Home Blog Page 62

ಸರ್ಕಾರಿ ಶಾಲೆ ಮೇಲ್ಛಾವಣಿ ಕುಸಿದು 8 ಮಕ್ಕಳಿಗೆ ಗಾಯ ಪ್ರಕರಣ: ಮುಖ್ಯ ಶಿಕ್ಷಕ ಸೇರಿ ಮೂವರು ಅಮಾನತು

0

ಬಾಗಲಕೋಟೆ: ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು 8 ಮಕ್ಕಳು ಗಾಯಗೊಂಡ ಪ್ರಕರಣದ ಬೆನ್ನಲ್ಲೇ ಶಿಕ್ಷಣ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಸಿ.ಬಿ. ಹೆಳವರ ಸೇರಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಮೇಲ್ಛಾವಣಿ ದುರಸ್ತಿ ಕಾರ್ಯ ನಡೆಯುತ್ತಿದ್ದರೂ ಇಲಾಖೆಯ ಗಮನಕ್ಕೆ ತರದೆ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕ ಸಿ.ಬಿ. ಹೆಳವರ ಅವರನ್ನು ಕರ್ನಾಟಕ ನಾಗರಿಕ ಸೇವಾ ನಿಯಮ 1957ರ ನಿಯಮ 10(1)ರ ಅನ್ವಯ ಅಮಾನತುಗೊಳಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಸೀತಾರಾಮು ಈ ಆದೇಶ ಹೊರಡಿಸಿದ್ದಾರೆ.

ಶಾಲಾ ಕಟ್ಟಡದ ಫಿಟ್ನೆಸ್‌ಗೆ ಸಂಬಂಧಿಸಿದಂತೆ ಸರಿಯಾದ ಪ್ರಮಾಣಪತ್ರ ನೀಡುವಲ್ಲಿ ವಿಫಲರಾದ ಆರೋಪದ ಹಿನ್ನೆಲೆಯಲ್ಲಿ ಪಿಆರ್‌ಇಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಎಂ. ರೇವಡಿ ಹಾಗೂ ಜ್ಯೂನಿಯರ್ ಎಂಜಿನಿಯರ್ ಎಸ್.ಎಂ. ಸಂಗನಾಳ ಅವರನ್ನೂ ಅಮಾನತುಗೊಳಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಗಜಾನನ ಬಾಲೆ ಈ ಇಬ್ಬರ ವಿರುದ್ಧ ಅಮಾನತು ಆದೇಶ ಹೊರಡಿಸಿದ್ದಾರೆ.

ಸೆಪ್ಟೆಂಬರ್ 2ರಂದು ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಲಾ ಕೊಠಡಿಯ ಮೇಲ್ಛಾವಣಿಯ ಒಂದು ಭಾಗ ಏಕಾಏಕಿ ಕುಸಿದು ಬಿದ್ದಿತ್ತು. ಶಾಲಾ ಕಟ್ಟಡಗಳ ಸುರಕ್ಷತೆ ಪರಿಶೀಲನೆ ಸಂದರ್ಭದಲ್ಲಿ ಜಿಲ್ಲೆಯ 628 ಶಾಲಾ ಕಟ್ಟಡಗಳನ್ನು ಅನ್‌ಫಿಟ್‌ ಎಂದು ಗುರುತಿಸಿ ವರದಿ ಮಾಡಲಾಗಿತ್ತು. ಆದರೆ ಮುಗಳೊಳ್ಳಿ ತಾಂಡಾದ ಶಾಲೆ ಆ ಪಟ್ಟಿಯಲ್ಲಿ ಇರಲಿಲ್ಲ.

ಈ ಹಿನ್ನೆಲೆಯಲ್ಲಿ ಶಾಲಾ ಕಟ್ಟಡವನ್ನು ಪರಿಶೀಲಿಸಿದ ಎಂಜಿನಿಯರ್‌ಗಳು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ. ಮೇಲ್ಛಾವಣಿ ಕುಸಿತದ ಬಳಿಕ ಸಂಬಂಧಪಟ್ಟ ಎಂಜಿನಿಯರ್ ವಿರುದ್ಧ ಕ್ರಮದ ಬಗ್ಗೆ ಜಿಪಂ ಸಿಇಒ ಮಾಹಿತಿ ನೀಡಿದ್ದರು.

ಇದೀಗ ಕಟ್ಟಡದ ಹಾನಿಗೊಳಗಾದ ಭಾಗವನ್ನು ತಕ್ಷಣ ದುರಸ್ತಿ ಮಾಡುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಸೂಚನೆ ನೀಡಲಾಗಿದೆ.

ಪಂಚ ಗ್ಯಾರಂಟಿಗಳ ಭ್ರಮೆಯಲ್ಲಿ ತೇಲುತ್ತಿರುವ ಕಾಂಗ್ರೆಸ್ ಸರ್ಕಾರ! ಕಡುಬಡವರ ಬದುಕನ್ನೇ ಮರೆತಿದೆ – ಬಿ.ವೈ. ವಿಜಯೇಂದ್ರ

0

ಸಿಂಧನೂರು: ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಡಿನ ಬಡವರು, ಕೂಲಿ ಕಾರ್ಮಿಕರು, ರೈತರು ಹಾಗೂ ದುರ್ಬಲ ವರ್ಗಗಳಿಂದ ದೂರ ಸಾಗುತ್ತಿದೆ. ರಾಜ್ಯದ ಕಡುಬಡವರು ಸರ್ಕಾರಕ್ಕೆ ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಸಿಂಧನೂರಿನಲ್ಲಿ ಬಿಜೆಪಿ 4 ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳ ಭ್ರಮೆಯಲ್ಲಿ ತೇಲುತ್ತಿರುವ ಕಾಂಗ್ರೆಸ್ ಸರ್ಕಾರ ವಾಸ್ತವಿಕ ಸತ್ಯದಿಂದ ದೂರವಾಗಿದೆ ಎಂದು ಟೀಕಿಸಿದರು.

ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಸೇರಿದಂತೆ ಸಾಮಾಜಿಕ ಭದ್ರತಾ ಪಿಂಚಣಿಗಳು ಹಲವು ತಿಂಗಳುಗಳಿಂದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಕಳೆದ ಆರು ತಿಂಗಳಿಂದ ಮಾಸಾಶನ ಬಂದಿಲ್ಲ ಎಂದು ಫಲಾನುಭವಿಗಳೇ ಅಳಲು ತೋಡಿಕೊಳ್ಳುತ್ತಿದ್ದಾರೆ. ಕಡುಬಡವರ ಬದುಕಿಗೆ ಆಸರೆಯಾಗಬೇಕಾದ ಸರ್ಕಾರ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನವೂ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಮನೆ ಇಲ್ಲದ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ಬಡವರ ಕಲ್ಯಾಣಕ್ಕಾಗಿ ನೀಡಬೇಕಾದ ಹಣವನ್ನೇ ಸಮಯಕ್ಕೆ ನೀಡಲು ಸಾಧ್ಯವಾಗದ ಸ್ಥಿತಿಗೆ ಕಾಂಗ್ರೆಸ್ ಸರ್ಕಾರ ತಲುಪಿದೆ ಎಂದು ವಿಜಯೇಂದ್ರ ಹೇಳಿದರು.

