Home Blog Page 83

GBA ಪಂಚ ಪಾಲಿಕೆ ಚುನಾವಣೆ: ಬಿಜೆಪಿ ಗೆಲುವಿಗೆ ಶ್ರಮಿಸೋಣ – ಬಿ.ವೈ. ವಿಜಯೇಂದ್ರ ಕರೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಂಚ ಪಾಲಿಕೆಗಳ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಂಘಟಿತವಾಗಿ ಶ್ರಮಿಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದಾರೆ.

ಪಂಚ ಪಾಲಿಕೆಗಳ ಚುನಾವಣಾ ಕಾರ್ಯತಂತ್ರ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನ ಆಡಳಿತದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಬಿಎ ಚುನಾವಣಾ ಉಸ್ತುವಾರಿ ರಾಮ್ ಮಾಧವ್, ಸಹ ಉಸ್ತುವಾರಿಗಳಾದ ಸತೀಶ್ ಪೂನಿಯಾ, ಸಂಜಯ್ ಉಪಾಧ್ಯಾಯ, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು.

ಇದಲ್ಲದೆ, ಮಾಜಿ ಸಚಿವರಾದ ಎಸ್. ಸುರೇಶ್ ಕುಮಾರ್, ಕೆ. ಗೋಪಾಲಯ್ಯ, ಬೈರತಿ ಬಸವರಾಜ್, ಎನ್. ಮುನಿರತ್ನ, ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಶಾಸಕ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ಶಾಸಕರಾದ ಎಲ್.ಎ. ರವಿಸುಬ್ರಹ್ಮಣ್ಯ, ಸುರೇಶ್ ಗೌಡ ಹಾಗೂ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಸೇರಿದಂತೆ ಪಕ್ಷದ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

LPG ಬಿಕ್ಕಟ್ಟು ಅಂತ್ಯ: ಇರಾನ್‌ʼನಿಂದ ಮಂಗಳೂರಿಗೆ ಬಂದ ಗ್ಯಾಸ್ ಹಡಗು!

ಮಂಗಳೂರು: ದೇಶದಲ್ಲಿ ಎದುರಾಗಿರುವ LPG ಗ್ಯಾಸ್ ಸಮಸ್ಯೆ ಮತ್ತು ಕಚ್ಚಾ ತೈಲ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಭಾರತವು ಹಗಲಿರುಳು ಪ್ರಯತ್ನಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ, ನವಮಂಗಳೂರು ಬಂದರಿಗೆ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿದೆ.

‘ಅಪೋಲೋ ಓಷನ್’ ಹೆಸರಿನ ಹಡಗು ಸುಮಾರು 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಸಾಗಿಸಿಕೊಂಡು ಮಂಗಳೂರಿಗೆ ತಲುಪಿದ್ದು,

ಇಳಿಸುವ ಕಾರ್ಯಾಚರಣೆಗಳು ಪ್ರಾರಂಭಗೊಂಡಿವೆ. ಈ ಮೊದಲು ಕತಾರ್‌ನ ರಾಸ್ ಲಫಾನ್‌ನಿಂದ 46 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ‘ಶಿವಾಲಿಕ್’ ಸರಕು ಹಡಗು ಮಾ.16ರಂದು ಗುಜರಾತಿನ ಮುದ್ರಾ ಬಂದರಿಗೆ ತಲುಪಿತ್ತು. ನಂತರ ಈ ಹಡಗು ಮಂಗಳೂರಿಗೆ ಬರಬೇಕಾಗಿದ್ದರೂ, ಅದರಲ್ಲಿದ್ದ ಸಂಪೂರ್ಣ ಸರಕು ಮುದ್ರಾ ಬಂದರಲ್ಲೇ ಇಳಿಸಲಾಗಿತ್ತು.

ಅಲ್ಲಿ ಸುಮಾರು 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ‘ಅಪೋಲೋ ಓಷನ್’ ಹಡಗಿಗೆ ವರ್ಗಾಯಿಸಿ ಮಂಗಳೂರಿಗೆ ಕಳುಹಿಸಲಾಗಿದೆ. ಇನ್ನೂ ಎರಡು ಕಚ್ಚಾ ತೈಲ ಟ್ಯಾಂಕರ್‌ಗಳು ಶೀಘ್ರದಲ್ಲೇ ಮಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ, ಪತ್ನಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಕರ್ನಾಟಕ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ ಅನ್ನು ಪ್ರಶ್ನಿಸಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.

