Home Blog Page 76

ಕೊಲ್ಲೂರಿಗೆ ಸಿಎಂ ವಿಜಯ್ ಭೇಟಿ: ವಿಶೇಷ ಪೂಜೆ ಇಲ್ಲ, ಸಾಮಾನ್ಯ ಭಕ್ತರಂತೆ ದೇವಿ ದರ್ಶನ

0

ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಭೇಟಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಅಥವಾ ವಿಶೇಷ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂಬ ಸುದ್ದಿಗಳಿಗೆ ದೇವಸ್ಥಾನ ಆಡಳಿತ ಸ್ಪಷ್ಟನೆ ನೀಡಿದೆ.

ದೇವಸ್ಥಾನದ ಅರ್ಚಕ ನಿತ್ಯಾನಂದ ಅಡಿಗ ಮಾತನಾಡಿ, ಕೊಲ್ಲೂರು ಕ್ಷೇತ್ರದ ಸಂಪ್ರದಾಯದ ಪ್ರಕಾರ ಯಾವುದೇ ವಿವಿಐಪಿ ಅಥವಾ ಗಣ್ಯ ವ್ಯಕ್ತಿಗಳಿಗೆ ಪ್ರತ್ಯೇಕ ಪೂಜೆ ನಡೆಸುವ ಪದ್ಧತಿ ಇಲ್ಲ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ವಿಜಯ್ ಅವರಿಗೂ ಸಾಮಾನ್ಯ ಭಕ್ತರಿಗೆ ಇರುವ ರೀತಿಯಲ್ಲಿಯೇ ದೇವಿಯ ದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸರ್ಕಾರಿ ಪ್ರೋಟೋಕಾಲ್ ಪ್ರಕಾರ ಪೂರ್ಣಕುಂಭ ಸ್ವಾಗತ ನೀಡಿ ಗೌರವ ಸಲ್ಲಿಸಲಾಗುತ್ತದೆ. ಆದರೆ ವಿಶೇಷ ಪೂಜೆ, ವಿಶೇಷ ಮಂಗಳಾರತಿ ಅಥವಾ ಹೆಚ್ಚುವರಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಿಲ್ಲ. ಅವರು ದೇವಸ್ಥಾನಕ್ಕೆ ಆಗಮಿಸುವ ವೇಳೆಯಲ್ಲಿ ಮಹಾಮಂಗಳಾರತಿ ನಡೆಯುತ್ತಿದ್ದರೆ ಅದನ್ನು ವೀಕ್ಷಿಸುವ ಅವಕಾಶ ಮಾತ್ರ ದೊರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಶುಕ್ರವಾರವಾಗಿರುವುದರಿಂದ ದೇವಸ್ಥಾನದಲ್ಲಿ ನಡೆಯಲಿರುವ ರಥೋತ್ಸವ ಹಾಗೂ ಇತರೆ ಧಾರ್ಮಿಕ ವಿಧಿವಿಧಾನಗಳು ಎಂದಿನ ನಿತ್ಯ ಕಾರ್ಯಕ್ರಮಗಳ ಭಾಗವಾಗಿದ್ದು, ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ವಿಶೇಷವಾಗಿ ಆಯೋಜಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನ ಪರಿಸರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಅರ್ಚಕ ವೃಂದ, ದೇವಸ್ಥಾನ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಮನ್ವಯದಲ್ಲಿ ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿವೆ.

ದೊಡ್ಡಣ್ಣ ನಿಧನ ಸುದ್ದಿ ವೈರಲ್: ‘ನನಗೇನೂ ಆಗಿಲ್ಲ’ ಎಂದು ವದಂತಿಗೆ ಬ್ರೇಕ್ ಹಾಕಿದ ಹಿರಿಯ ನಟ

ಬೆಂಗಳೂರು: ಹಿರಿಯ ನಟ ದೊಡ್ಡಣ್ಣ ಅವರ ನಿಧನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಸುಳ್ಳು ಸುದ್ದಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಸ್ವತಃ ದೊಡ್ಡಣ್ಣ ಅವರೇ ಈ ವದಂತಿಯನ್ನು ಅಲ್ಲಗಳೆದಿದ್ದಾರೆ.

