Home Blog Page 55

ಮಹಿಳಾ ಉದ್ಯೋಗಿಗಳಿಗೆ ‘ಕಮ್ ಅರ್ಲಿ-ಗೋ ಅರ್ಲಿ’ ಯೋಜನೆ: ಮಹಾರಾಷ್ಟ್ರ ಸರ್ಕಾರದ ಹೊಸ ಘೋಷಣೆ

0

ಮುಂಬೈ: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಾರಾಷ್ಟ್ರ ಸರ್ಕಾರ ಮಹಿಳಾ ಉದ್ಯೋಗಿಗಳಿಗಾಗಿ ‘ಕಮ್ ಅರ್ಲಿ-ಗೋ ಅರ್ಲಿ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮುಂಬೈ ಮಹಾನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸರ್ಕಾರಿ ನೌಕರರಿಗೆ ಈ ಯೋಜನೆ ಅನ್ವಯವಾಗಲಿದೆ.

ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಮಹಿಳಾ ಸಬಲೀಕರಣ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಈ ಯೋಜನೆಯನ್ನು ಘೋಷಿಸಿದರು. ಮುಂಬೈನ ಸ್ಥಳೀಯ ರೈಲುಗಳು ಮತ್ತು ರಸ್ತೆಗಳಲ್ಲಿ ಇರುವ ಜನದಟ್ಟಣೆ ಹಾಗೂ ಪ್ರಯಾಣದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

‘ಕಮ್ ಅರ್ಲಿ-ಗೋ ಅರ್ಲಿ’ ಯೋಜನೆಯಡಿ ಮಹಿಳಾ ಉದ್ಯೋಗಿಗಳು ಬೆಳಗ್ಗೆ 9.15 ರಿಂದ 9.45ರ ನಡುವೆ ಕಚೇರಿಗೆ ಹಾಜರಾಗಬಹುದು. ಜೊತೆಗೆ ಸಂಜೆ ಕಚೇರಿಯಿಂದ ಸುಮಾರು 30 ನಿಮಿಷಗಳಷ್ಟು ಮುಂಚಿತವಾಗಿ ಮನೆಗೆ ತೆರಳುವ ಅವಕಾಶವೂ ನೀಡಲಾಗಿದೆ. ಇದರಿಂದ ಮಹಿಳೆಯರ ಪ್ರಯಾಣದ ಒತ್ತಡ ಕಡಿಮೆಯಾಗುವುದರ ಜೊತೆಗೆ ಕೆಲಸ ಮತ್ತು ಕುಟುಂಬದ ನಡುವಿನ ಸಮತೋಲನ ಸಾಧಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಇದೇ ವೇಳೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ ಎಂದು ಸುನೇತ್ರಾ ಪವಾರ್ ಹೇಳಿದರು. ಜುಲೈ 2015 ರಿಂದ ಫೆಬ್ರವರಿ 2026ರವರೆಗೆ ನಡೆಸಿದ ‘ಆಪರೇಷನ್ ಮುಸ್ಕಾನ್’ ಕಾರ್ಯಾಚರಣೆಯ 14 ಹಂತಗಳಲ್ಲಿ 42,594 ಮಕ್ಕಳು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಹಾಗೇ ‘ಆಪರೇಷನ್ ಸರ್ಚ್’ ಮೂಲಕ 5,066 ಮಹಿಳೆಯರು ಮತ್ತು 2,771 ಮಕ್ಕಳನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಸೇರಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾಣೆಯಾದವರ ಕೋಶಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, 51 ಭರೋಸಾ ಕೋಶಗಳು ಮಹಿಳೆಯರ ದೂರುಗಳನ್ನು ಪರಿಹರಿಸುತ್ತಿವೆ.

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಲಡ್ಕಿ ಬೆಹೆನ್, ನಮೋ ಮಹಿಳಾ ಸಾಕ್ಷರತಾ ಮತ್ತು ಅನ್ನಪೂರ್ಣ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸ್ವಸಹಾಯ ಗುಂಪುಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ‘ಉಮೈದ್ ಮಾಲ್’ ಮತ್ತು ಆನ್‌ಲೈನ್ ವೇದಿಕೆಗಳನ್ನು ಆರಂಭಿಸಲಾಗಿದೆ.

