Home Blog Page 81

ಕೇಂದ್ರ ಸಚಿವ ವಿ. ಸೋಮಣ್ಣ ಸಹೋದರಿ ಮಹಾದೇವಮ್ಮ ನಿಧನ: ಇಂದು ಚಿಕ್ಕಮುದುವಾಡಿಯಲ್ಲಿ ಅಂತ್ಯಕ್ರಿಯೆ

0

ರಾಮನಗರ: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರ ಸಹೋದರಿ ಮಹಾದೇವಮ್ಮ (96) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಮೂಲತಃ ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಗ್ರಾಮದ ನಿವಾಸಿಯಾಗಿದ್ದ ಮಹಾದೇವಮ್ಮ ಅವರು ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನ 1 ಗಂಟೆಗೆ ಚಿಕ್ಕಮುದುವಾಡಿ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಕುಟುಂಬಸ್ಥರು ಹಾಗೂ ಆತ್ಮೀಯರು ಭಾಗವಹಿಸಲಿದ್ದಾರೆ.

22 ಕೋಟಿ ಲೀಟರ್‌ ತೈಲ ಪೂರೈಕೆ: ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಆಪತ್ಭಾಂದವ

0

ಮಾಸ್ಕೋ: ಮಧ್ಯಪ್ರಾಚ್ಯದ ಯುದ್ಧದ ವಾತಾವರಣದಿಂದ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ಇದರ ಪರಿಣಾಮ ಭಾರತೀಯ ತೈಲ ಪೂರೈಕೆ ವಲಯದಲ್ಲಿ ಆರ್ಥಿಕ ಅಪಾಯವನ್ನು ಉಂಟುಮಾಡಿದೆ.

ಈ ಪ್ರದೇಶದಲ್ಲಿ 27 ಭಾರತೀಯ ಹಡಗುಗಳು ಸಿಲುಕಿಕೊಂಡಿದ್ದು, 10,000 ಕೋಟಿಗೂ ಹೆಚ್ಚು ಮೌಲ್ಯದ ಸರಕು ಅಪಾಯದಲ್ಲಿದೆ. ಇದರಿಂದ ತೈಲ ಕೊರತೆಯ ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ತೈಲ ಪೂರೈಕೆಯಲ್ಲಿ ನೆರವಾಗಲು ಸಿದ್ಧವಾಗಿದೆ ಎಂಬ ವರದಿಗಳು ಬಂದಿದೆ.

ಸುಮಾರು 95 ಮಿಲಿಯನ್ ಬ್ಯಾರೆಲ್ ರಷ್ಯನ್ ಕಚ್ಚಾ ತೈಲ ಈಗಾಗಲೇ ಭಾರತೀಯ ಸಮುದ್ರ ಗಡಿಯ ಹಡಗುಗಳಲ್ಲಿ ಲಭ್ಯವಿದ್ದು, ಕೆಲವು ವಾರಗಳಲ್ಲಿ ಭಾರತಕ್ಕೆ ತಲುಪುವ ಸಾಧ್ಯತೆ ಇದೆ. ಮೊದಲ ಹಂತವಾಗಿ 14 ಲಕ್ಷ ಬ್ಯಾರೆಲ್ (22.25 ಕೋಟಿ ಲೀಟರ್) ಹೊತ್ತ 2 ತೈಲ ಟ್ಯಾಂಕರ್‌ಗಳು ಭಾರತ ಕಡೆ ಹೊರಟಿದ್ದು, ಈ ವಾರದಲ್ಲೇ ತಲುಪುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರದ ಕ್ರಮಗಳಿಂದ ಮಧ್ಯಪ್ರಾಚ್ಯದ ಪೂರೈಕೆ ವ್ಯತ್ಯಯವನ್ನು ಭಾಗಶಃ ಸಮತೋಲನಗೊಳಿಸಲು ಭಾರತಕ್ಕೆ ಅವಕಾಶ ಸಿಗಲಿದೆ. ಇದೇ ಸಂದರ್ಭ, ಇಂಡಿಯನ್ ನ್ಯಾಷನಲ್ ಶಿಪ್ ಓನರ್ಸ್ ಅಸೋಸಿಯೇಷನ್ ಪತ್ರ ಮೂಲಕ 27 ಹಡಗುಗಳು ಸಿಲುಕಿರುವುದು ಮತ್ತು 10,000 ಕೋಟಿ ಮೌಲ್ಯದ ಸರಕು ಅಪಾಯದಲ್ಲಿ ಇರುವ ಕುರಿತು ಸರ್ಕಾರಕ್ಕೆ ತಿಳಿಸಲಾಗಿದೆ.