ಸಾಮಾಜಿಕ ಜಾಲತಾಣದ ಒಂದು ಪುಟದಲ್ಲಿ “ದೊಡ್ಡಣ್ಣ ಇನ್ನಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಶ್ರದ್ಧಾಂಜಲಿ ಪೋಸ್ಟರ್ ಪ್ರಕಟಿಸಲಾಗಿತ್ತು. “ನಿಮ್ಮ ಅಭಿನಯ ಮತ್ತು ಸಾಧನೆ ಯಾವಾಗಲೂ ನಮ್ಮೊಂದಿಗೆ ಇರುತ್ತದೆ” ಎಂಬ ಸಂದೇಶದೊಂದಿಗೆ ಪೋಸ್ಟ್ ವೈರಲ್ ಆಗಿತ್ತು.

ಈ ಬೆಳವಣಿಗೆಯಿಂದ ಆತಂಕಗೊಂಡ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿರುವ ದೊಡ್ಡಣ್ಣ, “ನಾನು ಆರೋಗ್ಯವಾಗಿದ್ದೇನೆ. ಮನೆಯಲ್ಲೇ ನೆಮ್ಮದಿಯಿಂದ ಇದ್ದೇನೆ. ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು” ಎಂದು ಹೇಳಿದ್ದಾರೆ.

ನಕಲಿ ಪೋಸ್ಟರ್‌ಗಳನ್ನು ಸೃಷ್ಟಿಸಿ ಸುಳ್ಳು ಸುದ್ದಿ ಹರಡುತ್ತಿರುವ ಕಿಡಿಗೇಡಿಗಳ ವಿರುದ್ಧ ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಪೊಲೀಸರ ಎದುರೇ ಪುಡಿರೌಡಿಗಳ ಪುಂಡಾಟ; ಬಿಡಿಸಲು ಬಂದ ಕಾನ್ಸ್‌ಟೇಬಲ್ ಮೇಲೂ ಹಲ್ಲೆ, ಐವರು ಜೈಲುಪಾಲು

0

ಗದಗ: ನಗರದ ಧೋಬಿಘಾಟ್ ಸಮೀಪದ ಬಾರ್‌ವೊಂದರ ಮುಂದೆ ಕ್ಷುಲ್ಲಕ ವಿಚಾರಕ್ಕೆ ಐವರು ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದು, ಗಲಾಟೆ ಬಿಡಿಸಲು ಮುಂದಾದ ಪೊಲೀಸ್ ಕಾನ್ಸ್‌ಟೇಬಲ್ ಮೇಲೆಯೂ ಹಲ್ಲೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೂಲಗಳ ಪ್ರಕಾರ, ಸಣ್ಣ ವಿಚಾರಕ್ಕೆ ಆರಂಭವಾದ ವಾಗ್ವಾದ ಕೆಲವೇ ಕ್ಷಣಗಳಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ರಸ್ತೆಯ ಮಧ್ಯದಲ್ಲೇ ಯುವಕರು ಹೊಡೆದಾಡಿಕೊಂಡ ಪರಿಣಾಮ ಸ್ಥಳದಲ್ಲಿ ಜನರು ಜಮಾಯಿಸಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಈ ವೇಳೆ ಅಲ್ಲಿಂದ ತೆರಳುತ್ತಿದ್ದ ಕರ್ತವ್ಯದಲ್ಲಿರದ ಪೊಲೀಸ್ ಕಾನ್ಸ್‌ಟೇಬಲ್ ಅಶೋಕ್ ಪಾಟೀಲ್ ಘಟನೆ ಗಮನಿಸಿ ತಕ್ಷಣ ಮಧ್ಯಪ್ರವೇಶಿಸಿದ್ದಾರೆ. ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಎರಡು ಗುಂಪುಗಳನ್ನು ಸಮಾಧಾನಪಡಿಸಲು ಯತ್ನಿಸಿದರೂ, ಪುಡಿರೌಡಿಗಳು ಗಲಾಟೆ ನಿಲ್ಲಿಸುವ ಬದಲು ಅವರನ್ನೇ ನೂಕಾಡಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಕಾನ್ಸ್‌ಟೇಬಲ್‌ಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಆದಾಗ್ಯೂ, ಅವರು ಸಮಯಪ್ರಜ್ಞೆ ಮೆರೆದು ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗದಗ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಗಲಾಟೆಯಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಬಳಿಕ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಹಾಗೂ ಸಾರ್ವಜನಿಕ ಶಾಂತಿ ಭಂಗಗೊಳಿಸಿದ ಆರೋಪದಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದು, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ಹಾಗೂ ಸಾರ್ವಜನಿಕ ಶಾಂತಿ ಭಂಗಗೊಳಿಸುವವರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ಘಟನೆಯ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರ ಸಮ್ಮುಖದಲ್ಲೇ ನಡೆದ ಈ ಪುಂಡಾಟ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕರ್ತವ್ಯದಲ್ಲಿರದಿದ್ದರೂ ಧೈರ್ಯ, ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆ ಮೆರೆದು ಗಲಾಟೆಯನ್ನು ನಿಯಂತ್ರಣಕ್ಕೆ ತಂದ ಕಾನ್ಸ್‌ಟೇಬಲ್ ಅಶೋಕ್ ಪಾಟೀಲ್ ಅವರ ಕಾರ್ಯಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತಿ ಶವಯಾತ್ರೆಯಲ್ಲಿ ತಪ್ಪದೆ ಕಾಣಿಸುವ ಬಿಳಿ ನಾಯಿ: ಅಚ್ಚರಿಗೊಂಡ ಡಂಬಳ ಗ್ರಾಮಸ್ಥರು! ಏನಿದು ವಿಸ್ಮಯ?

