Home Blog Page 87

ಪೊಲೀಸರ ವಿಚಾರಣೆಗೆ ಹೆದರಿ ನೇಣಿಗೆ ಕೊರಳೊಡ್ಡಿದ ‘ರೈತ’: ಆಗಿದ್ದೇನು?

ಹುಬ್ಬಳ್ಳಿ:- ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಪೊಲೀಸರ ವಿಚಾರಣೆಗೆ ಹೆದರಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

48 ವರ್ಷದ ನಿಂಗಪ್ಪ ಅಂಗಡಿ(48) ಮೃತ ರೈತ. ಹೊಲದ ದಾರಿ ವಿಚಾರವಾಗಿ ಉಮಚಗಿ ಗ್ರಾಮದಲ್ಲಿ ಗಲಾಟೆಯಾಗಿದ್ದು, ಈ ಸಂಬಂಧ ನಿಂಗಪ್ಪನ ಮೇಲೆ ಹಲ್ಲೆ ಮಾಡಿದ್ದಲ್ಲದೆ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಪೊಲೀಸರು ಕರೆ ಮಾಡಿ ಸ್ಪೆಷನ್​​​ಗೆ ಬರುವಂತೆ ಹೇಳಿದ್ದಾರೆ. ಇದರಿಂದ ಹೆದರಿದ ರೈತ ಜಮೀನಿನಲ್ಲಿ ಮರವೊಂದಕ್ಕೆ ನೇಣುಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾರೆ.

ಎಸ್, ಜಮೀನು ಹಾದಿ ಸಂಬಂಧ ಉಮಚಗಿ ಗ್ರಾಮದಲ್ಲಿ ಜಗಳವಾಗಿದ್ದು, ಈ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯರು, ನಿಂಗಪ್ಪನನ್ನು ಕರೆಸಿ ಹಲ್ಲೆ‌ ಮಾಡಿದ್ದಾರೆ. ಸಾಲದಕ್ಕೆ ಪಂಚಾಯಿತಿ ಸದಸ್ಯರು, ನಿಂಗಪ್ಪ ವಿರುದ್ಧ ಹುಬ್ಬಳ್ಳಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಈ ಪ್ರಕರಣ ಸಂಬಂಧ ಪೊಲೀಸರು ಸಹ ಎರಡ್ಮೂರು ದಿನಗಳಿಂದ ನಿಂಗಪ್ಪನಿಗೆ ಕರೆ ಮಾಡಿ ಠಾಣೆಗೆ ವಿಚಾರಣೆ ಬರುವಂತೆ ಸೂಚಿಸಿದ್ದಾರೆ.

ಇದರಿಂದ ತೀವ್ರ ಭಯಗೊಂಡ ರೈತ, ಜಮೀನಿಗೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿಂಗಪ್ಪನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಅಟ್ರಾಸಿಟಿ ಕೇಸ್ ದಾಖಲಿಸಿ ಇದೀಗ ಆತನನ್ನು ಬಲಿ ಪಡೆದುಕೊಂಡಿದ್ದಾರೆ.

3 ದಿನದ ಸಾಂಬಾರ್ ಬಡಿಸಿದ ಹೆಂಡ್ತಿಗೆ ಗಂಡನ ಬೈಗುಳ: ಮನನೊಂದು ಗೃಹಿಣಿ ಸೂಸೈಡ್

ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ವಿಚಾರಕ್ಕೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಆತಂಕ ಮೂಡಿಸಿದೆ.

ಇದೀಗ ಗಂಡ ಹೆಂಡತಿ ನಡುವೆ ಉಂಟಾದ ಸಣ್ಣ ಜಗಳ ಒಂದು ಜೀವವನ್ನೇ ಬಲಿ ಪಡೆದಿದೆ. ಎಸ್, ಮೂರು ದಿನದ ಹಳೇ ಸಾಂಬಾರ್ ಬಡಿಸಿದ ವಿಚಾರಕ್ಕೆ ಪತಿ ಕಿರಿಕ್ ತೆಗೆದಿದ್ದರಿಂದ ಮನನೊಂದ ಪತ್ನಿ ವಿಷ ಸೇವಿಸಿ ಪ್ರಾಣಬಿಟ್ಟಿದ್ದಾಳೆ.

