Home Blog Page 81

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 8,176 ಹುದ್ದೆಗಳ ಭರ್ತಿ: ಸರ್ಕಾರದಿಂದ ಗ್ರೀನ್ ಸಿಗ್ನಲ್

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ಒದಗಿದೆ.

ಇಲಾಖೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 8,176 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅನುಮೋದನೆ ನೀಡಿದ್ದು, ಅಧಿಕೃತ ಆದೇಶವೂ ಹೊರಬಿದ್ದಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಈ ನೇಮಕಾತಿ ಮಹತ್ವದ್ದಾಗಿದೆ.

ಹುದ್ದೆಗಳ ವಿವರ ಹೀಗಿದೆ:

ನಾಗರಿಕ ಪೊಲೀಸ್ ಕಾನ್ಸ್ಟೇಬಲ್ (Civil):
ಒಟ್ಟು 4,110 ಹುದ್ದೆಗಳು – 3,500 ಕಲ್ಯಾಣ ಕರ್ನಾಟಕೇತರ, 610 ಕಲ್ಯಾಣ ಕರ್ನಾಟಕ.

ಕೆಎಸ್‌ಆರ್‌ಪಿ (KSRP) ಕಾನ್ಸ್ಟೇಬಲ್:
ಒಟ್ಟು 2,032 ಹುದ್ದೆಗಳು – 1,500 ಕಲ್ಯಾಣ ಕರ್ನಾಟಕೇತರ, 532 ಕಲ್ಯಾಣ ಕರ್ನಾಟಕ.

ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (APC):
ಒಟ್ಟು 1,650 ಹುದ್ದೆಗಳು – 1,375 ಕಲ್ಯಾಣ ಕರ್ನಾಟಕೇತರ, 275 ಕಲ್ಯಾಣ ಕರ್ನಾಟಕ.

ಕೆಎಸ್‌ಐಎಸ್‌ಎಫ್ (KSISF) ಕಾನ್ಸ್ಟೇಬಲ್:
ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಾದ 364 ಹುದ್ದೆಗಳು.

ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ (DSI):
ಒಟ್ಟು 20 ಹುದ್ದೆಗಳು – 15 ಕಲ್ಯಾಣ ಕರ್ನಾಟಕೇತರ, 5 ಕಲ್ಯಾಣ ಕರ್ನಾಟಕ.

ಮೀಸಲಾತಿ ಮತ್ತು ನ್ಯಾಯಾಲಯದ ಆದೇಶ:

ಪರಿಷ್ಕೃತ ಮೀಸಲಾತಿ ನಿಯಮದಂತೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಗಳ ವಿಚಾರಣೆ ಬಳಿಕ ಉಚ್ಚ ನ್ಯಾಯಾಲಯ ನೀಡಿದ ಮಧ್ಯಂತರ ಆದೇಶದ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಸರ್ಕಾರ ಸೂಚಿಸಿದೆ.

ಅಧಿಸೂಚನೆ ಪ್ರಕಟವಾದ ಬಳಿಕ ಅರ್ಜಿ ಸಲ್ಲಿಸಿ, ಸೂಕ್ತ ತಯಾರಿ ನಡೆಸಿ ಪರೀಕ್ಷೆ ಎದುರಿಸುವಂತೆ ಅಭ್ಯರ್ಥಿಗಳಿಗೆ ಸಲಹೆ ನೀಡಲಾಗಿದೆ. ರಾಜ್ಯದಲ್ಲಿ ಪೊಲೀಸ್ ಸೇವೆಗೆ ಸೇರುವ ಕನಸು ಕಂಡಿರುವ ಯುವಕರಿಗೆ ಇದು ಸುವರ್ಣಾವಕಾಶವಾಗಿದೆ.

ಬಣ್ಣದಲ್ಲಿ ಮಿಂದೆದ್ದ ಗ್ರಾಮಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯರ ಕಾಲದಿಂದಲೂ ಆಚರಿಸಿಕೊಂಡು ಬಂದಂತೆ ಸಾಂಪ್ರದಾಯಿಕ ಹೋಳಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ಅಡರಕಟ್ಟಿ, ಮಂಜಲಾಪುರ, ಬಡ್ನಿ, ಬಟ್ಟೂರ, ಆದ್ರಳ್ಳಿ, ಸೋಗಿವಾಳ, ಸಂಕದಾಳ, ಸೂರಣಗಿ, ಕೊಕ್ಕರಗೊಂದಿ, ದೊಡ್ಡೂರ, ಶ್ಯಾಬಳ, ಉಳ್ಳಟ್ಟಿ, ಗೊಜನೂರ, ಅಕ್ಕಿಗುಂದ, ಯಳವತ್ತಿ, ಮಾಡಳ್ಳಿ, ಯತ್ನಳ್ಳಿ ಸೇರಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ ಯುವಕರು, ಮಕ್ಕಳು ಪರಸ್ಪರ ಬಣ್ಣ ಎರಚಿ ರಂಗಿನೋಕುಳಿಯಲ್ಲಿ ಮಿಂದೆದ್ದರು.