ಒಳಮೀಸಲಾತಿ ಗೊಂದಲ: ಇಂದು ಸಚಿವ ಸಂಪುಟದಲ್ಲಿ ಚರ್ಚೆ – ಪರಮೇಶ್ವರ್!

ಬೆಂಗಳೂರು: ನೇಮಕಾತಿಯಲ್ಲಿ ಒಳಮೀಸಲಾತಿ ಹಂಚಿಕೆ ಕುರಿತು ಉಂಟಾಗಿರುವ ಗೊಂದಲದ ಬಗ್ಗೆ ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೋಸ್ಟರ್ ವ್ಯವಸ್ಥೆ ರೂಪಿಸುವ ಸಂದರ್ಭದಲ್ಲಿ ಕೆಲವು ವರ್ಗಗಳಿಗೆ ಹೆಚ್ಚು ಮೀಸಲಾತಿ ಸಿಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದ್ದು, ಈ ಕುರಿತು ಸಂಪುಟದಲ್ಲಿ ಸಮಗ್ರ ಚರ್ಚೆ ನಡೆಯಲಿದೆ ಎಂದರು. ಪರಿಶಿಷ್ಟ ಜಾತಿ ಸಮುದಾಯಕ್ಕೆ 17 ಶೇಕಡಾ ಒಳಮೀಸಲಾತಿ ನೀಡುವ ತೀರ್ಮಾನ ಈಗಾಗಲೇ ಕೈಗೊಳ್ಳಲಾಗಿದ್ದು, ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ  ಶೇಕಡಾ 1% ಮೀಸಲಾತಿ ನೀಡುವ ಬೇಡಿಕೆಯೂ ಇದೆ ಎಂದು ಹೇಳಿದರು.

ಇನ್ನು 56 ಶೇಕಡಾ ಮೀಸಲಾತಿ ವಿಷಯಕ್ಕೆ ನ್ಯಾಯಾಲಯದಿಂದ ತಡೆ ಇರುವುದರಿಂದ ಈ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. 56%  ಶೇಕಡಾ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೂ ಗೊತ್ತಿದ್ದರೂ ರಾಜಕೀಯ ಉದ್ದೇಶದಿಂದ ಜನರನ್ನು ಪ್ರಚೋದಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನೊಂದೆಡೆ ಫೋನ್ ಟ್ಯಾಪ್ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸರ್ಕಾರ ಯಾರ ಫೋನನ್ನೂ ಟ್ಯಾಪ್ ಮಾಡುತ್ತಿಲ್ಲ. ಈ ಬಗ್ಗೆ ದಾಖಲೆಗಳಿದ್ದರೆ ನೀಡಲಿ ಎಂದು ಹೆಚ್‌ಡಿಕೆ ಹಾಗೂ ಆರ್ ಅಶೋಕ್ ಅವರಿಗೆ ಸವಾಲ್ ಹಾಕಿದರು. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ  ಅವರನ್ನು ಭೇಟಿ ಮಾಡಿ ಒಳಮೀಸಲಾತಿ ಗೊಂದಲ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದರು.

ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆ ಇಂದು ಇಳಿಕೆ; ಇಲ್ಲಿದೆ ದರಪಟ್ಟಿ!