ನ್ಯಾಯಾಲಯವು ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿದಂತೆ ಲೋಕಾಯುಕ್ತ ಪೊಲೀಸರು, ಜಾರಿ ನಿರ್ದೇಶನಾಲಯ (ಇಡಿ), ಮಲ್ಲಿಕಾರ್ಜುನಸ್ವಾಮಿ ಮತ್ತು ದೇವರಾಜ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧದ ಮುಡಾ ಭೂ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಪ್ಪಿಕೊಂಡಿತ್ತು. ಇದನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಹೈಕೋರ್ಟ್ ಇದೀಗ ನೋಟಿಸ್ ಜಾರಿ ಮಾಡಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ.

KSOU ಕಾರ್ಯಕ್ರಮ ವಿವಾದ: ಉಪಕುಲಪತಿ ವಿರುದ್ಧ ಕ್ರಮಕ್ಕೆ ಹರಿಪ್ರಸಾದ್ ಆಗ್ರಹ

ಬೆಂಗಳೂರು: KSOUಯಲ್ಲಿ ದೀನದಯಾಳ್ ಉಪಾಧ್ಯಯ ಶೈಕ್ಷಣಿಕ ಕಾರ್ಯಕ್ರಮ ಆಯೋಜನೆ ವಿಚಾರವಾಗಿ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ಇದೊಂದು ರಾಜ್ಯದ ದುರಂತವಾಗಿದ್ದು,

ಶಿಕ್ಷಣ ಕ್ಷೇತ್ರದಲ್ಲಿ ಕೇಸರಿಕರಣ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಈ ವಿಚಾರವನ್ನು ಸದನದಲ್ಲಿ ರಮೇಶ್ ಬಾಬು ಪ್ರಸ್ತಾಪಿಸಿದ್ದಾಗಿ ತಿಳಿಸಿದ ಅವರು, ವಿಶ್ವವಿದ್ಯಾಲಯದ ಉಪಕುಲಪತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಉನ್ನತ ಶಿಕ್ಷಣ ಸಚಿವರು ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಿದ್ದರೂ, ಕಾರ್ಯಕ್ರಮ ನಡೆದಿರುವುದು ಸರ್ಕಾರದ ವಿರುದ್ಧ ನಡೆದ ಪಿತ್ತೂರಿಯಾಗಿದೆ ಎಂದು ಹರಿಪ್ರಸಾದ್ ಟೀಕಿಸಿದರು. ತಕ್ಷಣ ಉಪಕುಲಪತಿಯನ್ನು ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದರು.ವಿಶ್ವವಿದ್ಯಾಲಯಗಳಿಗೆ ಸರ್ಕಾರವೇ ಹಣ, ಭೂಮಿ ಸೇರಿದಂತೆ ಎಲ್ಲಾ ಸೌಕರ್ಯ ಒದಗಿಸುತ್ತಿದ್ದು, ಸರ್ಕಾರದ ವಿರುದ್ಧ ಈ ರೀತಿಯ ನಡೆ ಖಂಡನೀಯ ಎಂದರು.

ಪಂಚರಾಜ್ಯಗಳ ಚುನಾವಣೆಯನ್ನು ಉಲ್ಲೇಖಿಸಿದ ಹರಿಪ್ರಸಾದ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ತಮಿಳುನಾಡು, ಕೇರಳ, ಪಾಂಡೀಚೇರಿಯಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಲಿದೆ ಎಂದು ಹೇಳಿ, ಅಸ್ಸಾಂನಲ್ಲಿ ಮಾತ್ರ ಪ್ರಯತ್ನಿಸುತ್ತಿದೆ ಎಂದರು.ವೆಸ್ಟ್ ಬೆಂಗಾಲ್‌ನಲ್ಲಿ ಅನಗತ್ಯ ಗಲಭೆ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಲಕ್ಷಾಂತರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು. ಚುನಾವಣಾ ಆಯೋಗವೂ ಬಿಜೆಪಿ ಪ್ರಭಾವದಲ್ಲಿದೆ ಎಂದು ಟೀಕಿಸಿದರು.

ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಎಷ್ಟು ಕಚೇರಿಗಳನ್ನು ಹೊಂದಿದೆ ಎಂದು ಪ್ರಶ್ನಿಸಿದರು. ನಾವು ಇದಕ್ಕೆ ಬಗ್ಗುವುದಿಲ್ಲ, ಜಗ್ಗುವುದಿಲ್ಲ ಎಂದು ಹೇಳಿದರು. ವಿಧಾನಸಭೆ ಮತ್ತು ಪರಿಷತ್ ಸದಸ್ಯರಿಗೆ ಸ್ಪೀಕರ್ ಆಯೋಜಿಸಿದ ಫೋಟೋಶೂಟ್ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, ಇದರಲ್ಲಿ ಯಾವುದೇ ವಿಶೇಷ ಸಂದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲರಿಗೂ ಫೋಟೋ ತೆಗೆಸಿಕೊಳ್ಳುವ ಆಸೆ ಇರುತ್ತದೆ, ಅದಕ್ಕಾಗಿ ಕಾರ್ಯಕ್ರಮ ನಡೆಸಲಾಗಿದೆ ಎಂದರು. ಕೆಲವರ ಅವಧಿ ಮುಗಿಯಲಿರುವ ಹಿನ್ನೆಲೆ ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಉಹಾಪೋಹಗಳಿಗೆ ಆಸ್ಪದ ನೀಡಬಾರದು ಎಂದು ಹೇಳಿದರು.

ಅಕ್ರಮ ಸಂಬಂಧ ಪ್ರಶ್ನಿಸಲು ಬಂದಿದ್ದ ಅಕ್ಕ-ತಮ್ಮನನ್ನು, ಚಾಕುವಿನಂದ ಇರಿದು ಕೊಂದ ಅಪ್ರಾಪ್ತ ಬಾಲಕ!

0

ಬೆಂಗಳೂರು: ಪೀಣ್ಯದ ಹೆಚ್‌ಎಂಟಿ ಲೇಔಟ್‌ನ ಮನೆಯೊಂದರಲ್ಲಿ 16 ವರ್ಷದ ಅಪ್ರಾಪ್ತ ಬಾಲಕನಿಂದ ಡಬಲ್ ಮರ್ಡರ್ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧದ ವಿಚಾರವಾಗಿ ಉಂಟಾದ ಜಗಳದ ವೇಳೆ ಅಕ್ಕ ಮತ್ತು ತಮ್ಮನನ್ನು ಹತ್ಯೆ ಮಾಡಲಾಗಿದೆ.

ಯಮುನಾ (36) ಹಾಗೂ ಸುದೀಪ್ (34) ಮೃತರು ಎಂದು ಗುರುತಿಸಲಾಗಿದೆ. ಘಟನೆ ಸ್ಥಳಕ್ಕೆ ಡಿಸಿಪಿ ನಾಗೇಶ್ ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಆರೋಪಿಯ ತಾಯಿ ಛಾಯಾ ಮತ್ತು ಯಮುನಾ ಅವರ ಪತಿಯ ನಡುವೆ ಅಕ್ರಮ ಸಂಬಂಧವಿದೆ ಎಂಬ ಆರೋಪ ಹಿನ್ನೆಲೆ, ಈ ವಿಚಾರವನ್ನು ಪ್ರಶ್ನಿಸಲು ಯಮುನಾ ಮತ್ತು ತಮ್ಮ ಸುದೀಪ್ ಛಾಯಾ ಮನೆಗೆ ಬಂದಿದ್ದರು. ಈ ವೇಳೆ ಮಾತಿನ ಚಕಮಕಿಯಿಂದ ಜಗಳ ಉಂಟಾಗಿದೆ.

ಜಗಳದ ಮಧ್ಯೆ ಪ್ರವೇಶಿಸಿದ ಛಾಯಾ ಪುತ್ರ, ಚಾಕುವಿನಿಂದ ಹತ್ತಾರು ಬಾರಿ ಇರಿದು ಇಬ್ಬರನ್ನೂ ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ನಂತರ ಕೋಣೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಪೊಲೀಸರು ಬಂದರೂ ಬಾಗಿಲು ತೆಗೆದಿರಲಿಲ್ಲ. ತಂದೆ ಬಂದು ಹೇಳಿದಾಗ ಬಾಗಿಲು ತೆಗೆದು ಅಪ್ರಾಪ್ತ ಹೊರಬಂದಿದ್ದಾನೆ.

