Home Blog Page 9

ಶಿವಾಜಿನಗರದಲ್ಲಿ ಫುಟ್ ಪಾತ್ ಒತ್ತುವರಿ ತೆರವು ವೇಳೆ ಹೈಡ್ರಾಮಾ: ಪಾಲಿಕೆ ಸಿಬ್ಬಂದಿ ಮೇಲೆ ಹಲ್ಲೆ!, ಓರ್ವ ವಶಕ್ಕೆ

ಬೆಂಗಳೂರು: ನಗರದ ಶಿವಾಜಿನಗರದಲ್ಲಿ ಜಿಬಿಎ ವತಿಯಿಂದ ನಡೆದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮಂಗಳವಾರ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಫುಟ್‌ಪಾತ್ ಅತಿಕ್ರಮಣ ತೆರವು ಮಾಡಲು ಮುಂದಾದ ಪಾಲಿಕೆ ಸಿಬ್ಬಂದಿ ಹಾಗೂ ಸ್ಥಳೀಯ ಸಂಘಟನೆಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಜೆಸಿಬಿ ಯಂತ್ರದ ಮೂಲಕ ಫುಟ್‌ಪಾತ್ ಮೇಲಿನ ಅಕ್ರಮ ನಿರ್ಮಾಣ ಹಾಗೂ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಪಾಲಿಕೆ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಕಾರ್ಯಾಚರಣೆಗೆ ಅಡ್ಡಿಪಡಿಸಿದರು ಎಂದು ಆರೋಪಿಸಲಾಗಿದೆ.

ಈ ಸಂದರ್ಭದಲ್ಲಿ ಪಾಲಿಕೆಯ ಇಂಜಿನಿಯರ್‌ಗಳು ಹಾಗೂ ಜೆಸಿಬಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪಾಲಿಕೆ ಸಿಬ್ಬಂದಿಯೊಬ್ಬರ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ಮಾಡಲು ಪ್ರಯತ್ನಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಜೆಸಿಬಿ ಚಾಲಕನ ಮೇಲೆ ಪೆಪ್ಪರ್ ಸ್ಪ್ರೇ ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಹಲ್ಲೆ ಯತ್ನದ ಆರೋಪದ ಮೇರೆಗೆ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಘಟನೆ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ಪಾಲಿಕೆ ಸಿಬ್ಬಂದಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

4 ವರ್ಷದ ಬಾಲಕಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಅಪರೂಪದ ಚಿಕಿತ್ಸೆ ಯಶಸ್ವಿ

0

ಮಣಿಪಾಲ: ನಾಲ್ಕು ವರ್ಷದ ಬಾಲಕಿಯ ಕಣ್ಣಿನಲ್ಲಿ ಪತ್ತೆಯಾದ ಅಪರೂಪದ ಜೀವಂತ ಪರಾವಲಂಬಿ ಹುಳುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಕಣ್ಣಿನ ನಿರಂತರ ಕೆಂಪಾಗುವಿಕೆ ಮತ್ತು ಕಿರಿಕಿರಿಯ ಸಮಸ್ಯೆಯೇ ಈ ಅಪರೂಪದ ಪ್ರಕರಣವನ್ನು ಪತ್ತೆಹಚ್ಚಲು ಕಾರಣವಾಗಿದೆ.

ಬಲಗಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು. ಪರೀಕ್ಷೆ ವೇಳೆ ಕಣ್ಣಿನ ಒಳಭಾಗದಲ್ಲಿ ಅಸಹಜ ಚಲನೆ ಗಮನಿಸಿದ ವೈದ್ಯರು ಹೆಚ್ಚಿನ ತಪಾಸಣೆ ನಡೆಸಿದರು. ಸ್ಲಿಟ್ ಲ್ಯಾಂಪ್ ಪರೀಕ್ಷೆಯಲ್ಲಿ ಕಣ್ಣಿನ ಪೊರೆಯ ಕೆಳಗೆ ಜೀವಂತ ಪರಾವಲಂಬಿ ಇರುವುದನ್ನು ಪತ್ತೆಹಚ್ಚಲಾಯಿತು.

ತಕ್ಷಣವೇ ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರ ತಂಡ, ಸಾಮಾನ್ಯ ಅರಿವಳಿಕೆಯಡಿ ಎಕ್ಸಿಶನ್ ಬಯಾಪ್ಸಿ ನಡೆಸಿ ಕಣ್ಣಿನೊಳಗಿದ್ದ ಹುಳುವನ್ನು ಸುರಕ್ಷಿತವಾಗಿ ಹೊರತೆಗೆದಿದೆ.

