Home Blog Page 8

ಪಂಚ ಗ್ಯಾರಂಟಿಯಿಂದ ಸಮ ಸಮಾಜ

ವಿಜಯಸಾಕ್ಷಿ ಸುದ್ದಿ, ಗದಗ: ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪಾತ್ರ ಮಹತ್ತರವಾಗಿದೆ. ಬಡ ಮತ್ತು ಮಧ್ಯಮ ವರ್ಗದವರ ಜೀವನದಲ್ಲಿ ಸಂತೋಷ ತಂದಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.

ನಗರದ ಹೊಸ ಬಸ್ ನಿಲ್ದಾಣದಲ್ಲಿ ಜುಲೈ 2ರಿಂದ 4ರವರೆಗೆ ಆಯೋಜಿಸಿರುವ ಕರ್ನಾಟಕ ಸರ್ಕಾರದ 2 ವರ್ಷಗಳ ಸಾಧನೆ ಬಿಂಬಿಸುವ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸರಕಾರದ ಸಾಧನೆಗಳನ್ನು ಬಿಂಬಿಸುವ ಹಾಗೂ ಜನಪರ ಯೋಜನೆಗಳ ಮಾಹಿತಿಯನ್ನು ನೀಡುವ ವಸ್ತು ಪ್ರದರ್ಶನ ಹಮ್ಮಿಕೊಂಡಿರುವುದು ಶ್ಲಾಘನೀಯ. ಗೃಹಲಕ್ಷ್ಮೀ ಯೋಜನೆ ಮಹಿಳೆಯರನ್ನು ಆರ್ಥಿಕ ಸಬಲೀಕರಣದತ್ತ ದಿಟ್ಟ ಹೆಜ್ಜೆಯಾಗಿದೆ. ಹಸಿವು ಮುಕ್ತ ಕರ್ನಾಟಕ ಮಾಡುವ ದೃಢ ಸಂಕಲ್ಪದಿಂದ ಪ್ರತಿಯೊಬ್ಬ ಪಡಿತರದಾರರಿಗೆ ತಲಾ 10 ಕೆ ಜಿ ಆಹಾರ ಧಾನ್ಯ ಒದಗಿಸಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಿಂದ ಉಚಿತ ಬೆಳಕು ನೀಡಿ ಸುಸ್ಥಿರ ಬದುಕನ್ನು ನಡೆಸಲು ಸಹಕಾರಿಯಾಗಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ನಿಜವಾದ ಶಕ್ತಿ ಬಂದಿದೆ. ಯುವನಿಧಿಯಲ್ಲಿ ನೋಂದಣಿಯಾದ ಯುವಜನತೆಗೆ ಹಣ ನೀಡಲಾಗುತ್ತಿದೆ ಎಂದು ಹೇಳಿದರು.

ರೋಣ ತಾಲೂಕಿನ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಿಥನಗೌಡ ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆಗಳ ಜೊತೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಿ ರಾಜ್ಯವನ್ನು ಪ್ರಗತಿಯತ್ತ ಮುನ್ನಡೆಸುತ್ತಿದ್ದು, ಗ್ಯಾರಂಟಿಯಿಂದ ಬಡವರಿಗೆ, ಯುವಕರಿಗೆ, ಮಹಿಳೆಯರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರ್‌ಸಾಬ್ ಬಬರ್ಚಿ, ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅಶೋಕ ಮಂದಾಲಿ, ನೀಲಮ್ಮ ಬೋಳಣ್ಣನವರ, ಬಸವರಾಜ ಕಡೇಮನಿ, ಶಂಭು ಕಾಳೆ, ಸಂಗಮೇಶ ಕೆರಕಲಮಟ್ಟಿ, ಸಾವಿತ್ರಿ ಹೂಗಾರ, ದೇವರಡ್ಡಿ ತಿರ್ಲಾಪುರ, ಗಣೇಶ ಮಟ್ಟಾಲಿ, ಸಂಗಮೇಶ ಹಾದಿಮನಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಮಹಿಳಾ ಮತ್ತು ಮಕ್ಕಳ ನಿರೂಪಣಾಧಿಕಾರಿ ರಾಧಾ ಮಣ್ಣೂರು, ಹುಲಿಗೆಮ್ಮ ಜೋಗೆರ ಹಾಜರಿದ್ದರು.

ಮುಖ್ಯಮಂತ್ರಿಗಳೊಂದಿಗೆ ಸೆಲ್ಪಿ!

ವಸ್ತುಪ್ರದರ್ಶನದಲ್ಲಿ ನಾಡಿನ ಜನರ ಬದುಕು ಬೆಳಗಿಸಿದ ಗ್ಯಾರಂಟಿ ಯೋಜನೆಗಳ ಸಮಗ್ರ ಮಾಹಿತಿ, ಯಶೋಗಾಥೆಯನ್ನೊಳಗೊಂಡ ಗ್ಯಾರಂಟಿಯ ಸಮರ್ಪಣೆ, ಅಭಿವೃದ್ಧಿಯ ಸಂಕಲ್ಪದ 2 ವರ್ಷಗಳ ಸಾಧನಾ ಸಂಭ್ರಮದ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಪಡೆದುಕೊಳ್ಳುವಂತೆ ಬಿಂಬಿಸುವ ಸೆಲ್ಪಿ ಸಾರ್ವಜನಿಕರ ಗಮನ ಸೆಳೆಯಿತು.

