Home Blog Page 8

‘ಜನ ನಾಯಗನ್’ಗೆ ಸೆನ್ಸಾರ್ ಶಾಕ್: ಕೋರ್ಟ್ ಕೇಸ್ ಹಿಂಪಡೆಯಲು ನಿರ್ಧಾರ, ಬಿಡುಗಡೆ ಮತ್ತಷ್ಟು ವಿಳಂಬ?

ವಿಜಯ್ ಅಭಿಮಾನಿಗಳ ಬಹುಕಾಲದ ನಿರೀಕ್ಷೆಯಾಗಿದ್ದ ‘ಜನ ನಾಯಗನ್’ ಸಿನಿಮಾ ಇದೀಗ ಗಂಭೀರ ಸಂಕಷ್ಟದಲ್ಲಿ ಸಿಲುಕಿದೆ. ಜನವರಿ 9ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ, ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣ ಇನ್ನೂ ಬಿಡುಗಡೆಯಾಗಿಲ್ಲ. ಇದರೊಂದಿಗೆ, ಈಗ ಚಿತ್ರ ತಂಡವೇ ಕೋರ್ಟ್ ಕೇಸ್ ಹಿಂಪಡೆಯಲು ಮುಂದಾಗಿದೆ ಎಂಬ ವರದಿ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸೆನ್ಸಾರ್ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕೆವಿಎನ್ ಸಂಸ್ಥೆ ಸ್ಥಳೀಯ ಕೋರ್ಟ್‌ನಿಂದ ಹಿಡಿದು ಸುಪ್ರೀಂಕೋರ್ಟ್‌ವರೆಗೆ ಮೊರೆ ಹೋಗಿತ್ತು. ಆದರೆ, ಯಾವುದೇ ಕೋರ್ಟ್‌ನಿಂದಲೂ ಸಕಾರಾತ್ಮಕ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ, ಇದೀಗ ಹೊಸ ಮಾರ್ಗ ಹುಡುಕಲು ತಂಡ ನಿರ್ಧರಿಸಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಚಿತ್ರವನ್ನು ಪುನರ್ವಿಮರ್ಶಾ ಸಮಿತಿಗೆ ಕಳುಹಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಮಾಪಕರು ಮುಂದಾಗಿದ್ದಾರೆ. ತಮಿಳುನಾಡು ಸೆನ್ಸಾರ್ ಮಂಡಳಿ ಚಿತ್ರದ ಕೆಲವು ದೃಶ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಅದೇ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.

ಈ ಚಿತ್ರದ ಬಜೆಟ್ ಸುಮಾರು 500 ಕೋಟಿ ರೂಪಾಯಿ ಎಂಬುದೇ ಮತ್ತೊಂದು ಚರ್ಚೆಯ ವಿಷಯ. ಇಷ್ಟೊಂದು ದೊಡ್ಡ ಮೊತ್ತ ಹೂಡಿಕೆಯಾದ ಸಿನಿಮಾ ಇನ್ನೂ ಬಿಡುಗಡೆಯಾಗದೆ ಉಳಿದಿರುವುದು ನಿರ್ಮಾಪಕರಿಗೆ ಭಾರಿ ಹೊರೆ ತಂದಿದೆ.

ಮತ್ತೊಂದು ಮಹತ್ವದ ಅಂಶವೆಂದರೆ, ‘ಜನ ನಾಯಗನ್’ ವಿಜಯ್ ಅವರ ಕೊನೆಯ ಸಿನಿಮಾ ಆಗಲಿದೆ ಎಂಬ ಮಾಹಿತಿ. ಚಿತ್ರದ ಬಳಿಕ ಅವರು ರಾಜಕೀಯ ಪ್ರವೇಶಿಸುವುದಾಗಿ ಈಗಾಗಲೇ ಸುಳಿವು ನೀಡಿದ್ದಾರೆ. ಈ ಕಾರಣದಿಂದಲೇ ಈ ಸಿನಿಮಾಗೆ ಅಭಿಮಾನಿಗಳಲ್ಲಿ ಭಾರೀ ಹೈಪ್ ಇತ್ತು.

ಚಿತ್ರದಲ್ಲಿ ಮಲಯಾಳಂ ನಟಿ ಮಮಿತಾ ಬೈಜು ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಇದೀಗ ಎಲ್ಲರ ಕಣ್ಣುಗಳು ಸೆನ್ಸಾರ್ ಮಂಡಳಿ ಹಾಗೂ ಪುನರ್ವಿಮರ್ಶಾ ಸಮಿತಿಯ ತೀರ್ಮಾನಕ್ಕೆ ನೆಟ್ಟಿವೆ.