ಬೆಳಿಗ್ಗೆಯೇ ಮಕ್ಕಳು ಬಣ್ಣದ ನೀರು ತುಂಬಿದ್ದ ಪಿಚಕಾರಿ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಹಿಡಿದು ಪರಸ್ಪರ ಬಣ್ಣ ಎರಚಿ ಖುಷಿಪಟ್ಟರು. ಸುಡುಬಿಸಿಲು ಲೆಕ್ಕಿಸದೇ ಹಲವೆಡೆ ಅಣುಕು ಶವಯಾತ್ರೆ ನಡೆಸಿ, ಆಕರ್ಷಕ ಉಡುಗೆ ತೊಟ್ಟು ಹಲಗೆಯ ತಾಳಕ್ಕೆ ತಕ್ಕಂತೆ ಕುಣಿದರು. ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ಗೊಜನೂರ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಎತ್ತಿನ ಬಂಡಿ ಮೆರವಣಿಗೆಯನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಓಕುಳಿ ಬಳಿಕ ಕಾಮನ ದಹನದ ಸಂಪ್ರದಾಯ ನೆರವೇರಿಸಲಾಯಿತು. ಮಂಗಳವಾರವೂ ಕೆಲವು ಗ್ರಾಮಗಳಲ್ಲಿ ಓಕುಳಿ ಹಬ್ಬ ನಡೆದಿದೆ. ಗುರುವಾರ ತಾಲೂಕಿನ ಒಡೆಯರಮಲ್ಲಾಪುರ ಗ್ರಾಮದಲ್ಲಿ ಬಣ್ಣದ ಹಬ್ಬ ಆಚರಿಸಲಾಗುತ್ತಿದೆ. ಇನ್ನು ಶನಿವಾರ ಲಕ್ಷ್ಮೇಶ್ವರ ಮತ್ತು ಶಿಗ್ಲಿಯಲ್ಲಿ ರಂಗಪಂಚಮಿ ಆಚರಿಸಲಾಗುತ್ತಿದೆ. ಆದರೆ ಈ ವರ್ಷ ಶಿಗ್ಲಿ ಗ್ರಾಮದಲ್ಲಿ ಇತ್ತೀಚೆಗೆ ಗ್ರಾಮದೇವಿ ಜಾತ್ರೆ ನಡೆದ ಹಿನ್ನೆಲೆಯಲ್ಲಿ ಬಣ್ಣದಾಟ ಆಡದೆ ಕೇವಲ ಕಾಮದಹನ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಬಿಸಿಲಿನ ಪ್ರಮಾಣ ಹೆಚ್ಚಿರುವುದರಿಂದ ಬೆಳಿಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯೊಳಗೆ ಹಬ್ಬದ ಆಚರಣೆ ಪೂರ್ಣಗೊಳಿಸಿ ಆರೋಗ್ಯ ಕಾಪಾಡಿಕೊಳ್ಳಿ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ನೀರನ್ನು ಹಿತ-ಮಿತವಾಗಿ ಬಳಸಲು ಪುರಸಭೆ ಮುಖ್ಯಾಧಿಕಾರಿ ಮಾಂತೇಶ ಬೀಳಗಿ ಮನವಿ ಮಾಡಿದ್ದಾರೆ.

ವೃತ್ತಿಪರ ಕೋರ್ಸ್‌ಗಳ ಶುಲ್ಕ ಪಾವತಿ ದಿನಾಂಕ ಮಾರ್ಚ್ 7ರವರೆಗೆ ವಿಸ್ತರಣೆ

ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವ ಅವಧಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಸ್ತರಿಸಿದೆ.

ಮಾರ್ಚ್ 7ರವರೆಗೆ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ತಿಳಿಸಿದ್ದಾರೆ.

ಇದುವರೆಗೆ ಒಟ್ಟು 3.47 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 3.36 ಲಕ್ಷ ಅಭ್ಯರ್ಥಿಗಳು ಈಗಾಗಲೇ ಶುಲ್ಕ ಪಾವತಿಸಿದ್ದಾರೆ. ಇನ್ನೂ ಸುಮಾರು 9 ಸಾವಿರ ಮಂದಿ ಶುಲ್ಕ ಪಾವತಿಸಬೇಕಿದ್ದು, ಅವರಿಗೆ ಅನುಕೂಲವಾಗಲೆಂದು ದಿನಾಂಕ ವಿಸ್ತರಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳಿಗೆ ಫೆಬ್ರವರಿ 21 ಮತ್ತು 22ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಅಂತಿಮ ಕೀ ಉತ್ತರ ಹಾಗೂ ಅಭ್ಯರ್ಥಿಗಳ ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಂಕಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಮಾರ್ಚ್ 6ರಂದು ಬೆಳಿಗ್ಗೆ 11 ಗಂಟೆಯೊಳಗೆ ಆನ್‌ಲೈನ್ ಮೂಲಕ ಸಲ್ಲಿಸಲು ಸೂಚಿಸಲಾಗಿದೆ.