ಕಾವ್ಯ (27) ಮೃತ ಮಹಿಳೆ. ಈಕೆ ಕಳೆದ ಐದು ವರ್ಷಗಳ ಹಿಂದೆ ರಂಗಸ್ವಾಮಿ ಎಂಬುವವರನ್ನು ಮದುವೆಯಾಗಿದ್ದು, ಇವರಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಆದ್ರೆ, ಇದೀಗ ತಾಯಿಯನ್ನು ಕಳೆದುಕೊಂಡ ಮಗು ಅನಾಥವಾಗಿದೆ. ಪತಿಗೆ ಕಳೆದ ಮೂರು ದಿನಗಳಿಂದ ಒಂದೇ ಸಾಂಬಾರು ಬಡಿಸಿದ್ದಾಳೆ. ಫ್ರಿಡ್ಜ್‌ನಲ್ಲಿಟ್ಟು ತೆಗೆದು ಬಿಸಿ ಮಾಡಿ ಅದೇ ಸಾರನ್ನು ಮೂರು ದಿನದಿಂದ ಬಡಿಸಿದ್ದಾಳೆ. ಎರಡು ದಿನ ಸಹಿಸಿಕೊಂಡ ಗಂಡ ಮೂರನೇ ದಿನ ಆಕ್ರೋಶಗೊಂಡಿದ್ದು, ಮೂರು ದಿನದ ಹಿಂದಿನ ಸಾರನ್ನು ಬಡಿಸುತ್ತಿದ್ದಿಯಾ ಎಂದು ಪತ್ನಿ ವಿರುದ್ದ ಜಗಳಕ್ಕೆ ನಿಂತಿದ್ದಾನೆ. ಅಲ್ಲದೇ ಪತ್ನಿಗೆ ಹಿಗ್ಗಾಮುಗ್ಗ ಬೈದಿದ್ದಾನೆ. ಪತಿಯ ಆಕ್ರೋಶಭರಿತ ಬೈಗುಳಕ್ಕೆ ನೊಂದ ಪತ್ನಿ ಬದುಕನ್ನೇ ಅಂತ್ಯಗೊಳಿಸಿದ್ದಾಳೆ.

ಪತಿಯ ನಿಂದನೆ ಹಾಗೂ ಹಲ್ಲೆಯ ಯತ್ನದಿಂದ ತೀವ್ರವಾಗಿ ಮನನೊಂದ ಕಾವ್ಯ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಕಾವ್ಯ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಮಾರ್ಗಮಧ್ಯದಲ್ಲೇ ಕಾವ್ಯ ಕೊನೆಯುಸಿರೆಳೆದಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೊಣಗಳು-ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಈ ಸಿಂಪಲ್‌ ಮನೆಮದ್ದುಗಳನ್ನು ಪ್ರಯತ್ನಿಸಿ!

0

ಬಹುತೇಕ ಮನೆಗಳಲ್ಲಿ ನೊಣಗಳು ಮತ್ತು ಸೊಳ್ಳೆಗಳ ಕಾಟ ಸಾಮಾನ್ಯವಾಗಿದೆ.

ಆಹಾರ ಮತ್ತು ಪಾತ್ರೆಗಳ ಮೇಲೆ ಕುಳಿತು ರೋಗವನ್ನು ಹರಡುವ ನೊಣಗಳನ್ನು ನಿವಾರಣೆ ಮಾಡಲು ಜನರು ಸಾಮಾನ್ಯವಾಗಿ ರಾಸಾಯನಿಕ ಕೀಟನಾಶಕಗಳನ್ನು ಬಳಸುತ್ತಾರೆ. ಆದರೆ ಕೆಲವೇ ಮನೆಮದ್ದುಗಳ ಸಹಾಯದಿಂದ ನೈಸರ್ಗಿಕವಾಗಿ ನೊಣಗಳನ್ನು ಹಿಮ್ಮೆಟ್ಟಿಸಬಹುದು.

