Home Blog Page 7

ವೈದ್ಯ ವೃತ್ತಿ ಅತ್ಯಂತ ಪವಿತ್ರ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ವೈದ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ಸೇರಿ ವೈದ್ಯರನ್ನು ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ವೈದ್ಯ ವೃತ್ತಿ ಅತ್ಯಂತ ಪವಿತ್ರವಾಗಿದೆ. ವೈದ್ಯರು ತಮ್ಮ ಬದುಕಿನ ಜಂಜಾಟಗಳು, ಒತ್ತಡ, ಸ್ವಾರ್ಥ, ಕೌಟುಂಬಿಕ ಬದುಕಿನ ಕಷ್ಟ-ಸುಖಗಳನ್ನು ಬದಿಗೊತ್ತಿ ಜೀವ ಉಳಿಸುವ ಕಾರ್ಯ ಮಾಡುತ್ತಾರೆ. ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರ ತಾಳ್ಮೆ, ಸಹನೆ, ಕಾರ್ಯಕ್ಷಮತೆ ಪ್ರಶಂಸನೀಯ. ಸಮಾಜ ವೈದ್ಯರನ್ನು ಗೌರವದಿಂದ ಕಾಣಬೇಕು ಎಂದರು.

ವೈದ್ಯರಾದ ಡಾ. ಉಮೇಶ ಕೆಳಮನೆ, ಡಾ. ಪ್ರವೀಣ ಸಜ್ಜನರ, ಡಾ. ಬಿಸ್ಮಿಲ್ಲಾ ಗೌರವ ಸ್ವೀಕರಿಸಿದರು. ತಿಪ್ಪಣ್ಣ ಸಂಶಿ, ಕಲ್ಲಪ್ಪ ಗಂಗಣ್ಣವರ, ಹನಮಂತ ಹರಿಜನ, ಜಗದೀಶ ಹುಲಗೆಮ್ಮನವರ, ಭರಮಗೌಡ ರೊಟ್ಟಿಗವಾಡ, ದಾದಾಪೀರ ಮುಚ್ಚಾಲೆ, ಗಿರೀಶ ಕಲ್ಮಠ, ಕಾರ್ತಿಕ ದೊಡ್ಡಮನಿ, ಮಾಲತೇಶ ಗುಡಸಲಮನಿ, ಫಕ್ಕೀರೇಶ ಭಜಕ್ಕನವರ, ನೀಲಪ್ಪ ಬಸಾಪುರ, ಗುಡ್ಡಪ್ಪ ಮತ್ತೂರ ಇದ್ದರು.

ಜುಲೈ 4ರಂದು ನಾಟಕ ಪ್ರದರ್ಶನ

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತೋಂಟದಾರ್ಯ ಕಲಾರಂಗದ ಸಹಯೋಗದಲ್ಲಿ ಜುಲೈ 4ರಂದು ಸಂಜೆ 6.30 ಗಂಟೆಗೆ ಗದುಗಿನ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಧಾತ್ರಿ ರಂಗಸಂಸ್ಥೆ ಸಿರಿಗೇರಿ ಇವರು `ಸೋರುತಿಹುದು ಸಂಬಂಧ’ ಎಂಬ ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಆಧುನಿಕತೆಯ ಭರದಲ್ಲಿ, ಹೆಣ್ಣು, ಹೊನ್ನು, ಮಣ್ಣಿನ ವ್ಯಾಮೋಹಗಳಿಗೆ ಒಳಗಾಗುವ ಮನುಷ್ಯ, ತನ್ನೊಳಗಿನ ಮನುಷ್ಯತ್ವವನ್ನು ಮರೆತು, ಸಂಬಂಧಗಳಿಗೆ ಸ್ಪಂದಿಸದೆ ತನ್ನ ಯಾಂತ್ರಿಕ ಬದುಕನ್ನು ಮುಂದುವರೆಸುತ್ತಿದ್ದಾನೆ. ಅಂತಹ ಮನುಷ್ಯನ ಸಂಬಂಧಗಳ ಕೊರತೆ ಮತ್ತು ನಿರೀಕ್ಷೆಗಳನ್ನು ನಾಟಕ ಎಳೆ ಎಳೆಯಾಗಿ ಬಿಚ್ಚಿಡುತ್ತದೆ.