ಇನ್ನೂ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಮಾರ್ಚ್ 1ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಅದರ ಕೀ ಉತ್ತರಗಳನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಮಾರ್ಚ್ 7ರಂದು ಮಧ್ಯಾಹ್ನ 12 ಗಂಟೆಯೊಳಗೆ ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 2.31 ಲಕ್ಷ ಅಭ್ಯರ್ಥಿಗಳಲ್ಲಿ ಶೇ.98ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿರುವುದು ಗಮನಾರ್ಹವಾಗಿದೆ.

ಹೆಚ್ಚು ಆಹಾರ ತಿಂದ್ರೆ ಮಾತ್ರ ಬೊಜ್ಜು ಬರುತ್ತೆ ಅಂತ ನೀವು ತಿಳ್ಕೊಂಡಿದ್ದೀರಾ!? ಹಾಗಿದ್ರೆ ಈ ಮಾಹಿತಿ ತಿಳಿಯಿರಿ!

0

ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯ ಹೆಚ್ಚುತ್ತಿರುವುದು ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗುತ್ತಿದೆ.

ಇದಕ್ಕೆ ಕೇವಲ ಹೆಚ್ಚು ತಿನ್ನುವುದೇ ಕಾರಣ ಎಂಬ ಭಾವನೆ ತಪ್ಪು. ಕೆಲವರಿಗೆ ಕಡಿಮೆ ಆಹಾರ ಸೇವನೆ ಇದ್ದರೂ ತೂಕ ಹೆಚ್ಚಾಗಬಹುದು. ಇದಕ್ಕೆ ಹಾರ್ಮೋನ್ ಅಸಮತೋಲನ, ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡ ಪ್ರಮುಖ ಕಾರಣಗಳಾಗಿವೆ.

ಅಧಿಕ ತೂಕ ಹೆಚ್ಚುವ ಪ್ರಕ್ರಿಯೆಯಲ್ಲಿ ಥೈರಾಯ್ಡ್ ಸಮಸ್ಯೆ, ಪಿಸಿಓಎಸ್ ಅಥವಾ ಇನ್ಸುಲಿನ್ ರೆಸಿಸ್ಟೆನ್ಸ್ ಪ್ರಮುಖ ಪಾತ್ರ ವಹಿಸುತ್ತವೆ. ದಿನಕ್ಕೆ 5 ಗಂಟೆಗೂ ಕಡಿಮೆ ನಿದ್ರೆ ಮಾಡುವವರಲ್ಲಿ ಘ್ರೆಲಿನ್ ಹಾರ್ಮೋನ್ ಮಟ್ಟ ಹೆಚ್ಚಿ ಹಸಿವನ್ನು ಹೆಚ್ಚಿಸುತ್ತದೆ. ಅದರಿಂದ ಹೆಚ್ಚಿನ ಆಹಾರ ಸೇವನೆ ಸಂಭವಿಸಿ ತೂಕ ಹೆಚ್ಚಾಗುತ್ತದೆ.

ಮಾನಸಿಕ ಒತ್ತಡ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಹೆಚ್ಚಿಸುವುದರಿಂದ ಹೊಟ್ಟೆ ಸುತ್ತಲಿನ ಕೊಬ್ಬು ಹೆಚ್ಚುತ್ತದೆ. ಈ ರೀತಿಯ ಕೊಬ್ಬು ಹೃದಯರೋಗ, ಸಕ್ಕರೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಬೊಜ್ಜು ತಡೆಗೆ ಸಲಹೆಗಳು:

  • ಆಹಾರ ನಿಯಂತ್ರಣ ಮತ್ತು ಸಮತೋಲನ
  • ಪ್ರತಿದಿನ ವ್ಯಾಯಾಮ
  • ಸರಿಯಾದ ನಿದ್ರೆ
  • ತೂಕ ಹೆಚ್ಚಾದಲ್ಲಿ ವೈದ್ಯರನ್ನು ಸಂಪರ್ಕಿಸಿರಿ.

ಸ್ಥೂಲಕಾಯ ನಿಯಂತ್ರಣಕ್ಕೆ ಜೀವನಶೈಲಿ ಪರಿವರ್ತನೆ ಮತ್ತು ವೈದ್ಯಕೀಯ ಮಾರ್ಗದರ್ಶನ ಅತ್ಯಂತ ಮುಖ್ಯವಾಗಿದೆ.

ಹೋಳಿ ಹುಣ್ಣಿಮೆಯಂದೇ ದುರ್ಘಟನೆ: ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಸಣಾಪುರ ಗ್ರಾಮದಲ್ಲಿ ಹೋಳಿ ಹಬ್ಬದ ಸಂಭ್ರಮ ಮಧ್ಯೆ ಭೀಕರ ದುರ್ಘಟನೆ ಸಂಭವಿಸಿದೆ.