ಮನೆಮದ್ದುಗಳು:

  • ಸಾರಭೂತ ತೈಲ: ಲ್ಯಾವೆಂಡರ್, ಯೂಕಲಿಪ್ಟಸ್, ಪೈನ್ ಎಣ್ಣೆಗಳನ್ನು ಹತ್ತಿ ಉಂಡೆ ಮೇಲೆ ಹಾಕಿ ಅಥವಾ ನೀರಿನೊಂದಿಗೆ ಸ್ಫ್ರೇ ಮಾಡಿ, ನೊಣಗಳನ್ನು ತೊಡೆಯಬಹುದು.
  • ಲವಂಗ ಮತ್ತು ನಿಂಬೆಹಣ್ಣು: ಅರ್ಧ ನಿಂಬೆಹಣ್ಣಿನಲ್ಲಿ 5–6 ಲವಂಗ ಹಾಕಿ ಕಿಟಕಿ/ಬಾಗಿಲಿನ ಬಳಿ ಇರಿಸುವುದು ನೊಣಗಳನ್ನು ದೂರ ಮಾಡುತ್ತದೆ.
  • ಕರ್ಪೂರ: 2–3 ಕರ್ಪೂರ ಹುರಿದು ನೀರಿನ ಪಾತ್ರೆಯಲ್ಲಿ ಕೋಣೆಯಲ್ಲಿ ಇರಿಸುವುದು ಪರಿಣಾಮಕಾರಿ.
  • ಪುದೀನ–ತುಳಸಿ ಸ್ಪ್ರೇ: ಪೇಸ್ಟ್ ಮಾಡಿ ನೀರಿನೊಂದಿಗೆ ಬೆರೆಸಿ, ಕಿಟಕಿ, ಮೂಲೆಗಳಲ್ಲಿ ಸಿಂಪಡಿಸುವುದು ನೊಣಗಳನ್ನು ಓಡಿಸುತ್ತದೆ.
  • ಆಪಲ್ ಸೈಡರ್ ವಿನೆಗರ್–ಸೋಪ್ ಟ್ರಾಪ್: ವಿನೆಗರ್ ಮತ್ತು ಡಿಶ್‌ವಾಶ್ ಸೋಪ್ ಮಿಶ್ರಣವು ನೊಣಗಳನ್ನು ಆಕರ್ಷಿಸಿ, ಒಳಗೆ ಬಿದ್ದಂತೆ ನಾಶಗೊಳಿಸುತ್ತದೆ.

ಮುನ್ನೆಚ್ಚರಿಕೆ:

  • ಆಹಾರ ಪದಾರ್ಥಗಳನ್ನು ಮುಚ್ಚಿಡಿ.
  • ಹಣ್ಣು, ಕಸವನ್ನು ಪ್ರತಿದಿನ ತಳ್ಳಿ ಹಾಕಿ.
  • ಮನೆಯ ಸ್ವಚ್ಛತೆಯನ್ನು ಕಾಪಾಡಿ.

ಸರಳ ಮನೆಮದ್ದುಗಳು, ಸ್ವಚ್ಛತೆ ಹಾಗೂ ಮುನ್ನೆಚ್ಚರಿಕೆಗಳ ಮೂಲಕ ನೊಣ, ಸೊಳ್ಳೆ ಕಾಟವನ್ನು ರಾಸಾಯನಿಕಗಳ ಬಳಕೆಯಿಲ್ಲದೆ ತಡೆಯಬಹುದು.

 

 

 