ರಂಗಾಸಕ್ತರು, ಪರಿಷತ್ತಿನ ಸದಸ್ಯರು, ಕನ್ನಡಾಭಿಮಾನಿಗಳು ಆಗಮಿಸಬೇಕೆಂದು ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ, ದತ್ತಪ್ರಸನ್ನ ಪಾಟೀಲ ಹಾಗೂ ಡಿ.ಎಸ್. ಬಾಪುರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿ.ಪ ಸದಸ್ಯ ರವಿಕುಮಾರ್ ವಿರುದ್ಧ ಕ್ರಮಕ್ಕೆ ಒತ್ತಾಯ

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಶಾಲಿನಿ ರಜನೀಶ್ ಅವರು ಒಬ್ಬ ಐಎಎಸ್ ಅಧಿಕಾರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಂಬ ಅರಿವಿಲ್ಲದೇ ಎನ್. ರವಿಕುಮಾರ್ ಅವರು ನಾಲಿಗೆ ಹರಿಬಿಟ್ಟು ಅವರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಅವರ ಗೌರವಕ್ಕೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ರವಿಕುಮಾರ್ ಅವರ ಹೇಳಿಕೆ ವಿರುದ್ಧ ದೂರು ದಾಖಲಿಸಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ, ಉಪಾಧ್ಯಕ್ಷ ಎಚ್. ಕೊಟ್ರೇಶ್, ಸದಸ್ಯರಾದ ಲಾಟಿ ದಾದಪೀರ, ಜಾಕೀರ್ ಹುಸೇನ್, ಉದ್ದಾರ ಗಣೇಶ, ಮುಖಂಡರಾದ ಬಸವರಾಜ ಸಂಗಪ್ಪನವರ್, ಬಂಡ್ರಿ ಗೋಣಿಬಸಪ್ಪ, ಇಸ್ಮಾಯಿಲ್ ಎಲಿಗಾರ, ಎಚ್.ವಸಂತಪ್ಪ, ಟಿಎಚ್‌ಎಂ ಮಂಜುನಾಥ, ಈಶಪ್ಪ, ಬಿ. ವಾಗೀಶ, ಗುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಮತ್ತೂರು ಬಸವರಾಜ, ಎಚ್.ಟಿ. ಹನುಮಂತ, ಅಲಗಿಲವಾಡದ ವಿಶ್ವನಾಥ, ದೇವೇಂದ್ರಗೌಡ, ಮಾರಪ್ಪ, ಕೊಟೇಪ್ಪ, ಎಲ್. ಮಂಜ್ಯಾನಾಯ್ಕ್, ಜಯಲಕ್ಷ್ಮೀ, ಸುಮಾ ಜಗದೀಶ ಸೇರಿದಂತೆ ಇತರರು ಇದ್ದರು.

ಪ್ರಕೃತಿಯನ್ನು ಉಳಿಸಿ ಭವಿಷ್ಯವನ್ನು ಬೆಳಗಿಸಿ

ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಅದನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರಕೃತಿಯ ಮಡಿಲು ತಾಯಿಯ ಮಡಿಲಿಗೆ ಸಮಾನ. ಈ ತಾಯಿಯ ಮಡಿಲನ್ನು ತಂಪಾಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮಲ್ಲಿಕಾರ್ಜುನ್ ಪೂಜಾರ ಹೇಳಿದರು.

ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಹರ್ತಿಯಲ್ಲಿ ಪರಿಸರ ದಿನಾಚರಣೆ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಬಿ. ಕಣಗಿನಹಾಳ ಮಾತನಾಡಿ, ಪ್ರಕೃತಿ ನಮಗೆ ಏನು ಕೊಟ್ಟಿತು ಎಂಬುದಕ್ಕಿಂತ ಅದಕ್ಕೆ ನಾವು ಏನು ಕೊಟ್ಟೆವು ಎಂಬುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಅರ್ಥೈಸಿದರು.

ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆ ಬಿಸಿ ಟ್ರಸ್ಟ್ನ ಯೋಜನಾಧಿಕಾರಿ ಉಮಾ ಎನ್.ಜಿ ಪಾಲ್ಗೊಂಡಿದ್ದರು. ಕಿರಣ್ ಮಹೇಂದ್ರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಿಕ್ಷಣಾರ್ಥಿ ರಾಜೇಶ್ವರಿ ಜಕ್ಕನಗೌಡ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಅಶ್ವಿನಿ ದೇಸಾಯಿ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ವಿರೇಶ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮನೆ-ಮನ ಪರಿವರ್ತನೆಗೆ ಪರಿಶುದ್ಧತೆ ಅಗತ್ಯ

ವಿಜಯಸಾಕ್ಷಿ ಸುದ್ದಿ, ಗದಗ: ಮನೆ-ಮನಗಳ ಪರಿವರ್ತನೆ ಮತ್ತು ಪರಿಶುದ್ಧತೆಗೆ ಗ್ರಂಥ, ಹಣತೆ ಮತ್ತು ಪೊರಕೆ ಅವಶ್ಯ ಎಂದು ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನದಲ್ಲಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.

