Home Blog Page 65

ಕಾಂಗ್ರೆಸ್ ವೀರಶೈವರ, ಶ್ರೀಮಂತರ ಪಾಲಾದ ಅಖಿಲ ಭಾರತ ವೀರಶೈವ ಮಹಾಸಭಾ: ಬಿ.ಪಿ.ಹರೀಶ್ ಟೀಕೆ

ದಾವಣಗೆರೆ: ನಿನ್ನೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರು ವೀರಶೈವ ಸಮಾಜದ ಸಭೆ ನಡೆಸಿ ದಾವಣಗೆರೆಯ ಜನತೆಗೆ ಬಹಳಷ್ಟು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಶಾಸಕ ಬಿ.ಪಿ.ಹರೀಶ್ ಅವರು ಆಕ್ಷೇಪಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾವು ದುಡ್ಡಿದ್ದಂತ, ಕೇವಲ ಕಾಂಗ್ರೆಸ್ ವೀರಶೈವರ ಹಾಗೂ ಶ್ರೀಮಂತರ ಪಾಲಾಗಿದೆ ಎಂದು ಟೀಕಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಭ್ರಷ್ಟಾಚಾರ ಮಾಡಲು, ರಾಜಕೀಯ ಪಕ್ಷಗಳನ್ನು ಹೆದರಿಸಿ ಮಂತ್ರಿ ಸ್ಥಾನ ಪಡೆಯಲು ಈ ಮಹಾಸಭಾವನ್ನು ಇವರು ದುರುಪಯೋಗ ಪಡಿಸಿಕೊಂಡಿದ್ದಾರೆ. ಬಡ ವೀರಶೈವರಿಗೆ ಇವರ ಕೊಡುಗೆ ಇಲ್ಲ ಎಂದು ಟೀಕಿಸಿದರು.

ಈಶ್ವರ ಖಂಡ್ರೆ ಅವರು ಬಹಳ ಮುಜುಗರದಿಂದ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅಭ್ಯರ್ಥಿ ಸಮರ್ಥ ಅವರ ತಂದೆಯ ಒಡೆತನದ ಸಕ್ಕರೆ ಕಾರ್ಖಾನೆ, ಡಿಸ್ಟಿಲರೀಸ್‍ನಿಂದ ಕೈಗಾರಿಕಾ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೇ ನೇರವಾಗಿ ತುಂಗಭದ್ರಾ ನದಿಗೆ ಬಿಡಲಾಗುತ್ತಿದೆ. ಅರಣ್ಯ ಸಚಿವರಾದ ತಮ್ಮ ಅಡಿಯಲ್ಲೇ ಮಾಲಿನ್ಯ ನಿಯಂತ್ರಣ ಮಂಡಳಿಯೂ ಇದೆ. ಇಂಥ ಅಭ್ಯರ್ಥಿ ಪರವಾಗಿ ತಾವು ಮಾತನಾಡಿದ್ದು ಸರಿಯೇ ಎಂದು ಕೇಳಿದರು.

ರೈತರ ಜಮೀನಿನ ಬೆಳೆಗಳ ಮೇಲೆ ಹಾರು ಬೂದಿ ದೂಳು ಬೀಳುತ್ತಿದೆ. ಬಡ ರೈತರಿಗೆ ಅನ್ಯಾಯ ಮಾಡುತ್ತಿರುವ ಬಗ್ಗೆ ಸದನದಲ್ಲಿ ಎತ್ತಿದಾಗ ಖಂಡ್ರೆಯವರು ಸುಳ್ಳು ಮಾಹಿತಿ ಕೊಟ್ಟಿದ್ದರು. ಖಂಡ್ರೆಯವರೇ, ಮಲ್ಲಿಕಾರ್ಜುನ್ ಅವರ ದುರಾಡಳಿತ, ಕುಡಿಯುವ ನೀರಿನ ಮೇಲಿನ ದುಷ್ಪರಿಣಾಮ ನಿಮಗೆಲ್ಲ ಗೊತ್ತಿದೆ. ಎವಿಕೆ ಕಾಲೇಜು ಸ್ಥಾಪಿಸಿ ಯುವತಿಯರಿಗೆ ಶಿಕ್ಷಣ ಸಿಗುವಂತೆ ಮಾಡಿದ್ದಾಗಿ ಹೇಳಿದ್ದೀರಿ.