“ಸರ್ಕಾರದ 2 ವರ್ಷದ ಸಾಧನೆ ಆಚರಣೆ ರಾಜ್ಯಾದ್ಯಂತ ಸಂತೋಷದಿಂದ ಆಚರಿಸಲಾಗಿದೆ. ಪಂಚ ಗ್ಯಾರಂಟಿ ಮೂಲಕ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ. ಗ್ಯಾರಂಟಿ ಯೋಜನೆ ಮೂಲಕ ಸಾಮಾನ್ಯ ಜನರಿಗೆ ಸ್ವಾಭಿಮಾನದ ಬದುಕನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದೇವೆ. ಸಮ ಸಮಾಜ ನಿರ್ಮಾಣದ ಜೊತೆಗೆ ಆರ್ಥಿಕವಾಗಿ ಸಮಾನತೆ ಮೂಡಿದೆ”

– ಕೃಷ್ಣಗೌಡ ಎಚ್.ಪಾಟೀಲ.

ಗದಗ ತಾಲೂಕು ಗ್ಯಾರಂಟಿ ಯೋಜನೆಗಳ

ಅನುಷ್ಠಾನ ಪ್ರಾಧಿಕಾರದ ಸದಸ್ಯರು.

ಕದ್ದುಮುಚ್ಚಿ ಮಹಿಳೆಯರ ಅಶ್ಲೀಲ ವಿಡಿಯೋ ರೆಕಾರ್ಡ್: ಇನ್ಫೋಸಿಸ್ ಉದ್ಯೋಗಿ ಅರೆಸ್ಟ್!

ಬೆಂಗಳೂರು:- ಮಹಿಳೆಯರ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಇನ್ಫೋಸಿಸ್ ಉದ್ಯೋಗಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸ್ವಪ್ನಿಲ್ ನಾಗೇಶ್ ಮಲಿ (28) ಬಂಧಿತ ಉದ್ಯೋಗಿ. ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದವ. ಬೆಂಗಳೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಹೀಲೆಕ್ಸ್ ಡಿಪಾರ್ಟ್ಮೆಂಟ್ ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸ್ವಪ್ನಿಲ್, ಜೂನ್ 30ರಂದು ಮಹಿಳಾ ಉದ್ಯೋಗಿ ಶೌಚಾಲಯಕ್ಕೆ ಹೋಗಿದ್ದಾಗ ಕದ್ದು ವಿಡಿಯೋ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಮಹಿಳೆ ಕೊಟ್ಟ ದೂರಿನ ಮೇರೆಗೆ ಸದ್ಯ ಪೊಲೀಸರು ಸ್ವಪ್ನಿಲ್​ ನನ್ಜು ಬಂಧಿಸಿದ್ದಾರೆ.

ಇನ್ನೂ ಪ್ರಾಥಮಿಕ ತನಿಖೆ ವೇಳೆ ಈತನ ಮೊಬೈಲ್​ ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳು ಪತ್ತೆಯಾಗಿವೆ. ಜೂನ್ 30ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮಹಿಳೆ ಮೂತ್ರ ವಿಸರ್ಜನೆಗೆ ಟಾಯ್ಲೆಟ್ ಹೋಗಿದ್ದಾಳೆ. ಮೇಲಿಂದ ಯಾರೋ ರೆಕಾರ್ಡ್ ಮಾಡುತ್ತಿರುವ ರೀತಿ ಎದುರಿನ‌ ಡೋರ್ ನಲ್ಲಿ ಪ್ರತಿಬಿಂಬ ಕಂಡಿದೆ. ಎಚ್ಚೆತ್ತ ಮಹಿಳೆ ಹೊರಗೆ ಬಂದು ನೋಡಿದ್ದಾಳೆ. ಓರ್ವ ಯುವತಿ ಮಾತ್ರ ಕಂಡಿದ್ದಾಳೆ. ಇನ್ನೂ ಅನುಮಾನ ಪರಿಹರಿಸಿಕೊಳ್ಳಲು ಮತ್ತೆ ಟಾಯ್ಲೆಟ್ ಹೋಗೆ ಕೆಲ ಹೊತ್ತು ಮಹಿಳೆ ಕಾದಿದ್ದಾಳೆ. ಅಷ್ಟೊತ್ತಿಗೆ ಆರೋಪಿ ಪ್ಯಾಂಟ್ ಬಿಚ್ಚಿ ಕಮೊಡ್ ಮೇಲೆ ನಿಂತು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡಿದ್ದು, ಕೂಡಲೇ ಆ ಮಹಿಳೆ ಜೋರಾಗಿ ಕಿರುಚಾಡಿದಾಗ, ಭಯಭೀತನಾದ ಸ್ವಪ್ನಿಲ್ ಆಕೆಯ ಬಳಿ ಕ್ಷಮೆ ಕೇಳಿದ್ದಾನೆ. ಅಷ್ಟರೊಳಗೆ ಘಟನಾ ಸ್ಥಳಕ್ಕೆ ಎಚ್‌ಆರ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮೊಬೈಲ್‌ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳು ಇರುವುದು ಪತ್ತೆಯಾಗಿದೆ.