ನಂತರ ಸೂಕ್ಷ್ಮಜೀವಶಾಸ್ತ್ರ ಪರೀಕ್ಷೆಯಲ್ಲಿ ಇದು ಡೈರೊಫಿಲೇರಿಯಾ ರೆಪೆನ್ಸ್ ಸೋಂಕು ಎಂದು ದೃಢಪಟ್ಟಿದೆ. ಸೋಂಕಿತ ಸೊಳ್ಳೆಗಳ ಮೂಲಕ ಹರಡುವ ಈ ಪರಾವಲಂಬಿ ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಆದರೆ ಅಪರೂಪವಾಗಿ ಮನುಷ್ಯರ ಕಣ್ಣಿನ ಭಾಗಕ್ಕೂ ಸೋಂಕು ತಗುಲಬಹುದು.

ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಎಸ್. ಕಾಮತ್ ನೇತೃತ್ವದಲ್ಲಿ ನಡೆದ ಈ ಚಿಕಿತ್ಸೆಯಲ್ಲಿ ಡಾ. ಪ್ರಿಯಲ್ ಅಗರ್ವಾಲ್, ಡಾ. ಅಪರ್ಣಾ ಹಾಗೂ ತಂಡದ ವೈದ್ಯರು ಭಾಗವಹಿಸಿದ್ದರು.

“ಇಂತಹ ಸೋಂಕು ಅಪರೂಪವಾದರೂ, ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿದರೆ ಚಿಕಿತ್ಸೆ ಸಾಧ್ಯ. ಪುಟ್ಟ ಬಾಲಕಿ ಇದೀಗ ಸಂಪೂರ್ಣ ಆರೋಗ್ಯವಾಗಿರುವುದು ಸಂತಸದ ವಿಷಯ” ಎಂದು ಡಾ. ಯೋಗೀಶ್ ಎಸ್. ಕಾಮತ್ ಹೇಳಿದ್ದಾರೆ.

ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ, “ಈ ಪ್ರಕರಣವು ವಿವಿಧ ವಿಭಾಗಗಳ ವೈದ್ಯರ ಸಮನ್ವಯದ ಉತ್ತಮ ಉದಾಹರಣೆಯಾಗಿದೆ. ಸೊಳ್ಳೆ ನಿಯಂತ್ರಣ ಮತ್ತು ಸಾಕುಪ್ರಾಣಿಗಳ ನಿಯಮಿತ ಆರೈಕೆಯ ಅಗತ್ಯವನ್ನೂ ಇದು ತೋರಿಸುತ್ತದೆ” ಎಂದು ತಿಳಿಸಿದ್ದಾರೆ.

ಹುಣಸೂರಿನಲ್ಲಿ ನಾಲ್ವರ ಬರ್ಬರ ಅಂತ್ಯ: ಹೆಂಡತಿ-ಇಬ್ಬರು ಮಕ್ಕಳ ಕೊಲೆ ಬಳಿಕ ಪತಿ ನೇಣಿಗೆ ಶರಣು

0

ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ಕೌಟುಂಬಿಕ ದುರಂತ ನಡೆದಿದೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮೃತರನ್ನು ಹರೀಶ್ (49), ಪತ್ನಿ ನಿಶ್ಚಿತ (36) ಹಾಗೂ ಅವರ 13 ಮತ್ತು 6 ವರ್ಷದ ಇಬ್ಬರು ಮಕ್ಕಳೆಂದು ಗುರುತಿಸಲಾಗಿದೆ. ಹರೀಶ್ ಮೊದಲು ಪತ್ನಿ ಮತ್ತು ಮಕ್ಕಳ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣಕ್ಕೆ ಮತ್ತಷ್ಟು ನಿಗೂಢತೆ ಮೂಡಿಸಿರುವ ಸಂಗತಿ ಎಂದರೆ, ಘಟನೆಗೆ ಮೂರು ದಿನಗಳ ಮುನ್ನವೇ ಹರೀಶ್ ತನ್ನ ತಾಯಿಯನ್ನು ಅಜ್ಜಿ ಮನೆಗೆ ಕಳುಹಿಸಿದ್ದ ಎನ್ನಲಾಗಿದೆ. ಸೋಮವಾರ ರಾತ್ರಿ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಮಂಗಳವಾರ ಬೆಳಗ್ಗೆ ಮನೆ ಬಾಗಿಲು ತೆರೆಯದಿದ್ದಾಗ ನೆರೆಹೊರೆಯವರು ಕಿಟಕಿಯಿಂದ ನೋಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ.

ಹುಣಸೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೌಟುಂಬಿಕ ಕಲಹ, ಆರ್ಥಿಕ ಸಮಸ್ಯೆ ಅಥವಾ ಇತರೆ ಯಾವುದೇ ಕಾರಣ ಈ ದುರಂತಕ್ಕೆ ಕಾರಣವಾಗಿದೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ಬೆಂಗಳೂರಿನಲ್ಲಿ ಕಳ್ಳತನ ಮಾಡಿ ರಾಜಸ್ಥಾನಕ್ಕೆ ಪರಾರಿಯಾಗಿದ್ದ ಮೂವರು ಆರೋಪಿಗಳು ಅರೆಸ್ಟ್.!

0

ಬೆಂಗಳೂರು: ಮನೆಗಳವು ಮಾಡಿ, ಕದ್ದ ಚಿನ್ನಾಭರಣವನ್ನು ಚೆನ್ನೈನಲ್ಲಿ ಅಡವಿಟ್ಟು ಪರಾರಿಯಾಗಿದ್ದ ರಾಜಸ್ಥಾನ ಮೂಲದ ಗ್ಯಾಂಗ್‌ನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕರ್ಣರಾಮ್, ಲಕ್ಮರಾಮ್ ಮತ್ತು ಗೋಪಾಲ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮುದ್ದಿನಪಾಳ್ಯದ ರಾಕೇಶ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದರು ಎನ್ನಲಾಗಿದೆ.

ಕಳ್ಳತನದ ಬಳಿಕ ಬೆಂಗಳೂರಿನಿಂದ ಪರಾರಿಯಾಗಿದ್ದ ಆರೋಪಿಗಳು, ಕದ್ದ ಚಿನ್ನಾಭರಣವನ್ನು ಚೆನ್ನೈನಲ್ಲಿ ಅಡವಿಟ್ಟಿದ್ದರು ಎಂದು ತಿಳಿದುಬಂದಿದೆ. ಬಳಿಕ ರಾಜಸ್ಥಾನಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

ಬಂಧಿತರಿಂದ 187 ಗ್ರಾಂ ಚಿನ್ನಾಭರಣ ಹಾಗೂ 4 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಚೂಡಿದಾರ್ʼನಲ್ಲಿ MDMA ಸಾಗಾಟ: ಡೆಲ್ಲಿಯಿಂದ ಬೆಂಗಳೂರಿಗೆ ಮಾದಕ ವಸ್ತು ತರುತ್ತಿದ್ದ ಮೂವರು ಆರೋಪಿಗಳು ಅರೆಸ್ಟ್.!

0

ಬೆಂಗಳೂರು: ಚೂಡಿದಾರ್‌ನಲ್ಲಿ ಮಾದಕ ವಸ್ತುಗಳನ್ನು ಅಡಗಿಸಿಟ್ಟು ಸಾಗಿಸುತ್ತಿದ್ದ ಆರೋಪಿಗಳ ವಿರುದ್ಧ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಡೆಲ್ಲಿಯಿಂದ ಬೆಂಗಳೂರಿಗೆ ಸಪ್ಲೈ ಆಗುತ್ತಿದ್ದ ಎಂಡಿಎಂಎ ಹಾಗೂ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಸಾಹೀಲ್ ಕುಮಾರ್, ಸತ್ಯಂ ಮತ್ತು ಕಲೀಮ್ ಕನ್ನಯ್ಯ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ನೈಜೀರಿಯಾ ಮೂಲದ ವ್ಯಕ್ತಿಯೊಬ್ಬರಿಂದ ಎಂಡಿಎಂಎ ಪಡೆದು ಬೆಂಗಳೂರಿಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಸಾಹೀಲ್ ಕುಮಾರ್ ಸೂಚನೆಯ ಮೇರೆಗೆ ಸತ್ಯಂ, ಕಲೀಮ್ ಮತ್ತು ಕನ್ನಯ್ಯ ಮಾದಕ ವಸ್ತುಗಳನ್ನು ತಲುಪಿಸಲು ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಹಿಂದೆ ಬಂಧನಕ್ಕೊಳಗಾಗಿದ್ದ ವಿಕ್ಟರ್ ಮತ್ತು ಮೋಸಸ್ ನೀಡಿದ ಮಾಹಿತಿಯ ಆಧಾರದ ಮೇಲೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತರಿಂದ ಸುಮಾರು 26.60 ಲಕ್ಷ ರೂಪಾಯಿ ಮೌಲ್ಯದ 12 ಕೆಜಿ 925 ಗ್ರಾಂ ಎಂಡಿಎಂಎ ಹಾಗೂ 60 ಗ್ರಾಂ ಕೊಕೇನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ ಸಿಸಿಬಿ ಪೊಲೀಸರು ಮತ್ತೊಂದು ಕಾರ್ಯಾಚರಣೆ ನಡೆಸಿ, ರಾಜಸ್ಥಾನದಿಂದ ಬೆಂಗಳೂರಿಗೆ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಲುಂಬುರಾಮ್ ಮತ್ತು ಅನುಪ್ ರಾಮ್ ಎಂಬುವವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 7 ಕೆಜಿ ಆಫೀಮು ಹಾಗೂ 225 ಗ್ರಾಂ ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಗಳ ಕುರಿತು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

