Home Blog Page 65

ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಟಿಟಿ ವಾಹನದ ಮೇಲೆ ಲಾರಿ ಪಲ್ಟಿ, 8 ಮಂದಿಗೆ ಗಾಯ

0

ಮಡಿಕೇರಿ: ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಪ್ರವಾಸಿಗರಿದ್ದ ಟಿಟಿ ವಾಹನದ ಮೇಲೆ ಲಾರಿಯೊಂದು ಮಗುಚಿ ಬಿದ್ದಿದೆ.

ಘಟನೆಯಲ್ಲಿ ಟಿಟಿ ವಾಹನದಲ್ಲಿದ್ದ ಆರು ಮಂದಿ ಹಾಗೂ ಲಾರಿಯಲ್ಲಿದ್ದ ಇಬ್ಬರು ಸೇರಿ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.

ಸಂಪಾಜೆ ಸಮೀಪದ ಜೋಡುಪಾಲ ಅಬ್ಬಿಕೊಲ್ಲಿ ಜಲಪಾತದ ಬಳಿ ಘಟನೆ ನಡೆದಿದೆ. ಗುಜರಾತ್‌ನ ಅಹಮದಾಬಾದ್‌ನಿಂದ ಕೊಡಗು ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಮಡಿಕೇರಿಯಿಂದ ಮಂಗಳೂರಿನತ್ತ ತೆರಳುತ್ತಿದ್ದರು.

ಈ ವೇಳೆ ಟಿಟಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕೆಲವರು ಟೀ ಕುಡಿಯಲು ತೆರಳಿದ್ದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಲಾರಿ ಟಿಟಿ ವಾಹನದ ಮೇಲೆ ಮಗುಚಿ ಬಿದ್ದಿದೆ. ಪರಿಣಾಮ ಟಿಟಿ ವಾಹನದಲ್ಲಿದ್ದ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಲಾರಿಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಕೂಡಲೇ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಅದೃಷ್ಟವಶಾತ್ ಟಿಟಿ ವಾಹನದಲ್ಲಿದ್ದ ಇತರ ಪ್ರವಾಸಿಗರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಪದವಿ ದಿನಗಳ ಸದ್ಬಳಕೆಯೇ ಉಜ್ವಲ ಭವಿಷ್ಯಕ್ಕೆ ನಾಂದಿ: ಎಲ್.ಎಲ್. ಗುಳೇದಗುಡ್ಡ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿದ್ಯಾರ್ಥಿ ಜೀವನ ಹಾಗೂ ಪದವಿ ಶಿಕ್ಷಣದ ಅವಧಿ ವ್ಯಕ್ತಿಯ ಭವಿಷ್ಯ ರೂಪಿಸುವ ಅತ್ಯಂತ ಮಹತ್ವದ ಘಟ್ಟವಾಗಿದೆ. ಈ ಅಮೂಲ್ಯ ಸಮಯವನ್ನು ಸದುಪಯೋಗಪಡಿಸಿಕೊಂಡು ಸತತ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲ ಎಲ್.ಎಲ್. ಗುಳೇದಗುಡ್ಡ ಹೇಳಿದರು.

ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಆಶ್ರಯದಲ್ಲಿ ಆಯೋಜಿಸಿದ್ದ ವಿವಿಧ ವಿಷಯಗಳ ಸರಣಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಲೇಜಿನಲ್ಲಿ ಆಯೋಜಿಸುವ ಕಾರ್ಯಾಗಾರಗಳು ವಿದ್ಯಾರ್ಥಿಗಳನ್ನು ಕೇವಲ ಪದವೀಧರರನ್ನಾಗಿ ಮಾಡುವುದಷ್ಟೇ ಅಲ್ಲದೆ, ಉದ್ಯೋಗಾರ್ಹ ಹಾಗೂ ಸಾಮಾಜಿಕ ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗುತ್ತವೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಪಠ್ಯಕ್ರಮಕ್ಕೆ ಸೀಮಿತವಾಗದೆ, ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಗುಣಮಟ್ಟದ ಕಾರ್ಯಾಗಾರಗಳನ್ನು ನಿರಂತರವಾಗಿ ಆಯೋಜಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿವೆ ಎಂದರು.

ತಜ್ಞರ ಮಾರ್ಗದರ್ಶನದಲ್ಲಿ ವಿಷಯವಾರು ಮಾಹಿತಿಯನ್ನು ಪರಿಣಾಮಕಾರಿಯಾಗಿ ಕಲಿಯಲು ಕಾರ್ಯಾಗಾರಗಳು ನೆರವಾಗುತ್ತವೆ. ತಂತ್ರಜ್ಞಾನ, ಕಲೆ, ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ನಡೆಯುವ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿನ ಕೌಶಲ್ಯದ ಕೊರತೆ ನೀಗಿಸುವುದರ ಜತೆಗೆ ಹೊಸ ವಿಚಾರಗಳನ್ನು ಪ್ರಯೋಗಿಸುವ ಧೈರ್ಯ ಹಾಗೂ ಉದ್ಯೋಗ ಸಂದರ್ಶನಗಳನ್ನು ಎದುರಿಸುವ ಆತ್ಮವಿಶ್ವಾಸ ಹೆಚ್ಚಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಕಸ್ತೂರೆವ್ವ ದಳವಾಯಿ ಮಾತನಾಡಿ, ಕೇವಲ ಪಠ್ಯಪುಸ್ತಕದ ಜ್ಞಾನ ಹಾಗೂ ಅಂಕಪಟ್ಟಿಗಳು ವಿದ್ಯಾರ್ಥಿಯ ಭವಿಷ್ಯ ನಿರ್ಧರಿಸಲು ಸಾಧ್ಯವಿಲ್ಲ. ತರಗತಿಯ ನಾಲ್ಕು ಗೋಡೆಗಳಾಚೆಗಿನ ಪ್ರಾಯೋಗಿಕ ಜ್ಞಾನ ಹಾಗೂ ಉದ್ಯಮ ರಂಗದ ವಾಸ್ತವ ಅಗತ್ಯತೆಗಳನ್ನು ಅರಿಯುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ನಿಯಮಿತವಾಗಿ ಆಯೋಜಿಸುವ ಕಾರ್ಯಾಗಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿ ಬದುಕಿಗೆ ಭದ್ರ ಬುನಾದಿ ಹಾಕುತ್ತವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಐಕ್ಯೂಎಸಿ ಸಂಚಾಲಕಿ ಜಯಶ್ರೀ ಮುತಗಾರ ಮಾತನಾಡಿ, ಪದವಿ ಹಂತದ ದಿನಗಳು ಯುವಜನರ ಬದುಕಿನ ಗತಿಯನ್ನು ನಿರ್ಧರಿಸುತ್ತವೆ. ಸಾಮಾಜಿಕ ಜಾಲತಾಣ ಹಾಗೂ ಅನಗತ್ಯ ಚಟುವಟಿಕೆಗಳಿಗೆ ಸಮಯ ವ್ಯರ್ಥ ಮಾಡದೆ, ದಿನನಿತ್ಯದ ಓದಿಗೆ ನಿಗದಿತ ಸಮಯ ಮೀಸಲಿಡುವ ಶಿಸ್ತು ಬೆಳೆಸಿಕೊಳ್ಳಬೇಕು. ಕಾಲೇಜಿನಲ್ಲಿ ದೊರೆಯುವ ಶೈಕ್ಷಣಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಿ ಹೆತ್ತವರಿಗೆ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.