ವಿಚಾರ ತಿಳಿಯುತ್ತಿದ್ದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಘಟನೆ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಸ್ಪಷ್ಟನೆ ಕೊಟ್ಟಿದ್ದಾರೆ.

ಸರ್ಕಾರಿ ಶಾಲೆಗಳ ಶಿಕ್ಷಣದಲ್ಲಿರಲಿ ವಿಶ್ವಾಸ

ವಿಜಯಸಾಕ್ಷಿ ಸುದ್ದಿ, ರೋಣ: 2025-26ನೇ ಶೈಕ್ಷಣಿಕ ಸಾಲಿನಲ್ಲಿ ರೋಣ ತಾಲೂಕಿನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಗುರಿಯೊಂದಿಗೆ ಶಿಕ್ಷಣ ಇಲಾಖೆಯ `ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ರೂಪುರೇಷೆಯನ್ನು ಸಿದ್ಧಪಡಿಸಿದ್ದು, ಜುಲೈ ತಿಂಗಳಿನಿಂದ ಬಹುತೇಕ ಎಲ್ಲಾ ಶಾಲೆಗಳಲ್ಲಿ ಕಾರ್ಯಕ್ರಮ ಆರಂಭ ಮಾಡಲಾಗುತ್ತಿದೆ.

ಈ ಕುರಿತು ಬುಧವಾರ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಮಾಹಿತಿ ನೀಡಿ, ಈ ಕಾರ್ಯಕ್ರಮವು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ, ಸರಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು, ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸದಿಂದ ಶಾಲೆ-ಕಾಲೇಜುಗಳತ್ತ ಹೆಜ್ಜೆ ಇಡುವಂತೆ ಪ್ರೇರೇಪಿಸುವುದು ಮತ್ತು ಮಕ್ಕಳು ತರಗತಿಯಿಂದ ಹೊರಗುಳಿಯುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಈ ಕಾರ್ಯಕ್ರಮ ಸಿದ್ಧಪಡಿಸಿದೆ ಎಂದರು.

ರೋಣ ತಾಲೂಕಿನ ಎಲ್ಲಾ ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಪಾಲಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಬಿಸಿಯೂಟದ ಅಡುಗೆ ಸಿಬ್ಬಂದಿ, ಗ್ರಾ.ಪಂ/ವಾರ್ಡ್ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಮೀಪದ ಶಾಲೆಗಳ ಮುಖ್ಯ ಶಿಕ್ಷಕರು, ಮತ್ತು ಉಪನ್ಯಾಸಕರು ಮತ್ತು ಎಲ್ಲಾ ಭಾಗಿದಾರರನ್ನು ಒಳಗೊಳಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಸರ್ವೆ ಶೀಟ್‌ಗಳನ್ನು ನೀಡಿ, ಶಾಲೆ-ಕಾಲೇಜುಗಳ ಮೂಲ ಸೌಕರ್ಯ, ಶೈಕ್ಷಣಿಕ ಸೌಲಭ್ಯ, ಕಲಿಕೆಯ ಗುಣಮಟ್ಟ ಮತ್ತು ವಾತಾವರಣದ ಬಗ್ಗೆ ಅಭಿಪ್ರಾಯ ಸಂಗ್ರಹಿಸುವುದಲ್ಲದೆ ಸಂವಾದದ ಮೂಲಕ ಸಲಹೆಗಳನ್ನು ಸ್ವೀಕರಿಸಿ, ಶಾಲೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.

ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ನಿರ್ದೇಶಕರು, ಜಿಲ್ಲಾ ಮಟ್ಟದ ಸಿಇಒ, ಡಿಡಿಪಿಐ, ಡಿಡಿಪಿಯು, ತಾಲೂಕು/ವಲಯ ಮಟ್ಟದ ತಾ.ಪಂ ಇಒ, ಬಿಇಒ, ಬಿ.ಆರ್.ಸಿ/ ಸಿ.ಆರ್.ಪಿ, ಮುಖ್ಯ ಶಿಕ್ಷಕರು, ಪ್ರಾಚಾರ್ಯರು ಮತ್ತು ಅಡುಗೆ ಸಿಬ್ಬಂದಿ ಸೇರಿದಂತೆ ಮೇಲ್ವಿಚಾರಣಾ ತಂಡಗಳು ಸಹಕಾರ ನೀಡಲಿವೆ. ರೋಣ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳು ಈ ಕಾರ್ಯಕ್ರಮವನ್ನು ಜುಲೈ ತಿಂಗಳಿನಿಂದ 2025-2026ರ ಶೈಕ್ಷಣಿಕ ಸಾಲಿನ ಪೂರ್ತಿ ನಡೆಸಲಾಗುವುದು.