0

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಅಪರೂಪದ ಹಾಗೂ ವಿಸ್ಮಯಕಾರಿ ಘಟನೆಯೊಂದು ಗ್ರಾಮಸ್ಥರ ಗಮನ ಸೆಳೆದಿದೆ.

ಗ್ರಾಮದಲ್ಲಿ ಯಾರೇ ನಿಧನ ಹೊಂದಿದರೂ, ಬಿಳಿ ಬಣ್ಣದ ಬೀದಿ ನಾಯಿಯೊಂದು ಅಂತ್ಯಯಾತ್ರೆಯಲ್ಲಿ ತಪ್ಪದೆ ಭಾಗವಹಿಸಿ ಸ್ಮಶಾನದವರೆಗೂ ತೆರಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗ್ರಾಮಸ್ಥರ ಪ್ರಕಾರ, ಕೆಲ ತಿಂಗಳ ಹಿಂದೆ ಪಾರಮ್ಮ ಎಂಬ ಮಹಿಳೆಯ ನಿಧನದ ಬಳಿಕ ಈ ವಿಚಿತ್ರ ನಡೆ ಆರಂಭವಾಗಿದೆ. ಆ ಬಳಿಕ ಗ್ರಾಮದಲ್ಲಿ ನಡೆಯುವ ಪ್ರತಿಯೊಂದು ಅಂತ್ಯಸಂಸ್ಕಾರದ ಮೆರವಣಿಗೆಯಲ್ಲೂ ಈ ನಾಯಿ ಕಾಣಿಸಿಕೊಳ್ಳುತ್ತಿದೆ.

ಮೃತರ ಮನೆ ಬಳಿಯಿಂದಲೇ ಮೆರವಣಿಗೆಯೊಂದಿಗೆ ಸಾಗುವ ಈ ನಾಯಿ, ಸ್ಮಶಾನಕ್ಕೆ ತಲುಪಿದ ಬಳಿಕವೂ ಅಂತ್ಯಸಂಸ್ಕಾರ ಪೂರ್ಣಗೊಳ್ಳುವವರೆಗೂ ಅಲ್ಲಿಯೇ ಉಳಿದುಕೊಂಡು ನಂತರ ತನ್ನ ದಾರಿಯನ್ನು ಹಿಡಿಯುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಘಟನೆ ಗ್ರಾಮದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಕೆಲವರು ಇದನ್ನು ಭಾವನಾತ್ಮಕ ಬಂಧನ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಇದು ಪ್ರಾಣಿಗಳ ವಿಶಿಷ್ಟ ಸಂವೇದನೆ ಎಂದು ಅಭಿಪ್ರಾಯಪಡುತ್ತಿದ್ದಾರೆ.

