Home Blog Page 75

ರೀಲ್ಸ್‌ಗಾಗಿ ಕೋರ್ಟ್ ಅವಮಾನಿಸಬೇಡಿ! – ಪುನೀತ್ ಕೆರೆಹಳ್ಳಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್

0

ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ಪೊಲೀಸರನ್ನು ಪ್ರಶ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆದರೆ ಕೋರ್ಟ್ ಆದೇಶದ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರನ್ನು ನಿಂದಿಸಿದ್ದಕ್ಕಾಗಿ ಪುನೀತ್ ಕೆರೆಹಳ್ಳಿಗೆ ನ್ಯಾಯಾಲಯ ತೀವ್ರ ಎಚ್ಚರಿಕೆ ನೀಡಿದೆ.

ಚನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ರದ್ದತಿಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಪ್ರಕರಣದಲ್ಲಿ ಪೊಲೀಸರ ನಡೆಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿ, ತಾತ್ಕಾಲಿಕ ತಡೆ ನೀಡಿತು.

ಆದರೆ ಇದೇ ವೇಳೆ, ನಿನ್ನೆ ಕೋರ್ಟ್ ತಡೆ ನೀಡಿದ ನಂತರ ಪುನೀತ್ ಕೆರೆಹಳ್ಳಿ ಫೇಸ್‌ಬುಕ್ ಮತ್ತು ರೀಲ್ಸ್ ಮೂಲಕ ಪೊಲೀಸರ ವಿರುದ್ಧ ಹೇಳಿಕೆ ನೀಡಿರುವುದನ್ನು ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್ ನ್ಯಾಯಾಲಯದ ಗಮನಕ್ಕೆ ತಂದರು.

ಈ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯ, “ಸಬ್ ಜುಡೀಸ್ ಪ್ರಕರಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವುದು ಸರಿಯಲ್ಲ. ರೀಲ್ಸ್, ಲೈಕ್‌ಗಳಿಗಾಗಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ”
ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ನ್ಯಾಯಾಲಯವು ಬಾಕಿ ಪ್ರಕರಣದ ಬಗ್ಗೆ ಯಾವುದೇ ಸಾಮಾಜಿಕ ಜಾಲತಾಣ ಪೋಸ್ಟ್ ಮಾಡದಂತೆ ಸೂಚಿಸಿ, ಡಿಸಿಪಿ ಮುಂದೆ ಹಾಜರಾಗಿ ಬಾಂಡ್ ಸಲ್ಲಿಸುವಂತೆ ಪುನೀತ್ ಕೆರೆಹಳ್ಳಿಗೆ ಆದೇಶ ನೀಡಿದೆ. ಅಕ್ರಮ ವಲಸಿಗರ ಬಗ್ಗೆ ಮಾತನಾಡುವುದೇ ತಪ್ಪಲ್ಲ, ಆದರೆ ಅದರ ಶೈಲಿ ಮತ್ತು ವಿಧಾನ ಕಾನೂನಿನ ಚೌಕಟ್ಟಿನಲ್ಲಿ ಇರಬೇಕು ಎಂದು ಹೈಕೋರ್ಟ್ ಸ್ಪಷ್ಟ ಸಂದೇಶ ನೀಡಿದೆ.

ಲಕ್ಕುಂಡಿ ನೆಲದೊಳಗೆ ಇತಿಹಾಸದ ನಿಧಿ?: ಪ್ರಾಮಾಣಿಕತೆಗೆ ರಿತ್ತಿ ಕುಟುಂಬಕ್ಕೆ ಶ್ಲಾಘನೆ, ಕೇಂದ್ರದಿಂದ ಸಹಾಯ ಭರವಸೆ

