Home Blog Page 7

ಶಿವಮೊಗ್ಗ| ಖಾಸಗಿ ಬಸ್‌ನಲ್ಲಿ ಬೆಂಕಿ ಅವಘಡ; ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ!

0

ಶಿವಮೊಗ್ಗ/ಸಾಗರ: ಸಿಗಂದೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಘಟನೆ ಹುಲಿದೇವರಬನದ ಬಳಿ ನಡೆದಿದೆ.

ಆದರೆ ಸ್ಥಳೀಯರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಸಿಗಂದೂರು ಕ್ಷೇತ್ರದಿಂದ ವಾಪಸ್ ಆಗುತ್ತಿದ್ದ ಬಸ್‌ ಹುಲಿದೇವರಬನದ ಸಮೀಪ ಬರುತ್ತಿದ್ದಾಗ, ಏಕಾಏಕಿ ಬಸ್‌ನೊಳಗಿನಿಂದ ಬೆಂಕಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಬಸ್‌ನ್ನು ತಡೆದು, ಚಾಲಕ ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ, ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ಗ್ರಾಮಸ್ಥರು ಮತ್ತು ಬಸ್ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಸಾರ್ವಜನಿಕರು ಹಾಗೂ ಪ್ರಯಾಣಿಕರು ಶ್ಲಾಘಿಸಿದ್ದಾರೆ.

ನೆಲಮಂಗಲ ಬಳಿ ಚಾಕು, ಮಾರಕಾಸ್ತ್ರಗಳಿಂದ ರೌಡಿಶೀಟರ್‌ ಬರ್ಬರ ಹತ್ಯೆ!

0

ನೆಲಮಂಗಲ:- ನೆಲಮಂಗಲ ಬಳಿಯ ಬಾಲಾಜಿ ಫಾರಂ ಹೌಸ್‌ನಲ್ಲಿ ಚಾಕು ಹಾಗೂ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಬೆಂಗಳೂರಿನ ಆಟೋ ನಾಗ್ (32) ಕೊಲೆಯಾದ ವ್ಯಕ್ತಿಯಾಗಿದ್ದು, ಈತನ ವಿರುದ್ಧ ಲಗ್ಗೆರೆ ಹಾಗೂ ಹುಲಿಯೂರು ದುರ್ಗ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟ್ ಓಪನ್ ಆಗಿತ್ತು. ಬಾಲಾಜಿ ಫಾರಂ ಹೌಸ್‌ನ ರೂಮ್‌ನಲ್ಲೇ ಈ ಭೀಕರ ಕೊಲೆ ನಡೆದಿದ್ದು, ಹತ್ಯೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಪ್ರಕರಣದ ಮಾಹಿತಿ ತಿಳಿದ ತಕ್ಷಣ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಬೆಳಗಾವಿ| ಕಂಟೇನರ್ ಲಾರಿ ಡಿಕ್ಕಿ ಹೊಡೆದು ದಂಪತಿ ದಾರುಣ ಸಾವು!

0

ಬೆಳಗಾವಿ:- ಬೆಳಗಾವಿ ನಿಪ್ಪಾಣಿ ತಾಲೂಕಿನ ಕೂಗನೋಳ್ಳಿ ಬಳಿ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿ ಮೃತಪಟ್ಟ ಘಟನೆ ಜರುಗಿದೆ.

ಜಿಗರ್ ನಾಕ್ರಾನಿ ಮತ್ತು ಹೇತಿಕಾ ನಾಕ್ರಾನಿ ಮೃತಪಟ್ಟ ದುರ್ದೈವಿಗಳು. ಇವರು ಕೊಲ್ಲಾಪುರ ಮೂಲದವರು ಎನ್ನಲಾಗಿದೆ. ಹುಬ್ಬಳ್ಳಿಯಿಂದ ಕೊಲ್ಲಾಪುರಕ್ಕೆ ತೆರಳುವ ವೇಳೆ ಕುಗನೋಳ್ಳಿ ಬಳಿ ಕಾರು ನಿಲ್ಲಿಸಲಾಗಿತ್ತು.