ಖಂಡ್ರೆಯವರೇ, ಸುಳ್ಳು ಮಾಹಿತಿ ಕೊಡದಿರಿ. ದಾವಣಗೆರೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಲು ರಾಜನಳ್ಳಿ, ಅಜ್ಜಂಪುರ ಮನೆತನದವರು, ದಾನಿಗಳು ದೊಡ್ಡ ಕೊಡುಗೆ ನೀಡಿದ್ದಾರೆ. ಚಿಗಟೇರಿ ಆಸ್ಪತ್ರೆಯನ್ನು ಆ ಮನೆತನದವರ ಕೊಡುಗೆ ಮೂಲಕ ಸ್ಥಾಪಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಆ ಕೊಡುಗೆ ನೀಡಿದ್ದಾಗಿ ಸುಳ್ಳು ಹೇಳಿದ್ದೀರಲ್ಲವೇ ಎಂದು ಕೇಳಿದರು.

ದ್ವಿತೀಯ PUC ಫಲಿತಾಂಶಕ್ಕೆ ಮುಹೂರ್ತ ನಿಗದಿ: ರಿಸಲ್ಟ್​ ಯಾವಾಗ ಗೊತ್ತಾ?

ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಫಲಿತಾಂಶ ಪ್ರಕಟಣೆ ಮುಂದೂಡಲ್ಪಟ್ಟಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳು ನಿರಾಸೆಗೊಂಡಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಫಲಿತಾಂಶ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದರೂ, ಕೆಲವು ತಾಂತ್ರಿಕ ಅಡಚಣೆಗಳಿಂದ ಪ್ರಕಟಣೆ ವಿಳಂಬವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೀಗ ಲಭ್ಯವಾಗಿರುವ ಹೊಸ ಮಾಹಿತಿಯ ಪ್ರಕಾರ, ದ್ವಿತೀಯ ಪಿಯುಸಿ ಫಲಿತಾಂಶವನ್ನು ಏಪ್ರಿಲ್ 9ರಂದು ಪ್ರಕಟಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ಪರೀಕ್ಷೆಗಳು ನಡೆದಿದ್ದು, ಸುಮಾರು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮೊದಲಿಗೆ ಏಪ್ರಿಲ್ 7ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಲಾಗಿದ್ದರೂ, ಅಧಿಕೃತ ಘೋಷಣೆ ಆಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿತ್ತು.

ಇನ್ನೂ ಫಲಿತಾಂಶ ಆನ್‌ಲೈನ್‌ನಲ್ಲಿ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಫಲಿತಾಂಶ ಪರಿಶೀಲಿಸಬಹುದು.

ಇದಲ್ಲದೆ, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ರಾಜ್ಯದ ಕೆಲವು ಭಾಗಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಇದರ ಪರಿಣಾಮವಾಗಿ ಶಿಕ್ಷಣ ಸಚಿವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲು ಚುನಾವಣಾ ಆಯೋಗದ ಅನುಮತಿ ಅಗತ್ಯವಿದ್ದು, ಇದೇ ಕಾರಣದಿಂದ ಪ್ರಕಟಣೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ.

ಕಾಳ ಸಂತೆಯಲ್ಲಿ IPL ಟಿಕೆಟ್ ಮಾರಾಟ ಮಾಡುತ್ತಿದ್ದ 11 ಆರೋಪಿಗಳ ಬಂಧನ!

0

ಬೆಂಗಳೂರು: ಟಾಟಾ ಐಪಿಎಲ್ ಪಂದ್ಯಗಳ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, 11 ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸಂಬಂಧ ಈಗಾಗಲೇ 7 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಬಂಧಿತರಿಂದ ಸುಮಾರು ₹4 ಲಕ್ಷ 53 ಸಾವಿರ ಮೌಲ್ಯದ 28 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 7 ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಟಿಕೆಟ್‌ಗಳನ್ನು ಅಕ್ರಮವಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಆರೋಪಿಗಳು, ಅಭಿಮಾನಿಗಳನ್ನು ಮೋಸಗೊಳಿಸುತ್ತಿದ್ದರೆಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಕುರಿತು ಕಬ್ಬನ್ ಪಾರ್ಕ್ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.

