Home Blog Page 604

ಕೊರೊನಾ ಸೋಂಕು ಮನುಕುಲಕ್ಕೆ ಮಾರಕ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಕೊರೊನಾ ಸೋಂಕು ಜಾಗತಿಕವಾಗಿ ಮಾನವ ಕುಲಕ್ಕೆ ಮಾರಕವಾಗಿದ್ದು, ನಮ್ಮ ಜೀವ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ಸೋಂಕು ನಿಯಂತ್ರಿಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ ಪಾಟೀಲ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಕೋವಿಡ್-೧೯ ಜನಾಂದೋಲನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್-19 ಸೋಂಕಿಗೆ ಸದ್ಯ ಔ?ಧ ಇಲ್ಲದಿರುವ ಕಾರಣ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಸುರಕ್ಷಿತವಾಗಿರಲು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ನಿಯಂತ್ರಿಸಬೇಕು. ಆಗಾಗ ಸೋಪು ಹಾಗೂ ನೀರಿನಿಂದ ಕೈ ತೊಳೆದುಕೊಳ್ಳುವ ಮೂಲಕ ಕೋವಿಡ್‌ನಿಂದ ದೂರವಿರಬೇಕು. ನಾವು ಸುರಕ್ಷಿತವಾಗಿದ್ದು, ಇತರರನ್ನೂ ಸುರಕ್ಷಿತವಾಗಿರಿಸಬೇಕು ಎಂದರು.
ಜನಸಂದಣಿ ಇರುವ ಪ್ರದೇಶಗಳಲ್ಲಿ ಜಾಗೃತರಾಗಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೋವಿಡ್‌ಗೆ ಸಂಬಂಧಿಸಿದ ಯುಕ್ತವಾದ ವರ್ತನೆಯನ್ನು ಅನುಸರಿಸುವುದರ ಜತೆಗೆ ಬೇರೆಯವರು ಅದನ್ನು ಅನುಸರಿಸುವಂತೆ ಉತ್ತೇಜನ ನೀಡಬೇಕು. ಈ ಮೂಲಕ ಮಾರಣಾಂತಿಕ ವೈರಾಣು ಹರಡುವುದನ್ನು ತಡೆಗಟ್ಟಬೇಕು ಎಂದು ನ್ಯಾ| ಪಾಟೀಲ ಹೇಳಿದರು.
ಕೋವಿಡ್-19 ತಡೆಗಟ್ಟವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಜಿಲ್ಲಾ ಪೊಲೀಸ್ ವರಿ?ಧಿಕಾರಿ ಯತೀಶ್ ಎನ್., ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಂ.ವಿ. ನರಸಿಂಹಸಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸತೀಶ್ ಬಸರೀಗಿಡದ, ಜಿಲ್ಲಾ ನ್ಯಾಯವಾದಿಗಳ ಸಂಘ, ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಇದ್ದರು.

ಪುನೀತ್ ರಾಜಕುಮಾರ್ ಅಭಿನಯದ ’ಜೇಮ್ಸ್’ ಚಿತ್ರೀಕರಣ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ’ಜೇಮ್ಸ್’ ಸಿನಿಮಾ ಚಿತ್ರೀಕರಣ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ನಡೆಯಿತು. ಚಿತ್ರದ ಸಾಹಸ ದೃಶ್ಯವೊಂದರ ಚಿತ್ರೀಕರಣಕ್ಕಾಗಿ ಸೆಟ್ ಹಾಕಲಾಗಿದ್ದು, ಒಂದು ವಾರದಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಈಗಾಗಲೇ ಹೊಸಪೇಟೆ ಸುತ್ತಲಿನ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿರುವ ಬಯಲು ಹಾಗೂ ಬೆಟ್ಟದ ಸುಂದರ ಪ್ರಾಕೃತಿಕ ಸ್ಥಳದಲ್ಲಿ ಸೆಟ್ ಹಾಕಲಾಗಿತ್ತು.
ಗಂಗಾವತಿಯಲ್ಲಿ ಜೇಮ್ಸ್ ಚಿತ್ರೀಕರಣ: ಈ ಮೊದಲು ಅ. 21ಕ್ಕೆ ಶೂಟಿಂಗ್ ನಿಗದಿ ಮಾಡಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಶೂಟಿಂಗ್ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ಆಗಮಿಸಿದ ಪುನೀತ್, ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ವಾಪಸ್ ಹೋದರು. ಸಂಜೆ ಮತ್ತೆ ಶೂಟಿಂಗ್ ನಡೆಯಿತು. ಚಿತ್ರೀಕರಣ ವೀಕ್ಷಿಸಲು ನಗರ ಹಾಗೂ ಮಲ್ಲಾಪುರ ಗ್ರಾಮದ ಸುತ್ತಲಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ, ಪೊಲೀಸರು ಮತ್ತು ಚಿತ್ರ ತಂಡದ ಬೌನ್ಸರ್‌ಗಳ ಭದ್ರತೆಯಿದ್ದ ಕಾರಣ ಬೆಟ್ಟ ಹತ್ತಿ, ದೂರದಿಂದಲೇ ಶೂಟಿಂಗ್ ವೀಕ್ಷಿಸಿದರು.