ರೈತರು, ಕೂಲಿ ಕಾರ್ಮಿಕರು, ವೃದ್ಧರು, ಅಂಗವಿಕಲರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರನ್ನು ಸರ್ಕಾರ ನಿರ್ಲಕ್ಷ್ಯದಿಂದ ನೋಡುತ್ತಿದೆ. ಒಂದು ಕಡೆ ಗ್ಯಾರಂಟಿಗಳ ಪ್ರಚಾರದಲ್ಲಿ ಸರ್ಕಾರ ಮುಳುಗಿದ್ದರೆ, ಮತ್ತೊಂದೆಡೆ ನಾಡಿನ ಕಡುಬಡವರ ನೈಜ ಸಮಸ್ಯೆಗಳು ಕಡೆಗಣನೆಯಾಗಿವೆ ಎಂದು ದೂರಿದರು.

ಸಂಚಾರ ನಿಯಮ ಉಲ್ಲಂಘನೆಯಲ್ಲಿ ಪೊಲೀಸ್, ಸರ್ಕಾರಿ ವಾಹನಗಳೇ ಮುಂದು: 85,844 ಪ್ರಕರಣ ದಾಖಲು

0

ಬೆಂಗಳೂರು: ಸಾಮಾನ್ಯ ನಾಗರಿಕರು ಹೆಲ್ಮೆಟ್ ಹಾಕದಿದ್ದರೆ, ಸಿಗ್ನಲ್ ಜಂಪ್ ಮಾಡಿದರೆ ಅಥವಾ ಸೀಟ್‌ಬೆಲ್ಟ್ ಮರೆತರೆ ಕ್ಷಣಾರ್ಧದಲ್ಲಿ ಮೊಬೈಲ್‌ಗೆ ಇ-ಚಲನ್ ಮೆಸೇಜ್ ಬರುತ್ತದೆ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರ್ಕಾರಿ ಹಾಗೂ ಸ್ವತಃ ಪೊಲೀಸ್ ವಾಹನಗಳೇ ನಿತ್ಯ ಸಂಚಾರ ನಿಯಮ ಉಲ್ಲಂಘಿಸುತ್ತಿರುವುದು ಗೃಹ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶಗಳಿಂದ ಬಯಲಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜನರಿಗೆ ಸಂಚಾರ ನಿಯಮ ಪಾಠ ಹೇಳಬೇಕಾದ ಪೊಲೀಸ್ ಇಲಾಖೆಯ ವಾಹನಗಳೇ ರಾಜಾರೋಷವಾಗಿ ನಿಯಮ ಉಲ್ಲಂಘಿಸಿವೆ. ಕಳೆದ ಮೂರೂವರೆ ವರ್ಷಗಳಲ್ಲಿ ಪೊಲೀಸ್ ಇಲಾಖೆಯ ವಾಹನಗಳ ವಿರುದ್ಧವೇ ಬರೋಬ್ಬರಿ 3,366 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಕೇವಲ 21 ಪ್ರಕರಣಗಳಿದ್ದರೆ, 2024ರಲ್ಲಿ ಈ ಸಂಖ್ಯೆ 1,494ಕ್ಕೆ ಏರಿಕೆಯಾಗಿತ್ತು. 2025ರಲ್ಲಿ 1,251 ಹಾಗೂ 2026ರ ಜುಲೈ ಅಂತ್ಯದ ವೇಳೆಗೆ ಮತ್ತೆ 600 ಪ್ರಕರಣಗಳು ದಾಖಲಾಗಿವೆ.

ಪೊಲೀಸ್ ಇಲಾಖೆ ಮಾತ್ರವಲ್ಲದೆ ಇತರೆ ಸರ್ಕಾರಿ ಕಚೇರಿಗಳ ವಾಹನಗಳೂ ಸಂಚಾರ ನಿಯಮಗಳನ್ನು ಗಾಳಿಗೆ ತೂರಿವೆ. ಕಳೆದ ಮೂರೂವರೆ ವರ್ಷಗಳಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ವಾಹನಗಳ ಮೇಲೆ ಬರೋಬ್ಬರಿ 82,478 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 1,055 ಪ್ರಕರಣಗಳಿದ್ದರೆ, 2024ರಲ್ಲಿ ಅತಿ ಹೆಚ್ಚು ಅಂದರೆ 35,832 ಹಾಗೂ 2025ರಲ್ಲಿ ದಾಖಲೆಯ 38,282 ಪ್ರಕರಣಗಳು ದಾಖಲಾಗಿವೆ.

ಪ್ರಸಕ್ತ 2026ರ ಜುಲೈವರೆಗೆ 7,309 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆಯಾಗಿ ಪೊಲೀಸ್ ಹಾಗೂ ಸರ್ಕಾರಿ ಇಲಾಖೆಗಳೆರಡೂ ಸೇರಿ ಬರೋಬ್ಬರಿ 85,844 ಬಾರಿ ನಿಯಮ ಉಲ್ಲಂಘಿಸಿದ್ದು, ಸರ್ಕಾರಿ ಬೋರ್ಡ್ ಇರುವುದರಿಂದ ಯಾರೂ ಏನೂ ಮಾಡಲಾಗದು ಎಂಬ ಉಡಾಫೆ ಮನಸ್ಥಿತಿಯನ್ನು ಈ ಅಂಕಿ-ಅಂಶಗಳು ಎತ್ತಿ ತೋರಿಸುತ್ತಿವೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡರ್ ಮೇಲೆ ಕೊಲೆ ಯತ್ನ: ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಹಲ್ಲೆ

0

ಬೆಂಗಳೂರು: ಕರ್ತವ್ಯನಿರತ ಜೈಲು ವಾರ್ಡರ್ ಮೇಲೆ ಜೈಲುವಾಸಿಗಳು ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ.