ರಸ್ತೆಯಲ್ಲೇ ಸ್ಟಂಟ್! ಸನ್‌ರೂಫ್ ತೆರೆದು ಕಾರು ಓಡಿಸಿದ ಚಾಲಕನಿಗೆ ಭಾರೀ ದಂಡ!

0

ಬೆಂಗಳೂರು ಗ್ರಾಮಾಂತರ: ಹೆದ್ದಾರಿಯಲ್ಲಿ ಕಾರಿನ ಸನ್‌ರೂಫ್ ಓಪನ್ ಮಾಡಿಕೊಂಡು ಮಕ್ಕಳನ್ನು ನಿಲ್ಲಿಸಿಕೊಂಡು ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡುತ್ತಿದ್ದ ಚಾಲಕರ ವಿರುದ್ಧ ಹೊಸಕೋಟೆ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಕೋಟೆಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಕಾರಿನ ಸನ್‌ರೂಫ್ ತೆರೆದು ಅದರೊಳಗೆ ಮಕ್ಕಳನ್ನು ನಿಲ್ಲಿಸಿಕೊಂಡು ಸಾಗುತ್ತಿದ್ದ ದೃಶ್ಯ ಸಂಚಾರಿ ಪೊಲೀಸರ ಗಮನಕ್ಕೆ ಬಂದಿದೆ. ಸಾರ್ವಜನಿಕರ ಜೀವ ಮತ್ತು ಮಕ್ಕಳ ಸುರಕ್ಷತೆಗೆ ಭಾರೀ ಅಪಾಯ ಉಂಟುಮಾಡುವ ರೀತಿಯ ಚಾಲನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣವೇ ವಾಹನವನ್ನು ತಡೆದು ಪರಿಶೀಲನೆ ನಡೆಸಿದ ಸಂಚಾರಿ ಪೊಲೀಸರು, ಚಾಲಕನ ವಿರುದ್ಧ ನಿಯಮ ಉಲ್ಲಂಘನೆಯಡಿ ದಂಡ ವಿಧಿಸಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇಂತಹ ಅಪಾಯಕಾರಿ ಚಾಲನೆಗಳು ಗಂಭೀರ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಹೆದ್ದಾರಿಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೊಸಕೋಟೆ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮದುವೆ ಗಾಸಿಪ್ ನಡುವೆಯೇ ಗುಡ್ ನ್ಯೂಸ್: ಮತ್ತೆ ಒಂದಾದ ರಶ್ಮಿಕಾ–ವಿಜಯ್ ಜೋಡಿ, ‘ರಣಬಾಲಿ’ ಅನೌನ್ಸ್!

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ಇನ್ನೇನೂ ಕೆಲವೇ ದಿನಗಳು ಬಾಕಿಯಿದ್ದು, ಫೆಬ್ರವರಿ 26ರಂದು ವಿವಾಹ ದಿನಾಂಕ ನಿಗದಿಯಾಗಿದೆ ಎನ್ನಲಾಗಿದೆ. ಮದುವೆ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಮಧ್ಯೆ, ಈ ಸ್ಟಾರ್ ಜೋಡಿ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.

ಈ ಹಿಂದೆ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಹಿಟ್ ಜೋಡಿಯಾಗಿ ಗುರುತಿಸಿಕೊಂಡಿದ್ದ ವಿಜಯ್–ರಶ್ಮಿಕಾ ಇದೀಗ ಮತ್ತೆ ಹೊಸ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಈ ಸಿನಿಮಾಕ್ಕೆ ‘ರಣಬಾಲಿ’ (Ranabaali) ಎಂದು ಶೀರ್ಷಿಕೆ ಇಡಲಾಗಿದ್ದು, ಗಣರಾಜ್ಯೋತ್ಸವದ ಪ್ರಯುಕ್ತ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಇದು ವಿಜಯ್ ದೇವರಕೊಂಡ ಅವರ 14ನೇ ಸಿನಿಮಾ ಆಗಿದೆ.

‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಈ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ವಿಜಯ್ ದೇವರಕೊಂಡ ಅವರು ‘ರಣಬಾಲಿ’ ಎಂಬ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ರಶ್ಮಿಕಾ ಮಂದಣ್ಣ ಅವರಿಗೆ ‘ಜಯಮ್ಮ’ ಎಂಬ ಪಾತ್ರ ನೀಡಲಾಗಿದೆ.

ಐತಿಹಾಸಿಕ ಹಿನ್ನೆಲೆಯ ಈ ಸಿನಿಮಾದಲ್ಲಿ, ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬ್ರಿಟಿಷರ ಹಿಂಸಾಚಾರ ಮತ್ತು ಹತ್ಯಾಕಾಂಡದ ಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡಲಾಗಿದೆ. ಬ್ರಿಟಿಷರ ವಿರುದ್ಧ ತಿರುಗಿಬಿದ್ದ ಯುವಕನಾಗಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರಕ್ಕೆ ಅಜಯ್–ಅತುಲ್ ಸಂಗೀತ ನೀಡುತ್ತಿದ್ದು, ರಾಹುಲ್ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ.