India vs New Zealand: ಟಿ20 ವಿಶ್ವಕಪ್ ಫೈನಲ್: ದೆಹಲಿ-ಅಹಮದಾಬಾದ್ʼಗೆ ವಿಶೇಷ ರೈಲು

0

ನವದೆಹಲಿ: ನಾಳೆ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ನವದೆಹಲಿಯಿಂದ ಅಹಮದಾಬಾದ್‌ಗೆ ವಿಶೇಷ ರೈಲು ಸಂಚರಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಪ್ರಯಾಣಿಕರಿಗೆ ರೈಲುಗಳ ಲಭ್ಯತೆ ಕಡಿಮೆ ಇರುವುದಲ್ಲದೆ ವಿಮಾನಗಳ ಟಿಕೆಟ್ ದರ ಹೆಚ್ಚಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ವಿಭಾಗದ ಮಾಹಿತಿ ಪ್ರಕಾರ, ಈ ವಿಶೇಷ ರೈಲು ಇಂದು ರಾತ್ರಿ 11:45ಕ್ಕೆ ನವದೆಹಲಿಯಿಂದ ಹೊರಟು ನಾಳೆ (ಮಾರ್ಚ್ 8) ಮಧ್ಯಾಹ್ನ 2:30ರ ಸುಮಾರಿಗೆ ಸಬರಮತಿ ರೈಲು ನಿಲ್ದಾಣ ತಲುಪಲಿದೆ. ಈ ರೈಲು ದೆಹಲಿ ಕಂಟೋನ್ಮೆಂಟ್, ಗುರುಗ್ರಾಮ್ ಮತ್ತು ಜೈಪುರ ಮೂಲಕ ಸಂಚರಿಸಲಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನಲ್ಲಿ 2ನೇ ಎಸಿ, 3ನೇ ಎಸಿ ಸೇರಿದಂತೆ ಒಟ್ಟು 19 ಕೋಚ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ನಾಳೆ ಸಂಜೆ 7 ಗಂಟೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ಅಪರೂಪದ ಕಾಯಿಲೆ ಪೀಡಿತ ಮಗುವಿಗೆ ನೆರವು: ಕೇಂದ್ರ ಸಚಿವ ಕುಮಾರಸ್ವಾಮಿ ಭರವಸೆ

ಮಂಡ್ಯ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಎರಡು ವರ್ಷದ ಮಗುವಿನ ಚಿಕಿತ್ಸೆಗೆ ನೆರವು ನೀಡುವಂತೆ ಪೋಷಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಶಿವಾರ ಗ್ರಾಮದ ಸಾಯಿ ಚಿರಾಗ್ (2) ಎಂಬ ಮಗು ಎಸ್‌ಎಂಎ (Spinal Muscular Atrophy) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ.

ಮಗುವಿನ ಪೋಷಕರಾದ ಚೇತನ್ ಹಾಗೂ ಭಾರ್ಗವಿ ದಂಪತಿ ಮಂಡ್ಯದ ವಿಸಿ ಫಾರಂನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮಗುವಿನ ಚಿಕಿತ್ಸೆಗೆ ಸುಮಾರು 16 ಕೋಟಿ ರೂ. ಅಗತ್ಯವಿದ್ದು, ವಿದೇಶಗಳಿಂದ ಸುಮಾರು 1.75 ಕೋಟಿ ರೂ. ನೆರವು ಸಿಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಾಲಕನ ಚಿಕಿತ್ಸೆಗೆ ಸಾಧ್ಯವಾದಷ್ಟು ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿ ಮೂಲಕ ಸಹಾಯ ದೊರಕುವಂತೆ ಪ್ರಯತ್ನಿಸುವುದಾಗಿ ಹಾಗೂ ವೈಯಕ್ತಿಕವಾಗಿಯೂ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಲೋಕಾಯುಕ್ತ ದಾಳಿ: ಮಕ್ಕಳಿಗೆ ಕೊಡಬೇಕಿದ್ದ ಹಾಸಿಗೆ,ಬೆಡ್‌ಶೀಟ್‌ ಬಿಸಿಎಂ ಅಧಿಕಾರಿ ಮನೆಯಲ್ಲಿ ಪತ್ತೆ

0

ಗದಗ: ಭ್ರಷ್ಟಾಚಾರ ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದು, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಅಧಿಕಾರಿಯೊಬ್ಬರ ಮನೆಯಲ್ಲಿ ಅಚ್ಚರಿ ಮೂಡಿಸುವ ವಸ್ತುಗಳು ಪತ್ತೆಯಾಗಿವೆ.

ಶಿರಹಟ್ಟಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಕೆ. ಸುರಕೋಡ ಅವರಿಗೆ ಸಂಬಂಧಿಸಿದ ಆರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ ಅಧಿಕಾರಿಯ ಮನೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಸರ್ಕಾರದಿಂದ ನೀಡಲಾಗಿದ್ದ ಹಾಸಿಗೆ ಹಾಗೂ ಬೆಡ್‌ಶೀಟ್‌ಗಳು ಪತ್ತೆಯಾಗಿವೆ.