ಈ ವೇಳೆ ರಭಸದಿಂದ ಬಂದ ಕಂಟೇನರ್ ವಾಹನ ಡಿಕ್ಕಿ ಹೊಡೆದಿದೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿಪ್ಪಾಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಳಿಮಾವು ಪೊಲೀಸರಿಂದ ಬೃಹತ್ ಸೈಬರ್ ವಂಚನೆ ಜಾಲ ಪತ್ತೆ: ಪ್ರಕರಣದ ತನಿಖೆಗೆ ED ಎಂಟ್ರಿ

0

ಬೆಂಗಳೂರು: ಹುಳಿಮಾವು ಪೊಲೀಸರು ಬೃಹತ್ ಸೈಬರ್ ವಂಚನೆ ಜಾಲವನ್ನು ಪತ್ತೆಹಚ್ಚಿದ್ದು, ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ (ಇಡಿ) ಮುಂದಾಗಿದೆ. ಇನ್ವೆಸ್ಟ್‌ಮೆಂಟ್ ಹೆಸರಿನಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಗ್ಯಾಂಗ್ ದೆಹಲಿಯಿಂದ ಕಾರ್ಯಾಚರಣೆ ನಡೆಸುತ್ತಿದ್ದದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳು ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಲಿಂಕ್ ಕಳುಹಿಸಿ, ನಂತರ ನಿಯೋ ಸಿಸ್ಟಂ ಎಂಬ ಆಪ್ ಅನ್ನು ಇನ್‌ಸ್ಟಾಲ್ ಮಾಡಿಸುತ್ತಿದ್ದರು. ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಹೂಡಿಕೆ ಮಾಡಿಸಿ ವಂಚನೆ ನಡೆಸಲಾಗುತ್ತಿತ್ತು.

ಪ್ರಕರಣ ಸಂಬಂಧ ಹುಳಿಮಾವು ಪೊಲೀಸರು ಇದುವರೆಗೆ 12 ಜನರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಆರಂಭಿಕ ತನಿಖೆಯಲ್ಲಿ ಸುಮಾರು 4500 ಬ್ಯಾಂಕ್ ಖಾತೆಗಳ ಮೂಲಕ 75 ಕೋಟಿ ರೂ. ಹಣ ವಹಿವಾಟು ನಡೆದಿರುವುದು ಪತ್ತೆಯಾಗಿತ್ತು. ತನಿಖೆ ಮುಂದುವರಿದಂತೆ, ಸುಮಾರು 9 ಸಾವಿರಕ್ಕೂ ಹೆಚ್ಚು ಖಾತೆಗಳ ಮೂಲಕ ಅಕ್ರಮ ಹಣ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಸಾವಿರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಪ್ರೇಮ್ ನತನೇಜಾ ಎಂಬಾತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಲುಕ್ ಔಟ್ ನೋಟಿಸ್ ಹೊರಡಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಇಡೀ ಪ್ರಕರಣದ ಮಾಹಿತಿಯನ್ನು ಹುಳಿಮಾವು ಪೊಲೀಸರಿಂದ ಪಡೆದಿರುವ ಜಾರಿ ನಿರ್ದೇಶನಾಲಯ, ಸ್ವಾಮೀಜಿ ಡಾಟ್ ಕಾಮ್ ಎಂಬ ಗೇಮಿಂಗ್ ಆಪ್ ಮೂಲಕ ಅಕ್ರಮ ಹಣ ವಹಿವಾಟು ನಡೆಸಿರುವ ಹಿನ್ನಲೆಯಲ್ಲಿ PMLA ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.

ಇತ್ತ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಇಲಾಖೆ, ಸೈಬರ್ ಕಮಾಂಡ್‌ನಿಂದಲೂ ತನಿಖೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಸೈಬರ್ ವಂಚನೆ ಜಾಲದ ಸಂಪೂರ್ಣ ಬೇರು ಕತ್ತರಿಸಲು ಬಹುಮಟ್ಟದ ತನಿಖೆ ಮುಂದುವರಿದಿದೆ.

T20 World Cup 2026: ಪಾಕಿಸ್ತಾನ ತಂಡ ಘೋಷಣೆ – ನಾಯಕ ಬದಲಾವಣೆ, 7 ಆಟಗಾರರಿಗೆ ಗೇಟ್ ಪಾಸ್

0

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಬಾರಿ ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದ್ದು, ಇದರಲ್ಲಿ ಈಗಾಗಲೇ 15 ತಂಡಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ. ಇದೀಗ ಜನವರಿ 25ರಂದು ಪಾಕಿಸ್ತಾನವೂ ತನ್ನ ವಿಶ್ವಕಪ್ ತಂಡವನ್ನು ಅಧಿಕೃತವಾಗಿ ಘೋಷಿಸಿದ್ದು, ತಂಡ ಪ್ರಕಟಿಸಿದ 16ನೇ ದೇಶವಾಗಿದೆ.

