Home Blog Page 72

ಅಪ್ರಾಪ್ತ ಬಾಲಕನಿಂದ ಕಾರು ಚಾಲನೆ; ಬೈಕ್‌ಗೆ ಡಿಕ್ಕಿ, ಇಬ್ಬರಿಗೆ ಗಾಯ

ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬ ಕಾರು ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ನಗರದ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶನಿವಾರ ಸಂಜೆ 6.45ರ ಸುಮಾರಿಗೆ ಬಿಡಿಎ ಪಾರ್ಕ್ ಸಮೀಪ ಈ ಅಪಘಾತ ಸಂಭವಿಸಿದೆ. ಅಪ್ರಾಪ್ತ ಬಾಲಕ ಚಾಲನೆ ಮಾಡುತ್ತಿದ್ದ ಕಾರು, ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರಾದ ಅರುಣ್ ಕುಮಾರ್ ಹಾಗೂ ವಿನಯ್ ಗಾಯಗೊಂಡಿದ್ದಾರೆ.

ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಆದರೆ ಸ್ಥಳೀಯರು ತಕ್ಷಣವೇ ಕಾರನ್ನು ಅಡ್ಡಗಟ್ಟಿ ಚಾಲಕನನ್ನು ಹಿಡಿದಿದ್ದಾರೆ. ಬಳಿಕ ಆತ ಅಪ್ರಾಪ್ತ ಬಾಲಕ ಎಂಬುದು ತಿಳಿದುಬಂದಿದೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದು, ಅಪ್ರಾಪ್ತನಿಗೆ ವಾಹನ ನೀಡಿದ ಪೋಷಕರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಅಪ್ರಾಪ್ತ ಬಾಲಕ ಹಾಗೂ ಆತನ ಪೋಷಕರ ವಿರುದ್ಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್: ಹಣ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ!

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆಯಲು ಸರ್ಕಾರ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ.

ಮುಂದಿನ ತಿಂಗಳಿನಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಫಲಾನುಭವಿಗಳಿಗೆ ಬಯೋಮೆಟ್ರಿಕ್ ಕಡ್ಡಾಯವಾಗಲಿದೆ.

ಹೊಸ ನಿಯಮದ ಪ್ರಕಾರ, ಬಯೋಮೆಟ್ರಿಕ್ ಮಾಡಿಸದಿದ್ದರೆ ಪ್ರತಿ ತಿಂಗಳ 2,000 ರೂ. ಹಣ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. ಬಯೋಮೆಟ್ರಿಕ್ ನೋಂದಣಿಗೆ ಫಲಾನುಭವಿಗಳು 5 ರೂ. ಶುಲ್ಕ ಪಾವತಿಸಬೇಕಾಗುತ್ತದೆ.

ಇದರ ಜೊತೆಗೆ ಗೃಹಲಕ್ಷ್ಮಿ ಸೊಸೈಟಿಗೆ ಸದಸ್ಯತ್ವ ಪಡೆಯುವ ವ್ಯವಸ್ಥೆಯನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪರಿಚಯಿಸುತ್ತಿದ್ದು, ಸದಸ್ಯತ್ವ ಬಯಸುವವರು 1,250 ರೂ. ಪಾವತಿಸಬೇಕಾಗುತ್ತದೆ. ಆದರೆ ಸದಸ್ಯತ್ವ ಬೇಡ ಎಂದರೆ ಕೇವಲ ಬಯೋಮೆಟ್ರಿಕ್ ಮಾತ್ರ ಮಾಡಿಸಿಕೊಳ್ಳಬಹುದಾಗಿದೆ.

ಬಯೋಮೆಟ್ರಿಕ್ ಪ್ರಕ್ರಿಯೆ ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಸೇವಾಸಿಂಧು ಕೇಂದ್ರಗಳಲ್ಲಿ ನಡೆಯುವ ಸಾಧ್ಯತೆ ಇದೆ. ಒಂದು ಬಾರಿ ಬಯೋಮೆಟ್ರಿಕ್ ದಾಖಲಿಸಿದ ಬಳಿಕ ಫಲಾನುಭವಿಯ ಗುರುತಿನ ಆಧಾರದ ಮೇಲೆ ನೇರವಾಗಿ ಹಣ ಪಾವತಿ ಆಗಲಿದೆ.