ಕಾರ್ಯಾಗಾರದಲ್ಲಿ ಕನ್ನಡ ವಿಷಯದ ಕುರಿತು ಶಿವಮೂರ್ತಪ್ಪ ಕುರೇರ, ಇಂಗ್ಲಿಷ್ ಕುರಿತು ನಸರೀನಾಬಾನು ಜಮಾದರ, ಭೀಮಸೇನಾ ಉಗ್ರದ, ಗಣಿತದ ಕುರಿತು ಬಸವರಾಜ ಬಳಗಾನೂರ, ವಾಣಿಜ್ಯದ ಕುರಿತು ಮಹಾಂತೇಶ ಮುಧೋಳ, ಇತಿಹಾಸದ ಕುರಿತು ಮಾರುತಿ ಹಾಗೂ ಅರ್ಥಶಾಸ್ತ್ರದ ಕುರಿತು ರಾಜು ಬಿ.ಕೆ. ವಿಶೇಷ ಉಪನ್ಯಾಸ ನೀಡಿದರು.

ಈ ವೇಳೆ ಪ್ರಾಧ್ಯಾಪಕರಾದ ಎಸ್.ಎಸ್. ಸೂಡಿ, ಸುನಂದಾ ಮುಂಜಿ, ಅನಿಲಕುಮಾರ, ಶಿವಪ್ಪ ಕುರಬರ, ವಿರೂಪಾಕ್ಷ ಆರ್., ಅಯ್ಯಪ್ಪ, ಎನ್.ಎಸ್. ಹೊನ್ನೂರ, ವಿ.ಸಿ. ಇಲ್ಲೂರ, ಪಿ.ವೈ. ಶಾಸ್ತ್ರಿ, ಕೆ.ಎನ್. ಕಟ್ಟಿಮನಿ, ವಿವೇಕಾನಂದ ಹಿರೇಮಠ, ಶರಣಪ್ಪ ಚಿಕ್ಕೆನಕೊಪ್ಪ, ಶಂಕರಗೌಡ ಪಾಟೀಲ, ಎಂ.ಎಫ್. ತಹಶೀಲ್ದಾರ, ಎಸ್.ಆರ್. ನದಾಫ್ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿ ಜೀವನ ಹಾಗೂ ಪದವಿ ಶಿಕ್ಷಣದ ಅವಧಿ ಭವಿಷ್ಯ ರೂಪಿಸುವ ಅಮೂಲ್ಯ ಕಾಲ. ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಶಿಸ್ತು, ಏಕಾಗ್ರತೆ ಹಾಗೂ ಕಠಿಣ ಪರಿಶ್ರಮದಿಂದ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಉನ್ನತ ಸಾಧನೆ ಸಾಧ್ಯ.

— ನಿವೃತ್ತ ಪ್ರಾಂಶುಪಾಲ ಎಲ್.ಎಲ್. ಗುಳೇದಗುಡ್ಡ

ಶತಮಾನಗಳ ಪವಾಡ ಪರಂಪರೆಗೆ ಹೊಸ ಕಳೆ: ಶ್ರೀ ಚನ್ನವೀರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಾತನ ಹಾಗೂ ಐತಿಹಾಸಿಕ ಹಿನ್ನೆಲೆಯ ಮೂಕ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೋಮವಾರ ನೂತನ ಗಣೇಶ ಹಾಗೂ ಆಂಜನೇಯ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಶತಮಾನಗಳ ಇತಿಹಾಸ ಹಾಗೂ ಪವಾಡ ಪರಂಪರೆ ಹೊಂದಿರುವ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು.

ಬೆಳಿಗ್ಗೆ ಗಂಜಿಗಟ್ಟಿ ಶ್ರೀ ಡಾ. ವೈಜನಾಥ ಶಿವಲಿಂಗೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಳಸಾರೋಹಣ ಹಾಗೂ ನೂತನ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ವಿಧಿವಿಧಾನಗಳು ನೆರವೇರಿದವು. ಬಳಿಕ ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ಧರ್ಮಸಭೆ ನಡೆಯಿತು.

ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಚನ್ನವೀರ ಮಹಾಸ್ವಾಮಿಗಳು, ದೇವರ ಮೇಲೆ ಅಚಲ ಭಕ್ತಿ ಹಾಗೂ ನಂಬಿಕೆ ಇಟ್ಟು ಬದುಕಿದರೆ ಕಷ್ಟಗಳನ್ನು ಎದುರಿಸುವ ಶಕ್ತಿ ದೊರೆಯುತ್ತದೆ. ಧಾರ್ಮಿಕ ಆಚರಣೆಗಳು ಮನುಷ್ಯನ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತವೆ. ಮೂಕ ಬಸವೇಶ್ವರ ದೇವಸ್ಥಾನವು ಹಲವು ಶತಮಾನಗಳ ಇತಿಹಾಸ ಹಾಗೂ ಪವಾಡ ಪರಂಪರೆ ಹೊಂದಿರುವ ಜಾಗೃತ ಕ್ಷೇತ್ರವಾಗಿದ್ದು, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಎಲ್ಲರ ಕಾರ್ಯ ಸ್ತುತ್ಯರ್ಹವಾಗಿದೆ ಎಂದರು.