“ಈ ಶೈಕ್ಷಣಿಕ ಸಾಲಿನಿಂದ ಆರಂಭವಾದ ಈ ಕಾರ್ಯಕ್ರಮವು ಈಗ ಮುಂದುವರಿದ ರೂಪದಲ್ಲಿ ಸಮುದಾಯದಲ್ಲಿ ಶಿಕ್ಷಣದ ಜಾಗೃತಿಯನ್ನು ತರುತ್ತಿದೆ. ಹಳೆಯ ವಿದ್ಯಾರ್ಥಿಗಳಲ್ಲಿ ತಾವು ಓದಿದ ಶಾಲೆ-ಕಾಲೇಜುಗಳ ಬಗ್ಗೆ ಅಭಿಮಾನ ಮೂಡಿಸುವ ಜೊತೆಗೆ, ಅವರಿಂದ ಶಾಲೆಯ ಅಭಿವೃದ್ಧಿಗೆ ಕೊಡುಗೆಗಳನ್ನು ಪಡೆಯುವುದು ಮತ್ತು ಪೋಷಕರಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣದ ಕುರಿತು ವಿಶ್ವಾಸ ತುಂಬುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ”

– ಎಂ.ಎ. ಫನಿಭಂದ.

ಬಿಇಓ, ರೋಣ ತಾಲೂಕು.

ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಕ್ಷೀರಭಾಗ್ಯ, ಮೊಟ್ಟೆ/ಬಾಳೆಹಣ್ಣು, ರಾಗಿಮಾಲ್ಟ್, ಮಧ್ಯಾಹ್ನದ ಬಿಸಿಯೂಟದಂತಹ ಯೋಜನೆಗಳ ಮೂಲಕ ಮಕ್ಕಳಲ್ಲಿರುವ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ನಿವಾರಿಸುವದು, ಕ್ರೀಡೆ ಮತ್ತು ಶೌಚಾಲಯ, ಕುಡಿಯುವ ನೀರು ಇನ್ನಿತರ ಹಲವಾರು ಯೋಜನೆಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವುದು, ಆಧುನಿಕ ಕಲಿಕಾ ಸೌಲಭ್ಯಗಳಾದ ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಲೈಬ್ರರಿ, ಗುಣಮಟ್ಟದ ಶಿಕ್ಷಕರು ಮತ್ತು ಶೈಕ್ಷಣಿಕ ಪ್ರೋತ್ಸಾಹಕ ಯೋಜನೆಗಳ ಕುರಿತು ಮಾಹಿತಿ ಹಂಚುವುದು, ದಾಖಲಾದ ವಿದ್ಯಾರ್ಥಿಗಳು ನಿಯಮಿತವಾಗಿ ತರಗತಿಗಳಿಗೆ ಹಾಜರಾಗಿ ಕಲಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಖಾತರಿಪಡಿಸುವ ಯೋಜನೆ ಇದಾಗಿದೆ.

ಜುಲೈ 3ರಂದು ಪೂಜ್ಯಶ್ರೀ ಡಾ. ಕಲ್ಲಯ್ಯಜ್ಜನವರು 55ನೇ ವರ್ಷದ ಜನ್ಮದಿನಾಚರಣೆ

ವಿಜಯಸಾಕ್ಷಿ ಸುದ್ದಿ, ಗದಗ: ಬಾಲ್ಯದಲ್ಲಿ ಅಂಧತ್ವಕ್ಕೆ ಶರಣಾಗಿ ಗದುಗಿನ ಸುಕ್ಷೇತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಗಾನಯೋಗಿ ಪಂ. ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾಗಿ ಅಭ್ಯಾಸಗೈಯುತ್ತ ಸರಳ ಬದುಕಿನ ವಿದ್ಯಾರ್ಥಿಯಾಗಿ ಇಂದು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾಗಿ, ಉಭಯ ಗುರುಗಳ ಮಾರ್ಗದರ್ಶನದಂತೆ ಅಂಧ-ಅನಾಥರಿಗೆ ಅಭಯ ಹಸ್ತ ನೀಡಿ ಆಶ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರ ಜೀವನ ಸಮಾಜಕ್ಕೆ ಮಾದರಿಯಾಗಿದೆ.

ಪೂಜ್ಯಶ್ರೀ ಕಲ್ಲಯ್ಯಜ್ಜನವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದಲ್ಲಿ 1971ರ ಜುಲೈ 3ರಂದು ಶ್ರೀ ವೀರಯ್ಯನವರು ಹಿರೇಮಠ ಹಾಗೂ ಮಾತೋಶ್ರೀ ಬಸಮ್ಮನವರ ಪುತ್ರರಾಗಿ ಜನ್ಮತಾಳಿದರು. ಗಂಗಾವತಿ ತಾಲೂಕಿನ ಉಡಮಕಲ್ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಕಲ್ಲಯ್ಯಜ್ಜನವರು ನಂತರ ಗದುಗಿನ ಕೆ.ಎಚ್. ಪಾಟೀಲ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪಡೆದರು. ಅಲ್ಲಿಂದ ಪಂ. ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಬಿ.ಮ್ಯೂಸಿಕ್ ಪದವಿ ಪಡೆದರು.

ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರಲ್ಲಿ ಜೂನಿಯರ್, ಸೀನಿಯರ್, ವಿದ್ವತ್ ದರ್ಜೆ ಸಂಗೀತ ಅಭ್ಯಾಸವನ್ನು ಪಡೆದರು. ಸಂಸ್ಥೆಯಲ್ಲಿ ಎರಡು ವರ್ಷ ಆಶ್ರಮದ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಗುರುವಿನ ಆಶೀರ್ವಾದದಿಂದ ಸ್ವಂತ ಕವಿಗಳಾಗಿ ನಾಟಕ ಹಾಗೂ ಕವನಗಳನ್ನು ಅಲ್ಲದೆ, ತಮ್ಮ ಗುರುಗಳಾದ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಚರಿತಾಮೃತ ಕುರಿತು `ಧರೆಗೆ ಬಂದ ದೇವರು’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಗುರುವಿನ ಮೇಲೆ ಇಟ್ಟಿರುವ ಭಕ್ತಿ ಪ್ರೇಮದ ಕಾಣಿಕೆಯಾಗಿ ಇವರಿಗೆ ನೂರಾರು ತುಲಾಭಾರ ಸೇವೆಗಳು ಜರುಗಿವೆ.