ರಸಗೊಬ್ಬರ ಪರವಾನಿಗೆ ಅಮಾನತು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮುಂಡರಗಿಯ ಅನಧಿಕೃತ ಕೃಷಿ ಪರಿಕರ ದಾಸ್ತಾನು ಮಳಿಗೆ ಜೆ.ಎಚ್.ಎಚ್. ಅಗ್ರೋ ಕೇಂದ್ರಕ್ಕೆ ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಅ. 10ರಂದು ಭೇಟಿ ನೀಡಿ ಪರಿಶೀಲಿಸಲಾಯಿತು.
ಈ ವೇಳೆ ರಸಗೊಬ್ಬರ ಪರವಾನಿಗೆಯಲ್ಲಿ ಅನುಮತಿಸದ ರಸಗೊಬ್ಬರವಲ್ಲದ ದಾಸ್ತಾನು ಕಂಡು ಬಂದಿದ್ದು, ಪರವಾನಗಿದಾರರು ರಸಗೊಬ್ಬರ ನಿಯಂತ್ರಣಾಜ್ಞೆ ಉಲ್ಲಂಘಿಸಿದ್ದಾರೆ. ಹೀಗಾಗಿ ರಸಗೊಬ್ಬರ ಪರಿವೀಕ್ಷಕರು ಕೃಷಿ ಮಳಿಗೆಯ ರಸಗೊಬ್ಬರವಲ್ಲದ ದಾಸ್ತಾನನ್ನು ಜಪ್ತಿ ಮಾಡಿದ್ದಾರೆ.
ರಸಗೊಬ್ಬರ ನಿಯಂತ್ರಣಾಜ್ಞೆ ನಿಯಮ ಉಲ್ಲಂಘಿಸಿರುವುದರಿಂದ ಅ. 13ರಿಂದ ಮುಂದಿನ 15 ದಿನಗಳವರೆಗೆ ರಸಗೊಬ್ಬರ ಪರವಾನಿಗೆ ಅಮಾನತುಗೊಳಿಸಿ ಮುಂಡರಗಿಯ ಸಹಾಯಕ ಕೃಷಿ ನಿರ್ದೇಶಕರು ಆದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹತ್ರಾಸ್ ಪ್ರಕರಣ: ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ತನಿಖೆಗೆ ಒಪ್ಪಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವತಿ ಮೇಲೆ ದೌರ್ಜನ್ಯ ನಡೆದಿರುವ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕೆಂದು ಸಿಐಟಿಯು ಒತ್ತಾಯಿಸಿದೆ.
ಸಿಐಟಿಯು, ಎಐಕೆಎಸ್, ಎಐಎಡಬ್ಲ್ಯೂಯು ಮತ್ತು ಎಐಡಿಡಬ್ಲ್ಯೂಎ ಸಂಘಟನೆಗಳ ನಿಯೋಗವು ಹತ್ರಾಸ್‌ನ ಗುಲರಿ ಗ್ರಾಮಕ್ಕೆ ಅ. ೪ರಂದು ಭೇಟಿ ನೀಡಿ ಮೃತ ಯುವತಿಯ ಕುಟುಂಬಕ್ಕೆ ಬೆಂಬಲ ಹಾಗೂ ಸೌಹಾರ್ದದ ಭರವಸೆ ನೀಡಿತ್ತು.
ಉನ್ನಾವೋ ಮಾದರಿಯ ಪ್ರಕರಣಗಳು ಹೆಚ್ಚುತ್ತಿದ್ದು, ಯೋಗಿ ನೇತೃತ್ವದ ಸರ್ಕಾರ ಉತ್ತರ ಪ್ರದೇಶದಲ್ಲಿ ಅಪರಾಧೀಕರಣದ ಆಳ್ವಿಕೆಯನ್ನು ಬಲಪಡಿಸುತ್ತಿದೆ. ದೌರ್ಜನ್ಯಗಳು ಹೆಚ್ಚುತ್ತಿವೆ. ರಾಜ್ಯವು ಮೇಲ್ಜಾತಿ ಭೂಮಾಲಕ ಶಕ್ತಿಗಳ ಪ್ರಯೋಗಾಲಯವಾಗಿದೆ. ದಲಿತರನ್ನು ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುವವರನ್ನು ಹೆದರಿಸಲಾಗುತ್ತಿದೆ. ಇದರ ವಿರುದ್ಧ ನಿರಂತರ ಹೋರಾಟಗಳ ಭಾಗವಾಗಿ ಸಿಐಟಿಯು, ಎಐಕೆಎಸ್ ಮತ್ತು ಎಐಎಡಬ್ಲ್ಯು ಸಂಘಟನೆಗಳ ಜಂಟಿ ಸಭೆಯನ್ನು ನಡೆಸಲಾಗಿದ್ದು, ದಲಿತರು, ಮಹಿಳೆಯರು ಮತ್ತು ಸಾಮಾಜಿಕವಾಗಿ ಹಿಂದುಳಿದವರ ಮೇಲಿನ ದಮನ, ದೌರ್ಜನ್ಯಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಭಾಗವಾಗಿ ಕೊಪ್ಪಳ ತಾಲೂಕು ಜಂಟಿ ಕ್ರಿಯಾ ಸಮಿತಿ ತಹಸೀಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ನ್ನು ಹಿಂದಿನ ಸರ್ಕಾರಗಳು ಸಮರ್ಪಕವಾಗಿ ಜಾರಿ ಮಾಡಲಿಲ್ಲ ಆದರೆ ಬಿಜೆಪಿ ಸರ್ಕಾರ ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಹತ್ರಾಸ್‌ನಲ್ಲಿ ೧೯ರ ಹರೆಯದ ದಲಿತ ಯುವತಿಯನ್ನು ಮೇಲ್ಜಾತಿ ಭೂಮಾಲೀಕರು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಅಮಾನುಷ ಕೃತ್ಯ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಬೇಡಿಕೆಗಳು
ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಿಗದಿತ ಅವಧಿಯಲ್ಲಿ ಹತ್ರಾಸ್ ಪ್ರಕರಣದ ಪರಿಣಾಮಕಾರಿ ತನಿಖೆ ಮಾಡಬೇಕು. ಕರ್ತವ್ಯ ನಿರ್ವಹಿಸದ ಪೊಲೀಸ್ ಮತ್ತು ಇತರ ಅಧಿಕಾರಿಗಳಿಗೆ ಕಠಿನ ಶಿಕ್ಷೆ ವಿಧಿಸಬೇಕು. ಮೃತ ಯುವತಿಯ ಕುಟುಂಬಕ್ಕೆ ಗರಿಷ್ಠ ರಕ್ಷಣೆ ನೀಡಬೇಕು. ಎಲ್ಲ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ದೊರಕಿಸಬೇಕು. ನ್ಯಾಯಮೂರ್ತಿ ವರ್ಮಾ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು. ದೌರ್ಜನ್ಯಕ್ಕೊಳಗಾದವರ ಕುಟುಂಬಗಳಿಗೆ ಕೃಷಿ ಭೂಮಿ ಮತ್ತು ವಾಸಕ್ಕೆ ಮನೆಗಳು ಒದಗಿಸಬೇಕು. ಎಲ್ಲರಿಗೂ ಉದ್ಯೋಗವನ್ನು ಮತ್ತು ಕನಿಷ್ಠ ವೇತನವನ್ನು ಖಚಿತಪಡಿಸಬೇಕು. ಮೀಸಲಾತಿ, ದಲಿತರ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಹಿಳಾ ದೌರ್ಜನ್ಯ ವಿರೋಧಿ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಿಐಟಿಯು ಸಂಘಟನೆಯ ಕಾಸಿಂ ಸರ್ದಾರ, ಹನುಮೇಶ ಕಲ್ಮಂಗಿ, ಸುಂಕಪ್ಪ ಗದಗ, ಅಂದಪ್ಪ ಬರದೂರು, ಹುಸೇನಸಾಬ ನದಾಫ್, ಸಂಜಯ್ ದಾಸ, ಹುಲುಗಪ್ಪ ಗೋಕಾವಿ, ?ಣ್ಮುಖಪ್ಪ ಹಿರೇಬೀಡನಾಳ, ಉಮೇಶ ಬಳಗೇರಿ, ಇಸ್ಮಾಯಿಲ್ ಅಗಳಕೇರಾ, ವೆಂಕಟೇಶ ಅಗಳಕೇರಾ, ಬಿ. ಕಂಠಿಬಸವೇಶ್ವರ, ನಿಂಗಪ್ಪ ಹಳ್ಳಿ, ಅಮೀನಾ ಬೇಗಂ, ಉಸ್ಮಾನ ಸಾಬ, ಅಕ್ಕಮ್ಮ ಗೊಲ್ಲರ, ಬಂದಮ ಹಕಾರಿ, ಗಂಗವ್ವ, ರೇಣುಕವ್ವ ಇಡಕಲ್, ನಿಂಗಪ್ಪ ಪುರದ, ಹನುಮಪ್ಪ ಗೌಡ್ರ, ಭರಮಣ್ಣ ಭೀಮನೂರು, ಫಕೀರಮ್ಮ ಮಿರಗನತಾಂಡಿ, ಯಮುನಾ ಹೊಸಮನಿ, ಶೃತಿ ಆದಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 

ಜಾಗತಿಕ ಹಿರಿಯರ ದಿನಾಚರಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ನರಗುಂದ ಪಟ್ಟಣದ ಬಾಬಾಸಾಹೇಬ ಭಾವೆ ಆರೋಗ್ಯ ಕೇಂದ್ರದಲ್ಲಿ ಅ. 16ರಂದು ಜಾಗತಿಕ ಹಿರಿಯರ ದಿನವನ್ನು ಆಚರಿಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಜಾಗೃತಿ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಅನಂತರ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವನ್ನು ತಹಸೀಲ್ದಾರ ಎ.ಎಚ್. ಮಹೇಂದ್ರ ಉದ್ಘಾಟಿಸಿದರು.
