Home Blog Page 9

ಸಿಎಂ ಉತ್ತರ ಕೊಟ್ಟಿದ್ದಾರೆ, ನಾನು ಮಾತನಾಡೋ ಅವಶ್ಯಕತೆ ಇಲ್ಲ: ಹೈಕಮಾಂಡ್ ಭೇಟಿಯ ಬಳಿಕ ಡಿಕೆಶಿ ಪ್ರತಿಕ್ರಿಯೆ

ದೇವನಹಳ್ಳಿ: ಹೈಕಮಾಂಡ್ ಭೇಟಿಯ ಬಳಿಕ ಚಿಕ್ಕಬಳ್ಳಾಪುರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಸಿಎಂ ಅವರೇ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ನಾನು ಮತ್ತೆ ಮತ್ತೆ ಮಾತನಾಡೋದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಡಿಕೆಶಿ ಅವರು, ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ. ಸಿಎಂ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರು ಏನು ಹೇಳಿದ್ದಾರೆ ಎಂಬುದರ ಬಗ್ಗೆ ನಾನು ಮತ್ತೆ ಪ್ರತಿಕ್ರಿಯೆ ನೀಡೋ ಅವಶ್ಯಕತೆ ಇಲ್ಲ ಎಂದರು. ಶಾಸಕರ ಬೆಂಬಲ, ಅಧಿಕಾರ ಹಂಚಿಕೆ, ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡುವುದರ ಬದಲಿಗೆ, ಮಾಧ್ಯಮಗಳ ಪ್ರಶ್ನೆಗಳನ್ನು ತಿರಸ್ಕರಿಸಿದ ಡಿಕೆಶಿ, ನಮ್ಮಗೆ ಯಾವುದೇ ಗಾಬರಿ ಇಲ್ಲ. ನಿಮಗ್ಯಾಕೆ ಗಾಬರಿ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡುವುದು ಶತಸಿದ್ಧ: ಆರ್. ಅಶೋಕ್

ಬೆಂಗಳೂರು: ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡೋದು ಶತಸಿದ್ಧ, ಅಲ್ಪಾವಧಿಯ ವಿಸ್ತರಣೆಯೂ ಸಿಗಲಾರದು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಶಿವಕುಮಾರ್ ಸ್ಥಾನಕ್ಕೇರೋದು ಶತಸಿದ್ಧ ಎಂದು ಹೇಳಿದರು.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ, ಅದು ಮೊದಲಿಂದಲೂ ಇತ್ತು, ಈಗ ವಿಕೋಪಕ್ಕೆ ಹೋಗಿದೆ, ಕೆಲ ಮಂತ್ರಿಗಳು ಸಹ ಸ್ಥಾನ ಉಳಿಸಿಕೊಳ್ಳಲು ದೆಹಲಿಗೆ ಹೋಗಿದ್ದಾರೆ ಎಂದು ಹೇಳಿದರು.

ಇದರ ನಡುವೆ ಕಾಂಗ್ರೆಸ್ ಹೈಕಮಾಂಡ್ನಿಂದ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ದೊರೆತ ನಂತರವೇ, ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ ಎಂಬುದು ತಿಳಿದುಬಂದಿದೆ. ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಯಾವುದೇ ಬದಲಾವಣೆ, ಪ್ರಯೋಗ ಮಾಡುವ ಇರಾದೆಯಲ್ಲಿ ರಾಹುಲ್ ಗಾಂಧಿ ಇಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುವಲ್ಲಿ ತೊಡಕು: ಎಚ್.ಎಂ. ರೇವಣ್ಣ ಹೇಳಿದ್ದೇನು..?