ಬಯೋಮೆಟ್ರಿಕ್ ಮಾಡಲು ಫಲಾನುಭವಿಗಳು ಆಧಾರ್ ಕಾರ್ಡ್ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಲಾಕ್‌ಬಸ್ಟರ್ ಕಲೆಕ್ಷನ್ ನಡುವೆ ‘ಪೆದ್ದಿ’ ಚಿತ್ರಕ್ಕೆ ಸಂಕಷ್ಟ! ದಾಖಲಾಯ್ತು ದೂರು, ಆರೋಪ ಏನು?

ಹೈದರಾಬಾದ್: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ, ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ಬಿಗ್ ಬಜೆಟ್ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ‘ಪೆದ್ದಿ’ ಚಿತ್ರವು ಥಿಯೇಟರ್‌ಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಬಿಡುಗಡೆಯಾದ ಕೇವಲ 5 ದಿನಗಳಲ್ಲಿ ವಿಶ್ವಾದ್ಯಂತ ಸುಮಾರು 248.92 ಕೋಟಿ ರೂ. ಗಳಿಕೆ ದಾಖಲಿಸಿದ್ದು, ಭಾರತದಲ್ಲೇ 169.70 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದರೂ, ಅದರ ಜೊತೆಗೆ ಹಲವು ವಿವಾದಗಳಿಗೂ ಸಿಲುಕಿದೆ.

ಚಿತ್ರದಲ್ಲಿ ಬುಡಕಟ್ಟು ಸಮುದಾಯವನ್ನು ಅವಮಾನಕರವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಆಂಧ್ರಪ್ರದೇಶದ ಮಾನ್ಯಂ ಹಾಗೂ ವಿಜಯನಗರಂ ಜಿಲ್ಲೆಗಳಲ್ಲಿ ಬುಡಕಟ್ಟು ಜನಾಂಗದ ನಾಯಕರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸನಾ, ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಹಾಗೂ ಸಂಬಂಧಿತ ಸಂಭಾಷಣೆಗಳಿಗೆ ಅನುಮತಿ ನೀಡಿದ ಸೆನ್ಸಾರ್ ಮಂಡಳಿ ಸದಸ್ಯರ ವಿರುದ್ಧ SC/ST ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಬುಡಕಟ್ಟು ಸಂಘಟನೆಗಳು ಆಗ್ರಹಿಸಿವೆ.

ಇದಕ್ಕೂ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ನಾಯಕಿ ಜಾನ್ವಿ ಕಪೂರ್ ಅವರ ಪಾತ್ರದ ಚಿತ್ರಣದ ಬಗ್ಗೆ ಕೂಡ ಚರ್ಚೆ ಜೋರಾಗಿದೆ. ಅವರ ಉಡುಪುಗಳು ಮತ್ತು ಪಾತ್ರದ ನಿರೂಪಣೆಯ ರೀತಿ ಅಸಮರ್ಪಕವಾಗಿದೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

ಒಟ್ಟಿನಲ್ಲಿ, ಚಿತ್ರವು ಒಂದೆಡೆ ಭರ್ಜರಿ ಯಶಸ್ಸು ಸಾಧಿಸುತ್ತಿದ್ದರೆ, ಮತ್ತೊಂದೆಡೆ ವಿವಾದಗಳ ಸುತ್ತಲೂ ಸಿಲುಕಿಕೊಂಡಿದೆ.

ಉಕ್ಕು ಸ್ಥಾವರದಲ್ಲಿ ಅಗ್ನಿದುರಂತ: ಮೃತರ ಕುಟುಂಬಕ್ಕೆ 25 ಲಕ್ಷ ರೂ. ನೆರವು ಘೋಷಿಸಿದ ಕುಮಾರಸ್ವಾಮಿ!