ಡೆಲಿವರಿ, ಆಟೋ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ!

0

ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಾಹುಲ್ ಮತ್ತು ಪ್ರೇಮ್ ಎಂದು ಗುರುತಿಸಲಾಗಿದೆ. ಇವರಿಂದ ಸುಮಾರು 7 ಕೆಜಿ 500 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು 3 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ತಮಿಳುನಾಡಿನಿಂದ ಗಾಂಜಾ ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು. ರಾಹುಲ್ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಪ್ರೇಮ್ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದನು.

ಈ ಕೆಲಸಗಳನ್ನು ನೆಪ ಮಾಡಿಕೊಂಡು ಗಾಂಜಾ ಪೆಡ್ಲಿಂಗ್ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಸದ್ಯ ಇಬ್ಬರನ್ನೂ ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾವಣಗೆರೆ ಉಪಚುನಾವಣೆ: ಸ್ವಾಮೀಜಿ ಹೆಸರಿನಲ್ಲಿ ನಕಲಿ ಸಂದೇಶ ವೈರಲ್, ಮಠದಿಂದ ಸ್ಪಷ್ಟನೆ

0

ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿರುವ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಂದೇಶಗಳ ಹಾವಳಿ ಹೆಚ್ಚಾಗಿದೆ.

ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ಅವರ ಹೆಸರಿನಲ್ಲಿ ನಿರ್ದಿಷ್ಟ ಅಭ್ಯರ್ಥಿಗೆ ಮತ ನೀಡುವಂತೆ ಕರೆ ನೀಡಿರುವ ಸಂದೇಶ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿತ್ತು.

ಈ ಕುರಿತು ತರಳುಬಾಳು ಗುರುಪೀಠ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಸ್ವಾಮೀಜಿಯವರ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಸಂದೇಶ ರವಾನಿಸಲಾಗುತ್ತಿದೆ ಎಂದು ತಿಳಿಸಿದೆ. ಈ ರೀತಿಯ ಸಂದೇಶಗಳು ಶ್ರೀಗಳ ನಿಲುವನ್ನು ತಪ್ಪಾಗಿ ಪ್ರತಿಬಿಂಬಿಸುತ್ತವೆ ಎಂದು ಹೇಳಲಾಗಿದೆ.

ಪ್ರಕರಣದ ಗಂಭೀರತೆಯನ್ನು ಮನಗಂಡ ಮಠದ ಕಾರ್ಯದರ್ಶಿ ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮತದಾರರನ್ನು ತಪ್ಪು ದಾರಿಗೆಳೆಯುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕಾಗಿದೆ.

ಕಾವೇರಿ ನದಿಯಲ್ಲಿ ಅನುಮಾನಾಸ್ಪವಾಗಿ ಕಂಟ್ರಾಕ್ಟರ್ ಶವ ಪತ್ತೆ! ಕೊಲೆ ಶಂಕೆ

0

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹುಣಸನ ಹಳ್ಳಿಯಲ್ಲಿ ಪ್ರಥಮ ದರ್ಜೆ ಕಂಟ್ರಾಕ್ಟರ್ ಪವನ್ (27) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ. ಅವರ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪವನ್ ಕೋಟ್ಯಾಂತರ ರೂಪಾಯಿ ಮೌಲ್ಯದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ ಕಂಟ್ರಾಕ್ಟರ್ ಆಗಿದ್ದರು. ನಾಲ್ಕು ದಿನಗಳ ಹಿಂದೆ “ಕೆಲಸ ಇದೆ, ಇಂದು ಮನೆಗೆ ಬರುವುದಿಲ್ಲ” ಎಂದು ಕುಟುಂಬಕ್ಕೆ ತಿಳಿಸಿ ಹೊರಟಿದ್ದ ಅವರು ಬಳಿಕ ಮನೆಗೆ ವಾಪಸ್ಸಾಗಿರಲಿಲ್ಲ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದಲ್ಲದೆ, ಸಾಮಾಜಿಕ ಜಾಲತಾಣ ಖಾತೆಗಳೂ ಡಿ-ಆಕ್ಟಿವ್ ಆಗಿದ್ದವು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿಯಲ್ಲಿ ಪವನ್ ಮೃತದೇಹ ಪತ್ತೆಯಾಗಿದೆ. ದೇಹದ ಮೇಲೆ ಗಾಯಗಳಿರುವುದು ಗಮನಕ್ಕೆ ಬಂದಿದ್ದು, ಇದು ಕೊಲೆ ಆಗಿರಬಹುದೆಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ಸ್ಥಳೀಯರಲ್ಲಿ ಭೀತಿ ಮೂಡಿಸಿದ್ದು, ಪವನ್ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

ಬಾಂಗ್ಲಾದೇಶದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್..!