0

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ್ ಮಹತ್ವದ ಹೇಳಿಕೆ ನೀಡಿ, ಐತಿಹಾಸಿಕ ಊರಿನ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ತಮ್ಮ ಬದ್ಧತೆ ವ್ಯಕ್ತಪಡಿಸಿದ್ದಾರೆ. ಲಕ್ಕುಂಡಿ ಅನೇಕರ ರಾಜಧಾನಿಯಾಗಿದ್ದ ಕಾರಣ, ಭೂಮಿ ಅಗೆಯುವಾಗ ನಗ, ನಾಣ್ಯಗಳು ಹಾಗೂ ಪ್ರಾಚ್ಯಾವಶೇಷಗಳು ಸಿಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಮಣ್ಣಿನ ಪದರಗಳಲ್ಲಿ ಸಿಗುವ ಆಧಾರಗಳ ಮೂಲಕ ಆಯಾ ಕಾಲಘಟ್ಟದ ಇತಿಹಾಸವನ್ನು ಗುರುತಿಸಬಹುದು. ಆದರೆ ಇಂದಿನ ಕಾಲದಲ್ಲಿ ಜನರು ನಿಧಿ ಹುಡುಕಿ ಕಳ್ಳತನ ಮಾಡುವ ಘಟನೆಗಳು ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇಂತಹ ಸಂದರ್ಭದಲ್ಲಿ ರಿತ್ತಿ ಕುಟುಂಬ ಪ್ರಾಮಾಣಿಕತೆಯಿಂದ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿರುವುದು ಶ್ಲಾಘನೀಯ ಎಂದು ಗದ್ದಿಗೌಡರ್ ಅಭಿನಂದನೆ ಸಲ್ಲಿಸಿದರು.

ಕೇಂದ್ರ ಸರ್ಕಾರದ ವತಿಯಿಂದ ಹಾಗೂ ವೈಯಕ್ತಿಕವಾಗಿ ರಿತ್ತಿ ಕುಟುಂಬಕ್ಕೆ ಸಹಾಯ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಲಕ್ಕುಂಡಿಯಂತಹ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣ ಲಭ್ಯವಾಗಲಿದೆ. ಸ್ಮಾರಕಗಳು ಹಾಳಾಗದಂತೆ ಕಾಯ್ದುಕೊಳ್ಳಲು ಹಾಗೂ ರಕ್ಷಣೆ ಮಾಡಲು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಲಕ್ಕುಂಡಿ ನನ್ನ ಲೋಕಸಭಾ ಕ್ಷೇತ್ರದ ಅತ್ಯಂತ ಪ್ರಮುಖ ಹಳ್ಳಿ. ಈ ಊರಿನ ಬಗ್ಗೆ ನನಗೆ ವಿಶೇಷ ಗೌರವವಿದೆ. ಲಕ್ಕುಂಡಿಗೆ ವಿಶ್ವ ಪಾರಂಪರಿಕ ಸ್ಥಾನಮಾನ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತೇನೆ ಎಂದು ಸಂಸದರು ಹೇಳಿದರು.

ಈ ಸಂದರ್ಭದಲ್ಲೇ ಸ್ಥಳೀಯರು ಕೋಟೆ ವೀರಭದ್ರೇಶ್ವರ ದೇವರ ಜಾತ್ರೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಮಾರ್ಚ್ 30 ಮತ್ತು 31ರಂದು ನಡೆಯುವ ಜಾತ್ರೆಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಲ್ಲಂಗಡಿ ಲಾರಿಯಲ್ಲಿ ಸ್ಫೋಟಕಗಳ ಸಾಗಣೆ: ಪಾಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆತಂಕ, ಚಾಲಕ ವಶಕ್ಕೆ