ಕರೇವಾಡಿಮಠದ ಶ್ರೀ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಮಾನವ ಜನ್ಮ ಅತ್ಯಂತ ಪವಿತ್ರವಾದದ್ದು. ಪ್ರತಿಯೊಬ್ಬರೂ ಶ್ರದ್ಧೆ, ನಿಷ್ಠೆ ಹಾಗೂ ಸತ್ಯದ ಮಾರ್ಗದಲ್ಲಿ ಸಾಗಬೇಕು. ಭಕ್ತಿ ಮತ್ತು ಧಾರ್ಮಿಕ ಆಚರಣೆಗಳು ಉತ್ತಮ ಜೀವನಕ್ಕೆ ದಾರಿದೀಪವಾಗುತ್ತವೆ. ಮೂಕ ಬಸವೇಶ್ವರ ದೇವಸ್ಥಾನ ಭಕ್ತರ ಪಾಲಿಗೆ ಜಾಗೃತ ಕ್ಷೇತ್ರವಾಗಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಮಾತನಾಡಿ, ಮೂಕ ಬಸವೇಶ್ವರ ದೇವಸ್ಥಾನದ ಇತಿಹಾಸ ಹಾಗೂ ಪವಾಡ ಪರಂಪರೆ ಭಕ್ತರಲ್ಲಿ ಅಪಾರ ನಂಬಿಕೆ ಮೂಡಿಸಿದೆ. ಇಲ್ಲಿ ಭಕ್ತಿಯಿಂದ ಪ್ರಾರ್ಥಿಸುವವರಿಗೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ ಎಂದು ಹೇಳಿದರು.

ಮುಖಂಡ ಟಿ. ಈಶ್ವರ ಮಾತನಾಡಿ, ಮೂಕ ಬಸವೇಶ್ವರ ದೇವಸ್ಥಾನ ಲಕ್ಷ್ಮೇಶ್ವರದ ಧಾರ್ಮಿಕ ಪರಂಪರೆಯ ಪ್ರಮುಖ ಕೇಂದ್ರವಾಗಿದೆ. ಜೀರ್ಣೋದ್ಧಾರ, ಕಳಸಾರೋಹಣ ಹಾಗೂ ನೂತನ ಮೂರ್ತಿಗಳ ಪ್ರತಿಷ್ಠಾಪನೆಯಿಂದ ದೇವಸ್ಥಾನದ ಪಾವಿತ್ರ್ಯ ಹಾಗೂ ಸೌಂದರ್ಯ ಮತ್ತಷ್ಟು ಹೆಚ್ಚಾಗಿದೆ. ನಿತ್ಯ ಪೂಜೆ, ಪ್ರಾರ್ಥನೆ ನಡೆಯುವ ಮೂಲಕ ಕ್ಷೇತ್ರದ ಪಾವಿತ್ರ್ಯ ಕಾಪಾಡಬೇಕು ಎಂದರು.

ನಿಂಗಪ್ಪ ಬನ್ನಿ, ವಿ.ಜಿ. ಪಡಗೇರಿ, ಮೈಲಾರಗೌಡ ನರಸಮ್ಮನವರ, ನಿವೃತ್ತ ಲೋಕಾಯುಕ್ತ ಡಿವೈಎಸ್‌ಪಿ ಶಂಕರ ರಾಗಿ, ಬಿ.ಕೆ. ನಾಗಲಾಂಬಿಕೆ, ಯಲ್ಲಮ್ಮ ದುರಗಣ್ಣವರ, ಪ್ರವೀಣ ಬಾಳಿಕಾಯಿ, ಕೆ.ಒ. ಹುಲಿಕಟ್ಟಿ, ಮಹೇಶ ಲಿಂಬಯ್ಯಸ್ವಾಮಿಮಠ, ಶಿವಪುತ್ರಪ್ಪ ಚಾಕಲಬ್ಬಿ, ಅಶೋಕ ಬಿಸೇರೊಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಓಣಿಯ ಹಿರಿಯರು, ಯುವಕರು, ಮಹಿಳೆಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಎಸ್.ಎಫ್. ಆದಿ ನಿರೂಪಿಸಿದರು.

ಮೂಕ ಬಸವೇಶ್ವರ ದೇವಸ್ಥಾನ ಹಲವು ಶತಮಾನಗಳ ಇತಿಹಾಸ ಹಾಗೂ ಪವಾಡ ಪರಂಪರೆ ಹೊಂದಿರುವ ಜಾಗೃತ ಕ್ಷೇತ್ರ. ಹಿಂದಿನಿಂದಲೂ ಭಕ್ತರು ಕ್ಷೇತ್ರದ ಮೇಲೆ ಇಟ್ಟುಕೊಂಡಿರುವ ಅಪಾರ ನಂಬಿಕೆ ಇಂದಿಗೂ ಮುಂದುವರಿದಿರುವುದು ಶ್ಲಾಘನೀಯ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಎಲ್ಲರ ಕಾರ್ಯ ಸ್ತುತ್ಯರ್ಹ.

— ಶ್ರೀ ಚನ್ನವೀರ ಮಹಾಸ್ವಾಮಿಗಳು

ಬರದ ನಡುವೆ ಗ್ರಾಮೀಣರಿಗೆ ಉದ್ಯೋಗದ ಆಸರೆ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಂಗಾರು ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯಲು ಜಿಲ್ಲೆಯಾದ್ಯಂತ ‘ಜಾಬ್ ಕಾರ್ಡ್ ಮೇಳ’ ಹಾಗೂ ‘ವಿಬಿ ಜಿರಾಮ್ ಜಿ’ ಯೋಜನೆಯ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಆಯುಕ್ತಾಲಯದ ನಿರ್ದೇಶನದಂತೆ ಆ.15ರಿಂದ ಸೆ.15ರವರೆಗೆ ಒಂದು ತಿಂಗಳ ಕಾಲ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದ್ದು, ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸುವ ಮೂಲಕ ವಲಸೆ ತಡೆಗಟ್ಟುವ ಉದ್ದೇಶ ಹೊಂದಲಾಗಿದೆ. ಯೋಜನೆಯ ಕುರಿತು ಸಮಗ್ರ ಮಾಹಿತಿ ನೀಡಲು ಗ್ರಾಮಗಳಲ್ಲಿ ಜಾಗೃತಿ ವಾಹನಗಳ ಮೂಲಕವೂ ಅರಿವು ಮೂಡಿಸಲಾಗುತ್ತಿದೆ.