ಗೋಲ್ಡ್ ಪ್ರಿಯರಿಗೆ ನೆಮ್ಮದಿ ಸುದ್ದಿ ಸಿಕ್ಕಿದ್ದು, ಇಂದು ಚಿನ್ನದ ಬೆಲೆ ಇಳಿಕೆ ಕಂಡಿದೆ.

ನಿನ್ನೆ ಬುಧವಾರ ಗ್ರಾಮ್​ಗೆ 500 ರೂನಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ ಇವತ್ತು ಗುರುವಾರ 90 ರೂ ತಗ್ಗಿದೆ. 15,000 ರೂ ಮಟ್ಟಕ್ಕಿಂತ ಕೆಳಗೆ ಬಂದಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,49,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,63,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,49,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 5ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,353 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,990 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,265 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,353 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,990 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ.

ಡ್ರೋನ್ ಪ್ರಿಯರ ಗಮನಕ್ಕೆ! ಸಾಂಬ್ರಾ ಏರ್ ಪೋರ್ಟ್ ಸುತ್ತ 8 ಕಿಮೀ ಡ್ರೋನ್ ಹಾರಾಟ ನಿಷೇಧ

ಬೆಳಗಾವಿ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ‘ರೆಡ್ ಝೋನ್’ ಎಂದು ಘೋಷಿಸಲಾಗಿದೆ. ಈ ಕ್ರಮವನ್ನು DGCA ಮಾರ್ಗಸೂಚಿಯಂತೆ ಕೈಗೊಳ್ಳಲಾಗಿದೆ.

ವಿಮಾನ ನಿಲ್ದಾಣದ ಸುತ್ತಮುತ್ತ 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋನ್ ಹಾಗೂ ಅನ್‌ಮ್ಯಾನ್ಡ್ ಏರಿಯಲ್ ವಾಹನಗಳ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರೆಡ್ ಝೋನ್ ಹಾಗೂ ಯೆಲ್ಲೋ ಝೋನ್ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಡ್ರೋನ್ ಹಾರಾಟ ನಡೆಸುವುದು ಕಾನೂನುಬಾಹಿರ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಈ ಕುರಿತು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಪತ್ರಿಕಾ ಪ್ರಕಟಣೆ ಹೊರಡಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ವಿಮಾನ ನಿಲ್ದಾಣದ ಭದ್ರತೆ ದೃಷ್ಟಿಯಿಂದ ಈ ಕ್ರಮ ಅತ್ಯಾವಶ್ಯಕವಾಗಿದ್ದು, ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಹಾಲಿನೊಂದಿಗೆ ತೆಗೆದುಕೊಳ್ಳಬೇಕಾ? ನೀರಿನೊಂದಿಗೆ ತೆಗೆದುಕೊಳ್ಳಬೇಕಾ? ವಿಟಮಿನ್ ಡಿ ಬಗ್ಗೆ ವೈದ್ಯರ ಸಲಹೆ!

0

ಇತ್ತೀಚಿನ ದಿನಗಳಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಪ್ಲಿಮೆಂಟ್ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಬದಲಾಗುತ್ತಿರುವ ಜೀವನಶೈಲಿ, ಬಿಸಿಲಿಗೆ ಕಡಿಮೆ ಹೋಗುವುದು ಹಾಗೂ ದೀರ್ಘಕಾಲ ಮನೆ ಅಥವಾ ಕಚೇರಿಯೊಳಗೆ ಇರುವುದರಿಂದ ಈ ಕೊರತೆ ಉಂಟಾಗುತ್ತಿದೆ ಎನ್ನಲಾಗಿದೆ. ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುವ ವಿಟಮಿನ್ ಡಿ ಮೂಳೆ ಮತ್ತು ಹಲ್ಲುಗಳನ್ನು ಬಲವಾಗಿಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆಯಿಂದ ಮೂಳೆ ನೋವು, ಆಯಾಸ, ದೌರ್ಬಲ್ಯ, ಆಗಾಗ ಅನಾರೋಗ್ಯ ಹಾಗೂ ಮನಸ್ಥಿತಿಯಲ್ಲಿ ಬದಲಾವಣೆಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ.

