Home Blog Page 69

ಕುಬೇರನಿಗೆ ಪ್ರಿಯವಾದ ಗಿಡವಂತೆ! ಮನೆಯಲ್ಲಿ ಜೇಡ್ ಪ್ಲಾಂಟ್‌ ಇಡುವ ಮುನ್ನ ಈ ವಿಷಯ ತಿಳಿಯಿರಿ

0

ಮನೆಗೆ ಸಂಪತ್ತು ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚಾಗಲಿ ಎಂಬ ಉದ್ದೇಶದಿಂದ ಹಲವರು ಮನಿ ಪ್ಲಾಂಟ್‌ ಬೆಳೆಸುತ್ತಾರೆ.

ಆದರೆ ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ಮನಿ ಪ್ಲಾಂಟ್‌ ಜೊತೆಗೆ ಜೇಡ್ ಪ್ಲಾಂಟ್‌ ಕೂಡ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಜೇಡ್ ಪ್ಲಾಂಟ್‌ ಸಂಪತ್ತಿನ ದೇವತೆಯಾದ ಲಕ್ಷ್ಮಿ ಹಾಗೂ ಧನಾಧಿಪತಿ ಕುಬೇರನಿಗೆ ಪ್ರಿಯವಾದ ಸಸ್ಯ ಎನ್ನಲಾಗುತ್ತದೆ. ಆರ್ಥಿಕ ಸಮಸ್ಯೆಗಳು ಹಾಗೂ ಸಾಲದ ಬಾಧೆಯಿಂದ ಬಳಲುತ್ತಿರುವವರು ಮನೆಯಲ್ಲಿ ಈ ಗಿಡವನ್ನು ಬೆಳೆಸುವುದರಿಂದ ಧನಾತ್ಮಕ ಬದಲಾವಣೆ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಜೇಡ್ ಪ್ಲಾಂಟ್‌ ಮನೆಯತ್ತ ಹಣದ ಹರಿವನ್ನು ಆಕರ್ಷಿಸುತ್ತದೆ ಎಂದೂ ವಾಸ್ತು ನಂಬಿಕೆ ಹೇಳುತ್ತದೆ.

ಆರ್ಥಿಕ ಪ್ರಗತಿಗೆ ಸಹಕಾರಿ ಎಂಬ ನಂಬಿಕೆ:

ಜೇಡ್ ಪ್ಲಾಂಟ್‌ ಮನೆಯಲ್ಲಿ ಬೆಳೆಸುವುದರಿಂದ ಆರ್ಥಿಕ ಪ್ರಗತಿಯ ಜೊತೆಗೆ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎನ್ನಲಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ, ಉದ್ಯಮಿಗಳಿಗೆ ವ್ಯವಹಾರದಲ್ಲಿ ಲಾಭ ಸೇರಿದಂತೆ ಹಲವು ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಅಲ್ಲದೆ, ಮನೆಯಲ್ಲಿನ ನಕಾರಾತ್ಮಕ ವಾತಾವರಣ ಕಡಿಮೆಯಾಗಿ ಕುಟುಂಬ ಸದಸ್ಯರ ನಡುವಿನ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಜೇಡ್ ಪ್ಲಾಂಟ್‌ ಯಾವ ದಿಕ್ಕಿನಲ್ಲಿ ಇಡಬೇಕು?

ವಾಸ್ತು ಪ್ರಕಾರ ಜೇಡ್ ಪ್ಲಾಂಟ್‌ ಅನ್ನು ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಶುಭಕರ ಎಂದು ಪರಿಗಣಿಸಲಾಗಿದೆ. ಮನೆಯ ಮುಖ್ಯ ಪ್ರವೇಶ ದ್ವಾರದ ಸಮೀಪ ಇಡುವುದರಿಂದ ಧನಾತ್ಮಕ ಶಕ್ತಿ ಹಾಗೂ ಸಮೃದ್ಧಿ ಮನೆ ಪ್ರವೇಶಿಸುತ್ತದೆ ಎಂಬ ನಂಬಿಕೆಯೂ ಇದೆ.

ಈ ತಪ್ಪುಗಳನ್ನು ಮಾಡಬೇಡಿ:

ಜೇಡ್ ಪ್ಲಾಂಟ್‌ ಅನ್ನು ಮಲಗುವ ಕೋಣೆ ಅಥವಾ ಸ್ನಾನಗೃಹದಲ್ಲಿ ಇಡಬಾರದು ಎಂದು ವಾಸ್ತು ನಂಬಿಕೆ ಹೇಳುತ್ತದೆ. ಗಿಡದ ಸುತ್ತಮುತ್ತಲಿನ ಸ್ಥಳ ಹಾಗೂ ಎಲೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಒಣಗಿದ ಅಥವಾ ಹಾಳಾದ ಎಲೆಗಳನ್ನು ತಕ್ಷಣ ತೆಗೆದುಹಾಕಬೇಕು ಎನ್ನಲಾಗುತ್ತದೆ.

ಸೂಚನೆ: ಜೇಡ್ ಪ್ಲಾಂಟ್‌ಗೆ ಸಂಬಂಧಿಸಿದ ಸಂಪತ್ತು, ಅದೃಷ್ಟ ಮತ್ತು ಧನಾತ್ಮಕ ಶಕ್ತಿಯ ಕುರಿತ ಹೇಳಿಕೆಗಳು ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದ ನಂಬಿಕೆಗಳನ್ನು ಆಧರಿಸಿವೆ. ಇವುಗಳಿಗೆ ವೈಜ್ಞಾನಿಕ ದೃಢೀಕರಣವಿದೆ ಎಂದು ಪರಿಗಣಿಸಬಾರದು.