ಪ್ರತಿಯೊಬ್ಬರ ಜೀವನದಲ್ಲಿ ಗ್ರಂಥಗಳು ಮಾರ್ಗದರ್ಶಿಗಳಾಗಿವೆ. ಜ್ಞಾನದ ದಿಗಂತವನ್ನು ಹೆಚ್ಚಿಸುವ ಮೂಲಕ ಸನ್ಮಾರ್ಗದಲ್ಲಿ ಮುನ್ನಡೆದು ಜೀವನ್ಮುಕ್ತಿಗೆ ಸಾಧನವಾಗಿವೆ. ಹಣತೆ ಚಿಕ್ಕ ಗುಡಿಸಲಿನಲ್ಲಿಯೂ ತನ್ನದೇ ಆದ ಪ್ರಕಾಶವನ್ನು ಬೀರಿ, ಮನೆ-ಮನದ ಅಂಧಕಾರವನ್ನು ತೊಡೆದು ಹಾಕಿ ಬದುಕಿನ ಬೆಳಕನ್ನು ಅಭಿವ್ಯಕ್ತಿಗೊಳಿಸುವ ಸಂಕೇತವಾಗಿದೆ. ದೀಪಾವಳಿ, ದೀಪಾರಾಧನೆ ಜ್ಞಾನ ಮತ್ತು ಬೆಳಕಿನ ಪ್ರತೀಕವಾಗಿವೆ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದ ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು, ಸಂಸ್ಕೃತ ಮತ್ತು ಕನ್ನಡ ಭಾಷೆ ಅತ್ಯಂತ ಪ್ರಭಾವಶಾಲಿ ಮತ್ತು ಗಟ್ಟಿತನವುಳ್ಳ ಭಾಷೆಯಾಗಿದೆ ಎಂಬುದನ್ನು ಇದುವರೆಗೆ ಪ್ರಕಟಗೊಂಡಿರುವ ಮಹಾನ್ ಗ್ರಂಥಗಳೇ ಸಾಬೀತುಪಡಿಸಿವೆ ಎಂದರು.

ಸಮಾರಂಭದಲ್ಲಿ ಜೀಗೇರಿ ಮತ್ತು ನರಸಾಪೂರ ಮಠದ ಸ್ವಾಮೀಜಿ ಉಪಸ್ಥಿತರಿದ್ದರು. ಗಣ್ಯರಾದ ಆರ್.ಎ. ರಬ್ಬನಗೌಡ್ರ, ವ್ಹಿ.ಸಿ. ಧನ್ನೂರಹಿರೇಮಠ, ಎಸ್.ಎಚ್. ಶಿವನಗೌಡ್ರ, ಚಂದ್ರು ಹಿರಯಾಳಮಠ, ಜಯದೇವ ಮೆಣಸಗಿ, ಶಂಭು ಪಟ್ಟದಕಲ್ಲ, ರಾಜಶೇಖರ ವಸ್ತçದ, ಡಾ. ಶಿವಾನಂದಯ್ಯ ಹಿರೇಮಠ, ಮೃತ್ಯುಂಜಯ ಸಂಕೇಶ್ವರ, ಕಿರಣ ಭೂಮಾ, ಆರ್.ಕೆ. ಮಠದ, ಬಸವರಾಜ ಗಣಾಚಾರಿ ಅವರನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.

ಸುವರ್ಣಾ ಹೊಸಂಗಡಿ ಪ್ರಾರ್ಥಿಸಿದರು. ಶಿವಾನಂದಯ್ಯ ಹಿರೇಮಠ ಸ್ವಾಗತಿಸಿದರು. ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.

ನಗರಸಭೆಯಾದ ಹರಪನಹಳ್ಳಿ: ಸಂಭ್ರಮಾಚರಣೆ

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ನಗರಸಭೆಯಾಗಬೇಕೆಂಬ ಬಹುದಿನಗಳ ಕನಸು ನನಸಾಗಿದ್ದು, ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಸಂತಸ ವ್ಯಕ್ತಪಡಿಸಿದರು.