ತಹಸೀಲ್ದಾರರು ಮಾತನಾಡಿ, ಸರ್ಕಾರ ಹಿರಿಯರಿಗಾಗಿ ರೂಪಿಸಿರುವ ಯೋಜನೆಗಳ ಕುರಿತು ಗ್ರಾಮ ಮಟ್ಟದಲ್ಲಿ ಎಲ್ಲರಿಗೂ ಜಾಗೃತಿ ಮೂಡಿಸಬೇಕು. ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ರೇಣುಕಾ ಕೊರವನವರ ಮಾತನಾಡಿ, ಇಲಾಖೆಯ ಆದೇಶದಂತೆ ಅ. 1ರಂದು ಜಾಗತಿಕ ಹಿರಿಯರ ದಿನವನ್ನು ಆಚರಿಸಲಾಗುತ್ತದೆ. ಈ ಮುಖಾಂತರ ಹಿರಿಯ ನಾಗರಿಕರಿಗಾಗಿ ನಮ್ಮ ಇಲಾಖೆಯಲ್ಲಿರುವ ಸೌಲಭ್ಯಗಳ ಕುರಿತು ಮತ್ತು ಹಿರಿಯರು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಆಸ್ಪತ್ರೆಯ ಹಿರಿಯ ಆರೋಗ್ಯ ವಿಭಾಗದ ಶಿಕ್ಷಣಾಧಿಕಾರಿ ಜಿ.ವಿ. ಕೊಣ್ಣೂರ ಉಪನ್ಯಾಸ ನೀಡಿ, ವಯಸ್ಸಾದವರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು, ಅವುಗಳ ಪರಿಹಾರ ಹಾಗೂ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು,
ಭುವನೇಶ್ವರಿ ಕೆ. ಪ್ರಾರ್ಥನೆ ಗೀತೆ ಹಾಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಬಿ. ಜೋಶಿ ಸ್ವಾಗತಿಸಿದರು. ಎಂ.ಆರ್. ಕುಲಕರ್ಣಿ, ನಾಗರಾಜ ವಿಠಪ್ಪನವರ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ತಾಲೂಕು ಆರೋಗ್ಯಾಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಬಳಸಿ: ಹುಕ್ಕೇರಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ಕೊರೊನಾ ಬಹಳಷ್ಟು ಅಪಾಯಕಾರಿಯಾಗಿ ಕಂಡುಬಂದಿದ್ದು, ಇದರ ನಿಯಂತ್ರಣಕ್ಕಾಗಿ ಎಲ್ಲರೂ ಮಾಸ್ಕಗಳನ್ನು ಹಾಗೂ ಸ್ಯಾನಿಟೈಸರ್ ಉಪಯೋಗಿಸುವುದನ್ನು ಕಡ್ಡಾಯವಾಗಿ ಮುಂದುವರೆಸಿ ಆರೋಗ್ಯ ಕಾಪಾಡಿಕೊಳ್ಳಲು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎಲ್.ಎಸ್. ಹುಕ್ಕೇರಿ ತಿಳಿಸಿದರು.
ನರಗುಂದ ಜೆಎಂಎಫ್‌ಸಿ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆ, ಆರೋಗ್ಯ ಇಲಾಖೆ ಹಾಗೂ ಕಾನೂನು ನೆರವು ಸಮಿತಿ ಮತ್ತು ನ್ಯಾಯವಾದಿಗಳ ಸಂಘದ ವತಿಯಿಂದ ಅ. 17ರಂದು ಕೊರೊನಾ ತಡೆಗಟ್ಟಲು ಹಾಕಿಕೊಂಡ ಜನಜಾಗೃತಿ ಅಭಿಯಾನ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ರಮೇಶ ನಾಯ್ಕರ್, ಸಿಪಿಐ ಡಿ.ಬಿ. ಪಾಟೀಲ, ಎಎಸ್‌ಐ ವಿ.ಜಿ. ಪವಾರ, ಎಸ್.ಆರ್. ರಾಯನಗೌಡ್ರ, ಎಂ.ವಿ. ಮೂಲಿಮನಿ, ಎಂ.ಆರ್. ಕುಲಕರ್ಣಿ, ಜಿ.ವಿ. ಕೊಣ್ಣೂರ, ಸಿ.ಎಸ್. ಪಾಟೀಲ, ಎಂ.ಎಚ್. ತಹಸೀಲ್ದಾರ, ಎಂ.ಆರ್. ಕುಲಕರ್ಣಿ, ಕೆ.ಎಸ್. ಹೂಲಿ, ಆರ್.ಟಿ. ಪಾಟೀಲ, ಎಸ್.ಎಂ. ಗುಗ್ಗರಿ, ಆನಂದ ಭೋಸಲೆ, ಎಸ್.ಎಂ. ಜಲಗೇರಿ, ನಿಂಗಪ್ಪ ಚಂದ್ರ, ಅಭಿಷೇಕ ಹಡಪದ, ಆನಂದ ಹೂಗಾರ, ಎಸ್.ಟಿ. ಗಣಿ, ಎ.ಆರ್. ತಳವಾರ ಉಪಸ್ಥಿತರಿದ್ದರು.