ಜಿಲ್ಲೆಯು ಮೂಲತಃ ಮಳೆಯಾಶ್ರಿತ ಪ್ರದೇಶವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಹೀಗಾಗಿ ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳಿಗೆ ಸ್ಥಳೀಯವಾಗಿ ಕೂಲಿ ಕೆಲಸ ಒದಗಿಸುವುದು ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದೆ.

‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ)’ ಯೋಜನೆಯಡಿ ಅರ್ಹ ಕೂಲಿಕಾರರಿಗೆ ವರ್ಷದಲ್ಲಿ 125 ದಿನಗಳವರೆಗೆ ಕೂಲಿ ಕೆಲಸ ಒದಗಿಸುವ ಉದ್ದೇಶವಿದೆ. ಜಾಬ್ ಕಾರ್ಡ್ ಹೊಂದಿರುವ ಹಾಗೂ ಇ-ಕೆವೈಸಿ ಪೂರ್ಣಗೊಳಿಸಿರುವ ಅರ್ಹ ಕೂಲಿಕಾರರು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

100% ಇ-ಕೆವೈಸಿಗೆ ಗುರಿ

2026ರ ಜುಲೈ 1ರಿಂದ ಜಾರಿಯಲ್ಲಿರುವ ಯೋಜನೆಯಡಿ ಈಗಾಗಲೇ ನೋಂದಾಯಿಸಿಕೊಂಡು ಇ-ಕೆವೈಸಿ ಪೂರ್ಣಗೊಳಿಸಿರುವ ಸಕ್ರಿಯ ಕುಟುಂಬಗಳ ಕೂಲಿಕಾರರಿಗೆ ಕೆಲಸ ಒದಗಿಸಲಾಗುತ್ತಿದೆ. ಇ-ಕೆವೈಸಿ ಪೂರ್ಣಗೊಳಿಸದ ಕುಟುಂಬಗಳನ್ನು ಗುರುತಿಸಿ, ಶೇ.100ರಷ್ಟು ಇ-ಕೆವೈಸಿ ಪೂರ್ಣಗೊಳಿಸುವುದು ಜಾಬ್ ಕಾರ್ಡ್ ಮೇಳದ ಪ್ರಮುಖ ಉದ್ದೇಶವಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ.

ಮೇಳವು ಕೇವಲ ಹೊಸ ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಣೆ ಅಥವಾ ನೋಂದಣಿಗೆ ಸೀಮಿತವಾಗಿಲ್ಲ. ಸ್ಥಳೀಯವಾಗಿ ಕೆಲಸದ ಅವಶ್ಯಕತೆ ಇರುವ ಅಕುಶಲ ಕುಟುಂಬಗಳಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಸಿ, ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವ ಗುರಿಯನ್ನೂ ಹೊಂದಿದೆ.

ಜಿಲ್ಲೆಯಾದ್ಯಂತ ಆಂದೋಲನೋಪಾದಿಯಲ್ಲಿ ನಡೆಯುತ್ತಿರುವ ‘ಜಾಬ್ ಕಾರ್ಡ್ ಮೇಳ’ದಡಿ ಅರ್ಹ ನೋಂದಾಯಿತ ಕುಟುಂಬಗಳಿಗೆ ಯೋಜನೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅರ್ಹ ಕುಟುಂಬಗಳು ವರ್ಷದಲ್ಲಿ 125 ದಿನಗಳ ಕೂಲಿ ಕೆಲಸ ಪಡೆದು, ದಿನಕ್ಕೆ ₹382ರಂತೆ ಒಟ್ಟು ₹47,750ರವರೆಗೆ ಕೂಲಿ ಪಡೆಯಲು ಅವಕಾಶವಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮನವಿ ಮಾಡಿದೆ.

ಮುಂಗಾರು ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಕಡಿಮೆಯಾಗಿರುವ ಸಂದರ್ಭದಲ್ಲಿ ಗ್ರಾಮದಲ್ಲಿಯೇ ಉದ್ಯೋಗ ಕಲ್ಪಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಜಾಬ್ ಕಾರ್ಡ್ ಹೊಂದಿ ಇ-ಕೆವೈಸಿ ಪೂರ್ಣಗೊಳಿಸಿರುವ ಪ್ರತಿಯೊಬ್ಬ ಅರ್ಹ ಕೂಲಿಕಾರನಿಗೂ ಯೋಜನೆಯ ಪ್ರಯೋಜನ ದೊರೆಯುವಂತೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲು ಗಮನಹರಿಸಲಾಗುತ್ತಿದೆ.

— ಸಿ.ಆರ್. ಮುಂಡರಗಿ, ಉಪ ಕಾರ್ಯದರ್ಶಿ, ಜಿಪಂ, ಗದಗ

ಬರ ಪರಿಸ್ಥಿತಿಯಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಕೆಲಸದ ಅವಕಾಶಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾಬ್ ಕಾರ್ಡ್ ಮೇಳ ಮಹತ್ವ ಪಡೆದಿದೆ. ಗ್ರಾಮದಲ್ಲಿಯೇ ಕೂಲಿ ಕೆಲಸ ದೊರೆಯುವುದರಿಂದ ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದು. ನೋಂದಾಯಿತ ಕುಟುಂಬಗಳು ಇ-ಕೆವೈಸಿ ಪೂರ್ಣಗೊಳಿಸಿ ಉದ್ಯೋಗಾವಕಾಶ ಪಡೆದುಕೊಳ್ಳಬೇಕು.