ಕಳೆದ ಟಿ20 ವಿಶ್ವಕಪ್ ತಂಡದ ಹೋಲಿಕೆಯಲ್ಲಿ ಈ ಬಾರಿ ಪಾಕಿಸ್ತಾನ ತಂಡದಲ್ಲಿ 7 ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲೂ ಪ್ರಮುಖವಾಗಿ ನಾಯಕತ್ವದಲ್ಲೇ ಬದಲಾವಣೆ ಮಾಡಿರುವುದು ಕ್ರಿಕೆಟ್ ವಲಯದಲ್ಲಿ ಗಮನ ಸೆಳೆದಿದೆ.

ಕಳೆದ ಟಿ20 ವಿಶ್ವಕಪ್‌ನಲ್ಲಿ ಬಾಬರ್ ಆಝಂ ನಾಯಕತ್ವದ ಪಾಕಿಸ್ತಾನ ತಂಡವು ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಗುಂಪು ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಪಾಕಿಸ್ತಾನ, ಯುಎಸ್ಎಯಂತಹ comparatively ದುರ್ಬಲ ತಂಡದ ವಿರುದ್ಧವೂ ಸೋಲು ಕಂಡಿತ್ತು. ಈ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುವ ನಿರ್ಧಾರ ಕೈಗೊಂಡಿದೆ.

ಆಯ್ಕೆ ಸಮಿತಿಯು ಅನುಭವಿ ಬ್ಯಾಟ್ಸ್‌ಮನ್ ಬಾಬರ್ ಆಝಂ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದರೂ, ಹಿರಿಯ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ವೇಗದ ಬೌಲರ್ ಹ್ಯಾರಿಸ್ ರೌಫ್‌ಗೆ ತಂಡದಿಂದ ಗೇಟ್‌ಪಾಸ್ ನೀಡಲಾಗಿದೆ. ಹೊಸ ಆಟಗಾರರಿಗೆ ಅವಕಾಶ ಕಲ್ಪಿಸುವ ಮೂಲಕ ತಂಡವನ್ನು ಪುನರ್‌ರಚಿಸುವ ಪ್ರಯತ್ನವನ್ನು ಪಿಸಿಬಿ ಮಾಡಿದೆ.

7 ಆಟಗಾರರು ಔಟ್

ಅಜಮ್ ಖಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್ ಮತ್ತು ಮೊಹಮ್ಮದ್ ರಿಜ್ವಾನ್ ಈ ಬಾರಿಯ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ 7 ಆಟಗಾರರು ಕಳೆದ ವಿಶ್ವಕಪ್‌ನಲ್ಲಿ ತಂಡದ ಭಾಗವಾಗಿದ್ದರು.

7 ಆಟಗಾರರಿಗೆ ಮೊದಲ ಅವಕಾಶ

ಫಹೀಮ್ ಅಶ್ರಫ್, ಖ್ವಾಜಾ ಮೊಹಮ್ಮದ್ ನಫೆ, ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾಹಿಬ್ಜಾದಾ ಫರ್ಹಾನ್ ಮತ್ತು ಉಸ್ಮಾನ್ ತಾರಿಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಈ ಎಲ್ಲಾ ಏಳು ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವುದು ಇದೇ ಮೊದಲು.

ಕಳೆದ ಟಿ20ವಿಶ್ವಕಪ್‌ನಲ್ಲಿ ಪಾಕ್ ಪ್ರದರ್ಶನ

ಕಳೆದ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಪಾಕಿಸ್ತಾನ ತಂಡ ಒಟ್ಟು 4 ಪಂದ್ಯಗಳನ್ನು ಆಡಿತ್ತು. ಈ 4 ಪಂದ್ಯಗಳಲ್ಲಿ ಪಾಕಿಸ್ತಾನ ಕೇವಲ 2 ಪಂದ್ಯಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಅಮೆರಿಕ ಮತ್ತು ಟೀಂ ಇಂಡಿಯಾ ಪಾಕಿಸ್ತಾನವನ್ನು ಸೋಲಿಸಿದ್ದವು. ಇತ್ತ ಪಾಕಿಸ್ತಾನ ದುರ್ಬಲ ಕೆನಡಾ ಮತ್ತು ಐರ್ಲೆಂಡ್ ತಂಡದ ವಿರುದ್ಧ ಗೆಲುವು ಸಾಧಿಸಿತ್ತು.