ಹರಪನಹಳ್ಳಿ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಬುಧವಾರ ಸಂಜೆ ಪುರಸಭೆಯಿಂದ ನಗರಸಭೆಯಾಗಿ ಮುಂಬಡ್ತಿ ಪಡೆದಿದ್ದಕ್ಕಾಗಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.

ಯಾವುದೇ ಕೆಲಸ-ಕಾರ್ಯಗಳು ಸಿದ್ಧಿಯಾಗಲು ನಿರಂತರ ಪರಿಶ್ರಮ ಬೇಕು. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹಾಗೂ ದಾವಣಗೆರೆ ಸಂಸದರ ಇಚ್ಛಾಶಕ್ತಿಯಿಂದ ಸರ್ಕಾರದ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರ ಪರಿಣಾಮ ಇಂದು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಇದರ ವ್ಯಾಪ್ತಿಗೆ ಒಳಪಡಬಹುದಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಮಾತನಾಡಿ, ಹರಪನಹಳ್ಳಿ ಪುರಸಭೆಯ ಸರಹದ್ದನ್ನೇ ನಗರಸಭೆಯನ್ನಾಗಿ ಮುಂಬಡ್ತಿ ಹೊಂದಿಸಲಾಗಿದ್ದು, ನಗರಸಭೆಯ ವ್ಯಾಪ್ತಿಗೆ ಬರಲು ಇಚ್ಛಿಸುವ ಗ್ರಾಮಗಳು ಕೂಡ ನಗರಸಭೆಗೆ ಸಿಗುವ ಮೂಲಭೂತ ಸೌಕರ್ಯಗಳನ್ನು ಪಡೆಯಬಹುದಾಗಿದೆ ಎಂದರು.

ನಗರದ ಆಸ್ತಿ ತೆರಿಗೆ, ಖಾತಾ ವರ್ಗಾವಣೆ ಶುಲ್ಕ, ನೀರಿನ ತೆರಿಗೆ, ಘನತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕಗಳು ಹೆಚ್ಚಳವಾಗಲಿದೆ. ಇದರಿಂದ ನಗರದ ಅಭಿವೃದ್ಧಿಗೆ ಹಣ ಉತ್ತಮವಾಗಿ ಕ್ರೋಢೀಕರಣಗೊಳ್ಳಲಿದೆ ಎಂದರು.

ಪುರಸಭೆ ಅಧ್ಯಕ್ಷೆ ಫಾತೀಮಾಭಿ, ಉಪಾಧ್ಯಕ್ಷ ಕೊಟ್ರೇಶ್, ಪುರಸಭೆ ಮಾಜಿ ಅಧ್ಯಕ್ಷ ಹರಾಳು ಅಶೋಕ್, ಪುರಸಭೆ ಸದಸ್ಯರಾದ ಇಜಂತ್ಕರ್ ಮಂಜುನಾಥ, ಕಿರಣ್ ಶಾನಭಾಗ, ಜಾವೇದ್, ಜಾಕೀರ್, ರೊಕ್ಕಪ್ಪ, ಸುಮಾ ಜಗದೀಶ್, ನಾಮನಿರ್ದೇಶನ ಸದಸ್ಯರು ವಸಂತಪ್ಪ, ಗುಡಿ ನಾಗರಾಜ, ಸುಮಾ ಜಗದೀಶ್, ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಬಸವರಾಜ್ ಸಂಗಪ್ಪನವರ, ಇಸ್ಮಾಯಿಲ್ ಎಲಿಗಾರ, ಡಂಕಿ ವಾಸೀಮ್, ಶಶಿಕುಮಾರ್ ನಾಯ್ಕ, ಎನ್. ಶಂಕರ್, ಓ. ಮಹಾಂತೇಶ್, ವಾಗೀಶ್ ಮುಂತಾದವರಿದ್ದರು.