ವಿಶಾಖಪಟ್ಟಣ: ಇಲ್ಲಿನ ರಾಷ್ಟ್ರೀಯ ಉಕ್ಕು ಸ್ಥಾವರದಲ್ಲಿ ನಡೆದ ಭೀಕರ ಕೈಗಾರಿಕಾ ಅವಘಡದಲ್ಲಿ 8 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ ಉಕ್ಕು ಕರಗಿಸುವ ಕೇಂದ್ರ ಸಂಖ್ಯೆ-1ರಲ್ಲಿ ದೊಡ್ಡ ಗಾತ್ರದ ಕರಗಿದ ಲೋಹವಿದ್ದ ಬಕೆಟ್ ಉರುಳಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಕೆಟ್ ಉರುಳುವ ಕೆಲವೇ ಕ್ಷಣಗಳ ಮೊದಲು ಸ್ಫೋಟ ಸಂಭವಿಸಿದ್ದು, ನಂತರ ಭಾರೀ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಹಾಗೂ ರಕ್ಷಣಾ ತಂಡಗಳು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಕನಿಷ್ಠ ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ., ಗಾಯಾಳುಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಮೃತರ ಕುಟುಂಬದ ಅರ್ಹ ಸದಸ್ಯರಿಗೆ ಉದ್ಯೋಗ ನೀಡಲಾಗುವುದು ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಕಾರ್ಖಾನೆ ಭರಿಸಲಿದೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ರಾಷ್ಟ್ರೀಯ ಪರಿಹಾರ ನಿಧಿಯಿಂದ ಘೋಷಿಸಿದ್ದಾರೆ.

ಈ ದುರಂತದ ಬಗ್ಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ.

ಉಕ್ಕು ಸ್ಥಾವರದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣವೇ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.

ತುಂಗಭದ್ರಾ ಜಲಾಶಯಕ್ಕೆ ಜೀವಕಳೆ: ಮುಂಗಾರು ಮಳೆಗೆ ಒಳಹರಿವು ಹೆಚ್ಚಳ

ಬಳ್ಳಾರಿ: ಕಲ್ಯಾಣ ಕರ್ನಾಟಕ ಹಾಗೂ ಆಂಧ್ರಪ್ರದೇಶ–ತೆಲಂಗಾಣದ ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಮುಂಗಾರು ಮಳೆಯ ಆರಂಭದಲ್ಲೇ ಒಳಹರಿವು ಹೆಚ್ಚಳವಾಗಿದೆ.

ತೀವ್ರ ಬೇಸಿಗೆಯಿಂದ ‘ಡೆಡ್ ಸ್ಟೋರೇಜ್’ ತಲುಪಿದ್ದ ಜಲಾಶಯ ಇದೀಗ ಮತ್ತೆ ಚೇತರಿಕೆ ಕಂಡಿದೆ.

ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 101 ಟಿಎಂಸಿ ಆಗಿದ್ದು, ಸದ್ಯ 10 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾನಯನ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರಿದರೆ ಈ ವರ್ಷ ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಕಳೆದ ವರ್ಷ ಬರಗಾಲದಿಂದ ನೀರಿನ ಕೊರತೆ ಎದುರಿಸಿದ್ದ ರೈತರಿಗೆ ಈ ಬಾರಿ ಮುಂಗಾರು ಆರಂಭದಲ್ಲೇ ಜಲಾಶಯಕ್ಕೆ ನೀರು ಹರಿದುಬರುತ್ತಿರುವುದು ಆಶಾದಾಯಕವಾಗಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳು ಹಾಗೂ ಆಂಧ್ರ–ತೆಲಂಗಾಣ ಗಡಿ ಭಾಗದ ರೈತರಲ್ಲಿ ಸಂತಸ ಮೂಡಿದೆ.