ಟಿ20 ವಿಶ್ವಕಪ್​ಗೆ ಪಾಕ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮೊಹಮ್ಮದ್ ನಫಾಯ್ (ವಿಕೆಟ್ ಕೀಪರ್), ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ನಸೀಮ್ ಶಾ, ಸಾಹಿಬ್​ಝಾದ ಫರ್ಹಾನ್ (ವಿಕೆಟ್ ಕೀಪರ್), ಸೈಮ್ ಅಯ್ಯೂಬ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ತಾರಿಖ್, ಶಾದಾಬ್​ ಖಾನ್.

ಪ್ರೊಫೆಸರ್ʼಗೆ ಚಾಕು ಇರಿದು ಕೊಲೆ: ಆರೋಪಿ ಅರೆಸ್ಟ್

0

ಮುಂಬೈ: ಮಲಾಡ್ ರೈಲ್ವೆ ನಿಲ್ದಾಣದಲ್ಲಿ ಕಾಲೇಜು ಪ್ರಾಧ್ಯಾಪಕರೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಓಂಕಾರ್ ಶಿಂಧೆ (27) ಎಂದು ಗುರುತಿಸಲಾಗಿದೆ. ಮೃತ ಪ್ರಾಧ್ಯಾಪಕರಾದ ಅಲೋಕ್ ಸಿಂಗ್, ವಿಲೇ ಪಾರ್ಲೆಯ ಪ್ರಮುಖ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಪ್ರೊ. ಅಲೋಕ್ ಸಿಂಗ್ ಮತ್ತು ಓಂಕಾರ್ ಶಿಂಧೆ ಇಬ್ಬರೂ ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಣ್ಣ ವಿಚಾರಕ್ಕೆ ಜಗಳ ಆರಂಭವಾಗಿದೆ. ಮಾತಿನ ಚಕಮಕಿ ತೀವ್ರಗೊಂಡು, ತಾಳ್ಮೆ ಕಳೆದುಕೊಂಡ ಆರೋಪಿ ಹರಿತವಾದ ಚಾಕುವನ್ನು ಹೊರತೆಗೆದು ಪ್ರಾಧ್ಯಾಪಕರ ಹೊಟ್ಟೆಗೆ ಹಲವು ಬಾರಿ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಲೋಕ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದ ವ್ಯಕ್ತಿಯೊಬ್ಬರು ಪಾದಚಾರಿ ಸೇತುವೆ (FOB) ದಾಟಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳ ಆಧಾರದ ಮೇಲೆ ಬೊರಿವಲಿ ಜಿಆರ್‌ಪಿ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.

ದ್ವೇಷ ಭಾಷಣ ಮಸೂದೆ ನೆಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕತ್ತರಿ: ಸಿ.ಟಿ. ರವಿ ಆಕ್ರೋಶ

0

ಚಿಕ್ಕಮಗಳೂರು: ಯಾವ ಮತೀಯ ಗ್ರಂಥದಿಂದ ಕೋಮುಗಲಭೆಗಳು ನಡೆಯುತ್ತಿವೆ? ಜಾಗತಿಕ ಭಯೋತ್ಪಾದನೆಗೆ ಕಾರಣವಾಗುತ್ತಿರುವವರು ಮಕ್ಕಳ ಕೈಗೆ ಕಲ್ಲು ನೀಡಿ ದೇವರ ಹೆಸರಿನಲ್ಲಿ ಹಿಂಸೆಗೆ ಪ್ರೇರೇಪಿಸುತ್ತಿದ್ದಾರೆ. ಅಂಥವರಿಗೆ ನೋಟಿಸ್ ನೀಡಬೇಕೇ ಹೊರತು, ಸರ್ಕಾರ ಸುಮ್ಮನಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತರೀಕೆರೆಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣ ಮಸೂದೆ–2025 ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ ಎಂದು ಪೊಲೀಸರು ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.

“ಈ ಮಸೂದೆಗೆ ಇನ್ನೂ ಕಾನೂನುಬದ್ಧತೆ ಸಿಕ್ಕಿಲ್ಲ. ಕಾನೂನಿನ ಅರಿವಿಲ್ಲದ ಪೊಲೀಸರಿಗೆ ಮೊದಲು ಕಾನೂನು ತಿಳಿಸುವ ಅಗತ್ಯವಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಕೋಲೆ ತೊಡಿಸಲು ಸರ್ಕಾರ ಹೊರಟಿದೆಯೇ?” ಎಂದು ಪ್ರಶ್ನಿಸಿದರು.