ಸ್ಥಳೀಯರಾದ ಈರಣ್ಣ ಸಲಗಾರ ಹಾಗೂ ಮಂಜುನಾಥ ಸಂಜಿವಣ್ಣವರ ಅವರು ಈ ಬಗ್ಗೆ ಮಾತನಾಡಿ, “ನಾವು ಹಲವು ವರ್ಷಗಳಿಂದ ಗ್ರಾಮದಲ್ಲಿ ವಾಸಿಸುತ್ತಿದ್ದೇವೆ. ಆದರೆ ಪ್ರತಿಯೊಂದು ಅಂತ್ಯಸಂಸ್ಕಾರದಲ್ಲಿ ತಪ್ಪದೆ ಭಾಗವಹಿಸುವ ನಾಯಿಯನ್ನು ಎಂದಿಗೂ ನೋಡಿಲ್ಲ. ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ,” ಎಂದು ತಿಳಿಸಿದ್ದಾರೆ.

ಒಟ್ಟಾರೆ, ನಾಯಿಗಳು ಮಾನವ ಭಾವನೆಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಸಾಮರ್ಥ್ಯ ಹೊಂದಿರುವುದರಿಂದ ಇಂತಹ ವರ್ತನೆ ಕಾಣಿಸಬಹುದು ಎಂದು ಹೇಳಬಹುದಾಗಿದೆ.

ಗೊಬ್ಬರಕ್ಕಾಗಿ ರೈತರ ಗೋಳಾಟ! ಮುಂಜಾನೆ 5 ಗಂಟೆಯಿಂದಲೇ ಕ್ಯೂ; ಚಪ್ಪಲಿ, ಹೆಲ್ಮೆಟ್ ಇಟ್ಟು ಪಾಳೆ ಹಚ್ಚಿದ ರೈತರು

0

ಗದಗ: ಮುಂಗಾರು ಬಿತ್ತನೆ ಚಟುವಟಿಕೆಗಳು ವೇಗ ಪಡೆದಿರುವ ನಡುವೆಯೇ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಗಳ ಕೊರತೆಯಿಂದ ಗದಗ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಯೂರಿಯಾ ಪಡೆಯಲು ರೈತರು ಮುಂಜಾನೆ 5 ಗಂಟೆಯಿಂದಲೇ ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯ ಗದಗ ನಗರದಲ್ಲಿ ಕಂಡು ಬಂದಿದೆ.

ಗದಗ ನಗರದ ಡಂಬಳ ನಾಕಾ ಬಳಿಯ ಶ್ರೀ ಎಂಟರ್‌ಪ್ರೈಸಸ್ ಮುಂಭಾಗ ನೂರಾರು ರೈತರು ಯೂರಿಯಾ ರಸಗೊಬ್ಬರಕ್ಕಾಗಿ ಸಾಲಿನಲ್ಲಿ ನಿಂತಿದ್ದು, ತಮ್ಮ ಸರದಿ ಕಾಯ್ದಿರಿಸಲು ಚಪ್ಪಲಿ, ಹೆಲ್ಮೆಟ್ ಹಾಗೂ ಟಾವೆಲ್‌ಗಳನ್ನು ಇಟ್ಟು ಪಾಳೆ ಹಚ್ಚಿರುವ ದೃಶ್ಯ ಗಮನ ಸೆಳೆಯಿತು.

ಹೆಸರು, ಗೋವಿನಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ಸಜ್ಜಾಗಿರುವ ರೈತರು ಸಮರ್ಪಕ ಪ್ರಮಾಣದಲ್ಲಿ ರಸಗೊಬ್ಬರ ಸಿಗದೇ ಪರದಾಡುತ್ತಿದ್ದಾರೆ. ಎಫ್‌ಐಡಿ (FID) ವ್ಯವಸ್ಥೆಯ ಮೂಲಕ ರಸಗೊಬ್ಬರ ವಿತರಣೆ ನಡೆಯುತ್ತಿದೆಯಾದರೂ, ದಿನಕ್ಕೆ ಕೇವಲ 30 ರೈತರಿಗೆ ಮಾತ್ರ ಯೂರಿಯಾ ನೀಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವಿತರಣೆ ನಡೆಯುತ್ತಿರುವುದರಿಂದ ದೂರದ ಊರುಗಳಿಂದ ಬಂದ ರೈತರು ದಿನಪೂರ್ತಿ ಕಾಯುವಂತಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗುತ್ತಿದ್ದು, ರೈತರ ಆತಂಕ ಮತ್ತಷ್ಟು ಹೆಚ್ಚಾಗಿದೆ.

