Home Blog Page 8

ಹಾಡಹಗಲೇ ಚಿನ್ನದಂಗಡಿಗೆ ನುಗ್ಗಿ ದರೋಡೆ: ಗನ್ ತೋರಿಸಿ 3 ಕೆಜಿ ಚಿನ್ನಾಭರಣ ದೋಚಿದ ಗ್ಯಾಂಗ್

0

ಕಲಬುರಗಿ: ಕಲ್ಬುರ್ಗಿಯ ಹೃದಯಭಾಗವಾದ ಸರಾಫ್ ಬಜಾರ್‌ನಲ್ಲಿ, ಹಾಡಹಗಲೇ ನಡೆದ ದರೋಡೆ ಘಟನೆಯು ಇಡೀ ನಗರವನ್ನು ಬೆಚ್ಚಿ ಬೀಳಿಸಿದೆ. ಸಿನಿಮಾ ಶೈಲಿಯಲ್ಲಿ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ನಾಲ್ವರು ಖದೀಮರು, ಮಾಲೀಕನಿಗೆ ಗನ್ ತೋರಿಸಿ ಸುಮಾರು ಎರಡೂವರೆ ಕೆಜಿ ಚಿನ್ನಾಭರಣವನ್ನು ಲೂಟಿ ಮಾಡಿದ್ದಾರೆ.

ಹೌದು ಮಧ್ಯಾಹ್ನ ಸುಮಾರು 12.30ರಿಂದ 1 ಗಂಟೆ ನಡುವೆ ನಾಲ್ವರು ಖದೀಮರು ನುಗ್ಗಿ ಸಿನಿಮಾ ಸ್ಟೈಲ್ ನಲ್ಲಿ ದರೋಡೆ ಮಾಡಿದ್ದಾರೆ. ಮುಖಕ್ಕೆ ಮಾಸ್ಕ್, ತಲೆಗೆ ಕ್ಯಾಪ್‌ ಹಾಕಿಕೊಂಡು ಬಂದ ಖದೀಮರು ಅಂಗಡಿ ಮಾಲೀಕನಿಗೆ ಗನ್ ತೋರಿಸಿ ಬೆದರಿಸಿ 2-3 ಕೆ.ಜಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಘಟನೆ ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖದೀಮರು ಚಿನ್ನದಂಗಡಿಗೆ ನುಗ್ಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ಮಾನನಷ್ಟ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಹೈಕೋರ್ಟ್‌ ತಡೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಹೂಡಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಲಾದ ಜಾಹೀರಾತಿಗೆ ಸಂಬಂಧಿಸಿದೆ.

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸರ್ಕಾರ ವಿವಿಧ ಹುದ್ದೆಗಳಿಗೆ ದರ ನಿಗದಿಪಡಿಸಿದೆ ಎಂದು ಆರೋಪಿಸಿ ಕಾಂಗ್ರೆಸ್​ ರಾಜ್ಯದ ಪ್ರಮುಖ ದಿನ ಪತ್ರಿಕೆಗಳ ಮುಖಪುಟದಲ್ಲಿ ‘ಭ್ರಷ್ಟಾಚಾರ ದರ ಪಟ್ಟಿ’ ಎಂಬ ಹೆಸರಿನಲ್ಲಿ ಜಾಹಿರಾತು ನೀಡಿತ್ತು. ಪಕ್ಷದ ಗೌರವಕ್ಕೆ ದಕ್ಕೆ ತರುವ ರೀತಿಯಲ್ಲಿ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು.

ಈ ಪ್ರಕರಣ ರದ್ದತಿ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ  ಪ್ರಕರಣದ ವಿಚಾರಣೆಗೆ ತಡೆ ನೀಡಿ ಆದೇಶಿಸಿದೆ.

ಬರೀ ಸುಳ್ಳು ಸುದ್ದಿ.. ಭಾರತಕ್ಕೆ ಯಾವುದೇ ಹಾನಿಯಾಗಿಲ್ಲ: ಅಜಿತ್ ದೋವಲ್

0

ಚೆನ್ನೈ: ಬರೀ ಸುಳ್ಳು ಸುದ್ದಿ.. ಭಾರತಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ಕಿಡಿಕಾರಿದ್ದಾರೆ. ಚೆನ್ನೈನ ಐಐಟಿ ಮದ್ರಾಸ್ 62ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ದೋವಲ್, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸನ್ನು ಶ್ಲಾಘಿಸಿದರು. ರಕ್ಷಣಾ ಸಾಮರ್ಥ್ಯಗಳಲ್ಲಿ ಭಾರತದ ಸ್ವಾವಲಂಬನೆಯನ್ನು ಒತ್ತಿ ಹೇಳಿದ್ದಾರೆ.

