Home Blog Page 59

ಇರಾನ್–ಇಸ್ರೇಲ್ ಸಂಘರ್ಷ: ಭಾರತೀಯರ ಸುರಕ್ಷತೆ ಸರ್ಕಾರದ ಆದ್ಯತೆ – ಸಚಿವ ಜೈಶಂಕರ್

0

ನವದೆಹಲಿ: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಶಾಂತಿ, ಸಂವಾದ ಮತ್ತು ರಾಜತಾಂತ್ರಿಕತೆಯ ನಿಲುವನ್ನು ಪ್ರತಿಪಾದಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಸಂದರ್ಭದಲ್ಲಿ ವಿದೇಶಗಳಲ್ಲಿ ಇರುವ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಭಾರತೀಯ ಸಮುದಾಯದ ಯೋಗಕ್ಷೇಮ ಮತ್ತು ಸುರಕ್ಷತೆ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಮಧ್ಯ ಪ್ರಾಚ್ಯದಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಸಂಬಂಧಿತ ಸಚಿವಾಲಯಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಪರಸ್ಪರ ಸಮನ್ವಯ ಸಾಧಿಸುತ್ತಿವೆ ಎಂದು ಜೈಶಂಕರ್ ಹೇಳಿದರು.

ಇರಾನ್–ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮವಾಗಿ ತೈಲ ಬೆಲೆ ಏರಿಕೆಯಾಗಿದೆ. ಈ ಬಗ್ಗೆ ಮಾತನಾಡಿದ ಅವರು, ಇಂಧನ ಮಾರುಕಟ್ಟೆಯ ಲಭ್ಯತೆ, ವೆಚ್ಚ ಮತ್ತು ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಸ್ಥಿರತೆ ಇರಬೇಕು ಎಂಬುದು ಭಾರತದ ಸ್ಪಷ್ಟ ಗುರಿಯಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು ಒಂದು ಕೋಟಿ ಭಾರತೀಯರು ವಾಸಿಸಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಇರಾನ್‌ನಲ್ಲಿಯೂ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಸಾವಿರಾರು ಭಾರತೀಯರು ನೆಲೆಸಿದ್ದಾರೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ಸಿಕ್ತು ಕಿಡ್ನ್ಯಾಪ್ ಆಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಶವ: 25 ಲಕ್ಷಕ್ಕೆ ಸುಪಾರಿ?

ಬೆಂಗಳೂರು: ನಗರ ಆನೇಕಲ್‌ನಲ್ಲಿ ಅಪಹರಣಕ್ಕೊಳಗಾದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅವರ ಶವ ಇಂದು ಪತ್ತೆಯಾಗಿದೆ. ನಿನ್ನೆ ಸಂಜೆ ದುಷ್ಕರ್ಮಿಗಳು ಗೋಪಾಲ್ ಅವರ ಕಾರನ್ನು ಅಡ್ಡಗಟ್ಟಿ ಕರೆದೊಯ್ದು, ತಮಿಳುನಾಡಿನ ಡೆಂಕಣಿಕೋಟೆ ಸಮೀಪ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದು, ಇಂದು ಅವರ ಮೃತದೇಹ ಪತ್ತೆಯಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಮೋಹನ್ ಬಾಬು ಎಂಬ ವ್ಯಕ್ತಿ 25 ಲಕ್ಷ ರೂಪಾಯಿ ಸುಪಾರಿ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಸುಪಾರಿ ಪಡೆದ ದುಷ್ಕರ್ಮಿಗಳು ಗೋಪಾಲ್ ಹತ್ಯೆ ಮಾಡಿದ್ದಾರೆ. ಕುಟುಂಬಸ್ಥರು ಆನೇಕಲ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ, ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಗೋಪಾಲ್ ರಿಯಲ್ ಎಸ್ಟೇಟ್ ಮತ್ತು ಹಣಕಾಸು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು. ಕರ್ಪೂರು ಗೇಟ್ ಬಳಿ ಗೋಪಾಲ್ ಹಾಗೂ ಸತೀಶ್ ಇದ್ದ ಕಾರಿಗೆ ದುಷ್ಕರ್ಮಿಗಳು ವಾಹನದಿಂದ ಡಿಕ್ಕಿ ಹೊಡೆದು, ಅವರನ್ನು ಅಪಹರಿಸಿದೆಯೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ 9 ಇನ್ಸ್‌ಪೆಕ್ಟರ್‌ಗಳು ಮತ್ತು 7 ವಿಶೇಷ ತಂಡಗಳು ಶೋಧ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಹಿಡಿಯಲು ಪರಿಶ್ರಮಿಸುತ್ತಿದ್ದಾರೆ.

