“ಜನರ ಪಾಲ್ಗೊಳ್ಳುವಿಕೆಯಿಂದ ರೂಪುಗೊಳ್ಳುವ ಯೋಜನೆಗಳೇ ಶಾಶ್ವತ ಅಭಿವೃದ್ಧಿಗೆ ಅಡಿಪಾಯ.”ಡಾ. ಎಚ್.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
ಜನರ ಯೋಜನೆಗಳೇ ಜಿಲ್ಲೆಯ ಅಭಿವೃದ್ಧಿಗೆ ದಿಕ್ಕು
ಕೋಮು ಗೂಂಡಾಗಳ ಕೇಸ್ ವಾಪಸ್ ನಿರ್ಧಾರ ರದ್ದುಪಡಿಸಿ
77 ದಿನಗಳಲ್ಲೇ ತೀರ್ಪು..! ಬಾಲಕಿ ಹತ್ಯೆ ಪ್ರಕರಣದ ಅಪರಾಧಿಗೆ ಮರಣದಂಡನೆ
ಚೆನ್ನೈ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಪೋಕ್ಸೋ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಧರ್ಮ ಮುನೀಶ್ವರನ್ ಎಂದು ಗುರುತಿಸಲಾಗಿದೆ. ಕೇವಲ 77 ದಿನಗಳಲ್ಲೇ ತನಿಖೆ ಹಾಗೂ ವಿಚಾರಣೆ ಪೂರ್ಣಗೊಂಡು ಕೋರ್ಟ್ ತೀರ್ಪು ಪ್ರಕಟಿಸಿದೆ.
ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಎರಡೂ ಆರೋಪಗಳಲ್ಲಿ ಅಪರಾಧಿ ಎಂದು ತೀರ್ಮಾನಿಸಿ ಪ್ರತ್ಯೇಕವಾಗಿ ಮರಣದಂಡನೆ ಶಿಕ್ಷೆ ವಿಧಿಸಿದೆ.
ವಿಲಾತಿಕುಲಂನ 12ನೇ ತರಗತಿಯ 17 ವರ್ಷದ ವಿದ್ಯಾರ್ಥಿನಿ ಈ ವರ್ಷದ ಮಾರ್ಚ್‌ನಲ್ಲಿ ನಾಪತ್ತೆಯಾಗಿದ್ದಳು. ನಂತರ ಆಕೆಯ ಶವ ಮನೆಯ ಸಮೀಪದ ಕುರುಚಲು ಪ್ರದೇಶದಲ್ಲಿ ಪತ್ತೆಯಾಗಿತ್ತು.
ಘಟನೆ ಬಳಿಕ ಪೊಲೀಸರು ತೀವ್ರ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಪ್ರಕರಣದ ತ್ವರಿತ ವಿಚಾರಣೆ ನಂತರ ಇದೀಗ ಗಂಭೀರ ಶಿಕ್ಷೆ ಪ್ರಕಟವಾಗಿದೆ.
“ಬದುಕಿದ್ದವರಿಗೇ ಡೆತ್ ಸರ್ಟಿಫಿಕೆಟ್!”- ಕೋಲಾರ ನಗರಸಭೆಯಲ್ಲಿ ನಕಲಿ ದಾಖಲೆಗಳ ದಂಧೆ ಶಂಕೆ; ಲೋಕಾಯುಕ್ತ ದಿಢೀರ್ ದಾಳಿ
ಕೋಲಾರ: ಜೀವಂತ ವ್ಯಕ್ತಿಗಳಿಗೆ ಮರಣ ಪ್ರಮಾಣ ಪತ್ರ ನೀಡಿರುವುದು ಸೇರಿದಂತೆ ಜನನ–ಮರಣ ದಾಖಲೆಗಳಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೋಲಾರ ನಗರಸಭೆ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.
ನಗರಸಭೆಯ ಆರೋಗ್ಯ ವಿಭಾಗದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಒಂದೇ ನೋಂದಣಿಯಲ್ಲಿ ಇಬ್ಬರು ಮಕ್ಕಳಿಗೆ ಜನನ ಪ್ರಮಾಣ ಪತ್ರ ನೀಡಿರುವುದು ಹಾಗೂ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಜನನವಾಗದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಜನನ ಪ್ರಮಾಣ ಪತ್ರ ವಿತರಿಸಿರುವ ಗಂಭೀರ ಆರೋಪಗಳ ಕುರಿತು ತನಿಖೆ ಆರಂಭಿಸಿದ್ದಾರೆ.
ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೋಲಾರ ಲೋಕಾಯುಕ್ತ ಎಸ್ಪಿ ಆಂಥೋಣಿ ಜಾನ್ ಸೂಚನೆ ಮೇರೆಗೆ ಇನ್ಸ್‌ಪೆಕ್ಟರ್ ಆಂಜಿನಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.
ಈ ಕೆಟ್ಟ ಅಭ್ಯಾಸಗಳು ನಿಮ್ಮ ಗೌರವ ಹಾಳು ಮಾಡಬಹುದು: ಆಚಾರ್ಯ ಚಾಣಕ್ಯರ ಎಚ್ಚರಿಕೆ..!
ಸಮಾಜದಲ್ಲಿ ಹಣಕ್ಕಿಂತ ಗೌರವ ದೊಡ್ಡದು ಎಂದು ಹೇಳಲಾಗುತ್ತದೆ. ವ್ಯಕ್ತಿಯ ನಡವಳಿಕೆ, ಮಾತು ಹಾಗೂ ದೈನಂದಿನ ಅಭ್ಯಾಸಗಳೇ ಅವನ ವ್ಯಕ್ತಿತ್ವವನ್ನು ರೂಪಿಸುತ್ತವೆ.
ಆದರೆ ತಿಳಿದೋ ತಿಳಿಯದೆಯೋ ಬೆಳೆಸಿಕೊಳ್ಳುವ ಕೆಲವು ಕೆಟ್ಟ ಅಭ್ಯಾಸಗಳು ವ್ಯಕ್ತಿಯ ಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ ಎಂದು ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಎಚ್ಚರಿಸಿದ್ದಾರೆ.
ಅತಿಯಾಗಿ ಮಾತನಾಡುವುದು:
ಪ್ರತಿಯೊಂದು ವಿಷಯದಲ್ಲೂ ಅನಗತ್ಯವಾಗಿ ಮಾತನಾಡುವ ವ್ಯಕ್ತಿ ತನ್ನ ಗಂಭೀರತೆಯನ್ನು ಕಳೆದುಕೊಳ್ಳುತ್ತಾನೆ ಎಂದು ಚಾಣಕ್ಯರು ಹೇಳಿದ್ದಾರೆ. ಹೆಚ್ಚು ಮಾತನಾಡುವುದರಿಂದ ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ವ್ಯಕ್ತಿಯ ಇಮೇಜ್‌ಗೆ ಹಾನಿಯಾಗಬಹುದು. ಹೀಗಾಗಿ ಎಲ್ಲಿ, ಹೇಗೆ ಮತ್ತು ಎಷ್ಟು ಮಾತನಾಡಬೇಕು ಎಂಬ ಅರಿವು ಅಗತ್ಯ.
ಕೋಪ ನಿಯಂತ್ರಣದ ಕೊರತೆ:
ಅತಿಯಾದ ಕೋಪ ಮನುಷ್ಯನ ದೊಡ್ಡ ಶತ್ರು ಎಂದು ಚಾಣಕ್ಯರು ಬಣ್ಣಿಸಿದ್ದಾರೆ. ಪದೇ ಪದೇ ಕೋಪಗೊಳ್ಳುವ ವ್ಯಕ್ತಿ ತನ್ನ ಮಾತು ಮತ್ತು ವರ್ತನೆಯಿಂದ ಇತರರ ಗೌರವ ಕಳೆದುಕೊಳ್ಳುತ್ತಾನೆ. ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಂತರ ವಿಷಾದಕ್ಕೆ ಕಾರಣವಾಗುತ್ತವೆ.
ದುರಾಸೆ ಮತ್ತು ಸ್ವಾರ್ಥ:
ಅತಿಯಾದ ದುರಾಸೆ ವ್ಯಕ್ತಿಯನ್ನು ನೈತಿಕತೆಯಿಂದ ದೂರ ಮಾಡುತ್ತದೆ. ಪ್ರತಿಯೊಂದು ಕೆಲಸವನ್ನೂ ಸ್ವಾರ್ಥದ ದೃಷ್ಟಿಯಿಂದ ಮಾಡುವವರ ಮೇಲೆ ಜನರು ನಂಬಿಕೆ ಇಡುವುದಿಲ್ಲ. ಇದರ ಪರಿಣಾಮವಾಗಿ ಗೌರವವೂ ಕಡಿಮೆಯಾಗುತ್ತದೆ.