‘ಟಾಕ್ಸಿಕ್’ನ ಮತ್ತೊಂದು ಮಾಸ್ಟರ್ ಸ್ಟ್ರೋಕ್! ‘ಮನಮೋಹಕ’ ಹಾಡಿನಿಂದ ಯಶ್ ಸಿನಿಮಾ ಕ್ರೇಜ್ ಮತ್ತಷ್ಟು ಸ್ಫೋಟ

ಬೆಂಗಳೂರು: ಬಿಡುಗಡೆಯ ಮುನ್ನವೇ ದೇಶಾದ್ಯಂತ ಭರ್ಜರಿ ಹೈಪ್ ಸೃಷ್ಟಿಸಿರುವ ‘ಟಾಕ್ಸಿಕ್’ ಸಿನಿಮಾ ತನ್ನ ಪ್ರಚಾರ ತಂತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ‘ತಬಾಹಿ’ ಹಾಡಿನ ಭಾರೀ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ಬಿಡುಗಡೆ ಮಾಡಿರುವ ‘ಮನಮೋಹಕ’ ರೊಮ್ಯಾಂಟಿಕ್ ವೀಡಿಯೋ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ.

ಮಾಂಟಾಜ್ ಶೈಲಿಯಲ್ಲಿ ಮೂಡಿಬಂದಿರುವ ಈ ಹಾಡು ಯಶ್ ಮತ್ತು ತಾರಾ ಸುತಾರಿಯಾ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ತೆರೆ ಮೇಲೆ ಕಟ್ಟಿಕೊಡುತ್ತದೆ. ಇಬ್ಬರ ಕೆಮಿಸ್ಟ್ರಿಯ ಜೊತೆಗೆ ನಯನತಾರಾ ಹಾಗೂ ಕಿಯಾರಾ ಅಡ್ವಾಣಿ ಅವರ ವಿಶೇಷ ಝಲಕ್‌ಗಳು ಕಥಾಹಂದರದ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಚಿತ್ರದ ಸಸ್ಪೆನ್ಸ್ ಇನ್ನಷ್ಟು ಗಟ್ಟಿಗೊಳಿಸಿವೆ.

ಪ್ರಮೋದ್ ಮರವಂತೆ ಸಾಹಿತ್ಯ, ತನಿಷ್ಕ್ ಬಾಗ್ಚಿ, ಫಹೀನ್ ಅಬ್ದುಲ್ಲಾ ಮತ್ತು ಅರ್ಸ್ಲಾಂ ನಿಝಾಮಿ ಸಂಗೀತ ಸಂಯೋಜನೆಯ ಈ ಗೀತೆ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮಧುರ ಸಂಗೀತ, ಅದ್ದೂರಿ ಛಾಯಾಗ್ರಹಣ ಮತ್ತು ದೃಶ್ಯ ವೈಭವದಿಂದ ಹಾಡು ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿದೆ.