ರಾಯಚೂರು| ಕೌಟುಂಬಿಕ ಕಲಹಕ್ಕೆ ಮಾವನಿಂದ ಗರ್ಭಿಣಿ ಸೊಸೆಯ ಭೀಕರ ಹತ್ಯೆ!

0

ರಾಯಚೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾವನೊಬ್ಬ ತನ್ನ ಗರ್ಭಿಣಿ ಸೊಸೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಚಿಕ್ಕಹಣಗಿ ಗ್ರಾಮದಲ್ಲಿ ನಡೆದಿದೆ.

ಮೃತಳನ್ನು ರೇಖಾ (25) ಎಂದು ಗುರುತಿಸಲಾಗಿದ್ದು, ಆಕೆ ಗರ್ಭಿಣಿಯಾಗಿದ್ದಳು. ಕೌಟುಂಬಿಕ ವಿಚಾರಗಳಿಂದಾಗಿ ರೇಖಾ ತವರು ಮನೆಗೆ ಹೋಗಿದ್ದಳು. ಈ ವಿಚಾರ ತಿಳಿದ ಮಾವ ಸಿದ್ದಪ್ಪ (50) ಚಿಕ್ಕಹಣಗಿ ಗ್ರಾಮದಲ್ಲಿರುವ ಆಕೆಯ ತವರು ಮನೆಗೆ ತೆರಳಿದ್ದಾನೆ ಎನ್ನಲಾಗಿದೆ. ಘಟನೆ ದಿನ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಆರೋಪಿ ಸಿದ್ದಪ್ಪ, ಟಿವಿ ನೋಡುತ್ತಾ ಮಲಗಿದ್ದ ರೇಖಾಳ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಕತ್ತನ್ನು ಸೀಳಿ ಹತ್ಯೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ರೇಖಾ ಜೀವ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿ ಒದ್ದಾಡಿದರೂ, ಹೆಚ್ಚಿನ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಕೃತ್ಯ ಎಸಗಿದ ನಂತರ ಆರೋಪಿ ಸಿದ್ದಪ್ಪ ಪರಾರಿಯಾಗಿದ್ದಾನೆ.

ವಿಷಯ ತಿಳಿದ ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಆರೋಪಿ ಸಿದ್ದಪ್ಪನನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಈ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗರ್ಭಿಣಿ ಮಹಿಳೆಯ ಅಮಾನವೀಯ ಹತ್ಯೆ ಗ್ರಾಮಸ್ಥರಲ್ಲಿ ಭೀತಿ ಮತ್ತು ಆಕ್ರೋಶವನ್ನುಂಟು ಮಾಡಿದೆ.

ಮೆಟ್ರೋ ಸುರಕ್ಷತೆ ಹಾಸ್ಯವಲ್ಲ: ನಟ ವರುಣ್ ಧವನ್ ಸ್ಟಂಟ್‌ಗೆ ಎಚ್ಚರಿಕೆ ನೀಡಿದ MMMOCL, ದಂಡ ವಿಧಿಸಿದ MMRDA

ಸ್ಟಾರ್ ಆಗಿರಲಿ ಅಥವಾ ಸಾಮಾನ್ಯ ಪ್ರಯಾಣಿಕನಾಗಿರಲಿ — ನಿಯಮ ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಮುಂಬೈ ಮೆಟ್ರೋ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ನಟ ವರುಣ್ ಧವನ್ ಮೆಟ್ರೋ ರೈಲಿನೊಳಗೆ ಹ್ಯಾಂಡಲ್‌ಗಳಿಗೆ ನೇತಾಡಿ ಸ್ಟಂಟ್ ಮಾಡಿದ ವೀಡಿಯೊ ವೈರಲ್ ಆದ ಬಳಿಕ, ಅಧಿಕಾರಿಗಳು ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ.

ಮುಂಬೈ ಮೆಟ್ರೋದಲ್ಲಿನ ಹ್ಯಾಂಡಲ್‌ಗಳಲ್ಲಿ ನೇತಾಡುವ ಮೂಲಕ ವರುಣ್ ಧವನ್ ಪುಲ್-ಅಪ್ ಮಾಡಲು ಪ್ರಯತ್ನಿಸಿದರು. ಆ ವಿಡಿಯೋ ವೈರಲ್ ಆಗಿ ಅವರು ವಿವಾದಕ್ಕೆ ಸಿಲುಕಿದರು. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ದಂಡವನ್ನೂ ವಿಧಿಸಲಾಯಿತು.

ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (MMMOCL) ತನ್ನ ಅಧಿಕೃತ ಖಾತೆಯಲ್ಲಿ ವರುಣ್ ಧವನ್‌ಗೆ ಸಾರ್ವಜನಿಕವಾಗಿ ಎಚ್ಚರಿಕೆ ನೀಡಿ, “ಮೆಟ್ರೋದಲ್ಲಿ ಸ್ನೇಹಿತರೊಂದಿಗೆ ಪ್ರಯಾಣಿಸುವುದು ಖುಷಿ ನೀಡಬಹುದು. ಆದರೆ ಸುರಕ್ಷತಾ ಉಪಕರಣಗಳನ್ನು ಸ್ಟಂಟ್‌ಗೆ ಬಳಸುವುದು ಅಪಾಯಕಾರಿ. ಇದು ಇತರ ಪ್ರಯಾಣಿಕರಿಗೂ ತೊಂದರೆ ಉಂಟುಮಾಡುತ್ತದೆ” ಎಂದು ಹೇಳಿದೆ.

ಈ ಘಟನೆಗೆ ಸಂಬಂಧಿಸಿ ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ವರುಣ್ ಧವನ್‌ಗೆ ₹500 ದಂಡ ವಿಧಿಸಿದ್ದು, ನಿಯಮ ಉಲ್ಲಂಘನೆ ಯಾರೇ ಮಾಡಿದರೂ ಕ್ರಮ ತಪ್ಪದು ಎಂಬ ಸಂದೇಶವನ್ನು ನೀಡಿದೆ.

ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಹಲವರು ವರುಣ್ ಧವನ್ ಅವರನ್ನು ಟ್ರೋಲ್ ಮಾಡುತ್ತಲೇ, ಕೆಲವರು “ಸೆಲೆಬ್ರಿಟಿಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಣ್ಣೆ ಮತ್ತಲ್ಲಿ ವಾಹನ ಚಲಾಯಿಸಿ ಕಾರುಗಳಿಗೆ ಸರಣಿ ಅಪಘಾತ; ನಟ ಮಯೂರ್ ಪಟೇಲ್ ವಿರುದ್ಧ FIR!

0

ಬೆಂಗಳೂರು: ಕುಡಿದು ವಾಹನ ಚಲಾಯಿಸಿ ಸರಣಿ ಅಪಘಾತಕ್ಕೆ ಕಾರಣವಾದ ಆರೋಪದಲ್ಲಿ ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಗರದ ಓಲ್ಡ್ ಏರ್ಪೋರ್ಟ್ ರಸ್ತೆಯ ಕಮಾಂಡೊ ಆಸ್ಪತ್ರೆ ಸಿಗ್ನಲ್ ಬಳಿ ಕಳೆದ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಘಟನೆ ನಡೆದಿದೆ. ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂದರ ಹಿಂದೆ ಒಂದಾಗಿ ಹಲವು ವಾಹನಗಳು ಅಪಘಾತಕ್ಕೀಡಾಗಿವೆ. ಫಾರ್ಚುನರ್ ಕಾರನ್ನು ಮಯೂರ್ ಪಟೇಲ್ ತಾವೇ ಚಾಲನೆ ಮಾಡುತ್ತಿದ್ದು, ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಈ ಘಟನೆಯಲ್ಲಿ ಒಟ್ಟು ನಾಲ್ಕು ಕಾರುಗಳು ಜಖಂಗೊಂಡಿದ್ದು, ಅದರಲ್ಲಿ ಎರಡು ಸ್ವಿಫ್ಟ್ ಡಿಜೈರ್ ಕಾರುಗಳು ಹಾಗೂ ಒಂದು ಸರ್ಕಾರಿ ವಾಹನ ಕೂಡ ಸೇರಿವೆ. ಡ್ರಂಕ್ & ಡ್ರೈವ್ ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಹಲಸೂರು ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಯೂರ್ ಪಟೇಲ್ ಅವರನ್ನು ಕರೆತಂದು ಮದ್ಯಪಾನ ಪರೀಕ್ಷೆ ನಡೆಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಹಾನಿಗೊಳಗಾದ ಕಾರುಗಳ ಚಾಲಕರು ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ನಟ ಮಯೂರ್ ಪಟೇಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಪ್ರತಿಯೊಬ್ಬ ಮನುಷ್ಯನೂ ಮೊದಲು ತಪಸ್ವಿಯಾಗಬೇಕು: ನಿರ್ಭಯಾನಂದ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸನ್ಯಾಸತ್ವಕ್ಕೆ ಪ್ರಮುಖವಾಗಿ ಬೇಕಾದುದು ಪರಮ ವೈರಾಗ್ಯ. ಪ್ರತಿಯೊಬ್ಬ ಮನುಷ್ಯನು ಮೊದಲು ತಪಸ್ವಿಯಾಗಬೇಕು. ತಪಸ್ಸಿನಿಂದ ಗಳಿಸಿದ ಜ್ಞಾನ ಮತ್ತು ಆನಂದವನ್ನು ಇತರರಿಗೆ ಹಂಚುವ ಗುಣ ಬೆಳೆಸಿಕೊಳ್ಳಬೇಕು. ಶ್ರೀ ರಾಮಕೃಷ್ಣ ಪರಮಹಂಸರು ತಾವು ಮಾಡಿದ ಸುದೀರ್ಘ ತಪಸ್ಸಿನ ಫಲವನ್ನು ಸ್ವಾಮಿ ವಿವೇಕಾನಂದರಿಗೆ ಧಾರೆಯೆರೆದರು. ಆ ಮೂಲಕ ವಿವೇಕಾನಂದರು ಜಗತ್ತಿಗೆ ಬೆಳಕಾದರು ಎಂದು ಗದಗ-ವಿಜಯಪುರದ ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ನಿರ್ಭಯಾನಂದ ಸ್ವಾಮೀಜಿ ಹೇಳಿದರು.