ಹಲ್ಲೆಗೊಳಗಾದವರು ಜೈಲು ವೀಕ್ಷಕ ಮಂಜುನಾಥ ಹವೇಲಿ. ಸೆಪ್ಟೆಂಬರ್ 2ರಂದು ಬೆಳಗ್ಗೆ 11.30ರ ಸುಮಾರಿಗೆ ಘಟನೆ ನಡೆದಿದ್ದು, ಮಂಗಳೂರಿನ ಭಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಕೈದಿಗಳಾದ ಮೊಹಮ್ಮದ್ ಮುಜಾಮಿಲ್, ಅಬ್ದುಲ್ ಶಫ್ಘಾನ್, ಮೊಹಮ್ಮದ್ ರಿಜ್ವಾನ್, ನಯಾಜ್ ಹಾಗೂ ಕಲಂದರ್ ಶಫಿ ಈ ಕೃತ್ಯವೆಸಗಿರುವುದು ತಿಳಿದುಬಂದಿದೆ.

ಹಲ್ಲೆಗೊಳಗಾದ ಮಂಜುನಾಥ್ ಪ್ರಸ್ತುತ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದಂತೆ ವಿಷಯ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ವಿಚಾರವಾಗಿ ಶಿಕ್ಷಾ ಬಂಧಿ ವಿಭಾಗಕ್ಕೆ ತೆರಳಿದ್ದ ವೇಳೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಏಕಾಏಕಿ ವಾರ್ಡರ್ ಮೂಗಿಗೆ ಗುದ್ದಿ ಕೊಲೆಗೆ ಯತ್ನಿಸಿದ್ದಾರೆ.

ಐವರು ಆರೋಪಿಗಳು ಮಂಜುನಾಥ್ ಅವರನ್ನು ಕೊಠಡಿ ಸಂಖ್ಯೆ 04ಕ್ಕೆ ಎಳೆದೊಯ್ದು ಮೊದಲು ಮನಸೋ ಇಚ್ಛೆ ಹಲ್ಲೆ ಮಾಡಿದ್ದು, ಬಳಿಕ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿದ್ದಾರೆ. ಅಷ್ಟರೊಳಗೆ ಕರ್ತವ್ಯನಿರತ ಇನ್ನುಳಿದ ಅಧಿಕಾರಿ ಮತ್ತು ಸಿಬ್ಬಂದಿ ಮಂಜುನಾಥ್ ಅವರನ್ನು ರಕ್ಷಿಸಿದ್ದಾರೆ.

ಮುಖ್ಯ ಅಧೀಕ್ಷಕರ ಮೌಖಿಕ ಆದೇಶದ ಮೇರೆಗೆ, ತಿಂಗಳ ಹಿಂದೆ ಕೆಲ ಜೈಲು ಬಂಧಿಗಳನ್ನು ಭದ್ರತಾ ವಿಭಾಗದಿಂದ ಅನೆಕ್ಸ್-1 ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ಈ ವೇಳೆ ಆರೋಪಿಗಳಿಗೆ ಹೆಚ್ಚುವರಿ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮಂಜುನಾಥ್ ಅವಕಾಶ ನೀಡಿರಲಿಲ್ಲ. ಬಂಧಿಗಳ ವಸ್ತುಗಳನ್ನು ತಪಾಸಣೆ ಮಾಡಿದ್ದಕ್ಕೆ ಮಂಜುನಾಥ್ ಮತ್ತು ಹಲ್ಲೆ ಮಾಡಿದ ಆರೋಪಿಗಳ ನಡುವೆ ವಾಗ್ವಾದ ನಡೆದಿತ್ತು.

ಜೊತೆಗೆ ಜೈಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಂಜುನಾಥ್ ಮಾಹಿತಿ ನೀಡುತ್ತಿದ್ದ ಕಾರಣ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಈ ಹಲ್ಲೆ ನಡೆದಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಲ ಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ: ಸಿಎಂ ಡಿ ಕೆ ಶಿವಕುಮಾರ್

0

ಬೆಂಗಳೂರು: “ಸಾಲ ಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. “ಬರಗಾಲ ಎಂದು ಪ್ರಧಾನಮಂತ್ರಿಗಳೇ ಹೇಳಿದ್ದು, ಕೇಂದ್ರ ಸರ್ಕಾರ ಸಾಲಮನ್ನಾ ಮಾಡಿಸುವ ಜವಾಬ್ದಾರಿ ಹೊರಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಇತರೆ ನಾಯಕರು ತಮ್ಮೊಂದಿಗೆ ದೆಹಲಿಗೆ ಬಂದು ಕೇಂದ್ರ ಸರ್ಕಾರದಿಂದ ಅನುದಾನ ಹಾಗೂ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಬೇಕು. ಬರಗಾಲಕ್ಕೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.

ಬರಗಾಲ; ವಿಪಕ್ಷಗಳಿಂದ ರಾಜಕಾರಣ

“ಬರ ಪರಿಸ್ಥಿತಿ ಕುರಿತಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ವಿಪಕ್ಷಗಳಿಗೆ ರೈತರು ಹಾಗೂ ಬರ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು, ಚರ್ಚಿಸಲು ಕಿಂಚಿತ್ತೂ ಆಸಕ್ತಿ ಇಲ್ಲ. ಬರ ಪರಿಸ್ಥಿತಿ ಚರ್ಚೆ ಬಗ್ಗೆ ಜನತಾ ದಳ ಮತ್ತು ಬಿಜೆಪಿ ಶಾಸಕರೇ ನನ್ನ ಬಳಿ ಬಂದು ಬೇಸರ ತೋಡಿಕೊಂಡಿದ್ದಾರೆ. ಅದಕ್ಕಾಗಿಯೇ ಪ್ರತ್ಯೇಕವಾಗಿ ವಿಶೇಷ ಅಧಿವೇಶನ ನಡೆಸಲಿದ್ದೇವೆ. ಆಯಾ ಕ್ಷೇತ್ರಗಳ ಭಾವನೆ, ಪರಿಸ್ಥಿತಿ ಅರ್ಥಮಾಡಿಕೊಂಡು ನಾನು ಅವರಿಗೆ ಸಹಾಯ ಮಾಡಬೇಕು. ನೈಜ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಬದಲು ವಿಪಕ್ಷಗಳು ರಾಜಕಾರಣ ಮಾಡುತ್ತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

3 ದಿನಗಳ ವಿಶೇಷ ಅಧಿವೇಶನ

“ರೈತರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲು ರಾಜ್ಯ ಸರ್ಕಾರವು ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನದಲ್ಲಿ ಸಂಪೂರ್ಣವಾಗಿ ರಾಜ್ಯದ ಬರ ಪರಿಸ್ಥಿತಿ, ರೈತರ ತೊಂದರೆಗಳು ಮತ್ತು ಪಶ್ಚಿಮ ಘಟ್ಟಗಳ ಕುರಿತಾದ ಕಸ್ತೂರಿರಂಗನ್ ವರದಿಗೆ ರಾಜ್ಯ ಸಲ್ಲಿಸಬೇಕಾದ ಆಕ್ಷೇಪಣೆಗಳ ಬಗ್ಗೆ ಮಾತ್ರ ಚರ್ಚಿಸಲಾಗುವುದು” ಎಂದು ಸ್ಪಷ್ಟಪಡಿಸಿದರು.