0

ಪಾಲಕ್ಕಾಡ್: ವಲಯಾರ್–ವಡಕ್ಕಂಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಣು ಸಾಗಿಸುತ್ತಿದ್ದ ಲಾರಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ಕೇರಳ–ತಮಿಳುನಾಡು ಗಡಿಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಪರಪಟ್ಟಿ ಮೂಲದ ಲಾರಿ ಚಾಲಕ ಸೆಂಥಿಲ್ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬುಧವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಪಾಲಕ್ಕಾಡ್ ಸರ್ಕಾರಿ ವೈದ್ಯಕೀಯ ಕಾಲೇಜು ಸಮೀಪದ ಸರ್ವೀಸ್ ರಸ್ತೆಯಲ್ಲಿ ಲಾರಿಯನ್ನು ತಪಾಸಣೆ ನಡೆಸಿದಾಗ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿದೆ. ಲಾರಿಯ ಮೇಲೆ ರಾಶಿಯಾಗಿ ತುಂಬಿದ್ದ ಕಲ್ಲಂಗಡಿ ಹಣ್ಣುಗಳನ್ನು ತೆರವುಗೊಳಿಸಿ ಪರಿಶೀಲಿಸಿದ ವೇಳೆ, 100ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಜಿಲೆಟಿನ್ ಸ್ಟಿಕ್‌ಗಳು ಹಾಗೂ ಡಿಟೋನೇಟರ್‌ಗಳು ಪತ್ತೆಯಾಗಿವೆ.

ಪ್ರಾಥಮಿಕ ವಿಚಾರಣೆಯಲ್ಲಿ ಈ ಸ್ಫೋಟಕಗಳನ್ನು ತ್ರಿಶೂರ್ಗೆ ಸಾಗಿಸಲಾಗುತ್ತಿತ್ತು ಎಂದು ಚಾಲಕ ಸೆಂಥಿಲ್ ಕುಮಾರ್ ತಿಳಿಸಿದ್ದಾನೆ. ಮಾಹಿತಿ ದೊರಕುತ್ತಿದ್ದಂತೆಯೇ ದಕ್ಷಿಣ ಪೊಲೀಸ್ ಇನ್ಸ್ಪೆಕ್ಟರ್ ವಿಪಿನ್ ಕುಮಾರ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದ್ದು, ಬಾಂಬ್ ನಿಷ್ಕ್ರಿಯ ದಳವನ್ನು ಕೂಡ ಸ್ಥಳಕ್ಕೆ ಕರೆಸಲಾಗಿದೆ.

ಚಾಲಕನ ವಿಚಾರಣೆ ಮುಂದುವರೆದಿದ್ದು, ಸ್ಫೋಟಕಗಳ ಮೂಲ, ಉದ್ದೇಶ ಹಾಗೂ ಇದಕ್ಕೆ ಸಂಬಂಧಿಸಿದ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ವಿಚಾರಣೆ ನಂತರವೇ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಕಳೆದ ವರ್ಷ ಪಾಲಕ್ಕಾಡ್ ಮತ್ತು ಕೊಯಮತ್ತೂರು ಪೊಲೀಸರು ತಮಿಳುನಾಡಿನಿಂದ ಕೇರಳಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದ್ದ 40,000ಕ್ಕೂ ಹೆಚ್ಚು ಜಿಲೆಟಿನ್‌ಗಳು ಹಾಗೂ 5,000ಕ್ಕೂ ಹೆಚ್ಚು ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದರು. ಇತ್ತೀಚಿನ ಘಟನೆ ಗಡಿ ಪ್ರದೇಶಗಳಲ್ಲಿ ಸ್ಫೋಟಕ ಕಳ್ಳಸಾಗಣೆ ಪ್ರಕರಣಗಳು ಮತ್ತೆ ತಲೆಎತ್ತುತ್ತಿರುವ ಆತಂಕವನ್ನು ಹೆಚ್ಚಿಸಿದೆ.

ಸಾಲದ ಬಾಧೆಯಿಂದ ಮನನೊಂದು ರೈತ ವಿಷ ಸೇವಿಸಿ ಆತ್ಮಹತ್ಯೆ..!

0

ಹಗರಿಬೊಮ್ಮನಹಳ್ಳಿ: ಸಾಲದ ಬಾಧೆಯಿಂದ ಮನನೊಂದು ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನೆಲ್ಕುದ್ರಿ 2ನೇ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು ಎಸ್. ಶರೀಫ್ ವಲಿ (48) ಎಂದು ಗುರುತಿಸಲಾಗಿದೆ.