ಬಣ್ಣ ಹಚ್ಚಿ ಪರಸ್ಪರ ಹಬ್ಬ ಆಚರಿಸುತ್ತಿದ್ದ ಇಬ್ಬರು ಯುವಕರು, ಮಧ್ಯಾಹ್ನದ ನಂತರ ಬಣ್ಣವನ್ನು ತೊಳೆದುಕೊಳ್ಳಲು ಕೆರೆಗೆ ಇಳಿದಾಗ ನೀರಿನ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಮೃತ ಯುವಕರನ್ನು ಗಂಗಾವತಿ ನಗರದ ಗಾಂಧಿನಗರ ನಿವಾಸಿಗಳಾದ ಅಭಿಷೇಕ್ ಮತ್ತು ಸೂರ್ಯ ಎಂದು ಗುರುತಿಸಲಾಗಿದೆ. ಯುವಕರು ಕೆರೆಯಲ್ಲಿ ಈಜಲು ಇಳಿದಾಗ ನೀರಿನ ಆಳವನ್ನು ಅರ್ಥಮಾಡಿಕೊಳ್ಳದೆ ಮುಳುಗಿದ್ದಾರೆ. ಸ್ಥಳೀಯರು ತಕ್ಷಣವೇ ಶೋಧ ಕಾರ್ಯ ಆರಂಭಿಸಿ, ಸ್ಥಳೀಯ ಈಜುಗಾರರ ಸಹಾಯದಿಂದ ಹುಡುಕಾಟ ಮುಂದುವರಿಸಿದೆ.

ಘಟನೆ ಕುರಿತು ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಬ್ಬದ ದಿನವೇ ಇಬ್ಬರು ಯುವಕರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಒಳ ಮೀಸಲಾತಿಯನ್ನೂ ಪರಿಗಣಿಸಿ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡಬೇಕು: ವಿಜಯೇಂದ್ರ ಆಗ್ರಹ

ಬೆಂಗಳೂರು: ಒಳ ಮೀಸಲಾತಿಯನ್ನೂ ಪರಿಗಣಿಸಿ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡಬೇಕು. ನ್ಯಾಯಾಲಯದ ಕುಂಟುನೆಪ ಕೊಡಬಾರದು. ಇಲ್ಲವಾದರೆ ಬಿಜೆಪಿ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾದೀತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಮೀಸಲಾತಿ ಪ್ರಮಾಣವನ್ನು ಶೇ 50ರಿಂದ ಶೇ 56ಕ್ಕೆ ಏರಿಸಿದ್ದಾರೆ. ನೀವು 50 ಸಾವಿರ ಖಾಲಿ ಹುದ್ದೆ ಭರ್ತಿ ಮಾಡುತ್ತೀರಾ, ಅಥವಾ 1 ಲಲಕ್ಷ ಹುದ್ದೆ ಭರ್ತಿ ಮಾಡುವಿರಾ ಎಂಬುದು ನಿಮಗೆ ಬಿಟ್ಟದ್ದು.

ಎಲ್ಲ ಖಾಲಿ ಹುದ್ದೆ ಭರ್ತಿ ಮಾಡಿ ಎಂಬ ಆಗ್ರಹ ನಮ್ಮದು. ಶೇ 56 ಒಳ ಮೀಸಲಾತಿ ನೀಡಿ ಬಿಜೆಪಿ ಸರಕಾರವು ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿದೆ. ಅದರ ಆಧಾರದಡಿ ಶೋಷಿತ- ಪೀಡಿತ ಸಮುದಾಯಗಳಿಗೆ ಒಳ ಮೀಸಲಾತಿ ಪರಿಗಣಿಸಿ ಈ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳೇ ಪದೇಪದೇ ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದೀರಿ. ಪರಿಶಿಷ್ಟ ಜಾತಿ- ಪಂಗಡಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ರಾಜ್ಯ ನ್ಯಾಯಾಲಯದ ಕುಂಟುನೆಪ ಹೇಳದೇ ಈ ಸಮುದಾಯಗಳಿಗೆ ಉದ್ಯೋಗ ನೀಡಿ ನ್ಯಾಯ ಕೊಡಿ ಎಂದು ಒತ್ತಾಯಿಸಿದರು.

ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ- ಪಂಗಡಗಳ ಯುವಜನತೆ ಸೇರಿ ಎಲ್ಲ ವರ್ಗಗಳ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಿ. ಅದನ್ನು ಬಿಟ್ಟು ಈ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ತೊಟ್ಟಿಲು ತೂಗುವ ಜೊತೆಗೇ ಮಗುವನ್ನು ಚಿವುಟುವ ಕೆಲಸ ಮಾಡುತ್ತಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು. ಹಳೆಯ ಮೀಸಲಾತಿ ಪ್ರಮಾಣದಡಿ ನೇಮಕಾತಿ ಮಾಡಲು ಮುಂದಾಗಿರುವ ರಾಜ್ಯ ಸರಕಾರವು ರಾಜ್ಯದಲ್ಲಿ ಬೆಂಕಿ ಹಚ್ಚಲು ಹೊರಟಂತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನೋದ್ಯಮಕ್ಕೆ ಉತ್ತೇಜನ; ಉದ್ಯಮಿಗಳ ಹೆಚ್.ಡಿ. ಕುಮಾರಸ್ವಾಮಿ ಚರ್ಚೆ

ಬೆಂಗಳೂರು: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿ ಹಾಗೂ ಅದಕ್ಕೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವ ದಿಸೆಯಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ (FKCCI) ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಜತೆ ಮಹತ್ವದ ಸಭೆ ನಡೆಸಿದರು.

