Home Blog Page 6

ಇನಾಮತಿ ಪ್ರೌಢಶಾಲೆಗೆ ಕ್ರೀಡಾ ಕಿರೀಟ

0

ವಿಜಯಸಾಕ್ಷಿ ಸುದ್ದಿ, ಕುರ್ತಕೋಟಿ: ಗದಗ ತಾಲೂಕಿನ ಬೂದೀಶ್ವರ ಹೊಸಳ್ಳಿ ಗ್ರಾಮದ ಬೂದೀಶ್ವರ ವಿದ್ಯಾಪೀಠದಲ್ಲಿ ನಡೆದ 2026-27ನೇ ಸಾಲಿನ ಹುಲಕೋಟಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕುರ್ತಕೋಟಿಯ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಮನೋಹರ ಅಮರಪ್ಪ ಇನಾಮತಿ ಪ್ರೌಢಶಾಲೆ ಗಮನಾರ್ಹ ಸಾಧನೆ ಮಾಡಿದೆ.

ಬಾಲಕಿಯರ ವಿಭಾಗದಲ್ಲಿ ಶಿಲ್ಪಾ ಕಂಬಾರ 400, 1500 ಹಾಗೂ 3000 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ. ಸವಿತಾ ಶಿ. ಕಾಬಳ್ಳಿ ಗುಂಡು ಎಸೆತ, ಜಾವೆಲಿನ್ ಎಸೆತ ಹಾಗೂ ಸರಪಳಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಪೂರ್ವ ದಿಂಡೆನವರ್ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ಗುಂಪು ವಿಭಾಗದಲ್ಲಿ ವಾಲಿಬಾಲ್ ಹಾಗೂ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದೆ. 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಲಕ್ಷ್ಮೀ ಪೂಜಾರ 100 ಮೀಟರ್ ಓಟ, ಗುಂಡು ಎಸೆತ ಹಾಗೂ ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ. ಇದೇ ವಿಭಾಗದ ವಾಲಿಬಾಲ್ ಹಾಗೂ ಥ್ರೋಬಾಲ್ ತಂಡಗಳು ಪ್ರಥಮ ಸ್ಥಾನ ಪಡೆದಿವೆ.

ಬಾಲಕರ ವಿಭಾಗದಲ್ಲಿ ಆನಂದ ಅಸುಂಡಿ ಉದ್ದ ಜಿಗಿತ, ಎತ್ತರ ಜಿಗಿತ ಹಾಗೂ ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ. ಚೇತನ್ ಉಗಲಾಟ 100 ಮೀಟರ್ ಓಟದಲ್ಲಿ ಪ್ರಥಮ, ವಿನೋದ ತಂಟ್ರಿ ಸರಪಳಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ತರುಣ ಜಕ್ಕಲಿ, ಸಮರ್ಥ್ ವಡ್ಡರ, ಶಿವಾನಂದ ನಾಗರಳ್ಳಿ, ಕಾರ್ತಿಕ್ ಇಳಿಗೇರ ಹಾಗೂ ಇರ್ಫಾನ್ ಅಣ್ಣಿಗೇರಿ ವಿವಿಧ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕರ ಥ್ರೋಬಾಲ್ ಹಾಗೂ ರಿಲೇ ಓಟದಲ್ಲಿ ಪ್ರಥಮ, ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಲಭಿಸಿದೆ.

ವಿವಿಧ ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮುಂದಿನ ಹಂತದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಎಂ. ಮೂಲಿಮನಿ, ಆಡಳಿತಾಧಿಕಾರಿ ಆರ್.ಎಸ್. ಪಾಟೀಲ, ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಯು.ವಿ. ಬೆಟಗೇರಿ, ಸದಸ್ಯ ಅಪ್ಪಣ್ಣ ಇನಾಮತಿ, ಶಾಲೆಯ ಮುಖ್ಯೋಪಾಧ್ಯಾಯ ಜಂಬುನಾಥ ಹರಿವಾಣ, ದೈಹಿಕ ಶಿಕ್ಷಕ ಮಂಜುನಾಥ ಅಂಗಡಿ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗೆ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ನೀಡಿದರೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಈ ಗೆಲುವು ವಿದ್ಯಾರ್ಥಿಗಳ ಪರಿಶ್ರಮಕ್ಕೆ ದೊರೆತ ಫಲ.

— ಜಂಬುನಾಥ ಹರಿವಾಣ, ಮುಖ್ಯೋಪಾಧ್ಯಾಯರು

ಉತ್ತಮ ಶಿಕ್ಷಕರು ಪ್ರಭಾವ ಬೀರುವ ಶಕ್ತಿಗಳು: ಕವಿತಾ ದಂಡಿನ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಕೇವಲ ಪಾಠ ಬೋಧನೆಗೆ ಸೀಮಿತರಲ್ಲ. ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ, ವ್ಯಕ್ತಿತ್ವ ವಿಕಸನ, ಚಿಂತನಶೀಲತೆ ಹಾಗೂ ಜೀವನ ಮೌಲ್ಯಗಳನ್ನು ರೂಪಿಸುವ ಮೂಲಕ ಆಧುನಿಕ ಸಮಾಜದ ನಿರ್ಮಾತೃಗಳಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.

ನಗರದ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ‘ಶಿಕ್ಷಕರು ಆಧುನಿಕ ಸಮಾಜದ ನಿರ್ಮಾತೃಗಳು’ ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಆಳವಾದ ಪ್ರಭಾವ ಬೀರುವ ಶಕ್ತಿಯಾಗಿದ್ದಾರೆ. ಶಿಕ್ಷಕರಿಂದ ಜ್ಞಾನ ಹಾಗೂ ಮೌಲ್ಯಗಳನ್ನು ಕಲಿತ ವಿದ್ಯಾರ್ಥಿಗಳು ಮುಂದೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಾರೆ. ಹೀಗಾಗಿ ಶಿಕ್ಷಕರು ರಾಷ್ಟ್ರದ ಉಜ್ವಲ ಭವಿಷ್ಯ ರೂಪಿಸುವ ಪ್ರಮುಖ ಶಕ್ತಿಯಾಗಿದ್ದಾರೆ ಎಂದರು.

ಮೈಸೂರು ವಿವೇಕಾನಂದ ಯೋಗ ಎಜುಕೇಷನ್ ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಿಂದ ರಾಜಯೋಗಿ ಟಿ. ಕೃಷ್ಣಮಾಚಾರ್ಯ ಪ್ರಶಸ್ತಿ-2026 ಪಡೆದ ಯೋಗಾಚಾರ್ಯ ಕೆ.ಎಸ್. ಪಲ್ಲೇದ ಮಾತನಾಡಿ, ಉತ್ತಮ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಮೂಲಕ ಸಮಾಜ ನಿರ್ಮಾಣದ ಕಾರ್ಯಕ್ಕೆ ಕೈಜೋಡಿಸುತ್ತಾರೆ. ವಿದ್ಯಾರ್ಥಿಗಳನ್ನು ಮೌಲ್ಯಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಉತ್ತಮ ನಾಗರಿಕರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಶಿಕ್ಷಕರು ಸಮಾಜದ ಮಾರ್ಗದರ್ಶಕರಾಗಿ ಜ್ಞಾನ ದೀವಿಗೆ ಬೆಳಗಿಸುವ ನಿರಂತರ ಜ್ಯೋತಿಗಳಾಗಿದ್ದಾರೆ ಎಂದರು.

ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ಜಯಶ್ರೀ ಉಗಲಾಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದರ ಜತೆಗೆ ಅವರನ್ನು ಸುಶಿಕ್ಷಿತರನ್ನಾಗಿ ರೂಪಿಸುತ್ತಾರೆ. ನಮ್ಮೆಲ್ಲರ ಬದುಕಿಗೆ ಗುರುಗಳು ಆದರ್ಶವಾಗಿದ್ದು, ಅವರ ಸೇವೆಯನ್ನು ಸ್ಮರಿಸಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಭಾರತಿ ಕುಲಕರ್ಣಿ, ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ, ಯೋಗಾಚಾರ್ಯ ಕೆ.ಎಸ್. ಪಲ್ಲೇದ, ಯೋಗ ಶಿಕ್ಷಕರಾದ ಸುನಂದಾ ಜಾನೋಪಂತರ, ಜಯಶ್ರೀ ಡಾವಣಗೆರೆ ಹಾಗೂ ಲಕ್ಷ್ಮೀ ನಿಡವಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರು ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ಅರುಣಾ ಹಳಕಟ್ಟಿ ವಚನ ಪ್ರಾರ್ಥನೆ ನೆರವೇರಿಸಿದರು. ಶಾರದಾ ಬೊಮ್ಮಸಾಗರ ನಿರೂಪಿಸಿದರು. ರೇಣುಕಾ ಅಮಾತ್ಯ ಹಾಗೂ ಶಶಿಕಲಾ ಮಾಲೀಪಾಟೀಲ ಪರಿಚಯಿಸಿದರು. ಸುಗ್ಗಲಾ ಯಳಮಲಿ ಕಾರ್ಯಕ್ರಮ ನಿರ್ವಹಿಸಿದರು. ಪುಷ್ಪಾ ಬಂಡಾರಿ ವಂದಿಸಿದರು.

ಗೌರವ ಅಧ್ಯಕ್ಷರಾದ ನಿರ್ಮಲಾ ಪಾಟೀಲ, ಅಕ್ಕಮಹಾದೇವಿ ಚಟ್ಟಿ, ಸದಸ್ಯರಾದ ಶೀಲಾ ಗೋಟಡಕಿ, ಶಾರದಾ ಸಜ್ಜನರ, ಜಯಶ್ರೀ ಹುಬ್ಬಳ್ಳಿ, ಅಕ್ಕಮ್ಮ ವಸ್ತ್ರದ, ಶಕುಂತಲಾ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Renukaswamy Murder Case: ಜೈಲಲ್ಲೂ ಆರೋಪಿ ಪ್ರದೋಷ್ ಕಳ್ಳಾಟ; ವಕೀಲರ ನಂಬರ್ ಹೆಸರಲ್ಲಿ ಪತ್ನಿಗೆ ಕರೆ

0

ಆನೇಕಲ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಯಮ ಉಲ್ಲಂಘಿಸಿ ಪತ್ನಿಯೊಂದಿಗೆ ಮಾತನಾಡಿರುವ ಆರೋಪ ಕೇಳಿಬಂದಿದೆ.

ಬೇರೆ ಖೈದಿ ಹೆಸರಿನಲ್ಲಿ ಮೊಬೈಲ್ ನಂಬರ್ ನೋಂದಾಯಿಸಿಕೊಂಡು, ವಕೀಲರ ನಂಬರ್ ಎಂದು ನಮೂದಿಸಿ ಪತ್ನಿಯೊಂದಿಗೆ ಮಾತನಾಡುತ್ತಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಿಗೆ ವಕೀಲರು ಹಾಗೂ ಕುಟುಂಬದವರೊಂದಿಗೆ ಮಾತನಾಡಲು ಮೂರು ನಂಬರ್‌ಗಳನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಈ ನಂಬರ್‌ಗಳನ್ನು ಪರಿಶೀಲಿಸಿ ರಿಜಿಸ್ಟರ್ ಮಾಡಿಸಿಕೊಳ್ಳುವ ಜವಾಬ್ದಾರಿಯನ್ನು ಜೈಲು ಸಿಬ್ಬಂದಿ ಮೌನೇಶ್ ಹೆಚ್. ಕೋರಿ ಅವರಿಗೆ ವಹಿಸಲಾಗಿತ್ತು.

ಆರೋಪಿ ಪ್ರದೋಷ್ ಬೇರೆ ಖೈದಿಯ ಹೆಸರಿನಲ್ಲಿ ನಂಬರ್ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಈ ನಂಬರ್ ಅನ್ನು ನೋಂದಾಯಿಸಿಕೊಳ್ಳಲು ಜೈಲು ಸಿಬ್ಬಂದಿ ಮೌನೇಶ್ ಸಹಾಯ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ವಕೀಲರ ನಂಬರ್ ಎಂದು ನಮೂದಿಸಿದ್ದ ನಂಬರ್‌ನಿಂದ ಪ್ರದೋಷ್ ತನ್ನ ಪತ್ನಿಯೊಂದಿಗೆ ಮಾತನಾಡುತ್ತಿದ್ದ ವಿಚಾರ ಇದೀಗ ಪತ್ತೆಯಾಗಿದೆ. ಈ ಮೂಲಕ ಜೈಲು ನಿಯಮಗಳನ್ನು ಉಲ್ಲಂಘಿಸಿ ಕರೆ ಮಾಡಿರುವ ಆರೋಪ ಎದುರಾಗಿದೆ.

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿ ಮೌನೇಶ್ ಹಾಗೂ ಆರೋಪಿ ಪ್ರದೋಷ್ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗಣೇಶನ ಭವ್ಯ ಮೆರವಣಿಗೆ: ಭಕ್ತರ ಸಂಭ್ರಮದ ಹೆಜ್ಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗಣೇಶ ಚತುರ್ಥಿಯ ಅಂಗವಾಗಿ ನಗರದ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಮೆರವಣಿಗೆ ವೈಭವದಿಂದ ಜರುಗಿತು.