0

ಢಾಕಾ: ಬಾಂಗ್ಲಾದೇಶದ ಮೊದಲ ಮಹಿಳಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದ ಶಿರಿನ್ ಶರ್ಮಿನ್ ಚೌಧರಿ ಅವರನ್ನು ಢಾಕಾ ಮೆಟ್ರೋಪಾಲಿಟನ್ ಪೊಲೀಸರ ಪತ್ತೇದಾರಿ ವಿಭಾಗ (ಡಿಬಿ) ಬಂಧಿಸಿದೆ. ಧನ್ಮಂಡಿಯ 8/ಎ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಧಿಕಾರಿಗಳು ಬಂಧನ ಕ್ರಮ ಕೈಗೊಂಡಿದ್ದಾರೆ.

ವಿದ್ಯಾರ್ಥಿ ಚಳವಳಿಗೆ ಸಂಬಂಧಿಸಿದ ಪ್ರಕರಣದಡಿ ಅವರನ್ನು ಬಂಧಿಸಲಾಗಿದೆ ಎಂದು ಪತ್ತೇದಾರಿ ವಿಭಾಗದ ಹೆಚ್ಚುವರಿ ಕಮಿಷನರ್ ಮೊಹಮ್ಮದ್ ಶಫೀಕುಲ್ ಇಸ್ಲಾಂ ತಿಳಿಸಿದ್ದಾರೆ.

ಶಿರಿನ್ ಶರ್ಮಿನ್ ಚೌಧರಿ ಅವರು 2013ರಿಂದ 2024ರ ಆಗಸ್ಟ್ ವರೆಗೆ ಬಾಂಗ್ಲಾದೇಶ ಸಂಸತ್ತಿನ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ದೇಶದ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

2025ರ ಆಗಸ್ಟ್ 5ರಂದು ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ 27 ದಿನಗಳ ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರೊಂದಿಗೆ ಅವರ ದೀರ್ಘಕಾಲದ ರಾಜಕೀಯ ಪಯಣ ಅಂತ್ಯಗೊಂಡಿತ್ತು.

ಬೆಂಗಳೂರು: ಹೆಲ್ಮೆಟ್ ಧರಿಸಿ ರಾತ್ರೋ ರಾತ್ರಿ ಸಿಲಿಂಡರ್ ಕದ್ದೊಯ್ದ ಖದೀಮ!

ಬೆಂಗಳೂರು: ನಗರದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಗಿನ ಜಾವ ವಿಚಿತ್ರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಬೆಳಗ್ಗಿನ ಜಾವ ಸುಮಾರು 3 ಗಂಟೆ ಹೊತ್ತಿಗೆ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಕಳ್ಳನೊಬ್ಬ, ರಸ್ತೆಯಲ್ಲಿನ ಮನೆಗಳ ಗೇಟ್ ಪರಿಶೀಲಿಸಿ, ಲಾಕ್ ಇಲ್ಲದ ಮನೆಯೊಳಗೆ ನುಗ್ಗಿ LPG ಸಿಲಿಂಡರ್ ಕದ್ದು ಪರಾರಿಯಾಗಿದ್ದಾನೆ.

ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬೆನ್ನಲ್ಲೇ ಕಾಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಬೆಂಕಿಯ ಜ್ವಾಲೆಗೆ 5 ಜಾನುವಾರುಗಳು ದಾರುಣ ಸಾವು: ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಹಸುಗಳ ಶೆಡ್!

ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಪುರ ರಸ್ತೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಸುಗಳ ಶೆಡ್ ಬೆಂಕಿಗೆ ಆಹುತಿಯಾಗಿರುವ ಘಟನೆ ಜರುಗಿದೆ.