ಬಡವ-ಬಲ್ಲಿದರ, ದೀನ-ದಲಿತರ ಕಣ್ಮಣಿಗಳು, ಪುಣ್ಯಾಶ್ರಮದ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರರು, ಅವಳಿ ನಗರದ ಪುಣ್ಯಧಾಮ, ಸಂಗೀತ ಕಾಶಿ ಸುಕ್ಷೇತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾಗಿರುವ ಪರಮಪೂಜ್ಯ ಶ್ರೀ ಡಾ.ಕಲ್ಲಯ್ಯಜ್ಜನವರ 55ನೇ ವರ್ಷದ ಜನ್ಮದಿನದ ಸಂಭ್ರಮಾಚರಣೆಯು ಜುಲೈ 3ರಂದು ಸಂಜೆ 6 ಗಂಟೆಗೆ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀಗುರು ಪುಟ್ಟರಾಜ ಕಲಾಭವನದಲ್ಲಿ ಜರುಗಲಿದೆ.

ಈ ಕಾರ್ಯಕ್ರಮದಲ್ಲಿ ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಲಿಂಗಸೂರ ಮಾಣಿಕೇಶ್ವರಿ ಆಶ್ರಮದ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

2001ರ ಸೆಪ್ಟಂಬರ್ 17ರಂದು ಪಂ. ಪುಟ್ಟರಾಜ ಕವಿ ಗುರುಗಳ ಅಪ್ಪಣೆಯ ಮೇರೆಗೆ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಮರಳಿ ಬಂದು ಹೆಚ್ಚಿನ ಸಂಗೀತ ವಿದ್ಯಾಭ್ಯಾಸ ಪಡೆದರು. ಪೂಜ್ಯಶ್ರೀ ಪಂ. ಪುಟ್ಟರಾಜ ಕವಿ ಗವಾಯಿಗಳವರ ನಂತರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾಗಿ ಆಶ್ರಮವನ್ನು ಮುನ್ನಡೆಸುತ್ತಿದ್ದಾರೆ.

ಸಿದ್ದರಾಮಯ್ಯನವರಿಗೆ ತಮ್ಮ ಸ್ಥಾನದ ಬಗ್ಗೆ, ಅಳುಕಿದೆ, ಭಯವಿದೆ: ಆರ್ ಅಶೋಕ್!

ಬೆಂಗಳೂರು:- ಸಿದ್ದರಾಮಯ್ಯನವರಿಗೆ ತಮ್ಮ ಸ್ಥಾನದ ಬಗ್ಗೆ, ಅಳುಕಿದೆ, ಭಯವಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ಕೊಟ್ಟಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರೆಲ್ಲ ಅವಕಾಶ ಕೊಟ್ಟರೆ ನಾನೇ ಮುಖ್ಯಮಂತ್ರಿಯಾಗ್ತೀನಿ ಅನ್ನುತ್ತಾರೆ, ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ ಸಿಎಂ ಹುದ್ದೆಗಾಗಿ ಜೋರಾಗಿ ಲಾಬಿ ನಡೆಸಿದ್ದಾರೆ.

ಏತನ್ಮಧ್ಯೆ ಸಿದ್ದರಾಮಯ್ಯ 5-ವರ್ಷ ಅವಧಿಗೆ ನಾನೇ ಸಿಎಂ ಅನ್ನುತ್ತಾರೆ. ಹೀಗಾಗಿ ಕಾಂಗ್ರೆಸ್ ಮನೆಯೊಂದರ ಬಾಗಿಲು ನೂರೊಂದು ರೀತಿ ಅಗಿದೆ, ಸಿದ್ದರಾಮಯ್ಯನವರಿಗೆ ತಮ್ಮ ಸ್ಥಾನದ ಬಗ್ಗೆ, ಅಳುಕಿದೆ, ಭಯವಿದೆ, ಹಾಗಾಗೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಬೇಕಿರುವುದನ್ನು ತಾವೇ ಹೇಳುತ್ತಾರೆ ಎಂದು ಅಶೋಕ ವ್ಯಂಗ್ಯವಾಡಿದ್ದರು.

ಮುಖ್ಯಮಂತ್ರಿ ಬದಲಾವಣೆಗೆ ಯಾರೂ ಪಟ್ಟು ಹಿಡಿದಿಲ್ಲ: ಸಂಸದ ರಾಜಶೇಖರ ಹಿಟ್ನಾಳ್!