ಮೈಸೂರು: ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು ವಿತರಿಸಲು ತೊಡಕುಗಳಿರುವುದರಿಂದ, ಮೂರು ತಿಂಗಳಿಗೊಮ್ಮೆ ಹಣ ನೀಡಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪ್ರತಿ ತಿಂಗಳು ಹಣ ನೀಡಲು ತಾಂತ್ರಿಕ ಹಾಗೂ ಆಡಳಿತಾತ್ಮಕ ಅಡೆತಡೆಗಳಿವೆ. ಆದ್ದರಿಂದ, ಸದ್ಯಕ್ಕೆ ಮೂರು ತಿಂಗಳಿಗೊಮ್ಮೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಇನ್ನೊಂದೆಡೆ, ಜಿಎಸ್‌ಟಿ ಸಮಸ್ಯೆ ಕಾರಣದಿಂದಾಗಿ ಸುಮಾರು 1.2 ಲಕ್ಷ ಲಾಭಾಂಶದ ಅರ್ಹ ಮಹಿಳೆಯರಿಗೆ ಹಣ ಜಮೆಯಾಗಿರಲಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದು, ಇದರಲ್ಲಿ ಈಗ 58 ಸಾವಿರ ಮಂದಿಯ ಸಮಸ್ಯೆ ಬಗೆಹರಿಸಲಾಗಿದ್ದು, ಉಳಿದವರ ಸಮಸ್ಯೆಗಳನ್ನು ಕೂಡ ಬಗೆಹರಿಸುವ ಪ್ರಕ್ರಿಯೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

ಮುಂದುವರೆದ ಹೃದಯಾಘಾತ: ಬೆಳಗಾವಿಯಲ್ಲಿ ಕುಸಿದು ಬಿದ್ದು ಯೋಧ ಸಾವು.!

ಬೆಳಗಾವಿ: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಅದರಲ್ಲೂ ಹಾಸನದಲ್ಲಿ ಹೆಚ್ಚಾಗುತ್ತಿರುವ ಸಾವಿನ ಸರಣಿ ಜನರನ್ನು ಆತಂಕಕ್ಕೆ ದೂಡಿತ್ತು.  ಇದೀಗ ರಜೆಗೆಂದು ಊರಿಗೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ನಗರದ ಅನಗೋಳದ ಬಜಾರ್‌ನಲ್ಲಿ ನಡೆದಿದೆ.

ಇಬ್ರಾಹಿಂ ದೇವಲಾಪುರ (37) ಮೃತ ಯೋಧನಾಗಿದ್ದು, ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ರಜೆಗೆಂದು ಊರಿಗೆ ಬಂದಿದ್ದರು.

ಈ ವೇಳೆ ಅನಗೋಳದ ಬಜಾರ್‌ಗೆ ತೆರಳಿದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ಮೈಕ್ರೋ ಫೈನಾನ್ಸ್ ಕಿರುಕುಳ: ರೈಲಿಗೆ ತಲೆಕೊಟ್ಟು ತಾಯಿ- ಮಗಳು ಆತ್ಮಹತ್ಯೆ.!

0

ದಾವಣಗೆರೆ: ಸಾಲಕ್ಕೆ ಹೆದರಿ ತಾಯಿ–ಮಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ತುಂಗಭದ್ರ ನದಿ ಸೇತುವೆ ಬಳಿ ನಡೆದಿದೆ.

ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ಸುವರ್ಣಮ್ಮ (60) ಹಾಗೂ ಪುತ್ರಿ ಗೌರಮ್ಮ (30) ಮೃತ ದುರ್ಧೈವಿಗಳಾಗಿದ್ದು, ಕೆಲ ವರ್ಷಗಳ ಹಿಂದೆ ಪತಿ ನಿಧನರಾಗಿದ್ದರು. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಸುವರ್ಣಮ್ಮ ಮೂವರು ಪುತ್ರಿಯರಲ್ಲಿ ಇಬ್ಬರ ವಿವಾಹ ಮಾಡಿದ್ದರು. ಇನ್ನೊಬ್ಬ ಮಗಳು ಗೌರಮ್ಮ ಅಂಗವಿಕಲೆಯಾಗಿದ್ದು, ತಾಯಿ ಜೊತೆ ಇದ್ದರು.