SSLC ಹಿಂದಿ ಪರೀಕ್ಷೆ ದಿನಾಂಕ ಬದಲಾವಣೆ: ಮಾ.30ರಿಂದ ಮಾ.31ಕ್ಕೆ ಮುಂದೂಡಿಕೆ

ಬೆಂಗಳೂರು: ಮಾ.30ರಂದು ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾ.31ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಮಹಾವೀರ ಜಯಂತಿ ರಜೆಯ ದಿನಾಂಕದಲ್ಲಿ ಬದಲಾವಣೆ ಮಾಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೊದಲು ಮಾ.31ರಂದು ರಜೆ ಇರುವುದರಿಂದ ಹಿಂದಿ ಪರೀಕ್ಷೆಯನ್ನು ಮಾ.30ಕ್ಕೆ ನಿಗದಿ ಮಾಡಲಾಗಿತ್ತು.

ಆದರೆ, ಇದೀಗ ಸರ್ಕಾರ ಮಾ.31ರ ರಜೆಯನ್ನು ಮಾ.30ಕ್ಕೆ ಮುಂದೂಡಿರುವುದರಿಂದ, ಪರೀಕ್ಷಾ ದಿನಾಂಕವನ್ನು ಪರಿಷ್ಕರಿಸಿ ಮಾ.31ರಂದು ನಡೆಸಲು ತೀರ್ಮಾನಿಸಲಾಗಿದೆ.

ಹೀಗಾಗಿ, ಮಾ.30ರಂದು ಮಹಾವೀರ ಜಯಂತಿ ರಜೆ ಇರಲಿದ್ದು, ಮಾ.31ರಂದು ಹಿಂದಿ ಪರೀಕ್ಷೆ ನಡೆಯಲಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ: ಮಧು ಬಂಗಾರಪ್ಪ ಘೋಷಣೆ

ಬೆಂಗಳೂರು: ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ವಯಸ್ಸು ಕಡ್ಡಾಯ ಎಂಬ ನಿಯಮದಲ್ಲಿ ರಾಜ್ಯ ಸರ್ಕಾರ ಈ ವರ್ಷವೂ 60 ದಿನಗಳ ವಿನಾಯಿತಿ ನೀಡಿದೆ.

ವಿಧಾನಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, 2026-27ನೇ ಶೈಕ್ಷಣಿಕ ವರ್ಷದ ದಾಖಲಾತಿಗೆ ಈ ಸಡಿಲಿಕೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ನಿರ್ಧಾರದಂತೆ, 5 ವರ್ಷ 10 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ವಯಸ್ಸು ಹೊಂದಿರುವ ಮಕ್ಕಳಿಗೂ ಒಂದನೇ ತರಗತಿಗೆ ದಾಖಲಾಗಲು ಅವಕಾಶ ಸಿಗಲಿದೆ. ಈ ವಿನಾಯಿತಿ ಎಲ್‌ಕೆಜಿ, ಯುಕೆಜಿ ಮತ್ತು ಒಂದನೇ ತರಗತಿಗೂ ಅನ್ವಯವಾಗುತ್ತದೆ.

ವಯೋಮಿತಿ ಸಡಿಲಿಕೆಗೆ ಸಂಬಂಧಿಸಿ ಪೋಷಕರು ಹಲವು ಬಾರಿ ಆಗ್ರಹ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಈ ಮೂಲಕ ಪೋಷಕರಿಗೆ ಸ್ವಲ್ಪ ಮಟ್ಟಿನ ನಿರಾಳತೆ ದೊರೆತಿದೆ.

ಪ್ರತಿ ವರ್ಷ ಈ ಸಮಸ್ಯೆ ಮರುಕಳಿಸುತ್ತಿರುವ ಹಿನ್ನೆಲೆ ಶಾಶ್ವತ ಪರಿಹಾರಕ್ಕಾಗಿ ಹೊಸ ಕಾನೂನು ತರಲು ಸರ್ಕಾರ ನಿರ್ಧರಿಸಿದೆ. ಎಲ್‌ಕೆಜಿ ಮತ್ತು ಯುಕೆಜಿ ದಾಖಲಾತಿಗೆ ವಯೋಮಿತಿ ನಿಗದಿಪಡಿಸಲು ನಿಯಮಾವಳಿ ತರಲು ಉದ್ದೇಶಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಯುದ್ಧದ ಪರಿಣಾಮ ಇಂಧನ ಸಂಕಷ್ಟ:ಬಿಡದಿಯ 10 ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಕೆ

0

ರಾಮನಗರ: ಜಾಗತಿಕ ಯುದ್ಧದ ಪರಿಣಾಮ ಇಂಧನ ಪೂರೈಕೆಯಲ್ಲಿ ಆತಂಕ ಸೃಷ್ಟಿಯಾದ ಸಂದರ್ಭದಲ್ಲಿ, ಬಿಡದಿ ಭಾಗದ ಕೆಲವು ಗ್ರಾಮಗಳು ಪೈಪ್‌ಲೈನ್ ಗ್ಯಾಸ್ ವ್ಯವಸ್ಥೆಯ ಮೂಲಕ ಪರ್ಯಾಯ ಮಾದರಿಯನ್ನು ಯಶಸ್ವಿಯಾಗಿ ಅನುಸರಿಸುತ್ತಿವೆ.

ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆ ಗ್ಯಾಸ್ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗಿ, ರಾಜ್ಯದ ಹಲವು ಭಾಗಗಳಲ್ಲಿ ಜನರು ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಬಿಡದಿ ಪ್ರದೇಶದ ಸುಮಾರು 10 ಗ್ರಾಮಗಳು ಪೈಪ್‌ಲೈನ್ ಗ್ಯಾಸ್ ಬಳಕೆಯಿಂದ ಈ ಸಮಸ್ಯೆಯಿಂದ ದೂರ ಉಳಿದಿವೆ.

ಗೈಲ್ ಇಂಡಿಯಾ ಲಿಮಿಟೆಡ್ ಹಾಗೂ ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಮನೆಮನೆಗೆ ಪಿಎನ್‌ಜಿ ಗ್ಯಾಸ್ ಸಂಪರ್ಕ ನೀಡಲಾಗಿದ್ದು, ದಿನದ 24 ಗಂಟೆಗಳ ನಿರಂತರ ಪೂರೈಕೆ ನಡೆಯುತ್ತಿದೆ.

ಬಿಡದಿ ಭಾಗದಲ್ಲಿ 1,500 ಮನೆಗಳಿಗೆ, ರಾಮನಗರದಲ್ಲಿ 500 ಮನೆಗಳಿಗೆ ಹಾಗೂ ಚನ್ನಪಟ್ಟಣದಲ್ಲಿ 1,500 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಸಿಲಿಂಡರ್ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದೆ.

ಬೈರಮಂಗಲ ಕ್ರಾಸ್ ಸಮೀಪದ ಗ್ಯಾಸ್ ಸ್ಟೋರೇಜ್ ಘಟಕದಿಂದ ಕೈಗಾರಿಕೆಗಳಿಗೂ ಹಾಗೂ ಮನೆಮನೆಗೂ ಅನಿಲ ಪೂರೈಕೆ ಮಾಡಲಾಗುತ್ತಿದೆ. ಇದು ದೇಶೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲವಾಗಿದ್ದು, ಭವಿಷ್ಯದ ಇಂಧನ ಭದ್ರತೆಗೆ ಇದು ಮಾದರಿಯಾಗುತ್ತಿದೆ.

ಇದೇ ವೇಳೆ ಇನ್ನೂ ಸಂಪರ್ಕ ಪಡೆಯದ ಗ್ರಾಮಗಳಲ್ಲಿ ಸಿಲಿಂಡರ್ ಸಮಸ್ಯೆ ಮುಂದುವರಿದಿರುವುದರಿಂದ ಪೈಪ್‌ಲೈನ್ ಗ್ಯಾಸ್‌ಗೆ ಬೇಡಿಕೆ ಹೆಚ್ಚುತ್ತಿದೆ. ಜನರು ತ್ವರಿತವಾಗಿ ಸಂಪರ್ಕ ಕಲ್ಪಿಸುವಂತೆ ಕಂಪನಿಗೆ ಮನವಿ ಮಾಡುತ್ತಿದ್ದಾರೆ.