ತುರ್ತು ಪರಿಸ್ಥಿತಿ ಹೇರಿ ನಾಗರಿಕ ಹಕ್ಕುಗಳನ್ನು ಹತ್ತಿಕ್ಕಿದ ಕಾಂಗ್ರೆಸ್ ಪಕ್ಷವೇ ಇದೀಗ ಜನರ ಬಾಯಿಗೆ ಬೀಗ ಹಾಕಲು ಹೊರಟಿದೆ ಎಂದು ಆರೋಪಿಸಿದ ಅವರು, ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಡೆಲ್ ಹೌಸ್ʼಗೆ ಉದ್ದೇಶಪೂರ್ವಕವಾಗಿ ಬೆಂಕಿ: ಭಯ ಸೃಷ್ಟಿಸಲು ಕೃತ್ಯ – ಜನಾರ್ದನ ರೆಡ್ಡಿ ಆರೋಪ

0

ಬಳ್ಳಾರಿ: ಮಾಡೆಲ್ ಹೌಸ್‌ಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದ್ದು, ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

ಎಸ್‌ಪಿ ಅವರು ಕೆಳಹಂತದ ಅಧಿಕಾರಿಗಳ ಮಾಹಿತಿ ಆಧರಿಸಿ ತರಾತುರಿಯಲ್ಲಿ ಹೇಳಿಕೆ ನೀಡಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ಈ ಬಗ್ಗೆ ನಾನು ದೂರು ನೀಡಿದ್ದೇನೆ. ಲೇಔಟ್‌ನ ಇಬ್ಬರು ಸೆಕ್ಯುರಿಟಿಗಳು ಬೆಂಕಿ ಹಚ್ಚಿರುವುದನ್ನು ಕಣ್ಣಾರೆ ನೋಡಿದ್ದಾರೆ. ನಾವು ನೀಡಿದ ವಿಡಿಯೋದಲ್ಲಿರುವ ಹುಡುಗರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದರು.

ಬಾಗಿಲು ಹಾಗೂ ಕಿಟಕಿಗಳ ಗಾಜು ಒಡೆದು ಒಳಗೆ ಪ್ರವೇಶಿಸಲಾಗಿದೆ. ಇದನ್ನು ‘ರೀಲ್ಸ್’ ಎಂದು ಹೇಳುವುದು ಹಾಸ್ಯಾಸ್ಪದ. ಎಸ್‌ಪಿ ಅವರು ಕೆಳಹಂತದ ಅಧಿಕಾರಿಗಳ ಮಾತುಗಳನ್ನು ನಂಬಬಾರದು. ಬ್ಯಾನರ್ ಗಲಭೆ ಪ್ರಕರಣದಲ್ಲಿ ಸತೀಶ್ ರೆಡ್ಡಿ ಇನ್ನೂ ಬಂಧನಕ್ಕೊಳಗಾಗಿಲ್ಲ.

ಶಾಸಕರ ಸಮ್ಮುಖದಲ್ಲೇ ರಾಜಶೇಖರ್‌ಗೆ ಗುಂಡೇಟು ಬಿದ್ದಿದೆ. ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಬಂಧನವಾಗಿದ್ದರೆ, ನಮ್ಮ ಮನೆಗೆ ಬೆಂಕಿ ಹಚ್ಚುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಎಸ್‌ಪಿ ಮತ್ತು ಡಿವೈಎಸ್‌ಪಿ ಅವರನ್ನು ಸರ್ಕಾರ ಈಗಾಗಲೇ ವರ್ಗಾವಣೆ ಮಾಡಬೇಕಿತ್ತು. 25 ದಿನಗಳಾದರೂ ಗನ್‌ಮ್ಯಾನ್‌ಗಳನ್ನು ಹೊರತುಪಡಿಸಿ ಇನ್ನಾರನ್ನೂ ಬಂಧಿಸಲಾಗಿಲ್ಲ. ಬಳ್ಳಾರಿ ಎಸ್‌ಪಿ ಒಳ್ಳೆಯ ಅಧಿಕಾರಿ, ಆದರೆ ಅವರು ಜನರ ನಂಬಿಕೆ ಕಳೆದುಕೊಳ್ಳಬಾರದು.

ಪೊಲೀಸ್ ವೇಷದಲ್ಲಿರುವ ಕ್ರಿಮಿನಲ್‌ಗಳು ಪೆಟ್ರೋಲ್ ಹಾಗೂ ಡೀಸೆಲ್ ಬಳಸಿ ಬೆಂಕಿ ಹಚ್ಚಿದ್ದಾರೆ. ಸಿಗರೇಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನುವುದು ಸುಳ್ಳು. ಮಂಗಳವಾರ ವಿಧಾನಸಭೆಯಲ್ಲಿ ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.