ವೈದ್ಯರ ಪ್ರಕಾರ, ವಿಟಮಿನ್ ಡಿ ಸಪ್ಲಿಮೆಂಟ್ ಅನ್ನು ಹಾಲಿನೊಂದಿಗೆ ತೆಗೆದುಕೊಳ್ಳುವುದರಿಂದ ಅದರಲ್ಲಿರುವ ಕೊಬ್ಬು ಮತ್ತು ಕ್ಯಾಲ್ಸಿಯಂ ಕಾರಣದಿಂದ ಹೀರಿಕೊಳ್ಳುವಿಕೆ ಉತ್ತಮವಾಗುತ್ತದೆ. ಆದರೆ ಹಾಲು ಕುಡಿಯಲು ಇಷ್ಟವಿಲ್ಲದವರು ಅಥವಾ ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರು ನೀರಿನೊಂದಿಗೆ ಕೂಡ ತೆಗೆದುಕೊಳ್ಳಬಹುದು. ಆದರೆ ಊಟದಲ್ಲಿ ಸ್ವಲ್ಪ ಕೊಬ್ಬಿನಾಂಶ ಇರುವ ಆಹಾರ ಸೇವಿಸುವುದು ಅಗತ್ಯವೆಂದು ವೈದ್ಯರು ಸಲಹೆ ನೀಡಿದ್ದಾರೆ.

ಸಾಮಾನ್ಯವಾಗಿ ಬೆಳಿಗ್ಗೆ ಅಥವಾ ಊಟದ ಸಮಯದಲ್ಲಿ ಸಪ್ಲಿಮೆಂಟ್ ಸೇವಿಸುವುದು ಉತ್ತಮವಾಗಿದ್ದು, ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಕೆಲವರಿಗೆ ಅಸ್ವಸ್ಥತೆ ಉಂಟಾಗಬಹುದು. ಜೊತೆಗೆ ದಿನಕ್ಕೆ 15ರಿಂದ 20 ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಸಹ ಅಗತ್ಯವೆಂದು ತಜ್ಞರು ಹೇಳಿದ್ದಾರೆ. ಯಾವುದೇ ಪರೀಕ್ಷೆ ಮಾಡದೆ ದೀರ್ಘಕಾಲ ಸಪ್ಲಿಮೆಂಟ್ ಸೇವಿಸುವುದು ತಪ್ಪಾಗಿದ್ದು, ಅತಿಯಾಗಿ ಸೇವಿಸಿದರೆ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಮೂತ್ರಪಿಂಡ ಮತ್ತು ಹೃದಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಗ್ಯಾಸ್ಟ್ರಿಕ್, ಆಸಿಡಿಟಿ ಸಮಸ್ಯೆಗೆ ಕಾರಣ ರಾತ್ರಿ ಊಟವೇ? ಇಲ್ಲಿದೆ ಮಾಹಿತಿ

0

ರಾತ್ರಿ ನಿದ್ರೆ ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಪ್ರಮುಖವಾದುದು. ಈ ಸಮಯದಲ್ಲಿ ದೇಹ ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವುದರಿಂದ ರಾತ್ರಿ ಸೇವಿಸುವ ಆಹಾರವೂ ಬಹಳ ಮಹತ್ವದ್ದು.

ಸೂರ್ಯ ಮುಳುಗಿದ ನಂತರ ದೇಹದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ರಾತ್ರಿ ಯಾವ ಆಹಾರವನ್ನು ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೇವೆ ಎಂಬುದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ರಾತ್ರಿ ಹೆಚ್ಚು ಎಣ್ಣೆಯಲ್ಲಿ ಕರಿದ, ಅತಿ ಮಸಾಲೆಯುಕ್ತ ಅಥವಾ ಜಂಕ್ ಆಹಾರಗಳನ್ನು ಸೇವಿಸಿದರೆ ಗ್ಯಾಸ್ಟ್ರಿಕ್, ಆಸಿಡಿಟಿ, ಎದೆ ಉರಿ ಹಾಗೂ ಹೊಟ್ಟೆ ತುಂಬಿರುವ ಅನುಭವ ಕಾಣಿಸಬಹುದು.