ಬುಧವಾರ ತಾಲೂಕಿನ ಹುಲಕೋಟಿ ಗ್ರಾಮದ ಶ್ರೀ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವದ ಸಮ್ಮುಖದಲ್ಲಿ ಮಾತನಾಡಿದ ಅವರು, ಭಾರತೀಯ ಸನ್ಯಾಸತ್ವದ ಇತಿಹಾಸವು ಮಹರ್ಷಿ ಯಾಜ್ಞವಲ್ಕರಿಂದ ಆರಂಭವಾಯಿತು. ಯಾಜ್ಞವಲ್ಕ, ಬುದ್ಧ ಹಾಗೂ ಶಂಕರಾಚಾರ್ಯರು ಈ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದರು ಎಂದರು.

ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಮಾತನಾಡಿ, ಗುರು ಆದವನು ಜಾತಿ-ಮತ-ಪಂಥ ನೋಡದೇ, ಬಯಸಿ ಬಂದ ಭಕ್ತನ ಮಸ್ತಕದ ಮೇಲೆ ಹಸ್ತ ಇಟ್ಟು ಮಾರ್ಗದರ್ಶನ ಮಾಡಬೇಕು. ಎಲ್ಲರನ್ನು ಪ್ರೀತಿಸಬೇಕು, ಉಪದೇಶ ನೀಡಬೇಕು. ಅದೇ ಶರಣರು ಪ್ರತಿಪಾದಿಸಿದ ಧರ್ಮ. ಅಂಥಹ ಬಸವಾದಿ ಶಿವಶರಣರ ಪರಂಪರೆಯಲ್ಲಿ ಬೂದೀಶ್ವರ ಮಠ ಬೆಳೆದುಬಂದಿದೆ ಎಂದರು.

ದೇವರಿಗೆ ದೀಪ ಬೆಳಗುವುದು ಎಷ್ಟು ಮುಖ್ಯವೋ, ಹಸಿದು ಬಂದವರಿಗೆ ಅನ್ನ ನೀಡುವುದು ಅಷ್ಟೇ ಮುಖ್ಯ. ಆ ಕಾರಣಕ್ಕಾಗಿಯೇ ಶರಣ ಪರಂಪರೆಯಲ್ಲಿ ಕಾಯಕ ಮತ್ತು ದಾಸೋಹಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಪ್ರತಿಯೊಂದು ಕಾಯಕದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಲಾಗಿದೆ ಎಂದರು.

ಅಣ್ಣಿಗೇರಿಯ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಜಗತ್ತಿನ ಅಜ್ಞಾನ ಕಳೆಯಲು ಜಗದ್ಗುರು ಸಿದ್ದಾರೂಢರ ಪರಂಪರೆ ಅವತರಿಸಿದೆ. 14 ಭಾಷೆಗಳ ಜ್ಞಾನ ಹೊಂದಿದ್ದ ಸಿದ್ದಾರೂಢರು ದೇಶದುದ್ದಕ್ಕೂ ಸಂಚರಿಸಿ ಆಧ್ಯಾತ್ಮದ ಬೀಜ ಬಿತ್ತಿದರು. ಅವರ ಶಿಷ್ಯ ಪರಂಪರೆಯೇ ಇಂದು ಸಮಾಜವನ್ನು ಮುನ್ನಡೆಸುತ್ತಿದೆ ಎಂದರು.