ಚಿಕ್ಕ ವಯಸ್ಸಿನಲ್ಲೇ ದಾಖಲೆಗಳ ದರ್ಬಾರ್: ವೈಭವ್ ಸೂರ್ಯವಂಶಿ ಹೆಸರಿನಲ್ಲಿರುವ 6 ಅಪರೂಪದ ವಿಶ್ವ ದಾಖಲೆಗಳಿವು!

0

ಚೆನ್ನೈ: ಭಾರತೀಯ ಕ್ರಿಕೆಟ್‌ನ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಜಗತ್ತಿನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಅವರು ಕಣಕ್ಕಿಳಿಯುವ ಪ್ರತಿಯೊಂದು ಪಂದ್ಯ ಹಾಗೂ ಸರಣಿಯಲ್ಲೂ ಒಂದಲ್ಲೊಂದು ಮೈಲಿಗಲ್ಲು ಸೃಷ್ಟಿಸುತ್ತಿರುವುದು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಕೇವಲ 13ನೇ ವಯಸ್ಸಿನಲ್ಲೇ ವಿಶ್ವದ ಪ್ರತಿಷ್ಠಿತ ಟಿ20 ಲೀಗ್‌ಗಳಲ್ಲಿ ಒಂದಾದ ಐಪಿಎಲ್‌ಗೆ ಆಯ್ಕೆಯಾಗಿದ್ದ ವೈಭವ್, ಆರಂಭದಿಂದಲೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅನುಭವಿ ಬೌಲರ್‌ಗಳ ವಿರುದ್ಧ ನಿರ್ಭೀತಿಯಾಗಿ ಬ್ಯಾಟ್ ಬೀಸುತ್ತಿರುವ ಅವರು, ಐಪಿಎಲ್‌ನಲ್ಲೂ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ವೈಭವ್ ಅವರ ಸಾಧನೆ ಐಪಿಎಲ್‌ಗೆ ಮಾತ್ರ ಸೀಮಿತವಾಗಿಲ್ಲ. ಭಾರತ ‘ಎ’ ತಂಡ, ಅಂಡರ್-19 ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲೂ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲೂ ಇತಿಹಾಸ ನಿರ್ಮಿಸಿದ ವೈಭವ್, ಟೂರ್ನಮೆಂಟ್‌ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.

ಕೇವಲ 15 ವರ್ಷ 157 ದಿನಗಳ ವಯಸ್ಸಿನಲ್ಲಿ ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಸಿಡಿಸಿದ ವೈಭವ್, 57 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದರು. ಅವರು ಕೇವಲ 42 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಮತ್ತೊಮ್ಮೆ ಪ್ರದರ್ಶಿಸಿದರು.

ವೈಭವ್ ಸೂರ್ಯವಂಶಿ ಹೆಸರಿನಲ್ಲಿರುವ ಪ್ರಮುಖ ದಾಖಲೆಗಳು:

1. ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್
14 ವರ್ಷ 32 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ.

2. ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್
14 ವರ್ಷ 272 ದಿನಗಳ ವಯಸ್ಸಿನಲ್ಲಿ ಶತಕ ಸಿಡಿಸಿದ್ದಾರೆ.

3. ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ
ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ದಾಖಲೆ ಹೊಂದಿದ್ದಾರೆ.

4. ಭಾರತ ಪರ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ ಆಟಗಾರ
15 ವರ್ಷ 99 ದಿನಗಳ ವಯಸ್ಸಿನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

5. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ
ಕಿರಿಯ ವಯಸ್ಸಿನಲ್ಲೇ ಈ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.

6. ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್
15 ವರ್ಷ 157 ದಿನಗಳ ವಯಸ್ಸಿನಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ.

ವೈಭವ್ ಸೂರ್ಯವಂಶಿ ಅವರ ವಿಶೇಷತೆ ಎಂದರೆ, ಈ ದಾಖಲೆಗಳನ್ನು ನಿರ್ಮಿಸಲು ಅವರು ವರ್ಷಗಳ ಕಾಲ ಕಾಯಬೇಕಾಗಿಲ್ಲ. ಕಿರಿಯ ವಯಸ್ಸಿನಲ್ಲೇ ಐಪಿಎಲ್, ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ನ ವಿವಿಧ ಹಂತಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಇನ್ನೂ ಅವರ ಕ್ರಿಕೆಟ್ ವೃತ್ತಿಜೀವನ ಆರಂಭದ ಹಂತದಲ್ಲೇ ಇದೆ. ಹೀಗಾಗಿ ಮುಂದಿನ ವರ್ಷಗಳಲ್ಲಿ ವೈಭವ್ ಸೂರ್ಯವಂಶಿ ಇನ್ನೆಷ್ಟು ದಾಖಲೆಗಳನ್ನು ನಿರ್ಮಿಸಲಿದ್ದಾರೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಈಗಾಗಲೇ ದಾಖಲೆಗಳ ಸರಮಾಲೆ ಸೃಷ್ಟಿಸಿರುವ ಈ ಯುವ ಬ್ಯಾಟರ್, ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನ ಪ್ರಮುಖ ತಾರೆಯಾಗಿ ಹೊರಹೊಮ್ಮುವ ನಿರೀಕ್ಷೆ ಮೂಡಿಸಿದ್ದಾರೆ.