ಗುಣಮಟ್ಟದ ಕಲಿಕೆಗೆ ನೆರವಿನ ಹಸ್ತ

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಬ್ಯಾಂಕ್ ಕೇವಲ ಆರ್ಥಿಕ ವ್ಯವಹಾರಗಳನ್ನಷ್ಟೇ ಮಾಡದೇ ಸಮಾಜಮುಖಿ ಕಾರ್ಯ ಹಾಗೂ ವಿದ್ಯಾರ್ಥಿಗಳ ಹಿತ ಕಾಯುವಲ್ಲಿ ಒಂದು ಹೆಜ್ಜೆ ಮುಂದಿದೆ ಎಂದು ಗದಗ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ವೈಭವ ಅಗರವಾಲ ಹೇಳಿದರು.

ಅವರು ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಗೆ ನಾಲ್ಕು ಕಂಪ್ಯೂಟರ್‌ಗಳನ್ನು ಕೊಡುಗೆ ನೀಡಿ ಮಾತನಾಡಿ, ಈಗಾಗಲೇ ಈ ಶಾಲೆಗೆ ಕಳೆದ ಸಾಲಿನಲ್ಲಿ ಮೂರು ಜನ ವಿದ್ಯಾರ್ಥಿನಿಯರಿಗೆ ಶಿಷ್ಯವೇತನವನ್ನು ನೀಡಲಾಗಿದೆ. ಈ ಬಾರಿ ನಾಲ್ಕು ಕಂಪ್ಯೂಟರ್‌ಗಳನ್ನು ನೀಡುವ ಮೂಲಕ ಗುಣಮಟ್ಟದ ಕಲಿಕೆಗೆ ಉಪಯುಕ್ತವಾಗಲು ನೆರವಿನ ಹಸ್ತ ಚಾಚಿದೆ ಎಂದರು.

ಇನ್ನೋರ್ವ ಶಾಖಾ ವ್ಯವಸ್ಥಾಪಕ ಸುಬ್ಬರಥ ಮಾತನಾಡಿ, ಪ್ರತಿವರ್ಷ ಸರ್ಕಾರಿ ಶಾಲೆಗಳಿಗೆ ಗ್ರಾಮೀಣ ಬ್ಯಾಂಕ್ ಹಲವಾರು ರೀತಿಯ ನೆರವು ನೀಡುವ ಮೂಲಕ ಅಲ್ಲಿನ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಮಾಡುತ್ತಾ ಬಂದಿದೆ. 500ಕ್ಕೂ ಹೆಚ್ಚು ಮಕ್ಕಳು ಓದುತ್ತಿರುವ ಈ ಶಾಲೆಗೆ ಇನ್ನೂ ಹಲವಾರು ಮೂಲಭೂತ ಸೌಕರ್ಯಗಳು ಬೇಕಾಗಿದ್ದು, ಮುಂಬರುವ ದಿನಗಳಲ್ಲಿ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ದತ್ತು ಉಸ್ತುವಾರಿ ಡಾ. ಬಸವರಾಜ ಧಾರವಾಡ, ಡಾ. ವಿಜಯಕುಮಾರ ಬ್ಯಾಳಿ, ಶಂಕ್ರಮ್ಮ ಆರ್.ಹಣಮಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಸುಮಂಗಲ ಎಂ.ಪತ್ತಾರ್, ಶಾರದಾ ಬಾಣದ, ಎಂ.ಐ. ಶಿವನಗೌಡ್ರು, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವಂಡಿ, ಮಂಜುಳಾ ಟಿ, ಶಶಿಕಲಾ ಬಿ.ಗುಳೇದವರ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್, ಶಾರದಾ ಬಾಣದ ಮುಂತಾದವರು ಉಪಸ್ಥಿತರಿದ್ದರು. ಸಂಜೀವಿನಿ ಕೂಲಗುಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮೀ ಅಣ್ಣಿಗೇರಿ ಮಾತನಾಡಿ, ಗ್ರಾಮೀಣ ಬ್ಯಾಂಕ್ ಕಳೆದ ಎರಡು ವರ್ಷದಿಂದ ನಮ್ಮ ಶಾಲೆಗೆ ನೆರವನ್ನು ನೀಡುತ್ತಾ ಬಂದಿದೆ. ಈ ಬಾರಿ ನಾಲ್ಕು ಕಂಪ್ಯೂಟರ್ ನೀಡುವ ಮೂಲಕ ನಮ್ಮ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಸಿದೆ ಎಂದರು.