ಶ್ರೀ ಕೈಲಾಸ ಆಶ್ರಮದ ಪೀಠಾಧಿಪತಿ ಶ್ರೀ ಜಯೇಂದ್ರಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಚಿಕೇನಕೊಪ್ಪದ ಶಿವಶಾಂತವೀರ ಶರಣರು, ಅಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮತಾಯಿ, ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಉಪಸ್ಥಿತರಿದ್ದರು.

ಶಿರಹಟ್ಟಿ ಫಕೀರ ಸ್ವಾಮಿಗಳು ಮಠ-ಮಸೀದಿಗಳ ಮೂಲಕ ಭಾವೈಕ್ಯತೆಯ ಸಂದೇಶ ಪಸರಿಸಿದ್ದಾರೆ. ಇಂತಹ ಕಾರಣಗಳಿಂದಲೇ ಭಾರತವು ಆಧ್ಯಾತ್ಮಿಕ ಲೋಕದ ಕೊಂಡಿಯಾಗಿದೆ.

  • ಶ್ರೀ ಫಕೀರೇಶ್ವರ ಸ್ವಾಮೀಜಿ.

“ದೇವರಿಗಿಂತ ಗುರು ದೊಡ್ಡವನು. ನೆಲ ಕ್ಷೇತ್ರವಾಗಬೇಕಾದರೆ, ಜಲ ತೀರ್ಥವಾಗಬೇಕಾದರೆ, ಪದಾರ್ಥ ಪ್ರಸಾದವಾಗಬೇಕಾದರೆ ಅದಕ್ಕೆ ತಿರುಚ್ಚಿ ಶ್ರೀಗಳಂಥ ಗುರುಗಳ ಪಾದಸ್ಪರ್ಶ ಅವಶ್ಯ. ಹೀಗಾಗಿ ದೇವರಿಂದ ಮನುಷ್ಯನ ಕಲ್ಯಾಣ ಸಾಧ್ಯವಿಲ್ಲ. ದೇವರು ನರರೂಪದಲ್ಲಿ ಬಂದು ಗುರುವಾಗಿ ಮಾರ್ಗದರ್ಶನ ಮಾಡಿದಾಗ ಮಾತ್ರವೇ ಮನುಷ್ಯನ ಕಲ್ಯಾಣ ಸಾಧ್ಯ”

  • ಡಾ. ನೀಲಮ್ಮತಾಯಿ.

ಪತಂಜಲಿ ಆಯುರ್ವೇದದಿಂದ ಆನ್‌ಲೈನ್ ಶಾಪಿಂಗ್ ಸೌಲಭ್ಯ; ಮನೆಯಿಂದಲೇ ಉತ್ಪನ್ನಗಳ ಆರ್ಡರ್!

0

ನವದೆಹಲಿ: ಯೋಗಗುರು ಬಾಬಾ ರಾಮದೇವ್ ಅವರ ಸಂಸ್ಥೆಯಾದ ಪತಂಜಲಿ ಆಯುರ್ವೇದ ತನ್ನ ಗ್ರಾಹಕರ ಅನುಕೂಲಕ್ಕಾಗಿ ಅಧಿಕೃತ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅನ್ನು ಒದಗಿಸಿದೆ.

ಈಗ ಗ್ರಾಹಕರು ಅಂಗಡಿಗೆ ಹೋಗದೇ, ತಮ್ಮ ಮನೆಯಿಂದಲೇ ಪತಂಜಲಿಯ ಎಲ್ಲಾ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಬಹುದು. ಪತಂಜಲಿಯ ಅಧಿಕೃತ ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್ ಮೂಲಕ ಸೋಪ್, ಶಾಂಪೂ, ಟೂತ್‌ಪೇಸ್ಟ್, ಹಿಟ್ಟು, ತುಪ್ಪ, ಬಿಸ್ಕತ್ತು, ಹರ್ಬಲ್ ಜ್ಯೂಸ್ ಹಾಗೂ ಆಯುರ್ವೇದ ಔಷಧಿಗಳು ಸೇರಿದಂತೆ ನೂರಾರು ಉತ್ಪನ್ನಗಳು ಲಭ್ಯವಿವೆ. ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಾಹಕರಿಗೂ ಈ ಸೇವೆ ವಿಶೇಷವಾಗಿ ಉಪಯುಕ್ತವಾಗಿದೆ.

ಆನ್‌ಲೈನ್ ಮೂಲಕ ಆರ್ಡರ್ ಮಾಡುವ ಗ್ರಾಹಕರಿಗೆ 3% ರಿಂದ 10% ವರೆಗೆ ರಿಯಾಯಿತಿ ಸಿಗುತ್ತದೆ. ಜೊತೆಗೆ PNB–Patanjali ಹಾಗೂ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಿದರೆ ಕ್ಯಾಶ್‌ಬ್ಯಾಕ್ ಸೌಲಭ್ಯವೂ ಲಭ್ಯವಿದೆ. ಆಯ್ದ ಉತ್ಪನ್ನಗಳಿಗೆ ಉಚಿತ ಮನೆಬಾಗಿಲು ವಿತರಣೆ ಸಹ ನೀಡಲಾಗುತ್ತಿದೆ.

ಪತಂಜಲಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ವಿಧಾನ:

. patanjaliayurved.net ವೆಬ್‌ಸೈಟ್‌ಗೆ ಭೇಟಿ ನೀಡಿ
. ಹೊಸ ಅಕೌಂಟ್ ತೆರೆಯಿರಿ ಅಥವಾ ಲಾಗಿನ್ ಆಗಿ
. ಬೇಕಾದ ಉತ್ಪನ್ನಗಳನ್ನು ಆಯ್ಕೆ ಮಾಡಿ ಕಾರ್ಟ್‌ಗೆ ಸೇರಿಸಿ
. ಆನ್‌ಲೈನ್ ಪಾವತಿ ಮಾಡಿ ಆರ್ಡರ್ ದೃಢೀಕರಿಸಿ
. ಕೆಲವು ದಿನಗಳಲ್ಲಿ ಉತ್ಪನ್ನಗಳು ಮನೆಗೆ ತಲುಪುತ್ತವೆ
. ಪತಂಜಲಿಯ ಈ ಆನ್‌ಲೈನ್ ಸೇವೆ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಂತೆ ಗ್ರಾಹಕರಿಗೆ ಸುಲಭ, ಸುರಕ್ಷಿತ  ಹಾಗೂ ಲಾಭದಾಯಕ ಶಾಪಿಂಗ್ ಅನುಭವವನ್ನು ನೀಡುತ್ತಿದೆ.

ಶ್ರೀ ವೀರಪ್ಪಜ್ಜನವರ ಜಾತ್ರಾ ಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಕೋಡಿಕೊಪ್ಪದ ಶ್ರೀ ಹಠಯೋಗಿ ವೀರಪ್ಪಜ್ಜನವರ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವು ಸಹಸ್ರಾರು ಭಕ್ತ ಸಾಗರದ ನಡುವೆ ಅತ್ಯಂತ ಸಡಗರ ಸಂಭ್ರಮದಿಂದ ಬುಧವಾರ ಜರುಗಿತು.

ಬೆಳಗ್ಗೆ 6 ಗಂಟೆಗೆ ಕೃತ್ತಿ ಗದ್ದುಗೆಗೆ ರುದ್ರಾಭಿಷೇಕ, ಮಹಾಪೂಜೆ, ಮಂಗಳರಾತಿ ಸೇರಿದಂತೆ ವಿಶೇಷ ಅಭಿಷೇಕ ಜರುಗಿದವು. ಸಂಜೆ 6 ಗಂಟೆಗೆ ನಡೆದ ರಥೋತ್ಸವದಲ್ಲಿ ಆಂಧ್ರ ಪ್ರದೇಶ, ತಮಿಳುನಾಡು, ಉತ್ತರಪ್ರದೇಶ, ಬೆಂಗಳೂರು, ಚಾಮರಾಜನಗರ, ಉಡುಪಿ, ಗದಗ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟಿ, ಬಳ್ಳಾರಿ, ಹೊಸಪೇಟಿ, ಕೊಪ್ಪಳ, ಯಲಬುರ್ಗಾ, ಕುಕನೂರು, ಕರಮುಡಿ, ಹಾಲಕೆರೆ, ನಿಡಗುಂದಿ, ಗಜೇಂದ್ರಗಡ, ರಾಯಚೂರ, ಯಾದಗೇರಿ, ನರೇಗಲ್ಲ, ಅಬ್ಬಿಗೇರಿ, ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ಕುರುಡಗಿ, ಯರೇಬೇಲೇರಿ, ಡ.ಸ. ಹಡಗಲಿ, ಗುಜಮಾಗಡಿ, ನಾಗರಾಳ, ತೋಡಿಹಾಳ, ಬಂಡಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ಟ್ರ‍್ಯಾಕ್ಟರ್ ಹಾಗೂ ಚಕ್ಕಡಿ, ದ್ವಿಚಕ್ರ ವಾಹನ, ಕಾರ್ ಸೇರಿದಂತೆ ಇತರೆ ವಾಹನಗಳಲ್ಲಿ ಆಗಮಿಸಿದ್ದರು.