ಮಲೆನಾಡು ಭಾಗದಲ್ಲಿ ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ಜಲಾನಯನ ಪ್ರದೇಶಗಳಿಂದ ಒಳಹರಿವು ಹೆಚ್ಚಾಗಿದ್ದು, ಮುಂಬರುವ ಬಿತ್ತನೆ ಹಾಗೂ ಕೃಷಿ ಚಟುವಟಿಕೆಗಳಿಗೆ ಇದು ದೊಡ್ಡ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರು ನಗರದಲ್ಲಿ ಭರ್ಜರಿ ಟ್ರ್ಯಾಪ್: ಇಬ್ಬರು ಅಧಿಕಾರಿಗಳು ಲೋಕಾಯುಕ್ತ ವಶಕ್ಕೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಭ್ರಷ್ಟ ಅಧಿಕಾರಿಗಳನ್ನು ಲಂಚದ ಹಣ ಸಹಿತ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದ ಉಪ ಮುಖ್ಯ ವಿದ್ಯುತ್ ನಿರೀಕ್ಷಕ ಸಿದ್ದಪ್ಪ ಅವರು ಅಪಾರ್ಟ್‌ಮೆಂಟ್ ಪರಿಶೀಲನೆ ವರದಿ ನೀಡಲು 20,000 ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದ ಆರೋಪದಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರುದಾರರಾದ ರಘುರಾಜ್ ಹಾಗೂ ನಾಗರಾಜ್ ಅವರು ಲೋಕಾಯುಕ್ತ ಪೊಲೀಸರಿಗೆ ನೀಡಿದ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ.

ಲೋಕಾಯುಕ್ತ ಯೋಜನೆಯಂತೆ ದೂರುದಾರರು ಅಧಿಕಾರಿ ಸಿದ್ದಪ್ಪ ಅವರಿಗೆ ಹಣ ಹಸ್ತಾಂತರಿಸುತ್ತಿದ್ದ ವೇಳೆ ದಾಳಿ ನಡೆಸಿದ ಅಧಿಕಾರಿಗಳು ಅವರನ್ನು ಸ್ಥಳದಲ್ಲೇ ಬಂಧಿಸಿದ್ದಾರೆ. ಲಂಚದ ಹಣವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ನಾಗರಭಾವಿಯಲ್ಲಿರುವ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಎಂ.ಎಸ್. ವಾಣಿಶ್ರೀ ಕೂಡ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮೊಬೈಲ್ ಆಕ್ಸೆಸರೀಸ್ ಪ್ಯಾಕೇಜಿಂಗ್ ಪರವಾನಗಿ ನೀಡಲು 10,000 ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಇದೆ.

ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ತಂಡ ಕಚೇರಿಗೆ ದಾಳಿ ನಡೆಸಿ, ಮೊದಲ ಕಂತಿನ 5,000 ರೂಪಾಯಿ ಲಂಚದ ಹಣ ಸಹಿತ ಅಧಿಕಾರಿಯನ್ನು ವಶಕ್ಕೆ ಪಡೆದಿದೆ.

ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಮುಂದುವರಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ವರುಣನ ಅಬ್ಬರ: ಚಿಕ್ಕಮಗಳೂರು ಸೇರಿ 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ನೈಋತ್ಯ ಮುಂಗಾರು ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮಳೆಯ ಅಬ್ಬರ ಜೋರಾಗಿದೆ.

ಚಿಕ್ಕಮಗಳೂರು ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ 5 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮುಂದಿನ ಮೂರು ದಿನಗಳ ಕಾಲ ಈ ಭಾಗಗಳಲ್ಲಿ ಪ್ರಕೃತಿ ವಿಕೋಪದ ಸಾಧ್ಯತೆ ಇರುವುದರಿಂದ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬೆಳಗಾವಿ, ಧಾರವಾಡ, ಹಾವೇರಿ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಇಲ್ಲಿ ಸಹ ಭಾರೀ ಮಳೆಯ ಸಾಧ್ಯತೆ ಇದೆ. ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೈ ಅಲರ್ಟ್ ಘೋಷಿಸಿದ್ದಾರೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ ತೀರ ಮತ್ತು ತಗ್ಗು ಪ್ರದೇಶಗಳಿಗೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಪರಿಸ್ಥಿತಿ ನಿಭಾಯಿಸಲು ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ತುರ್ತು ಸೇವಾ ಸಿಬ್ಬಂದಿ ಕೇಂದ್ರ ಸ್ಥಾನದಲ್ಲೇ ಇರಲು ಜಿಲ್ಲಾಡಳಿತ ಆದೇಶಿಸಿದೆ. ಜೊತೆಗೆ ಡಿಸಿ ಹಾಗೂ ಎಸ್‌ಪಿ ಕಚೇರಿಗಳಲ್ಲಿ 24×7 ಹೆಲ್ಪ್‌ಲೈನ್ ಆರಂಭಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ 08262-238950 ಅಥವಾ 9480805100 ಸಂಖ್ಯೆಗೆ ಸಂಪರ್ಕಿಸಲು ಸೂಚಿಸಲಾಗಿದೆ.