ಕೊಪ್ಪಳ:- ಮುಖ್ಯಮಂತ್ರಿ ಬದಲಾವಣೆಗೆ ಯಾರೂ ಪಟ್ಟು ಹಿಡಿದಿಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ್ ಅವರು ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆಗೆ ಯಾರೂ ಪಟ್ಟು ಹಿಡಿದಿಲ್ಲ, ಯಾರೂ ಒತ್ತಾಯವನ್ನು ಮಾಡಿಲ್ಲ. ಸಿದ್ದರಾಮಯ್ಯ ಸಾಹೇಬರೇ 5 ವರ್ಷ ಸಿಎಂ ಆಗಿ ಮುಂದುವರೆಯತ್ತಾರೆಂದು ನಮ್ಮ ಎಲ್ಲ ಮುಖಂಡರು ಹೇಳಿದ್ದಾರೆ. ನಾನಷ್ಟೇ ಅಲ್ಲ, ಎಲ್ಲ ಮುಖಂಡರು ಹೇಳಿದ್ದಾರೆ. ಯಾರೋ ಒಬ್ಬರು ಹೇಳುತ್ತಾರೆ ಎಂದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ಪಕ್ಷದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲ್ಲ ಎಂದರು.

ಈಗಾಗಲೇ ಇಕ್ಬಾಲ್ ಹುಸೇನ್‌ಗೆ ನೋಟಿಸ್ ಕೊಡಲಾಗಿದೆ. ಕೇವಲ ನೋಟಿಸ್ ಅಲ್ಲ, ಅವರ ಮೇಲೆ ಕ್ರಮ ಆಗುತ್ತದೆ. ಇನ್ನೂ ನಮ್ಮ ಪಕ್ಷದಲ್ಲಿ ಅಸಮಾಧಾನ ಇಲ್ಲ. ಸಿದ್ದರಾಮಯ್ಯ ಸಾಹೇಬರ ಬಗ್ಗೆ ಯಾರೂ ಮಾತಾಡಿಲ್ಲ. ಕ್ಷೇತ್ರದ ಬಗ್ಗೆ ಮಾತಾಡಿದ್ದಾರೆ ಹಾಗೂ ಅನುದಾನ ಎಲ್ಲರಿಗೂ ಸಿಕ್ಕಿದೆ. ನನ್ನ ಪ್ರಕಾರ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದರು.

ಅಮೆರಿಕಾ ಪ್ರವಾಸದಲ್ಲಿ ಯಶ್‌ ಜೋಡಿ: ಪತ್ನಿಯನ್ನು ಎತ್ತಿ ಮುದ್ದಾಡಿದ ರಾಕಿಂಗ್‌ ಸ್ಟಾರ್‌

ಸ್ಯಾಂಡಲ್‌ ವುಡ್‌ ನ ಮುದ್ದಾದ ಜೋಡಿ ಯಶ್‌ ಹಾಗೂ ರಾಧಿಕಾ ಪಂಡಿತ್‌ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಸದ್ಯ ರಾಧಿಕ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಮುದ್ದಾದ ಫೋಟೋವೊಂದನ್ನ ಹಂಚಿಕೊಂಡಿದ್ದು ಈ ಪೊಟೋ ನೋಡಿ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

ರಾಧಿಕಾ ಪಂಡಿತ್ ಹಾಗೂ ಯಶ್ ವೆಕೇಶನ್​ಗೆ ಅಮೆರಿಕಾಗೆ ತೆರಳಿದ್ದಾರೆ. ಯಶ್ ಅವರು ಇಷ್ಟು ದಿನ ‘ಟಾಕ್ಸಿಕ್‘ ಹಾಗೂ ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರು. ಈ ಕಾರಣದಿಂದ ಬ್ರೇಕ್ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಇಬ್ಬರೂ ಎಲ್ಲಿಯೂ ಹೊರಗೆ ತೆರಳಿ ಸುತ್ತಾಡಲು ಸಾಧ್ಯ ಆಗಿರಲಿಲ್ಲ. ಇದೀಗ ಯಶ್‌ ಬಿಡುವು ಪಡೆದುಕೊಂಡಿದ್ದು ಪತ್ನಿಯೊಂದಿಗೆ ವಿದೇಶಕ್ಕೆ ತೆರಳಿದ್ದಾರೆ.

ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಯಶ್‌ ಹಾಗೂ ರಾಧಿಕಾಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇವರ ದಾಂಪತ್ಯಕ್ಕೆ 9 ವರ್ಷ ತುಂಬುತ್ತಾ ಬಂದಿದ್ರು ಪ್ರೀತಿ ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ. ಶೂಟಿಂಗ್‌ ನಲ್ಲಿ ಯಶ್‌ ಎಷ್ಟೇ ಬ್ಯುಸಿಯಾಗಿದ್ರು ಕುಟುಂಬಕ್ಕೆ ಸದಾ ಸಮಯ ನೀಡುತ್ತಾರೆ. ಸಮಯ ಸಿಕ್ಕಾಗೆಲ್ಲ ಹೆಂಡತಿ ಮಕ್ಕಳ ಜೊತೆ ಸಮಯ ಕಳೆಯುತ್ತಾರೆ.