ಭಕ್ತರನ್ನು ಸೆಳೆಯುತ್ತಿರುವ ಮಾರನಬಸರಿ ಮೊಹರಂ

ವಿಜಯಸಾಕ್ಷಿ ಸುದ್ದಿ, ರೋಣ: ಮೊಹರಂ ಹಬ್ಬದಲ್ಲಿ ಮಹತ್ವದ ದಿನಗಳೆಂದು ಪರಿಗಣಿಸುವ ಸಂದಲ್ ರಾತ್ರಿ, ಕತ್ತಲ್ ರಾತ್ರಿ ಹಾಗೂ ದೇವರು ಹೊಳೆಗೆ ಹೋಗುವ ದಿನಗಳಂದು ಮಾರನಬಸರಿ ಗ್ರಾಮಕ್ಕೆ ಸಾವಿರಾರು ಭಕ್ತರು ಆಗಮಿಸಿ ಅಲೈದೇವರುಗಳ ದರ್ಶನ ಪಡೆಯುತ್ತಾರೆ.

ಗದಗ ಜಿಲ್ಲೆಯಲ್ಲಿ ಅತ್ಯಂತ ಸಂಭ್ರಮ ಮತ್ತು ಭಕ್ತಿಯಿಂದ ನಡೆಯುವ ಹಬ್ಬ ಮಾರನಬಸರಿ ಗ್ರಾಮದ ಮೊಹರಂ ಆಗಿದೆ. ಧರ್ಮ-ಜಾತಿಗಳ ಜಂಜಾಟಗಳಿಲ್ಲದೆ ಎಲ್ಲರೂ ಸೇರಿ ಆಚರಿಸುವ ಹಬ್ಬ ಇದಾಗಿದ್ದು, ಗ್ರಾಮದ ಮೊಹರಂ ಹಬ್ಬವನ್ನು ವೀಕ್ಷಿಸಲು ಜಿಲ್ಲೆಯ ಅನೇಕ ಗ್ರಾಮಗಳಿಂದ ಸಾವಿರಾರು ಭಕ್ತರು ಗ್ರಾಮಕ್ಕೆ ಆಗಮಿಸುತ್ತಾರೆ. ಹಬ್ಬದ ನಿಮಿತ್ತ ಗ್ರಾಮ ಬಗೆ ಬಗೆಯಲ್ಲಿ ಅಲಂಕೃತಗೊಂಡ ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.

ಜುಲೈ 4ರಂದು ಸಂಧಲ್ ರಾತ್ರಿಯಿದ್ದು, ಈ ದಿನದಂದು ದೊಡ್ಡ ಮಸೂತಿಯ ದೊಡ್ಡ ದೇವರ ಸವಾರಿ ಮಧ್ಯರಾತ್ರಿ ಹೊರಡುತ್ತದೆ. ದೊಡ್ಡ ದೇವರ ಸವಾರಿ ವೀಕ್ಷಿಸಲು ಸಾವಿರಾರು ಭಕ್ತರು ನೆರೆಯುತ್ತಾರೆ. ಜುಲೈ 5ರಂದು ಕತ್ತಲ್ ರಾತ್ರಿ ದಿನದಂದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಎರಡು ಮಸೂತಿಗಳ ಎಲ್ಲ ದೇವರುಗಳ ಸವಾರಿ ನಡೆಯುತ್ತದೆ. ಜುಲೈ 6ರಂದು ಅಲೈ ದೇವರುಗಳು ಹೊಳೆಗೆ ಹೊಗುವ ದಿನವಾಗಿದ್ದು, ಮದ್ಯಾಹ್ನ 3 ಗಂಟೆಯ ಸುಮಾರಿಗೆ ದೇವರುಗಳ ಸವಾರಿ ನಡೆಯುತ್ತದೆ.

