟಲು ಮತ್ತು ಶಾಲೆ ಬಿಟ್ಟ ಹುಡುಗಿಯರ ಸಂಖ್ಯೆಯನ್ನು ಕಡಿಮೆ ಮಾಡಲು ‘ಆದಿ ಶಕ್ತಿ ಅಭಿಯಾನ’ವನ್ನು ಜಾರಿಗೆ ತರಲಾಗುತ್ತಿದೆ.

ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸ್ವಸಹಾಯ ಗುಂಪುಗಳ ಬಲಪಡಿಕೆ, ಮಹಿಳಾ ರೈತರು ಮತ್ತು ಕಾರ್ಮಿಕರಿಗೆ ವಿಶೇಷ ಯೋಜನೆಗಳು ಹಾಗೂ ಸುರಕ್ಷತೆಗೆ ಕಠಿಣ ಕಾನೂನುಗಳ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಸುನೇತ್ರಾ ಪವಾರ್ ತಿಳಿಸಿದ್ದಾರೆ.

ಇರಾನ್-ಇಸ್ರೇಲ್ ಸಂಘರ್ಷ: ಗ್ಯಾಸ್ ದರ ಏರಿಕೆಯಿಂದ ಹಾವೇರಿಯಲ್ಲಿ ಆಟೋ ಚಾಲಕರು ಕಂಗಾಲು!

ಹಾವೇರಿ: ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ 12ನೇ ದಿನಕ್ಕೂ ಮುಂದುವರಿದಿದ್ದು, ಯುದ್ಧದ ಪರಿಣಾಮ ಹಲವು ದೇಶಗಳಿಗೆ ತಟ್ಟಿದೆ. ಆರಂಭದಲ್ಲಿ ಮೂರು ರಾಷ್ಟ್ರಗಳಿಗೆ ಸೀಮಿತವಾಗಿದ್ದ ಈ ಸಂಘರ್ಷ ನಂತರ ನೆರೆಹೊರೆಯ ದೇಶಗಳಿಗೂ ವಿಸ್ತರಿಸಿದೆ.

ಯುದ್ಧದ ಪರಿಣಾಮ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಜೊತೆಗೆ ಮಿಲಿಯನ್ ಗಟ್ಟಲೆ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಬೆಳವಣಿಗೆಗಳಿಂದಾಗಿ ಹಲವು ರಾಷ್ಟ್ರಗಳು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿವೆ.

ಇದರ ಪರಿಣಾಮವಾಗಿ ಎಲ್‌ಪಿಜಿ ಗ್ಯಾಸ್ ಹಾಗೂ ತೈಲ ದರಗಳಲ್ಲಿ ಏರಿಕೆ ಕಾಣಿಸಿಕೊಂಡಿದೆ. ಭಾರತದಲ್ಲಿಯೂ ಈ ಯುದ್ಧದ ಪರಿಣಾಮ ಗೋಚರಿಸುತ್ತಿದ್ದು, ಅಡುಗೆ ಅನಿಲದ ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ.

ಹಾವೇರಿಯಲ್ಲಿ ಆಟೋಗಳಿಗೆ ಅನಿಲ ಪೂರೈಸುತ್ತಿದ್ದ ಗೋಗ್ಯಾಸ್ ದರ ಒಂದೂವರೆ ಪಟ್ಟು ಏರಿಕೆಯಾಗಿದೆ. ಆರಂಭದಲ್ಲಿ ಕೆಜಿಗೆ 50 ರೂ. ಇದ್ದ ದರ ಇದೀಗ 70 ರೂ.ಗೆ ಏರಿಕೆಯಾಗಿದೆ.

ದರ ಏರಿಕೆ ಆಟೋ ಚಾಲಕರಿಗೆ ತಲೆನೋವಾಗಿ ಪರಿಣಮಿಸಿದೆ. ಮೊದಲೇ ಗೃಹಲಕ್ಷ್ಮಿ ಯೋಜನೆಯ ಪರಿಣಾಮ ಜನರು ಆಟೋಗಳಲ್ಲಿ ಪ್ರಯಾಣಿಸುವುದು ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಳೆದ 8–10 ದಿನಗಳಲ್ಲಿ LPG ದರವನ್ನು ಕೆಜಿಗೆ ಒಂದೂವರೆ ಪಟ್ಟು ಹೆಚ್ಚಿಸಿರುವುದರಿಂದ ಸಂಕಷ್ಟ ಹೆಚ್ಚಾಗಿದೆ ಎಂದು ಆಟೋ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರು ಈಗಾಗಲೇ ನಿಗದಿತ ದರದಲ್ಲೇ ಆಟೋ ಹತ್ತುತ್ತಾರೆ. ಮೊದಲಿಗಿಂತ 10 ರೂ. ಹೆಚ್ಚಾಗಿ ಕೇಳಿದರೆ ಪ್ರಯಾಣಿಸಲು ನಿರಾಕರಿಸುತ್ತಾರೆ. ಇದರಿಂದ ದಿನನಿತ್ಯ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ ಎಂದು ಚಾಲಕರು ತಿಳಿಸಿದ್ದಾರೆ.