ಮೃತ ಶರೀಫ್ ವಲಿ ಸುಮಾರು 3 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ನೀರಾವರಿ ನಿರೀಕ್ಷೆಯೊಂದಿಗೆ ಹತ್ತಾರು ಬೆಳೆಗಳನ್ನು ಬೆಳೆದಿದ್ದರು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಪೂರೈಕೆಯಾಗದೇ, ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗದ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು.

ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭಿಸದೆ ಅವರು ನಿರಂತರ ಚಿಂತೆಯಲ್ಲಿದ್ದರು. ಇದಲ್ಲದೆ, ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು 3 ಲಕ್ಷ ರೂ. ಸಾಲ ಹಾಗೂ ಕೈಗಡ ಸಾಲವೂ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಮನನೊಂದು ಬುಧವಾರ ಸಂಜೆ ತಮ್ಮದೇ ಹೊಲದಲ್ಲಿ ಶರೀಫ್ ವಲಿ ಕ್ರಿಮಿನಾಶಕ ಸೇವಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ತಕ್ಷಣ ಹಗರಿಬೊಮ್ಮನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ರು ಕೂಡ ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಈ ಘಟನೆ ಇಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಜೈಲುಗಳಲ್ಲಿ ರಾಜಾತಿಥ್ಯಕ್ಕೆ ಬ್ರೇಕ್: ಸಿಬ್ಬಂದಿ ವರ್ಗಾವಣೆ ಮೂಲಕ ಅಕ್ರಮ ಜಾಲ ಮುರಿಯಲು ಡಿಜಿಪಿ ಅಲೋಕ್ ಕುಮಾರ್ ಪ್ಲಾನ್

0

ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಖೈದಿಗಳಿಗೆ ನೀಡಲಾಗುತ್ತಿದ್ದ ರಾಜಾತಿಥ್ಯ ಹಾಗೂ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ವರ್ಷಾನುಗಟ್ಟಲೆ ಒಂದೇ ಜೈಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಮೂಲಕ ಜೈಲು ವ್ಯವಸ್ಥೆಯನ್ನು ಶುದ್ಧೀಕರಿಸಲು ಇಲಾಖೆ ಮುಂದಾಗಿದೆ.

ಜೈಲು ಸಿಬ್ಬಂದಿ ಹಣ ಪಡೆದು ಖೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ. ವಿಶೇಷವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ಬೆಳವಣಿಗೆಗಳು ಡಿಜಿಪಿ ಅಲೋಕ್ ಕುಮಾರ್ ಅವರ ಗಮನ ಸೆಳೆದಿವೆ.

ಇದೇ ತಿಂಗಳ 9ರಿಂದ ಕೇಂದ್ರ ಕಾರಾಗೃಹ ಕಚೇರಿಯಲ್ಲಿ ಜೈಲು ಸಿಬ್ಬಂದಿಗೆ ಕೌನ್ಸೆಲಿಂಗ್ ನಡೆಸಿ, ಹಂತ ಹಂತವಾಗಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಮುಹೂರ್ತ ನಿಗದಿಪಡಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವರ್ಷಗಳಿಂದ ಒಂದೇ ಕಡೆ ನಿಯೋಜನೆಗೊಂಡಿರುವ ಸಿಬ್ಬಂದಿಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ.