ಗಣೇಶ್‌ ಹುಟ್ಟುಹಬ್ಬಕ್ಕೆ ‘Yours Sincerely Raamʼ ಚಿತ್ರದ ಪೋಸ್ಟರ್‌ ರಿಲೀಸ್‌

ಇಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಖುಷಿಯನ್ನು ಮತ್ತಷ್ಟು ಹೆಚ್ಚಿಸಲು ಗಣೇಶ್‌ ಹಾಗೂ ರಮೇಶ್ ಅರವಿಂದ್ ನಟನೆಯ ‘Yours Sincerely Raamʼ ಚಿತ್ರತಂಡ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದೆ. ಈ ಮೂಲಕ ಗಣೇಶ್‌ ಬರ್ತಡೇಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದೆ.

‘Yours Sincerely Raamʼ ಸಿನಿಮಾದಲ್ಲಿ ಗಣೇಶ್‌ ಹಿಂದೆಂದೂ ಕಾಣದ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆಂಜನೇಯನ ಅವತಾರದಲ್ಲಿ ಗಣೇಶ್‌ ಕಾಣಿಸಿಕೊಂಡಿದ್ದಾರೆ. ಹಿಮಾಲಯದ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬಂದಿರುವ ಪೋಸ್ಟರ್ ನಲ್ಲಿ ರಾಮ ಸೈಕಲ್ ಮೇಲೆ ಕುಳಿತಿದ್ದು, ಭಜರಂಗಿ ಭುಜದಲ್ಲಿ ಪೋಸ್ಟ್ ಮ್ಯಾನ್ ಬ್ಯಾಗ್ ಕಾಣಿಸುತ್ತದೆ. ಸದ್ಯ ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್‌ ಸಾಕಷ್ಟು ಕುತೂಹಲ ಮೂಡಿಸಿದೆ.

ʻಪುಷ್ಪಕ ವಿಮಾನ’, ʻಇನ್ಸ್ಪೆಕ್ಟರ್ ವಿಕ್ರಮ್ʼ, ʻಮಾನ್ಸೂನ್ ರಾಗʼದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳ್ತಿದ್ದಾರೆ. ಇನ್ನೂ ಐರಾ ಫಿಲ್ಮ್ಸ್ ಮತ್ತು ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿ ಸತ್ಯ ರಾಯಲ Your’s sincerely ರಾಮ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿ, ಅಣ್ಣಾವ್ರ ಆಶೀರ್ವಾದ ಪಡೆದ ಯಶ್‌ ತಾಯಿ

ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ನಿರ್ಮಾಪಕಿಯಾಗಿ ಈಗಾಗಲೇ ಸ್ಯಾಂಡಲ್‌ ವುಡ್‌ ಗೆ ಎಂಟ್ರಿಕೊಟ್ಟಿದ್ದಾರೆ. ಪುಷ್ಪಾ ಅವರು ನಿರ್ಮಾಣ ಮಾಡಿರುವ ಮೊಟ್ಟ ಮೊದಲ ಸಿನಿಮಾ ಬಿಡುಗಡಗೆ ಸಜ್ಜಾಗಿದ್ದ ಇದೇ ವೇಳೆ ರಾಜ್‌ ರಾಜ್‌ ಕುಮಾರ ಸಮಾಧಿಗೆ ತೆರಳಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಪುಷ್ಪ ಅವರು ನಿರ್ಮಾಣ ಮಾಡಿರುವ ಮೊದಲ ಸಿನಿಮಾ ‘ಕೊತ್ತಲವಾಡಿ’ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು (ಜುಲೈ 2) ರಾಜ್‌ ಕುಮಾರ್‌ ಹಾಗೂ ಪುನೀತ್ ರಾಜ್​ಕುಮಾರ್ ಸಮಾಧಿಗೆ ಪುಷ್ಪ ಅವರು ಭೇಟಿ ನೀಡಿ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಪುಷ್ಪ ಅವರು, ‘ಇದೇ ನಮ್ಮ ದೇವಸ್ಥಾನ. ಕನ್ನಡ ಚಿತ್ರರಂಗಕ್ಕೆ ಬುನಾದಿ ಹಾಕಿಕೊಟ್ಟು, ನಮ್ಮನ್ನೆಲ್ಲ ಬೆಳೆಸಿ ಹೋದವರು ಅಣ್ಣಾವ್ರು. ಇವತ್ತಿನಿಂದ ನಮ್ಮ ಸಿನಿಮಾದ ಪ್ರಚಾರ ಶುರು. ಮೊದಲು ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿ ಕೆಲಸ ಆರಂಭಿಸೋಣ ಅಂತ ನಮ್ಮ ತಂಡದ ಜೊತೆ ಚರ್ಚೆ ಮಾಡಿದೆ. ಅವರು ಸರಿ ಎಂದರು’ ಎಂದಿದ್ದಾರೆ.

‘ಅಪ್ಪು ಅವರು ಕೂಡ ನಮ್ಮ ಮನೆ ಮಗ ಇದ್ದಂತೆ. ಆದರೆ ದೇವರ ಆಟ, ವಿಧಿ ಏನೂ ಮಾಡೋಕೆ ಆಗಲ್ಲ. ಪಾರ್ವತಮ್ಮನವರ ಆಶೀರ್ವಾದ ಇದೆ. ಯಶ್ 5 ತಿಂಗಳು ಮಗು ಆಗಿದ್ದಾಗ ಅನುರಾಗ ಅರಳಿತು ಸಿನಿಮಾ ತೋರಿಸಿದ್ದೆ. ನಮ್ಮ ಮೊಮ್ಮಗನಿಗೆ ಕಸ್ತೂರಿ ನಿವಾಸ ಹೊಸ ಪ್ರಿಂಟ್ ತೋರಿಸಿದ್ದೇನೆ. ನಮಗೆ ರಾಜ್​ಕುಮಾರ್ ಮೇಲೆ ಅಷ್ಟು ಅಭಿಮಾನ’ ಎಂದು ಪುಷ್ಪ ಹೇಳಿದ್ದಾರೆ.

