Home Blog Page 61

ಪ್ರಮುಖ ವಲಯಗಳಿಗೆ ಹೆಚ್ಚುವರಿ LPG ನೀಡಲು ರಾಜ್ಯಗಳಿಗೆ ಕೇಂದ್ರ ಸೂಚನೆ

ನವದೆಹಲಿ: ದೇಶದಲ್ಲಿ ಎಲ್‌ಪಿಜಿ (LPG) ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆ ಹಿನ್ನೆಲೆ, ಪ್ರಮುಖ ವಲಯಗಳಿಗೆ ಆದ್ಯತೆ ನೀಡಿ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

ಈ ಸಂಬಂಧ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕಾರ್ಯದರ್ಶಿ ನೀರಜ್ ಮಿತ್ತಲ್ ಪತ್ರ ಬರೆದು, ಪ್ರಮುಖ ಉದ್ಯಮಗಳು ತಮ್ಮ LPG ಅಗತ್ಯಗಳಲ್ಲಿ ಶೇ.70 ರಷ್ಟು ಪೂರೈಕೆಯನ್ನು ಪಡೆಯಲಿವೆ ಎಂದು ತಿಳಿಸಿದ್ದಾರೆ. ಮಾರ್ಚ್ 2026 ರ ಪೂರ್ವದಲ್ಲಿ ಅವುಗಳ ಗೃಹೇತರ ಬಳಕೆಯ ಆಧಾರದ ಮೇಲೆ ಈ ಹಂಚಿಕೆ ನಿರ್ಧರಿಸಲಾಗುತ್ತದೆ.

ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷ, ವಿಶೇಷವಾಗಿ ಇರಾನ್‌ನ ಕ್ರಮಗಳಿಂದ ಹಾರ್ಮುಜ್ ಜಲಸಂಧಿಯಲ್ಲಿ ವ್ಯತ್ಯಯ ಉಂಟಾಗಿರುವುದು LPG ಪೂರೈಕೆಗೆ ಹೊಡೆತ ನೀಡಿದೆ. ಭಾರತಕ್ಕೆ ಬರುವ LPG ಆಮದುಗಳಲ್ಲಿ ಬಹುಪಾಲು ಈ ಪ್ರದೇಶದಿಂದಲೇ ಆಗುತ್ತಿರುವುದರಿಂದ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದೆ.

ಈ ಕ್ರಮದಿಂದ ಔಷಧ, ಆಹಾರ, ಕೃಷಿ ಹಾಗೂ ಪಾಲಿಮರ್ ಕ್ಷೇತ್ರಗಳಿಗೆ ಹೆಚ್ಚಿನ LPG ಪೂರೈಕೆ ಸಿಗಲಿದೆ. ಜೊತೆಗೆ ಪ್ಯಾಕೇಜಿಂಗ್, ಪೇಂಟ್, ಸ್ಟೀಲ್, ಸೆರಾಮಿಕ್, ಗ್ಲಾಸ್, ಫೌಂಡ್ರಿ, ಫೋರ್ಜಿಂಗ್, ಏರೋಸಾಲ್ ಸೇರಿದಂತೆ ಹಲವು ಕೈಗಾರಿಕಾ ಘಟಕಗಳಿಗೂ ಇದರ ಲಾಭವಾಗಲಿದೆ.

ಎಲ್‌ಪಿಜಿ ಹಂಚಿಕೆ ದಿನಕ್ಕೆ ಒಟ್ಟು 0.2 ಟಿಎಂಟಿ ಮಿತಿಯೊಳಗೆ ಇರಲಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ನೈಸರ್ಗಿಕ ಅನಿಲದಿಂದ ಬದಲಾಯಿಸಲಾಗದ ವಿಶೇಷ ಉದ್ದೇಶಗಳಿಗೆ LPG ಅಗತ್ಯವಿರುವ ಘಟಕಗಳಿಗೆ ಹೆಚ್ಚುವರಿ ಆದ್ಯತೆ ನೀಡಲಾಗುತ್ತದೆ.