ಈ ಮಾದರಿ ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಿದರೆ ಇಂಧನ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಬಹುದೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಹಾಡಹಗಲೇ ಪತ್ನಿಯ ಕತ್ತು ಕೊಯ್ದು ಬರ್ಬರ ಹತ್ಯೆ ಮಾಡಿದ ಪತಿ: ಶವದ ಮೇಲೆ ಕಾರು ಹಾಯಿಸಿ ವಿಕೃತಿ

0

ಕಲಬುರಗಿ:ವ್ಯಕ್ತಿಯೋರ್ವ ಹಾಡುಹಗಲೇ ನಡುರಸ್ತೆಯಲ್ಲಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದ ಬಳಿ ನಡೆದಿದೆ. 

ಮಹಾರಾಷ್ಟ್ರ ಮೂಲದ ಶೈಲಾ (28) ಹತ್ಯೆಗೆ ಒಳಗಾದ ಮಹಿಳೆ. ಆರೋಪಿ ಪತಿ ಅಕ್ಷಯ್ ತನ್ನ ಕಾರಿನಲ್ಲಿ ಪತ್ನಿಯನ್ನು ಕರೆದುಕೊಂಡು ಬಂದು ಮಧ್ಯ ರಸ್ತೆಯಲ್ಲಿ ಇಳಿಸಿ, ಕತ್ತು ಕೊಯ್ದು ಹತ್ಯೆಗೈದಿದ್ದಾನೆ.

ಹತ್ಯೆಯ ಬಳಿಕ ಶವದ ಮೇಲೆ ಕಾರು ಹಾಯಿಸಿರುವುದು ಪ್ರಕರಣದ ಕ್ರೂರತೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಈ ಸಂಪೂರ್ಣ ಘಟನೆ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಈ ಘಟನೆ ಸಾರ್ವಜನಿಕ ಸುರಕ್ಷತೆ ಮತ್ತು ಕುಟುಂಬ ಸಂಬಂಧಗಳ ಹಿನ್ನಲೆಯಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದೆ.

ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್: ಉಪಚುನಾವಣೆಗೆ ಮೂವರು ನಾಯಕರಿಗೆ ಜವಾಬ್ದಾರಿ

0

ಬೆಳಗಾವಿ: ರಾಜ್ಯದ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಗಡಿಜಿಲ್ಲೆಯ ಮೂವರು ಪ್ರಮುಖ ನಾಯಕರಿಗೆ ಪ್ರತ್ಯೇಕ ಕ್ಷೇತ್ರಗಳಲ್ಲಿ ಗೆಲುವಿನ ಟಾಸ್ಕ್ ನೀಡಿದೆ.

ಬಾಗಲಕೋಟೆ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ದಾವಣಗೆರೆ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಬಲಪಡಿಸಲು ಮಾಜಿ ಡಿಸಿಎಂ ಲಕ್ಷ್ಮಣ ಸವದಿಯನ್ನು ಸ್ಟಾರ್ ಪ್ರಚಾರಕರಾಗಿ ನೇಮಕ ಮಾಡಲಾಗಿದೆ.

ಈ ಮೂವರು ನಾಯಕರಿಗೆ ಸಂಘಟನಾ ಸಾಮರ್ಥ್ಯ ಹಾಗೂ ಕಠಿಣ ಚುನಾವಣಾ ಅನುಭವ ಇರುವುದರಿಂದ ಹೈಕಮಾಂಡ್ ಈ ತಂತ್ರ ರೂಪಿಸಿದೆ ಎನ್ನಲಾಗಿದೆ.

ಲಿಂಗಾಯತ ಹಾಗೂ ಅಹಿಂದ ಮತಬ್ಯಾಂಕ್‌ಗಳನ್ನು ಸಮರ್ಪಕವಾಗಿ ಬಳಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಲೆ ಸೃಷ್ಟಿಸುವ ಗುರಿ ಇಟ್ಟುಕೊಂಡು ಕಾರ್ಯತಂತ್ರ ರೂಪಿಸಲಾಗುತ್ತಿದೆ.

ಈ ನಿಯೋಜನೆ ಕಾಂಗ್ರೆಸ್ ಪಕ್ಷದ ಉಪಚುನಾವಣಾ ಕಾರ್ಯತಂತ್ರದಲ್ಲಿ ಮಹತ್ವದ ತಿರುವಾಗಿದ್ದು, ಫಲಿತಾಂಶದ ಮೇಲೆ ಈ ನಾಯಕರ ಪಾತ್ರ ನಿರ್ಣಾಯಕವಾಗಲಿದೆ.

error: Content is protected !!