ಅಲ್ಲದೆ ಹಾಸ್ಟೆಲ್‌ನಲ್ಲಿ ಅಡುಗೆ ಮಾಡಲು ಬಳಸುವ ದೊಡ್ಡ ದೊಡ್ಡ ಪಾತ್ರೆಗಳು ಹಾಗೂ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ನೋಟ್‌ಪುಸ್ತಕಗಳು ಕೂಡ ಪತ್ತೆಯಾಗಿದ್ದು ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ.

ತನಿಖೆಯಲ್ಲಿ ಸುರಕೋಡ ಅವರು ಶೇ.227 ಅಧಿಕ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ದಾಳಿಯಲ್ಲಿ 13 ಲಕ್ಷ ರೂಪಾಯಿ ಮೌಲ್ಯದ ಆರು ನಿವೇಶನಗಳು, 45 ಲಕ್ಷ ರೂಪಾಯಿ ಮೌಲ್ಯದ ಮನೆ ಹಾಗೂ 80.77 ಲಕ್ಷ ರೂಪಾಯಿ ಮೌಲ್ಯದ 29 ಎಕರೆ ಜಮೀನು ಸೇರಿದಂತೆ ಒಟ್ಟು 1.38 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳು ಸಿಕ್ಕಿವೆ.

ಇದರ ಜೊತೆಗೆ 89 ಸಾವಿರ ರೂಪಾಯಿ ನಗದು, 23.21 ಲಕ್ಷ ರೂಪಾಯಿ ಮೌಲ್ಯದ 152 ಗ್ರಾಂ ಚಿನ್ನಾಭರಣ, 2.05 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಹಾಗೂ 31.40 ಲಕ್ಷ ರೂಪಾಯಿ ಮೌಲ್ಯದ ವಾಹನಗಳು ಪತ್ತೆಯಾಗಿದ್ದು, ಒಟ್ಟು 1.82 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

“ಜೀವ ಭಾವದ ಮಹಾಶಕ್ತಿ ಮಹಿಳೆ”

ಸ್ತ್ರೀ ಎಂದರೆ ಅಷ್ಟೇ ಸಾಕೆ, ನಿನಗೆ ಬೇರೆ ಹೆಸರು ಬೇಕೆ ಎನ್ನುವ ಕವಿವಾಣಿಯು ಮಹಿಳೆಯ ಮಹತ್ವವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ನವಮಾಸ ಹೊತ್ತು ಹೆತ್ತು ಸಾಕಿ ಸಲಹುವ ತಾಯಿಯಾಗಿ, ಮನೆಯ ಪ್ರೀತಿ–ವಾತ್ಸಲ್ಯವನ್ನು ಬೆಳಗಿಸುವ ಮಗಳಾಗಿ, ಕಷ್ಟ–ಸುಖಗಳಲ್ಲಿ ಜೊತೆಗಿರುವ ಅರ್ಧಾಂಗಿಯಾಗಿ ಬದುಕಿನ ಎಲ್ಲ ಆಯಾಮಗಳಲ್ಲಿ ಮಹಿಳೆ ಮಹಾಶಕ್ತಿಯಾಗಿ ನಿಲ್ಲುತ್ತಾಳೆ. ಮನೆ, ಮನಸ್ಸು ಮತ್ತು ಸಮಾಜವನ್ನು ಬೆಸೆಯುವ ಜೀವನಾಡಿಯೇ ಮಹಿಳೆ.