ಮೈಸೂರಿನಲ್ಲಿ ಮತ್ತೊಂದು ಗೋಲ್ಡ್ ಸ್ಕ್ಯಾಮ್: 80ಕ್ಕೂ ಹೆಚ್ಚು ಗ್ರಾಹಕರಿಗೆ ಕೋಟ್ಯಂತರ ರೂ. ವಂಚನೆ?

0

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಹುಕೋಟಿ ‘ಚಿನ್ನತಂಬಿ’ ಚಿನ್ನದ ಹಗರಣದ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಗೋಲ್ಡ್ ಸ್ಕ್ಯಾಮ್ ಬೆಳಕಿಗೆ ಬಂದಿದೆ.

ಚಿನ್ನ ನೀಡುವುದಾಗಿ ನಂಬಿಸಿ ಮಾಸಿಕ ಕಂತುಗಳ ಮೂಲಕ ಹಣ ಕಟ್ಟಿಸಿಕೊಂಡು 80ಕ್ಕೂ ಹೆಚ್ಚು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ.

ಮೈಸೂರು ನಗರದ ವಿವೇಕಾನಂದ ವೃತ್ತದಲ್ಲಿರುವ ‘ಮೋಹನ್ ಜ್ಯುವೆಲರಿ’ ಅಂಗಡಿಯ ಮಾಲೀಕ ಮೋಹನ್ ಲಾಲ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಗ್ರಾಹಕರಿಂದ ಮಾಸಿಕ ಕಂತು ಕಟ್ಟಿಸಿಕೊಂಡು, ಸರಿಯಾದ ಸಮಯಕ್ಕೆ ಚಿನ್ನ ನೀಡುವ ಮೂಲಕ ಮೋಹನ್ ಲಾಲ್ ಜನರ ನಂಬಿಕೆ ಗಳಿಸಿದ್ದ ಎನ್ನಲಾಗಿದೆ.

ಆತನ ಮಾತು ಹಾಗೂ ಯೋಜನೆಯನ್ನು ನಂಬಿದ 80ಕ್ಕೂ ಹೆಚ್ಚು ಗ್ರಾಹಕರು ಈ ಬಾರಿಯೂ ಚಿನ್ನದ ಆಸೆಯಿಂದ ಹೆಚ್ಚಿನ ಮೊತ್ತದ ಹಣವನ್ನು ಮಾಸಿಕ ಕಂತುಗಳ ರೂಪದಲ್ಲಿ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.

ಆದರೆ ಕಳೆದ ಒಂದು ವಾರದಿಂದ ಮೋಹನ್ ಜ್ಯುವೆಲರಿ ಅಂಗಡಿ ಬಾಗಿಲು ಮುಚ್ಚಿದ್ದು, ಮಾಲೀಕ ಮೋಹನ್ ಲಾಲ್ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಆತನ ಮನೆಯೂ ಖಾಲಿಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರಾಹಕರು ಅಂಗಡಿಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣ ಕಳೆದುಕೊಂಡ ಸಂತ್ರಸ್ತ ಗ್ರಾಹಕರು ತಕ್ಷಣ ಕುವೆಂಪುನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ವೇಳೆ, “ನಾವು ಕಷ್ಟಪಟ್ಟು ದುಡಿದು ಕಟ್ಟಿದ ಹಣವನ್ನು ನಮಗೆ ವಾಪಸ್ ಕೊಡಿಸಿ” ಎಂದು ಪೊಲೀಸರ ಬಳಿ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ.

ದೂರು ಸ್ವೀಕರಿಸಿದ ಕುವೆಂಪುನಗರ ಠಾಣೆ ಪೊಲೀಸರು ಜ್ಯುವೆಲರಿ ಮಾಲೀಕ ಮೋಹನ್ ಲಾಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಒಟ್ಟು ಎಷ್ಟು ಮೊತ್ತದ ಹಣ ವಂಚನೆಯಾಗಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದು, ವಿಚಾರಣೆ ಬಳಿಕ ವಂಚನೆಯ ಸಂಪೂರ್ಣ ಮೊತ್ತ ಹಾಗೂ ಪ್ರಕರಣದ ಹೆಚ್ಚಿನ ವಿವರಗಳು ಹೊರಬರಲಿವೆ.

ಕದ್ದುಮುಚ್ಚಿ ಮಹಿಳೆಯರ ವಿಡಿಯೋ ಮಾಡುತ್ತಿದ್ದ ಯುವಕ ರೆಡ್‌ಹ್ಯಾಂಡಾಗಿ ಲಾಕ್! ಸ್ಥಳೀಯರಿಂದ ತರಾಟೆ

0

ಬೆಂಗಳೂರು: ಬೆಳ್ಳಂಬೆಳಗ್ಗೆ ಜಾಗಿಂಗ್ ಮಾಡುತ್ತಿದ್ದ ಮಹಿಳೆಯರ ವಿಡಿಯೋ ಮಾಡುತ್ತಿದ್ದ ಯುವಕನೊಬ್ಬ ಸ್ಥಳೀಯರಿಗೆ ಸಿಕ್ಕಿಬಿದ್ದಿರುವ ಘಟನೆ ನಗರದ ಹೆಚ್‌ಎಸ್‌ಆರ್ ಬಡಾವಣೆಯ ಅರಗ ಕೆರೆ ಬಳಿ ನಡೆದಿದೆ.