ಘಟನೆಯಲ್ಲಿ ಐದು ಹಸುಗಳು ದಾರುಣವಾಗಿ ಸಾವನ್ನಪ್ಪಿದೆ. ತಡರಾತ್ರಿ ಶೆಡ್ ಪಕ್ಕದಲ್ಲಿದ್ದ ಫ್ಲೈವುಡ್ ಸಾಮಗ್ರಿಗಳಿಗೆ ಬೆಂಕಿ ತಗುಲಿದ ಪರಿಣಾಮ, ಕೆಲವೇ ಕ್ಷಣಗಳಲ್ಲಿ ಬೆಂಕಿ ವೇಗವಾಗಿ ಹರಡಿ ಹಸುಗಳ ಶೆಡ್‌ಗೂ ವ್ಯಾಪಿಸಿದೆ. ಬೆಂಕಿಯ ತೀವ್ರತೆ ಹೆಚ್ಚಾದ ಪರಿಣಾಮ ಶೆಡ್‌ನೊಳಗಿದ್ದ ಹಸುಗಳು ಸಿಲುಕಿಕೊಂಡಿದೆ.

ಘಟನೆ ಸಂಭವಿಸಿದ ವೇಳೆ ಶೆಡ್‌ನಲ್ಲಿ ಒಟ್ಟು 19 ಹಸುಗಳಿದ್ದು, ಅವುಗಳಲ್ಲಿ ಐದು ಹಸುಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳೀಯರು ತಕ್ಷಣವೇ ಎಚ್ಚರಗೊಂಡು ಕಾರ್ಯಪ್ರವೃತ್ತರಾಗಿ ಉಳಿದ 14 ಹಸುಗಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸ್ಥಳಕ್ಕೆ ಧಾವಿಸಿ, ಹರಡುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ಹೆಚ್ಚಿನ ಹಾನಿ ಸಂಭವಿಸದಂತೆ ತಡೆಯಲಾಗಿದೆ.

ಘಟನೆ ಕುರಿತು ಡಿಜೆ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿ ಕಾಣಿಸಿಕೊಂಡ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.

62ರ ಹರೆಯದಲ್ಲೂ ಅದ್ಭುತ ಸಾಹಸ: ಹಾಲುಗಂಭ ಏರಿ ಮೆಚ್ಚುಗೆಗೆ ಪಾತ್ರರಾದ ಶರಣಪ್ಪ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ವ್ಯಕ್ತಿಯೊಬ್ಬರು ಅಸಾಮಾನ್ಯ ಸಾಹಸ ಮೆರೆದಿದ್ದಾರೆ.

ಮನ್ನೇರಾಳ ಗ್ರಾಮದ ಶರಣಪ್ಪ ಗೊಲ್ಲರ ಅವರು ಎಣ್ಣೆ ಸವರಿ ಜಾರುತ್ತಿದ್ದ ಸುಮಾರು 120 ಅಡಿ ಎತ್ತರದ ಹಾಲುಗಂಭವನ್ನು ಲೀಲಾಜಾಲವಾಗಿ ಏರಿ ನೆರೆದಿದ್ದ ಸಾವಿರಾರು ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಂಪ್ರದಾಯದಂತೆ ಕಂಬದ ಮೇಲ್ಭಾಗದಲ್ಲಿ ಕೊಬ್ಬರಿ ಉತ್ತತ್ತಿ ಕಟ್ಟಲಾಗುತ್ತದೆ.

ಎಣ್ಣೆ ಸುರಿದು ಜಾರುವಂತಾಗಿದ್ದ ಕಂಬವನ್ನೂ ಲೆಕ್ಕಿಸದೆ, ಶರಣಪ್ಪ ಅವರು ತೋರಿದ ದೈಹಿಕ ಸಾಮರ್ಥ್ಯ ಮತ್ತು ಭಕ್ತಿಭಾವಕ್ಕೆ ಸ್ಥಳೀಯರು ಹಾಗೂ ಭಕ್ತರು ಶಹಬ್ಬಾಸ್ ಹೇಳಿದ್ದಾರೆ.

ಈ ಘಟನೆ ಜಾತ್ರೆಯ ವಿಶೇಷ ಆಕರ್ಷಣೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ.

error: Content is protected !!