ಸಮಯದ ಮಹತ್ವ ಅರಿಯದಿರುವುದು:
ಸಮಯಕ್ಕೆ ಬೆಲೆ ಕೊಡದ ವ್ಯಕ್ತಿಯನ್ನು ಇತರರು ಬೇಜವಾಬ್ದಾರಿ ಎಂದು ಪರಿಗಣಿಸುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದರಿಂದ ವಿಶ್ವಾಸ ಮತ್ತು ಗೌರವ ಸಿಗುತ್ತದೆ. ಕೆಲಸದಲ್ಲಿ ವಿಳಂಬ ಮಾಡಿದರೆ ವ್ಯಕ್ತಿಯ ವಿಶ್ವಾಸಾರ್ಹತೆ ಕುಸಿಯುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.
ದುರಹಂಕಾರ:
ಅತಿಯಾದ ಹೆಮ್ಮೆ ಮತ್ತು ದುರಹಂಕಾರ ವ್ಯಕ್ತಿಯ ಪತನಕ್ಕೆ ಕಾರಣವಾಗುತ್ತದೆ. ದುರಹಂಕಾರ ಹೊಂದಿರುವ ವ್ಯಕ್ತಿಯನ್ನು ಸಮಾಜದಲ್ಲಿ ಹೆಚ್ಚು ಕಾಲ ಗೌರವಿಸುವುದಿಲ್ಲ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ನಕಾರಾತ್ಮಕ ಚಿಂತನೆ:
ಯಾವಾಗಲೂ ದೂರು ನೀಡುವುದು ಮತ್ತು ನಕಾರಾತ್ಮಕ ಚಿಂತನೆ ಹೊಂದಿರುವುದು ಕೂಡ ವ್ಯಕ್ತಿಯ ಖ್ಯಾತಿಗೆ ಧಕ್ಕೆ ತರುತ್ತದೆ. ಸದಾ ನಕಾರಾತ್ಮಕ ಯೋಚನೆ ಹೊಂದಿರುವವರಿಂದ ಜನ ದೂರವಾಗುತ್ತಾರೆ ಎಂದು ಚಾಣಕ್ಯರು ಹೇಳಿದ್ದಾರೆ.
ನಕಲಿ ಜನನ-ಮರಣ ಪ್ರಮಾಣಪತ್ರ ಆರೋಪ: ಕೋಲಾರ ನಗರಸಭೆ ಮೇಲೆ ಲೋಕಾಯುಕ್ತ ದಾಳಿ..!
ಕೋಲಾರ: ನಕಲಿ ದಾಖಲೆ ಸೃಷ್ಟಿಸಿ ಜನನ ಹಾಗೂ ಮರಣ ಪ್ರಮಾಣಪತ್ರ ವಿತರಣೆ ಆರೋಪದ ಹಿನ್ನೆಲೆ ಕೋಲಾರ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದರು.
ನಗರಸಭೆಯ ಆರೋಗ್ಯ ವಿಭಾಗದಲ್ಲಿ ಅಕ್ರಮ ನಡೆದಿದೆ ಎಂಬ ಸಾರ್ವಜನಿಕರ ನಿರಂತರ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಜೀವಂತವಾಗಿರುವ ವ್ಯಕ್ತಿಗಳಿಗೆ ಮರಣ ಪ್ರಮಾಣಪತ್ರ ನೀಡಿರುವುದು, ಒಂದೇ ನೋಂದಣಿಯಲ್ಲಿ ಇಬ್ಬರು ಮಕ್ಕಳಿಗೆ ಜನನ ಪ್ರಮಾಣಪತ್ರ ವಿತರಿಸಿರುವುದು ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ.
ಇದೇ ವೇಳೆ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನಿಸದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಜನನ ಪ್ರಮಾಣಪತ್ರ ನೀಡಲಾಗುತ್ತಿದೆ ಎಂಬ ದೂರುಗಳೂ ಲೋಕಾಯುಕ್ತ ಕಚೇರಿಗೆ ತಲುಪಿದ್ದವು.