ಇನ್ನು ಬೇರೆ ಜೈಲುಗಳಿಂದ OOD (ಔಟ್ ಆಫ್ ಡಿಪ್ಯುಟೇಶನ್) ಮೇಲೆ ಬಂದಿರುವ ಅಧಿಕಾರಿಗಳಿಗೂ ವರ್ಗಾವಣೆಯ ಭೀತಿ ಎದುರಾಗುವ ಸಾಧ್ಯತೆ ಇದೆ. ಸಿಬ್ಬಂದಿಗಳನ್ನು ನಿಯಮಿತವಾಗಿ ಬದಲಾವಣೆ ಮಾಡುವುದರಿಂದ ಜೈಲುಗಳ ಒಳಗಿನ ಅಕ್ರಮ ಜಾಲವನ್ನು ಮುರಿಯಬಹುದು ಹಾಗೂ ಶಿಸ್ತಿನ ಆಡಳಿತ ವ್ಯವಸ್ಥೆ ಜಾರಿಗೊಳಿಸಬಹುದು ಎಂಬುದು ಡಿಜಿಪಿ ಅವರ ಉದ್ದೇಶವಾಗಿದೆ.

ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಜೈಲುಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗುತ್ತಿದ್ದು, ಈ ಸರಣಿ ವರ್ಗಾವಣೆಗಳು ಜೈಲು ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ನಿರೀಕ್ಷೆ ಮೂಡಿಸಿದೆ.

Bomb Threat: ಬೆಂಗಳೂರಿನ ಇಟಲಿ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ!

0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಹುಸಿ ಬಾಂಬ್ ಬೆದರಿಕೆ ಪ್ರಕರಣ ಬೆಳಕಿಗೆ ಬಂದಿದೆ. ಹಲಸೂರು ಪ್ರದೇಶದಲ್ಲಿರುವ ಇಟಲಿ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿರುವುದು ಪತ್ತೆಯಾಗಿದೆ.

ಜನವರಿ 30ರಂದು ಈ ಬೆದರಿಕೆ ಇ-ಮೇಲ್ ಬಂದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಇ-ಮೇಲ್‌ನಲ್ಲಿ 5 ಆರ್ಡಿಎಕ್ಸ್ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಇಟಾಲಿಯನ್ ಕಾನ್ಸುಲೇಟಿನ ಸೆಕ್ಯೂರಿಟಿ ಮ್ಯಾನೇಜರ್ ಜಿಯೋಡೊಮೆನಿಕ್ ಒ ಮಿಲಾನೋ ಅವರು ಹಲಸೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ರಾಯಭಾರಿ ಕಚೇರಿಯ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದ್ದು, ಇ-ಮೇಲ್ ಕಳುಹಿಸಿದವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕೆ.ಆರ್. ನಗರ ಮಹಿಳೆ ಅಪಹರಣ ಕೇಸ್: ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಬಿಗ್ ಶಾಕ್

0

ಬೆಂಗಳೂರು: ಕೆ.ಆರ್. ನಗರ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಶಾಕ್‌ ಕೊಟ್ಟಿದೆ. ಪ್ರಕರಣ ರದ್ದುಪಡಿಸುವಂತೆ ಸಲ್ಲಿಸಿದ್ದ ಹೆಚ್.ಡಿ.ರೇವಣ್ಣ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ಆದೇಶ ಹೊರಡಿಸಿದೆ.

ವಿಚಾರಣೆ ವೇಳೆ ಹೆಚ್.ಡಿ.ರೇವಣ್ಣ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದರು. ಹಿರಿಯ ವಕೀಲರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ತೊಡಗಿಸಿಕೊಂಡಿರುವ ಕಾರಣವನ್ನು ಉಲ್ಲೇಖಿಸಿ ಮನವಿ ಸಲ್ಲಿಸಲಾಯಿತು. ಆದರೆ, ಈ ಮನವಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಈ ಹಿನ್ನೆಲೆಯಲ್ಲಿ, ಹೆಚ್.ಡಿ.ರೇವಣ್ಣ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸದಂತೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.ಈ ಆದೇಶದಿಂದಾಗಿ ಕೆ.ಆರ್. ನಗರ ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ  ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.

ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್ ಪ್ರೆಸ್ ರೈಲು! ತಪ್ಪಿದ ಅನಾಹುತ

0

ಒಡಿಶಾ: ಒಡಿಶಾದ ಜಾಜ್‌ಪುರ ಜಿಲ್ಲೆಯ ಜಖಾಪುರ ರೈಲು ನಿಲ್ದಾಣದ ಸಮೀಪ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ನಡೆದಿದೆ. ಭುವನೇಶ್ವರದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಈ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಭದ್ರಕ್‌ನಿಂದ ರಕ್ಷಣಾ ತಂಡಗಳನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಗಿದೆ. ಅಧಿಕಾರಿಗಳು ಸ್ಥಳದಲ್ಲೇ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳು ಸಂಭವಿಸಿಲ್ಲ ಎಂದು ದೃಢಪಡಿಸಿದ್ದಾರೆ. ಜೊತೆಗೆ, ಬೋಗಿಗಳಿಗೆ ಕೂಡ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಘಟನೆಯ ಬಳಿಕ ಹಾನಿಗೊಳಗಾದ ರೈಲು ಮಾರ್ಗದಲ್ಲಿ ಮರುಸ್ಥಾಪನಾ ಕಾರ್ಯವನ್ನು ಆರಂಭಿಸಲಾಗಿದ್ದು, ಹಳಿಗಳನ್ನು ತೆರವುಗೊಳಿಸಿ ರೈಲು ಸಂಚಾರವನ್ನು ಶೀಘ್ರ ಪುನರಾರಂಭಿಸಲು ಎಂಜಿನಿಯರಿಂಗ್ ತಂಡಗಳನ್ನು ನಿಯೋಜಿಸಲಾಗಿದೆ. ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ರೈಲು ಹಳಿ ತಪ್ಪಲು ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಮರುಸ್ಥಾಪನಾ ಕಾರ್ಯಗಳು ಪೂರ್ಣಗೊಂಡು ಸಂಚಾರ ಸಾಮಾನ್ಯ ಸ್ಥಿತಿಗೆ ಬಂದ ಬಳಿಕ, ಈ ಕುರಿತು ವಿವರವಾದ ತನಿಖೆ ನಡೆಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

Cauvery Water: ಮೆಟ್ರೋ ಆಯ್ತು ಈಗ ಕಾವೇರಿ ನೀರಿನ ದರವೂ ಏರಿಕೆ!

0

ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯ ಬೆನ್ನಲ್ಲೇ, ಇದೀಗ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರವೂ ಏರಿಕೆಯಾಗುವ ಸಾಧ್ಯತೆ ಎದುರಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಶೀಘ್ರವೇ ನೀರಿನ ದರವನ್ನು ಶೇ.3ರಷ್ಟು ಹೆಚ್ಚಿಸುವ ಕುರಿತು ಚಿಂತನೆ ನಡೆಸುತ್ತಿದೆ.

ಪ್ರತಿ ವರ್ಷ ನೀರಿನ ದರವನ್ನು ಪರಿಷ್ಕರಿಸಬೇಕು ಎಂದು ಆಡಳಿತ ಸುಧಾರಣಾ ಸಮಿತಿ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ, ಈ ಶಿಫಾರಸಿನ ಅನುಸಾರವಾಗಿ ನೀರಿನ ದರ ಏರಿಕೆಗೆ BWSSB ಮುಂದಾಗಿದೆ. ಎಲ್ಲವೂ ಯೋಜನೆಯಂತೆ ನಡೆದರೆ, ಏಪ್ರಿಲ್ 1ರಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ.

ಕಳೆದ ವರ್ಷದ ಏಪ್ರಿಲ್‌ನಲ್ಲಿ ಗೃಹ ಬಳಕೆದಾರರಿಗೆ ಪ್ರತಿ ಲೀಟರ್‌ಗೆ ಕನಿಷ್ಠ 0.15 ಪೈಸೆಯಿಂದ ಗರಿಷ್ಠ 1 ಪೈಸೆಯವರೆಗೆ ನೀರಿನ ದರ ಹೆಚ್ಚಳ ಮಾಡಲಾಗಿತ್ತು. ವಾಣಿಜ್ಯ ಬಳಕೆಗೆ ಪ್ರತಿ ಲೀಟರ್‌ಗೆ ಗರಿಷ್ಠ 1.90 ಪೈಸೆಯವರೆಗೆ ದರ ಏರಿಕೆ ಜಾರಿಗೆ ಬಂದಿತ್ತು.