ಇನ್ನೂ ವಿದೇಶಿ ಮಾಧ್ಯಮಗಳು ಭಾರತೀಯ ಯಾವುದೇ ರಚನೆಗೆ ಹಾನಿಯಾಗಿರುವುದನ್ನು ತೋರಿಸುವಲ್ಲಿ ವಿಫಲವಾಗಿವೆ. ಬರೀ ಸುಳ್ಳು ಸುದ್ದಿಗಳನ್ನೇ ಹರಡಿವೆ ಎಂದು ವಾಗ್ದಾಳಿ ನಡೆಸಿದರಲ್ಲೇ ಭಾರತಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮೇ 7 ಮಧ್ಯರಾತ್ರಿ ಭಾರತೀಯ ಸೇನಾಪಡೆಗಳ ಕಾರ್ಯಾಚರಣೆಯನ್ನು ಶ್ಲಾಘಿಸಿದ ದೋವಲ್‌, ನಮ್ಮ ಸಶಸ್ತ್ರ ಪಡೆಗಳು ನಿಖರ ಗುರಿಗಳನ್ನು ಹೊರತುಪಡಿಸಿ ಬೇರೆಲ್ಲಿಯೂ ದಾಳಿ ಮಾಡಲಿಲ್ಲ. ಶತ್ರು ಪ್ರದೇಶದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲಷ್ಟೇ ದಾಳಿ ಮಾಡಿದವು. ಭಾರತದ ಪ್ರತೀಕಾರದ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾದರು. 23 ನಿಮಿಷಗಳ ಕಾಲ ಸಂಪೂರ್ಣ ಕಾರ್ಯಾಚರಣೆ ನಡೆದಿತ್ತು ಎಂದು ತಿಳಿಸಿದರು.

ಇನ್ನೂ ಎರಡೂವರೆ ವರ್ಷ ಉತ್ತಮ ಆಡಳಿತ ಕೊಡುವುದು ನಮ್ಮ ಉದ್ದೇಶ: ಡಾ. ಜಿ ಪರಮೇಶ್ವರ್

ಮೈಸೂರು: ಇನ್ನೂ ಎರಡೂವರೆ ವರ್ಷ ಉತ್ತಮ ಆಡಳಿತ ಕೊಡುವುದು ನಮ್ಮ ಉದ್ದೇಶ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, 5 ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಅವರು ಹಿಂದೆಯೂ ಹೇಳಿದ್ದರು, ಈಗಲೂ ಅದನ್ನೇ ಹೇಳಿದ್ದಾರೆ.

ಮತ್ತೊಬ್ಬರಿಗೆ ಅವಕಾಶ ಇದೆಯೋ ಇಲ್ಲವೋ ಎಂಬುದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.  ಇನ್ನೂ ದೇವರಲ್ಲಿ‌ ನಾಡಿಗೆ ಹಾಗೂ ನನಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ.

ಇನ್ನೂ ಎರಡೂವರೆ ವರ್ಷ ಉತ್ತಮ ಆಡಳಿತ ಕೊಡುವುದು ನಮ್ಮ ಮುಂದೆ ಇದೆ. ದೇವರ ಸನ್ನಿಧಿಯಲ್ಲಿ ನಿಂತು ಹೆಚ್ಚು ರಾಜಕೀಯ ಮಾತನಾಡುವುದಿಲ್ಲ. ನಮ್ಮಲ್ಲೇ ಮೊದಲು ಎಂಬಂತೆ ಮಾಧ್ಯಮದವರಿಗೆ ಎಲ್ಲಾ ಬೆಳವಣಿಗೆ ಗೊತ್ತಾಗುತ್ತದೆ ಎಂದರು.

ಸಿಎಂ ಉತ್ತರ ಕೊಟ್ಟಿದ್ದಾರೆ, ನಾನು ಮಾತನಾಡೋ ಅವಶ್ಯಕತೆ ಇಲ್ಲ: ಹೈಕಮಾಂಡ್ ಭೇಟಿಯ ಬಳಿಕ ಡಿಕೆಶಿ ಪ್ರತಿಕ್ರಿಯೆ

