Home Blog Page 92

ಭಾರತದಂತೆಯೇ ಈ ದೇಶಗಳಲ್ಲೂ ಹೋಳಿ ಹಬ್ಬ ಸಂಭ್ರಮದಿಂದ ಆಚರಿಸಲಾಗುತ್ತೆ!

0

ಭಾರತದಲ್ಲಿ ಅತ್ಯಂತ ಸಂಭ್ರಮದ ಹಬ್ಬಗಳಲ್ಲಿ ಹೋಳಿ ಒಂದು. ಈ ವರ್ಷ ಮಾರ್ಚ್ 3 ಮತ್ತು 4ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ.

ಹಬ್ಬದ ಸಮಯದಲ್ಲಿ ಜನರು ಪರಸ್ಪರ ಬಣ್ಣಗಳನ್ನು ಮೈಮೇಲೆ ಹಚ್ಚಿಕೊಂಡು ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಯಾವುದೇ ಜಾತಿ-ಮತ ಭೇದವಿಲ್ಲದೆ ಜನರು ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಪಾಲ್ಗೊಳ್ಳುತ್ತಾರೆ. ಭಾರತೀಯರಂತೆ, ವಿಶ್ವದ ನಾನಾ ಭಾಗಗಳಲ್ಲಿಯೂ ಹೋಳಿ ಹಬ್ಬವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ನೇಪಾಳದಲ್ಲಿ ಫಾಗು ಪೂರ್ಣಿಮಾ ಎಂದು ಕರೆಯಲ್ಪಡುವ ಹಬ್ಬವನ್ನು ಹಿಂದೂ ಮತ್ತು ಬೌದ್ಧ ಸಮುದಾಯಗಳು ಆಚರಿಸುತ್ತಾರೆ.

ಬಾಂಗ್ಲಾದೇಶದಲ್ಲಿ ಡೋಲ್ ಪೂರ್ಣಿಮಾ ಅಥವಾ ವಸಂತ ಹಬ್ಬದಂತೆ, ರಾಧಾ-ಕೃಷ್ಣ ಮೆರವಣಿಗೆಗಳು ಮತ್ತು ಸಾಂಪ್ರದಾಯಿಕ ಹಾಡುಗಳು ನಡೆಯುತ್ತವೆ. ಪಾಕಿಸ್ತಾನದಲ್ಲಿ ಸಿಂಧ್ ಪ್ರಾಂತ್ಯದ ಹಿಂದೂ ಸಮುದಾಯ ದೇವಾಲಯಗಳಲ್ಲಿ ಹೋಳಿ ಆಚರಿಸುತ್ತಾರೆ. ಮಾರಿಷಸ್, ಫಿಜಿ, ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಭಾರತೀಯ ಮೂಲದ ಜನರು ಹೋಳಿ ಮೇಳ, ಫಾಗ್ವಾ ಹಬ್ಬ, ನೃತ್ಯ ಮತ್ತು ಸಂಗೀತದೊಂದಿಗೆ ಹಬ್ಬವನ್ನು ಆಚರಿಸುತ್ತಾರೆ.

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಲಂಡನ್, ಲೀಸೆಸ್ಟರ್ ಮುಂತಾದ ನಗರಗಳಲ್ಲಿ ಹೋಳಿ ಸಂಭ್ರಮದಾಯಕವಾಗಿ ಆಯೋಜಿಸಲಾಗುತ್ತದೆ. ಅಮೆರಿಕ ಮತ್ತು ಕೆನಡಾದಲ್ಲಿಯೂ ಉತಾಹ್, ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ ಮುಂತಾದ ನಗರಗಳಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಭಾರತೀಯ ಸಮುದಾಯಗಳು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ, ಬಣ್ಣ, ನೃತ್ಯ ಮತ್ತು ಸಂಸ್ಕೃತಿಯ ಆಕರ್ಷಕ ಮೇಳವನ್ನಾಗಿ ಮಾಡುತ್ತವೆ.

ಫ್ಲೈಟ್ ರದ್ದು, ಕನ್ನಡಿಗರ ಪರದಾಟ: ದುಬೈನಲ್ಲಿ ಸಿಲುಕಿದವರಿಗೆ ಸಹಾಯ ಹಸ್ತ ಚಾಚಿದ ಒಕ್ಕಲಿಗರ ಸಂಘ

0

ಹಾಸನ: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಪರಿಣಾಮ ದುಬೈ ಹಾಗೂ ಅಬುಧಾಬಿಯಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ 50ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲಿ ಸಿಲುಕಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ದುಬೈ ಒಕ್ಕಲಿಗರ ಸಂಘ ತುರ್ತು ನೆರವಿಗಾಗಿ ಮುಂದಾಗಿದ್ದು, ಸಂಘದ ಅಧ್ಯಕ್ಷ ಯತೀಶ್ ಸಹಾಯಕ್ಕಾಗಿ +971555114205 ಸಂಖ್ಯೆಗೆ ಸಂಪರ್ಕಿಸಬೇಕೆಂದು ಮನವಿ ಮಾಡಿದ್ದಾರೆ.

ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಪ್ರವಾಸಿಗರು ವಾಪಸ್ಸಾಗಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. 20 ಮಹಿಳೆಯರು ಮತ್ತು 30 ಪುರುಷರು ದುಬೈನಲ್ಲಿ ಉಳಿದಿದ್ದಾರೆ.