ಚಿತ್ರದ ಪ್ರಚಾರವನ್ನು ಹಂತ ಹಂತವಾಗಿ ಕಟ್ಟಿಕೊಡುತ್ತಿರುವ ತಂಡ, ಇನ್ನೂ ಮೂರು ವಿಶೇಷ ಹಾಡುಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ. ಪ್ರತಿಯೊಂದು ಹಾಡಿನ ಮೂಲಕ ಚಿತ್ರದ ಕುತೂಹಲವನ್ನು ಹೆಚ್ಚಿಸುತ್ತಿರುವ ‘ಟಾಕ್ಸಿಕ್’, ಬಿಡುಗಡೆಯ ಮುನ್ನವೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಚರ್ಚೆಗೆ ಗ್ರಾಸವಾಗಿದ್ದು, ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಐಸಿಸ್ ನೇಮಕಾತಿ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣ; ಬೆಂಗಳೂರು ಸೇರಿ ಕರ್ನಾಟಕದ 8 ಕಡೆ ಇಡಿ ದಾಳಿ

ಬೆಂಗಳೂರು: ಐಸಿಸ್ ಉಗ್ರ ಸಂಘಟನೆಗೆ ಯುವಕರನ್ನು ನೇಮಕ ಮಾಡಿಕೊಳ್ಳುವುದು, ಅಕ್ರಮವಾಗಿ ಹಣ ಸಂಗ್ರಹಣೆ ಹಾಗೂ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ತೀವ್ರಗೊಳಿಸಿದೆ. ಇದರ ಭಾಗವಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ 8 ಸ್ಥಳಗಳಲ್ಲಿ ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿರುವ ಎಫ್‌ಐಆರ್ ಆಧಾರದ ಮೇಲೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ‘ಇಕ್ರಾ ವೆಲ್ಫೇರ್ ಟ್ರಸ್ಟ್’, ‘ಗೈಡೆನ್ಸ್ ಫಾರ್ ಮ್ಯಾನ್‌ಕೈಂಡ್’ ಸಂಸ್ಥೆಗಳು ಹಾಗೂ ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಐಸಿಸ್ ಸಂಘಟನೆಗೆ ಯುವಕರನ್ನು ಸೇರಿಸುವ ಸಂಚು ಪ್ರಕರಣದಲ್ಲಿ ಈಗಾಗಲೇ ಐವರು ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿದೆ. ಬಂಧಿತ ಆರೋಪಿಗಳು ಐಸಿಸ್ ಜೊತೆ ಸಂಪರ್ಕ ಹೊಂದಿದ್ದು, ಮುಸ್ಲಿಂ ಯುವಕರನ್ನು ಪ್ರಚೋದಿಸಿ ಉಗ್ರವಾದದತ್ತ ಸೆಳೆಯಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ಆರೋಪಿಸಿದೆ.

ತನಿಖೆಯ ಪ್ರಕಾರ, ವ್ಯಕ್ತಿತ್ವ ವಿಕಸನದ ಹೆಸರಿನಲ್ಲಿ ನಡೆಸಲಾಗುತ್ತಿದ್ದ ‘ಇಕ್ರಾ ಕ್ಯಾಂಪ್’ ಹಾಗೂ ವಾರಾಂತ್ಯದ ‘ಕುರಾನ್ ಸರ್ಕಲ್’ ಕೂಟಗಳ ಮೂಲಕ ಯುವಕರಿಗೆ ತರಬೇತಿ ನೀಡಿ ಐಸಿಸ್ ಸಿದ್ಧಾಂತಗಳತ್ತ ಸೆಳೆಯಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಇದಲ್ಲದೆ, ಯುವಕರನ್ನು ವಿದೇಶಕ್ಕೆ ಕಳುಹಿಸಲು ಅಕ್ರಮ ಮಾರ್ಗಗಳ ಮೂಲಕ ಹಣ ಸಂಗ್ರಹಿಸಲಾಗುತ್ತಿತ್ತು. ಟರ್ಕಿ ಮಾರ್ಗವಾಗಿ ಸಿರಿಯಾಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿತ್ತು ಎಂಬ ಆರೋಪವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ದೇಶದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ನಡೆದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು, ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಐಸಿಸ್ ಸಿದ್ಧಾಂತಗಳತ್ತ ಸೆಳೆಯುವ ಪ್ರಯತ್ನ ನಡೆದಿತ್ತು ಎಂದು ತನಿಖಾ ಸಂಸ್ಥೆಗಳು ಮಾಹಿತಿ ನೀಡಿವೆ.