— ಸಿ.ಎನ್. ಶ್ರೀಧರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಪಂ, ಗದಗ

ವಚನಗಳು ಸಾಹಿತ್ಯವಲ್ಲ; ಬದುಕಿನ ದರ್ಶನ: ಪ್ರೊ. ಎಸ್.ಯು. ಸಜ್ಜನಶೆಟ್ಟರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಚನಗಳು ಕೇವಲ ಸಾಹಿತ್ಯವಲ್ಲ, ಸಮಾನತೆ, ಕಾಯಕ, ದಾಸೋಹ, ಸತ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಜೀವನದರ್ಶನವಾಗಿವೆ ಎಂದು ಗದಗದ ಪ್ರೊ. ಎಸ್.ಯು. ಸಜ್ಜನಶೆಟ್ಟರ ಹೇಳಿದರು.

ತಾಲೂಕಿನ ಗೊಜನೂರ ಗ್ರಾಮದೇವತೆ ದೇವಸ್ಥಾನದ ಸಮುದಾಯ ಭವನದಲ್ಲಿ ಬಸವ ದಳ, ಬಸವ ಕೇಂದ್ರ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘ, ಗದಗ–ಬೆಟಗೇರಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ‘ವಚನ ಶ್ರಾವಣ–2026’ ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳ ಕುರಿತು ಅವರು ಚಿಂತನೆ ನಡೆಸಿದರು.

ಶರಣರ ವಚನಗಳು ಅನುಭವ ಮಂಟಪದಲ್ಲಿ ನಡೆದ ಚಿಂತನೆ ಹಾಗೂ ಅನುಭಾವದ ಫಲ. ಬಸವಣ್ಣನವರು ಜಾತಿ, ಮೇಲು-ಕೀಳು ಹಾಗೂ ಸಾಮಾಜಿಕ ಅಸಮಾನತೆಯನ್ನು ವಿರೋಧಿಸಿ, ಶೋಷಿತರು ಮತ್ತು ದುರ್ಬಲರಿಗೆ ಗೌರವಯುತ ಬದುಕಿನ ಅವಕಾಶ ಕಲ್ಪಿಸಿದರು. ರೈತ ಬೆಳೆದ ಉತ್ಪನ್ನ ಖರೀದಿಸುವಾಗ ಜಾತಿ ಕೇಳದವರು, ಪಂಕ್ತಿಯಲ್ಲಿ ಊಟ ಮಾಡುವಾಗ ಜಾತಿ ವಿಚಾರಿಸುವುದು ಸಮಾಜದ ದ್ವಂದ್ವ ಮನೋಭಾವಕ್ಕೆ ಉದಾಹರಣೆಯಾಗಿದೆ. ಶರಣರ ಆಶಯದಲ್ಲಿ ಇಷ್ಟಲಿಂಗ ಧರಿಸಿದವರಲ್ಲಿ ಜಾತಿಗೆ ಸ್ಥಾನವಿಲ್ಲ; ಸಮಾನತೆಯೇ ಪ್ರಧಾನ ಎಂದರು.

ಒಳಗೊಂದು ಭಾವ, ಹೊರಗೊಂದು ಭಾವ ಇಟ್ಟುಕೊಂಡು ಡಾಂಭಿಕವಾಗಿ ಬದುಕದೆ ಅಂತರಂಗ–ಬಹಿರಂಗ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು. ಮಕ್ಕಳಲ್ಲಿ ಶರಣರ ವಿಚಾರಧಾರೆ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸುವ ಅಗತ್ಯವಿದೆ. ಸರಳತೆ, ಸತ್ಯ, ಕಾಯಕ, ದಾಸೋಹ ಹಾಗೂ ಅಂತರಂಗ ಶುದ್ಧತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮಕ್ಕಳು ಬಸವಣ್ಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಹಾಗೂ ಜೇಡರ ದಾಸಿಮಯ್ಯನವರ ವೇಷದಲ್ಲಿ ಭಾಗವಹಿಸಿ ಗಮನ ಸೆಳೆದರು.

ಚನ್ನವೀರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಅಸುಂಡಿ ಪ್ರಸ್ತಾವನೆ ಮಂಡಿಸಿದರು. ಚಂದ್ರಗೌಡ ಶೇಖರಗೌಡ ದೊಡ್ಡಗೌಡ್ರ ಸ್ವಾಗತಿಸಿದರು. ಗೌರವಕ್ಕೆ ಬಡಿಗಣ್ಣವರ ವಂದಿಸಿದರು. ಬಸವರಾಜ ಸಂಶಿ ನಿರೂಪಿಸಿದರು. ಬಸವದಳದ ಶರಣೆಯರಿಂದ ಪ್ರಾರ್ಥನೆ ಹಾಗೂ ವಚನ ಮಂಗಲ ನೆರವೇರಿತು. ಶರಣರು, ಶರಣೆಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಗದಗವರೆಗೆ ಹೊಸಪೇಟೆ-ಅರಸೀಕೆರೆ ರೈಲು ವಿಸ್ತರಣೆಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಆ. 28ರಿಂದ ಆರಂಭವಾಗಲಿರುವ ಹೊಸಪೇಟೆ-ಅರಸೀಕೆರೆ ಡೆಮು ರೈಲನ್ನು ಗದಗ ಜಂಕ್ಷನ್‌ವರೆಗೆ ವಿಸ್ತರಿಸುವಂತೆ ಹಾಗೂ ಬಳ್ಳಾರಿ-ಹುಬ್ಬಳ್ಳಿ ಮಾರ್ಗದಲ್ಲಿ ಹೊಸ ಡೆಮು ರೈಲು ಆರಂಭಿಸಿ ದಿನಕ್ಕೆ ಎರಡು ಟ್ರಿಪ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.