ಅಧಿವೇಶನವನ್ನು 7 ದಿನಗಳಿಗೆ ವಿಸ್ತರಿಸಬೇಕೆಂಬ ವಿಪಕ್ಷಗಳ ಬೇಡಿಕೆಯ ಬಗ್ಗೆ ಕೇಳಿದಾಗ, “ಎಲ್ಲರ ಅಭಿಪ್ರಾಯವನ್ನು ನಾವು ಕೇಳುತ್ತೇವೆ. ಕೆಲವು ನಾಯಕರು ಮಾತ್ರ ತಕರಾರು ಮಾಡುತ್ತಾರೆ ಎಂದರೆ ಉಳಿದ ಶಾಸಕರು ಏನು ಮಾಡಬೇಕು. ಎಲ್ಲರೂ ಜನ ಪ್ರತಿನಿಧಿಗಳೇ, ಚರ್ಚೆಗಳಾಗಲಿ” ಎಂದರು.

ಬೆಂಗಳೂರು ದಟ್ಟಣೆ ತಪ್ಪಿಸಬೇಕು:

ನೀತಿ ಆಯೋಗದ ಜತೆಗಿನ ಸಭೆಯಲ್ಲಿ ರಾಜ್ಯಕ್ಕೆ ಅನುದಾನ ಹಂಚಿಕೆ ಸರಿಯಾಗಿ ಆಗಬೇಕು ಎಂದು ಆಗ್ರಹಿಸಿದ್ದೀರಿ ಎಂದು ಕೇಳಿದಾಗ, “ಹೊಸ ಬೆಂಗಳೂರು ನಿರ್ಮಾಣ ಮಾಡಬೇಕೆಂದು ನೀತಿ ಆಯೋಗದ ಉಪಾಧ್ಯಕ್ಷರ ಬಳಿ ಚರ್ಚಿಸಲಾಗಿದೆ. ಅದಕ್ಕೆ ಅಗತ್ಯವಿರುವ ನೆರವನ್ನು ಸರ್ಕಾರ ನೀಡಲಿದೆ ಎಂದರು. ಕರ್ನಾಟಕ , ಬೆಂಗಳೂರು ಬಹಳ ಮುಖ್ಯ ಎಂದೂ ಅವರು ಹೇಳಿದ್ದಾರೆ” ಎಂದು ತಿಳಿಸಿದರು.

ಬಿಜೆಪಿಯವರು ಅಭಿವೃದ್ದಿಯ ವಿರೋಧಿಗಳು

ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆದಿರುವ ಕುರಿತು ಸಿಎಂ ‘ಯು-ಟರ್ನ್’ ಮಾಡಿದ್ದಾರೆ ಎಂಬ ಆರೋಪಗಳ ಬಗ್ಗೆ ಕೇಳಿದಾಗ, “ನಾನು ಯೂಟರ್ನ್ ಏಕೆ ಮಾಡಬೇಕು. ಜನರ ಭಾವನೆಗಳಿಗೆ ಬೆಲೆ ನೀಡಲಾಗಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರ ಕಾಲದಲ್ಲಿ ಏನಾಗಿದೆ ಎಂಬ ಪಟ್ಟಿ ಬಿಡುಗಡೆ ಮಾಡುತ್ತೇವೆ. ಈ ಬಗ್ಗೆ ಚರ್ಚೆಯಾಗಬೇಕು. ಲಾಲ್ ಬಾಗ್ ನಲ್ಲಿಯೇ ಟನಲ್ ಮಾಡಬೇಕೆಂಬ ಉದ್ದೇಶವಿಲ್ಲ. ಇದಕ್ಕೆ ಪರ್ಯಾಯ ಮಾರ್ಗವನ್ನು ಪರಿಶೀಲಿಸಲಾಗುವುದು.

ಹಿಂದೆ ಸಿದ್ದರಾಮಯ್ಯನವರು ಸ್ಟೀಲ್ ಬ್ರಿಡ್ಜ್ ಮಾಡಲು ಹೊರಟಾಗಲು ಬಿಜೆಪಿ ವಿರೋಧಿಸಿತ್ತು. ಬಿಜೆಪಿಯವರು ಅಭಿವೃದ್ದಿಯ ವಿರೋಧಿಗಳು. ಬೆಂಗಳೂರಿಗೆ ಏನಾದರೂ ಶಾಪವಿದ್ದರೆ ಅದು ಬಿಜೆಪಿಯವರದ್ದು. ಅವರ ಕಾಲದಲ್ಲಿ ಒಂದು ಯಾವುದಾದರೂ ಈ ರೀತಿಯ ಗುರುತರ ಯೋಜನೆ ಪಾರಂಭಿಸಿದ್ದರೆ ತಿಳಿಸಲಿ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟನಲ್ ರಸ್ತೆ, ಡಬಲ್ ಡೆಕ್ಕರ್ ಮಾರ್ಗಗಳು, ಯೋಜನೆಗಳು ಅತ್ಯಗತ್ಯ. ಟನಲ್ ರಸ್ತೆ ಬೇಡ ಎನ್ನುವವರು ಅದಕ್ಕೆ ಪರ್ಯಾಯ ಏನು ಎಂಬುದನ್ನು ಹೇಳಬೇಕಲ್ಲವೇ” ಎಂದು ಸವಾಲು ಹಾಕಿದರು.