ಇದಲ್ಲದೆ, ರಾಜ್ಯದ 17,254 ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಆಧುನಿಕ ತಂತ್ರಜ್ಞಾನ ಬಳಕೆಯನ್ನು ವಿಸ್ತರಿಸಲಾಗುತ್ತಿದ್ದು, ಸೈಬರ್ ಅಪರಾಧ ತಡೆಗಟ್ಟಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಚರ್ಚ್‌ಗೇಟ್ ಮತ್ತು ಬೋರಿವಲಿ ರೈಲು ನಿಲ್ದಾಣಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ.

ಮಹಿಳಾ ಉದ್ಯೋಗಿಗಳಿಗೆ 180 ದಿನಗಳ ಹೆರಿಗೆ ರಜೆ ನೀಡುವುದರ ಜೊತೆಗೆ ಅಗತ್ಯವಿದ್ದರೆ ಒಂದು ವರ್ಷದ ಅರ್ಧ ವೇತನ ರಜೆ ಪಡೆಯುವ ಅವಕಾಶವೂ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ತಡೆಗಟ್ಟಲು ಮತ್ತು ಶಾಲೆ ಬಿಟ್ಟ ಹುಡುಗಿಯರ ಸಂಖ್ಯೆಯನ್ನು ಕಡಿಮೆ ಮಾಡಲು ‘ಆದಿ ಶಕ್ತಿ ಅಭಿಯಾನ’ವನ್ನು ಜಾರಿಗೆ ತರಲಾಗುತ್ತಿದೆ.

ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸ್ವಸಹಾಯ ಗುಂಪುಗಳ ಬಲಪಡಿಕೆ, ಮಹಿಳಾ ರೈತರು ಮತ್ತು ಕಾರ್ಮಿಕರಿಗೆ ವಿಶೇಷ ಯೋಜನೆಗಳು ಹಾಗೂ ಸುರಕ್ಷತೆಗೆ ಕಠಿಣ ಕಾನೂನುಗಳ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಸುನೇತ್ರಾ ಪವಾರ್ ತಿಳಿಸಿದ್ದಾರೆ.

ಇರಾನ್-ಇಸ್ರೇಲ್ ಸಂಘರ್ಷ: ಗ್ಯಾಸ್ ದರ ಏರಿಕೆಯಿಂದ ಹಾವೇರಿಯಲ್ಲಿ ಆಟೋ ಚಾಲಕರು ಕಂಗಾಲು!

ಹಾವೇರಿ: ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ 12ನೇ ದಿನಕ್ಕೂ ಮುಂದುವರಿದಿದ್ದು, ಯುದ್ಧದ ಪರಿಣಾಮ ಹಲವು ದೇಶಗಳಿಗೆ ತಟ್ಟಿದೆ. ಆರಂಭದಲ್ಲಿ ಮೂರು ರಾಷ್ಟ್ರಗಳಿಗೆ ಸೀಮಿತವಾಗಿದ್ದ ಈ ಸಂಘರ್ಷ ನಂತರ ನೆರೆಹೊರೆಯ ದೇಶಗಳಿಗೂ ವಿಸ್ತರಿಸಿದೆ.

ಯುದ್ಧದ ಪರಿಣಾಮ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಜೊತೆಗೆ ಮಿಲಿಯನ್ ಗಟ್ಟಲೆ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಬೆಳವಣಿಗೆಗಳಿಂದಾಗಿ ಹಲವು ರಾಷ್ಟ್ರಗಳು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿವೆ.

ಇದರ ಪರಿಣಾಮವಾಗಿ ಎಲ್‌ಪಿಜಿ ಗ್ಯಾಸ್ ಹಾಗೂ ತೈಲ ದರಗಳಲ್ಲಿ ಏರಿಕೆ ಕಾಣಿಸಿಕೊಂಡಿದೆ. ಭಾರತದಲ್ಲಿಯೂ ಈ ಯುದ್ಧದ ಪರಿಣಾಮ ಗೋಚರಿಸುತ್ತಿದ್ದು, ಅಡುಗೆ ಅನಿಲದ ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ.