ನಗರದ ಹೆಚ್ ಎಂಟಿ ಭವನದಲ್ಲಿರುವ ಸಚಿವರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ; ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ವಿಸ್ತರಣೆಗೆ ಇರುವ ವಿಪುಲ ಅವಕಾಶಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ₹500 ಕೋಟಿ ವೆಚ್ಚದಲ್ಲಿ ಜಾಗತಿಕ ಮಟ್ಟದ ARAI (ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ) ಪರೀಕ್ಷಾ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರಕ್ಕೆ, ಅದರಲ್ಲಿಯೂ ಮುಖ್ಯಮಂತ್ರಿಗಳಿಗೆ ಸ್ವತಃ ನಾನೇ ಪತ್ರ ಬರೆದಿದ್ದೇನೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಈ ತರಬೇತಿ ಕೇಂದ್ರಕ್ಕೆ ಕಳೆದ ಬಜೆಟ್ ನಲ್ಲಿ ₹500 ಕೋಟಿ ಮೀಸಲಿಡಲಾಗಿದೆ. ಅಗತ್ಯಬಿದ್ದರೆ ಇನ್ನೂ ₹500 ಕೋಟಿ ಹೂಡಿಕೆ ಮಾಡಲು ಕೇಂದ್ರ ತಯಾರಿದೆ ಎಂಬ ಅಂಶವನ್ನು ಕೇಂದ್ರ ಸಚಿವರು ಸಭೆಯ ಗಮನಕ್ಕೆ ತಂದರು.

ಈ ಬಗ್ಗೆ ಸಚಿವರನ್ನು ಅಭಿನಂದಿಸಿದ ಕೈಗಾರಿಕೋದ್ಯಮಿಗಳು, ಇಂಥ ಕೇಂದ್ರವೊಂದು ರಾಜ್ಯಕ್ಕೆ ಅಗತ್ಯವಿದ್ದು, ವಾಹನೋದ್ಯಮಕ್ಕೆ ದೊಡ್ಡ ಶಕ್ತಿ ನೀಡಲಿದೆ. ಮುಖ್ಯವಾಗಿ ಇವಿ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಬೂಸ್ಟ್ ನೀಡಲಿದೆ ಎಂದರು.

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಸಂಶೋಧನೆ, ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಸಾರಿಗೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸಿ ಪರಿಸರ ಪೂರಕ ಸಾರಿಗೆ ವ್ಯವಸ್ಥೆ ರೂಪಿಸುವ ದೃಢ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.

ಕಂಪನಿಗಳು ಕರ್ನಾಟಕದಲ್ಲಿ ಹುಟ್ಟಿಕೊಳ್ಳುತ್ತಿವೆ, ಆದರೆ ಬೇರೆ ರಾಜ್ಯಗಳಲ್ಲಿ ಉತ್ಪಾದನೆ ಮಾಡುತ್ತಿವೆ. ಇಂಥ ಪರಿಸ್ಥಿತಿಯಿಂದ ಕರ್ನಾಟಕವನ್ನು ಹೊರತರಬೇಕಿದೆ. ಅದಕ್ಕೆ ARAI ಕೇಂದ್ರ ದೊಡ್ಡ ಮಟ್ಟದ ಕೊಡುಗೆ ನೀಡುತ್ತದೆ. ಆಟೋಮೊಬೈಲ್ ಪರೀಕ್ಷಾ ಕೇಂದ್ರ ಬರುವುದರ ಜತೆಗೆ ಆ ಮೂಲಕ ಸಂಶೋಧನೆ, ಉತ್ಪಾದನೆಗೂ ಮುಂದಿನ ದಿನಗಳಲ್ಲಿ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು.