ಸರ್ಜಾಪುರದಲ್ಲಿ ವಾಸವಿರುವ ಗೋಲ್ಡನ್ ಕುಮಾರ್ ಎಂಬಾತ ಮಹಿಳೆಯರ ವಿಡಿಯೋಗಳನ್ನು ಕದ್ದುಮುಚ್ಚಿ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಜಾಗಿಂಗ್‌ಗೆ ಬಂದಿದ್ದ ಮಹಿಳೆಯೊಬ್ಬರ ವಿಡಿಯೋ ಮಾಡುತ್ತಿದ್ದ ವೇಳೆ ಯುವಕ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ತನ್ನ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆ ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸ್ಥಳದಲ್ಲಿದ್ದ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳೀಯರು ಯುವಕನ ಮೊಬೈಲ್ ಪರಿಶೀಲಿಸಿದಾಗ ಹಲವು ಮಹಿಳೆಯರ ವಿಡಿಯೋಗಳು ಇರುವುದು ಪತ್ತೆಯಾಗಿದೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಯುವಕ ಮಹಿಳೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಭಾರೀ ನೀರು ಬಿಡುಗಡೆ; 108.76 ಅಡಿಗೆ ಕುಸಿದ ಜಲಮಟ್ಟ!

0

ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಜಲಾಶಯದ ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ.

ಎರಡು ದಿನಗಳ ಹಿಂದೆ ಕೆಆರ್‌ಎಸ್ ಡ್ಯಾಂನಿಂದ 7,697 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿತ್ತು. ನಿನ್ನೆ ಈ ಪ್ರಮಾಣ 8,544 ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ಇದೀಗ ಹೊರಹರಿವು ಮತ್ತಷ್ಟು ಹೆಚ್ಚಾಗಿ 9,253 ಕ್ಯೂಸೆಕ್‌ಗೆ ತಲುಪಿದೆ.

ಇತ್ತ ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಡ್ಯಾಂಗೆ ಒಳಹರಿವು ಗಣನೀಯವಾಗಿ ಕುಸಿದಿದೆ. ಸದ್ಯ ಕೇವಲ 3,028 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಒಳಹರಿವಿಗಿಂತ ಸುಮಾರು ಮೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿರುವ ಪರಿಣಾಮ, ಇತ್ತೀಚೆಗೆ 111 ಅಡಿಗೆ ತಲುಪಿದ್ದ ಕೆಆರ್‌ಎಸ್ ಜಲಮಟ್ಟ ಇದೀಗ 108.76 ಅಡಿಗೆ ಕುಸಿದಿದೆ.

ಸದ್ಯ ಜಲಾಶಯದಲ್ಲಿ 30.493 ಟಿಎಂಸಿ ನೀರು ಸಂಗ್ರಹವಿದೆ. ಒಳಹರಿವು ಕಡಿಮೆಯಾಗುತ್ತಿರುವ ನಡುವೆಯೂ ಹೊರಹರಿವಿನ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಪ್ಪತ್ತ ಮಲ್ಲಯ್ಯ ಜಾತ್ರೆಗೆ ಭಕ್ತರ ದಂಡು; ಬಸ್‌ಗಳಿಲ್ಲದೆ ಗದಗದಲ್ಲಿ ಭಕ್ತರ ಪರದಾಟ! ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ

0

ಗದಗ: ಉತ್ತರ ಕರ್ನಾಟಕದ ಪ್ರಸಿದ್ಧ ಕಪ್ಪತ್ತಗುಡ್ಡದ ಕಪ್ಪತ್ತ ಮಲ್ಲಯ್ಯ ಜಾತ್ರೆಯ ಹಿನ್ನೆಲೆಯಲ್ಲಿ ಭಕ್ತರಿಗೆ ಸಮರ್ಪಕ ಬಸ್ ಸೌಲಭ್ಯ ದೊರೆಯದೆ ಪರದಾಡುವಂತಾಗಿದೆ.

ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದಲ್ಲಿರುವ ಕಪ್ಪತ್ತ ಮಲ್ಲಯ್ಯ ದೇವಸ್ಥಾನಕ್ಕೆ ತೆರಳಲು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ನೂರಾರು ಭಕ್ತರು ಬಸ್‌ಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಸ್‌ಗಳಲ್ಲಿ ಸೀಟ್‌ಗಾಗಿ ಮಹಿಳೆಯರ ನಡುವೆ ವಾಗ್ವಾದವೂ ನಡೆದಿದೆ. ಕೆಲ ಮಹಿಳೆಯರು ಕಿಟಕಿಯಿಂದ ಮಕ್ಕಳನ್ನು ಎತ್ತಿಕೊಂಡು ಸೀಟ್ ಕಾಯ್ದಿರಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿವೆ.

ಸಮರ್ಪಕ ಬಸ್ ಸೌಲಭ್ಯ ಕಲ್ಪಿಸದಿರುವುದಕ್ಕೆ ಸಾರಿಗೆ ಸಂಸ್ಥೆ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತ್ರೆಯ ಹಿನ್ನೆಲೆಯಲ್ಲಿ ಕಪ್ಪತ್ತಗುಡ್ಡಕ್ಕೆ ಹೆಚ್ಚುವರಿ ವಿಶೇಷ ಬಸ್‌ಗಳನ್ನು ಕೂಡಲೇ ಒದಗಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.