‘ಕೊತ್ತಲವಾಡಿ ಸಿನಿಮಾಗೆ ನಮ್ಮ ಪ್ರಚಾರದ ಪ್ಲ್ಯಾನ್ ಏನೂ ಇಲ್ಲ. ಜನರೇ ಪ್ರಚಾರ ಮಾಡುತ್ತಾರೆ. ನೀವು ಅಂದುಕೊಂಡ ತಕ್ಷಣ ಪ್ರಚಾರ ಆಗಲ್ಲ. ಇಲ್ಲಿ ನಮ್ಮದು ಏನೂ ನಡೆಯಲ್ಲ. ಇಷ್ಟ ಆಗಲಿಲ್ಲ ಎಂದರೆ ಇಂಥ ನೂರಾರು ಸಿನಿಮಾಗಳನ್ನು ಜನರು ಮೂಲೆಗೆ ಎಸೆಯುತ್ತಾರೆ. ಜನರಿಗೆ ಬುದ್ಧಿ ಇದೆ. ಪ್ರಚಾರ ಮಾಡಿದ ಮಾತ್ರಕ್ಕೆ ಜನರು ಬಂದು ಸಿನಿಮಾ ನೋಡುತ್ತಾರೆ ಅಂದುಕೊಂಡರೆ ನಾವು ತುಂಬಾ ದಡ್ಡರು’ ಎಂದಿದ್ದಾರೆ.

‘ಸಿನಿಮಾ ಚೆನ್ನಾಗಿ ಇದ್ದರೆ ಜನರು ಚಿತ್ರಮಂದಿರದಲ್ಲಿ ನೋಡುತ್ತಾರೆ. ಮೊದಲ ಮೂರು ದಿನ ನಮಗೆ ಚಾನ್ಸ್ ಕೊಡುತ್ತಾರೆ. ಸಿನಿಮಾದಲ್ಲಿ ಕಂಟೆಂಟ್ ಇದ್ದರೆ ಜನರು ಬಾಯಿ ಮಾತಿನ ಪ್ರಚಾರ ನೀಡುತ್ತಾರೆ. ಇಲ್ಲದಿದ್ದರೆ, ನೆಗೆಟಿವ್ ಕೂಡ ಅಷ್ಟೇ ಬೇಗ ಮಾಡುತ್ತಾರೆ. ನಮ್ಮ ಮೊದಲ ಸಿನಿಮಾಗೆ ಜನರು ತಪ್ಪು-ಸರಿ ಎರಡನ್ನೂ ಹೇಳಲಿ. ನನ್ನ ಪ್ರಕಾರ ನಮ್ಮ ಡೈರೆಕ್ಟರ್ ಚೆನ್ನಾಗಿ ಮಾಡಿದ್ದಾರೆ. ನೀವೆಲ್ಲ ನೋಡಿ ಹೇಳಿ’ ಎಂದು ಪುಷ್ಪ ಹೇಳಿದ್ದಾರೆ.

ಮದುವೆಯಾದ 6 ತಿಂಗಳಲ್ಲೇ ನವವಿವಾಹಿತೆ ಅನುಮಾನಾಸ್ಪದ ಸಾವು!

ಹಾಸನ; ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಮದುವೆಯಾದ ಆರು ತಿಂಗಳಲ್ಲೇ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.

ವಿದ್ಯಾ ಮೃತ ನವವಿವಾಹಿತೆ. ಸೋಮಲಾಪುರ ಗ್ರಾಮದ ಶಿವು ಎಂಬುವವರ ಜೊತೆ ವಿವಾಹವಾಗಿದ್ದರು. ಪತಿ ಶಿವು ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು,

ಇಬ್ಬರು ಬೆಂಗಳೂರಿನ ಶಂಕರಪುರಂನಲ್ಲಿ ವಾಸವಾಗಿದ್ದರು. ಜೂ.30ರಂದು ವಿದ್ಯಾ ಕಾಣೆಯಾಗಿದ್ದರು. ಈ ಕುರಿತು ಶಂಕರಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿತ್ತು. ಮಂಗಳವಾರ ಸಂಜೆ ಅರಸೀಕೆರೆ ರೈಲ್ವೆ ಟ್ರ‍್ಯಾಕ್ ಬಳಿ ವಿದ್ಯಾ ಶವವಾಗಿ ಪತ್ತೆಯಾಗಿದ್ದಾರೆ.

ಮದುವೆಯಾದ ಆರಂಭದಿಂದಲೂ ಪತಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ಇದೀಗ ಮಗಳನ್ನು ಅವರೇ ಹತ್ಯೆ ಮಾಡಿದ್ದಾರೆ ಎಂದು ಮೃತ ವಿದ್ಯಾಳ ಕುಟುಂಬಸ್ಥರು ಆರೋಪಿಸಿದ್ದಾರೆ.

error: Content is protected !!