ಈ ಕ್ರಮವು ತುರ್ತು ಪರಿಸ್ಥಿತಿಯಲ್ಲಿ ಪ್ರಮುಖ ಕೈಗಾರಿಕೆಗಳ ಕಾರ್ಯಾಚರಣೆಯನ್ನು ನಿರಂತರವಾಗಿರಿಸಲು ಸಹಾಯಕವಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ: ಸಿ.ಟಿ. ರವಿ ಆಗ್ರಹ

ಬೆಂಗಳೂರು: ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಹತಾಶವಾದ ಮಾನಸಿಕ ಅಸ್ವಸ್ಥತೆಯನ್ನು ಪ್ರತಿಬಿಂಬಿಸುವ ರೀತಿ ಇದೆ. ಖರ್ಗೆ ಅವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ಯೋಗ್ಯ ಚಿಕಿತ್ಸೆ ಕೊಡಿಸಿ. ರಾಜಕೀಯ ನಿವೃತ್ತಿ ಕೊಡಿಸಿ ಎಂದು ಮಾಜಿ ಸಚಿವ ಸಿ ಟಿ ರವಿ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಖರ್ಗೆ ಅವರು ಆರು ದಶಕಗಳ ಕಾಲ ರಾಜಕಾರಣದಲ್ಲಿ ಹಲವಾರು ಹುದ್ದೆಗಳನ್ನು ಅನುಭವಿಸಿ ಇಂತಹ ಹೇಳಿಕೆ ನೀಡುವುದು ಒಳ್ಳೆಯದಲ್ಲ. ಹಿರಿತನದ ಹಾಗೂ ಮುತ್ಸದ್ಧಿತನದ ಹೇಳಿಕೆಗಳಾಗಿ ಕಾಣುತ್ತಿಲ್ಲ. ಇದೊಂದು ದ್ವೇಷದ ಹೇಳಿಕೆ ಎಂದರು.

ಗುಜರಾತ್ ಜನ ಅನಕ್ಷರಸ್ಥರಾಗಿರುವುದರಿಂದ ಬಿಜೆಪಿ ಗೆಲ್ಲಿಸಿದರು ಎಂದು ಖರ್ಗೆ ಅವರು ಹೇಳಿದರು. ಹೀಗೆ ಹೇಳಿ ಗುಜರಾತ್ ಜನರನ್ನು ಅವಮಾನಿಸಿದರು. ಕರ್ನಾಟಕದಲ್ಲಿ ನಿರಂತರವಾಗಿ ಲೋಕಸಭೆಗೆ ಬಿಜೆಪಿಯನ್ನು ಜನ ಬೆಂಬಲಿಸುತ್ತಿದ್ದಾರೆ, ಹಾಗಾದರೆ ಕರ್ನಾಟಕದ ಜನರೂ ಅನಕ್ಷರಸ್ಥರೇ ಎಂದು ಪ್ರಶ್ನಿಸಿದರು.

ಪಶ್ಷಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಆರ್‍ಎಸ್‍ಎಸ್ ಅನ್ನು ವಿಷಸರ್ಪಕ್ಕೆ ಹೋಲಿಸಿದ್ದೀರಿ. ಮುಂದೆ ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ಮಾಡಿದ್ದೀರಿ. ಈ ಮೂಲಕ ಪ್ರಜಾಪ್ರಭುತ್ವ ವಿರೋಧಿಯಾಗಿ ನೀವು ವರ್ತಿಸಿದ್ದೀರಿ.

ಮಹಾತ್ಮ ಗಾಂಧಿ ಅವರ ಅನುಯಾಯಿ ಆದ ನೀವು ಇಂತಹ ಹೇಳಿಕೆ ನೀಡಬಾರದು. ಗಾಂಧಿ ಅವರು ಇದನ್ನೇ ಬೋಧಿಸಿದ್ದೆ. ಅಹಿಂಸಾ ತತ್ವ ಅಂದರೆ ಇದೇನಾ. ಇವತ್ತಿನ ಗಾಂಧಿಗಳು ಇಂತಹ ಹೇಳಿಕೆ ನೀಡಿ ಎಂದು ಹೇಳಿಕೊಡುತ್ತಿದ್ದರಾ ಎಂದರು.