ಬಳಗಾನೂರು ಗ್ರಾಮದ ಘಟನೆಯ ಅಸಲಿಯತ್ತು ಏನು?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಯಣ್ಣ ಮೂರ್ತಿ ತೆರವುಗೊಳಿಸಿದ ಘಟನೆಯ ಕುರಿತ ಅಸಲಿಯತ್ತು ಈಗ ಹೊರಬಂದಿದೆ. 2019 ಜನವರಿ 17 ರಂದು ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗಾಗಿ ಬಳಗಾನೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್‌ಗೆ ಗ್ರಾಮಪಂಚಾಯತಿಯವರು ಮೂರ್ತಿ ಪ್ರತಿಷ್ಠಾಪನೆಗಾಗಿ 500 ರೂಪಾಯಿಗಳ ಪಾವತಿಯನ್ನೂ ಪಡೆದಿದ್ದಾರೆ.
ಅದಕ್ಕೂ ಒಂದು ದಿನ ಹಿಂದೆ ಅಂದರೆ 2019 ರ ಜನವರಿ 16 ರಂದು ಮೂರ್ತಿ ಸ್ಥಾಪನೆಗೆ ಪರವಾನಿಗೆ ಪತ್ರವನ್ನೂ ಸಹ ಗ್ರಾಮಪಂಚಾಯತಿಯ ಕಡೆಯಿಂದ ಸದರಿ ಟ್ರಸ್ಟ್‌ಗೆ ನೀಡಲಾಗಿದೆ. ಅದರಂತೆ ನಿನ್ನೆ ರಾತ್ರಿ ಟ್ರಸ್ಟ್‌ನ ವತಿಯಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ಆದರೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಗ್ರಾಮಕ್ಕೆ ಬಂದು ಹಾಲುಮತ ಸಮಾಜದವರನ್ನು ಮೂರ್ತಿ ಕುರಿತು ಮಾತನಾಡುವುದಾಗಿ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿಸಿ ಮತ್ತೊಂದೆಡೆ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಬೇರೆಡೆ ಸ್ಥಳಾಂತರ ಮಾಡಿದ್ದಾರೆ ಎಂದು ಸಮಾಜದ‌ ರವಿ ಆರೋಪ ಮಾಡಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಸಭೆ ಸೇರಿದ್ದ ಜನರೆಲ್ಲರೂ ಮೂರ್ತಿಯ ಕಡೆ ಹೋದಾಗ ಅವರನ್ನು ಬ್ಯಾರಿಕೇಡ್ ಹಾಕಿ ತಡೆಯುವುದಲ್ಲದೇ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ ಎನ್ನಲಾಗಿದ್ದು, ಘಟನೆ ಸಂಬಂಧ ಹತ್ತು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಟ್ರಸ್ಟ್‌ಗೆ ನೀಡಿರುವ ಪರವಾನಿಗೆಯಂತೆ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಯಾಗಬೇಕು, ವಶಕ್ಕೆ ಪಡೆದವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆನ್ನುವುದು ಹಾಲುಮತ ಸಮಾಜದವರ ಆಗ್ರಹವಾಗಿದೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ರಾಯಣ್ಣ ಮೂರ್ತಿ ತೆರವು, ಎಸಿ, ಡಿವೈಎಸ್ಪಿ ವಾಹನಗಳ ಮೇಲೆ ಕಲ್ಲು ತೂರಾಟ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ತೆರವುಗೊಳಿಸಿದ ವಿಚಾರವಾಗಿ ನಡೆದ ವಾಗ್ವಾದದಲ್ಲಿ ಎಸಿ ಹಾಗೂ ಡಿವೈಎಸ್ಪಿ ವರ ವಾಹನಗಳ ಮೇಲೆ ಕಲ್ಲಿ ತೂರಾಟ ನಡೆಸಿರುವ ಘಟನೆ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಸ್ ನಿಲ್ದಾಣದ ಬಳಿ ನಿನ್ನೆ ರಾತ್ರಿ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಇದಕ್ಕಾಗಿ ಈ ಹಿಂದೆ ಅಲ್ಲಿದ್ದ ರಾಣಿ ಚೆನ್ನಮ್ಮ ನಾಮಫಲಕವನ್ನು , ಸಂಗೊಳ್ಳಿ ರಾಯಣ್ಣ ನಾಮಫಲಕ ಎರಡು ತೆರವುಗೊಳಿಸಲಾಗಿತ್ತು. ಇದೇ ವಿಚಾರವಾಗಿ ಎರಡು ಸಮಾಜದವರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು.

ನಿನ್ನೆ ರಾತ್ರೋರಾತ್ರಿ ನಿರ್ಮಾಣವಾಗಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಅಧಿಕಾರಿಗಳು ತೆರವುಗೊಳಿಸಲಾಗಿದೆ. ಇದರಿಂದ ಕುಪಿತಗೊಂಡ ರಾಯಣ್ಣ ಬ್ರಿಗೇಡ್ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳಿ ಲಘು ಲಾಠಿ ಪ್ರಹಾರ ಕೂಡಾ ನಡೆದಿದೆ.