ಹೊಟ್ಟೆ ತುಂಬ ಊಟ ಮಾಡಿದರೂ ಮತ್ತೆ ಹಸಿವಾಗುತ್ತಿದೆಯೇ? ದೇಹ ನೀಡುತ್ತಿರುವ ಈ ಸೂಚನೆಗಳನ್ನು ಗಮನಿಸಿ

0

ಸಾಮಾನ್ಯವಾಗಿ ಹೊಟ್ಟೆ ತುಂಬ ಊಟ ಮಾಡಿದ ಕೆಲವು ಗಂಟೆಗಳ ಬಳಿಕ ಮತ್ತೆ ಹಸಿವಾಗುವುದು ಸಹಜ. ಆದರೆ ಊಟ ಮಾಡಿದ ಕೆಲವೇ ಸಮಯದಲ್ಲಿ ಪದೇಪದೇ ಏನಾದರೂ ತಿನ್ನಬೇಕು ಎನ್ನಿಸುತ್ತಿದ್ದರೆ ಅಥವಾ ನಿರಂತರವಾಗಿ ಹಸಿವಿನ ಅನುಭವವಾಗುತ್ತಿದ್ದರೆ, ಅದಕ್ಕೆ ಹಲವು ಕಾರಣಗಳಿರಬಹುದು.

ಆಹಾರದಲ್ಲಿ ಪ್ರೋಟೀನ್, ನಾರಿನಾಂಶ ಕಡಿಮೆಯೇ?

ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಮತ್ತು ನಾರಿನಾಂಶ ಕಡಿಮೆಯಿದ್ದರೆ ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ ಇರುವುದಿಲ್ಲ. ಅನ್ನ, ಬ್ರೆಡ್, ಸಿಹಿತಿಂಡಿಗಳಂತಹ ಕಾರ್ಬೋಹೈಡ್ರೇಟ್‌ಯುಕ್ತ ಆಹಾರ ಹೊಟ್ಟೆ ತುಂಬಿಸಿದರೂ ಕೆಲವೇ ಸಮಯದಲ್ಲಿ ಮತ್ತೆ ಹಸಿವಾಗಬಹುದು.

ಬೇಳೆ, ಮೊಟ್ಟೆ, ಮೊಸರು, ಪನ್ನೀರ್, ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳನ್ನು ಆಹಾರದಲ್ಲಿ ಸೇರಿಸುವುದು ಉತ್ತಮ. ಪ್ರೋಟೀನ್ ಹಾಗೂ ನಾರಿನಾಂಶವು ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡಲು ಸಹಾಯ ಮಾಡಬಹುದು.

ದೇಹಕ್ಕೆ ನೀರು ಕಡಿಮೆಯಾಗಿದೆಯೇ?

ಕೆಲವೊಮ್ಮೆ ದೇಹಕ್ಕೆ ನೀರಿನ ಅಗತ್ಯವಿದ್ದರೂ ಅದನ್ನು ಹಸಿವು ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಊಟದ ನಂತರ ಮತ್ತೆ ಏನಾದರೂ ತಿನ್ನಬೇಕು ಎನ್ನಿಸಿದಾಗ ಮೊದಲು ನೀರು ಕುಡಿದು ಸ್ವಲ್ಪ ಸಮಯ ಕಾಯುವುದು ಸಹಾಯವಾಗಬಹುದು.

ಆದರೆ ಪದೇಪದೇ ಅತಿಯಾದ ಬಾಯಾರಿಕೆ ಅಥವಾ ಹಸಿವು ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ನಿರ್ಲಕ್ಷಿಸದೆ ಗಮನಿಸುವುದು ಮುಖ್ಯ.

ಸಾಕಷ್ಟು ನಿದ್ರೆ ಇಲ್ಲದಿದ್ದರೂ ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆಯಿಂದ ಹಸಿವು ಹಾಗೂ ಹೊಟ್ಟೆ ತುಂಬಿದ ಅನುಭವವನ್ನು ನಿಯಂತ್ರಿಸುವ ಹಾರ್ಮೋನುಗಳಲ್ಲಿ ಬದಲಾವಣೆ ಉಂಟಾಗಬಹುದು. ಇದರಿಂದ ಸಿಹಿ ಅಥವಾ ಹೆಚ್ಚಿನ ಕ್ಯಾಲೊರಿ ಇರುವ ಆಹಾರ ಸೇವಿಸುವ ಬಯಕೆ ಹೆಚ್ಚಾಗಬಹುದು.

ಹೀಗಾಗಿ ಪ್ರತಿದಿನ ಸಾಕಷ್ಟು ಹಾಗೂ ಉತ್ತಮ ಗುಣಮಟ್ಟದ ನಿದ್ರೆ ಪಡೆಯುವುದು ಮುಖ್ಯ.

ಒತ್ತಡದಿಂದಲೂ ತಿನ್ನುವ ಬಯಕೆ ಹೆಚ್ಚಾಗಬಹುದು:

ನಿಜವಾದ ಹಸಿವಿಗಿಂತ ಒತ್ತಡ, ಆತಂಕ ಅಥವಾ ಬೇಸರದಿಂದಲೂ ಏನಾದರೂ ತಿನ್ನಬೇಕು ಎನ್ನಿಸಬಹುದು. ಇದನ್ನು ಭಾವನಾತ್ಮಕ ಹಸಿವು ಎಂದು ಕರೆಯಲಾಗುತ್ತದೆ.

ಇಂತಹ ಸಂದರ್ಭದಲ್ಲಿ ಸಿಹಿ, ಕರಿದ ತಿಂಡಿ ಅಥವಾ ಇಷ್ಟದ ಆಹಾರವನ್ನು ತಿನ್ನುವ ಬಯಕೆ ಹೆಚ್ಚಾಗಬಹುದು. ಹೀಗಾಗಿ ನಿಜವಾಗಿಯೂ ಹಸಿವಾಗಿದೆಯೇ ಅಥವಾ ಒತ್ತಡದಿಂದ ತಿನ್ನಬೇಕು ಎನ್ನಿಸುತ್ತಿದೆಯೇ ಎಂಬುದನ್ನು ಗಮನಿಸುವುದು ಅಗತ್ಯ.