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ರಿಲೀಸ್

ರಾಕಿಂಗ್‌ ಸ್ಟಾರ್‌ ಯಶ್ ನಟಿಸಿ ನಿರ್ಮಿಸುತ್ತಿರುವ ಬಹುನಿರೀಕ್ಷಿತ ರಾಮಾಯಣ ಚಿತ್ರದ ಫಸ್ಟ್‌ ಟೈಟಲ್‌ ಟೀಸರ್‌ ರಿಲೀಸ್‌ ಆಗಿದೆ. ರಾಮಾಯಣ ಸಿನಿಮಾದ ಗ್ಲಿಪ್ಸ್‌ ಅನ್ನು ಗ್ಲಿಂಪ್ಸ್ ಅನ್ನು ಬೆಂಗಳೂರಿನ ನೆಕ್ಸಸ್ ಮಾಲ್ ಸೇರಿದಂತೆ ವಿವಿಧ ನಗರಗಳಲ್ಲಿ ಬೇರೆ ಬೇರೆ ಐಮ್ಯಾಕ್ಸ್ ಪರದೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ರಾಮಾಯಣ ಸಿನಿಮಾದ ಫಸ್ಟ್‌ ಟೈಟಲ್‌ ಟೀಸರ್‌ ಅನ್ನು ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹತ್ತು ವರ್ಷಗಳ ಆಕಾಂಕ್ಷೆ. ಸಾರ್ವಕಾಲಿಕ ಶ್ರೇಷ್ಠ ಮಹಾಕಾವ್ಯವನ್ನು ಜಗತ್ತಿಗೆ ತರುವ ನಿರಂತರ ದೃಢನಿಶ್ಚಯ. ರಾಮಾಯಣವನ್ನು ಅತ್ಯಂತ ಗೌರವದಿಂದ ಪ್ರಸ್ತುತಪಡಿಸಲು ವಿಶ್ವದ ಕೆಲವು ಅತ್ಯುತ್ತಮ ವ್ಯಕ್ತಿಗಳು ಒಟ್ಟಾಗಿ ಶ್ರಮಿಸಿದ್ದಾರೆ. ಅದರ ಫಲಿತಾಂಶ ಇದು ಎಂದು ಯಶ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆರಂಭಕ್ಕೆ ಸ್ವಾಗತ. ರಾಮ v/s ರಾವಣನ ಅಮರ ಕಥೆಯನ್ನು ಆಚರಿಸೋಣ. ನಮ್ಮ ಸತ್ಯ. ನಮ್ಮ ಇತಿಹಾಸ ಎಂದು ಯಶ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಬ್ರಹ್ಮ, ವಿಷ್ಣು, ಮಹೇಶ್ವರ ದೃಶ್ಯಗಳಿಂದ ಆರಂಭವಾಗುವ ಮೂರು ನಿಮಿಷದ ಟೀಸರ್ ಮೊದಲಿಂದ ಕೊನೆಯ ವರೆಗೂ ಅದ್ಧೂರಿತನದಿಂದ ಕೂಡಿದೆ. ಟೀಸರ್​​ನಲ್ಲಿ ಸಿನಿಮಾದಲ್ಲಿ ನಟಿಸಿರುವವರ ಹೆಸರು, ತಂತ್ರಜ್ಞರ ಹೆಸರುಗಳನ್ನು ತೋರಿಸಲಾಗಿದೆ.  ಸಿನಿಮಾಕ್ಕೆ ‘ರಾಮಾಯಣ’ ಎಂದು ಹೆಸರಿಡಲಾಗಿದ್ದು, ‘ನಮ್ಮ ಸತ್ಯ, ನಮ್ಮ ಇತಿಹಾಸ’ ಎಂಬ ಅಡಿಬರಹ ನೀಡಲಾಗಿದೆ.

ರಾಮಾಯಣ’ ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದಾರೆ. ಸುಮಾರು 800 ಕೋಟಿ ರೂಪಾಯಿ ಬಜೆಟ್‌ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಮೊದಲ ಭಾಗ 2026ರ ದೀಪಾವಳಿಗೆ ಹಾಗೂ 2027ರ ದೀಪಾವಳಿಗೆ ಸಿನಿಮಾದ ಎರಡನೇ ಭಾಗ ಬಿಡುಗಡೆ ಆಗಲಿದೆ.

ಬೆಳಗಾವಿ| ಅನುಮಾನಾಸ್ಪದ ರೀತಿಯಲ್ಲಿ ಭಿಕ್ಷುಕನ ಶವ ಪತ್ತೆ!

ಬೆಳಗಾವಿ:- ಅನುಮಾನಾಸ್ಪದ ರೀತಿಯಲ್ಲಿ ಭಿಕ್ಷುಕನ ಶವ ಪತ್ತೆಯಾಗಿರುವ ಘಟನೆ ಬೆಳಗಾವಿ ಮಹಾನಗರದ ಕೊಲ್ಲಾಪುರ ವೃತ್ತದ ಬಳಿ ಜರುಗಿದೆ.

ಕಳೆದ ನಾಲ್ಕು -ಐದು ದಿನಗಳ ಹಿಂದೆಯೇ ಪಾಳು ಬಿದ್ದ ಕಟ್ಟಡದಲ್ಲಿ ಮೃತಪಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!