ನಗರದ ಮಸಾರಿ ಭಾಗದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಟ್ರಸ್ಟ್ ಕಮಿಟಿ ಸದಸ್ಯರು, ಭಕ್ತರು ಹಾಗೂ ಯುವಕರು ಉತ್ಸಾಹದಿಂದ ಪಾಲ್ಗೊಂಡರು. ಸಾಂಪ್ರದಾಯಿಕ ಉಡುಪು ಧರಿಸಿದ್ದ ಮಹಿಳೆಯರು ಹಾಗೂ ಯುವಕರು ಮಂಗಳವಾದ್ಯಗಳ ಮಧುರ ನಾದಕ್ಕೆ ಹೆಜ್ಜೆ ಹಾಕಿದರು. ಭಜನೆ, ಮೆಲೋಡಿ ಹಾಗೂ ಭಕ್ತಿಗೀತೆಗಳ ಗಾಯನದ ನಡುವೆ ‘ಗಣಪತಿ ಬಪ್ಪಾ ಮೋರಯಾ, ಮಂಗಳಮೂರ್ತಿ ಮೋರಯಾ’ ಎಂಬ ಜಯಘೋಷಗಳು ಮೊಳಗಿದವು.

ಮೆರವಣಿಗೆಯುದ್ದಕ್ಕೂ ಯುವಕರು ಬಣ್ಣಬಣ್ಣದ ಗುಲಾಲ್ ಎರಚಿ ಕುಣಿದು ಕುಪ್ಪಳಿಸುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸಿದರು. ಭಕ್ತಿಭಾವ ಹಾಗೂ ಸಡಗರದ ವಾತಾವರಣದಲ್ಲಿ ಮೆರವಣಿಗೆ ಸಾಗಿತು.

ನಂತರ ಶ್ರೀ ಗಣೇಶ ಮೂರ್ತಿಯನ್ನು ನಿಗದಿಪಡಿಸಿದ ಎಪಿಎಂಸಿ ಆವರಣದ ಸಾರ್ವಜನಿಕ ಮಂಟಪಕ್ಕೆ ಕರೆತರಲಾಯಿತು. ವೈದಿಕ ಮಂತ್ರೋಚ್ಚಾರಣೆಗಳೊಂದಿಗೆ ಶಾಸ್ತ್ರೋಕ್ತವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ಅಧ್ಯಕ್ಷ ತಿಮ್ಮರೆಡ್ಡಿ ಕೋನರೆಡ್ಡಿ, ಗೌರವ ಅಧ್ಯಕ್ಷ ಪ್ರಮೋದ್ ಆರ್. ವಾರಕರ, ಕಾರ್ಯದರ್ಶಿ ರಾಜಶೇಖರ ಬಿ. ಮುಧೋಳ, ಉಪಾಧ್ಯಕ್ಷ ರಾಜು ಎನ್. ಮೂಲೀಮನಿ, ಸಹಕಾರ್ಯದರ್ಶಿ ಚಂದ್ರಕಾಂತ ಬಿ. ಸವದತ್ತಿ, ಖಜಾಂಚಿ ಮಹೇಶ ಜಿ. ಗಾಣಿಗೇರ, ವಿನಾಯಕ ಪಿ. ವಜೇಶ್ವರಿ, ವಿವೇಕಾನಂದ ಗುಡಿಮನಿ, ಕೊಟ್ರೇಶ ಈ. ಬಾಳಿಕಾಯಿ, ಗಿರೀಶ ವಿ. ಅಳವಂಡಿ, ದಯಾನಂದ ದುಂಡಪ್ಪನವರ, ಮುರಗೇಶ ಬಡ್ನಿ, ಅಜೀತ್ ಪುಣೇಕರ, ವಿನೂತ್ ಕವಲೂರ, ಸಾಗರ ವಜ್ರೇಶ್ವರಿ, ಮಂಜುನಾಥ ಬೇಲೆರಿ, ನಿಕೀಲ್ ದನ್ನೂರಮಠ, ಬಸವರಾಜ ಹರ್ತಿ, ಪ್ರಕಾಶ ಉಗಲಾಟದ, ಪ್ರದೀಪ್ ಆಸಂಗಿ, ಶರತ್ ಅಂಗಡಿ ಹಾಗೂ ಪ್ರಮೋದ್ ಬಳಗಾನೂರ ಸೇರಿದಂತೆ ದಲಾಲ ವರ್ತಕರ ಸಂಘ ಹಾಗೂ ಖರೀದಿ ವರ್ತಕರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ದೇವರು, ಮರಣ ಮರೆಯದಿರು ಮನುಜ: ರಂಭಾಪುರಿ ಜಗದ್ಗುರು

0

ವಿಜಯಸಾಕ್ಷಿ ಸುದ್ದಿ, ನರಗುಂದ: ಮಾನವ ಜೀವನ ದೇವರು ನೀಡಿದ ಅಮೂಲ್ಯ ವರ. ಅರಿವುಳ್ಳ ಜನ್ಮ ಪಡೆದ ಮನುಷ್ಯ ಶಿವಜ್ಞಾನ ಹಾಗೂ ಗುರು ಕಾರುಣ್ಯ ಪಡೆದು ಬದುಕಬೇಕು. ಜೀವನದಲ್ಲಿ ದೇವರು ಹಾಗೂ ಮರಣವನ್ನು ಎಂದಿಗೂ ಮರೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ತಾಲೂಕಿನ ಕೊಣ್ಣೂರು ಗ್ರಾಮದ ಚಿಕ್ಕಮಠದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ನಡೆದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನಾವು ನಿಂತಿರುವ ನೆಲ, ಕುಡಿಯುವ ನೀರು, ತಿನ್ನುವ ಅನ್ನ ಹಾಗೂ ಉಸಿರಾಡುವ ಗಾಳಿ ದೇವರು ನೀಡಿರುವ ಅಮೂಲ್ಯ ಕೊಡುಗೆಗಳು. ಇವುಗಳಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಇಷ್ಟೆಲ್ಲ ಅಮೂಲ್ಯ ಸಂಪನ್ಮೂಲಗಳನ್ನು ನೀಡಿರುವ ದೇವರನ್ನು ಸ್ಮರಿಸುವುದು ಪ್ರತಿಯೊಬ್ಬರ ಧರ್ಮವಾಗಬೇಕು ಎಂದರು.

ದೇವರು ಎಲ್ಲರಲ್ಲಿಯೂ ಇದ್ದಾನೆ. ಆದರೆ ದೇವರಲ್ಲಿ ಎಲ್ಲರೂ ಇಲ್ಲ ಎಂಬುದು ಸತ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಸಿದ್ಧಾಂತದಲ್ಲಿ ಮಾನವ ಜೀವನದ ಅಮೂಲ್ಯ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಅಂಗ ಲಿಂಗವಾಗಲು, ನರ ಹರನಾಗಲು, ಭವಿ ಭಕ್ತನಾಗಲು ಸಾಧನೆಯ ಮಾರ್ಗವನ್ನು ಬೋಧಿಸಿದ್ದಾರೆ. ಅಹಿಂಸೆಯಿಂದ ಧ್ಯಾನದವರೆಗೆ ಇರುವ ದಶಧರ್ಮ ಸೂತ್ರಗಳು ಮಾನವ ಜೀವನದ ಉನ್ನತಿ ಹಾಗೂ ಶ್ರೇಯಸ್ಸಿಗೆ ದಾರಿದೀಪವಾಗಿವೆ ಎಂದು ಹೇಳಿದರು.