ಇದರಿಂದ ಮಧ್ಯರಾತ್ರಿ ನಿದ್ರೆ ಕದಡುವುದು, ಬೆಳಿಗ್ಗೆ ಎದ್ದಾಗ ದಣಿವು ಕಾಣಿಸಿಕೊಳ್ಳುವುದು, ತಲೆ ಭಾರವಾಗಿರುವುದು ಅಥವಾ ದಿನವಿಡೀ ಸುಸ್ತು ಅನುಭವಿಸುವಂತಹ ಸಮಸ್ಯೆಗಳು ಉಂಟಾಗಬಹುದು. ಜೊತೆಗೆ ಹೆಚ್ಚು ಸಿಹಿ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಸ್ಥಿರಗೊಳಿಸಬಹುದು ಹಾಗೂ ಹೆಚ್ಚು ಉಪ್ಪು ಇರುವ ಆಹಾರಗಳು ದೇಹದಲ್ಲಿ ನೀರನ್ನು ಹಿಡಿದುಕೊಳ್ಳುವ ಕಾರಣ ಊತ ಮತ್ತು ಅಸ್ವಸ್ಥತೆ ಉಂಟಾಗಬಹುದು.

ಆದ್ದರಿಂದ ರಾತ್ರಿ ಸಮಯದಲ್ಲಿ ಹಗುರ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಬೇಯಿಸಿದ ತರಕಾರಿಗಳು, ಬೇಳೆ, ರೊಟ್ಟಿ ಅಥವಾ ಸ್ವಲ್ಪ ಅನ್ನ, ಖಿಚ್ಡಿ ಅಥವಾ ಸೂಪ್‌ಗಳನ್ನು ಸೇವಿಸುವುದು ಉತ್ತಮ ಆಯ್ಕೆ ಎಂದು ಹೇಳಲಾಗುತ್ತದೆ. ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಮಲಗುವ ಸಮಯಕ್ಕೆ ಕನಿಷ್ಠ ಎರಡು ರಿಂದ ಮೂರು ಗಂಟೆಗಳ ಮೊದಲು ರಾತ್ರಿ ಊಟ ಮಾಡುವುದು, ಊಟ ಮಾಡಿದ ತಕ್ಷಣ ಮಲಗದೇ ಸ್ವಲ್ಪ ಹೊತ್ತು ನಡೆದು ಬರುವುದು ಹಾಗೂ ಟಿವಿ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡುವುದನ್ನು ತಪ್ಪಿಸುವುದು ಉತ್ತಮ ಅಭ್ಯಾಸಗಳಾಗಿವೆ.

ಈ ರೀತಿಯ ಸರಿಯಾದ ಆಹಾರ ಪದ್ಧತಿ ಮತ್ತು ಜೀವನಶೈಲಿ ಪಾಲಿಸಿದರೆ ಉತ್ತಮ ನಿದ್ರೆ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮಧ್ಯಪ್ರಾಚ್ಯ ಉದ್ವಿಗ್ನತೆ: ವಾಣಿಜ್ಯ LPG ಮೇಲಿನ ಸಬ್ಸಿಡಿ ಹಿಂಪಡೆದ ಸರ್ಕಾರ!

ನವದೆಹಲಿ/ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಅನಿಲ ಪೂರೈಕೆಯ ಮೇಲೂ ಪರಿಣಾಮ ಬೀರಿದ್ದು, ವಾಣಿಜ್ಯ ಎಲ್ಪಿಜಿ ಸಿಲಿಂಡರ್‌ಗಳ ಮೇಲಿನ ರಿಯಾಯಿತಿಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು IOCL ನಿರ್ದೇಶನದ ಮೇರೆಗೆ  ಪ್ರಕಟಣೆ ಹೊರಡಿಸಿದೆ.