ಸಾರಿಗೆ ಬಸ್ ಹಿಂಬದಿ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸ್ಥಳದಲ್ಲೇ ಸಾವು! ಆತ್ಮಹತ್ಯೆಯೋ, ಅಪಘಾತವೋ? ಚಾಲಕನಿಗಾಗಿ ತೀವ್ರ ಶೋಧ

ಗದಗ:- ಸಾರಿಗೆ ಬಸ್ ನ ಹಿಂಬದಿ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಗದಗ ನಗರದಲ್ಲಿ ಜರುಗಿದೆ.

ಹೊಸ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ನಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗದಗದಿಂದ ಗಜೇಂದ್ರಗಡಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಹಾದು ಹೋಗುತ್ತಿದ್ದ ವೇಳೆ, ಬೈಕ್ ನಿಲ್ಲಿಸಿದ ವ್ಯಕ್ತಿ ಆಕಸ್ಮಿಕವಾಗಿ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿಕೊಂಡಿದ್ದಾನೆ. ಪರಿಣಾಮವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಬಸ್ ಹಾಗೂ ಸಂಬಂಧಿತ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.

ಅಪಘಾತದ ಬಗ್ಗೆ ಸ್ಪಷ್ಟತೆ ಪಡೆಯಲು ಟ್ರಾಫಿಕ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಅಪಘಾತವೋ ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಯುತ್ತಿದೆ.

ಘಟನೆ ಸಂಬಂಧ ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.

ಬಿತ್ತನೆ ಕಾಲದಲ್ಲೇ ರೈತರಿಗೆ ತ್ರಿವಳಿ ಸಂಕಷ್ಟ!

ವಿಜಯಸಾಕ್ಷಿ ಸುದ್ದಿ, ರೋಣ: ಮುಂಗಾರು ಹಂಗಾಮಿನ ಆರಂಭದಲ್ಲೇ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಡೀಸೆಲ್ ಕೊರತೆ ಎದುರಾಗಿರುವುದರಿಂದ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಸೋಮವಾರ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ರೈತ ಸಂಘದ ಮುಖಂಡ ಶಿವಲಿಂಗಪ್ಪ ಬೋಪಳಾಪೂರ, ರೋಹಿಣಿ ಮಳೆಯ ಅವಧಿ ಮುಗಿದರೂ ಸರ್ಕಾರ ಸಮರ್ಪಕವಾಗಿ ಬೀಜ ಮತ್ತು ಗೊಬ್ಬರ ದಾಸ್ತಾನು ಮಾಡದಿರುವುದರಿಂದ ಬಿತ್ತನೆ ಕಾರ್ಯ ಹಿನ್ನಡೆ ಅನುಭವಿಸುತ್ತಿದೆ ಎಂದು ಆರೋಪಿಸಿದರು.