ಹಾವೇರಿಯಲ್ಲಿ ಆಟೋಗಳಿಗೆ ಅನಿಲ ಪೂರೈಸುತ್ತಿದ್ದ ಗೋಗ್ಯಾಸ್ ದರ ಒಂದೂವರೆ ಪಟ್ಟು ಏರಿಕೆಯಾಗಿದೆ. ಆರಂಭದಲ್ಲಿ ಕೆಜಿಗೆ 50 ರೂ. ಇದ್ದ ದರ ಇದೀಗ 70 ರೂ.ಗೆ ಏರಿಕೆಯಾಗಿದೆ.

ದರ ಏರಿಕೆ ಆಟೋ ಚಾಲಕರಿಗೆ ತಲೆನೋವಾಗಿ ಪರಿಣಮಿಸಿದೆ. ಮೊದಲೇ ಗೃಹಲಕ್ಷ್ಮಿ ಯೋಜನೆಯ ಪರಿಣಾಮ ಜನರು ಆಟೋಗಳಲ್ಲಿ ಪ್ರಯಾಣಿಸುವುದು ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಳೆದ 8–10 ದಿನಗಳಲ್ಲಿ LPG ದರವನ್ನು ಕೆಜಿಗೆ ಒಂದೂವರೆ ಪಟ್ಟು ಹೆಚ್ಚಿಸಿರುವುದರಿಂದ ಸಂಕಷ್ಟ ಹೆಚ್ಚಾಗಿದೆ ಎಂದು ಆಟೋ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರು ಈಗಾಗಲೇ ನಿಗದಿತ ದರದಲ್ಲೇ ಆಟೋ ಹತ್ತುತ್ತಾರೆ. ಮೊದಲಿಗಿಂತ 10 ರೂ. ಹೆಚ್ಚಾಗಿ ಕೇಳಿದರೆ ಪ್ರಯಾಣಿಸಲು ನಿರಾಕರಿಸುತ್ತಾರೆ. ಇದರಿಂದ ದಿನನಿತ್ಯ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ ಎಂದು ಚಾಲಕರು ತಿಳಿಸಿದ್ದಾರೆ.

ಹೆಣ್ಣು ಭ್ರೂಣ ಹತ್ಯೆ ಗಂಭೀರ ಅಪರಾಧ: ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ

ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ಕೇವಲ ಕಾನೂನುಬಾಹಿರ ಅಪರಾಧವಷ್ಟೇ ಅಲ್ಲ, ನೈತಿಕ ಸಮಾಜದ ಮೇಲೆ ಬಿದ್ದ ಕಳಂಕವಾಗಿದ್ದು, ಸಂವಿಧಾನಾತ್ಮಕ ಮೌಲ್ಯಗಳಿಗೆ ಅವಮಾನವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಲಿಂಗ ಪರೀಕ್ಷೆ ನಡೆಸಿ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದೆ.

ಈ ಸಂಬಂಧ ಆರೋಪಿಗಳಾಗಿದ್ದ ಶಾರದಮ್ಮ, ಅವರ ಪತಿ ದಾಸೇಗೌಡ ಹಾಗೂ ಡಾ. ಶಶಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿ ತಿರಸ್ಕರಿಸಿದೆ.

ಪ್ರಕರಣ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಲ್ಲಿಸಿದ್ದ ದೂರಿನಲ್ಲಿ ಘಟನೆಗಳ ವಿವರ ಸ್ಪಷ್ಟವಾಗಿ ನೀಡಲಾಗಿದೆ. ದೂರಿನಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲದೆ ಗಂಭೀರ ಆರೋಪಗಳನ್ನು ಒಳಗೊಂಡಿದೆ ಎಂದು ನ್ಯಾಯಪೀಠ ಹೇಳಿದೆ.

ಇಂತಹ ಗಂಭೀರ ಪ್ರಕರಣಗಳಲ್ಲಿ ಆರಂಭದಲ್ಲೇ ಸಡಿಲಿಕೆ ನೀಡಿದರೆ ಕಾನೂನಿನ ಮಹತ್ವ ಕುಂದುತ್ತದೆ ಹಾಗೂ ಲಿಂಗಭೇದದ ಅಪರಾಧಗಳಿಗೆ ಉತ್ತೇಜನ ಸಿಗುವ ಸಾಧ್ಯತೆ ಇದೆ. ಆದ್ದರಿಂದ ಈ ಹಂತದಲ್ಲಿ ಪ್ರಕರಣವನ್ನು ರದ್ದುಪಡಿಸುವುದು ಸೂಕ್ತವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:

ಚನ್ನಪಟ್ಟಣ ತಾಲೂಕಿನ ಚನ್ನಕೇಶವ ಅವರ ಪತ್ನಿ ಹರ್ಷಿತಾ ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದರು. ಅವರಿಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳು ಇದ್ದ ಹಿನ್ನೆಲೆಯಲ್ಲಿ ಗರ್ಭದಲ್ಲಿರುವ ಮಗುವಿನ ಲಿಂಗ ತಿಳಿದುಕೊಳ್ಳಲು ಅವರು ಯತ್ನಿಸಿದ್ದರು.

ಈ ಹಿನ್ನೆಲೆಯಲ್ಲಿ ಸಂಬಂಧಿಕರಾದ ಶಾರದಮ್ಮ ಮತ್ತು ದಾಸೇಗೌಡ ಅವರ ಸಹಾಯದಿಂದ ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ. ಶಶಿ ಮೂಲಕ ಅಕ್ರಮವಾಗಿ ಸ್ಕ್ಯಾನಿಂಗ್ ನಡೆಸಿ ಭ್ರೂಣದ ಲಿಂಗ ಪತ್ತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ನಂತರ ಖಾಸಗಿ ಕ್ಲಿನಿಕ್‌ನಲ್ಲಿ ಗರ್ಭಪಾತಕ್ಕೆ ಔಷಧಿ ನೀಡಲಾಗಿದ್ದು, ಆ ರಾತ್ರಿ ಹರ್ಷಿತಾಗೆ ತೀವ್ರ ರಕ್ತಸ್ರಾವ ಉಂಟಾಗಿ ಭ್ರೂಣ ಮೃತಪಟ್ಟಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಹರ್ಷಿತಾ ಪತಿ ಚನ್ನಕೇಶವ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.

ಇದಲ್ಲದೆ, ಶಾರದಮ್ಮ ಮತ್ತು ದಾಸೇಗೌಡರು ಲಿಂಗ ಪರೀಕ್ಷೆಗೆ ರೋಗಿಗಳನ್ನು ಕರೆತರುವ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದರೆಂಬ ಆರೋಪವೂ ಇದೆ. ಈ ಘಟನೆ ಹಿಂದೆ ಸಂಘಟಿತ ಜಾಲವಿರುವ ಸಾಧ್ಯತೆಯೂ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಂಡ್ಯದಲ್ಲಿ ಭೀಕರ ಹತ್ಯೆ ಪ್ರಕರಣ ಬಯಲು: ಅರ್ಚಕನನ್ನು ಕೊಂದು ನಾಲೆಗೆ ಎಸೆದ ಪತ್ನಿ–ಪ್ರಿಯಕರ ಅರೆಸ್ಟ್

0

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ಅರ್ಚಕನೊಬ್ಬನ ಹತ್ಯೆ ಪ್ರಕರಣ ಇದೀಗ ಸಂಚಲನ ಮೂಡಿಸಿದೆ. ಮಂಡ್ಯ ಜಿಲ್ಲೆಯ ಈ ಪ್ರಕರಣದಲ್ಲಿ ಪತ್ನಿಯೇ ಪ್ರಿಯಕರ ಹಾಗೂ ಆತನ ಸ್ನೇಹಿತರ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಹತ್ಯೆಯಾದ ಅರ್ಚಕನನ್ನು ಸಿದ್ದಲಿಂಗಪ್ಪ (46) ಎಂದು ಗುರುತಿಸಲಾಗಿದೆ. ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ, ಪ್ರಿಯಕರ ಹರೀಶ್ ಮತ್ತು ಆತನ ಸ್ನೇಹಿತರಾದ ಸಂತೋಷ್ ಹಾಗೂ ಗಣೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 6ರಂದು ಸಿಡಿಎಸ್ ನಾಲೆಯಲ್ಲಿ ಸಿದ್ದಲಿಂಗಪ್ಪ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಅಪಘಾತವಾಗಿರಬಹುದು ಎಂಬ ಅನುಮಾನ ಇದ್ದರೂ, ಸ್ಥಳದಲ್ಲಿ ಸಿಕ್ಕಿದ್ದ ಚಪ್ಪಲಿ ಮತ್ತು ರಕ್ತದ ಕಲೆಗಳು ಪೊಲೀಸರಲ್ಲಿ ಅನುಮಾನ ಮೂಡಿಸಿತು.

ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ ಹಾಗೂ ಹರೀಶ್ ನಡುವಿನ ಅನೈತಿಕ ಸಂಬಂಧದ ವಿಚಾರ ಬೆಳಕಿಗೆ ಬಂದಿದೆ. ಒಂದೂವರೆ ವರ್ಷದ ಹಿಂದೆ ಸಿದ್ದಲಿಂಗಪ್ಪ ಈ ಸಂಬಂಧದ ಬಗ್ಗೆ ತಿಳಿದು ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ನಂತರ ಕುಟುಂಬವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಪತ್ನಿಗೆ ಬುದ್ಧಿಮಾತು ಹೇಳಿ ಸರಿದಾರಿಗೆ ತರಲು ಪ್ರಯತ್ನಿಸಿದ್ದರು ಎನ್ನಲಾಗಿದೆ.

ಆದರೆ ಪತಿ ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದುಕೊಂಡ ಶಾಲಿನಿ, ಪ್ರಿಯಕರ ಹರೀಶ್ ಜೊತೆಗೂಡಿ ಕೊಲೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಚ್ 6ರಂದು ಸಿದ್ದಲಿಂಗಪ್ಪ ಪೂಜೆಗಾಗಿ ಹೊರಗಡೆ ತೆರಳಿದ್ದಾಗ ಶಾಲಿನಿ ಹರೀಶ್‌ಗೆ ಸಂದೇಶ ಕಳುಹಿಸಿ ಪತಿ ಮನೆಗೆ ಮರಳುವ ಬಗ್ಗೆ ಮಾಹಿತಿ ನೀಡಿದ್ದಳು.

ಪೂಜೆ ಮುಗಿಸಿಕೊಂಡು ಬೈಕ್‌ನಲ್ಲಿ ಮರಳುತ್ತಿದ್ದ ಸಿದ್ದಲಿಂಗಪ್ಪ ಅವರನ್ನು ಹರೀಶ್ ಮತ್ತು ಆತನ ಸ್ನೇಹಿತರಾದ ಸಂತೋಷ್ ಹಾಗೂ ಗಣೇಶ್ ಅಡ್ಡಗಟ್ಟಿ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾರೆ. ಬಳಿಕ ಸಾಕ್ಷ್ಯ ನಾಶಪಡಿಸಲು ಮೃತದೇಹ ಮತ್ತು ಬೈಕ್ ಅನ್ನು ಸಿಡಿಎಸ್ ನಾಲೆಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು.

ಘಟನೆ ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ಪ್ರಕರಣದ ನಿಜಾಂಶವನ್ನು ಬಯಲಿಗೆಳೆದಿದ್ದಾರೆ. ವಿಚಾರಣೆ ವೇಳೆ ಶಾಲಿನಿ ಸೇರಿದಂತೆ ಆರೋಪಿಗಳು ಕೃತ್ಯ ಒಪ್ಪಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

 

ಹೊತ್ತಿ ಉರಿದ ಹೋಟೆಲ್; ಬೆಂಕಿ ಕೆನ್ನಾಲಿಗೆಗೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ನಾಶ!

ವಿಜಯಪುರ:- ಜಿಲ್ಲೆಯ ಇಂಡಿ ಪಟ್ಟಣದ ಹೊಟೇಲ್‌ವೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹೊತ್ತಿಯುರಿದ ಘಟನೆ ನಡೆದಿದೆ.

ಹೋಟೆಲ್‌ನಲ್ಲಿ ಏಕಾಏಕಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಘಟನೆ ಹಿನ್ನೆಲೆ ಲಕ್ಷಾಂತರ ಮೌಲ್ಯದ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಹಲವೆಡೆ ಗ್ಯಾಸ್ ಸಿಲಿಂಡರ್ ಕೊರತೆ: ಹೋಟೆಲ್ ಗಳು ಬಂದ್ ಮಾಡ್ದೆ ವಿಧಿಯಿಲ್ಲ!?

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ಕೊರತೆಯಿಂದ ಹೋಟೆಲ್ ಮಾಲೀಕರಿಗೆ ಸಂಕಷ್ಟ ಉಂಟಾಗಿದೆ.