ಹೊಸಪೇಟೆ-ಅರಸೀಕೆರೆ ನಡುವೆ ವಾರದಲ್ಲಿ ಐದು ದಿನ ಸಂಚರಿಸಲಿರುವ 07343 ಹಾಗೂ 07344 ಸಂಖ್ಯೆಯ ರೈಲನ್ನು ಗದಗವರೆಗೆ ವಿಸ್ತರಿಸಿದರೆ ಗದಗ ಮತ್ತು ಕೊಪ್ಪಳ ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ವ್ಯಾಪಾರಸ್ಥರು, ಪ್ರವಾಸಿಗರು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ಪ್ರಯಾಣಿಕರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಅರಸೀಕೆರೆಯಿಂದ ರಾತ್ರಿ 9.30ಕ್ಕೆ ಹೊರಡುವ ರೈಲನ್ನು ಗದಗವರೆಗೆ ವಿಸ್ತರಿಸಿದರೆ ರಾತ್ರಿ 11ರ ವೇಳೆಗೆ ಗದಗ ತಲುಪಬಹುದು. ಬಳಿಕ ಮುಂಜಾನೆ 4 ಗಂಟೆಗೆ ಗದಗದಿಂದ ರೈಲು ಹೊರಡುವಂತೆ ವೇಳಾಪಟ್ಟಿ ರೂಪಿಸಿದರೆ ಹೊಸಪೇಟೆ, ಕೊಪ್ಪಳ ಹಾಗೂ ಗದಗ ಭಾಗದ ಜನರಿಗೆ ಅನುಕೂಲವಾಗಲಿದೆ. ಈ ರೈಲಿನ ಮೂಲಕ ಹುಬ್ಬಳ್ಳಿ, ವಿಜಯಪುರ ಸೇರಿದಂತೆ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಸಹ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಹೊಸಪೇಟೆ ಮಾರ್ಗದಲ್ಲಿ ಸಂಜೆ 6.40ರ ನಂತರ ಕೊಪ್ಪಳ-ಗದಗ ಭಾಗಕ್ಕೆ ಹೆಚ್ಚಿನ ರೈಲು ಸಂಪರ್ಕ ಇಲ್ಲದಿರುವ ಹಿನ್ನೆಲೆಯಲ್ಲಿ ಈ ರೈಲು ವಿಸ್ತರಣೆ ಅಗತ್ಯವಾಗಿದೆ. ಗದಗ ಜಂಕ್ಷನ್‌ ಮೂಲಕ ಹುಬ್ಬಳ್ಳಿ, ವಿಜಯಪುರ ಹಾಗೂ ಮಹಾರಾಷ್ಟ್ರ ಭಾಗಗಳಿಗೆ ಪ್ರಯಾಣಿಸುವವರಿಗೂ ರೈಲು ಸಂಪರ್ಕ ಮತ್ತಷ್ಟು ಸುಲಭವಾಗಲಿದೆ ಎಂದು ವಿಶ್ವನಾಥ ಖಾನಾಪೂರ ತಿಳಿಸಿದ್ದಾರೆ.

ಇದರ ಜೊತೆಗೆ ಬಳ್ಳಾರಿ-ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ-ಬಳ್ಳಾರಿ ಮಾರ್ಗದಲ್ಲಿ ಹೊಸ ಡೆಮು ರೈಲು ಆರಂಭಿಸಿ, ಮುಂಜಾನೆ ಮತ್ತು ರಾತ್ರಿ ತಲಾ ಒಂದು ಟ್ರಿಪ್‌ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ಈ ಭಾಗದ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗುವುದರೊಂದಿಗೆ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಅವರು ಮನವಿ ಮಾಡಿದ್ದಾರೆ.

ಕೇಂದ್ರ ರೈಲ್ವೆ ಸಚಿವರು, ರೈಲ್ವೆ ಇಲಾಖೆ ಹಾಗೂ ಕೊಪ್ಪಳ ಲೋಕಸಭಾ ಸದಸ್ಯ ರಾಜಶೇಖರ ಹಿಟ್ನಾಳ ಮತ್ತು ಗದಗ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅವರು ಈ ಬೇಡಿಕೆಗೆ ಸ್ಪಂದಿಸಿ ಎರಡೂ ಜಿಲ್ಲೆಗಳ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ವಿಶ್ವನಾಥ ಖಾನಾಪೂರ ಒತ್ತಾಯಿಸಿದ್ದಾರೆ.

ಶಿರಹಟ್ಟಿ ಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮತದಾರರ ಪಟ್ಟಿಗಳ ಸಮಗ್ರ ವಿಶೇಷ ಪರಿಷ್ಕರಣೆ-2026ರ ಬಳಿಕ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದುಹಾಕುವಿಕೆ ಸೇರಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ಮತದಾರರು ಅರ್ಜಿ ಸಲ್ಲಿಸಬಹುದು ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ ಹೇಳಿದರು.

ಸೋಮವಾರ ಶಿರಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರಡು ಮತದಾರರ ಪಟ್ಟಿ ಪ್ರಕಟಿಸುವ ಕುರಿತು ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿರಹಟ್ಟಿ ಮತಕ್ಷೇತ್ರದಲ್ಲಿ ಈ ಹಿಂದೆ 252 ಮತಗಟ್ಟೆಗಳಿದ್ದು, 1,200ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಪ್ರದೇಶಗಳಲ್ಲಿ ಹೊಸದಾಗಿ ಏಳು ಮತಗಟ್ಟೆಗಳನ್ನು ರಚಿಸಲಾಗಿದೆ. ಶಿವಾಜಿನಗರ, ಕುಂದ್ರಳ್ಳಿ, ರಾಮಗೇರಿ, ಆದ್ರಳ್ಳಿ, ಹರದಗಟ್ಟಿ, ಹುಲ್ಲೂರು ಹಾಗೂ ಕೋಗನೂರುಗಳಲ್ಲಿ ಹೊಸ ಮತಗಟ್ಟೆಗಳು ರಚನೆಯಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 259ಕ್ಕೆ ಏರಿಕೆಯಾಗಿದೆ ಎಂದರು.