ಮನುಷ್ಯ ಎಷ್ಟೇ ವರ್ಷ ಬದುಕಿದ್ದರೂ ಒಂದಲ್ಲ ಒಂದು ದಿನ ಮೃತ್ಯು ಎದುರಾಗುವುದು ನಿಶ್ಚಿತ. ಹುಟ್ಟು-ಸಾವಿನ ನಡುವಿನ ಬದುಕನ್ನು ಸಮೃದ್ಧಗೊಳಿಸಿಕೊಳ್ಳಲು ಗುರುಗಳ ಬೋಧಾಮೃತ ಅಗತ್ಯ. ಭೌತಿಕ ಬದುಕಿನೊಂದಿಗೆ ಆಂತರಿಕ ಬದುಕನ್ನೂ ಶ್ರೀಮಂತಗೊಳಿಸಿಕೊಳ್ಳಬೇಕು ಎಂದರು.

ಶ್ರೀ ಕಾಶಿ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಮಾತನಾಡಿ, ಧರ್ಮದ ಉದಾತ್ತ ಮೌಲ್ಯಗಳನ್ನು ಬದುಕಿನ ಆಚರಣೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವೀರಶೈವ ಧರ್ಮದಲ್ಲಿರುವ ಆಧ್ಯಾತ್ಮಿಕ ಸಂಪತ್ತನ್ನು ಅರಿತು, ಆಚರಿಸುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಚಿಕ್ಕಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕೊಣ್ಣೂರು ಗ್ರಾಮದ ಭಕ್ತರ ಬಹುದಿನಗಳ ಕನಸು ಇಂದು ನನಸಾಗಿರುವುದು ಸಂತಸದ ಸಂಗತಿ. ಶ್ರೀ ರಂಭಾಪುರಿ ಹಾಗೂ ಕಾಶಿ ಜಗದ್ಗುರುಗಳು ಕೊಣ್ಣೂರಿಗೆ ಆಗಮಿಸಿರುವುದು ಭಕ್ತರ ಪುಣ್ಯದ ಫಲ ಎಂದರು.

ಸಮಾರಂಭದಲ್ಲಿ ನರಗುಂದ, ಆಲಮೇಲ, ಮಮದಾಪುರ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡರು. ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗಲೆಯರು, ಭಜನಾ ತಂಡಗಳು ಹಾಗೂ ವೀರಗಾಸೆ ಕಲಾವಿದರು ಉತ್ಸವಕ್ಕೆ ಮೆರುಗು ತಂದರು. ಬಳಿಕ ಅನ್ನದಾಸೋಹ ನಡೆಯಿತು.

ಮನುಷ್ಯ ಎಷ್ಟೇ ವರ್ಷ ಬದುಕಿದ್ದರೂ ಒಂದಲ್ಲ ಒಂದು ದಿನ ಮೃತ್ಯು ಎದುರಾಗುವುದು ನಿಶ್ಚಿತ. ಹುಟ್ಟು-ಸಾವಿನ ನಡುವಿನ ಬದುಕು ಸಮೃದ್ಧಗೊಳ್ಳಲು ಗುರು ಬೋಧಾಮೃತ ಅಗತ್ಯ.

— ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು

ನಾನು ಕೇವಲ ನಾಲ್ಕು ಸೆಲ್‌ಗಳ ಗೃಹ ಸಚಿವನಲ್ಲ: ಪ್ರಿಯಾಂಕ್ ಖರ್ಗೆ

0

ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಬಿಡದಿ ವಿಚಾರವನ್ನು ಡೈವರ್ಟ್ ಮಾಡಲು ಜೈಲುಗಳ ಮೇಲೆ ದಾಳಿ ನಡೆಸಿಲ್ಲ. ರಾಜ್ಯದ ಹಲವು ಜೈಲುಗಳ ಮೇಲೆ ದಾಳಿ ನಡೆಸಿದ್ದೇವೆ. ನಾನು ಕೇವಲ ನಾಲ್ಕು ಸೆಲ್‌ಗಳ ಗೃಹ ಸಚಿವನಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಜೈಲುಗಳ ಮೇಲೆ ದಾಳಿ ನಡೆಸಿದ್ದೇವೆ. ಅದನ್ನೂ ಮಾಡಬಾರದಾ ಎಂದು ಪ್ರಶ್ನಿಸಿದರು. ಜೈಲಿನಿಂದ ಪ್ರಜ್ವಲ್ ರೇವಣ್ಣ ನಿರಂತರವಾಗಿ ಫೋನ್‌ನಲ್ಲಿ ಮಾತನಾಡಿರುವ ವಿಚಾರ ಪ್ರಸ್ತಾಪಿಸಿದ ಅವರು, “ಅವರು ಯಾರಿಗೆ ಮಾತನಾಡಿದ್ದಾರೆ? ಇಷ್ಟೆಲ್ಲ ಮಾತನಾಡುವವರು ಯಾಕೆ ಮಾಹಿತಿ ನೀಡಿಲ್ಲ? ಕುಟುಂಬದವರೊಂದಿಗೆ ತಾನೇ ಅವರು ಮಾತನಾಡಿದ್ದು” ಎಂದರು.

ಹಾಸನದಲ್ಲಿ ನಡೆದ ಘಟನೆಗಳ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ನೊಂದ ಕುಟುಂಬಗಳ ಕ್ಷೇಮ ವಿಚಾರಿಸುವುದು ಮೊದಲು ಆಗಬೇಕು ಎಂದು ಹೇಳಿದರು. “ಹಾಸನದಲ್ಲಿ ಏನಾಗಿತ್ತು ಎಂಬುದರ ಬಗ್ಗೆ ಒಂದು ಬಾರಿಯಾದರೂ ಮಾತನಾಡಿದ್ದಾರಾ? ಮೊದಲು ಆ ಕುಟುಂಬಗಳ ಕ್ಷಮೆ ಕೇಳಬೇಕು. ನೊಂದ ಮಹಿಳೆಯರ ಕ್ಷೇಮ ವಿಚಾರಿಸಬೇಕು” ಎಂದು ಹೇಳಿದರು.

ವಿಜಯದಶಮಿಯಿಂದ ಯುದ್ಧ ಆರಂಭವಾಗಲಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಅವರು, “ಅಲ್ಲೋಲ-ಕಲ್ಲೋಲ ಆಗೋದು ಮುಂದಕ್ಕೆ ಹೋಯ್ತಾ?” ಎಂದು ಪ್ರಶ್ನಿಸಿದರು.

ತಮ್ಮ ಕುಟುಂಬವನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೂ ತಿರುಗೇಟು ನೀಡಿದ ಅವರು, “ಯಾರು ಪ್ರಯತ್ನ ಮಾಡುತ್ತಿದ್ದಾರೆ? ನಾವ್ಯಾಕೆ ಅದನ್ನು ಮಾಡೋಣ?” ಎಂದು ಪ್ರಶ್ನಿಸಿದರು.