ಸಿಲಿಂಡರ್ ಇಲ್ಲದ ಕಾರಣ ಪುರಿ, ದೋಸೆ ಸೇರಿದಂತೆ ಹೆಚ್ಚು ಗ್ಯಾಸ್ ಬಳಕೆಯ ಐಟಂಗಳ ತಯಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆಲ ಸಣ್ಣ ಹೋಟೆಲ್‌ಗಳು ಮುಚ್ಚಿರುವಾಗ, ದೊಡ್ಡ ಹೋಟೆಲ್‌ಗಳು ಕೆಲ ದಿನಗಳಷ್ಟು ಮಾತ್ರ ವ್ಯವಹಾರ ನಡೆಸುತ್ತಿದ್ದಾರೆ.

ಬೆಲೆ ಏರಿಕೆ ಮತ್ತು ಪೂರೈಕೆ ಕೊರತೆಯಿಂದ ಉದ್ಯೋಗಿಯಾಗಿರುವ ಸಾವಿರಾರು ಹೋಟೆಲ್ ಕೆಲಸಗಾರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕೆಲ ಹೋಟೆಲ್ ಮಾಲೀಕರು ಸರ್ಕಾರದ ವಿಳಂಬ ನೀತಿಯನ್ನು ಟೀಕಿಸುತ್ತಿದ್ದಾರೆ. ಇನ್ನು ಬೆಂಗಳೂರಿನ ಅನೇಕ ಹೋಟೆಲ್‌ಗಳು ಮುಚ್ಚುವ ಸಾಧ್ಯತೆ ಉಂಟು ಎಂಬ ಆತಂಕ ಉಂಟಾಗಿದೆ.

ಮೂರೇ ದಿನಗಳಲ್ಲಿ ಸಿಲಿಂಡರ್ ಬೆಲೆ 1,600 ರೂಪಾಯಿಯಿಂದ 2,200 ರೂಪಾಯಿಗೆ ಏರಿಕೆಯಾಗಿದೆ. ಹೋಟೆಲ್ ಮಾಲೀಕರು ಪೂರೈಕೆ ಸಮರ್ಪಕವಾಗದಿದ್ದರೆ ಉದ್ಯಮ ಸಂಪೂರ್ಣ ಕುಸಿಯಲಿದೆ ಎಂದು ಎಚ್ಚರಿಸಿದ್ದಾರೆ.

 

IPL ಆರಂಭಕ್ಕೆ ದಿನಗಣನೆ: RCB ತಂಡದ ಮೊದಲ ಎದುರಾಳಿ ಯಾರು ಗೊತ್ತಾ?

0

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-19 ಆರಂಭಕ್ಕೆ ಸಿದ್ಧತೆಗಳು ಶುರುವಾಗಿದೆ.

ಮಾರ್ಚ್ 28 ರಂದು ಆರಂಭವಾಗಲಿರುವ ಟೂರ್ನಿಯ ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಲಿದ್ದು, ಇದು ಉದ್ಘಾಟನಾ ಪಂದ್ಯವಾಗಲಿದೆ.

ಕಳೆದ ಬಾರಿಯ ರನ್ನರ್ ಅಪ್ ತಂಡ ಪಂಜಾಬ್ ಕಿಂಗ್ಸ್ ಉದ್ಘಾಟನಾ ಪಂದ್ಯದಲ್ಲಿ ಭಾಗವಹಿಸಲಾರದು. ಮೊದಲ ಎರಡು ದಿನಗಳಲ್ಲಿ RCB, CSK, ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ತಂಡಗಳ ಪಂದ್ಯಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ.

ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ನಿರ್ಧಾರಾತ್ಮಕ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಮೊದಲ 20 ದಿನಗಳ ವೇಳಾಪಟ್ಟಿಯನ್ನೇ ಪ್ರಕಟಿಸಲಾಗಿದೆ; ಚುನಾವಣೆಯ ದಿನಾಂಕ ನಿಗದಿಯಾದ ಬಳಿಕ ಉಳಿದ ಪಂದ್ಯಾವಳಿ ಪ್ರಕಟವಾಗಲಿದೆ.