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೀಜ, ಗೊಬ್ಬರ ಮತ್ತು ಡೀಸೆಲ್ ಸಮರ್ಪಕವಾಗಿ ದೊರೆಯದಿದ್ದರೆ ಅದರ ನೇರ ಪರಿಣಾಮ ಆಹಾರ ಉತ್ಪಾದನೆ ಮೇಲೆಯೇ ಬೀಳಲಿದೆ. ಇಂದಿನ ಕೃಷಿ ಬಹುತೇಕ ಯಾಂತ್ರೀಕೃತವಾಗಿದ್ದು, ಡೀಸೆಲ್ ಕೊರತೆಯಿಂದ ಟ್ರ್ಯಾಕ್ಟರ್ ಹಾಗೂ ಕೃಷಿ ಯಂತ್ರಗಳ ಬಳಕೆ ಅಸ್ತವ್ಯಸ್ತವಾಗುತ್ತಿದೆ ಎಂದು ಅವರು ಹೇಳಿದರು.

ತಾಲೂಕು ಅಧ್ಯಕ್ಷ ಸಂಗಣ್ಣ ಪವಾಡಶೆಟ್ಟಿ ಮಾತನಾಡಿ, ಟ್ರ್ಯಾಕ್ಟರ್ ತಂದರೆ ಮಾತ್ರ ಡೀಸೆಲ್ ನೀಡುತ್ತಿರುವ ಪೆಟ್ರೋಲ್ ಬಂಕ್‌ಗಳ ಕ್ರಮ ರೈತರಿಗೆ ಮತ್ತಷ್ಟು ಹೊರೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಳ್ಳಿಗಳಿಂದ ಟ್ರ್ಯಾಕ್ಟರ್ ತಂದು ಡೀಸೆಲ್ ತುಂಬಿಸಿಕೊಂಡರೆ ನೂರಾರು ರೂಪಾಯಿ ವ್ಯರ್ಥವಾಗುತ್ತದೆ. ರೈತರು ಕ್ಯಾನ್‌ನಲ್ಲಿ ಡೀಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕು. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡ ಮೇಘರಾಜ ಭಾವಿ ಮಾತನಾಡಿ, ತಾಲೂಕಿನ ಹಲವು ಗೊಬ್ಬರ ಮಾರಾಟಗಾರರು ನಿಗದಿತ ದರಕ್ಕಿಂತ ಹೆಚ್ಚು ಬೆಲೆಯಲ್ಲಿ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ ಎಂದರು.

ಗೊಬ್ಬರ ಅಂಗಡಿಗಳಲ್ಲಿ ದರಪಟ್ಟಿ ಕಡ್ಡಾಯವಾಗಿ ಪ್ರಕಟಿಸಬೇಕು. ಕಳೆದ ವರ್ಷದ ಅತಿವೃಷ್ಟಿಯಿಂದಲೇ ರೈತರು ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಈ ವೇಳೆ ಸಂಗಣ್ಣ ದಂಡಿನ, ಬಸವರಾಜ ಹೊಸಮನಿ, ಶಾಂತವೀರಯ್ಯ ಬೆನಹಾಳ, ಶರಣಪ್ಪ ಚನ್ನಪ್ಪಗೌಡ್ರ, ಬಸನಗೌಡ ಚೆನ್ನಪ್ಪಗೌಡ, ಕಾವ್ಯ ಸೋಮನಕಟ್ಟಿ, ಮಲ್ಲಪ್ಪ ಯಂಡಿಗೇರಿ, ಮೈಲಾರಪ್ಪ ಚವಡಿ, ಕಳಕಪ್ಪ ನೀರಲೋಟ, ರೈಮಾನಸಾಬ ಬಾಲೇಸಾಬನವರ, ಉಮೇಶ ಮುಗುಳಿ, ಬಸವರಾಜ ಬ್ಯಾಳಿ, ಬಸನಗೌಡ ಮುದಿಬಸನಗೌಡ, ಯಲ್ಲಪ್ಪ ಹಡಗಲಿ, ಮಲ್ಲಪ್ಪ ಚಳಗೇರಿ, ರಮೇಶ ಚನ್ನಪ್ಪಗೌಡ್ರ, ಈರಪ್ಪ ಯತ್ನಳ್ಳಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

“ಬಿತ್ತನೆ ಸಮಯದಲ್ಲೇ ರೈತರಿಗೆ ಬೀಜ, ಗೊಬ್ಬರ, ಡೀಸೆಲ್ ಕೊರತೆ ಎದುರಾದರೆ ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆ ಮೇಲೆಯೇ ದೊಡ್ಡ ಹೊಡೆತ ಬೀಳಲಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು”