ಸ್ಥಳೀಯ ಮಟ್ಟದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಆಗಬೇಕು ಎಂಬುದು ಪ್ರಧಾನಿಗಳ ದೂರದೃಷ್ಟಿ. ಆ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಳ ಅಡಿಯಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ತೇಜನ ನೀಡುತ್ತಿದ್ದೇವೆ. ರಾಜ್ಯದಲಿ ARAI ಪರೀಕ್ಷಾ ಕೇಂದ್ರ ಸ್ಥಾಪನೆ ಆದರೆ ಸಾವಿರಾರು ಸಂಖ್ಯೆಯಷ್ಟು ಉದ್ಯೋಗ ಸೃಷ್ಟಿ ಆಗುವುದಷ್ಟೇ ಅಲ್ಲದೆ, ಪರೋಕ್ಷ ಉದ್ಯೋಗಗಳನ್ನು ಬೃಹತ್ ಪ್ರಮಾಣದಲ್ಲಿ ಸೃಷ್ಟಿಸಿ ದೊಡ್ಡ ಮಟ್ಟದ ಆಟೋ ಇಕೋ ಸಿಸ್ಟಮ್ ನಿರ್ಮಾಣಕ್ಕೆ ನಾಂದಿ ಹಾಡುತ್ತದೆ. ಹೀಗಾಗಿ ಈ ಯೋಜನೆಗೆ ರಾಜ್ಯ ಸರ್ಕಾರದ ಸಹಕಾರವನ್ನು ಕೋರಿದ್ದೇವೆ ಎಂದು ಅವರು ಹೇಳಿದರು.

ಅದೇ ರೀತಿ ಕರ್ನಾಟಕದಲ್ಲಿ ಇವಿ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗೂ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಅತ್ಯಾಧುನಿಕ, ಸಮಗ್ರವಾದ ಇವಿ ಪೂರಕ ವ್ಯವಸ್ಥೆ ಮಾಡುವುದರಿಂದ ರಾಜ್ಯಕ್ಕೆ ಆರ್ಥಿಕ, ಉದ್ಯೋಗ ಹಾಗೂ ಉತ್ಪಾದನೆ ಕ್ಷೇತ್ರಗಳಲ್ಲಿ ಭಾರೀ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಸಚಿವರು ಪ್ರತಿಪಾದಿಸಿದರು.

ಎಫ್ ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಂ ಪ್ರಸಾದ್, ಉಪಾಧ್ಯಕ್ಷ ಬಿ.ಪಿ. ಶಶಿಧರ್, ಗ್ರೀನ್ ಎನರ್ಜಿ ಸಮಿತಿ ಅಧ್ಯಕ್ಷ ರಮೇಶ್ ಶಿವಣ್ಣ, ಮಾಜಿ ಅಧ್ಯಕ್ಷರಾದ ಎಸ್. ಸಂಪತ್ ರಾಮನ್, ಆರ್. ಶಿವಕುಮಾರ್, ಕೆ. ಶಿವಷಣ್ಮುಗಂ, ಎಲ್. ಲಕ್ಷ್ಮಣ ಸೇರಿದಂತೆ ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಮುಂಡರಗಿ ಪೊಲೀಸರ ಕಾರ್ಯಾಚರಣೆ: ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳ ಬಂಧನ

0

ಗದಗ: ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿಗಳಲ್ಲಿದ್ದ ಬ್ಯಾಟರಿ ಹಾಗೂ ಸ್ಟೆಪ್ನಿ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2025ರ ಡಿಸೆಂಬರ್ ತಿಂಗಳಲ್ಲಿ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಸ್ ನಿಲ್ದಾಣ ಹಾಗೂ ಮಠದ ಮುಂದೆ ನಿಲ್ಲಿಸಿದ್ದ ಲಾರಿಗಳಲ್ಲಿದ್ದ ಬ್ಯಾಟರಿ ಮತ್ತು ಸ್ಟೆಪ್ನಿ ಕಳ್ಳತನವಾಗಿದ್ದ ಕುರಿತು ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗಾಗಿ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ಸೂಚನೆಯ ಮೇರೆಗೆ ವಿಶೇಷ ತಂಡ ರಚಿಸಲಾಯಿತು.

ನರಗುಂದ ಉಪವಿಭಾಗದ ಡಿ.ಎಸ್.ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ, ಮುಂಡರಗಿ ಪೊಲೀಸ್ ಇನ್ವಸ್ಪೆಕ್ಟರ್ ಯಶವಂತ ಬಿಸನಳ್ಳಿ ಹಾಗೂ ಪಿಎಸ್‌ಐ (ಅಪರಾಧ) ಬಿ.ಎನ್. ಯಳವತ್ತಿ ನೇತೃತ್ವದ ತಂಡ 16-02-2026 ರಂದು ನಾಲ್ವರು ಆರೋಪಿತರನ್ನು ಬಂಧಿಸಿದೆ.

ಬಂಧಿತರನ್ನು ಸುನೀಲ ತಂದೆ ರಮೇಶ್ ಭಾವಳ್ಳಿ (25) ಅಳವಂಡಿ, ಕನಕಪ್ಪ ತಂದೆ ಶಂಕ್ರಪ್ಪ ಬಚನಳ್ಳಿ (22) ರಘುನಾಥನಹಳ್ಳಿ, ಅಂದಪ್ಪ ತಂದೆ ನಿಂಗಪ್ಪ ಬಿಸನಳ್ಳಿ (29) ಅಳವಂಡಿ ಹಾಗೂ ಪ್ರವೀಣ ತಂದೆ ಭರಮಪ್ಪ ಪೂಜಾರ (28) ರಘುನಾಥನಹಳ್ಳಿ ಎಂದು ಗುರುತಿಸಲಾಗಿದೆ.