ಟಿ20 ವಿಶ್ವಕಪ್ ಚಾಂಪಿಯನ್ ಭಾರತ: ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ!

0

ಅಹಮದಾಬಾದ್: ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಟೀಮ್ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಸಂಜು ಸ್ಯಾಮ್ಸನ್ 89 ರನ್, ಅಭಿಷೇಕ್ ಶರ್ಮಾ 52 ರನ್ ಹಾಗೂ ಇಶಾನ್ ಕಿಶನ್ 54 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಈ ಮೂರು ಅರ್ಧಶತಕಗಳ ನೆರವಿನಿಂದ ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್ ಕಲೆಹಾಕಿತು.

256 ರನ್‌ಗಳ ಭಾರಿ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಕುಸಿತ ಕಂಡಿತು. 72 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಕಿವೀಸ್ ತಂಡವನ್ನು ಭಾರತೀಯ ಬೌಲರ್‌ಗಳು ಸಂಪೂರ್ಣವಾಗಿ ಹಿಡಿತದಲ್ಲಿಟ್ಟರು. ಜಸ್‌ಪ್ರೀತ್ ಬುಮ್ರಾ 4 ವಿಕೆಟ್ ಪಡೆದು ಮಾರಕ ದಾಳಿ ನಡೆಸಿದರು. ಅಂತಿಮವಾಗಿ ನ್ಯೂಜಿಲೆಂಡ್ ತಂಡ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು.

ಈ ಮೂಲಕ ಭಾರತ ತಂಡ 96 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಟಿ20 ವಿಶ್ವಕಪ್ ಟ್ರೋಫಿ ತನ್ನದಾಗಿಸಿಕೊಂಡಿದೆ. ಭಾರತದ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, “ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು.

ಈ ಗೆಲುವು ತಂಡದ ಅಸಾಧಾರಣ ಕೌಶಲ್ಯ, ದೃಢನಿಶ್ಚಯ ಹಾಗೂ ತಂಡದ ಕೆಲಸವನ್ನು ಪ್ರತಿಬಿಂಬಿಸುತ್ತದೆ. ಈ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತಂದಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಷೇರು ಹೂಡಿಕೆ ನಷ್ಟ: ರೈಲ್ವೆ ಟ್ರ್ಯಾಕ್‌ಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು:ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಸ್ ಆಗಿದ್ದಕ್ಕೆ ಮನನೊಂದು ವ್ಯಕ್ತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರದ ಹೆಬ್ಬಾಳದಲ್ಲಿ ಸಂಭವಿಸಿದೆ.

ಮೃತರನ್ನು ವೆಂಕಟೇಶ್ (50) ಎಂದು ಗುರುತಿಸಿಲಾಗಿದೆ. ಸ್ಥಳೀಯ ಮೂಲಗಳ ಪ್ರಕಾರ, ವೆಂಕಟೇಶ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜೊತೆಗೆ ಹೂಡಿಕೆಮಾಡಿದ ಷೇರುಗಳಲ್ಲಿ ನಷ್ಟ ಅನುಭವಿಸಿದ್ದರು. ಜೊತೆಗೆ ಸಾಲದ ಬಾಧೆಯೂ ಅವರಿಗೆ ತೊಂದರೆ ಆಗಿತ್ತು. ಈ ಎಲ್ಲಾ ಆಘಾತಗಳಿಂದ ನೊಂದಿದ್ದ ವೆಂಕಟೇಶ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ಪ್ರಕರಣದ ಬಗ್ಗೆ ವರದಿ ಸಲ್ಲಿಸಿದ್ದಾರೆ.

ಟ್ರ್ಯಾಕ್ಟರ್ ಪಲ್ಟಿ: 13 ವರ್ಷದ ಬಾಲಕ ಸ್ಥಳದಲ್ಲೇ ಸಾವು!

0

ಬೀದರ್: ಟ್ರ್ಯಾಕ್ಟರ್ ಪಲ್ಟಿಯಾಗಿ 13 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಕ್ರಾಸ್ ಬಳಿ ನಡೆದಿದೆ.