ನಾಲಿಗೆಯ ಮೇಲೆ ಹತೋಟಿ ಇರಲಿ

“ನಾನು ಸಿಎಂ ಸ್ಥಾನದಲ್ಲಿ ಕೂತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಬಳಸುವ ಪದಗಳನ್ನು ಬಳಸಲಾಗುವುದಿಲ್ಲ. ನನಗೆ ಗೌರವ ಕೊಡದಿದ್ರೂ ನಾಡಿನ ಜನತೆ ಹಾಗೂ ಪಕ್ಷ ಕೊಟ್ಟಿರುವ ಸ್ಥಾನಕ್ಕಾದರೂ ಬೆಲೆ ಕೊಡಲಿ. ನಿಮ್ಮ ನಾಲಿಗೆಯ ಮೇಲೆ ಹತೋಟಿ ಇರಲಿ ಎಂದು ನಮ್ರತೆಯಿಂದ ಹೇಳುತ್ತಿದ್ದೇನೆ. ನಿಮ್ಮ ತಂದೆಯವರೂ ಕೂಡ ಇದೇ ಸ್ಥಾನವನ್ನು ಅಲಂಕರಿಸಿದ್ದರು ಎನ್ನುವ ಪರಿವೆ ಇರಲಿ. ಅವರ ಬೇಡಿಕೆಗಳನ್ನು ಕೇಳಲಿ, ಅದರಲ್ಲಿ ತಪ್ಪಿಲ್ಲ. ಈ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡಲು ಮಾತ್ರ ವಿಧೇಯಕ ಹಿಂಪಡೆಯಲಾಗಿದೆ” ಎಂದರು.

ಉದ್ಯಾನವನವನ್ನು ಮಾರುತ್ತಿಲ್ಲ

“ಚರ್ಚೆ ಮಾಡಬೇಕೆನ್ನುವ ಕಾರಣದಿಂದ ವಿಧೇಯಕವನ್ನು ಹಿಂಪಡೆಯಲಾಗಿದೆ. 16.5 ಕಿ.ಮೀ ಟನಲ್ ರಸ್ತೆ ಯೋಜನೆಗಾಗಿ ಲಾಲ್‌ಬಾಗ್ ಜಾಗವನ್ನು ಕಬಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ನಾವು ಉದ್ಯಾನವನಗಳನ್ನು ಮಾರಾಟ ಮಾಡುತ್ತಿಲ್ಲ. ಮೆಟ್ರೋಗೆ ಜಾಗ ಕೊಡಲು ಭೂಮಿಯನ್ನು ವರ್ಗಾಯಿಸಬೇಕು” ಎಂದು ಸ್ಪಷ್ಟಪಡಿಸಿದರು.

“ನಾವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ, ಅದರಿಂದ ಅವರ ವೈಫಲಯಗಳು ಬಯಲಾಗುತ್ತವೆ ಎಂದು ತಿಳಿದೇ ಅಧಿವೇಶನವನ್ನು ನಡೆಸಲು ವಿರೋಧ ಪಕ್ಷದವರು ಬಿಡಲಿಲ್ಲ” ಎಂದು ತಿಳಿಸಿದರು.

“ನಾನು ಅವರಷ್ಟು ವಿದ್ಯಾವಂತರಲ್ಲದಿದ್ದರೂ ನನಗೂ ದೇವರು ಅಷ್ಟೋ ಇಷ್ಟೋ ಸಾಮಾನ್ಯ ಜ್ಞಾನ ಕೊಟ್ಟಿದ್ದಾರೆ. ಜೆಪಿ ಪಾರ್ಕ್ ಸೇರಿದಂತೆ ಎಲ್ಲಾ ಸ್ಥಳಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಅನಾವಶ್ಯಕವಾಗಿ ನನ್ನನ್ನು ಕೆಣಕುವುದು ಬೇಡ” ಎಂದು ತಿರುಗೇಟು ನೀಡಿದರು.

ನಮ್ಮ ಯಾತ್ರೆಯನ್ನೂ ನೋಡಿ

“ಮೆಟ್ರೋ, ಶಾಸಕರ ಭವನ,ಪ್ರೆಸ್ ಕ್ಲಬ್, ಬಸವ ಭವನ, ಹೈಕೋರ್ಟ್ ಪಾರ್ಕಿಂಗ್ ಹಾಗೂ ಇಂದಿರಾ ಗಾಂಧಿ ಫೌಂಟೇನ್‌ಗೆ ಹಿಂದೆ ಸಾರ್ವಜನಿಕ ಭೂಮಿಯನ್ನೇ ನೀಡಲಾಗಿತ್ತು. ಕಾಲಕಾಲಕ್ಕೆ ಕೆಲವು ನಿರ್ಣಯಗಳಾಗಿವೆ. ಎಲ್ಲಾ ಸೇರಿ ಕೆಲಸ ಮಾಡೋಣ ಎಂದು ಈಗಾಗಲೇ ಹೇಳಿದ್ದೇನೆ. ಸಲಹೆ ಸ್ವೀಕಾರ ಮಾಡಿದರೆ ಯೂ ಟರ್ನ್ ಮಾಡಿದ್ದೇನೆ ಎಂದಾಗುತ್ತದೆಯೇ” ಎಂದು ಪ್ರಶ್ನಿಸಿದರು.

“ಸಚಿವ ನಾಗೇಂದ್ರ ಅವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದರು. ಆದರೂ ಪಾದಯಾತ್ರೆ ಮಾಡುತ್ತಿದ್ದಾರೆ. ನನ್ನ ಯಾತ್ರೆಯನ್ನೂ ನೀವು ನೋಡಿ” ಎಂದರು. ಸರ್ಕಾರದ ಮತ್ತೊಂದು ವಿಕೆಟ್ ಪತನವಾಗಲಿದೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ ಎಂದು ಕೇಳಿದಾಗ, “ನನ್ನನ್ನೇ ಪತನ ಮಾಡುವುದಾಗಿ ಕೆಲವರು ಹೇಳಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾಗಲಿ ಸಂತೋಷ. ತಪ್ಪು ಮಾಡಿದ್ದರೆ ಎಲ್ಲರೂ ಶಿಕ್ಷೆಗೆ ಒಳಗಾಗಬೇಕು, ಅದಕ್ಕೆ ನಾನೂ ಹೊರತಾಗಿಲ್ಲ” ಎಂದರು.

ಪ್ರಾಸಿಕ್ಯೂಷನ್ ಅನುಮತಿ; ಪರಿಶೀಲನೆ ಬಾಕಿ ಇದೆ

“ಈಗ ನಾನು ಪ್ರಾಸಿಕ್ಯೂಷನ್ ಅನುಮತಿ, ಬಗ್ಗೆ ಯೋಚನೆ ಮಾಡಿಲ್ಲ. ಬಿ. ನಾಗೇಂದ್ರ, ಜಿ. ಜನಾರ್ದನ ರೆಡ್ಡಿ ಹಾಗೂ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರ ಪ್ರಾಸಿಕ್ಯೂಷನ್‌ಗೆ ಸಂಬಂಧಿಸಿದಂತೆ ರಾಜ್ಯಪಾಲರಿಂದ ಕಡತಗಳು ಬಂದಿವೆ. ಅದನ್ನು ಇನ್ನೂ ಕಾನೂನಾತ್ಮಕವಾಗಿ ಪರಿಶೀಲಿಸಿಲ್ಲ. ಸಾರಾಂಶ ಸರಿಯಿದೆಯೇ ಎಂದು ಪರಿಶೀಲಿಸಬೇಕಿದೆ. ಒಬ್ಬರಿಗೆ ಒಂದು ಆಗಿದೆಯೇ ಎಂದು ಪರಿಶೀಲಿಸಬೇಕು. ಈ ಬಗ್ಗೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ದೆಹಲಿ, ಮಹಾರಾಷ್ಟ್ರಗಳಲ್ಲಿ ಟನಲ್ ನಿಲ್ಲಿಸಲಿ