ಅಮೆರಿಕದಲ್ಲಿ ಹೊಸ ತೈಲ ಸಂಸ್ಕರಣಾ ಘಟಕ ನಿರ್ಮಿಸಲಿದೆ ರಿಲಯನ್ಸ್: ಟ್ರಂಪ್ ಘೋಷಣೆ

0

ವಾಷಿಂಗ್ಟನ್‌: ಭಾರತೀಯ ತೈಲ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಮೆರಿಕದ ಟೆಕ್ಸಾಸ್‌ನಲ್ಲಿ 300 ಬಿಲಿಯನ್ ಡಾಲರ್ (27.56 ಲಕ್ಷ ಕೋಟಿ ರೂ.) ವೆಚ್ಚದ ಹೊಸ ತೈಲ ಸಂಸ್ಕರಣಾ ಘಟಕವನ್ನು ನಿರ್ಮಿಸಲು ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಟ್ರಂಪ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಬ್ರೌನ್ಸ್‌ವಿಲ್ಲೆ ಬಂದರಿನಲ್ಲಿ 50 ವರ್ಷಗಳಲ್ಲಿ ಮೊದಲ ಬಾರಿಗೆ ಹೊಸ ತೈಲ ಘಟಕ ತೆರೆಯಲಾಗುತ್ತಿದೆ. ಇದು ಅಮೆರಿಕದ ಇತಿಹಾಸದ ಅತಿ ದೊಡ್ಡ ತೈಲ ಹೂಡಿಕೆ ಒಪ್ಪಂದವಾಗಿದೆ. ಘಟಕದಿಂದ ಅಮೆರಿಕದ ಇಂಧನ ಉತ್ಪಾದನೆ ಹೆಚ್ಚಾಗುತ್ತದೆ, ರಾಷ್ಟ್ರೀಯ ಭದ್ರತೆ ಬಲಪಡುತ್ತದೆ ಮತ್ತು ಸಾವಿರಾರು ಉದ್ಯೋಗ ಸೃಷ್ಟಿಯಾಗುತ್ತದೆ.

ರಿಲಯನ್ಸ್‌ ಮತ್ತು ಭಾರತ ಪಾಲುದಾರರಿಗೆ ಧನ್ಯವಾದ. ತೆರಿಗೆ ಕಡಿತ ನೀತಿಗಳಿಂದ ದೇಶಕ್ಕೆ ಶತಕೋಟಿ ಡಾಲರ್‌ಗಳ ಡೀಲ್‌ಗಳು ಬರಲಿದೆ ಎಂದಿದ್ದಾರೆ ಟ್ರಂಪ್. ಈ ಘಟಕ ವಿಶ್ವದ ಅತ್ಯಂತ ಸ್ವಚ್ಛ ತೈಲ ಸಂಸ್ಕರಣಾಗಾರವಾಗಿದ್ದು, ಅಮೆರಿಕ ಮಾರುಕಟ್ಟೆಗಳಿಗೆ ಇಂಧನವನ್ನು ಪೂರೈಕೆ ಮಾಡುತ್ತದೆ ಮತ್ತು ಜಾಗತಿಕ ರಫ್ತಿಗೆ ಶಕ್ತಿ ತುಂಬಲಿದೆ.

ಮುಂಡರಗಿಯಲ್ಲಿ ಹಗಲು ಹೊತ್ತಿನಲ್ಲೇ ಮನೆಗಳ್ಳತನ – ಬ್ಯಾಂಕ್ ಮ್ಯಾನೇಜರ್ ಮನೆ ದೋಚಿದ ಕಳ್ಳರು!

0

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಹಗಲು ಹೊತ್ತಿನಲ್ಲೇ ಮತ್ತೊಂದು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪಟ್ಟಣದ ಜನರಲ್ಲಿ ಆತಂಕ ಮೂಡಿಸಿದೆ.

ಈ ಬಾರಿ ದುಷ್ಕರ್ಮಿಗಳು ಬ್ಯಾಂಕ್ ವ್ಯವಸ್ಥಾಪಕರ ಮನೆಯನ್ನೇ ಗುರಿಯಾಗಿಸಿಕೊಂಡು ಮಧ್ಯಾಹ್ನದ ವೇಳೆಯಲ್ಲೇ ಮನೆಗೆ ನುಗ್ಗಿ ಹಣ, ಬಂಗಾರ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ.