ಇನ್ನೂ ಸ್ವ ಸಹಾಯ ಸಂಘ ಹಾಗೂ ಮೈಕ್ರೊ ಫೈನಾನ್ಸ್ ಗಳಲ್ಲಿ 3ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು. ಎರಡು ಸಾಲಕ್ಕೆ ವಾರಕ್ಕೊಮ್ಮೆ ಹಾಗೂ ಒಂದು ಸಾಲಕ್ಕೆ ಮಾಸಿಕ ಕಂತು ಕಟ್ಟಬೇಕಾಗಿತ್ತು.

ಆದ್ರೆ ಸಾಲದ ಕಂತು ಕಟ್ಟಲಾಗಿದೆ ಪುತ್ರಿಯೊಂದಿಗೆ ಜುಲೈ 1ರಂದು ಗ್ರಾಮ ತೊರೆದಿದ್ದ ಸುವರ್ಣಮ್ಮ ಇಂದು ರೈಲ್ವೆ ಸೇತುವೆಯ ಮೇಲೆ ತೆರಳಿ ಆತ್ಮಹತ್ಯೆ ಶರಣಾಗಿದ್ದಾರೆ. ಇನ್ನೂ ಘಟನೆ ಸಂಬಂಧ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಧಾನ ಪರಿಷತ್ ಮಾಜಿ ಸಭಾಪತಿ ಎನ್. ತಿಪ್ಪಣ್ಣ ನಿಧನ!

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಉಪಸಭಾಪತಿ ಎನ್.ತಿಪ್ಪಣ್ಣ (97) ನಿಧನರಾಗಿದ್ದಾರೆ.  ತಿಪ್ಪಣ್ಣ ಅವರಿಗೆ ಒಬ್ಬ ಪುತ್ರ ಇದ್ದಾರೆ.

ಅವರ ಅಂತ್ಯ ಸಂಸ್ಕಾರವನ್ನು ನಾಳೆ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ತುರವಿನೂರಿನಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಬಳ್ಳಾರಿಯ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ವಕೀಲರಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಅವರು, ಬಳಿಕ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದರು. ನಾಲ್ಕು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಪ್ರತಿಪಕ್ಷದ ಉಪ ನಾಯಕರಾಗಿದ್ದರು. ಅಲ್ಪ ಅವಧಿಗೆ ಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅಮೃತಧಾರೆ ಸೀರಿಯಲ್ ನಟಿಗೆ ಚಾಕು ಇರಿತ; ಸಿನೆಮಾ ಸ್ಟೈಲ್‌ನಲ್ಲಿ ಹತ್ಯೆಗೆ ಮುಂದಾದ ಪತಿರಾಯ..!

ಬೆಂಗಳೂರು: ಅಮೃತಧಾರೆ, ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದ ಕಿರುತೆರೆ ನಟಿಗೆ ಚಾಕು ಇರಿದ ಘಟನೆ ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ ನಲ್ಲಿ ನಡೆದಿದೆ. ಮಂಜುಳ @ಶೃತಿ ಚಾಕು ಇರಿತಕ್ಕೋಳಗಾದ ಕಿರುತೆರೆ ನಟಿಯಾಗಿದ್ದು, ಶೀಲ ಶಂಕಿಸಿ ಹಲ್ಲೆ ನಡೆದಿದೆ.

ಅಮೃತಧಾರೆ, ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ಶೃತಿ ನಟಿಸಿದ್ದಾರೆ. ಅಂಬರೀಶ್ ಎಂಬಾತನನ್ನು ಮಂಜುಳ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಕೂಡ ಇದ್ದರು. ಹನುಮಂತ ನಗರದಲ್ಲಿ ಲೀಸ್ ಗೆ ಮನೆ ಪಡೆದು ವಾಸವಿದ್ದ ದಂಪತಿ ನಡುವೆ ಹೊಂದಾಣಿಕೆ ಸರಿಯಿರಲಿಲ್ಲ, ಹೀಗಾಗಿ ಮಂಜುಳ ಗಂಡನಿಂದ ದೂರಾಗಿ ಅಣ್ಣನ ಮನೆಯಲ್ಲಿದ್ದರು.