ಆರೋಪಿತರು ಡಂಬಳ, ಕದಾಂಪೂರ, ಮೇವುಂಡಿ, ಬರದೂರು, ಮುಂಡರಗಿ ಹಾಗೂ ವೆಂಕಟಾಪೂರ ಹಾಗೂ ಜಂತ್ಲಿ ಗ್ರಾಮಗಳಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ ಹಾಗೂ ಸ್ಟೆಪ್ನಿಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪೊಲೀಸರು ಸುಮಾರು ₹3.70 ಲಕ್ಷ ಮೌಲ್ಯದ 40 ಎಕ್ಸೈಡ್ ಕಂಪನಿಯ ಬ್ಯಾಟರಿಗಳು, ಒಂದು ಸ್ಟೆಪ್ನಿ ಹಾಗೂ ಕಳ್ಳತನಕ್ಕೆ ಬಳಸಿದ KA-35/AA-1284 ನಂಬರಿನ ಬೊಲೇರೋ ವಾಹನ (ಸುಮಾರು ₹2 ಲಕ್ಷ ಮೌಲ್ಯ) ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ, ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗೇವಾಡಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣದಲ್ಲೂ ಪೊಲೀಸರು ಆರೋಪಿತನನ್ನು 28-02-2026 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನೊಂದ ಬಾಲಕಿಗೆ ಸುರಕ್ಷಿತ ಸಂರಕ್ಷಣೆ ಒದಗಿಸಲಾಗಿದೆ.

ಈ ಎರಡು ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಲು ಶ್ರಮಿಸಿದ ಮುಂಡರಗಿ ಪೊಲೀಸ್ ಇನ್ಸಪೆಕ್ಟರ್ ಯಶವಂತ ಬಿಸನಳ್ಳಿ, ಪಿಎಸ್‌ಐ ಬಿ.ಎನ್. ಯಳವತ್ತಿ, ಎಎಸ್‌ಐ ಎಸ್.ಎಂ. ಹಡಪದ ಹಾಗೂ ಸಿಬ್ಬಂದಿಗಳಾದ. ಜೆ ಐ ಬಚ್ಚೇರಿ, ಲಕ್ಷ್ಮಣ್ಣ ಲಮಾಣಿ, ಸುರೇಶ್ ಡೊಣ್ಣಿ, ಹೇಮಂತ ಹಂಚಿನಾಳ, ಬಾಬಾಜಾನ್ ಕಮ್ಮಾರ, ವಿರೇಶ್ ಬಿಸನಹಳ್ಳಿ, ವಿನಾಯಕ ಬಾಲರಡ್ಡಿ, ನಾಗರಾಜ್ ಹರಪನಹಳ್ಳಿ, ಶರಣಪ್ಪ ಓಜನಹಳ್ಳಿ ಬಸವರಾಜ ಬಣಕಾರ, ಮುಕ್ಕಣ್ಣ ಪೂಜಾರಗೆ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

Bengaluru: MBBS ಸೀಟ್ ಕೊಡಿಸುವುದಾಗಿ 25 ಲಕ್ಷ ವಂಚನೆ! ನಾಲ್ವರ ವಿರುದ್ಧ FIR

0

ಬೆಂಗಳೂರು: ನಗರದಲ್ಲಿ ಯುವತಿಗೆ MBBS ಸೀಟ್ ಕೊಡಿಸುವುದಾಗಿ ನಂಬಿಸಿ 25 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ FIR ದಾಖಲಾಗಿದೆ.

ಸಂತ್ರಸ್ತ ಯುವತಿ ಆಯೇಷಾ ಖಥುಮ್ ಅವರಿಗೆ ಸೀಟ್ ಕೊಡಿಸುವುದಾಗಿ ಹೇಳಿ ಹಣ ಪಡೆದ ಆರೋಪದ ಮೇಲೆ ಡಾ. ಕೆ.ಪಿ. ಶರತ್ ಸೇರಿದಂತೆ ಶಂಶೇರ್ ಬೇಗ್ ಮತ್ತು ಸೈಯದ್ ತಬ್ರೇಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ BNS 318(4), 318(2) ಸೇರಿ ಒಟ್ಟು 8 ಸೆಕ್ಷನ್‌ಗಳಡಿ ಕೇಸ್ ದಾಖಲಿಸಲಾಗಿದೆ.

ಆಯೇಷಾ ಖಥುಮ್ ತಂದೆ ಲಾಲ್ ಬಾಬು ನೀಡಿದ ದೂರಿನ ಪ್ರಕಾರ, ದ್ವಿತೀಯ ಪಿಯುಸಿ ಹಾಗೂ NLT ಪರೀಕ್ಷೆ ಬರೆದಿದ್ದ ಯುವತಿ MBBS ಪ್ರವೇಶಕ್ಕಾಗಿ ಉತ್ತಮ ಕಾಲೇಜು ಹುಡುಕುತ್ತಿದ್ದರು. ಈ ವೇಳೆ ಪರಿಚಯದ ಸೈಯದ್ ತಬ್ರೇಜ್ ಮೂಲಕ ಶಂಶೇರ್ ಬೇಗ್ ಎಂಬಾತನ ಪರಿಚಯವಾಗಿತ್ತು.