ಬಾಜೋಳಗಾ ಗ್ರಾಮದ ನಿವಾಸಿ ಶೋಹಮ್ (13) ಮೃತ ಬಾಲಕನಾಗಿದ್ದಾನೆ. ಬಾಜೋಳಗಾ ಕ್ರಾಸ್‌ನಿಂದ ಡಿಸೇಲ್ ತುಂಬಿಸಲು ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮೃತ ಬಾಲಕ ಟ್ರ್ಯಾಕ್ಟರ್‌ನಲ್ಲಿ ಕುಳಿತಿದ್ದಾಗ ಮದಕಟ್ಟಿ ಕ್ರಾಸ್ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಪರಿಣಾಮವಾಗಿ ಬಾಲಕ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಖಟಕ್ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೆಹಲಿಗೆ ತೆರಳಿರುವ DCM ಡಿ.ಕೆ. ಶಿವಕುಮಾರ್ ಪರವಾಗಿ ನಾವು ಇದ್ದೇವೆ: ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ದೆಹಲಿಗೆ ತೆರಳಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ನಾವು ಇದ್ದೇವೆ. ಅವರು ನಾಳೆಯಾದರೂ ಬರಲಿ, ಯಾವುದೇ ತೊಂದರೆ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲೇ ಉಳಿದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಡಿಸಿಎಂ ಪರವಾಗಿ ನಾವು ಇಲ್ಲಿದ್ದೇವೆ. ರಾಜ್ಯದ ಕೆಲಸಗಳನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಇದೇ ವೇಳೆ ಆರ್‌ಎಸ್‌ಎಸ್ ಕುರಿತು ಮಾಜಿ ಸಂಸದ ಅನಂತ ಕುಮಾರ್ ಹೆಗ್ಡೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡುತ್ತೇವೆ ಎಂದು ಯಾರೂ ಹೇಳಿಲ್ಲ. ಯಾರಿಂದಲೂ ಅದನ್ನು ನಿಷೇಧಿಸಲು ಸಾಧ್ಯವಿಲ್ಲ. ಚಟುವಟಿಕೆಗಳ ನಿಷೇಧ ಒಂದು ವಿಷಯ, ಸಂಘಟನೆಯನ್ನು ಬ್ಯಾನ್ ಮಾಡುವುದು ಬೇರೆ ವಿಷಯ ಎಂದು ಸ್ಪಷ್ಟಪಡಿಸಿದರು.

ಭಾನುವಾರ ಖಾಸಗಿ ಕಾರ್ಯಕ್ರಮದ ನಿಮಿತ್ತ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದರು. ಇಂದು ಬೆಳಗ್ಗೆ ಅವರು ವಾಪಸ್ ಆಗಬೇಕಾಗಿದ್ದರೂ, ಇನ್ನೂ ದೆಹಲಿಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Gold Rate Today: ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್: ಬಂಗಾರದ ಬೆಲೆ ದಿಢೀರ್‌ ಕುಸಿತ! ಇಂದಿನ ಬೆಲೆ ಎಷ್ಟು?

ಬೆಂಗಳೂರು: ಮಾರ್ಚ್ ಎರಡನೇ ವಾರದ ಆರಂಭದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಸೋಮವಾರ ಚಿನ್ನದ ದರದಲ್ಲಿ ದೊಡ್ಡ ಮಟ್ಟದ ಕುಸಿತ ದಾಖಲಾಗಿದೆ.

ಇಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹1,960 ಇಳಿಕೆ ಕಂಡು ₹1,61,680ಕ್ಕೆ ತಲುಪಿದೆ. ಒಂದು ಗ್ರಾಂ ಚಿನ್ನದ ಬೆಲೆ ₹196 ಇಳಿಕೆ ಆಗಿ ₹16,168ಕ್ಕೆ ದಾಖಲಾಗಿದೆ.

ಇನ್ನೂ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹180 ಇಳಿಕೆ ಆಗಿ ₹14,820 ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ₹1,48,200ಕ್ಕೆ ತಲುಪಿದೆ.

ಇದೇ ವೇಳೆ ಬೆಳ್ಳಿ ಬೆಲೆಯಲ್ಲೂ ಕುಸಿತ ಕಂಡುಬಂದಿದ್ದು, ಕೆಜಿಗೆ ಸುಮಾರು ₹5,000 ಇಳಿಕೆ ಆಗಿದೆ. 10 ಗ್ರಾಂ ಬೆಳ್ಳಿ ದರ ₹2,80,000ಕ್ಕೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ಇರಾನ್–ಅಮೆರಿಕ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದಲ್ಲಿ ಏರಿಳಿತ ಕಂಡುಬರುತ್ತಿದ್ದು, ಇದರ ಪರಿಣಾಮವಾಗಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣುತ್ತಿದೆ.