“ಲಾಲ್ ಬಾಗ್ ವಿಚಾರದಲ್ಲಿ ತೋಟಗಾರಿಕಾ ಇಲಾಖೆಯ ಸ್ಥಳವನ್ನು ವರ್ಗಾಯಿಸುವ ಜಾಗವಾಗಿದ್ದು, ಹಿಂದೆಲ್ಲಾ ವಿಶೇಷ ಆದೇಶಗಳನ್ನು ಸಣ್ಣ ಸಣ್ಣ ಜಾಗಗಳಿಗೆ ಮಾಡಲಾಗಿದೆ. ಅಧಿಕಾರಿಗಳು ಇದನ್ನು ಪ್ರಸ್ತಾಪಿಸಿದಾಗ ಒಪ್ಪಿಗೆ ನೀಡಲಾಗಿದೆಯೇ ಹೋರತು, ಟನಲ್ಗಾಗಿಯೇ ಮಾಡುತ್ತಿದ್ದೆವೆ ಎಂದಲ್ಲ. ಹಾಗಾದರೆ ವಿಪಕ್ಷಗಳು ದೆಹಲಿ, ಮಹಾರಾಷ್ಟ್ರಗಳಲ್ಲಿ ಟನಲ್ ನಿಲ್ಲಸಲಿ.

ಜಾರ್ಜ್ ಅವರ ಕಾಲದಲ್ಲಿ ಸ್ಟೀಲ್ ಸೇತುವೆಯನ್ನು ನಿಲ್ಲಿಸಿದರು. ವಾಹನಗಳನ್ನು ನಿಲ್ಲಿಸಿ ಎಂದು ಹೇಳಲಾಗುತ್ತದೆಯೇ? ಮೆಟ್ರೋಗೆ ಏನು ಬೇಕೋ ಅದನ್ನು ಮಾಡುತ್ತಿದ್ದೇವೆ. 40 ಕಿ.ಮೀ ಡಬಲ್ ಡೆಕ್ಕರ್ ಯೋಜನೆಗೆ ಅನುಮತಿ ಕೇಳಿದರೆ, 13 ಕಿ.ಮೀ ಮಾತ್ರ ಮಾಡಿ ಎಂದಿದ್ದಾರೆ. ಡಬಲ್ ಡೆಕ್ಕರ್ ನಿಂದ ಮೇಲ್ಸೇತುವೆಯಲ್ಲಿ ಕಾರು ಹಾಗೂ ಇತರೆ ವಾಹನ ಸಾಗುತ್ತದೆ. ಅದರ ಮೇಲೆ ಮೆಟ್ರೋ ಹೋಗುತ್ತಿತ್ತು. ಆದರೂ ಆದರೂ ಅನುಮತಿ ನೀಡಲು ಹಿಂದೇಟು ಹಾಕುತ್ತಾರೆ. ಇದು ಬಿಜೆಪಿಯ ನಿಲುವು. ಚೆನ್ನೈನಲ್ಲಿ 20 ಕಿ.ಮೀ ಡಬ್ಬಲ್ ಡೆಕ್ಕರ್ ಇದೆ” ಎಂದು ತಿಳಿಸಿದರು.

ಕಸ್ತೂರಿ ರಂಗನ್ ವರದಿ: ರಾಜ್ಯದ ಹಿತಾಸಕ್ತಿಯ ವಿಚಾರ

“ಕಸ್ತೂರಿ ರಂಗನ್ ವರದಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿರಸ್ಕರಿಸಿದರು. ಸುಮಾರು ಜಿಲ್ಲೆ ಗ್ರಾಮಗಳಿಗೆ ಇದರಿಂದ ಪರಿಣಾಮ ಬೀರಲಿದೆ ಎಂದು ವಿಚಾರ ಮಾಡಬೇಕಿದೆ. ಇದು ರಾಜ್ಯದ ಹಿತಾಸಕ್ತಿಯ ವಿಚಾರ. ಹೀಗಾಗಿ ಈ ಬಗ್ಗೆ ಚರ್ಚೆಗೆ ಅಧಿವೇಶನ ಕರೆಯಲಾಗಿದೆ” ಎಂದರು.

ಮೈಸೂರು ದಸರಾ ಸಂಭ್ರಮಕ್ಕೆ ಹೊಸ ಮೆರುಗು

“ಮೈಸೂರು ದಸರಾ ಸಿದ್ದತೆಗಳ ಬಗ್ಗೆ ಕೇಳಿದಾಗ, “ದಸರಾ ಸಿದ್ಧತೆಗಳ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಹೊಸ ಚಿಂತನೆ, ಆಲೋಚನೆಗಳು, ಹೊಸ ಆವಿಷ್ಕಾರಗಳನ್ನು ದಸರಾದಲ್ಲಿ ತರಲಾಗುವುದು. ಭಾರತೀಯ ವಾಯುಪಡೆ ಹಾಗೂ ರಕ್ಷಣಾ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಾಗಿದ್ದು, ವಾಯುಪಡೆಯ ತುಕಡಿಯನ್ನು ಒಳಗೊಳ್ಳಲು ಹಾಗೂ ಬೀದರ್, ಗುಲ್ಬರ್ಗ ಸೇರಿದಂತೆ ದಕ್ಷಿಣ ಭಾರತದ ವಿವಿಧ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ದಸರಾ ಆಚರಣೆ ಕುರಿತು ಅನೇಕ ಸಲಹೆಗಳನ್ನು ಸ್ವೀಕರಿಸಲಾಗಿದೆ” ಎಂದು ತಿಳಿಸಿದರು.

9 ತಿಂಗಳ ಗರ್ಭಿಣಿ ಪತ್ನಿಯನ್ನೇ ಕೊಂದ ಪತಿ! ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

0

ಚಿಕ್ಕಮಗಳೂರು: ಒಂಬತ್ತು ತಿಂಗಳ ಗರ್ಭಿಣಿ ಪತ್ನಿಯನ್ನೇ ನಿರ್ದಯವಾಗಿ ಹತ್ಯೆ ಮಾಡಿದ್ದ 38 ವರ್ಷದ ವ್ಯಕ್ತಿಗೆ ಚಿಕ್ಕಮಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ.