ಈ ನಾಡಿನ ಮಹಾಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು ತಮ್ಮ ಜೀವನದಲ್ಲಿ ಪತ್ನಿಯ ಭಾವನಾತ್ಮಕ ಮಹತ್ವವನ್ನು ಕವನದ ಮೂಲಕ ವ್ಯಕ್ತಪಡಿಸಿದ್ದಾರೆ. ಇದು ಮಹಿಳೆಯ ಸ್ಥಾನವನ್ನು ಎತ್ತಿಹಿಡಿಯುವ ಉದಾಹರಣೆಯಾಗಿದೆ. ಪ್ರತಿಯೊಬ್ಬರ ಬದುಕಿನಲ್ಲಿ ಹೆಣ್ಣು ಒಂದು ಮಹಾಶಕ್ತಿಯೇ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಪ್ರತಿವರ್ಷ ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿದ್ದರೂ, ವಾಸ್ತವದಲ್ಲಿ ಮಹಿಳೆಯರು ಇನ್ನೂ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮಗಳಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ತಾಯಿಯಾಗಿ ಹಾಗೂ ಕುಟುಂಬದ ಅನೇಕ ಜವಾಬ್ದಾರಿಗಳನ್ನು ಹೊತ್ತು ಸಾಗುವ ಮಹಿಳೆ ಸಮಾಜದ ಶಕ್ತಿ. “ತೊಟ್ಟಿಲು ತೂಗುವ ಕೈ ದೇಶವನ್ನಾಳಬಲ್ಲದು” ಎನ್ನುವ ಮಾತು ಮಹಿಳೆಯ ಸಾಮರ್ಥ್ಯವನ್ನು ಸಾರುತ್ತದೆ.

ಒಂದು ಕಾಲದಲ್ಲಿ ಮಹಿಳೆಗೆ ಶಿಕ್ಷಣ ಮತ್ತು ಸಮಾನ ಹಕ್ಕುಗಳಿಲ್ಲದ ಪರಿಸ್ಥಿತಿ ಇತ್ತು. ಆದರೆ ಸಾವಿತ್ರಿಬಾಯಿ ಫುಲೆ ಅವರಂತಹ ಧೈರ್ಯಶಾಲಿ ಮಹಿಳೆಯರು ಮಹಿಳಾ ಶಿಕ್ಷಣದ ಬೆಳಕನ್ನು ಹರಿಸಿದರು. ನಂತರ ಮಹಿಳೆಯರು ಸಮಾನ ಹಕ್ಕುಗಳಿಗಾಗಿ ಹೋರಾಡಿದ ಪರಿಣಾಮವಾಗಿ ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಕ್ಕೆ ಜಾಗತಿಕ ಮಾನ್ಯತೆ ದೊರೆಯಿತು.

ಇಂದು ಮಹಿಳೆಯರು ಶಿಕ್ಷಣ, ರಾಜಕೀಯ, ವಿಜ್ಞಾನ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸಾಲುಮರದ ತಿಮ್ಮಕ್ಕ, ಕಲ್ಪನಾ ಚಾವ್ಲಾ, ಸುಧಾಮೂರ್ತಿ ಮುಂತಾದ ಅನೇಕ ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಮಹಿಳಾ ದಿನ ಕೇವಲ ಆಚರಣೆಯಾಗಿ ಉಳಿಯದೆ, ಮಹಿಳೆಯರಿಗೆ ಗೌರವ, ಸಮಾನತೆ ಮತ್ತು ಅವಕಾಶಗಳನ್ನು ನೀಡುವ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಕುಟುಂಬ ಮತ್ತು ಸಮಾಜವನ್ನು ಸದೃಢಗೊಳಿಸುವ ಶಕ್ತಿ ಮಹಿಳೆಗೆ ಪ್ರಕೃತಿದತ್ತವಾಗಿದೆ. ಮಹಿಳೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ.

ಸುಧಾ ಹುಚ್ಚಣ್ಣವರ,
ಉಪನ್ಯಾಸಕರು ಹಾಗೂ ಲೇಖಕರು,
ಶಿರಹಟ್ಟಿ.

ನಾನು ಯಾವ ಜಾತಿ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಜನರ ಆಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ. ಸಮಾಜದ ಬಡವರು ಹಾಗೂ ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಪಿಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಆದಿಶಕ್ತತ್ಮಕ ದಂಡಿಮಾರಮ್ಮ ದೇವಾಲಯದ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ಕುಂಭಕಳಶದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದ ಜನರನ್ನು ಅಭಿನಂದಿಸಿದ ಸಿಎಂ

ದೇವರು ದೇಗುಲಗಳಲ್ಲಿ ಇರುತ್ತಾರೆಂಬುದು ನಮ್ಮ ನಂಬಿಕೆ. ದೇವರ ಆರಾಧನೆಯಿಂದ ಒಳಿತಾಗುತ್ತದೆ ಎಂಬ ನಂಬಿಕೆಯನ್ನು ನಾನು ವಿರೋಧಿಸುವುದಿಲ್ಲ. ಆದರೆ ದೇವರು ಎಲ್ಲೆಡೆಯೂ ಇದ್ದಾನೆ ಎಂದು ನಾನು ನಂಬುವವನು ಮತ್ತು ಆಚರಿಸುವವನು. 1978 ರಲ್ಲಿ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ದಿಸಿದಾಗ ಇಲ್ಲಿನ ಜನರ ಆಶೀರ್ವಾದ ನನಗೆ ದೊರೆತಿತ್ತು.