ಊಟವನ್ನು ತುಂಬಾ ವೇಗವಾಗಿ ಮಾಡಬೇಡಿ:

ಊಟ ಮಾಡಿದ ತಕ್ಷಣವೇ ಹೊಟ್ಟೆ ತುಂಬಿದೆ ಎಂಬ ಸಂಕೇತ ಮೆದುಳಿಗೆ ತಲುಪುವುದಿಲ್ಲ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಹೀಗಾಗಿ ವೇಗವಾಗಿ ಊಟ ಮಾಡಿದರೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಇದೆ.

ಆಹಾರವನ್ನು ನಿಧಾನವಾಗಿ ಸೇವಿಸಿ, ಚೆನ್ನಾಗಿ ಅಗಿಯುವುದು ಉತ್ತಮ ಅಭ್ಯಾಸ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಹೊಟ್ಟೆ ತುಂಬ ಊಟ ಮಾಡಿದರೂ ನಿರಂತರವಾಗಿ ಅತಿಯಾದ ಹಸಿವು ಕಾಣಿಸಿಕೊಳ್ಳುತ್ತಿದ್ದರೆ ಹಾಗೂ ಇದರೊಂದಿಗೆ ತೂಕದಲ್ಲಿ ವೇಗವಾದ ಬದಲಾವಣೆ, ಅತಿಯಾದ ಬಾಯಾರಿಕೆ, ಪದೇಪದೇ ಮೂತ್ರ ವಿಸರ್ಜನೆ ಅಥವಾ ದೌರ್ಬಲ್ಯದಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಕೆಲವು ಸಂದರ್ಭಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟದ ಬದಲಾವಣೆ, ಥೈರಾಯ್ಡ್ ಸಮಸ್ಯೆಗಳು ಅಥವಾ ಕೆಲವು ಔಷಧಿಗಳ ಪರಿಣಾಮದಿಂದಲೂ ಹಸಿವು ಹೆಚ್ಚಾಗಬಹುದು.

ಹೀಗಾಗಿ ಪದೇಪದೇ ಹಸಿವಾಗುವುದು ಎಂದರೆ ದೇಹಕ್ಕೆ ಇನ್ನಷ್ಟು ಆಹಾರ ಬೇಕು ಎಂದೇ ಅರ್ಥವಲ್ಲ. ಸಮತೋಲಿತ ಆಹಾರ, ಸಾಕಷ್ಟು ನೀರು, ಉತ್ತಮ ನಿದ್ರೆ ಮತ್ತು ಒತ್ತಡ ನಿಯಂತ್ರಣದತ್ತ ಗಮನ ಹರಿಸುವುದು ಮುಖ್ಯ.

ಕಲಬುರಗಿಯಲ್ಲಿ ಭೀಕರ ಅಪಘಾತ: ತಾಯಿ, 3 ತಿಂಗಳ ಮಗು ಸ್ಥಳದಲ್ಲೇ ಸಾವು!

0

ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಹೊರವಲಯದಲ್ಲಿ ಆಟೋ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ ಹಾಗೂ ಮೂರು ತಿಂಗಳ ಮಗು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಅಪಘಾತದಲ್ಲಿ ಶರಣಮ್ಮ (30) ಹಾಗೂ ಅವರ ಮೂರು ತಿಂಗಳ ಮಗು ಸಾವನ್ನಪ್ಪಿದ್ದಾರೆ. ವಾಡಿ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಶರಣಮ್ಮ ಅವರ ಅತ್ತೆ ಸಾಬಮ್ಮ ಹಾಗೂ ಆಟೋ ಚಾಲಕ ಖಾಜಾ ಪಟೇಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಟರ್ಫ್ ಬೇಡ: ಗ್ರಾಸ್ ಫುಟ್‌ಬಾಲ್ ಮೈದಾನ ನಿರ್ಮಿಸಿ

0

ಗದಗ: ಗದಗ-ಬೆಟಗೇರಿ ಅವಳಿ ನಗರದ ಏಕೈಕ ಜಿಲ್ಲಾ ಕ್ರೀಡಾಂಗಣದಲ್ಲಿ ತರಾತುರಿಯಲ್ಲಿ ಸಿಂಥೆಟಿಕ್ ಫುಟ್‌ಬಾಲ್ ಟರ್ಫ್ ಮೈದಾನ ನಿರ್ಮಿಸುತ್ತಿರುವ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಅದರ ಬದಲಿಗೆ ಹುಲ್ಲಿನ ಹಾಸಿನ (ಗ್ರಾಸ್) ಫುಟ್‌ಬಾಲ್ ಮೈದಾನ ನಿರ್ಮಿಸಬೇಕು ಎಂದು ಶಿವರಾಮಕೃಷ್ಣ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಕ್ರೀಡಾ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಮಕೃಷ್ಣ ಸೇವಾ ಟ್ರಸ್ಟ್ ಅಧ್ಯಕ್ಷ ರಾಜೂ ಖಾನಪ್ಪನವರ, ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿವರ್ಷ ದಸರಾ ಕ್ರೀಡಾಕೂಟ, ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ, ಶಾಲಾ-ಕಾಲೇಜುಗಳ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳು ನಡೆಯುತ್ತವೆ. ಅಲ್ಲದೆ, ಆಗಸ್ಟ್ 15, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದಂತಹ ರಾಷ್ಟ್ರೀಯ ಮತ್ತು ನಾಡಹಬ್ಬಗಳ ಕಾರ್ಯಕ್ರಮಗಳಿಗೂ ಇದೇ ಕ್ರೀಡಾಂಗಣ ಬಳಕೆಯಾಗುತ್ತಿದೆ ಎಂದು ತಿಳಿಸಿದರು.