ಈ ವೇಳೆ ಕೆಲ ದುಷ್ಕರ್ಮಿಗಳು ಎಸಿ ರಾಯಪ್ಪ ಹುಣಸಗಿ ಹಾಗೂ ಡಿವೈಎಸ್ಪಿ ಅವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಎರಡೂ ಸಮಾಜದವರ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶಿರಹಟ್ಟಿ ತಾಲೂಕಾ ಆಸ್ಪತ್ರೆಯಲ್ಲಿ ನಿಲ್ಲಲಾರದ 108 ಅಂಬ್ಯುಲೆನ್ಸ್…!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಶಿರಹಟ್ಟಿ
ಸರಕಾರ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವುದಕ್ಕೆ ಕೊವಿಡ್-19ನಂತಹ ಸಂಕಷ್ಟದಲ್ಲಿಯೂ ಸಹ ಜನತೆಯ ಮನೆ ಬಾಗಿಲಿಗೆ ತೆರಳಿ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದೆ. ಆದರೆ ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳುಗಳಿಂದ 108 ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಸಿಗದೇ ಜನತೆಯ ಜೀವದ ಜೊತೆ ಚೆಲ್ಲಾಟ ಹಾಗೂ ವೈದ್ಯರ ಅಸಹಾಯಕತೆ ಇಲ್ಲಿ ಕೇಳೋರು ಯಾರು ಇಲ್ಲದಂತಾಗಿದೆ.
6 ತಿಂಗಳುಗಳಿಂದ ಸಮಸ್ಯೆ : ತುರ್ತು ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗಾಗಲೀ ಅಥವಾ ಬೇರೆ ಸ್ಥಳಗಳಿಗೆ ತೆರಳಲು ವರವಾಗಬೇಕಿದ್ದಂತಹ 108 ಅಂಬ್ಯುಲೆನ್ಸ್ ಕಳೆದ ಆರು ತಿಂಗಳುಗಳಿಂದ ಸಮರ್ಪಕವಾಗಿ ಕಾರ‍್ಯನಿರ್ವಹಿಸದೇ ಇರುವುದಕ್ಕೆ ಆಸ್ಪತ್ರೆಯಲ್ಲಿ ಇರುವಂತಹ ವೈದ್ಯರು ಅಂಬ್ಯುಲೆನ್ಸ್‌ಗಾಗಿ ನಿತ್ಯವೂ ಪರದಾಡುತಿದ್ದಾರೆ. ವೈದ್ಯರು ಅಂಬ್ಯುಲೆನ್ಸ್‌ಗಾಗಿ ಸಂಪರ್ಕಿಸಿದಂತಹ ಸಂದರ್ಭದಲ್ಲಿ ಬೇರೆ ಸ್ಥಳಗಳಲ್ಲಿ ಇರುವುದಾಗಿ ಹೇಳುತ್ತಿದ್ದಾರೆ. ಅನಿವಾರ್ಯವಾದಾಗ ಹೆರಿಗೆಯಾದ ತಾಯಂದಿರನ್ನು ಮನೆಗೆ ಕಳುಹಿಸಿಕೊಡುವುದಕ್ಕೆ ಇರುವ ನಗು-ಮಗು ವಾಹನ, ಹಾಗೂ ಜೆಎಸ್‌ವೈ ಅಂಬ್ಯುಲೆನ್ಸ್‌ಗಳನ್ನು ಉಪಯೋಗಿಸಲಾಗುತ್ತಿದೆ.

ಕಳೆದ ಆರು ತಿಂಗಳುಗಳಿಂದ 108 ಅಂಬ್ಯುಲೆನ್ಸ್ ತಾಲೂಕಾ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಸಿಗುತ್ತಿಲ್ಲ, ಇಲ್ಲಿಯೇ ಖಾಯಂ ಇರಬೇಕೆಂದು ಹೇಳಿದರೂ ಬೇರೆ ಕಡೆಗಳಲ್ಲಿ ಇರುವುದಾಗಿ ಸಿಬ್ಬಂದಿಗಳು ಹೇಳುತ್ತಿದ್ದಾರೆ. ಇದರಿಂದ ನಮಗೂ ಹಾಗೂ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿವಿಕೆ ಏಜೆನ್ಸಿಯವರ ಗಮನಕ್ಕೂ ತಂದರೂ ಸಹ ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಚಂದ್ರು ಲಮಾಣಿ, ವೈದ್ಯಾಧಿಕಾರಿ.