ಕಳೆದ 20 ದಿನಗಳಿಂದ ಸಿಐಡಿ ಏನು ಮಾಡುತ್ತಿದೆ? ಇಷ್ಟೆಲ್ಲಾ ವಿಡಿಯೋ ಸಾಕ್ಷ್ಯಗಳಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಮಾಡೆಲ್ ಹೌಸ್‌ನಲ್ಲಿ ರೀಲ್ಸ್ ಮಾಡಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಅಂಥದ್ದಾದರೆ ರೀಲ್ಸ್ ಮಾಡಿದ ವಿಡಿಯೋವನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ದ್ವೇಷ ಭಾಷಣ ಮಾಡುವ ಬಿಜೆಪಿ ಮುಖಂಡರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

0

ಕಲಬುರಗಿ: ದ್ವೇಷ ಭಾಷಣ ಕಾಯ್ದೆಯಡಿ ವಿಕಾಸ್ ಪುತ್ತೂರುಗೆ ನೋಟಿಸ್ ನೀಡಿರುವ ವಿಚಾರದ ಕುರಿತು ನನಗೆ ಮಾಹಿತಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಯಾಕೆ ನಿರಂತರವಾಗಿ ದ್ವೇಷ ಭಾಷಣ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ಕಾಂಗ್ರೆಸ್, ಮುಸ್ಲಿಂ ಸೇರಿದಂತೆ ನಾಲ್ಕು ಪದಗಳನ್ನು ಬಿಟ್ಟು ಬೇರೆ ಏನು ಮಾತನಾಡಲು ಬರೋದಿಲ್ಲ ಎಂದು ಸಚಿವರು ಟೀಕಿಸಿದರು. ಬಿಎನ್‌ಎಸ್ ಕಾಯ್ದೆಯಲ್ಲಿಯೂ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಅಂಶಗಳಿದ್ದು, ಅದರಡಿ ಪೊಲೀಸರು ನೋಟಿಸ್ ನೀಡಿರಬಹುದು ಎಂದು ಹೇಳಿದರು.

ಸಿ.ಟಿ. ರವಿ ಅವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದ ಪ್ರಿಯಾಂಕ್ ಖರ್ಗೆ, ರಾಜೀವ್ ಗೌಡ ಅವರನ್ನು ಈಗಾಗಲೇ ಪಕ್ಷದಿಂದ ಉಚ್ಛಾಟನೆ ಮಾಡಿದ್ದೇವೆ. ಆದರೆ ಪೋಕ್ಸೋ ಪ್ರಕರಣ ಇರುವ ವ್ಯಕ್ತಿಯನ್ನು ಬಿಜೆಪಿಯವರು ವೇದಿಕೆಯಲ್ಲಿ ಕೂರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ, ಸಿ.ಟಿ. ರವಿ ಅವರು ಸದನದಲ್ಲಿ ಅವಾಚ್ಯವಾಗಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಕೆ ವಾಯ್ಸ್ ಸ್ಯಾಂಪಲ್ ನೀಡಿಲ್ಲ ಎಂದು ಪ್ರಶ್ನಿಸಿದರು. ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ರಾಜ್ಯ ಸರ್ಕಾರದ ನೀತಿಗಳನ್ನು ಭಾಷಣದಲ್ಲಿ ಸೇರಿಸಲಾಗಿತ್ತು. ಆದರೆ ಅದನ್ನು ರಾಜ್ಯಪಾಲರು ಓದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ಕೆಟ್ಟ ಶಬ್ದಗಳನ್ನು ಬಳಸಿಲ್ಲ. ಆದರೂ ರಾಜ್ಯಪಾಲರು ನೀತಿ ನಿಯಮಗಳಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.