ಸದ್ಯ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ಜಾಗತಿಕ ಅನಿಶ್ಚಿತತೆ ಹಾಗೂ ಷೇರು ಮಾರುಕಟ್ಟೆಯ ಪ್ರಭಾವದಿಂದ ಮುಂದಿನ ದಿನಗಳಲ್ಲಿ ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಪ್ರಿಯಕರನ ಬಿಡುಗಡೆಗೆ ಒತ್ತಾಯಿಸಿ ಮೊಬೈಲ್ ಟವರ್ ಏರಿದ ಮಹಿಳೆ!

0

ಪಾಟ್ನಾ: ತನ್ನ ಪ್ರಿಯಕರನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಹಿಳೆಯೊಬ್ಬರು ಮೊಬೈಲ್ ಟವರ್ ಏರಿದ ಘಟನೆ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಗೋಪಾಲ್‌ಗಂಜ್ ಜಿಲ್ಲೆಯ ಬಂಕಟ ಜಾಗಿರ್ದಾರಿ ಗ್ರಾಮದಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳೆ ಮತ್ತು ಆಕೆಯ ಪ್ರಿಯಕರ ಪವನ್ ಚೌಹಾಣ್ ಇಬ್ಬರೂ ಗೋಪಾಲ್‌ಗಂಜ್ ಜಿಲ್ಲೆಯ ಬಂಕತಾ ಮಾಲ್ ಗ್ರಾಮದ ನಿವಾಸಿಗಳಾಗಿದ್ದಾರೆ. ಗುರುವಾರ ಮಹಿಳೆ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಮಹಿಳೆಯನ್ನು ಅಪಹರಿಸಿದ್ದಾನೆ ಎಂಬ ಶಂಕೆಯ ಮೇರೆಗೆ ಪೊಲೀಸರು ಪವನ್ ಚೌಹಾಣ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.

ಪ್ರಿಯಕರ ಬಂಧನದ ವಿಷಯ ತಿಳಿದ ಬಳಿಕ ಮಹಿಳೆ ಶುಕ್ರವಾರ ಗ್ರಾಮದಲ್ಲಿರುವ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ್ದಾಳೆ. ಬಳಿಕ ಸ್ಥಳೀಯ ಪೊಲೀಸ್ ಅಧಿಕಾರಿಗಳು ಪವನ್ ಚೌಹಾಣ್ ಅವರನ್ನು ಸ್ಥಳಕ್ಕೆ ಕರೆತಂದ ನಂತರ ಮಹಿಳೆ ಟವರ್‌ನಿಂದ ಕೆಳಗಿಳಿದಿದ್ದಾಳೆ ಎಂದು ತಿಳಿದುಬಂದಿದೆ.

‘ಟ್ರಂಪ್ ಡಿಕ್ಟೇಟರ್, ಮೋದಿ ಅವರ ಮಾತೇ ಕೇಳುತ್ತಿದ್ದಾರೆ’: ಖರ್ಗೆ ಕಿಡಿ

0

ಕಲಬುರಗಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಡಿಕ್ಟೇಟರ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮಾತೇ ಕೇಳುತ್ತಾ ದೇಶವನ್ನು ಮತ್ತೆ ಗುಲಾಮಗಿರಿಗೆ ತಳ್ಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ಟ್ರಂಪ್ ನನ್ನ ಸ್ನೇಹಿತ ಎಂದು ಮೋದಿ ಹೇಳುತ್ತಾರೆ. ಆದರೆ ಟ್ರಂಪ್ ಭಾರತ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಷ್ಯಾದಿಂದ ತೈಲ ಖರೀದಿಗೆ ಕೂಡ ಅಮೆರಿಕಾ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಅನುಮತಿ ನೀಡಿದೆ. ಅಮೆರಿಕದವರು ಹೇಳಿದಂತೆ ಮೋದಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದರು.

“ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ನಮ್ಮ ದೇಶವನ್ನು ಗಿರವಿ ಇಟ್ಟಿದ್ದಾರೆ. ನೀವು ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಬ್ರಿಟಿಷರನ್ನು ದೇಶದಿಂದ ಓಡಿಸಿದ್ದೇವೆ. ಆದರೆ ಈಗ ಅಮೆರಿಕಾಗೆ ಗುಲಾಮರನ್ನ ಮಾಡುತ್ತಿದ್ದೀರಿ” ಎಂದು ಖರ್ಗೆ ಕಿಡಿಕಾರಿದರು.