 

ಗುರುವಾರ ಮಧ್ಯರಾತ್ರಿ ಪರದಾಡಿದ ಜನತೆ 
ತಾಲೂಕಾ ಆಸ್ಪತ್ರೆಯಲ್ಲಿ ಗುರುವಾರ ಮಧ್ಯರಾತ್ರಿ ಒಂದು ಪಾಯಿಜನ್ ಕೇಸ್, ಒಂದು ಡಿಲೆವರಿ ಕೇಸ್ ಮತ್ತೊಂದು ತೀವ್ರ ಜ್ವರದಿಂದ ಬಳಲುತ್ತಿದ್ದಂತಹ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಅಂಬ್ಯುಲೆನ್ಸ್ ಸಿಗದೇ ಇರುವುದಕ್ಕೆ ಪರದಾಡಿದ ಘಟನೆಯು ಜರುಗಿದ್ದು, ಮಧ್ಯರಾತ್ರಿಯೇ ವೈದ್ಯ ಚಂದ್ರು ಲಮಾಣಿ ಮತ್ತು ಸಿಬ್ಬಂದಿ ಎಷ್ಟೇ ಪ್ರಯತ್ನ ಮಾಡಿದರೂ ಅಂಬ್ಯುಲೆನ್ಸ್ ಲಭ್ಯವಾಗಲಿಲ್ಲ. ಅನಿವಾರ್ಯವಾಗಿ ಲಭ್ಯವಿರುವ ಬೇರೆ ಅಂಬ್ಯುಲೆನ್ಸ್‌ನಲ್ಲಿ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆಗೆ ಸ್ಥಳಾಂತರಿಸಿದ್ದಾರೆ.

ಜೀವಕ್ಕೆ ಕುತ್ತು ಬಂದರೆ ಯಾರು ಹೊಣೆ ?
ಜನತೆಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಯನ್ನು ಒದಗಿಸಲು ಅನುಕೂಲ ಕಲ್ಪಿಸುವುದಕ್ಕಾಗಿಯೇ ಇರುವಂತಹ 108 ಅಂಬ್ಯುಲೆನ್ಸ್ ಇದ್ದು, ಆದರೆ ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾಗಿ ಲಭ್ಯವಿಲ್ಲದೇ ಇರುವುದರಿಂದ ಸದ್ಯ ಕೊವಿಡ್-19 ನಿಂದ ತತ್ತರಿಸಿರುವಂತಹ ಜನತೆ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವಂತಹ ವಯೋವೃದ್ಧರಿಗೆ, ಮಹಿಳೆಯರಿಗೆ ಮತ್ತು ಮಕ್ಕಳ ಜೀವಕ್ಕೆ ಕುತ್ತು ಬಂದರೆ ಯಾರು ಹೊಣೆ ? ಎಂಬುದಕ್ಕೆ ಇಲಾಖೆಯ ಅಧಿಕಾರಿಗಳೇ ಉತ್ತರಿಸಬೇಕಿದೆ.

ಗದಗ ನಗರಸಭೆ ವ್ಯಾಪ್ತಿಯ ರಸ್ತೆ ದುರಸ್ತಿಗೆ ಕ್ರಮ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಸತತ ಮಳೆಯಿಂದಾಗಿ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿದ್ದು, ಮಳೆ ಪ್ರಮಾಣ ಕಡಿಮೆಯಾದ ತಕ್ಷಣವೇ ಸಂಬಂಧಿಸಿದ ಇಲಾಖೆಗಳು ರಸ್ತೆ ಸುಧಾರಣೆಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಜರುಗಿದ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿ ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಹಾಗೂ 24*7ಕುಡಿಯುವ ನೀರಿನ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿವಾರ ವಿವಿಧ ಯೋಜನೆಗಳ ಅನುಷ್ಠಾನಗೊಳಿಸುತ್ತಿರುವ ಅನುಷ್ಠಾನ ಸಂಸ್ಥೆಗಳ ಸಭೆಯನ್ನು ಕರೆದು ಈ ಕುರಿತು ನಿರ್ದೇಶನ ನೀಡುತ್ತಿದ್ದು, ನಗರಸಭೆ, ಲೋಕೋಪಯೋಗಿ ಇಲಾಖೆ, ರಾಜ್ಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ರಸ್ತೆ ಸುಧಾರಣೆಗೆ ಕ್ರಮವಹಿಸಲು ತಿಳಿಸಲಾಗಿದೆ. ಮಳೆ ಪ್ರಮಾಣ ಕಡಿಮೆ ಆದೊಡನೆ ರಸ್ತೆಗಳ ದುರಸ್ತಿ ಹಾಗೂ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ನಗರಸಭೆ ವ್ಯಾಪ್ತಿ 14 ವಲಯಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಬಾಕಿ ಉಳಿದ ಕಾಮಗಾರಿಗಳನ್ನು 11 ವಲಯಗಳಲ್ಲಿ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ, ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ತಿಳಿಸಿದರು. ಈ ಕುರಿತು ಕೆ.ಯು.ಐ.ಡಿ.ಎಫ್.ಸಿ. ಸಂಬಂಧಿಸಿದ ತಾಂತ್ರಿಕ ಸಿಬ್ಬಂದಿ ಹಾಗೂ ಗುತ್ತಿಗೆದಾರರು ಜಂಟಿಯಾಗಿ ಸ್ಥಳ ಪರಿಶೀಲಿಸಿ ಟೆಂಡರ್‌ನಲ್ಲಿ ನಿಗದಿಪಡಿಸಿದಂತೆ ಕಾಮಗಾರಿಯ ಉಳಿಕೆ ಹಾಗೂ ಲೋಪಗಳನ್ನು ಪರಿಶೀಲಿಸಿ.