ನಂತರ ವಿಧಾನಸಭಾ ಚುನಾವಣೆಯಲ್ಲಿ ಜನರ ಸಹಕಾರ ದೊರೆಯಿತು.ಮೈಸೂರು ತಾಲ್ಲೂಕಿನ ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದ ಜನರ ಆಶೀರ್ವಾದದಿಂದ ಈವರೆಗೆ 8 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದು, ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ. ಜನರ ಆಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ. ಪಿಲ್ಲಹಳ್ಳಿ ಜನರ ಪ್ರೀತಿಯಿಂದಾಗಿ ಇಲ್ಲಿನ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದೇನೆ. 1978 ರಿಂದ ಇಂದಿನವರೆಗೂ ಹಾಗೂ ಮುಂದೆಯೂ ಈ ಭಾಗದ ಜನರ ಸಹಕಾರ ದೊರೆಯುವ ವಿಶ್ವಾಸವಿದೆ ಎಂದರು.

ಎಲ್ಲರಿಗೂ ಒಳಿತನ್ನು ಬಯಸುವುದೇ ಮುಖ್ಯ

ಶ್ರೀ ದಂಡಿಮಾರಮ್ಮ ದೇವಸ್ಥಾನಕ್ಕೆ ಬಾಲ್ಯದಿಂದಲೂ ಭೇಟಿ ನೀಡುತ್ತಿದ್ದ ನೆನಪನ್ನು ಮೆಲುಕು ಹಾಕಿದ ಮುಖ್ಯಮಂತ್ರಿಗಳು, ದೇವರನ್ನು ಕಷ್ಟ ಬಂದಾಗ ನೆನಪಿಸಿಕೊಳ್ಳದೇ, ಎಲ್ಲ ಸಂದರ್ಭದಲ್ಲಿಯೂ ಸ್ಮರಿಸಬೇಕು ಎಂದರು. ‘ದೇವನೊಬ್ಬ ನಾಮ ಹಲವು’ ಎಂದು ನಂಬಿ, ದೇವರು ನಮ್ಮೊಳಗೂ ಸೇರಿದಂತೆ ಎಲ್ಲ ಕಡೆಯೂ ಇದ್ದಾನೆ. ಎಲ್ಲರಿಗೂ ಒಳಿತನ್ನು ಬಯಸುವುದೇ ಮುಖ್ಯ. ಯಾವೊಂದು ಧರ್ಮ ಜಾತಿಗಳು ಪ್ರೀತಿಯನ್ನು ಬೋಧಿಸುತ್ತದೆಯೇ ಹೊರತು ದ್ವೇಷಿಸುವುದನ್ನು ಬೋಧಿಸುವುದಿಲ್ಲ ಎಂದರು.

ಸಮಾನತೆ ಸ್ಥಾಪಿಸುವುದೇ ಸರ್ಕಾರದ ಯೋಜನೆಗಳ ಗುರಿ

ಸಮಾಜದ ಅಸಮಾನತೆ ಕಡಿಮೆಯಾಗಬೇಕು. ಸಮಾನತೆಯ ಸ್ಥಾಪಿಸುವ ಉದ್ದೇಶವನ್ನು ಸರ್ಕಾರದ ಎಲ್ಲ ಯೋಜನೆಗಳು ಹೊಂದಿವೆ. ಸಮಾಜದ ಎಲ್ಲ ಜಾತಿ ಧರ್ಮ, ವರ್ಗಗಳಿಗೆ ಆರ್ಥಿಕ ಸಾಮಾಜಿಕ ಶಕ್ತಿ ದೊರೆಯಬೇಕು. ಲಿಂಗ ತಾರತಮ್ಯ ಹೋಗಲಾಡಿಸಿ, ಮಹಿಳೆಯರಿಗೆ ಶಕ್ತಿ ತುಂಬಲು ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಉದ್ದೇಶ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳು ದೊರೆತಾಗ ಮಾತ್ರ ಸಮಾಜಿಕ ನ್ಯಾಯ ಒದಗಿಸಲು ಸಾಧ್ಯ ಎಂದರು.

ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಡಿಜಿಟಲ್ ವ್ಯವಸ್ಥೆ ಕರ್ನಾಟಕದಲ್ಲಿದೆ: ಸಚಿವ ಪರಮೇಶ್ವರ್

ಬೆಂಗಳೂರು: ಕರ್ನಾಟಕವು ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಡಿಜಿಟಲ್ ವ್ಯವಸ್ಥೆ ಹೊಂದಿರುವ ರಾಜ್ಯವಾಗಿದ್ದು, ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸಿಐಡಿ ಹಾಗೂ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ್ದ ‘CIDECODE’ 3ನೇ ವರ್ಷದ ಸೈಬರ್ ಅಪರಾಧ ತನಿಖಾ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಕೇವಲ ಒಂದು ರಾಜ್ಯವಲ್ಲ, ಅದು ಜಾಗತಿಕ ಬ್ರ್ಯಾಂಡ್. ಜಗತ್ತು ಬೆಂಗಳೂರಿನತ್ತ ನೋಡಿದಾಗ ನವೀನತೆ ಮತ್ತು ತಂತ್ರಜ್ಞಾನದ ಭವಿಷ್ಯ ಕಾಣುತ್ತದೆ. ಉತ್ತಮ ಮತ್ತು ಅತ್ಯಂತ ಸುರಕ್ಷಿತ ಡಿಜಿಟಲ್ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.

ಸೈಬರ್ ದಾಳಿಗಳನ್ನು ತನಿಖೆ ಮಾಡಲು ಹಾಗೂ ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಲು ಅಗತ್ಯವಾದ ಕೌಶಲ್ಯ, ತರಬೇತಿ ಮತ್ತು ತಂತ್ರಜ್ಞಾನದೊಂದಿಗೆ ವಿಶೇಷ ಸೈಬರ್ ಅಪರಾಧ ಘಟಕಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳು ಮತ್ತು ಪ್ರಮುಖ ನಗರಗಳಲ್ಲಿ ಒಟ್ಟು 43 ಸಿಇಎನ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

ನಾಗರಿಕರಿಗೆ ಸೈಬರ್ ಸುರಕ್ಷತೆ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಅಪಾಯ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಕಂಪನಿಗಳೊಂದಿಗೆ ಸಹಕಾರ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಇನ್ನೂ ನಾಗರಿಕರಿಗೆ ಹೆಚ್ಚಿನ ಡಿಜಿಟಲ್ ಸುರಕ್ಷತೆ ಒದಗಿಸಲು ಖಾಸಗಿ ವಲಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವೇಗವಾಗಿ ಬದಲಾಗುತ್ತಿರುವ ಸೈಬರ್ ಬೆದರಿಕೆಗಳನ್ನು ಎದುರಿಸಲು ಇಂತಹ ಸಂವಾದಗಳು ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.

DK Shivakumar: ದೆಹಲಿಗೆ ತೆರಳಿದ ಡಿಸಿಎಂ ಡಿ.ಕೆ. ಶಿವಕುಮಾರ್! ಯಾಕೆ ಗೊತ್ತಾ..?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಳೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ನಾಳೆ ಡಿಕೆ ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ.

ಕಾರ್ಯಕ್ರಮಗಳ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಕಲಬುರಗಿಯಿಂದಲೇ ದೆಹಲಿಗೆ ಪ್ರಯಾಣಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ನೀರಾವರಿ ಇಲಾಖೆಯ ಕೆಲವು ಕೆಲಸಗಳ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಬಜೆಟ್ ಮಂಡನೆಯ ನಂತರ ಎಐಸಿಸಿ ಅಧ್ಯಕ್ಷರೊಂದಿಗೆ ದೆಹಲಿಗೆ ತೆರಳುತ್ತಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

 

error: Content is protected !!