ಟಿ. ನರಸೀಪುರ ಇನ್‌ಸ್ಪೆಕ್ಟರ್ ವಿರುದ್ಧದ ಹಳೆಯ ಪ್ರಕರಣದ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಅವರ ವಿರುದ್ಧ ಇಲಾಖೆ ವಿಚಾರಣೆ ಆಗಿರಬೇಕು. ಅದಕ್ಕೂ ಗಣೇಶೋತ್ಸವದ ವಿಚಾರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಗಣೇಶೋತ್ಸವಕ್ಕೆ ಸಂಬಂಧಿಸಿದ ಇಲಾಖೆಯ ಎಸ್‌ಒಪಿ ಕುರಿತು ಮಾತನಾಡಿದ ಅವರು, ಆರೋಪಗಳಿದ್ದರೆ ದೂರು ನೀಡಲಿ, ತನಿಖೆ ನಡೆಸಲಾಗುವುದು ಎಂದರು.

ಗಣೇಶೋತ್ಸವವನ್ನು ಎಲ್ಲರೂ ವಿಜೃಂಭಣೆಯಿಂದ ಆಚರಿಸಬೇಕು. ಆದರೆ ಒಂದು ಸಮುದಾಯದ ಸಂಭ್ರಮ ಮತ್ತೊಬ್ಬರಿಗೆ ಆತಂಕ ಉಂಟುಮಾಡಬಾರದು ಎಂದು ಮನವಿ ಮಾಡಿದರು. “ಇವರಿಗೆ ಬೆಂಕಿ ಹಚ್ಚೋದೇ ಕೆಲಸ” ಎಂದು ಇದೇ ವೇಳೆ ಟೀಕಿಸಿದರು.

ಉಮರ್ ಖಾಲಿದ್ ಅವರನ್ನು ರಾಷ್ಟ್ರೀಯವಾದಿ ಎಂದು ಬಿಂಬಿಸುವ ವಿಚಾರದ ಕುರಿತು ಮಾತನಾಡಿದ ಅವರು, ಉಮರ್ ಖಾಲಿದ್ ಎಷ್ಟು ದಿನದಿಂದ ಜೈಲಿನಲ್ಲಿದ್ದಾನೆ ಎಂಬುದನ್ನು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಆತನ ವಿಚಾರಣೆಯನ್ನು ನಡೆಸಿ ನ್ಯಾಯಾಲಯದ ಮೂಲಕ ತೀರ್ಪು ಹೊರಬರಲು ಅವಕಾಶ ನೀಡಬೇಕು ಎಂದರು.

ಟ್ರಯಲ್ ನಡೆಸಿ ಕೋರ್ಟ್ ತೀರ್ಪು ನೀಡಲಿ. ಆಗ ಆತ ಅಪರಾಧಿಯೇ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗುತ್ತದೆ. ಬಿಜೆಪಿ ಹೇಳಿದರೆ ನಾವು ಒಪ್ಪಿಕೊಳ್ಳಬೇಕಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ರಾಜ್ಯದ ಎಲ್ಲ ಜೈಲುಗಳ ಮೇಲೂ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ನಾನು ಕೇವಲ ನಾಲ್ಕು ಸೆಲ್‌ಗಳ ಗೃಹ ಸಚಿವನಲ್ಲ.

ಪ್ರಿಯಾಂಕ್ ಖರ್ಗೆ, ಗೃಹ ಸಚಿವ

ಪ್ರಜಾಪ್ರಭುತ್ವದ ಮೌಲ್ಯ ಅರಿವು ಪ್ರತಿಯೊಬ್ಬರ ಕರ್ತವ್ಯ: ಎಫ್.ಹೆಚ್. ಜಕ್ಕಪ್ಪನವರ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಅದರ ಬೇರುಗಳನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಫ್.ಹೆಚ್. ಜಕ್ಕಪ್ಪನವರ ಹೇಳಿದರು.

ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-2026 ಹಾಗೂ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಅನುಭವ ಮಂಟಪದಿಂದ ಚಾಮರಾಜನಗರದವರೆಗೆ ಸುಮಾರು 31 ಜಿಲ್ಲೆಗಳನ್ನು ಹಾದುಹೋಗುವ ಬೃಹತ್ ಮಾನವ ಸರಪಳಿ ನಿರ್ಮಿಸಿ ಸಂವಿಧಾನದ ಆಶಯಕ್ಕೆ ನಿಷ್ಠೆ ತೋರಿದ ಹೆಮ್ಮೆ ಕರ್ನಾಟಕಕ್ಕಿದೆ. ಇಂದಿನ ಯುವಜನರಲ್ಲಿ ದೇಶದ ಇತಿಹಾಸ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಈ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಯುವ ಸಂಸತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಜಾತಿ, ಭೇದಭಾವಗಳನ್ನು ಮೀರಿ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಿರುವ ಭ್ರಾತೃತ್ವ ಮತ್ತು ಸಮಾನತೆಯ ಮೌಲ್ಯಗಳು ಸಮಾಜದಲ್ಲಿ ಬೇರೂರಬೇಕು. ಯುವ ಮನಸ್ಸುಗಳಿಗೆ ಸಂವಿಧಾನಿಕ ಮೌಲ್ಯಗಳನ್ನು ಪರಿಚಯಿಸಿ ದೇಶದ ಐಕ್ಯತೆ ಕಾಪಾಡುವ ಜವಾಬ್ದಾರಿ ಹಿರಿಯರ ಮೇಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಚಾರ ಸ್ವಾತಂತ್ರ್ಯ ಹಾಗೂ ಮತದಾನದ ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು ನೀಡಿದೆ. ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಪ್ರತಿಯೊಬ್ಬ ನಾಗರಿಕರೂ ತಿಳಿದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ಆಡಳಿತ. ಸಂವಿಧಾನದ ಪೀಠಿಕೆ ‘ನಾವು ಭಾರತದ ಪ್ರಜೆಗಳು’ ಎಂಬ ಸಾಲಿನಿಂದಲೇ ಆರಂಭವಾಗುತ್ತದೆ. ಇದು ದೇಶದ ಸಮಸ್ತ ಜನರ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸದಾನಂದ ಸುಗಂಧಿ ಉಪನ್ಯಾಸ ನೀಡಿದರು.

ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಉಮೇಶ ಬೊಮ್ಮಕ್ಕನವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನ ಮತ್ತು ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು, ಯುವಕರು ಹಾಗೂ ಅಧಿಕಾರಿಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಿ, ಅನುಸರಿಸಿ ಕಾರ್ಯನಿರ್ವಹಿಸಬೇಕು.