ನನ್ನ ತಮ್ಮ ಸಮರ್ಥ್ ಗೆ ಬೆಂಬಲಿಸಿ: ಮುಸ್ಲಿಂ ಮತದಾರರಿಗೆ ಪ್ರದೀಪ್ ಈಶ್ವರ್ ಮನವಿ

ಬೆಂಗಳೂರು: ಉಪಚುನಾವಣೆ ಹಿನ್ನಲೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಮುಸ್ಲಿಂ ಸಮುದಾಯದ ಮತದಾರರಿಗೆ ಮನವಿ ಮಾಡಿದ್ದಾರೆ. ದಾವಣಗೆರೆಯ ಮುಸ್ಲಿಂ ಬಾಂಧವರು ತಮ್ಮ ತಮ್ಮ ಸಮರ್ಥ್‌ಗೆ ಬೆಂಬಲ ನೀಡಬೇಕು ಎಂದು ಅವರು ವಿನಂತಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರು ಮುಸ್ಲಿಂ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಕಾಂಗ್ರೆಸ್ ನಿಮ್ಮ ಪರ ನಿಂತಿದೆ. ಹಿಂದೂಗಳಾದ ನಾವು ಕೂಡ ಬಿಜೆಪಿ ವಿರುದ್ಧ ನಿಂತಿದ್ದೇವೆ ಎಂದು ಹೇಳಿದರು.

ಅಹಿಂದ ಮತದಾರರು ಕಾಂಗ್ರೆಸ್‌ಗೆ ಮತಹಾಕಬೇಕು. ದಾವಣಗೆರೆ ಸೇರಿದಂತೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಇದೇ ವೇಳೆ ಬಿಜೆಪಿ ನಾಯಕ ಆರ್. ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರದೀಪ್ ಈಶ್ವರ್, ಶ್ರೀಮಂತಿಕೆ ಮತ್ತು ಬಡವರ ಬಗ್ಗೆ ಅವರು ಮಾತನಾಡುವುದು ಆಶ್ಚರ್ಯಕರ. ಕಂದಾಯ ಸಚಿವರಾಗಿದ್ದಾಗ ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದನ್ನು ವೈಟ್ ಪೇಪರ್‌ನಲ್ಲಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಕಾಡಾನೆ ದಾಳಿಗೆ ಮತ್ತೊಂದು ಬಲಿ: ದಾರುಣವಾಗಿ ಮೃತಪಟ್ಟ ಕಾಫಿ ಬೆಳೆಗಾರ

ಮಡಿಕೇರಿ: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯಲ್ಲಿ ಕಾಡಾನೆ ದಾಳಿಗೆ ಕಾಫಿ ಬೆಳೆಗಾರೊಬ್ಬರು ಬಲಿಯಾದ ದುರ್ಘಟನೆ ನಡೆದಿದೆ.

ಸಾವನ್ನಪ್ಪಿದವರನ್ನು ಕಾಯಿಮಾನಿ ನಿವಾಸಿ ರತ್ತು ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ತಮ್ಮ ಕಾಫಿ ತೋಟಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಎದುರಾದ ಕಾಡಾನೆ ಅವರ ಮೇಲೆ ದಾಳಿ ನಡೆಸಿ ತುಳಿದು ಕೊಂದಿದೆ.

ಘಟನೆಯ ಬಳಿಕ ರತ್ತು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಟ್ಟ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಶ್ರೀಮಂಗಲದ ಕುರ್ಚಿ ಹಾಗೂ ಕಾಯಿಮಾನಿ ಭಾಗದಲ್ಲಿ 8ರಿಂದ 10 ಕಾಡಾನೆಗಳ ಹಿಂಡು ತಂಗಿದೆ ಎಂದು ತಿಳಿದುಬಂದಿದೆ. ಹಗಲು ಹೊತ್ತಿನಲ್ಲೇ ಆನೆಗಳು ಗ್ರಾಮ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದರಿಂದ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ.

ತೋಟಗಳಿಗೆ ತೆರಳಲು ಕಾರ್ಮಿಕರು ಹಾಗೂ ಬೆಳೆಗಾರರು ಹೆದರುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಕಾಡಾನೆಗಳನ್ನು ಕಾಡಿಗೆ ಓಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಾಳೆ ಕೇರಳ, ಅಸ್ಸಾಂ, ಪುದುಚೇರಿ ಚುನಾವಣೆ: ಮೇ 4ಕ್ಕೆ ಫಲಿತಾಂಶ

0

ನವದೆಹಲಿ: ಅಸ್ಸಾಂ, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಏಪ್ರಿಲ್ 9ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಮಂಗಳವಾರ ಸಂಜೆ ಚುನಾವಣಾ ಪ್ರಚಾರ ಅಂತ್ಯಗೊಂಡಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಅಸ್ಸಾಂನಲ್ಲಿ ಮತದಾರರು ಮತ್ತು ಸ್ಪರ್ಧೆ
ಅಸ್ಸಾಂ ರಾಜ್ಯದಲ್ಲಿ 126 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಇಲ್ಲಿ ಒಟ್ಟು ಸುಮಾರು 2.5 ಕೋಟಿ ಮತದಾರರಿದ್ದು, 722 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸರ್ಕಾರ ರಚಿಸಲು 64 ಸ್ಥಾನಗಳ ಬಹುಮತ ಅಗತ್ಯವಿದೆ.