ಯುವಕರನ್ನು ಸಿರಿಯಾಗೆ ಕಳುಹಿಸಲು ಕೆಲವು ವ್ಯಕ್ತಿಗಳು ಹಾಗೂ ಟ್ರಸ್ಟ್‌ಗಳ ಮೂಲಕ ಹಣ ಸಂಗ್ರಹಿಸಿ ವರ್ಗಾವಣೆ ಮಾಡಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಹಣಕಾಸು ವ್ಯವಹಾರಗಳ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.

ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ: ಟ್ರ್ಯಾಕ್ಟರ್ʼ́ಗೆ ಲಾರಿ ಡಿಕ್ಕಿ, ತಂದೆ-ಮಗಳು ಸ್ಥಳದಲ್ಲೇ ಸಾವು

0

ವಿಜಯಪುರ: ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮುದ್ದೇಬಿಹಾಳ ಕ್ರಾಸ್ ಬಳಿ ನಡೆದಿದೆ.

ಮೃತರು ಟ್ರ್ಯಾಕ್ಟರ್‌ನಲ್ಲಿ ಕಬ್ಬು ಕಟಾವಿನ ಕೆಲಸಕ್ಕಾಗಿ ಇಂಡಿಯಿಂದ ಮಂಡ್ಯಕ್ಕೆ ತೆರಳುತ್ತಿದ್ದ ಕಾರ್ಮಿಕರಾಗಿದ್ದರು ಎಂದು ತಿಳಿದುಬಂದಿದೆ. ಟ್ರ್ಯಾಕ್ಟರ್‌ನಲ್ಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ವೇಳೆ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಇದ್ದ ಕಾರಣ ಚಾಲಕ ವಾಹನವನ್ನು ನಿಧಾನವಾಗಿ ಚಲಾಯಿಸುತ್ತಿದ್ದರು.

ಈ ವೇಳೆ ಹಿಂಬದಿಯಿಂದ ಅತಿವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್‌ನಲ್ಲಿದ್ದ ತಂದೆ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ನಿಡಗುಂದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ನಿಡಗುಂದಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ಹಾಗೂ ಲಾರಿ ಚಾಲಕನ ನಿರ್ಲಕ್ಷ್ಯದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮದುವೆ ಆಮಂತ್ರಣದ ಹೆಸರಿನಲ್ಲಿ ಸೈಬರ್ ವಂಚನೆ; ವಾಟ್ಸಪ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯ ಖಾತೆಯಿಂದ 9 ಲಕ್ಷ ರೂ. ಮಾಯ

ಬೆಂಗಳೂರು: ವಾಟ್ಸಾಪ್‌ಗೆ ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳು ಮತ್ತು APK ಫೈಲ್‌ಗಳನ್ನು ತೆರೆಯುವ ಮುನ್ನ ಎಚ್ಚರಿಕೆ ವಹಿಸುವಂತೆ ಸೈಬರ್ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಮದುವೆ ಆಹ್ವಾನ ಪತ್ರಿಕೆ ಎಂದು ನಂಬಿ APK ಫೈಲ್ ತೆರೆದ ಸರ್ಕಾರಿ ಅಧಿಕಾರಿಯೊಬ್ಬರು ಸುಮಾರು ₹9.96 ಲಕ್ಷ ಹಣವನ್ನು ಸೈಬರ್ ವಂಚಕರಿಗೆ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸೈಬರ್ ವಂಚಕರು ಜನರನ್ನು ಮೋಸಗೊಳಿಸಲು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದು, ವಾಟ್ಸಾಪ್ ಮೂಲಕ APK ಫೈಲ್ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚಿನ ಪ್ರಕರಣದಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಬಾಬು ಅವರು ವಂಚಕರ ಬಲೆಗೆ ಬಿದ್ದಿದ್ದಾರೆ.

ಜುಲೈ 14ರಂದು ಸಂಜೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ರಮೇಶ್ ಬಾಬು ಅವರಿಗೆ ವಾಟ್ಸಾಪ್‌ನಲ್ಲಿ ಮದುವೆ ಆಹ್ವಾನದ ಹೆಸರಿನಲ್ಲಿ ಸಂದೇಶ ಹಾಗೂ APK ಫೈಲ್ ಬಂದಿದೆ. ಅದು ಸ್ನೇಹಿತ ಅಥವಾ ಪರಿಚಿತರದ್ದಿರಬಹುದು ಎಂದು ಭಾವಿಸಿದ ಅವರು ಫೈಲ್ ಅನ್ನು ತೆರೆದಿದ್ದಾರೆ.