ದೇವನಹಳ್ಳಿ: ಹೈಕಮಾಂಡ್ ಭೇಟಿಯ ಬಳಿಕ ಚಿಕ್ಕಬಳ್ಳಾಪುರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಸಿಎಂ ಅವರೇ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ನಾನು ಮತ್ತೆ ಮತ್ತೆ ಮಾತನಾಡೋದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಡಿಕೆಶಿ ಅವರು, ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ. ಸಿಎಂ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರು ಏನು ಹೇಳಿದ್ದಾರೆ ಎಂಬುದರ ಬಗ್ಗೆ ನಾನು ಮತ್ತೆ ಪ್ರತಿಕ್ರಿಯೆ ನೀಡೋ ಅವಶ್ಯಕತೆ ಇಲ್ಲ ಎಂದರು. ಶಾಸಕರ ಬೆಂಬಲ, ಅಧಿಕಾರ ಹಂಚಿಕೆ, ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡುವುದರ ಬದಲಿಗೆ, ಮಾಧ್ಯಮಗಳ ಪ್ರಶ್ನೆಗಳನ್ನು ತಿರಸ್ಕರಿಸಿದ ಡಿಕೆಶಿ, ನಮ್ಮಗೆ ಯಾವುದೇ ಗಾಬರಿ ಇಲ್ಲ. ನಿಮಗ್ಯಾಕೆ ಗಾಬರಿ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡುವುದು ಶತಸಿದ್ಧ: ಆರ್. ಅಶೋಕ್

ಬೆಂಗಳೂರು: ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡೋದು ಶತಸಿದ್ಧ, ಅಲ್ಪಾವಧಿಯ ವಿಸ್ತರಣೆಯೂ ಸಿಗಲಾರದು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಶಿವಕುಮಾರ್ ಸ್ಥಾನಕ್ಕೇರೋದು ಶತಸಿದ್ಧ ಎಂದು ಹೇಳಿದರು.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ, ಅದು ಮೊದಲಿಂದಲೂ ಇತ್ತು, ಈಗ ವಿಕೋಪಕ್ಕೆ ಹೋಗಿದೆ, ಕೆಲ ಮಂತ್ರಿಗಳು ಸಹ ಸ್ಥಾನ ಉಳಿಸಿಕೊಳ್ಳಲು ದೆಹಲಿಗೆ ಹೋಗಿದ್ದಾರೆ ಎಂದು ಹೇಳಿದರು.

ಇದರ ನಡುವೆ ಕಾಂಗ್ರೆಸ್ ಹೈಕಮಾಂಡ್ನಿಂದ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ದೊರೆತ ನಂತರವೇ, ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ ಎಂಬುದು ತಿಳಿದುಬಂದಿದೆ. ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಯಾವುದೇ ಬದಲಾವಣೆ, ಪ್ರಯೋಗ ಮಾಡುವ ಇರಾದೆಯಲ್ಲಿ ರಾಹುಲ್ ಗಾಂಧಿ ಇಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುವಲ್ಲಿ ತೊಡಕು: ಎಚ್.ಎಂ. ರೇವಣ್ಣ ಹೇಳಿದ್ದೇನು..?

ಮೈಸೂರು: ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು ವಿತರಿಸಲು ತೊಡಕುಗಳಿರುವುದರಿಂದ, ಮೂರು ತಿಂಗಳಿಗೊಮ್ಮೆ ಹಣ ನೀಡಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪ್ರತಿ ತಿಂಗಳು ಹಣ ನೀಡಲು ತಾಂತ್ರಿಕ ಹಾಗೂ ಆಡಳಿತಾತ್ಮಕ ಅಡೆತಡೆಗಳಿವೆ. ಆದ್ದರಿಂದ, ಸದ್ಯಕ್ಕೆ ಮೂರು ತಿಂಗಳಿಗೊಮ್ಮೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಇನ್ನೊಂದೆಡೆ, ಜಿಎಸ್‌ಟಿ ಸಮಸ್ಯೆ ಕಾರಣದಿಂದಾಗಿ ಸುಮಾರು 1.2 ಲಕ್ಷ ಲಾಭಾಂಶದ ಅರ್ಹ ಮಹಿಳೆಯರಿಗೆ ಹಣ ಜಮೆಯಾಗಿರಲಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದು, ಇದರಲ್ಲಿ ಈಗ 58 ಸಾವಿರ ಮಂದಿಯ ಸಮಸ್ಯೆ ಬಗೆಹರಿಸಲಾಗಿದ್ದು, ಉಳಿದವರ ಸಮಸ್ಯೆಗಳನ್ನು ಕೂಡ ಬಗೆಹರಿಸುವ ಪ್ರಕ್ರಿಯೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

ಮುಂದುವರೆದ ಹೃದಯಾಘಾತ: ಬೆಳಗಾವಿಯಲ್ಲಿ ಕುಸಿದು ಬಿದ್ದು ಯೋಧ ಸಾವು.!