ಕರಡು ಮತದಾರರ ಪಟ್ಟಿ ಪ್ರಕಟಕ್ಕೂ ಮುನ್ನ ಕ್ಷೇತ್ರದಲ್ಲಿ 2,30,268 ಮತದಾರರಿದ್ದರು. ಎಎಸ್‌ಡಿಡಿಒ ಪಟ್ಟಿಯ ಪರಿಷ್ಕರಣೆ ಬಳಿಕ ಕರಡು ಪಟ್ಟಿಯಲ್ಲಿ ಮತದಾರರ ಸಂಖ್ಯೆ 2,00,419ಕ್ಕೆ ಇಳಿಕೆಯಾಗಿದೆ. ಕ್ಷೇತ್ರದಲ್ಲಿ ಒಟ್ಟು 4,339 ಅನಾಮಲಿ ಪ್ರಕರಣಗಳು ಹಾಗೂ 1,464 ನೋ ಮ್ಯಾಪಿಂಗ್ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಒಟ್ಟು 4,804 ಮತದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅಥವಾ ತೆಗೆದುಹಾಕುವಿಕೆ ಸೇರಿದಂತೆ ಸಂಬಂಧಿಸಿದ ವಿಚಾರಣೆ ಹಾಗೂ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಆ.24ರಿಂದ ಅ.26ರವರೆಗೆ ನಡೆಯಲಿದೆ. ಈ ಪ್ರಕ್ರಿಯೆಗಾಗಿ 16 ಎಇಆರ್‌ಒಗಳನ್ನು ನೇಮಕ ಮಾಡಲಾಗಿದೆ ಎಂದರು.

ಸಭೆಯಲ್ಲಿ ಶಿರಹಟ್ಟಿ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಲಕ್ಷ್ಮೇಶ್ವರ ತಹಶೀಲ್ದಾರ್ ಧನಂಜಯ, ಸುಜಾತಾ ದೊಡ್ಡಮನಿ, ಶಂಕರ ಮರಾಠೆ, ಬಸವರಾಜ ವಡವಿ, ಶರಣಪ್ಪ ಹೂಗಾರ, ಎಸ್.ಎಸ್. ಅಸ್ಕಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಜಯಘೋಷ, ಭಕ್ತಿಭಾವದ ನಡುವೆ ರಥ ಎಳೆದ ಮಹಿಳೆಯರು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಕ್ತಿಭಾವ, ಜಯಘೋಷ ಹಾಗೂ ಮಹಿಳೆಯರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿ ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ ಲಿಂ. ಗುರು ಅನ್ನದಾನ ಸ್ವಾಮಿಗಳವರ 49ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಬೆಳ್ಳಿ ರಥೋತ್ಸವ ಸೋಮವಾರ ಸಂಜೆ ವೈಭವದಿಂದ ಜರುಗಿತು.

ಪುಣ್ಯಸ್ಮರಣೋತ್ಸವದ ಅಂಗವಾಗಿ ಮಹಿಳಾ ಆರೋಗ್ಯ ಶಿಬಿರ, ಉಡಿ ತುಂಬುವ ಸಮಾರಂಭ ಹಾಗೂ ಬೆಳ್ಳಿ ರಥೋತ್ಸವ ಆಯೋಜಿಸಲಾಗಿತ್ತು. ಹಾಲಕೆರೆ ಕ್ಷೇತ್ರಕ್ಕೆ ಆಗಮಿಸಿದ್ದ ವಿವಿಧ ಮಠಗಳ ಹಿರಿ-ಕಿರಿಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಹಾಲಕೆರೆ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೆಳ್ಳಿ ರಥಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು.

ಬಳಿಕ ಸಂಜೆ 6 ಗಂಟೆಗೆ ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಿದರು. ಚಾಲನೆ ದೊರೆಯುತ್ತಿದ್ದಂತೆ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಭಕ್ತಿಭಾವದಿಂದ ರಥದ ಹಗ್ಗ ಹಿಡಿದು ರಥವನ್ನು ಎಳೆದು ಸಂಭ್ರಮಿಸಿದರು.

ರಥ ಸಾಗುತ್ತಿದ್ದಂತೆ ‘ಅನ್ನದಾನೇಶ್ವರ ಮಹಾರಾಜ್ ಕೀ ಜೈ’, ‘ಗುರು ಕುಮಾರೇಶ್ವರ ಮಹಾರಾಜ್ ಕೀ ಜೈ’, ‘ಲಿಂ. ಗುರು ಅನ್ನದಾನ ಸ್ವಾಮೀಜಿ ಕೀ ಜೈ’, ‘ಲಿಂ. ಅಭಿನವ ಅನ್ನದಾನ ಸ್ವಾಮೀಜಿ ಕೀ ಜೈ’ ಹಾಗೂ ‘ಮುಪ್ಪಿನ ಬಸವಲಿಂಗ ಸ್ವಾಮೀಜಿ ಕೀ ಜೈ’ ಎಂಬ ಜಯಘೋಷಗಳು ಮೊಳಗಿದವು. ಭಕ್ತರ ಜಯಘೋಷದಿಂದ ಇಡೀ ಕ್ಷೇತ್ರವು ಆಧ್ಯಾತ್ಮಿಕ ವಾತಾವರಣದಲ್ಲಿ ಮಿಂದೆದ್ದಿತು.

ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಳ್ಳಿ ರಥ ಎಳೆದದ್ದು ರಥೋತ್ಸವದ ವಿಶೇಷ ಆಕರ್ಷಣೆಯಾಗಿತ್ತು. ಮಹಿಳೆಯರೊಂದಿಗೆ ವಿದ್ಯಾರ್ಥಿನಿಯರೂ ಉತ್ಸಾಹದಿಂದ ರಥ ಎಳೆದು ಭಕ್ತಿಭಾವ ಮೆರೆದರು. ಮಹಿಳೆಯರ ಶ್ರದ್ಧಾಭಕ್ತಿಯ ಪಾಲ್ಗೊಳ್ಳುವಿಕೆ ರಥೋತ್ಸವಕ್ಕೆ ಮತ್ತಷ್ಟು ಮೆರುಗು ತಂದಿತು.

ರಥೋತ್ಸವ ಯಶಸ್ವಿಯಾಗಿ ಪೂರ್ಣಗೊಂಡು ಬೆಳ್ಳಿ ರಥ ಸ್ವಸ್ಥಳಕ್ಕೆ ಮರಳಿದಾಗ ಭಕ್ತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಮಹಿಳೆಯರು ಹಾಗೂ ಭಕ್ತರು ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಭಕ್ತಿ ಸಮರ್ಪಿಸಿದರು.