ಫೈಲ್ ಓಪನ್ ಮಾಡಿದ ಬಳಿಕ ಅದು APK ಫೈಲ್ ಎಂಬುದು ತಿಳಿದರೂ ಹೆಚ್ಚಿನ ಗಮನ ನೀಡಿಲ್ಲ. ಆದರೆ ಸುಮಾರು 15 ನಿಮಿಷಗಳಲ್ಲೇ ಅವರ ಮೊಬೈಲ್‌ಗೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿರುವ ಎಸ್‌ಎಂಎಸ್‌ಗಳು ಬರಲಾರಂಭಿಸಿವೆ.

ತಕ್ಷಣ ಬ್ಯಾಂಕ್ ಖಾತೆ ಪರಿಶೀಲಿಸಿದಾಗ, ವಿವಿಧ ಹಂತಗಳಲ್ಲಿ ಒಟ್ಟು ₹9.96 ಲಕ್ಷ ಹಣವನ್ನು ವಂಚಕರು ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ. ಬಳಿಕ ರಮೇಶ್ ಬಾಬು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸೈಬರ್ ತಜ್ಞರು, ಅಪರಿಚಿತ ಸಂಖ್ಯೆಯಿಂದ ಬರುವ APK ಫೈಲ್‌ಗಳು, ಲಿಂಕ್‌ಗಳು ಅಥವಾ ಮದುವೆ ಆಹ್ವಾನದಂತಹ ಸಂದೇಶಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ: ಅದು ರಾಷ್ಟ್ರದ ಸಮೂಹ ಜವಾಬ್ದಾರಿ ಎಂದ ಪ್ರಧಾನಿ ಮೋದಿ

0

ನವದೆಹಲಿ: ನೀಟ್ (NEET) ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಆಡಳಿತಾರೂಢ ಎನ್‌ಡಿಎ ಸಂಸದೀಯ ಪಕ್ಷದ ‘ಮಂಗಲ್ ಮಿಲನ್’ ಸಭೆಯಲ್ಲಿ ಮಾತನಾಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವುದು ಸರ್ಕಾರದ ಕರ್ತವ್ಯ ಮಾತ್ರವಲ್ಲ, ಅದು ದೇಶದ ‘ರಾಷ್ಟ್ರೀಯ ಜವಾಬ್ದಾರಿ’ ಎಂದು ಹೇಳಿದ್ದಾರೆ.

ಸಭೆಯ ಬಳಿಕ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಪ್ರಧಾನಿಯವರ ಸಂದೇಶವನ್ನು ಮಾಧ್ಯಮಗಳಿಗೆ ವಿವರಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವವರ ವಿರುದ್ಧ ಯಾವುದೇ ರೀತಿಯ ಸಡಿಲಿಕೆ ತೋರಬಾರದು ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಆರೋಪಿಗಳಿಗೆ ಕಾನೂನಿನಡಿ ಸಾಧ್ಯವಾಗುವ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಪಾರದರ್ಶಕ, ವಿಶ್ವಾಸಾರ್ಹ ಹಾಗೂ ದೋಷರಹಿತ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಲು ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ.

ಇದೇ ವೇಳೆ ಸಂಸತ್ತಿನ ಮುಂಗಾರು ಅಧಿವೇಶನದ ಸುಗಮ ನಿರ್ವಹಣೆ ಕುರಿತೂ ಸಭೆಯಲ್ಲಿ ಚರ್ಚೆ ನಡೆದಿದ್ದು, ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ದೇಶದ ಭವಿಷ್ಯ ಮತ್ತು ಯುವಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸಂಸದರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಶಾಸಕಾಂಗ ಕಾರ್ಯಗಳಿಗೆ ಎನ್‌ಡಿಎ ಮೈತ್ರಿಕೂಟದ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಬೆಂಬಲ ನೀಡಬೇಕು. ಜೊತೆಗೆ ವಿರೋಧ ಪಕ್ಷಗಳೂ ಗದ್ದಲಕ್ಕೆ ಅವಕಾಶ ನೀಡದೆ, ದೇಶದ ಹಿತದೃಷ್ಟಿಯಿಂದ ಸಂಸತ್ತಿನ ಚರ್ಚೆಗಳಲ್ಲಿ ರಚನಾತ್ಮಕವಾಗಿ ಭಾಗವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಆಶಿಸಿದ್ದಾರೆ.