ತೇರಿನ ಹಗ್ಗವು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಿದ್ದೇಕೊಪ್ಪದಿಂದ ಭಜನೆ, ಡೊಳ್ಳು, ಕಹಳೆಗಳ ಹಾಗೂ ವಿವಿಧ ವಾದ್ಯಗಳೊಂದಿಗೆ ಆಗಮಿಸಿತು. ರಥದ ಕಳಸವು ಸಂಕನಗೌಡ್ರ ಮನೆಯಿಂದ ಮೆರವಣಿಗೆ ಮೂಲಕ ವೀರಪ್ಪಜ್ಜನ ಮಠವನ್ನು ತಲುಪಿತು. ತೇರು ಬೇವಿನ ಗಿಡದ ಪಾದಗಟ್ಟಿವರೆಗೆ ತಲುಪಿ ಮರಳಿ ಮೂಲಸ್ಥಳಕ್ಕೆ ತಲುಪಿತು. ಜಾತ್ರೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 30 ಸಾವಿರಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ದರು.

ಗ್ರಾಮೀಣ ಉದ್ಯೋಗ ಯೋಜನೆಗೆ ಸಂಕಷ್ಟ: ಮಿಥುನ ಜಿ.ಪಾಟೀಲ 

0

ವಿಜಯಸಾಕ್ಷಿ ಸುದ್ದಿ, ಡಂಬಳ: ಕೂಲಿ ಕಾರ್ಮಿಕರ ಹಿತ ಕಾಯುವ ಮಹಾತ್ಮ ಗಾಂಧಿ ರೋಜ್ಗಾರ ಕಾಯ್ದೆಯ ಹಕ್ಕುಸ್ವರೂಪವನ್ನು ತೆಗೆದುಹಾಕಿ ಕೇವಲ ಸರ್ಕಾರದ ಅಣತಿಯ ಯೋಜನೆಯಾಗಿ ಜಿ ರಾಮ್ ಜಿ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ.ಪಾಟೀಲ (ಸಂಗನಗೌಡ) ಆರೋಪಿಸಿದರು.

ಡಂಬಳ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ರೈತರ, ಕೂಲಿಕಾರ್ಮಿಕರ, ಮಹಿಳೆಯರು ಮತ್ತು ಪುರುಷರಿಗೆ ಒಂದೇ ವೇತನ ಜಾರಿಗೆ ಮಾಡಿ ಆರ್ಥಿಕವಾಗಿ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು ಎನ್ನುವ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಿತ್ತು. ಮಹಾತ್ಮ ಗಾಂಧಿ ರೋಜ್ಗಾರ ಯೋಜನೆಯ ಕಾಯ್ದೆ ಗ್ರಾಮೀಣ ಭಾಗದ ಕೃಷಿ ಕೂಲಿಕಾರರು, ಬಡ ರೈತರು ಹಾಗೂ ಇನ್ನಿತರೆ ಗ್ರಾಮೀಣ ದುಡಿಮೆಗಾರರಲ್ಲಿ ಬಹು ದೊಡ್ಡ ಆಶಾಕಿರಣವಾಗಿತ್ತು.

ಆದರೆ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆ ಹಾಗೂ ಹಕ್ಕು ಸ್ವರೂಪವನ್ನು ತೆಗೆದುಹಾಕಿ ಕೇವಲ ಸರ್ಕಾರದ ಅಣತಿಯ ಯೋಜನೆಯಾಗಿ ಹೊಸದಾಗಿ ವಿಕಸಿತ ಭಾರತ ರೋಜ್ಗಾರ್ ಆಜೀವಿಕ ಮಿಷನ್ ಗ್ರಾಮೀಣ ಖಾತರಿ (ವಿ.ಬಿ.ಜಿ. ರಾಮ್ ಜಿ) ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಹೊಸ ಕಾಯ್ದೆಯಿಂದ ಕೂಲಿಕಾರ ಕಾರ್ಮಿಕರ ಮೇಲೆ ಹಲವು ದುಷ್ಪರಿಣಾಮಗಳು ಬೀರುತ್ತವೆ. 125 ದಿನಗಳ ಕೆಲಸ ಸಿಗುವುದಿಲ್ಲ ಮತ್ತು ಕೆಲಸದಿಂದ ವಂಚಿತರಾಗುತ್ತಾರೆ. ಕೇಂದ್ರ ಸರ್ಕಾರ ದೇಶದ ಎಲ್ಲಾ ರಾಜ್ಯಗಳಲ್ಲಿ ಶೇ. 60ರಷ್ಟು, ರಾಜ್ಯ ಸರ್ಕಾರ ಶೇ. 40ರಷ್ಟು ಮೊತ್ತವನ್ನು ಖರ್ಚು ಮಾಡಬೇಕೆಂಬ ಅಂಶಗಳಿಂದ ಕಾರ್ಮಿಕರನ್ನು ಕೂಲಿಯಿಂದ ವಂಚಿತರಾಗಿ ಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

error: Content is protected !!