ಎಂ. ಸುಂದರೇಶ್ ಬಾಬು, ಜಿಲ್ಲಾಧಿಕಾರಿ, ಗದಗ

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿ ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ವತಿಯಿಂದ ಅಮೃತ ಯೋಜನೆ ಅಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿ ಹಾಗೂ ಕೆ.ಯು.ಐ.ಡಿ.ಎಫ್.ಸಿ. ವತಿಯಿಂದ24*7ಕುಡಿಯುವ ನೀರಿನ ಯೋಜನೆಯಡಿ ಚಾಲ್ತಿ ಇರುವ ಕಾಮಗಾರಿಗಳನ್ನು ಕಾಲಮಿತಿಯೊಳಗಡೆ ಪೂರ್ಣಗೊಳಿಸಲು ಪ್ರತಿ ವಾರ ನಿಗದಿಪಡಿಸಿದಂತೆ ಸಭೆಗಳನ್ನು ನಡೆಸಿ, ಗಡುವು ನೀಡಲಾಗಿದ್ದು, ಅನು?ನ ಸಂಸ್ಥೆಗಳು ಕಾಮಗಾರಿಯನ್ನು ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಲು ತಿಳಿಸಿದರು.
ಸಹಾಯವಾಣಿ ಆರಂಭಿಸಲು ನಿರ್ದೇಶನ: ನಗರಸಭೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಒಳಚರಂಡಿ ಹಾಗೂ ಕುಡಿಯುವ ನೀರಿನ ಯೋಜನೆಯ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿ, ಒಳಚರಂಡಿ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವಕಾಮಗಾರಿಗಳ ಸ್ಥಳಗಳಲ್ಲಿ ಹಲವಾರು ದೂರುಗಳು ಸ್ವೀಕೃತವಾಗುತ್ತಿವೆ. ಒಳಚರಂಡಿ ಯೋಜನೆಯ ಮೊದಲ ಹಂತದ ಕಾಮಗಾರಿಯಲ್ಲಿ ನಿಗದಿತ ಸಮಯದಲ್ಲಿ ಬಳಕೆಯಾಗದೆ ಈ ಹಂತದಲ್ಲಿ ಹೊಸ ಯೋಜನೆಗಳಿಗೆ ಹೊಂದಾಣಿಕೆ ಮಾಡಲು ಕೂಡಲೇ ಸ್ಥಳಗಳನ್ನು ಪರಿಶೀಲಿಸಿ, ತಮ್ಮ ಅಧೀನ ಸಿಬ್ಬಂದಿಗೆ ಸೂಕ್ತ ಯೋಜನೆ ರೂಪಿಸಲು ಹಾಗೂ ಸಾರ್ವಜನಿಕರಿಗೆ ಉಪಯೋಗಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲು ಸೂಚಿಸಿದರು.
ಒಳಚರಂಡಿ ಕಾಮಗಾರಿಯ ಅನುಷ್ಠಾನದಲ್ಲಿ ಹಾಳಾದ ರಸ್ತೆಗಳನ್ನು ಪುನರ್ ನಿರ್ಮಿಸಲು ಒಂದು ತಿಂಗಳು ಗಡುವು ನೀಡಿ, ಎಲ್ಲಾ ಕಾಮಗಾರಿಗಳ ಪೂರ್ಣಗೊಳಿಸಲು ತಿಳಿಸಿದರು. ಝೋನ್ 2 ಮತ್ತು 3ರ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲು, ಬಾಕಿ ಉಳಿದ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಸದರಿ ವಲಯಗಳಲ್ಲಿ ಒಳಚರಂಡಿ ಕಾಮಗಾರಿ ಸಾರ್ವಜನಿಕರಿಗೆ ಬಳಕೆ ಪ್ರಾರಂಭವಾದ ಕೂಡಲೇ ಸಹಾಯವಾಣಿ ಕೇಂದ್ರ ಸ್ಥಾಪಿಸುವಂತೆ ನಿರ್ದೇಶನ ನೀಡಿದರು.
ಕೆ.ಯು.ಐ.ಡಿ.ಎಫ್.ಸಿ. ಮುಖ್ಯ ಅಭಿಯಂತರ ಎಂ.ಬಿ. ಜಗತೇರಿ, ಕೆ.ಯು.ಡಬ್ಲ್ಯು.ಎಸ್. ಮುಖ್ಯ ಅಭಿಯಂತರ ಚಾಮರಾಜಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್., ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಜಾಧವ ಹಾಗೂ ಕೆ.ಯು.ಐ.ಡಿ.ಎಫ್.ಸಿ. ಮತ್ತು ಕೆ.ಯು.ಡಬ್ಲ್ಯು.ಎಸ್. ಅಭಿಯಂತರರು ಹಾಗೂ ಕಾಮಗಾರಿಗಳ ಗುತ್ತಿಗೆದಾರರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!