ಕಳೆದ ಏಪ್ರಿಲ್ ನಲ್ಲಿ ಇಬ್ಬರ ನಡುವೆ ಲೀಸ್ ಹಣಕ್ಕಾಗಿ ಸಹ ಜಗಳ ನಡೆದಿತ್ತು. ಈ ಬಗ್ಗೆ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಇದಾದ ಬಳಿಕ ಕಳೆದ ಗುರುವಾರ ರಾಜಿ ಸಂದಾನ ಮಾಡಿ ಒಂದಾಗಿದ್ದರು. ಆದ್ರೆ ಇಬ್ಬರು ಒಂದಾದ ಮಾರನೇ ದಿನವೇ ಹೆಂಡತಿಗೆ ಚಾಕು ಇರಿದಿದ್ದಾನೆ. ಕಳೆದ ಶುಕ್ರವಾರ ಮಕ್ಕಳು ಕಾಲೇಜಿಗೆ ಹೋದ ನಂತರ ಹೆಂಡತಿ ಮೇಲೆ ಹಲ್ಲೆ ಮಾಡಿದ್ದು,

ಪೆಪ್ಪರ್ ಸ್ಪ್ರೇ ಹೊಡೆದು ಸಿನಿಮಾ ಸ್ಟೈಲ್ ನಲ್ಲಿ ತಲೆ ಕೂದಲು ಹಿಡಿದು ಗೋಡೆ ತಲೆ ಗುದ್ದಿಸಿ ಕೊಲೆಗೆ ಯತ್ನ ಮಾಡಲಾಗಿದ್ದು, ಘಟನೆ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಂಜುಳ @ಶೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೈಟೆಕ್ ಕಾರಿನಲ್ಲಿ ಹಸುಗಳ ಕಳ್ಳತನ: ವಾಹನ ಅಡ್ಡಗಟ್ಟಿದ ಪೊಲೀಸರ ಮೇಲೆ ರಾಡ್ ಬೀಸಿದ ದನಗಳ್ಳರು!

0

ಚಿಕ್ಕಮಗಳೂರು: ಹೈಟೆಕ್ ಕಾರು ಝೈಲೋ ಕಾರಿನಲ್ಲಿ ನಾಲ್ಕು ಹಸುಗಳನ್ನು ಕಳ್ಳತನ ಮಾಡುತ್ತಿದ್ದ ದನಗಳ್ಳರನ್ನು ಪೊಲೀಸರು ಬಂಧಿಸಿರುವ ಘಟನೆ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾರಿನಲ್ಲಿ ನಾಲ್ಕು ಹಸುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ದನಗಳ್ಳರನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ಪೊಲೀಸರು ಕಾರನ್ನು ಅಡ್ಡಿಗಟ್ಟಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ದನಗಳ್ಳರು ರಾಡ್ ಬೀಸಿ, ತಪ್ಪಿಸಿಕೊಂಡು ಕಾರು ಬಿಟ್ಟು ಪರಾರಿಯಾಗಿದ್ದಾರೆ.