ಚಿಕ್ಕಮಗಳೂರು ನಗರದ ಶಂಕರಪುರ ನಿವಾಸಿ ಲಕ್ಷ್ಮಣಗೌಡ ಅವರ ಪುತ್ರ ಮಂಜುನಾಥ್ ಅಲಿಯಾಸ್ ಮಂಜು ಶಿಕ್ಷೆಗೆ ಗುರಿಯಾಗಿದ್ದು, 2025ರ ಜನವರಿ 14ರಂದು ಈತ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಪರಿಣಾಮ ಮಗುವಿಗೆ ಜನ್ಮ ನೀಡಿದ ಬಳಿಕ ಆಕೆ ಪ್ರಾಣಬಿಟ್ಟಿದ್ದಳು.

ಪ್ರಕರಣ ಏನು?

ಜನವರಿ 14ರಂದು ಸಂಜೆ 6ರ ಸುಮಾರಿಗೆ ಕೆಲಸ ಮುಗಿಸಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಮಂಜುನಾಥ್, ಪತ್ನಿ ಶಾರದಾ ಬಳಿ ಊಟ ಕೇಳಿದ್ದ. ಬಳಿಕ ಜಗಳ ಆರಂಭಿಸಿದ ಈತ ಆಕೆಯ ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ತಳ್ಳಿ, ತಲೆಗೆ ಗುದ್ದಿ, ಹೊಟ್ಟೆಗೆ ಕಾಲಿನಿಂದ ಒದ್ದು ಬೆದರಿಕೆ ಹಾಕಿದ್ದ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಶಾರದಾ ಅವರನ್ನು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಹಿಮ್ಸ್) ದಾಖಲಿಸಲಾಗಿತ್ತು. ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಗಾಯಗಳಿಂದ ಅವರು ಮೃತಪಟ್ಟಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರದಾ ಕುಟುಂಬದ ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಎಚ್.ಎಸ್. ಲೋಹಿತಾಶಾಚಾರ್ ಪ್ರಕರಣದ ವಾದ ಮಂಡಿಸಿದ್ದರು.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 103ರ ಅಡಿ ಮಂಜುನಾಥ್ ತಪ್ಪಿತಸ್ಥನೆಂದು ತೀರ್ಪು ನೀಡಿದ ನ್ಯಾಯಾಧೀಶ ಕಿರಣ್ ಕಿಣಿ, ಜೀವಾವಧಿ ಶಿಕ್ಷೆ ಹಾಗೂ 75,000 ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 10 ತಿಂಗಳ ಸರಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಅಲ್ಲದೆ, ಶಾರದಾ ಅವರ ತಾಯಿ ಶಂಕರಪುರದ ಸಿದ್ದಮ್ಮ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಡಿಎಲ್‌ಎಸ್‌ಎ) ನ್ಯಾಯಾಲಯ ಶಿಫಾರಸು ಮಾಡಿದೆ.

ಮಗನೇ ಆದರೂ ತಪ್ಪು ಮಾಡಿದರೆ ತಪ್ಪೇ, ಕಾನೂನು ನೋಡಿಕೊಳ್ಳುತ್ತದೆ: ದುನಿಯಾ ವಿಜಯ್

0

ಸಿಟಿ ಲೈಟ್ಸ್ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ದುನಿಯಾ ವಿಜಯ್, ತಮ್ಮ ಸಾಂಸಾರಿಕ ವಿಚಾರಗಳ ಕುರಿತು ಇನ್ನು ಮುಂದೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಕುಟುಂಬ ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದಾಗಿಯೂ, ಮಕ್ಕಳ ವಿಚಾರ ಸೇರಿದಂತೆ ಎಲ್ಲವನ್ನೂ ತಿಳಿಸಿರುವುದಾಗಿಯೂ ಅವರು ಹೇಳಿದ್ದಾರೆ. ಈ ಬಗ್ಗೆ ಇನ್ನು ಮುಂದೆ ಯಾವುದೇ ಮಾತುಕತೆ ಇಲ್ಲ ಎಂದು ಅವರು ಫುಲ್ ಸ್ಟಾಪ್ ಇಟ್ಟಿದ್ದಾರೆ.

ಇದೇ ವೇಳೆ ಮಗನ ಪ್ರಕರಣದ ಕುರಿತೂ ಸ್ಪಷ್ಟನೆ ನೀಡಿದ ದುನಿಯಾ ವಿಜಯ್, ಮಗನಾದರೂ ತಪ್ಪು ಮಾಡಿದರೆ ಅದು ತಪ್ಪೇ ಆಗಿದ್ದು, ಕಾನೂನು ಅದನ್ನು ನೋಡಿಕೊಳ್ಳುತ್ತದೆ ಎಂದು ಹೇಳಿದರು. “ನಾನು ವಿಷಕಂಠ, ಎಲ್ಲವನ್ನೂ ನುಂಗಿ ಸಹಿಸಿಕೊಳ್ಳುತ್ತೇನೆ” ಎಂದು ಪ್ರತಿಕ್ರಿಯಿಸಿದ ಅವರು,

ಮಗನ ಜೊತೆ ಮಾತನಾಡಿ ಬುದ್ಧಿ ಹೇಳಿರುವುದಾಗಿ ತಿಳಿಸಿದರು. ಮಕ್ಕಳಿದ್ದಾಗ ಜಗಳ ಇದ್ದೇ ಇರುತ್ತದೆ, ಇದು ಎಲ್ಲರ ಜೀವನದಲ್ಲೂ ಸಾಮಾನ್ಯ ಎಂದು ಅಭಿಪ್ರಾಯಪಟ್ಟ ವಿಜಿ, ತಾವೂ ಸಹ ಮಗನಿಗೆ ಬುದ್ಧಿ ಹೇಳಿರುವುದಾಗಿ ತಿಳಿಸಿ, ಫ್ಯಾಮಿಲಿ ವಿಚಾರಗಳ ಬಗ್ಗೆ ಮತ್ತೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೆಚ್ಚು ವೀವ್ಸ್ ಪಡೆದ ರೀಲ್ಸ್‌ಗೆ ನಗದು ಬಹುಮಾನ”: ‘ರುದ್ರಾಭಿಷೇಕಂ’ ಚಿತ್ರತಂಡದ ಹೊಸ ಘೋಷಣೆ

ಬೆಂಗಳೂರು: ಕನ್ನಡದ ‘ರುದ್ರಾಭಿಷೇಕಂ’ ಸಿನಿಮಾ ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದ ಪ್ರಚಾರಕ್ಕೆ ಸಿನಿಮಾ ತಂಡ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ವಿಜಯ್ ರಾಘವೇಂದ್ರ ಮತ್ತು ಪ್ರಿಯಾಂಕಾ ತಿಮ್ಮೇಶ್ ಅಭಿನಯದ ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡುವವರಿಗೆ ವೀವ್ಸ್ ಆಧಾರದ ಮೇಲೆ ನಗದು ಬಹುಮಾನ ನೀಡುವುದಾಗಿ ನಿರ್ಮಾಣ ಸಂಸ್ಥೆ ಘೋಷಿಸಿದೆ.

ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವಂತೆ ತಿಳಿಸಿದೆ. ಸಿನಿಮಾ ಬಿಡುಗಡೆಯಾಗಿ ಮೂರು ದಿನಗಳ ಬಳಿಕ ಹೆಚ್ಚು ವೀವ್ಸ್ ಪಡೆದ ರೀಲ್ಸ್‌ಗಳನ್ನು ಪರಿಗಣಿಸಿ ಬಹುಮಾನ ನೀಡಲಾಗುತ್ತದೆ.

ಹೆಚ್ಚು ವೀವ್ಸ್ ಪಡೆದವರಿಗೆ ₹10 ಸಾವಿರ ಮೊದಲ ಬಹುಮಾನ, ₹7,500 ಎರಡನೇ ಬಹುಮಾನ ಹಾಗೂ ₹5 ಸಾವಿರ ಮೂರನೇ ಬಹುಮಾನ ನೀಡಲಾಗುತ್ತದೆ. ಇದರ ಜತೆಗೆ ₹1 ಸಾವಿರ ಸಮಾಧಾನಕರ ಬಹುಮಾನವನ್ನೂ ಘೋಷಿಸಲಾಗಿದೆ. ರೀಲ್ಸ್ ಹಾಗೂ ವೀವ್ಸ್ ವಿವರಗಳನ್ನು 8553674555 ಮತ್ತು 9845642338 ಸಂಖ್ಯೆಗೆ ಕಳುಹಿಸಬೇಕಾಗಿದೆ.

ಇಷ್ಟೇ ಅಲ್ಲದೆ, ಹೆಚ್ಚು ವೀವ್ಸ್ ಗಳಿಸಿದ ಸ್ಪರ್ಧಿಗಳಿಗೆ ನಗದು ಬಹುಮಾನದ ಜತೆಗೆ ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಯುವಕ-ಯುವತಿಯರಿಗೆ ಈ ಆಫರ್ ವಿಶೇಷ ಅವಕಾಶವಾಗಿದೆ.

‘ರುದ್ರಾಭಿಷೇಕಂ’ ಗ್ರಾಮೀಣ ಹಿನ್ನೆಲೆಯ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ವಿಜಯ್ ರಾಘವೇಂದ್ರ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ವೀರಗಾಸೆ ಕಲಾವಿದ, ರುದ್ರನ ಅವತಾರ, ಹಳ್ಳಿಯ ಅಮಾಯಕ ಯುವಕ ಹಾಗೂ ಗಿರಿಜಾ ಮೀಸೆಯ ಖಡಕ್ ವ್ಯಕ್ತಿಯಂತಹ ಹಲವು ವಿಭಿನ್ನ ಗೆಟಪ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ವಸಂತ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದು, ಬಾಲ ರಾಜವಾಡಿ, ಮನು, ಸನತ್, ಬುಲೆಟ್ ವಿನು, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ, ಮಂಜುಳಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಪ್ರೀತಿಯ ಹೆಸರಿನಲ್ಲಿ ಕಿರುಕುಳ: ಯುವಕನ ಕಾಟಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ!

0

ಚಾಮರಾಜನಗರ: ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ ಯುವಕನ ಕಾಟಕ್ಕೆ ಬೇಸತ್ತು ಯುವತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ.

ಮೃತಳಾಗಿರುವ ವರ್ಷಾ (22) ಮೈಸೂರಿನಲ್ಲಿ ಬಿ.ಇ. ವ್ಯಾಸಂಗ ಮಾಡುತ್ತಿದ್ದರು. ಕೆಲ ದಿನಗಳಿಂದ ಯುವಕನೊಬ್ಬ ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದನೆಂದೂ, ಈ ಕಿರುಕುಳಕ್ಕೆ ಬೇಸತ್ತು ವರ್ಷಾ ಆತ್ಮಹತ್ಯೆಗೆ ಶರಣಾಗಿದ್ದಾರೆಂದೂ ಹೇಳಲಾಗಿದೆ.

ಘಟನೆಯ ಬಳಿಕ ವರ್ಷಾ ಅವರ ತಾಯಿ ನಾಗರತ್ನಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಯಳಂದೂರು ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್: ಸಾಕ್ಷಿಗೆ ಬೆದರಿಕೆ ಆರೋಪಿ ಗೌರವ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಪ್ರಮುಖ ಆರೋಪಿ, ಉಡುಪಿ ಮೂಲದ ಗೌರವ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ಬಂಧನ ಭೀತಿಯ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಗೌರವ್ ಶೆಟ್ಟಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ 59ನೇ ಸಿಸಿಎಚ್ ಕೋರ್ಟ್, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಸಾಕ್ಷಿದಾರ ಸಂದೀಪ್‌ಗೆ ವಾಟ್ಸಪ್ ಕರೆ ಮೂಲಕ ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ ಸುಹಾಸ್, ವೇಣು ಹಾಗೂ ಪುನೀತ್‌ರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿ ಗೌರವ್ ಶೆಟ್ಟಿ ಈವರೆಗೆ ತಲೆಮರೆಸಿಕೊಂಡಿದ್ದರು.

ಬಂಧಿತ ಆರೋಪಿಗಳ ವಿಚಾರಣೆ ಹಾಗೂ ಮೊಬೈಲ್ ಪರಿಶೀಲನೆ ವೇಳೆ, ಗೌರವ್ ಶೆಟ್ಟಿ ಕಿರಣ್ ರೆಡ್ಡಿ ಜೊತೆ ಕಾನ್ಫರೆನ್ಸ್ ಕರೆ ಮಾಡಿ ಸಾಕ್ಷಿಗೆ ಬೆದರಿಕೆ ಹಾಕಿದ್ದು ಬೆಳಕಿಗೆ ಬಂದಿತ್ತು. ಇದಾದ ಬಳಿಕ ಗೌರವ್ ಶೆಟ್ಟಿ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು.

ಇದೀಗ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿರುವ ಗೌರವ್ ಶೆಟ್ಟಿ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.