ಈ ಹಿನ್ನೆಲೆ ಕೋಲಾರ ಲೋಕಾಯುಕ್ತ ಎಸ್‌ಪಿ ಆಂಥೋನಿ ಜಾನ್ ಅವರ ಮಾರ್ಗದರ್ಶನದಲ್ಲಿ, ಪಿಐ ಆಂಜಿನಪ್ಪ ನೇತೃತ್ವದ ತಂಡ ನಗರಸಭೆಯ ಆರೋಗ್ಯ ವಿಭಾಗದ ದಾಖಲೆಗಳನ್ನು ಪರಿಶೀಲಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“NEET-UG 2026 ಪೇಪರ್ ಲೀಕ್ ಕೇಸ್: ಸುಪ್ರೀಂ ಕೋರ್ಟ್‌ನಿಂದ NTAಗೆ ತೀವ್ರ ತರಾಟೆ!
ನವದೆಹಲಿ: NEET-UG 2026 ಪರೀಕ್ಷೆಯಲ್ಲಿ ಪೇಪರ್ ಲೀಕ್ ಆರೋಪಗಳು ಮತ್ತೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ವಿರುದ್ಧ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ. 2024ರ ಹಿಂದಿನ ಪ್ರಕರಣದಲ್ಲಿ ನೀಡಿದ್ದ ನಿರ್ದೇಶನಗಳನ್ನೇ ಪಾಲಿಸದಿರುವುದು ದುಃಖಕರ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರ ವಿಭಾಗೀಯ ಪೀಠವು ಕೇಂದ್ರ ಸರ್ಕಾರ ಹಾಗೂ NTAಗೆ ನೋಟಿಸ್ ಜಾರಿ ಮಾಡಿದ್ದು, ಯುನೈಟೆಡ್ ಡಾಕ್ಟರ್ಸ್ ಫ್ರಂಟ್ ಸೇರಿದಂತೆ ಹಲವು ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
ಅರ್ಜಿದಾರರು NTAಯನ್ನು ವಿಸರ್ಜನೆಗೊಳಿಸಿ, ಮುಂದಿನ ಪರೀಕ್ಷೆಗಳನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ ಸ್ವಾಯತ್ತ ಪರೀಕ್ಷಾ ಸಂಸ್ಥೆ ರಚನೆಗೂ ಬೇಡಿಕೆ ಇಡಲಾಗಿದೆ.
ಇದಲ್ಲದೆ 2024ರಲ್ಲಿ ನೀಡಿದ ನಿರ್ದೇಶನಗಳು ಮತ್ತು ಕಮಿಟಿ ಶಿಫಾರಸುಗಳನ್ನು ಹೇಗೆ ಅನುಷ್ಠಾನಗೊಳಿಸಲಾಗಿದೆ ಎಂಬ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ NTAಗೆ ಸೂಚಿಸಿದೆ.
ಈ ಪ್ರಕರಣವು ದೇಶದ ವೈದ್ಯಕೀಯ ಪ್ರವೇಶ ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ಭದ್ರತೆ ಕುರಿತು ಮತ್ತೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
‘ಮೇಕೆದಾಟು ನಿಲ್ಲಿಸಿ!’: ಡಿಕೆಶಿ ಹೇಳಿಕೆಗೆ ತಮಿಳುನಾಡಿನಲ್ಲಿ ಎಮರ್ಜೆನ್ಸಿ ಮೀಟಿಂಗ್; ವಿಜಯ್ ಸರ್ಕಾರದಿಂದ ಲೀಗಲ್ ವಾರ್ ಘೋಷಣೆ
ಚೆನ್ನೈ: ಮೇಕೆದಾಟು ಯೋಜನೆಗೆ ಶೀಘ್ರವೇ ಗುದ್ದಲಿ ಪೂಜೆ ನಡೆಯಲಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಜೋಸೆಫ್ ವಿಜಯ್ ತುರ್ತು ಸಭೆ ನಡೆಸಿ, “ಕರ್ನಾಟಕ ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಜಾರಿಗೊಳಿಸಬಾರದು” ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಚೆನ್ನೈನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಾವೇರಿ ಜಲವಿವಾದ, ನೀರು ಹಂಚಿಕೆ ಹಾಗೂ ಮೇಕೆದಾಟು ಯೋಜನೆ ಕುರಿತ ಕಾನೂನು ಅಂಶಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕಾನೂನು ತಜ್ಞರು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ಇತ್ತೀಚಿನ ಬೆಳವಣಿಗೆಗಳನ್ನು ಮುಖ್ಯಮಂತ್ರಿಗೆ ವಿವರಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ವಿಜಯ್, ತಮಿಳುನಾಡಿನ ನೀರಾವರಿ ಹಕ್ಕುಗಳನ್ನು ರಕ್ಷಿಸುವಲ್ಲಿ ಯಾವುದೇ ರೀತಿಯ ಸಡಿಲಿಕೆ ಬೇಡ ಎಂದು ಸೂಚಿಸಿದ್ದು, ಮೇಕೆದಾಟು ವಿರುದ್ಧದ ಕಾನೂನು ಹೋರಾಟವನ್ನು ವೇಗಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕರ್ನಾಟಕ ಸರ್ಕಾರ ಯೋಜನೆಗೆ ವೇಗ ನೀಡಲು ಮುಂದಾಗಿರುವ ಸಮಯದಲ್ಲೇ ತಮಿಳುನಾಡು ಸರ್ಕಾರ ಕಠಿಣ ನಿಲುವು ತಾಳಿರುವುದು ಕಾವೇರಿ ವಿವಾದವನ್ನು ಮತ್ತೆ ರಾಜಕೀಯ ಮತ್ತು ಕಾನೂನು ಸಮರದ ಕೇಂದ್ರಬಿಂದುವಾಗಿಸಿದೆ.
ಮೂರು ಪಂದ್ಯಗಳಲ್ಲಿ ಎರಡು ಜಯ..! ಧರ್ಮಶಾಲಾದಲ್ಲಿ ಬೆಂಗಳೂರಿನ ಭರ್ಜರಿ ದಾಖಲೆ, ಗುಜರಾತ್‌ಗೆ ಟೆನ್ಷನ್
ಐಪಿಎಲ್ ಸೀಸನ್-19ರ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಹಿಮಾಚಲ ಪ್ರದೇಶದ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣ ಸಜ್ಜಾಗಿದೆ.
ಮೇ 26ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಧರ್ಮಶಾಲಾದ ಎಚ್‌ಪಿಸಿಎ ಮೈದಾನದಲ್ಲಿ ಬೆಂಗಳೂರು ತಂಡ ಇದುವರೆಗೆ ಕೇವಲ ಮೂರು ಪಂದ್ಯಗಳನ್ನು ಆಡಿದೆ. ಅದರಲ್ಲಿ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ವಿಶೇಷವಾಗಿ ಪಂಜಾಬ್ ವಿರುದ್ಧದ ಪಂದ್ಯಗಳಲ್ಲಿ ಬೆಂಗಳೂರು ಮೇಲುಗೈ ಸಾಧಿಸಿರುವುದು ಗಮನಾರ್ಹ.
ಧರ್ಮಶಾಲಾದಲ್ಲಿ ಬೆಂಗಳೂರಿನ ಪ್ರದರ್ಶನ:
- ಮೇ 17, 2026: ಪಂಜಾಬ್ ವಿರುದ್ಧ ಬೆಂಗಳೂರು 222 ರನ್ ಕಲೆಹಾಕಿ ಎದುರಾಳಿಯನ್ನು 199/8ಕ್ಕೆ ಕಟ್ಟಿಹಾಕಿ ಗೆಲುವು ಸಾಧಿಸಿತು.
- ಮೇ 9, 2024: ಇದೇ ಮೈದಾನದಲ್ಲಿ ಬೆಂಗಳೂರು 241 ರನ್ ಗಳಿಸಿ ಗರಿಷ್ಠ ಮೊತ್ತದ ದಾಖಲೆ ನಿರ್ಮಿಸಿತ್ತು. ಪಂಜಾಬ್ ತಂಡವನ್ನು 181 ರನ್‌ಗೆ ಆಲೌಟ್ ಮಾಡಿತ್ತು.
- ಮೇ 17, 2011: ಧರ್ಮಶಾಲಾದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಬೆಂಗಳೂರು 121 ರನ್‌ಗೆ ಆಲೌಟ್ ಆಗಿ ಸೋಲು ಕಂಡಿತ್ತು.