ಶಿವಲಿಂಗಪ್ಪ ಬೋಪಳಾಪೂರ

ರೈತ ಸಂಘದ ಮುಖಂಡ

“ರೈತರಿಗೆ ಡೀಸೆಲ್ ಪೂರೈಕೆಯಲ್ಲಿ ಅನಗತ್ಯ ನಿಯಮ ಹೇರಿಕೆ ಮಾಡಬಾರದು. ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ಅನಿವಾರ್ಯ”

ಸಂಗಣ್ಣ ಪವಾಡಶೆಟ್ಟಿ

ತಾಲೂಕು ಅಧ್ಯಕ್ಷ

60 ವರ್ಷದ “ಅಸ್ತಮಾ ಯಜ್ಞ”ಕ್ಕೆ ಭಾರೀ ಜನಸ್ತೋಮ: ಲಕ್ಷ್ಮೇಶ್ವರದಲ್ಲಿ ಆಯುರ್ವೇದದ ಮಹೋತ್ಸವ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆರು ದಶಕಗಳಿಂದ ಅಸ್ತಮಾ ರೋಗಿಗಳಿಗೆ ಉಚಿತ ಆಯುರ್ವೇದ ಔಷಧಿ ವಿತರಿಸುತ್ತಿರುವ ಲಕ್ಷ್ಮೇಶ್ವರದ ಐತಿಹಾಸಿಕ “ಅಸ್ತಮಾ ಯಜ್ಞ” ಈ ವರ್ಷವೂ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೋಗಿಗಳು ಹಾಗೂ ಸಾರ್ವಜನಿಕರ ಭಾರೀ ಜನಸ್ತೋಮ ಕಾರ್ಯಕ್ರಮದ ವಿಶೇಷತೆ ಆಗಿತ್ತು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ.1ರ ಆವರಣದಲ್ಲಿ ಸೋಮವಾರ ನಡೆದ 60ನೇ ವರ್ಷದ ಅಸ್ತಮಾ ಯಜ್ಞ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕುಂದಗೋಳದ ಶ್ರೀ ಬಸವಣ್ಣಜ್ಜನವರು, ದಿವಂಗತ ವೈದ್ಯ ಬಾಬುರಾವ್ ಕುಲಕರ್ಣಿ ಅವರ ಸೇವಾ ಮನೋಭಾವವನ್ನು ಕೊಂಡಾಡಿದರು.

ಆಯುರ್ವೇದ ಔಷಧಿ ಪುರಾತನ ಕಾಲದಿಂದಲೂ ಜನಜೀವನದ ಭಾಗವಾಗಿದ್ದು, ಗಿಡಮೂಲಿಕೆಗಳಿಂದ ನೀಡುವ ಚಿಕಿತ್ಸೆ ಮೂಲಕ ಸಾವಿರಾರು ಜನರು ಗುಣಮುಖರಾಗಿದ್ದಾರೆ. ಇಂತಹ ಔಷಧಿಯ ಮೂಲಕ ಲಕ್ಷ್ಮೇಶ್ವರ ಪಟ್ಟಣದ ಕೀರ್ತಿಯನ್ನು ರಾಜ್ಯಾದ್ಯಂತ ಹರಡಿಸಿದ ದಿ. ವೈದ್ಯ ಬಾಬುರಾವ್ ಕುಲಕರ್ಣಿ ಅವರ ಸೇವೆ ಸದಾ ಸ್ಮರಣೀಯ ಎಂದು ಅವರು ಹೇಳಿದರು.