ಈ ಬಾರಿ ಕೂಡ ಶೇ.3ರಷ್ಟು ದರ ಏರಿಕೆ ಜಾರಿಯಾದರೆ, ಗೃಹ ಹಾಗೂ ವಾಣಿಜ್ಯ ಬಳಕೆದಾರರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ನೀರಿನ ದರ ಏರಿಕೆ ಕುರಿತು ಅಂತಿಮ ನಿರ್ಧಾರವನ್ನು BWSSB ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.

Gold Silver Price: ಏರಿದಷ್ಟೇ ವೇಗವಾಗಿ ಇಳಿದ ಚಿನ್ನ ಮತ್ತು ಬೆಳ್ಳಿ ಬೆಲೆಗಳು! ಇಲ್ಲಿದೆ ಲೇಟೆಸ್ಟ್ ದರ

0

ಬೆಂಗಳೂರು: ಬುಧವಾರ ಚಿನ್ನಬೆಳ್ಳಿ ದರಗಳಲ್ಲಿ ಭಾರೀ ಏರಿಕೆ ಕಂಡು ಜನರಲ್ಲಿ ಆತಂಕ ಮೂಡಿಸಿದ್ದ ಬೆನ್ನಲ್ಲೇ, ಗುರುವಾರ ದರಗಳಲ್ಲಿ ದೊಡ್ಡ ಮಟ್ಟದ ಇಳಿಕೆ ದಾಖಲಾಗಿದೆ. ಚಿನ್ನದ ಬೆಲೆ ಒಂದೇ ದಿನದಲ್ಲಿ 10 ಗ್ರಾಂಗೆ 5,020 ರೂಪಾಯಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯೂ ಕುಸಿತ ಕಂಡಿದೆ.

ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 502 ರೂಪಾಯಿ ಇಳಿಕೆಯಾಗಿದ್ದು, ಇದೀಗ 1 ಗ್ರಾಂ ಚಿನ್ನದ ಬೆಲೆ 15,442 ರೂಪಾಯಿಗೆ ತಲುಪಿದೆ. ಇದರಿಂದ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,54,420 ರೂಪಾಯಿಯಾಗಿದೆ.

ಅದೇ ರೀತಿ, 22 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆ ಕಂಡಿದ್ದು, ಪ್ರತಿ ಗ್ರಾಂಗೆ 460 ರೂಪಾಯಿ ಹಾಗೂ 10 ಗ್ರಾಂಗೆ 4,600 ರೂಪಾಯಿ ಕಡಿಮೆಯಾಗಿದೆ. ಪರಿಣಾಮವಾಗಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,41,550 ರೂಪಾಯಿಗೆ ಇಳಿದಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರ 1 ಗ್ರಾಂಗೆ 15,442 ರೂಪಾಯಿ ಇದ್ದು, 10 ಗ್ರಾಂಗೆ 1,54,420 ರೂಪಾಯಿ ಇದೆ. ದರದಲ್ಲಿ ಜಿಎಸ್ಟಿ ಸೇರಿಲ್ಲ. ಹೀಗಾಗಿ ಆಭರಣ ಮಳಿಗೆಗಳಲ್ಲಿನ ಬೆಲೆಯಲ್ಲಿ ವ್ಯತ್ಯಾಸ ಇರಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಇನ್ನು ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಂಗೆ 20 ರೂಪಾಯಿ ಇಳಿಕೆಯಾಗಿ 300 ರೂಪಾಯಿಯಾಗಿದೆ. ಇದರೊಂದಿಗೆ 1 ಕೆಜಿ ಬೆಳ್ಳಿ ಬೆಲೆ 3,00,000 ರೂಪಾಯಿಗೆ ಇಳಿದಿದೆ.

error: Content is protected !!