ಒಟ್ಟಾರೆ ಮೂರು ಪಂದ್ಯಗಳಲ್ಲಿ ಎರಡು ಜಯಗಳಿಸಿರುವ ಬೆಂಗಳೂರು ತಂಡಕ್ಕೆ ಈ ಮೈದಾನದ ಪಿಚ್ ಹಾಗೂ ಪರಿಸ್ಥಿತಿಗಳ ಬಗ್ಗೆ ಸ್ಪಷ್ಟ ಅರಿವು ಇದೆ. ಆದರೆ ಗುಜರಾತ್ ಟೈಟಾನ್ಸ್ ತಂಡ ಇದೇ ಮೊದಲ ಬಾರಿಗೆ ಇಲ್ಲಿ ಕಣಕ್ಕಿಳಿಯುತ್ತಿದೆ. ಇದೇ ಕಾರಣಕ್ಕೆ ಮೊದಲ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ತಂಡವೇ ಗೆಲುವಿನ ನೆಚ್ಚಿನ ತಂಡವಾಗಿ ಕಾಣುತ್ತಿದೆ.
ಧರ್ಮಶಾಲಾದಲ್ಲಿ ಮಿಂಚಿದ ಬೆಂಗಳೂರು ಆಟಗಾರರು:
ವಿರಾಟ್ ಕೊಹ್ಲಿ: – 2024ರಲ್ಲಿ 92 ರನ್ ಹಾಗೂ 2026ರಲ್ಲಿ 58 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ವೆಂಕಟೇಶ್ ಅಯ್ಯರ್: – ಪಂಜಾಬ್ ವಿರುದ್ಧ ಕೇವಲ 40 ಎಸೆತಗಳಲ್ಲಿ ಅಜೇಯ 73 ರನ್ ಬಾರಿಸಿ ಮಿಂಚಿದ್ದರು.
ರಾಸಿಖ್ ಸಲಾಮ್: ಡೆತ್ ಓವರ್‌ಗಳಲ್ಲಿ ಅದ್ಭುತ ಬೌಲಿಂಗ್ ಮಾಡಿ 3 ವಿಕೆಟ್ ಪಡೆದಿದ್ದರು.
ಬ್ಯಾಟಿಂಗ್‌ಗೆ ಸಹಕಾರಿ ಪಿಚ್ ಆಗಿರುವ ಧರ್ಮಶಾಲಾದಲ್ಲಿ ಮತ್ತೊಮ್ಮೆ ವಿರಾಟ್ ಕೊಹ್ಲಿ ಅಬ್ಬರಿಸುವ ನಿರೀಕ್ಷೆಯಿದೆ. ಇವರ ಜೊತೆ ರಜತ್ ಪಾಟಿದಾರ್ ಹಾಗೂ ಟಿಮ್ ಡೇವಿಡ್ ಮಿಂಚಿದರೆ ಗುಜರಾತ್ ವಿರುದ್ಧ ಬೆಂಗಳೂರು ಬೃಹತ್ ಮೊತ್ತ ಪೇರಿಸುವ ಸಾಧ್ಯತೆ ಇದೆ.
ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ ಸೂರ್ಯ: 300 ಕೋಟಿ ಕ್ಲಬ್ ಸೇರಿದ ‘ಕರುಪ್ಪು’ ಸಿನಿಮಾ ಕಲೆಕ್ಷನ್
ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ ಈಗ ಭಾರತೀಯ ಚಿತ್ರರಂಗದ ದೊಡ್ಡ ಸೆನ್ಸೇಶನ್ ಆಗಿದೆ. ಆರಂಭದಲ್ಲಿ ವಿವಾದ, ಆರ್ಥಿಕ ಸಂಕಷ್ಟ ಮತ್ತು ಪ್ರೀಮಿಯರ್ ರದ್ದತಿ ಸುದ್ದಿಗಳಿಂದ ಸುತ್ತುವರಿದಿದ್ದ ಈ ಸಿನಿಮಾ, ಇದೀಗ ವಿಶ್ವಾದ್ಯಂತ 300 ಕೋಟಿ ರೂಪಾಯಿ ಗಳಿಕೆಯತ್ತ ದೌಡಾಯಿಸುತ್ತಿದೆ.