ಹೆಣ್ಣು ಭ್ರೂಣ ಹತ್ಯೆ ಗಂಭೀರ ಅಪರಾಧ: ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ

ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ಕೇವಲ ಕಾನೂನುಬಾಹಿರ ಅಪರಾಧವಷ್ಟೇ ಅಲ್ಲ, ನೈತಿಕ ಸಮಾಜದ ಮೇಲೆ ಬಿದ್ದ ಕಳಂಕವಾಗಿದ್ದು, ಸಂವಿಧಾನಾತ್ಮಕ ಮೌಲ್ಯಗಳಿಗೆ ಅವಮಾನವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಲಿಂಗ ಪರೀಕ್ಷೆ ನಡೆಸಿ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದೆ.

ಈ ಸಂಬಂಧ ಆರೋಪಿಗಳಾಗಿದ್ದ ಶಾರದಮ್ಮ, ಅವರ ಪತಿ ದಾಸೇಗೌಡ ಹಾಗೂ ಡಾ. ಶಶಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿ ತಿರಸ್ಕರಿಸಿದೆ.

ಪ್ರಕರಣ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಲ್ಲಿಸಿದ್ದ ದೂರಿನಲ್ಲಿ ಘಟನೆಗಳ ವಿವರ ಸ್ಪಷ್ಟವಾಗಿ ನೀಡಲಾಗಿದೆ. ದೂರಿನಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲದೆ ಗಂಭೀರ ಆರೋಪಗಳನ್ನು ಒಳಗೊಂಡಿದೆ ಎಂದು ನ್ಯಾಯಪೀಠ ಹೇಳಿದೆ.

ಇಂತಹ ಗಂಭೀರ ಪ್ರಕರಣಗಳಲ್ಲಿ ಆರಂಭದಲ್ಲೇ ಸಡಿಲಿಕೆ ನೀಡಿದರೆ ಕಾನೂನಿನ ಮಹತ್ವ ಕುಂದುತ್ತದೆ ಹಾಗೂ ಲಿಂಗಭೇದದ ಅಪರಾಧಗಳಿಗೆ ಉತ್ತೇಜನ ಸಿಗುವ ಸಾಧ್ಯತೆ ಇದೆ. ಆದ್ದರಿಂದ ಈ ಹಂತದಲ್ಲಿ ಪ್ರಕರಣವನ್ನು ರದ್ದುಪಡಿಸುವುದು ಸೂಕ್ತವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:

ಚನ್ನಪಟ್ಟಣ ತಾಲೂಕಿನ ಚನ್ನಕೇಶವ ಅವರ ಪತ್ನಿ ಹರ್ಷಿತಾ ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದರು. ಅವರಿಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳು ಇದ್ದ ಹಿನ್ನೆಲೆಯಲ್ಲಿ ಗರ್ಭದಲ್ಲಿರುವ ಮಗುವಿನ ಲಿಂಗ ತಿಳಿದುಕೊಳ್ಳಲು ಅವರು ಯತ್ನಿಸಿದ್ದರು.

ಈ ಹಿನ್ನೆಲೆಯಲ್ಲಿ ಸಂಬಂಧಿಕರಾದ ಶಾರದಮ್ಮ ಮತ್ತು ದಾಸೇಗೌಡ ಅವರ ಸಹಾಯದಿಂದ ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ. ಶಶಿ ಮೂಲಕ ಅಕ್ರಮವಾಗಿ ಸ್ಕ್ಯಾನಿಂಗ್ ನಡೆಸಿ ಭ್ರೂಣದ ಲಿಂಗ ಪತ್ತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ನಂತರ ಖಾಸಗಿ ಕ್ಲಿನಿಕ್‌ನಲ್ಲಿ ಗರ್ಭಪಾತಕ್ಕೆ ಔಷಧಿ ನೀಡಲಾಗಿದ್ದು, ಆ ರಾತ್ರಿ ಹರ್ಷಿತಾಗೆ ತೀವ್ರ ರಕ್ತಸ್ರಾವ ಉಂಟಾಗಿ ಭ್ರೂಣ ಮೃತಪಟ್ಟಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಹರ್ಷಿತಾ ಪತಿ ಚನ್ನಕೇಶವ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.

ಇದಲ್ಲದೆ, ಶಾರದಮ್ಮ ಮತ್ತು ದಾಸೇಗೌಡರು ಲಿಂಗ ಪರೀಕ್ಷೆಗೆ ರೋಗಿಗಳನ್ನು ಕರೆತರುವ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದರೆಂಬ ಆರೋಪವೂ ಇದೆ. ಈ ಘಟನೆ ಹಿಂದೆ ಸಂಘಟಿತ ಜಾಲವಿರುವ ಸಾಧ್ಯತೆಯೂ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

error: Content is protected !!