ಪಟ್ಟಣದ ಜನನೀಬೀಡ ಪ್ರದೇಶದಲ್ಲಿ ವಾಸವಾಗಿರುವ ಕೆನರಾ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾದ ರಾಘವೇಂದ್ರಕುಮಾರ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

ಮಧ್ಯಾಹ್ನ ಸುಮಾರು 3.20 ರಿಂದ 4.40 ಗಂಟೆಯೊಳಗಿನ ಅವಧಿಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಘಟನೆಯ ವೇಳೆ ರಾಘವೇಂದ್ರಕುಮಾರ ಅವರು ಬ್ಯಾಂಕ್ ಕೆಲಸಕ್ಕೆ ತೆರಳಿದ್ದರೆ, ಅವರ ಪತ್ನಿ ಸ್ಥಳೀಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಮನೆಯ ಬಾಗಿಲಿನ ಕೀಲಿಯನ್ನು ಮುರಿದು ಒಳನುಗ್ಗಿ, ಮನೆಯಲ್ಲಿ ಇದ್ದ ಹಣ, ಬಂಗಾರ ಹಾಗೂ ಬೆಳ್ಳಿ ವಸ್ತುಗಳನ್ನು ಕದ್ದುಕೊಂಡು ಪರಾರಿಯಾಗಿದ್ದಾರೆ.

ಕೊಪ್ಪಳ ಪಟ್ಟಣಕ್ಕೆ ಸಂಪರ್ಕ ಹೊಂದಿರುವ ಪ್ರಮುಖ ರಸ್ತೆಗೆ ಸಮೀಪದಲ್ಲಿರುವ ಜನನೀಬೀಡ ಪ್ರದೇಶದಲ್ಲೇ ಈ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಇತ್ತೀಚೆಗೆ ಪಟ್ಟಣದ ವಿದ್ಯಾನಗರ ಪ್ರದೇಶದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಹಗಲು ಹೊತ್ತಿನಲ್ಲಿ ಮತ್ತೊಂದು ಮನೆ ಕಳ್ಳತನ ನಡೆದಿರುವುದು ಜನರಲ್ಲಿ ಭಯವನ್ನು ಹೆಚ್ಚಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ತನಿಖೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕೂಡ ಕರೆಸಿ ಪರಿಶೀಲನೆ ನಡೆಸಲಾಗಿದೆ.

ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ತುಮಕೂರಿನಲ್ಲಿ ಹೃದಯ ವಿದ್ರಾವಕ ಘಟನೆ: 2 ವರ್ಷದ ಮಗುವಿಗೆ ನೇಣು ಹಾಕಿ ತಾಯಿ ಆತ್ಮಹತ್ಯೆ!

ತುಮಕೂರು: ಗುಬ್ಬಿ ತಾಲ್ಲೂಕಿನ ಹಾಳಗಲವಾಡಿಯಲ್ಲಿ ಎರಡು ವರ್ಷದ ಮಗುವಿನ ಜೊತೆ ತಾಯಿ ಒಂದೇ ಕುಣಿಕೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.

ಗಂಗಾಮಣಿ(30), ಪ್ರೇಕ್ಷಾ (2) ಮೃತರು. ಗಂಗಾಮಣಿ ತನ್ನೊಟ್ಟಿಗೆ ಏನು ಅರಿಯದ 2 ವರ್ಷದ ಮಗುವಿನ ಕುತ್ತಿಗೆಗೆ ಕುಣಿಕೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಎಂಟು ವರ್ಷದ ಹಿಂದೆ ಯತೀಶ್ ಎಂಬಾತನ ಜೊತೆ ಗಂಗಾಮಣಿ ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳು ಇದ್ದಾರೆ. ಇನ್ನು ಇಬ್ಬರು ಮಕ್ಕಳು ವಿನಯ್ (7) ಮತ್ತು ರಕ್ಷಿತಾ (5) ಶಾಲೆಗೆ ಹೋಗಿದ್ದರಿಂದ ಸಾವಿನಿಂದ ಪಾರಾಗಿದ್ದಾರೆ.

ಇನ್ನು ಮಕ್ಕಳು ಶಾಲೆಯಿಂದ ಮನೆಗೆ ಬಂದಿದ್ದಾರೆ. ಆದ್ರೆ, ಮನೆ ಒಳಗಿನಿಂದ ಲಾಕ್ ಆಗಿದ್ದು, ಇದನ್ನು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾರೆ. ಬಳಿಕ ಪಕ್ಕದ ಮನೆಯವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!