— ಎಫ್.ಹೆಚ್. ಜಕ್ಕಪ್ಪನವರ, ವಿಧಾನ ಪರಿಷತ್ ಸದಸ್ಯರು

‘ವಕ್ರತುಂಡ’ ಚಿತ್ರದ ಧಮಾಕಾ: ‘ಜೈ ಗಣೇಶ’ ಟೈಟಲ್ ಟ್ರ್ಯಾಕ್‌ಗೆ ಭರ್ಜರಿ ಸದ್ದು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಡಗರದಲ್ಲಿರುವ ಸಿನಿರಸಿಕರಿಗೆ ಬಹುನಿರೀಕ್ಷಿತ ಕನ್ನಡ ಚಿತ್ರ ‘ವಕ್ರತುಂಡ’ ತಂಡ ಭರ್ಜರಿ ಹಬ್ಬದ ಉಡುಗೊರೆ ನೀಡಿದೆ. ಚಿತ್ರದ ಹೈ-ಎನರ್ಜಿ ಹಾಗೂ ಭಕ್ತಿಭಾವದ ವಿಡಿಯೋ ಟೈಟಲ್ ಟ್ರ್ಯಾಕ್ ‘ಜೈ ಗಣೇಶ’ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಸದ್ದು ಮಾಡುತ್ತಿದೆ.

ಲೋಚನ್ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಹಾಡಿಗೆ ಪ್ರತಿಭಾವಂತ ಸಂಗೀತ ನಿರ್ದೇಶಕ ಜೇಮ್ಸ್ ಆರ್ಕಿಟೆಕ್ಟ್ ಮಾಸ್ ಮತ್ತು ಕ್ಲಾಸ್ ಶೈಲಿಯಲ್ಲಿ ರಾಗ ಸಂಯೋಜನೆ ಮಾಡಿದ್ದಾರೆ. ಹಬ್ಬದ ಜೋಶ್ ಹೆಚ್ಚಿಸುವ ಸಾಹಿತ್ಯವನ್ನು ರಾಘವ ರಂಜನ್ ಬರೆದಿದ್ದು, ಖ್ಯಾತ ಗಾಯಕ ಶಶಾಂಕ್ ಶೇಷಗಿರಿ ತಮ್ಮ ಕಂಠಸಿರಿಯಿಂದ ಹಾಡಿಗೆ ಜೀವ ತುಂಬಿದ್ದಾರೆ.

ಮಾಸ್ಟರ್ ಕೊರಿಯೋಗ್ರಾಫರ್ ಕಂಬಿ ರಾಜು ಅವರ ನೃತ್ಯ ನಿರ್ದೇಶನ, ಛಾಯಾಗ್ರಾಹಕ ಜೈ ಆನಂದ ಅವರ ಛಾಯಾಗ್ರಹಣ ಹಾಗೂ ಎಡಿಟರ್ ರವಿ ತೇಜ ಅವರ ಸಂಕಲನ ಹಾಡಿನ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರತಿಭಾವಂತ ನಿರ್ದೇಶಕ ಹರೀಶ್ ಕುಂದುರ್ ಆಕ್ಷನ್-ಕಟ್ ಹೇಳಿದ್ದಾರೆ.

ಈ ಹಿಂದೆ ನೈಂಟಿಕುಡಿ ಪಲ್ಟಿ ಹೊಡಿ, ದೇವರಾಣೆ, ಸಿಗರೇಟ್ ಸೇದ್ಬೇಡಿ, ಜಿಲೇಬಿ ಚಿತ್ರಗಳನ್ನು ನಿರ್ಮಿಸಿದ್ದ ಲಕ್ಕಿ ಶಂಕರ್ (ಶಂಕರ್ ಎಸ್.) ಕಥೆ ಬರೆದು ಚಿತ್ರವನ್ನು ನಿರ್ಮಿಸಿದ್ದಾರೆ. ಉಮೇಶ್ ಬಿ.ಹೆಚ್. ದಾವಣಗೆರೆ ಸಹ-ನಿರ್ಮಾಪಕರಾಗಿದ್ದಾರೆ. ನಾಗೇಂದ್ರ, ಡಾ. ಪ್ರಭು ಗಂಜಿಹಾಳ್ ಹಾಗೂ ಡಾ. ವೀರೇಶ್ ಹಂಡಿಗಿ ಪಿಆರ್‌ಒಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚಿತ್ರದ ತಾರಾಬಳಗದಲ್ಲಿ ರಚಿತಾ ಮಹಾಲಕ್ಷ್ಮಿ, ಲಕ್ಕಿ ಶಂಕರ್, ಉಮೇಶ್ ಬಿ.ಹೆಚ್. ದಾವಣಗೆರೆ, ಮೂಗು ಸುರೇಶ್, ಸಂಗಮೇಶ್ ಕಾಸ್, ಅಮಿತ್ ರಾವ್, ಆಟೋ ನಾಗರಾಜ್, ಭುವನ ಹರೀಶ್ ಹಾಗೂ ಮೋಹನಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸದ್ಯದಲ್ಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿರುವ ‘ವಕ್ರತುಂಡ’ ಚಿತ್ರದ ‘ಜೈ ಗಣೇಶ’ ವಿಡಿಯೋ ಹಾಡು ಯೂಟ್ಯೂಬ್‌ನಲ್ಲಿ ಸಿನಿರಸಿಕರ ಗಮನ ಸೆಳೆಯುತ್ತಿದ್ದು, ಗಣೇಶೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ.

ನಿದ್ರೆ ಕಡಿಮೆಯಾದರೆ ಕ್ಯಾನ್ಸರ್ ಅಪಾಯ ಹೆಚ್ಚುತ್ತಾ? ತಜ್ಞ ವೈದ್ಯರು ಹೇಳೋದೇನು?

0

ಕೆಲಸದ ಒತ್ತಡ, ರಾತ್ರಿ ತಡವರೆಗೆ ಮೊಬೈಲ್ ಬಳಕೆ ಹಾಗೂ ಮನರಂಜನೆಗಾಗಿ ತಡರಾತ್ರಿವರೆಗೆ ಎಚ್ಚರವಾಗಿರುವುದು ಸೇರಿದಂತೆ ಹಲವು ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಹಲವರ ನಿದ್ರೆಯ ಅವಧಿ ಕಡಿಮೆಯಾಗುತ್ತಿದೆ.

ಆದರೆ ನಿರಂತರವಾಗಿ ಸಾಕಷ್ಟು ನಿದ್ರೆ ಮಾಡದಿರುವುದು ಆರೋಗ್ಯದ ಮೇಲೆ ಹಲವು ರೀತಿಯ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಹಾಗಾದರೆ ನಿದ್ರೆಯ ಕೊರತೆಯಿಂದ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿದೆ. ಈ ಕುರಿತು ಫರಿದಾಬಾದ್‌ನ ಸರ್ವೋದಯ ಆಸ್ಪತ್ರೆಯ ವೈದ್ಯಕೀಯ ಆಂಕಾಲಜಿ, ರಕ್ತಶಾಸ್ತ್ರ ಮತ್ತು ಬಿಎಂಟಿ ವಿಭಾಗದ ಮುಖ್ಯಸ್ಥ ಡಾ. ಆಶಿಶ್ ಬಿ. ಅಗರ್ವಾಲ್ ಅವರು ಮಾಹಿತಿ ನೀಡಿದ್ದಾರೆ.