ಎರಡನೇ ವಾರಾಂತ್ಯದಲ್ಲೂ ಚಿತ್ರದ ಕಲೆಕ್ಷನ್ ಕುಸಿಯದೇ ಭರ್ಜರಿಯಾಗಿ ಮುಂದುವರಿದಿದೆ. ವಿಶೇಷವಾಗಿ ಕಳೆದ ಭಾನುವಾರದ ಗಳಿಕೆ ಮೊದಲ ದಿನದ ಕಲೆಕ್ಷನ್‌ಗಿಂತ ಹೆಚ್ಚಾಗಿರುವುದು ಟ್ರೇಡ್ ವಲಯವನ್ನೇ ಅಚ್ಚರಿಗೊಳಿಸಿದೆ. ಬಕ್ರೀದ್ ಹಬ್ಬದ ರಜೆ ಹಿನ್ನೆಲೆ ಮುಂದಿನ ವಾರ ಮತ್ತಷ್ಟು ದೊಡ್ಡ ಮಟ್ಟದ ಬಿಸಿನೆಸ್ ನಿರೀಕ್ಷಿಸಲಾಗಿದೆ.
ಸೂರ್ಯ ಅವರ ಕರಿಯರ್‌ನಲ್ಲಿ ‘ಕರುಪ್ಪು’ ಸಿನಿಮಾ ದೊಡ್ಡ ಟರ್ನಿಂಗ್ ಪಾಯಿಂಟ್ ಆಗಿದೆ. ಹಲವು ವರ್ಷಗಳಿಂದ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೇ ಟ್ರೋಲ್ ಆಗುತ್ತಿದ್ದ ಸೂರ್ಯ, ಈ ಚಿತ್ರದ ಮೂಲಕ ಸ್ಟ್ರಾಂಗ್ ಕಮ್‌ಬ್ಯಾಕ್ ನೀಡಿದ್ದಾರೆ.
ಆರ್.ಜೆ. ಬಾಲಾಜಿ ನಿರ್ದೇಶಿಸಿರುವ ಈ ಆ್ಯಕ್ಷನ್ ಡ್ರಾಮಾವನ್ನು ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಿಸಿದೆ. ತ್ರಿಶಾ ಕೃಷ್ಣನ್ ನಾಯಕಿಯಾಗಿ ನಟಿಸಿದ್ದು, ಆರ್.ಜೆ. ಬಾಲಾಜಿ, ಇಂದ್ರನ್ಸ್, ನಟ್ಟಿ ಸುಬ್ರಮಣಿಯನ್, ಸ್ವಾಸಿಕಾ ಹಾಗೂ ಅನಘಾ ಮಾಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿ ಅಭ್ಯಂಕರ್ ಸಂಗೀತ ಚಿತ್ರಕ್ಕೆ ದೊಡ್ಡ ಪ್ಲಸ್ ಆಗಿದೆ.
ಆದರೆ ಸಿನಿಮಾ ಬಿಡುಗಡೆಗೂ ಮುನ್ನ ಪರಿಸ್ಥಿತಿ ಗಂಭೀರವಾಗಿತ್ತು. ನಿರ್ಮಾಣ ಸಂಸ್ಥೆ ಹಣಕಾಸಿನ ಬಿಕ್ಕಟ್ಟಿನಿಂದ ಬಳಲುತ್ತಿದ್ದು, ವಿತರಕರಿಗೆ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ ಮೇ 14ರ ಪ್ರೀಮಿಯರ್ ಮತ್ತು ಮುಂಜಾನೆ ಶೋಗಳು ಕೊನೆ ಕ್ಷಣದಲ್ಲಿ ರದ್ದುಪಡಿಸಲಾಗಿತ್ತು.
ಇದಲ್ಲದೆ, ಇಳಯರಾಜ ಹೆಸರಿನ ಬಳಕೆ ಕುರಿತ ವಿವಾದವೂ ಚಿತ್ರತಂಡಕ್ಕೆ ತಲೆನೋವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳು ಹೆಚ್ಚಾದ ಬಳಿಕ ಚಿತ್ರತಂಡ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕಾಯಿತು. ಆದರೆ ಈ ಎಲ್ಲಾ ವಿವಾದಗಳನ್ನು ಹಿಂದಿಕ್ಕಿ ‘ಕರುಪ್ಪು’ ಈಗ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆಯುತ್ತಿದೆ.