ಇಂತಹ ಬಹುಉದ್ದೇಶದ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಫುಟ್‌ಬಾಲ್ ಟರ್ಫ್ ನಿರ್ಮಿಸಿದರೆ ಉಳಿದ ಕ್ರೀಡೆಗಳಿಗೆ ತೀವ್ರ ಅನಾನುಕೂಲವಾಗಲಿದೆ ಎಂದು ಕ್ರೀಡಾಪಟುಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಶಾಟ್‌ಪುಟ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ ಹಾಗೂ ಹ್ಯಾಮರ್ ಥ್ರೋ ಸ್ಪರ್ಧೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಇದರಿಂದ ಕ್ರೀಡಾಪಟುಗಳು ಶಾಲಾ-ಕಾಲೇಜುಗಳ ಮೈದಾನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.

ಫುಟ್‌ಬಾಲ್ ಕ್ರೀಡೆಯ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ ಒಂದೇ ಕ್ರೀಡೆಗಾಗಿ ಜಿಲ್ಲೆಯ ವಿವಿಧ ಕ್ರೀಡೆಗಳಿಗೆ ಲಭ್ಯವಿರುವ ಏಕೈಕ ಕ್ರೀಡಾಂಗಣದ ಸ್ವರೂಪವನ್ನು ಬದಲಿಸುವುದು ವೈಜ್ಞಾನಿಕ ಕ್ರಮವಲ್ಲ. ಟರ್ಫ್ ಬದಲಿಗೆ ಹುಲ್ಲಿನ ಹಾಸಿನ ಗ್ರಾಸ್ ಫುಟ್‌ಬಾಲ್ ಮೈದಾನ ನಿರ್ಮಿಸಿದರೆ ಫುಟ್‌ಬಾಲ್ ಸೇರಿದಂತೆ ಇತರ ಕ್ರೀಡೆಗಳಿಗೂ ಅವಕಾಶ ಉಳಿಯಲಿದೆ ಎಂದು ರಾಜೂ ಖಾನಪ್ಪನವರ ಪ್ರತಿಪಾದಿಸಿದರು.

ಕ್ರೀಡಾಂಗಣ ನಿರ್ಮಾಣದ ಕುರಿತು ವಿವಿಧ ಕ್ರೀಡಾ ಸಂಘಟನೆಗಳು ಹಾಗೂ ಕ್ರೀಡಾಪಟುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ಆರಂಭಿಸಿರುವುದು ಖಂಡನೀಯ. ಕ್ರೀಡಾ ಕ್ಷೇತ್ರದ ತಜ್ಞರು ಹಾಗೂ ಎಲ್ಲ ಕ್ರೀಡಾ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಈಗಾಗಲೇ ಆರಂಭಿಸಿರುವ ಟರ್ಫ್ ಫುಟ್‌ಬಾಲ್ ಮೈದಾನದ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಏಳು ದಿನಗಳೊಳಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ, ಸರದಿ ಉಪವಾಸ ಸತ್ಯಾಗ್ರಹ, ರಸ್ತೆ ತಡೆ ಹಾಗೂ ಅಮರಣ ಉಪವಾಸ ಸೇರಿದಂತೆ ವಿವಿಧ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡರ, ಅರವಿಂದ ಹುಲ್ಲೂರ, ರವಿಕಾಂತ ಅಂಗಡಿ, ಪ್ರಭುಗೌಡ ಪಾಟೀಲ, ವೀರೇಶ ರೋಣದ, ನಾಗರಾಜ ಬಂಡಿವಡ್ಡರ, ಮಹಾಂತೇಶ ಪಾಟೀಲ, ರಾಜೂ ಉಮಚಗಿ, ಪರಮೇಶ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೊರಗಿನ ಸಂಪತ್ತಿಗಿಂತ ಅಂತರಂಗದ ನೆಮ್ಮದಿ ಶ್ರೇಷ್ಠ: ಚನ್ನವೀರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಹಿರಂಗದ ಸಂಪತ್ತನ್ನು ಗಳಿಸಿಕೊಳ್ಳಲು ಬದುಕಿನಲ್ಲಿ ಹಲವಾರು ದಾರಿಗಳಿವೆ. ಆದರೆ ಮನುಷ್ಯನ ಅಂತರಂಗದಲ್ಲಿ ಶಾಂತಿ, ಸಮಾಧಾನ ಹಾಗೂ ನೆಮ್ಮದಿ ನೆಲೆಸುವುದೇ ನಿಜವಾದ ಸಂಪತ್ತು. ಅದಕ್ಕಾಗಿ ಪ್ರತಿಯೊಬ್ಬರೂ ಪೂಜೆ, ಧ್ಯಾನ, ಪ್ರಾರ್ಥನೆ, ದಾನ ಹಾಗೂ ಧರ್ಮಕಾರ್ಯಗಳನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ರೂಢಿಸಿಕೊಳ್ಳಬೇಕು ಎಂದು ಹೂವಿನಶಿಗ್ಲಿ ಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಶ್ರಾವಣ ಮಾಸದ ನಿಮಿತ್ತ ಬುಧವಾರ ಲಕ್ಷ್ಮೇಶ್ವರದಲ್ಲಿ ಹುಲಗೇರಿ ಬಣದ ಭಕ್ತಗಣ ಆಯೋಜಿಸಿದ್ದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಭೌತಿಕ ಸಂಪತ್ತು, ಉದ್ಯೋಗ ಹಾಗೂ ವಿವಿಧ ಚಟುವಟಿಕೆಗಳ ಹಿಂದೆ ಓಡುತ್ತ ಅಂತರಂಗದ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ. ನಿತ್ಯದ ಕೆಲಸದ ಒತ್ತಡ, ಜಂಜಾಟ ಹಾಗೂ ಸ್ಪರ್ಧಾತ್ಮಕ ಜೀವನದ ನಡುವೆಯೂ ಧಾರ್ಮಿಕ ಕಾರ್ಯಗಳಿಗೆ ಸಮಯ ಮೀಸಲಿಡುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಶ್ರಾವಣ ಮಾಸವು ಭಕ್ತಿ, ಧ್ಯಾನ, ಆತ್ಮಚಿಂತನೆ ಹಾಗೂ ಧಾರ್ಮಿಕ ಆಚರಣೆಗಳಿಗೆ ವಿಶೇಷ ಮಹತ್ವ ಹೊಂದಿದೆ. ಇವುಗಳ ಮೂಲಕ ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತದೆ. ಭಕ್ತಿಯಿಂದ ಲಿಂಗಪೂಜೆ, ಜಪ, ಧ್ಯಾನ ಹಾಗೂ ಪ್ರಾರ್ಥನೆ ಮಾಡುವುದರಿಂದ ಮನಸ್ಸಿನ ಚಂಚಲತೆ ದೂರವಾಗಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಬದುಕಿನಲ್ಲಿ ಎದುರಾಗುವ ಕಷ್ಟ-ಸಂಕಷ್ಟಗಳನ್ನು ಸಮಚಿತ್ತದಿಂದ ಎದುರಿಸುವ ಶಕ್ತಿಯೂ ದೊರೆಯುತ್ತದೆ ಎಂದು ಹೇಳಿದರು.