ಅವರ ಪ್ರಕಾರ, ನಿದ್ರೆಯ ಕೊರತೆ ಮತ್ತು ಕ್ಯಾನ್ಸರ್ ನಡುವೆ ನೇರ ಕಾರಣ-ಪರಿಣಾಮದ ಸಂಬಂಧವಿದೆ ಎಂಬುದನ್ನು ಪ್ರಸ್ತುತ ಮಾನವ ಅಧ್ಯಯನಗಳು ಸ್ಪಷ್ಟವಾಗಿ ಸಾಬೀತುಪಡಿಸಿಲ್ಲ. ಆದರೆ ದೀರ್ಘಕಾಲದ ನಿದ್ರೆಯ ಕೊರತೆ ಹಾಗೂ ದೇಹದ ಸಹಜ ಜೈವಿಕ ಗಡಿಯಾರದ ಅಸ್ತವ್ಯಸ್ತತೆ ಕ್ಯಾನ್ಸರ್ ಬೆಳವಣಿಗೆಗೆ ಸಂಬಂಧಿಸಿದ ಕೆಲವು ಜೈವಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಷ್ಟಕ್ಕೂ ನಿದ್ರೆ ಕಡಿಮೆಯಾದರೆ ದೇಹದಲ್ಲಿ ಏನಾಗುತ್ತದೆ?

ಒಂದು ಅಥವಾ ಎರಡು ರಾತ್ರಿ ಕಡಿಮೆ ನಿದ್ರೆ ಮಾಡಿದ ಮಾತ್ರಕ್ಕೆ ಕ್ಯಾನ್ಸರ್ ಬರುತ್ತದೆ ಎಂದು ಆತಂಕಪಡುವ ಅಗತ್ಯವಿಲ್ಲ. ಆದರೆ ನಿದ್ರೆಯ ಕೊರತೆ ನಿರಂತರ ಅಭ್ಯಾಸವಾದಾಗ ಸಮಸ್ಯೆಗಳು ಉಂಟಾಗಬಹುದು. ಪ್ರತಿದಿನ ತಡವಾಗಿ ಮಲಗುವುದು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಅಥವಾ ನಿದ್ರೆಯ ಸಮಯ ಪದೇಪದೇ ಬದಲಾಗುವುದರಿಂದ ದೇಹದ ಸಿರ್ಕೇಡಿಯನ್ ರಿದಮ್ ಅಂದರೆ ಸಹಜ ಜೈವಿಕ ಗಡಿಯಾರಕ್ಕೆ ತೊಂದರೆಯಾಗಬಹುದು.

ಇದರಿಂದ ಹಾರ್ಮೋನ್‌ಗಳ ಸಮತೋಲನ, ಚಯಾಪಚಯ, ರೋಗನಿರೋಧಕ ವ್ಯವಸ್ಥೆ ಹಾಗೂ ದೇಹದ ಚೇತರಿಕೆಯ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಇನ್ನು ನಿದ್ರೆ-ಎಚ್ಚರದ ಚಕ್ರವನ್ನು ನಿಯಂತ್ರಿಸುವ ಮೆಲಟೋನಿನ್ ಹಾರ್ಮೋನ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ರಾತ್ರಿ ವೇಳೆ ನಿರಂತರವಾಗಿ ಬೆಳಕಿಗೆ, ಅದರಲ್ಲೂ ಮೊಬೈಲ್ ಹಾಗೂ ಇತರ ಪರದೆಗಳ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮೆಲಟೋನಿನ್‌ನ ಸಹಜ ಕಾರ್ಯಕ್ಕೆ ಅಡ್ಡಿಯಾಗಬಹುದು.

ದೀರ್ಘಕಾಲ ನಿದ್ರೆಯ ಕೊರತೆಯಿಂದ ದೇಹದಲ್ಲಿ ಉರಿಯೂತ ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ ಆಕ್ಸಿಡೇಟಿವ್ ಒತ್ತಡ ಹೆಚ್ಚಾದರೆ ಜೀವಕೋಶಗಳಲ್ಲಿನ ಪ್ರೋಟೀನ್‌ಗಳು ಮತ್ತು ಡಿಎನ್‌ಎಗೆ ಹಾನಿಯಾಗಬಹುದು. ಆದರೆ ಡಿಎನ್‌ಎಗೆ ಹಾನಿಯಾದ ಮಾತ್ರಕ್ಕೆ ಕ್ಯಾನ್ಸರ್ ಉಂಟಾಗುತ್ತದೆ ಎಂದರ್ಥವಲ್ಲ. ಇಂತಹ ಹಾನಿಯನ್ನು ಸರಿಪಡಿಸುವ ಸಹಜ ವ್ಯವಸ್ಥೆ ದೇಹದಲ್ಲಿದೆ.

ಹಾಗಾದರೆ ಉತ್ತಮ ನಿದ್ರೆ ಕ್ಯಾನ್ಸರ್ ತಡೆಯುತ್ತದೆಯೇ?

ಉತ್ತಮ ಗುಣಮಟ್ಟದ ನಿದ್ರೆ ಒಟ್ಟಾರೆ ಆರೋಗ್ಯಕ್ಕೆ ಬಹಳ ಮುಖ್ಯವಾದರೂ, ನಿದ್ರೆಯಿಂದ ಮಾತ್ರ ಕ್ಯಾನ್ಸರ್ ತಡೆಯಬಹುದು ಎಂದು ಹೇಳಲು ಸಾಧ್ಯವಿಲ್ಲ. ವಯಸ್ಕರು ನಿಯಮಿತವಾಗಿ ಕನಿಷ್ಠ ಏಳು ಗಂಟೆಗಳಷ್ಟು ಉತ್ತಮ ಗುಣಮಟ್ಟದ ನಿದ್ರೆ ಪಡೆಯುವುದು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ.

ಜತೆಗೆ ಧೂಮಪಾನದಿಂದ ದೂರವಿರುವುದು, ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು, ಮದ್ಯಪಾನ ಕಡಿಮೆ ಮಾಡುವುದು, ನಿಯಮಿತ ವ್ಯಾಯಾಮ ಮಾಡುವುದು ಹಾಗೂ ಅಗತ್ಯ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಒಟ್ಟಾರೆ, ನಿದ್ರೆ ಕಡಿಮೆಯಾದರೆ ನೇರವಾಗಿ ಕ್ಯಾನ್ಸರ್ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ದೀರ್ಘಕಾಲದ ನಿದ್ರೆಯ ಕೊರತೆ ದೇಹದ ಹಲವು ಪ್ರಮುಖ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಪ್ರತಿದಿನ ಸಾಕಷ್ಟು ಹಾಗೂ ನಿಯಮಿತ ನಿದ್ರೆ ಪಡೆಯುವುದನ್ನು ಆರೋಗ್ಯಕರ ಜೀವನಶೈಲಿಯ ಪ್ರಮುಖ ಭಾಗವಾಗಿ ಪರಿಗಣಿಸುವುದು ಉತ್ತಮ.