ಈ ವೇಳೆ ಜಾಗತಿಕ ರಾಜಕೀಯದ ಕುರಿತು ಮಾತನಾಡಿದ ಖರ್ಗೆ, “ಅಮೆರಿಕದವರು ಇರಾನ್ ದೇಶದ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದರೆ ವಿಶ್ವ ಶಾಂತಿ ಹೇಗೆ ಸಾಧ್ಯ? ಒಂದು ದೇಶದ ಮುಖ್ಯಸ್ಥನನ್ನು ಕೊಂದರೆ ಆ ದೇಶದಲ್ಲಿ ಶಾಂತಿ ಉಳಿಯುತ್ತದೆಯೇ?” ಎಂದು ಪ್ರಶ್ನಿಸಿದರು.

ಅದೇ ವೇಳೆ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಕಾಲದಲ್ಲಿ ಅನುಸರಿಸಲಾದ ‘ನಾನ್ ಅಲೈನ್‌ಮೆಂಟ್’ ನೀತಿಯನ್ನು ಉಲ್ಲೇಖಿಸಿದ ಅವರು, ಆ ನೀತಿಯೇ ವಿಶ್ವ ಶಾಂತಿಗೆ ಕಾರಣವಾಗಿತ್ತು ಎಂದು ಹೇಳಿದರು.

ಇನ್ನೂ ಕೃಷಿ ವಿಚಾರ ಪ್ರಸ್ತಾಪಿಸಿದ ಖರ್ಗೆ, “ಭಾರತದಲ್ಲಿ ಸುಮಾರು 65% ಜನರು ಕೃಷಿ ಅವಲಂಬಿತರಾಗಿದ್ದಾರೆ. ಆದರೆ ಅಮೆರಿಕಾದಲ್ಲಿ ಕೇವಲ 3% ಜನ ಮಾತ್ರ ಕೃಷಿ ಅವಲಂಬಿತರಾಗಿದ್ದಾರೆ. ಆದರೂ ಭಾರತ ಉತ್ಪನ್ನಗಳಿಗೆ ಅಮೆರಿಕಾದಲ್ಲಿ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ” ಎಂದು ಆರೋಪಿಸಿದರು.

ಇದೇ ವೇಳೆ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವಿನ ಸಂಬಂಧದ ಕುರಿತು ಗಂಭೀರ ಆರೋಪ ಮಾಡಿರುವ ಖರ್ಗೆ, “ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ಮೋದಿ ಹೆಸರು ಇದೆ ಎನ್ನಲಾಗುತ್ತಿದೆ. ಅದನ್ನೇ ಬಳಸಿಕೊಂಡು ಟ್ರಂಪ್ ಮೋದಿಯನ್ನು ಹೆದರಿಸುತ್ತಿದ್ದಾರೆ” ಎಂದು ಹೇಳಿದರು.

ಬಾಗೇಪಲ್ಲಿ ಬಳಿ ಕಾರು ಬೆಂಕಿಗಾಹುತಿ: ಚಾಲಕ ಸಜೀವ ದಹನ!

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಆಚೇಪಳ್ಳಿ ಕ್ರಾಸ್ ಬಳಿ ಆಲ್ಟೋ ಕಾರು ಹೊತ್ತಿ ಉರಿದ ಪರಿಣಾಮ 70 ವರ್ಷದ ಚಾಲಕ ಸಜೀವ ದಹನಗೊಂಡಿರುವ ದುರ್ಘಟನೆ ಸಂಭವಿಸಿದೆ.

ಪೆನುಮಲೆ ಗ್ರಾಮದ ನಿವಾಸಿ ಉದಯ್ ಕುಮಾರ್ (70) ಮೃತ ಚಾಲಕ.

ಕಳೆದ ರಾತ್ರಿ ಬಾಗೇಪಲ್ಲಿಯಿಂದ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರು ಏಕಾಏಕಿ ಬೆಂಕಿಗಾಹುತಿಯಾಗಿದ್ದು, ಅದರೊಳಗಿದ್ದ ಉದಯ್ ಕುಮಾರ್ ಹೊರಬರಲು ಸಾಧ್ಯವಾಗದೆ ದುರಂತವಾಗಿ ಸಾವನ್ನಪ್ಪಿದ್ದಾರೆ.

ಘಟನೆ ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

error: Content is protected !!