ಕೇರಳದಲ್ಲಿ ರಾಜಕೀಯ ತ್ರಿಕೋನ ಪೈಪೋಟಿ
ಕೇರಳದಲ್ಲಿ 140 ಸ್ಥಾನಗಳಿಗೆ 890 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಸರ್ಕಾರ ರಚಿಸಲು 71 ಸ್ಥಾನಗಳ ಅಗತ್ಯವಿದ್ದು, ರಾಜ್ಯದಲ್ಲಿ ಸುಮಾರು 2.71 ಕೋಟಿ ಮತದಾರರಿದ್ದಾರೆ. ಪ್ರಮುಖ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

ಪುದುಚೇರಿಯಲ್ಲಿ ಚುನಾವಣಾ ಸಮರ
ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇಲ್ಲಿ 16 ಸ್ಥಾನಗಳ ಬಹುಮತ ಅಗತ್ಯವಿದ್ದು, ಒಟ್ಟು ಸುಮಾರು 9.44 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಪ್ರಚಾರಕ್ಕೆ ಕಟ್ಟುನಿಟ್ಟಿನ ನಿಷೇಧ
ಏಪ್ರಿಲ್ 7ರಂದು ಸಂಜೆ 6 ಗಂಟೆಯಿಂದಲೇ ಪ್ರಚಾರ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಜನಪ್ರಾತಿನಿಧ್ಯ ಕಾಯ್ದೆಯ ಪ್ರಕಾರ, ಮತದಾನದ ಮುನ್ನ 48 ಗಂಟೆಗಳ ಅವಧಿಯಲ್ಲಿ ಯಾವುದೇ ರ್ಯಾಲಿ, ಸಭೆ, ಮೆರವಣಿಗೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ಬಂಧ ವಿಧಿಸಲಾಗಿದೆ.

ಈ ನಡುವೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲೂ ಚುನಾವಣಾ ಚಟುವಟಿಕೆಗಳು ಜೋರಾಗಿದ್ದು, ಮುಂದಿನ ದಿನಗಳಲ್ಲಿ ಅಲ್ಲಿ ಮತದಾನ ನಡೆಯಲಿದೆ

Assembly Elections: ಮತ ಚಲಾಯಿಸಲು ಕೇರಳಕ್ಕೆ ತೆರಳುವಾಗ ಅಪಘಾತ: ವ್ಯಕ್ತಿಯ ಸ್ಥಿತಿ ಗಂಭೀರ

0

ಹಾಸನ: ಕೇರಳ ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಲು ತೆರಳುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಮಳಲಿ ಬೈಪಾಸ್ ಬಳಿ ನಡೆದಿದೆ.

ಅಪಘಾತದಲ್ಲಿ ಅಬ್ದುಲ್ ಖಾದರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು ಮತದಾನಕ್ಕಾಗಿ ಕಾರಿನಲ್ಲಿ ಕೇರಳಕ್ಕೆ ತೆರಳುತ್ತಿದ್ದರು.

ಈ ವೇಳೆ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು, ರಸ್ತೆಯಿಂದ ಕೆಳಗೆ ಹಾರಿ ಸುಮಾರು 25 ಅಡಿ ದೂರದಲ್ಲಿ ನಿಂತಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಗಾಯಾಳುವಿಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Karnataka 2nd PUC Result: ವಿದ್ಯಾರ್ಥಿಗಳೇ ಇಲ್ಲಿ ಕೇಳಿ, ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!

ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಲಭ್ಯವಾಗಿದೆ. ನಾಳೆ, ಏಪ್ರಿಲ್ 9ರಂದು ದ್ವಿತೀಯ ಪಿಯುಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಜೆ ವೇಳೆಗೆ ಫಲಿತಾಂಶದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈಗಾಗಲೇ ಎಲ್ಲಾ ತಾಂತ್ರಿಕ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯದಾದ್ಯಂತ 1,217 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ತಮ್ಮ ಅಂಕಗಳಿಂದ ತೃಪ್ತರಾಗದಿದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಫಲಿತಾಂಶದೊಂದಿಗೆ ಮರುಮೌಲ್ಯಮಾಪನ, ಮರುಎಣಿಕೆ ಹಾಗೂ ಉತ್ತರಪತ್ರಿಕೆಯ ಸ್ಕ್ಯಾನ್ ಪ್ರತಿಗೆ ಸಂಬಂಧಿಸಿದ ದಿನಾಂಕಗಳನ್ನು ನಂತರ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ ನಮೂದಿಸಿ ಫಲಿತಾಂಶವನ್ನು ಪರಿಶೀಲಿಸಬಹುದು. ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ಔಟ್ ತೆಗೆದುಕೊಳ್ಳುವ ಅವಕಾಶವೂ ಲಭ್ಯವಿದೆ.

Gold & Silver Price: ಇರಾನ್-ಇಸ್ರೇಲ್ ಕದನ ವಿರಾಮದ ಬಳಿಕ ಚಿನ್ನ-ಬೆಳ್ಳಿ ಬೆಲೆ ಭಾರೀ ಏರಿಕೆ!

ಬೆಂಗಳೂರು: ಸತತ ಮೂರು ವಾರಗಳ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆ ಕಂಡಿದೆ. ಇರಾನ್–ಅಮೆರಿಕ–ಇಸ್ರೇಲ್ ನಡುವಿನ ಯುದ್ಧ ಪರಿಸ್ಥಿತಿ ಹಾಗೂ ಕದನ ವಿರಾಮ ಘೋಷಣೆ ಬೆನ್ನಲ್ಲೇ ಮೌಲ್ಯ ಲೋಹಗಳ ದರಗಳಲ್ಲಿ ಏರಿಳಿತ ಮುಂದುವರಿದಿದೆ.

ಏಪ್ರಿಲ್ 8ರಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹15,382 ಆಗಿದ್ದು, 10 ಗ್ರಾಂ ಚಿನ್ನ ₹1,53,820ಕ್ಕೆ ತಲುಪಿದೆ. ಏಪ್ರಿಲ್ 7ರೊಂದಿಗೆ ಹೋಲಿಸಿದರೆ 1 ಗ್ರಾಂಗೆ ₹398 ಮತ್ತು 10 ಗ್ರಾಂಗೆ ₹3,980 ಏರಿಕೆಯಾಗಿದೆ.

ಇದೇ ರೀತಿ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹14,100 ಆಗಿದ್ದು, 10 ಗ್ರಾಂ ₹1,41,000ಕ್ಕೆ ಏರಿದೆ. ಇದರಲ್ಲಿ 1 ಗ್ರಾಂಗೆ ₹365 ಮತ್ತು 10 ಗ್ರಾಂಗೆ ₹3,650 ಹೆಚ್ಚಳವಾಗಿದೆ.

18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, 1 ಗ್ರಾಂ ₹11,537 ಹಾಗೂ 10 ಗ್ರಾಂ ₹1,15,370 ಆಗಿದೆ. ಈ ವರ್ಗದಲ್ಲೂ 1 ಗ್ರಾಂಗೆ ₹299 ಮತ್ತು 10 ಗ್ರಾಂಗೆ ₹2,990 ಏರಿಕೆಯಾಗಿದೆ.

ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ಜಿಗಿತ ಕಂಡಿದೆ. 1 ಗ್ರಾಂ ಬೆಳ್ಳಿ ₹260 ಆಗಿದ್ದು, 1 ಕೆಜಿ ಬೆಳ್ಳಿ ₹2,60,000ಕ್ಕೆ ತಲುಪಿದೆ. ಹಿಂದಿನ ದಿನ ₹2,50,000 ಇದ್ದ ಬೆಲೆ ₹10,000 ಏರಿಕೆಯಾಗಿದೆ.

ಮಧ್ಯಪ್ರಾಚ್ಯದ ಉದ್ವಿಗ್ನತೆ ಮತ್ತು ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳಿಂದ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇನ್ನೂ ಏರಿಳಿತ ಮುಂದುವರಿಯುವ ಸಾಧ್ಯತೆ ಇದೆ.