ಬೆಳಗಾವಿ ಗಡಿ ಭಾಗದಲ್ಲಿ ನಡೆದ 400 ಕೋಟಿ ರೂ ದರೋಡೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಹಾಗಾದರೆ ನೋಟು ಅಮಾನಿಕರಣ ಏನಾಯ್ತು ಎಂದು ಪ್ರಶ್ನಿಸಿದರು. “ನಾ ಕಾವೊಂಗಾ, ನಾ ಖಾನೆದೊಂಗಾ” ಅನ್ನೋದು ಎಲ್ಲಿ ಹೋಯಿತು ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ತೊಗರಿಗೆ ಎಂಎಸ್‌ಪಿ ಬೆಂಬಲ ಬೆಲೆ ಘೋಷಣೆಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಸಚಿವರು, ಕಬ್ಬಿಗೂ ನಾವೇ ಬೆಂಬಲ ಬೆಲೆ ಕೊಡಬೇಕು, ತೊಗರಿಗೂ ನಾವೇ ಕೊಡಬೇಕು ಎನ್ನುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು. ಎಂಎಸ್‌ಪಿ ದರವನ್ನು ನಿಗದಿ ಮಾಡೋದು ಕೇಂದ್ರ ಸರ್ಕಾರ. ಎಲ್ಲದಕ್ಕೂ ರಾಜ್ಯ ಸರ್ಕಾರವೇ ಮಾಡಬೇಕು ಅಂದ್ರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ದಾವೂಸ್ ನಲ್ಲಿ 45ಕ್ಕೂ ಹೆಚ್ಚು ಕಂಪನಿಗಳ ಜತೆ ಹೂಡಿಕೆ ಬಗ್ಗೆ ಚರ್ಚೆ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಮುಂದಿನ 25 ವರ್ಷಗಳಲ್ಲಿ ಆಗಲಿರುವ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲಾ ನಗರಗಳಲ್ಲೂ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ ನಡೆಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ದಾವೋಸ್ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸಾದ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು. ದಾವೋಸ್ ಕಾರ್ಯಕ್ರಮದಲ್ಲಿ ಕೆಲವು ಕಂಪನಿಗಳು ಕರ್ನಾಟಕದ 2-3ನೇ ಹಂತದ ನಗರಗಳ ಬಗ್ಗೆಯೂ ಆಸಕ್ತಿ ಹೊಂದಿದ್ದು, ಈ ನಗರಗಳು ಪ್ರಕಾಶಮಾನವಾಗಿ, ಯುವ ಪ್ರತಿಭೆಗಳನ್ನು ಹೊಂದಿರಬೇಕು ಎಂದು ಚರ್ಚೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲಾ ನಗರ ಪ್ರದೇಶಗಳಿಗೆ ಸಂಚಾರ ಯೋಜನೆ ರೂಪಿಸಬೇಕು.

ಮುಂದಿನ 25 ವರ್ಷಕ್ಕೆ ಅಗತ್ಯವಿರುವ ಸಂಚಾರಿ ಮಾರ್ಗದ ಯೋಜನೆ ರೂಪಿಸಬೇಕು. ಎಲ್ಲಾ ನಗರ ಪ್ರದೇಶಗಳಲ್ಲಿ ವರ್ತುಲ ರಸ್ತೆಗಳಿಗೆ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಸಮಯವೇ ಹಣ, ಯಾರೂ ಸಹ ಸಮಯ ವ್ಯರ್ಥ ಮಾಡಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ನಾವು ಈಗಿನಿಂದಲೇ ಯೋಜನೆ ರೂಪಿಸಬೇಕಿದೆ. ಈ ಬಗ್ಗೆ ನಾನು, ನಗರಾಭಿವೃದ್ಧಿ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಪೌರಾಡಳಿತ ಸಚಿವರು ಸಭೆ ಸೇರಿ, ನಗರ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ” ಎಂದು ತಿಳಿಸಿದರು.

“ಮುಂದಿನ 25 ವರ್ಷಗಳಲ್ಲಿ ಕರ್ನಾಟಕದ ಜನಸಂಖ್ಯೆಯಲ್ಲಿ ಸುಮಾರು 70% ನಗರ ಪ್ರದೇಶಕ್ಕೆ ವರ್ಗಾವಣೆಯಾಗುವ ಲೆಕ್ಕಾಚಾರ ಅವರದ್ದಾಗಿದೆ. ನಮ್ಮ ಪ್ರಗತಿ ನೋಡಿ ಅವರು ಈ ಲೆಕ್ಕಾಚಾರ ಮಾಡಿದ್ದಾರೆ. ಇದಕ್ಕೆ ಯಾವ ತಯಾರಿ ನಡೆಸಿದ್ದೀರಿ ಎಂದು ಕೇಳಿದರು. ಹೀಗಾಗಿ ನಾವು ಸಮಯ ವ್ಯರ್ಥ ಮಾಡದೇ ಇಡೀ ರಾಜ್ಯದಲ್ಲಿ ಸಂಚಾರಿ ಗ್ರಿಡ್ ರೂಪಿಸಬೇಕು ಎಂದು ತೀರ್ಮಾನಿಸಿದ್ದೇವೆ.