ಯಾವುದೇ ಫಲಾಪೇಕ್ಷೆಯಿಲ್ಲದೆ 60 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ ವಿತರಿಸುತ್ತಿರುವುದು ಈ ಭಾಗದ ಹೆಮ್ಮೆಯ ಸಂಗತಿ. ಕಾರ್ಯಕ್ರಮಕ್ಕೆ ಹರಿದು ಬಂದಿರುವ ಜನಸ್ತೋಮವೇ ಈ ಔಷಧಿಯ ಮೇಲಿನ ನಂಬಿಕೆ ಮತ್ತು ಮಹತ್ವವನ್ನು ತೋರಿಸುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಪಿಎಸ್‌ಐ ನಾಗರಾಜ ಗಡದ ಮಾತನಾಡಿ, ಮೃಗಶಿರಾ ಮಳೆಯ ನಕ್ಷತ್ರದ ಸಂದರ್ಭದಲ್ಲಿ ನೀಡಲಾಗುವ ಈ ಔಷಧಿಯಿಂದ ಲಕ್ಷಾಂತರ ಜನರು ಪರಿಹಾರ ಕಂಡುಕೊಂಡಿದ್ದಾರೆ ಎಂದರು.

ಮೃಗಶಿರಾ ನಕ್ಷತ್ರದ ಸಂದರ್ಭದಲ್ಲಿ ವಾತಾವರಣದಲ್ಲಿ ಉಂಟಾಗುವ ಬದಲಾವಣೆ ಹಾಗೂ ಆಯುರ್ವೇದ ಔಷಧಿಯ ಗುಣಗಳಿಂದ ಈ ಚಿಕಿತ್ಸೆಗೆ ವಿಶೇಷ ಮಹತ್ವ ಬಂದಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಸರ್ಪಭೂಷಣ ಮಹಾಸ್ವಾಮಿಗಳು, ಅಮೋಘಿಮಠದ ಶ್ರೀಗಳು ಉಪಸ್ಥಿತರಿದ್ದರು. ಹುಬ್ಬಳ್ಳಿ ಆಯುರ್ವೇದಿಕ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಬಿ. ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ಪಲ್ಲಣ್ಣನವರು ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಡಾ. ಹರೀಶ ಕುಲಕರ್ಣಿ, ವ್ಹಿ.ಜಿ. ಪಡಗೇರಿ, ನಿಂಗಪ್ಪ ಬನ್ನಿ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಗೋಪಾಲ ಪಡ್ನೀಸ್, ನಿಂಗಪ್ಪ ತಹಸೀಲ್ದಾರ, ಅನಿಲ ಕುಲಕರ್ಣಿ, ಎಂ.ಆರ್. ಪಾಟೀಲ, ಡಾ. ಮಂಗಸೂಳಿ, ಶಂಕ್ರಪ್ಪ ತಹಸೀಲ್ದಾರ ಹಾಗೂ ಮಂತ್ರಾಲಯ ಪಾದಯಾತ್ರಾ ಸಂಘದ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೃಷ್ಣ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಡಿ.ಎಂ. ಪೂಜಾರ ವಂದಿಸಿದರು.

“ಸಮಾಜ ಸೇವೆಯ ಮನೋಭಾವ ಎಲ್ಲರಲ್ಲೂ ಬರೋದಿಲ್ಲ. ದಿ. ವೈದ್ಯ ಬಾಬುರಾವ್ ಕುಲಕರ್ಣಿ ಅವರು 60 ವರ್ಷಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಅಸ್ತಮಾ ರೋಗಿಗಳಿಗೆ ಔಷಧಿ ನೀಡುತ್ತಿರುವುದು ನಿಜಕ್ಕೂ ಮಾದರಿಯ ಸೇವೆ”

ಕುಂದಗೋಳದ ಶ್ರೀ ಬಸವಣ್ಣಜ್ಜನವರು

“ಮೃಗಶಿರಾ ನಕ್ಷತ್ರದಲ್ಲಿ ನೀಡುವ ಈ ಔಷಧಿಯಿಂದ ಲಕ್ಷಾಂತರ ಜನರು ಗುಣಮುಖರಾಗಿದ್ದಾರೆ. ಇಲ್ಲಿನ ಜನಸ್ತೋಮವೇ ಅದರ ಮಹತ್ವಕ್ಕೆ ಸಾಕ್ಷಿ”

ಪಿಎಸ್‌ಐ ನಾಗರಾಜ ಗಡದ

error: Content is protected !!