ಬೆಳಗಾವಿ: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಅದರಲ್ಲೂ ಹಾಸನದಲ್ಲಿ ಹೆಚ್ಚಾಗುತ್ತಿರುವ ಸಾವಿನ ಸರಣಿ ಜನರನ್ನು ಆತಂಕಕ್ಕೆ ದೂಡಿತ್ತು.  ಇದೀಗ ರಜೆಗೆಂದು ಊರಿಗೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ನಗರದ ಅನಗೋಳದ ಬಜಾರ್‌ನಲ್ಲಿ ನಡೆದಿದೆ.

ಇಬ್ರಾಹಿಂ ದೇವಲಾಪುರ (37) ಮೃತ ಯೋಧನಾಗಿದ್ದು, ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ರಜೆಗೆಂದು ಊರಿಗೆ ಬಂದಿದ್ದರು.

ಈ ವೇಳೆ ಅನಗೋಳದ ಬಜಾರ್‌ಗೆ ತೆರಳಿದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ಮೈಕ್ರೋ ಫೈನಾನ್ಸ್ ಕಿರುಕುಳ: ರೈಲಿಗೆ ತಲೆಕೊಟ್ಟು ತಾಯಿ- ಮಗಳು ಆತ್ಮಹತ್ಯೆ.!

0

ದಾವಣಗೆರೆ: ಸಾಲಕ್ಕೆ ಹೆದರಿ ತಾಯಿ–ಮಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ತುಂಗಭದ್ರ ನದಿ ಸೇತುವೆ ಬಳಿ ನಡೆದಿದೆ.

ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ಸುವರ್ಣಮ್ಮ (60) ಹಾಗೂ ಪುತ್ರಿ ಗೌರಮ್ಮ (30) ಮೃತ ದುರ್ಧೈವಿಗಳಾಗಿದ್ದು, ಕೆಲ ವರ್ಷಗಳ ಹಿಂದೆ ಪತಿ ನಿಧನರಾಗಿದ್ದರು. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಸುವರ್ಣಮ್ಮ ಮೂವರು ಪುತ್ರಿಯರಲ್ಲಿ ಇಬ್ಬರ ವಿವಾಹ ಮಾಡಿದ್ದರು. ಇನ್ನೊಬ್ಬ ಮಗಳು ಗೌರಮ್ಮ ಅಂಗವಿಕಲೆಯಾಗಿದ್ದು, ತಾಯಿ ಜೊತೆ ಇದ್ದರು.

ಇನ್ನೂ ಸ್ವ ಸಹಾಯ ಸಂಘ ಹಾಗೂ ಮೈಕ್ರೊ ಫೈನಾನ್ಸ್ ಗಳಲ್ಲಿ 3ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು. ಎರಡು ಸಾಲಕ್ಕೆ ವಾರಕ್ಕೊಮ್ಮೆ ಹಾಗೂ ಒಂದು ಸಾಲಕ್ಕೆ ಮಾಸಿಕ ಕಂತು ಕಟ್ಟಬೇಕಾಗಿತ್ತು.

ಆದ್ರೆ ಸಾಲದ ಕಂತು ಕಟ್ಟಲಾಗಿದೆ ಪುತ್ರಿಯೊಂದಿಗೆ ಜುಲೈ 1ರಂದು ಗ್ರಾಮ ತೊರೆದಿದ್ದ ಸುವರ್ಣಮ್ಮ ಇಂದು ರೈಲ್ವೆ ಸೇತುವೆಯ ಮೇಲೆ ತೆರಳಿ ಆತ್ಮಹತ್ಯೆ ಶರಣಾಗಿದ್ದಾರೆ. ಇನ್ನೂ ಘಟನೆ ಸಂಬಂಧ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಧಾನ ಪರಿಷತ್ ಮಾಜಿ ಸಭಾಪತಿ ಎನ್. ತಿಪ್ಪಣ್ಣ ನಿಧನ!

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಉಪಸಭಾಪತಿ ಎನ್.ತಿಪ್ಪಣ್ಣ (97) ನಿಧನರಾಗಿದ್ದಾರೆ.  ತಿಪ್ಪಣ್ಣ ಅವರಿಗೆ ಒಬ್ಬ ಪುತ್ರ ಇದ್ದಾರೆ.

ಅವರ ಅಂತ್ಯ ಸಂಸ್ಕಾರವನ್ನು ನಾಳೆ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ತುರವಿನೂರಿನಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಬಳ್ಳಾರಿಯ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ವಕೀಲರಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಅವರು, ಬಳಿಕ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದರು. ನಾಲ್ಕು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಪ್ರತಿಪಕ್ಷದ ಉಪ ನಾಯಕರಾಗಿದ್ದರು. ಅಲ್ಪ ಅವಧಿಗೆ ಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

error: Content is protected !!