ಆರೋಪಿಗಳು ಪರಾರಿಯಾದರೂ ಬಿಡದ ಪೊಲೀಸರು ಮಧ್ಯರಾತ್ರಿವರೆಗೂ ಹುಡುಕಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಾರು, ರಾಡ್ ಹಾಗೂ 4 ಮೊಬೈಲ್ ಹಾಗೂ ಸಾಗಾಟ ಮಾಡುತ್ತಿದ್ದ 4 ಹಸುಗಳನ್ನು ವಶಕ್ಕೆ ಪಡೆಯಲಾಗಿದ್ದು, ಈ ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸದ್ದಕ್ಕಿಲ್ಲ ನಾಯಕತ್ವ ಬದಲಾವಣೆ: ಕೈ ನಾಯಕರಿಗೆ ಸಂದೇಶ ರವಾನಿಸಿದ ಹೈಕಮಾಂಡ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ ಸಮುದ್ರ ಮಂಥನ ನಡೆಸಲಿದ್ದಾರೆ. ಈ ವೇಳೆ ನಾಯಕತ್ವ ಬದಲಾವಣೆ, ಪವರ್ ಶೇರಿಂಗ್ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇದೀಗ ಇದಕ್ಕೆ ಹೈಕಮಾಂಡ್ ಪುಲ್ ಸ್ಟಾಪ್ ಇಟ್ಟಿದೆ. ಹೌದು ರಾಹುಲ್ ಗಾಂಧಿ ಭೇಟಿಗೂ ಮುನ್ನ ನವದೆಹಲಿಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಅಧಿಕಾರ ಹಂಚಿಕೆ ಬಗ್ಗೆ ಸ್ಪಷ್ಟ ಮಾತುಗಳನ್ನು ಆಡಿದ್ದರು.

ರಾಹುಲ್ ಗಾಂಧಿ ಕೂಡ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡುವ ಮನಸ್ಥಿತಿಯಲ್ಲಿ ಇಲ್ಲ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಈ ಸಂದೇಶ ಸಿಕ್ಕ ನಂತರವೇ ಸಿದ್ದರಾಮಯ್ಯ ಗಟ್ಟಿ ದನಿಯಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಮಾತುಗಳನ್ನಾಡಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗುರುವಾರದ ಭೇಟಿ ವೇಳೆಯೂ ರಾಹುಲ್ ಗಾಂಧಿ ರವಾನಿಸಿದ್ದಾರೆ ಎನ್ನಲಾಗಿದೆ.

ಸದ್ಯದ ಮಟ್ಟಿಗೆ ನಾಯಕತ್ವ ಬದಲಾವಣೆ ಇಲ್ಲ. ಸಂಪುಟ ಪುನರ್ ರಚನೆ ಕೂಡ ಇಲ್ಲ ಎಂಬ ಸಂದೇಶ ಸಿದ್ದರಾಮಯ್ಯಗೆ ಹೈಕಮಾಂಡ್ ನಾಯಕರಿಂದ ಬಂದಿದೆ. ನವಂಬರ್ ಬಳಿಕವೇ ಸಚಿವ ಸಂಪುಟ ಗುಣ ರಚನೆ ಮಾಡಲಾಗುವುದು ಎಂದು ಹೈಕಮಾಂಡ್ ತಿಳಿಸಿದೆ ಎನ್ನಲಾಗಿದೆ.

ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಹಾಗೂ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಿದ್ದು, ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು.

ಅವರು ಗುರುವಾರ ಗದುಗಿನ ಸಿದ್ಧಲಿಂಗ ನಗರದ ಸರ್ಕಾರಿಪ್ರೌಢ ಶಾಲೆಯಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿಯಲ್ಲಿ ಮೊದಲ 5 ಸ್ಥಾನ ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡುವದು, ದುಶ್ಚಟಗಳನ್ನು ರೂಢಿಸಿಕೊಳ್ಳುವದು ಸಲ್ಲದು. ಹಾಗೆಯೇ ಟಿವಿ ಮತ್ತು ಮೊಬೈಲ್‌ಗಳನ್ನು ಅಗತ್ಯವಿದ್ದರೆ ಮಾತ್ರ ಬಳಕೆ ಮಾಡಬೇಕು. ಜ್ಞಾನಾರ್ಜನೆಗೆ, ಸಂಪರ್ಕಕ್ಕೆ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಬೇಕು ಎಂದರು.

ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸ್ಪೂರ್ತಿ ಉಡಚಗೊಂಡ, ಲಕ್ಷ್ಮೀ ನಲುಡಿ, ಕೀರ್ತಿ ನಾಯ್ಕರ್, ಶಾಕಾಂಬರಿ ನರೇಗಲ್ಲ, ಜ್ಯೋತಿ ಹೇಮಾದ್ರಿ ಅವರುಗಳಿಗೆ ಪ್ರತಿಭಾ ಪುರಸ್ಕಾರದ ಚೆಕ್, ಪ್ರಮಾಣ ಪತ್ರ, ಕಾಲೇಜು ಬ್ಯಾಗ್‌ಗಳನ್ನು ನೀಡಿ ಶಾಲೆಯ ಎಲ್ಲ ಮಕ್ಕಳಿಗೆ ಸಿಹಿ ವಿತರಿಸಿ ಶುಭ ಕೋರಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಸಚಂದ್ರ ಬೆಟದೂರ, ಖಜಾಂಚಿ ವಿಜಯಲಕ್ಷ್ಮೀ ಅಂಗಡಿ, ನಿರ್ದೆಶಕರಾದ ಡಾ. ಶರಣಬಸವ ಚೌಕಿಮಠ, ಡಾ. ಬಸಯ್ಯ ಬೆಳ್ಳೇರಿಮಠ, ಶಿವಪ್ಪ ಕತ್ತಿ, ಆಂಜನೇಯ ಕಟಗಿ, ಸಿದ್ಧಲಿಂಗನಗೌಡ ಪಾಟೀಲ, ಡಾ. ಬಸವರಾಜ ಚನ್ನಪ್ಪಗೌಡ್ರ, ಭಾರತಿ ಪಾಟೀಲ, ನೇಹಾ, ಸುಧಾರಾಣಿ, ಪ್ರಸನ್‌ಕುಮಾರ ಗುತ್ತಿ ಮುಂತಾದವರು ಪಾಲ್ಗೊಂಡಿದ್ದರು.

ಅಧ್ಯಕ್ಷತೆಯನ್ನು ಜೆ.ಬಿ. ಅಣ್ಣಿಗೇರಿ ವಹಿಸಿದ್ದರು. ಗಂಗಾ ಅಳವಡಿ ಸ್ವಾಗತಿಸಿದರು. ಎಸ್.ಎ. ಬಾಣದ ನಿರೂಪಿಸಿ ವಂದಿಸಿದರು.

ಉರ್ದು ಶಾಲೆಯಲ್ಲಿ: ಗದುಗಿನ ಹಳೇ ಬಸ್ ನಿಲ್ದಾಣದ ಬಳಿಯಿರುವ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ರೆಹಮತ್ ಉನ್ನಿಸಾ ಬೋದ್ಲೇಖಾನ್, ಅತೀಕಾ ಮಕಾನದಾರ, ಆಶಾ ಮಮ್ಮುನವರ, ಫಾಯಿಜಾ ಅಡವಿಸೋಮಾಪೂರ ಹಾಗೂ ಸುಹಾನ ಇಸ್ರಾರ್ ಬಬರ್ಚಿ ಅವರುಗಳಿಗೆ ಪ್ರತಿಭಾ ಪುರಸ್ಕಾರದ ಚೆಕ್, ಪ್ರಮಾಣ ಪತ್ರ, ಕಾಲೇಜು ಬ್ಯಾಗ್‌ಗಳನ್ನು ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಪ್ಯಾರಅಲಿ ನೂರಾನಿ ದಂಪತಿಗಳು ವಿದ್ಯಾರ್ಥಿಗಳಿಗೆ ಹಿತೋಪದೇಶ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಮಾತನಾಡಿ, ಗುರುಗಳಾದ ಬಿ.ಜಿ. ಅಣ್ಣಿಗೇರಿ ಪ್ರತಿಷ್ಠಾನವು ಸರ್ಕಾರಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ನಿಜವಾದ ಗುರುವಂದನೆಯಾಗಿದೆ ಎಂದರು.

error: Content is protected !!