ಪ್ರಜ್ವಲ್ ಮುಗಿಸಿ ಮಗನನ್ನ ಪ್ರತಿಷ್ಠಾಪಿಸಲು ಹೆಚ್‌ಡಿಕೆ ಯತ್ನಿಸುತ್ತಿದ್ದಾರೆ: ಬಾಲಕೃಷ್ಣ

0

ರಾಮನಗರ: ನೈಸ್ ಮತ್ತು ಕೆಪಿಎಸ್‌ಸಿ ಅಕ್ರಮಗಳ ವಿಚಾರವನ್ನು ಮುಚ್ಚಿಹಾಕಲು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂಬ ಹೆಚ್.ಡಿ. ಕುಮಾರಸ್ವಾಮಿ ಆರೋಪವನ್ನು ಸಚಿವ ಹೆಚ್.ಸಿ. ಬಾಲಕೃಷ್ಣ ತೀವ್ರವಾಗಿ ಖಂಡಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ನೈಸ್ ಹಾಗೂ ಕೆಪಿಎಸ್‌ಸಿ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವ ಅವರು, ಪ್ರಜ್ವಲ್ ಪ್ರಕರಣದ ಬಗ್ಗೆ ಮಾತನಾಡುವುದು ಅಸಹ್ಯ ಎಂದು ಟೀಕಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರನ್ನು ರಾಜಕೀಯವಾಗಿ ಮುಗಿಸಿ ತಮ್ಮ ಮಗನನ್ನು ಪ್ರತಿಷ್ಠಾಪಿಸುವ ಉದ್ದೇಶ ಕುಮಾರಸ್ವಾಮಿ ಅವರಿಗಿದೆ ಎಂದು ಬಾಲಕೃಷ್ಣ ಆರೋಪಿಸಿದ್ದಾರೆ. ಪದೇ ಪದೇ ಪ್ರಜ್ವಲ್ ಪ್ರಕರಣದ ಬಗ್ಗೆ ಮಾತನಾಡುವ ಮೂಲಕ ಅವರನ್ನೇ ಜೈಲಿಗೆ ಕಳುಹಿಸಿದರು ಎಂದು ಅವರು ಹೇಳಿದ್ದಾರೆ.

ಕೇಂದ್ರ ಸಚಿವ ಸ್ಥಾನದಲ್ಲಿರುವ ಕುಮಾರಸ್ವಾಮಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಕೇಂದ್ರ ಸಚಿವ ಎಂಬುದನ್ನು ಮರೆತು ಗ್ರಾಮ ಪಂಚಾಯಿತಿ ಸದಸ್ಯರಂತೆ ವರ್ತಿಸುತ್ತಿದ್ದಾರೆ ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದರು. ಪ್ರಜ್ವಲ್ ಬಳಿ ಮೊಬೈಲ್ ಹೇಗೆ ಬಂತು ಎಂಬ ಅನುಮಾನವಿದ್ದರೆ ಸಿಬಿಐ ತನಿಖೆಗೆ ಪತ್ರ ಬರೆಯಲಿ ಎಂದು ಅವರು ಸವಾಲು ಹಾಕಿದರು.

ರಾಜ್ಯ ಸರ್ಕಾರದ 100ನೇ ದಿನದ ಸಾಧನಾ ಕಾರ್ಯಕ್ರಮವನ್ನು ಕುಮಾರಸ್ವಾಮಿ ಟೀಕಿಸಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಬಾಲಕೃಷ್ಣ, ಕುಮಾರಸ್ವಾಮಿ ತಮ್ಮನ್ನು ಮಾತ್ರ ಮೇಧಾವಿ ಎಂದುಕೊಂಡಿದ್ದಾರೆ. ಉಳಿದವರೆಲ್ಲ ದಡ್ಡರು ಎಂಬ ಮನಸ್ಥಿತಿ ಅವರದ್ದು ಎಂದು ವ್ಯಂಗ್ಯವಾಡಿದರು.

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಸಂಚು ನಡೆದಿದೆ ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿದ ಅವರು, ಯಾರೂ ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನಮ್ಮನ್ನು ಮುಗಿಸಲು ನೋಡಿದರೆ ನಾವು ಅದನ್ನೇ ಮಾಡುತ್ತೇವೆ, ಇದು ರಾಜಕಾರಣ ಎಂದರು. ದೇವೇಗೌಡರು ಮತ್ತು ಕುಮಾರಸ್ವಾಮಿ ಹೆಸರು ಹೇಳಿದರೆ ಒಕ್ಕಲಿಗರು ಎದ್ದು ನಿಲ್ಲುತ್ತಾರೆ ಎಂಬ ಸೆಂಟಿಮೆಂಟ್ ರಾಜಕಾರಣವನ್ನು ಕೈಬಿಡಬೇಕು ಎಂದು ಸಲಹೆ ನೀಡಿದರು.

ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದು, ರಾಜ್ಯಕ್ಕೆ ಉದ್ಯೋಗಗಳನ್ನು ತರಲಿ. ರಾಜ್ಯ ಸರ್ಕಾರ ಅಗತ್ಯ ಜಾಗ ಒದಗಿಸಲು ಸಿದ್ಧವಿದೆ ಎಂದು ಬಾಲಕೃಷ್ಣ ಹೇಳಿದರು. ಇನ್ನು ವಿದೇಶದಿಂದ ತಾವು ವಾಪಸ್ ಬರುವವರೆಗೆ ಯಾರೂ ನಿದ್ದೆ ಮಾಡಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ ಅವರು, ಅವರು ಬರುವವರೆಗೂ ನಿದ್ದೆ ಮಾಡಿರಲಿಲ್ಲ, ಇನ್ನು ಮುಂದೆ ನೆಮ್ಮದಿಯಾಗಿ ನಿದ್ದೆ ಮಾಡುತ್ತೇವೆ ಎಂದರು.

ಎಲ್ಲಿ ಎದೆ ಡಮ್ ಅನ್ನುತ್ತೋ ಎಂಬ ಭಯದಿಂದ ಎದೆ ಗಟ್ಟಿಯಾಗಿ ಇಟ್ಟುಕೊಂಡಿದ್ದೆವು ಎಂದು ವ್ಯಂಗ್ಯವಾಡಿದ ಬಾಲಕೃಷ್ಣ, ಇಂತಹ ಚಿಲ್ಲರೆ ಹೇಳಿಕೆಗಳನ್ನು ನೀಡುವುದನ್ನು ಕುಮಾರಸ್ವಾಮಿ ನಿಲ್ಲಿಸಬೇಕು ಎಂದು ಹೇಳಿದರು.