ಪ್ರಕಟಣೆಯ ಪ್ರಕಾರ, ಮಧ್ಯಪ್ರಾಚ್ಯದಲ್ಲಿನ ಭೌಗೋಳಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 19 ಕೆಜಿ ಮತ್ತು 47.5 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಪೂರೈಕೆಗೆ ನೀಡಲಾಗಿದ್ದ ಎಲ್ಲಾ ರಿಯಾಯಿತಿಗಳನ್ನು ಮುಂದಿನ ಅಧಿಸೂಚನೆವರೆಗೆ ತಡೆಹಿಡಿಯಲಾಗಿದೆ. IOCL ಪ್ರಧಾನ ಕಚೇರಿಯ ಸೂಚನೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಂಡೇನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ತಿಳಿಸಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ ₹1,814 ಇದ್ದು, 47.5 ಕೆಜಿ ಸಿಲಿಂಡರ್ ₹4,532ಕ್ಕೆ ಮಾರಾಟವಾಗುತ್ತಿದೆ. ರಿಯಾಯಿತಿಗಳ ಸ್ಥಗಿತದಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರೆ ವಾಣಿಜ್ಯ ಬಳಕೆದಾರರಿಗೆ ಖರ್ಚು ಹೆಚ್ಚುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಪವರ್ ಫೈಟ್ ನಡುವೆಯೇ 17ನೇ ಬಜೆಟ್ ಮಂಡನೆಗೆ ಸಜ್ಜು: ಸಿದ್ದರಾಮಯ್ಯ ಆಯವ್ಯಯ ಇತಿಹಾಸ ಹೀಗಿದೆ

ಬೆಂಗಳೂರು: 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ಬಹುತೇಕ ಪೂರ್ಣಗೊಳಿಸಿದ್ದಾರೆ. ಮಾರ್ಚ್ 6ರಂದು ಅವರು ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಅತಿಹೆಚ್ಚು ಬಜೆಟ್ ಮಂಡಿಸಿರುವ ನಾಯಕ ಎಂಬ ದಾಖಲೆ ಅವರ ಹೆಸರಿನಲ್ಲಿದೆ.

ಎಚ್.ಡಿ. ದೇವೇಗೌಡ ಹಾಗೂ ಜೆ.ಹೆಚ್. ಪಟೇಲ್ ಆಡಳಿತ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರು 1995-96ನೇ ಸಾಲಿನ ಮೊದಲ ಮುಂಗಡ ಪತ್ರ ಮಂಡಿಸಿದ್ದರು. ನಂತರ 1996-97ರಿಂದ 1999-2000ರವರೆಗೆ ಹಾಗೂ 2004-05, 2005-06 ಸಾಲುಗಳಲ್ಲಿ ಬಜೆಟ್ ಮಂಡಿಸಿದ್ದರು.

ಬಳಿಕ ಮುಖ್ಯಮಂತ್ರಿಯಾಗಿ 2013-14ರಿಂದ 2018-19ರವರೆಗೆ ನಿರಂತರವಾಗಿ ಬಜೆಟ್ ಮಂಡಿಸಿದ ಅವರು, ಪ್ರಸ್ತುತ ಅವಧಿಯಲ್ಲಿ 2023-24, 2024-25 ಹಾಗೂ 2025-26 ಸಾಲಿನ ಬಜೆಟ್‌ಗಳನ್ನು ಮಂಡಿಸಿದ್ದಾರೆ. 2023-24ರಲ್ಲಿ ಬಜೆಟ್ ಮಂಡಿಸುವ ಮೂಲಕ ಅವರು ರಾಮಕೃಷ್ಣ ಹೆಗಡೆ ಅವರ ಅತಿಹೆಚ್ಚು ಬಜೆಟ್ ಮಂಡನೆ ದಾಖಲೆಯನ್ನು ಮೀರಿಸಿದ್ದರು.

ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಒಟ್ಟು 7 ಬಜೆಟ್ ಹಾಗೂ ಮುಖ್ಯಮಂತ್ರಿಯಾಗಿ 9 ಬಜೆಟ್ ಮಂಡಿಸಿದ್ದು, ಈಗ 17ನೇ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ತಮ್ಮ ಹಿಂದಿನ 16 ಬಜೆಟ್‌ಗಳಲ್ಲಿ ಜನಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಗಮನಾರ್ಹ.

ಪ್ರಸ್ತುತ ಅಧಿಕಾರಾವಧಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಪ್ರಮುಖವಾಗಿದ್ದು, 2023-24 ಸಾಲಿನ ಬಜೆಟ್‌ನಲ್ಲಿ ₹35,410 ಕೋಟಿ, 2024-25ರಲ್ಲಿ ₹52,009 ಕೋಟಿ ಹಾಗೂ 2025-26ರಲ್ಲಿ ₹51,034 ಕೋಟಿ ಸೇರಿ ಸುಮಾರು ₹1.38 ಲಕ್ಷ ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ.

ಹಿಂದಿನ ಬಜೆಟ್‌ಗಳಲ್ಲಿ ಅನ್ನಭಾಗ್ಯ ಯೋಜನೆಗೆ ವಾರ್ಷಿಕ ₹4,300 ಕೋಟಿ ವೆಚ್ಚ, ವಿದ್ಯಾರ್ಥಿಗಳಿಗಾಗಿ ವಿದ್ಯಾಸಿರಿ, ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ, ಅಲ್ಪಸಂಖ್ಯಾತ ಯುವತಿಯರಿಗಾಗಿ ಶಾದಿ ಭಾಗ್ಯ, ಕೃಷಿ ಹೊಂಡ, ನಮ್ಮ ಗ್ರಾಮ ನಮ್ಮ ರಸ್ತೆ, ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆ ಜಾರಿ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದರು.

ಇದೀಗ ಮಾ.6ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಯಾವ ಹೊಸ ಯೋಜನೆಗಳು ಘೋಷಣೆಯಾಗುತ್ತವೆ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

ಇಂದು ರಾಜ್ಯದೆಲ್ಲೆಡೆ ಶುಷ್ಕ ವಾತಾವರಣ; ಬೆಂಗಳೂರಿನ ತಾಪಮಾನದಲ್ಲಿ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಮುಂದುವರಿದಿರುವ ಬಿಸಿಲಿನ ತೀವ್ರತೆ ನಡುವೆ ಇಂದು ಕೂಡ ಒಣ ಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಸ್ಪಷ್ಟ ಆಕಾಶವಿದ್ದು, ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗುವ ಸಾಧ್ಯತೆ ಇದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಉಷ್ಣಾಂಶ ಹೆಚ್ಚಾಗಿದ್ದು, ಒಣ ಗಾಳಿಯೇ ಆವರಿಸಿದೆ. ಇಂದಿನಿಂದ ಇನ್ನೂ ಕೆಲವು ದಿನಗಳ ಕಾಲ ರಾಜ್ಯದಾದ್ಯಂತ ಶುಷ್ಕ ವಾತಾವರಣವೇ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಇರಲಿದೆ. ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯ ಲಕ್ಷಣಗಳು ಕಾಣಿಸದಿದ್ದು, ಒಣ ಹವೆ ಮುಂದುವರಿಯಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಇದೇ ಸ್ಥಿತಿ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

ಮಾರ್ಚ್ ಎರಡನೇ ವಾರದ ಬಳಿಕ ನಗರದಲ್ಲಿ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಲು ಸೂಚಿಸಲಾಗಿದೆ.

ಹೀಟ್ ಸ್ಟ್ರೋಕ್ ಹಾಗೂ ದೇಹದ ನೀರಿನ ಕೊರತೆ (ಡಿಹೈಡ್ರೇಶನ್) ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ವಿಶೇಷ ಜಾಗ್ರತೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ಸೂಚಿಸಲಾಗಿದೆ.

error: Content is protected !!