ರಸಗೊಬ್ಬರ ಕೊರತೆಗೆ ಅಂಗಡಿ ಮಾಲೀಕರು ಹಾಗೂ ಕೃಷಿ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ರೈತರು, ಕೂಡಲೇ ಅಗತ್ಯ ಪ್ರಮಾಣದ ಯೂರಿಯಾ ಮತ್ತು ಡಿಎಪಿ ರಸಗೊಬ್ಬರವನ್ನು ಪೂರೈಸುವ ಮೂಲಕ ರೈತರ ಸಂಕಷ್ಟ ನಿವಾರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಬಿತ್ತನೆ ಸಮಯದಲ್ಲಿ ರಸಗೊಬ್ಬರಕ್ಕಾಗಿ ಹೀಗೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ದಿನಗಟ್ಟಲೆ ಅಲೆದರೂ ಗೊಬ್ಬರ ಸಿಗುತ್ತಿಲ್ಲ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮರ್ಪಕ ಪೂರೈಕೆ ಮಾಡಬೇಕು” ಎಂದು ರೈತರು ಆಗ್ರಹಿಸಿದ್ದಾರೆ.

ಕೇವಲ 9 ಟಿಎಂಸಿ ನೀರು: ತುಂಗಭದ್ರಾ ಜಲಾಶಯ ಸ್ಥಿತಿ ಗಂಭೀರ, ರೈತರಲ್ಲಿ ಚಿಂತೆ!

ಕೊಪ್ಪಳ: ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿದಿದೆ.

ಪ್ರಸ್ತುತ ಜಲಾಶಯದಲ್ಲಿ ಕೇವಲ 9 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಹಳ ಕಡಿಮೆ. ಕಳೆದ ವರ್ಷ ಜೂನ್ ವೇಳೆಗೆ ಜಲಾಶಯದಲ್ಲಿ ಸುಮಾರು 24 ಟಿಎಂಸಿ ನೀರು ಇತ್ತು.

ಈ ವರ್ಷ ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರೂ, ಮಲೆನಾಡು ಭಾಗದಲ್ಲಿ ಮಳೆಯ ಕೊರತೆಯಿಂದ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಇದರ ಪರಿಣಾಮವಾಗಿ ನೀರಿನ ಸಂಗ್ರಹಣೆ ತೀವ್ರವಾಗಿ ಇಳಿಕೆಯಾಗಿದೆ.

ಈಗ ಲಭ್ಯವಿರುವ ನೀರನ್ನು ಕುಡಿಯುವ ನೀರು, ಕೃಷಿ ಹಾಗೂ ಜಲಚರಗಳ ನಿರ್ವಹಣೆಗೆ ಹಂಚಿಕೆ ಮಾಡಲಾಗುತ್ತಿದೆ. ಪ್ರಸ್ತುತ ಸುಮಾರು 249 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಮತ್ತು ಕುಡಿಯುವ ನೀರಿನ ಅಗತ್ಯಗಳಿಗೆ ಹರಿಸಲಾಗುತ್ತಿದೆ.

ನೀರಿನ ಈ ಕೊರತೆಯಿಂದ ನಾಲ್ಕು ಜಿಲ್ಲೆಗಳ ರೈತರು ಹಾಗೂ ಜನರಲ್ಲಿ ಆತಂಕ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯಕ್ಕೆ ಒಳಹರಿವು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಸಿಎಂ ವಿಜಯ್ ಭೇಟಿ: ಬಿಗಿ ಭದ್ರತೆ

ಉಡುಪಿ: ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಇಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಭೇಟಿ ನೀಡಲಿದ್ದಾರೆ. ಅವರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಮಧ್ಯಾಹ್ನದಿಂದ ಸಂಜೆವರೆಗೆ ಅವರ ಭೇಟಿ ನಿಗದಿಯಾಗಿರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ತಮಿಳುನಾಡು ಮತ್ತು ಉಡುಪಿ ಪೊಲೀಸರು ಸೇರಿ ದೇವಸ್ಥಾನ ಹಾಗೂ ಸುತ್ತಮುತ್ತ ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಸಿಎಂ ಭೇಟಿಯ ವೇಳೆ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಇರುವುದಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಭಕ್ತರು ಈ ಸಮಯದಲ್ಲಿ ದರ್ಶನಕ್ಕೆ ಬಾರದಂತೆ ಮನವಿ ಮಾಡಲಾಗಿದೆ.

ಇದೇ ವೇಳೆ ಮೇಕೆದಾಟು ಯೋಜನೆ ವಿಚಾರದಿಂದ ಉಂಟಾದ ವಿವಾದಗಳ ಹಿನ್ನೆಲೆ, ಕೆಲವು ಸಂಘಟನೆಗಳು ಕಪ್ಪು ಬಾವುಟ ಪ್ರದರ್ಶನ ಮಾಡುವ ಸಾಧ್ಯತೆ ಇರುವುದರಿಂದ ಪ್ರಮುಖ ಮಾರ್ಗಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ರಾಜಕೀಯ ನಾಯಕರು ಹಾಗೂ ಗಣ್ಯರು ಆಗಾಗ ಭೇಟಿ ನೀಡುವ ಪವಿತ್ರ ಸ್ಥಳವಾಗಿದೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಯಾವ ದಾಖಲೆ ಬೇಕು? ಸಂಪೂರ್ಣ ನಿಯಮಗಳು ಇಲ್ಲಿವೆ!

ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಮಹತ್ವದ ಯೋಜನೆಗೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ.

ಈ ಯೋಜನೆಯಡಿ ರಾಜ್ಯದಲ್ಲಿ ವಾಸವಿದ್ದು, ಕರ್ನಾಟಕದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ದೊರೆಯಲಿದೆ. ಈ ಯೋಜನೆಗಾಗಿ ಸರ್ಕಾರ ಒಟ್ಟು 286 ಕೋಟಿ ರೂಪಾಯಿ ವೆಚ್ಚ ಭರಿಸುವುದಾಗಿ ತಿಳಿಸಿದೆ.

ಸರ್ಕಾರದ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ವಿದ್ಯಾರ್ಥಿಯ ವಾಸಸ್ಥಳದಿಂದ ವಿದ್ಯಾಸಂಸ್ಥೆಯವರೆಗೆ ಇರುವ ನಿಗದಿತ ದೂರದ ಆಧಾರದ ಮೇಲೆ ಪಾಸ್ ನೀಡಲಾಗುತ್ತದೆ. ಪಾಸ್ ಅವಧಿ ಪ್ರಸ್ತುತ ಶೈಕ್ಷಣಿಕ ವರ್ಷದ ಅವಧಿಗೆ ಅನುಗುಣವಾಗಿರುತ್ತದೆ.

ಅರ್ಹ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆ ಜಾರಿಗೆ ಬರುವ ಮುನ್ನವೇ ಹಣ ಪಾವತಿಸಿ ಬಸ್ ಪಾಸ್ ಪಡೆದ ವಿದ್ಯಾರ್ಥಿಗಳಿಗೆ, ಅವರು ಪಾವತಿಸಿದ ಮೊತ್ತವನ್ನು 15 ದಿನಗಳ ಒಳಗೆ ಮರುಪಾವತಿ (ರಿಫಂಡ್) ಮಾಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈಗಾಗಲೇ ನೀಡಿರುವ ಬಸ್ ಪಾಸ್‌ಗಳು ಯಥಾವತ್ತಾಗಿ ಮಾನ್ಯವಾಗಿರುತ್ತವೆ.