ಬಾಗಲಕೋಟೆಯಲ್ಲಿ ಘೋರ ದುರಂತ: ಪ್ರೇಯಸಿ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು!

0

ಬಾಗಲಕೋಟೆ: ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ ಶರಣಾದ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿಯ ಅಸ್ಕಿ ಗ್ರಾಮ ಹಾಗೂ ಬನಹಟ್ಟಿ ನಗರದಲ್ಲಿ ನಡೆದಿದೆ.

ಪವಿತ್ರಾ ಒಂಟಿ (19) ಮತ್ತು ಕಾರ್ತಿಕ್ ನಾಯಕ್ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದಾರೆ. ಪವಿತ್ರಾ ಬನಹಟ್ಟಿಯ ಕೆಹೆಚ್ಡಿಸಿ ಕಾಲೋನಿ ನಿವಾಸಿಯಾಗಿದ್ದು, ಕಾರ್ತಿಕ್ ಅಸ್ಕಿ ಗ್ರಾಮದ ನಿವಾಸಿಯಾಗಿದ್ದಾನೆ.

ಮಂಗಳವಾರ ಇವರಿಬ್ಬರ ನಡುವೆ ವೈಮನಸ್ಸಿನಿಂದ ಜಗಳ ನಡೆದಿದ್ದು, ಇದರಿಂದ ಮನನೊಂದು ಪವಿತ್ರಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಈ ವಿಷಯ ತಿಳಿದ ಬಳಿಕ ಮನನೊಂದು ಕಾರ್ತಿಕ್ ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪಾಕಿಗೆ ಮುಖಭಂಗ: ಲೆಬನಾನ್ ಮೇಲೆ ದಾಳಿ ಮುಂದುವರಿಯಲಿದೆ – ಇಸ್ರೇಲ್

0

ಇಸ್ರೇಲ್: ಅಮೆರಿಕ–ಇರಾನ್ ನಡುವೆ ಘೋಷಿಸಲಾದ ಕದನ ವಿರಾಮ ವಿಚಾರದಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿದ್ದು, ಲೆಬನಾನ್ ಮೇಲೆ ದಾಳಿ ಮುಂದುವರಿಸುವುದಾಗಿ ಇಸ್ರೇಲ್ ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ಪ್ರಧಾನಿ ಷರೀಫ್‌ ಅವರು, ಕದನ ವಿರಾಮವು ಕೇವಲ ಅಮೆರಿಕ ಮತ್ತು ಇರಾನ್ ನಡುವಷ್ಟೇ ಅಲ್ಲದೆ ಲೆಬನಾನ್ ಸೇರಿದಂತೆ ಇತರ ಸಂಘರ್ಷ ಪ್ರದೇಶಗಳಿಗೂ ಅನ್ವಯಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದರು.

ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈ ಹೇಳಿಕೆಯನ್ನು ತಿರಸ್ಕರಿಸಿ, ಕದನ ವಿರಾಮವು ಕೇವಲ ಅಮೆರಿಕ–ಇರಾನ್ ಸಂಘರ್ಷಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದರು. ಲೆಬನಾನ್ನಲ್ಲಿ ಹಿಜ್ಬುಲ್ಲಾ ವಿರುದ್ಧ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ ವಿರುದ್ಧದ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ ವ್ಯಕ್ತಪಡಿಸಿದೆ. ಇರಾನ್ ಪರಮಾಣು, ಕ್ಷಿಪಣಿ ಮತ್ತು ಭಯೋತ್ಪಾದನಾ ಬೆದರಿಕೆಯನ್ನು ತಡೆಯುವ ಅಮೆರಿಕದ ಪ್ರಯತ್ನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಇಸ್ರೇಲ್ ಹೇಳಿದೆ.

ಮುಂದಿನ ಮಾತುಕತೆಗಳಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಅದರ ಮಿತ್ರ ರಾಷ್ಟ್ರಗಳ ಭದ್ರತಾ ಗುರಿಗಳನ್ನು ಸಾಧಿಸಲು ಬದ್ಧರಾಗಿರುವುದಾಗಿ ತಿಳಿಸಲಾಗಿದ್ದು, ಈ ಎರಡು ವಾರಗಳ ಕದನ ವಿರಾಮ ಲೆಬನಾನ್ ಪ್ರದೇಶವನ್ನು ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.

error: Content is protected !!