ಇಷ್ಟಲಿಂಗ ಪೂಜೆ ಅಂತರಂಗವನ್ನು ಶುದ್ಧೀಕರಿಸುವ ಸಾಧನವಾಗಿದ್ದು, ಜೀವನದಲ್ಲಿ ಶಿಸ್ತು, ಸದಾಚಾರ, ಸಂಯಮ ಹಾಗೂ ಸಾತ್ವಿಕ ಚಿಂತನೆಯನ್ನು ಬೆಳೆಸುತ್ತದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಕ್ಕಳಿಗೂ ಧಾರ್ಮಿಕ ಹಾಗೂ ಸಂಸ್ಕಾರದ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಕೇವಲ ವಿದ್ಯಾಭ್ಯಾಸ ಮತ್ತು ಭೌತಿಕ ಯಶಸ್ಸಿನತ್ತ ಕೊಂಡೊಯ್ಯದೆ, ಪೂಜೆ, ಪ್ರಾರ್ಥನೆ, ದಾನ, ಧರ್ಮ ಹಾಗೂ ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನೂ ಬೆಳೆಸಬೇಕು. ಉತ್ತಮ ಸಂಸ್ಕಾರ ಹೊಂದಿದ ಮಕ್ಕಳು ಭವಿಷ್ಯದಲ್ಲಿ ಸಮಾಜದ ಆಸ್ತಿಯಾಗುತ್ತಾರೆ ಎಂದು ಶ್ರೀಗಳು ಹೇಳಿದರು.

ಭೌತಿಕ ಜೀವನದಲ್ಲಿ ಎಷ್ಟೇ ಸಂಪತ್ತು ಗಳಿಸಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಬದುಕು ಅಪೂರ್ಣವಾಗುತ್ತದೆ. ಆದ್ದರಿಂದ ಹೊರಗಿನ ಸಂಪತ್ತಿನೊಂದಿಗೆ ಅಂತರಂಗದ ಸಂಪತ್ತನ್ನೂ ಗಳಿಸಿಕೊಳ್ಳಬೇಕು. ಭಕ್ತಿ, ಧರ್ಮ ಹಾಗೂ ಸತ್ಕಾರ್ಯಗಳ ಮೂಲಕ ಅಂತರಂಗದ ಸಂಪತ್ತನ್ನು ವೃದ್ಧಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಶ್ರೀ ಚನ್ನವೀರ ಮಹಾಸ್ವಾಮಿಗಳು ಆಶೀರ್ವದಿಸಿದರು.

ಸೋಮೇಶ್ವರ ಭಕ್ತರ ಟ್ರಸ್ಟ್ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಶಂಕರ ಬಾಳಿಕಾಯಿ, ದೇವಣ್ಣ ತೋಟದ, ಎಸ್.ಎಫ್. ಆದಿ, ಬಸವರಾಜ ಮೆಣಸಿನಕಾಯಿ, ವಿರೂಪಾಕ್ಷ ಆದಿ, ಬಸವರಾಜ ಅಣ್ಣಿಗೇರಿ, ಜಿ.ಎಸ್. ಗುಡಗೇರಿ, ಕಾಶಪ್ಪ ಮುಳಗುಂದ, ಮಯೂರಗೌಡ ಪಾಟೀಲ, ಸುರೇಶ ಚೌಕನವರ, ಶಂಕರಪ್ಪ ಆದಿ ಸೇರಿದಂತೆ ಭಕ್ತರು ಶ್ರಾವಣ ಮಾಸದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಪೂಜೆ ಸಲ್ಲಿಸಿದರು.