ಈ ಯೋಜನೆ ವಿದ್ಯಾರ್ಥಿಗಳ ಪ್ರಯಾಣ ವೆಚ್ಚದ ಭಾರವನ್ನು ಕಡಿಮೆ ಮಾಡುವ ಜೊತೆಗೆ ಶಿಕ್ಷಣಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಲಿದೆ ಎಂದು ಸರ್ಕಾರ ನಿರೀಕ್ಷೆ ವ್ಯಕ್ತಪಡಿಸಿದೆ.

ಆಗುಂಬೆ ಘಾಟ್‌ನಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧ: ಜಿಲ್ಲಾಡಳಿತ ಆದೇಶ!

ಶಿವಮೊಗ್ಗ: ಮಳೆಗಾಲದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಡಳಿತವು ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ-169ಎ ಆಗುಂಬೆ ಘಾಟ್‌ನಲ್ಲಿ ಭಾರಿ ವಾಹನಗಳ ಸಂಚಾರವನ್ನು ಜೂನ್ 15ರಿಂದ ಮಳೆಗಾಲ ಮುಗಿಯುವವರೆಗೆ ನಿಷೇಧಿಸಲಾಗಿದೆ.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೊರಡಿಸಿರುವ ಆದೇಶದ ಪ್ರಕಾರ, ಆಗುಂಬೆ ಘಾಟ್ ಪ್ರದೇಶದಲ್ಲಿ ಭೂಕುಸಿತ ಮತ್ತು ರಸ್ತೆ ಹಾನಿಯ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹುಲಿಕಲ್ ಘಾಟ್‌ನಲ್ಲಿ ನಡೆದ ಭೂಕುಸಿತದ ನಂತರ ಆ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ, ಹೆಚ್ಚಿನ ವಾಹನಗಳು ಆಗುಂಬೆ ಘಾಟ್ ಮಾರ್ಗಕ್ಕೆ ತಿರುಗಿರುವುದು ಪರಿಸ್ಥಿತಿಯನ್ನು ಗಂಭೀರಗೊಳಿಸಿದೆ.

ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಭೂಕುಸಿತ, ರಸ್ತೆ ಅಪಘಾತ ಹಾಗೂ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಭಾರಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಪರ್ಯಾಯ ಮಾರ್ಗಗಳಾಗಿ ತೀರ್ಥಹಳ್ಳಿ–ನಗರ–ನಾಗೋಡಿ–ಕೊಲ್ಲೂರು–ಕುಂದಾಪುರ–ಉಡುಪಿ ಹಾಗೂ ತೀರ್ಥಹಳ್ಳಿ–ಶೃಂಗೇರಿ–ಕೆರೆಕಟ್ಟೆ–ಬಜಗೋಳಿ–ಕಾರ್ಕಳ–ಉಡುಪಿ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ. ಉಡುಪಿ ಹಾಗೂ ಇತರ ಕರಾವಳಿ ಭಾಗದಿಂದ ತೀರ್ಥಹಳ್ಳಿಗೆ ಸಂಚರಿಸುವ ವಾಹನಗಳಿಗೂ ಇದೇ ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಆದೇಶಿಸಲಾಗಿದೆ.

ಈ ಕ್ರಮದಿಂದ ನಾಲ್ಕು ಜಿಲ್ಲೆಗಳ ಜನರಿಗೆ ತಾತ್ಕಾಲಿಕ ತೊಂದರೆ ಉಂಟಾಗಬಹುದಾದರೂ, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ಮುಂಗಾರು ಅಬ್ಬರ: ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳಲ್ಲಿ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಕೆಲ ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಗುಡುಗು–ಸಿಡಿಲು ಸಹಿತ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿಯೂ ಭಾರೀ ಮಳೆಯ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ 30 ರಿಂದ 40 ಕಿ.ಮೀ ವೇಗದ ಗಾಳಿ ಬೀಸುವ ಮುನ್ಸೂಚನೆ ಇದೆ.

ಭಾರೀ ಮಳೆ ಹಾಗೂ ಬಲವಾದ ಗಾಳಿಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಮತ್ತು ಹಳೆಯ ಕಟ್ಟಡಗಳು ಹಾಗೂ ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಹವಾಮಾನ ಇಲಾಖೆ ಸೂಚಿಸಿದೆ.