ಶಂಶೇರ್ ಬೇಗ್ ತಾನು ಕಿಮ್ಸ್ ಮೆಡಿಕಲ್ ಕಾಲೇಜಿನ ಅಧ್ಯಕ್ಷರ ಪರಿಚಯವಿದೆ ಎಂದು ಹೇಳಿ ಡಾ. ಕೆ.ಪಿ. ಶರತ್ ಅವರನ್ನು ಪರಿಚಯಿಸಿದ್ದಾನೆ. ಬಳಿಕ ಬನಶಂಕರಿ 2ನೇ ಹಂತದಲ್ಲಿರುವ KIMS ಮೆಡಿಕಲ್ ಕಾಲೇಜಿನಲ್ಲಿ ಭೇಟಿಯಾಗಿದ್ದು, ಇದೇ ಕಾಲೇಜಿನಲ್ಲಿ ಆಯೇಷಾಗೆ ಸೀಟ್ ಕೊಡಿಸುವುದಾಗಿ ನಂಬಿಸಿ ಶೈಕ್ಷಣಿಕ ದಾಖಲೆಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.

ನಂತರ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ 25 ಲಕ್ಷ ರೂಪಾಯಿ ಡೊನೇಷನ್ ನೀಡಿದರೆ ಸೀಟ್ ಪಕ್ಕಾ ಎಂದು ಹೇಳಲಾಗಿದೆ. ಆರೋಪಿಗಳ ಮಾತು ನಂಬಿದ ಕುಟುಂಬಸ್ಥರು ಯುಪಿಐ ಮತ್ತು ಚೆಕ್ ಮೂಲಕ 10 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಬಳಿಕ ಉಳಿದ 15 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ನೀಡಿದ್ದಾರೆ.

ಆದರೆ ಪೂರ್ತಿ ಹಣ ಪಡೆದ ಬಳಿಕ ಆರೋಪಿಗಳು ಸೀಟ್ ಕೊಡಿಸದೇ ಸಂಪರ್ಕ ತಪ್ಪಿಸಿಕೊಂಡಿದ್ದಾರೆ. ವಿಚಾರಿಸಿದಾಗ ಡಾ. ಕೆ.ಪಿ. ಶರತ್ ಅವರು ಕಿಮ್ಸ್ ಕಾಲೇಜಿನ ಅಧ್ಯಕ್ಷರಲ್ಲ ಎಂಬುದು ಬೆಳಕಿಗೆ ಬಂದಿದೆ. ತಾವು ಮೋಸ ಹೋಗಿರುವುದು ತಿಳಿದು ಆಯೇಷಾ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

KPSC ಗೆಜೆಟೆಡ್ ನೇಮಕಾತಿಯಲ್ಲಿ ಮತ್ತೆ ಅಕ್ರಮ ಆರೋಪ: ತನಿಖೆಗೆ ಅಭ್ಯರ್ಥಿಗಳ ಆಗ್ರಹ

ಬೆಂಗಳೂರು: KPSC ನಡೆಸುತ್ತಿರುವ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಯಲ್ಲಿ ಮತ್ತೆ ಅಕ್ರಮದ ಆರೋಪ ಕೇಳಿಬಂದಿದೆ. 384 ಹುದ್ದೆಗಳ ಭರ್ತಿಗಾಗಿ ಇಂಟರ್ವ್ಯೂಗೆ ಕರೆ ನೀಡಿರುವ 1:3 ಅನುಪಾತದ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಗೊಂದಲಗಳಿವೆ ಎಂದು ಅಭ್ಯರ್ಥಿಗಳು ಆರೋಪಿಸಿ, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಮುಖ್ಯ ಪರೀಕ್ಷೆ ಪೂರ್ಣಗೊಂಡ ಬಳಿಕ ಇಂಟರ್ವ್ಯೂ ಹಂತಕ್ಕೆ ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ಮಾ. 2ರಂದು ಕೆಪಿಎಸ್ಸಿ ಪ್ರಕಟಿಸಿತ್ತು. ಆದರೆ, ಈ ಪಟ್ಟಿಯಲ್ಲಿ ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಇದೇ ಮೊದಲಲ್ಲ. ಇದೇ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಲೋಪ ಕಂಡುಬಂದಿದ್ದ ಹಿನ್ನೆಲೆ ಭಾರಿ ವಿರೋಧ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಎರಡು ಬಾರಿ ಪರೀಕ್ಷೆ ನಡೆಸಲಾಗಿತ್ತು. ಇದೀಗ ಸಂದರ್ಶನಕ್ಕೆ ಆಯ್ಕೆಯಾದವರ ಪಟ್ಟಿಯಲ್ಲಿಯೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇಡೀ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ.

error: Content is protected !!