ಎಲ್ಲಿ ರಸ್ತೆ ಬರುತ್ತದೆ, ರಸ್ತೆ ಅಗಲೀಕರಣ ಎಷ್ಟಿರಬೇಕು ಎಂಬುದರ ಬಗ್ಗೆ ಕಾನೂನಾತ್ಮಕವಾಗಿ ಚರ್ಚೆ ಮಾಡಿ ಹೊಸ ತೀರ್ಮಾನ ಮಾಡಬೇಕಿದೆ. ಬೆಂಗಳೂರಿನಲ್ಲಿ ಪೆರಿಫೆರಲ್ ರಿಂಗ್ ರಸ್ತೆಗೆ ಅಧಿಸೂಚನೆ ಹೊರಡಿಸಿ ನಂತರ ಅದನ್ನು ಕಾರ್ಯರೂಪಕ್ಕೆ ತರಲು ತಡವಾಗಿದೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು” ಎಂದರು.

45ಕ್ಕೂ ಹೆಚ್ಚು ಕಂಪನಿಗಳ ಜೊತೆ ಹೂಡಿಕೆ ಬಗ್ಗೆ ಚರ್ಚೆ

“ದಾವೋಸ್ ಕಾರ್ಯಕ್ರಮದಲ್ಲಿ ಡಾಟಾ ಸೆಂಟರ್, ಗ್ಲೋಬಲ್ ಕೇಪಬಲ್ ಸೆಂಟರ್, ಆಹಾರ ಮತ್ತು ಪಾನೀಯ, ಏವಿಯೇಷನ್, ನವೀಕೃತ ಇಂಧನ, ಇವಿ, ಎಲೆಕ್ಟ್ರಾನಿಕ್ಸ್, ಅಡ್ವಾನ್ಸ್ ಮ್ಯಾನ್ಯುಫ್ಯಾಕ್ಚರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 45ಕ್ಕೂ ಹೆಚ್ಚು ಕಂಪನಿಗಳ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗಿದೆ. ನಮ್ಮಲ್ಲಿ ಲಭ್ಯವಿರುವ ನೀರು,

ವಿದ್ಯುತ್ ಪ್ರಮಾಣ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಗಳನ್ನು ಕಂಪನಿಗಳು ಪಡೆದಿವೆ. ಹೊರ ದೇಶಗಳಲ್ಲಿ ಉದ್ಯಮ ಮಾಡುತ್ತಿರುವ ಅನಿವಾಸಿ ಭಾರತೀಯರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರುಗಳು ಕೂಡ ನಮ್ಮ ಕೈಗಾರಿಕ ಸಚಿವರಾದ ಎಂ.ಬಿ ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ” ಎಂದು ವಿವರಿಸಿದರು.

“ಈ ಬಾರಿಯ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವ ಕಂಪನಿಗಳ ಜೊತೆಗಿನ ಒಪ್ಪಂದಕ್ಕೆ ಅಲ್ಲಿ ಸಹಿ ಹಾಕುವುದು ಬೇಡ ಎಂದು ನಿರ್ಧರಿಸಿದ್ದೇವೆ. ಹೊರ ದೇಶಗಳ ಕಂಪನಿಗಳು ಇಲ್ಲಿಗೆ ಬಂದು, ಇಲ್ಲಿನ ವಾತಾವರಣ, ಯುವ ಪ್ರತಿಭೆ, ಇಲ್ಲಿನ ಸೌಲಭ್ಯ, ಇಂಧನ, ನೀರಿನ ಸೌಲಭ್ಯ ಗಮನಿಸಬೇಕು. ಇನ್ನು ನಮ್ಮ ರಾಜ್ಯದ ಉದ್ಯಮಿಗಳು ಕೂಡ ಅಲ್ಲಿಗೆ ಬಂದು ತಮ್ಮ ಉದ್ಯಮ ವಿಸ್ತರಣೆಗೆ ತಮ್ಮ ಆಲೋಚನೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 11 ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆ ಪ್ರಸ್ತಾವನೆ ಬಂದಿದ್ದು, ಇದರಲ್ಲಿ 50% ನಷ್ಟು ಹೂಡಿಕೆ ಕಾರ್ಯಗತಗೊಳ್ಳುತ್ತಿದೆ. ಹೀಗಾಗಿ ದಾವೋಸ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕದೇ, ಇಲ್ಲೇ ಸಹಿ ಹಾಕಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.

error: Content is protected !!