ಗದಗ, ಧಾರವಾಡ, ಕೊಪ್ಪಳ, ಬಾಗಲಕೋಟೆ, ವಿಜಯನಗರ, ಬಳ್ಳಾರಿ, ರಾಯಚೂರು ಹಾಗೂ ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ರಥೋತ್ಸವದ ಹಿನ್ನೆಲೆಯಲ್ಲಿ ಹಾಲಕೆರೆ ಕ್ಷೇತ್ರವು ಭಕ್ತರಿಂದ ಕಿಕ್ಕಿರಿದು, ಜಯಘೋಷಗಳಿಂದ ಮೊಳಗುತ್ತಿತ್ತು.

ಮಹಿಳೆಯರ ಭಕ್ತಿ, ವಿದ್ಯಾರ್ಥಿನಿಯರ ಉತ್ಸಾಹ ಹಾಗೂ ಭಕ್ತರ ಜಯಘೋಷಗಳ ನಡುವೆ ನಡೆದ ಹಾಲಕೆರೆ ಬೆಳ್ಳಿ ರಥೋತ್ಸವವು ಲಿಂ. ಗುರು ಅನ್ನದಾನ ಸ್ವಾಮಿಗಳವರ ಪುಣ್ಯಸ್ಮರಣೋತ್ಸವಕ್ಕೆ ಭಕ್ತಿಯ ಮೆರುಗು ನೀಡಿತು.

ಭೀಕರ ಪ್ರವಾಹಕ್ಕೆ ನೇಪಾಳ ತತ್ತರ; ‘ಸಾಧ್ಯವಿರುವ ಎಲ್ಲ ನೆರವು ನೀಡುತ್ತೇವೆ’ ಎಂದ ಮೋದಿ!

0

ನವದೆಹಲಿ: ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳಕ್ಕೆ ಭಾರತ ನೆರವಿನ ಹಸ್ತ ಚಾಚಿದೆ.

ಪ್ರವಾಹದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಸಂಕಷ್ಟದ ಸಮಯದಲ್ಲಿ ನೇಪಾಳದೊಂದಿಗೆ ಭಾರತ ಗಟ್ಟಿಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ.

ಬುಧವಾರ ನೇಪಾಳ ಪ್ರಧಾನಿ ಬಾಲೆನ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಪ್ರವಾಹದಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿ ಪಡೆದರು. ನೇಪಾಳಕ್ಕೆ ಅಗತ್ಯವಿರುವ ಎಲ್ಲ ನೆರವು ಹಾಗೂ ಪರಿಹಾರ ಸಹಾಯ ನೀಡಲು ಭಾರತ ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಎರಡು ಜಿಲ್ಲೆಗಳಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದು, ಸುಮಾರು 400 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನದಿ ತೀರದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಹಲವಾರು ಜಲವಿದ್ಯುತ್ ಯೋಜನೆಗಳಿಗೂ ಹಾನಿಯಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಭಾರತವು ನೇಪಾಳದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ. ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ ಔಷಧಿ, ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ. ರಕ್ಷಣಾ ಕಾರ್ಯಕ್ಕೆ ನೆರವಾಗಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿಯನ್ನು ನೇಪಾಳಕ್ಕೆ ಕಳುಹಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ.

105 ಭಾರತೀಯರು ಸೇರಿದಂತೆ 291 ವಿದೇಶಿಯರು ನಾಪತ್ತೆ:

ರಸುವಾ ಪ್ರದೇಶದ ಭೋಟೆ ಕೋಶಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದ ಬಳಿಕ 105 ಭಾರತೀಯರು ಸೇರಿದಂತೆ 291 ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ಮಾಹಿತಿ ನೀಡಿದೆ.

ಒಟ್ಟು 384 ಪ್ರಯಾಣಿಕರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅವರಲ್ಲಿ 291 ವಿದೇಶಿ ಪ್ರಜೆಗಳು ಹಾಗೂ 93 ನೇಪಾಳಿ ಪ್ರಜೆಗಳು ಸೇರಿದ್ದಾರೆ.

ನಾಪತ್ತೆಯಾಗಿರುವವರ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಭಾರತೀಯರನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ತುರ್ತು ಸಂಪರ್ಕ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.

ಈದ್ ಮಿಲಾದ್ ಮೆರವಣಿಗೆ ವೇಳೆ ಹೈಡ್ರಾಮಾ..! ವ್ಯಕ್ತಿಗೆ ಹಲ್ಲೆ, ಠಾಣೆ ಮುಂದೆ ಜಮಾಯಿಸಿದ ಹಿಂದೂ ಕಾರ್ಯಕರ್ತರು

0

ಬೆಂಗಳೂರು: ಈದ್ ಮಿಲಾದ್ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ನಗರದ ಬಸವನಗುಡಿಯ ಕೆ.ಆರ್. ರಸ್ತೆಯಲ್ಲಿ ನಡೆದಿದೆ.

ಪುನೀತ್ ಕೆರೆಹಳ್ಳಿ ಅವರ ಕಚೇರಿ ಎದುರು ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಮುರಳಿ ಎಂಬ ವ್ಯಕ್ತಿಯ ಮೇಲೆ ಗುಂಪು ಹಲ್ಲೆ ನಡೆಸಿದ್ದು, ಗಾಯಗೊಂಡು ರಕ್ತಸ್ರಾವವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಘಟನೆಯನ್ನು ಖಂಡಿಸಿ ಪುನೀತ್ ಕೆರೆಹಳ್ಳಿ ಪ್ರತಿಭಟನೆ ನಡೆಸಿದ್ದು, ಬಳಿಕ ಹಿಂದೂ ಪರ ಕಾರ್ಯಕರ್ತರು ಬಸವನಗುಡಿ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು. ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ ಎನ್ನಲಾಗಿದ್ದು, ಘಟನೆಗೆ ನಿಖರ ಕಾರಣ ತಿಳಿಯಲು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು ಬೀಸುತ್ತಿದ್ದ ಬಾವುಟ ಮುರಳಿಗೆ ತಾಗಿ ಗಲಾಟೆ ಆರಂಭವಾಗಿರಬಹುದೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.