ಬಾಗಲಕೋಟೆಯ ಬೀಳಗಿ ಮೂಲದ ಗಿರೀಶ್ ಕೆರೂರು ಪ್ಯಾರಿಸ್‌ಗೆ ತೆರಳುವ ವೇಳೆ ಅಬುಧಾಬಿಯಲ್ಲಿ ಸಿಲುಕಿದ್ದು, ತಮ್ಮ ಸ್ಥಿತಿಗತಿಯನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ಈ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ. ಮಾರ್ಚ್ 2ರವರೆಗೆ ವಿಮಾನ ಹಾರಾಟ ಇರುವುದಿಲ್ಲ ಎಂಬ ಮಾಹಿತಿ ದೊರೆತಿದೆ.

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಕನ್ನಡಿಗರ ಮೇಲೂ ತೀವ್ರವಾಗಿ ತಟ್ಟಿದ್ದು, ಎಲ್ಲರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿಬರುತ್ತಿವೆ.

ಚುನಾವಣೆಗೆ ಮುನ್ನ ಪುದುಚೇರಿಯಲ್ಲಿ 2,700 ಕೋಟಿ ಯೋಜನೆಗಳಿಗೆ ಚಾಲನೆ: ಡಿಎಂಕೆ–ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

0

ಪುದುಚೇರಿ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಚಟುವಟಿಕೆ ಜೋರಾಗಿರುವ ನಡುವೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಭೇಟಿ ನೀಡಿ ₹2,700 ಕೋಟಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಿಎಂಕೆ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ಮತ್ತು ಡಿಎಂಕೆ ಆಡಳಿತದ ಅವಧಿಯಲ್ಲಿ ಪುದುಚೇರಿಯ ಜನರು ಭ್ರಷ್ಟಾಚಾರ, ಅಪರಾಧ ಮತ್ತು ಯಾತನೆ ಅನುಭವಿಸಿದರು. ಗೂಂಡಾಗಳು ಮತ್ತು ಮಾದಕವಸ್ತು ಮಾಫಿಯಾಗಳು ಬೀದಿಗಳನ್ನು ಆಳುತ್ತಿದ್ದವು,” ಎಂದು ಆರೋಪಿಸಿದರು.

“ಕಾಂಗ್ರೆಸ್ ಪುದುಚೇರಿಯನ್ನು ದೆಹಲಿಯ ಒಂದು ಕುಟುಂಬಕ್ಕೆ ಎಟಿಎಂ ಆಗಿ ಪರಿವರ್ತಿಸಿತು. ಡಿಎಂಕೆ ಹಗರಣಗಳ ಸುದೀರ್ಘ ಪಟ್ಟಿ ಹೊಂದಿದೆ. ಈ ಎರಡೂ ಪಕ್ಷಗಳು ಪುದುಚೇರಿಯ ಅಭಿವೃದ್ಧಿಗೆ ಅಡ್ಡಿಯಾಗಿವೆ,” ಎಂದು ಹೇಳಿದರು.

ಪುದುಚೇರಿ ಮತ್ತೆ ಭ್ರಷ್ಟಾಚಾರ ಮತ್ತು ಅಪರಾಧದ ಯುಗಕ್ಕೆ ಮರಳಬೇಕೇ? ಜನರು ಅದನ್ನು ಬಯಸುವುದಿಲ್ಲ ಎಂದು ಅವರು ಹೇಳಿದರು. 2047ರೊಳಗೆ ಭಾರತ ಮತ್ತು ಪುದುಚೇರಿಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ ಎಂದರು.

ಕೇಂದ್ರವು ನಗರ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ. ಪ್ರವಾಸೋದ್ಯಮ ಪುದುಚೇರಿಯ ಶಕ್ತಿ ಎಂದು ಬಣ್ಣಿಸಿದ ಪ್ರಧಾನಿ, ಆಧ್ಯಾತ್ಮಿಕ, ಪರಿಸರ ಹಾಗೂ ಆರೋಗ್ಯ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ಖಮೇನಿ ಹತ್ಯೆ ಖಂಡಿಸಿ ಪಾಕಿಸ್ತಾನದಲ್ಲಿ ಹಿಂಸಾಚಾರ: ಕರಾಚಿಯಲ್ಲಿ ರಾಯಭಾರಿ ಕಚೇರಿ ಮೇಲೆ ದಾಳಿ, 10 ಮಂದಿ ಸಾವು

0

ಕರಾಚಿ: ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಪ್ರೀಂ ನಾಯಕ ಅಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಕರಾಚಿಯಲ್ಲಿರುವ ರಾಯಭಾರಿ ಕಚೇರಿ ಮೇಲೆ ನೂರಾರು ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಕೈಯಲ್ಲಿ ಕೋಲು ಹಾಗೂ ಕಲ್ಲುಗಳನ್ನು ಹಿಡಿದು ಕಚೇರಿಯತ್ತ ನುಗ್ಗಿದ ಗುಂಪು ಕಲ್ಲು ತೂರಾಟ ನಡೆಸಿದ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಖಮೇನಿ ಹತ್ಯೆಗೆ ಅಮೆರಿಕವೇ ಕಾರಣ ಎಂದು ಆರೋಪಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಓಪನ್ ಫೈರಿಂಗ್ ನಡೆಸಿದವು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಅಮೆರಿಕ ಮಿತ್ರ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಸಂದೇಶ ರವಾನಿಸಿದ್ದು, “ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆದರೆ ತೀವ್ರ ಪ್ರತಿಕ್ರಿಯೆ ನೀಡಲಾಗುವುದು” ಎಂದು ಹೇಳಿದ್ದಾರೆ.

ಪಾಕಿಸ್ತಾನದ ಹಲವೆಡೆ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಕರಾಚಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಕ್ರಮಗಳ ವಿರುದ್ಧ ಪ್ರತಿಭಟನೆಗಳು ಮುಂದುವರಿದಿವೆ. ಅಮೆರಿಕ–ಇಸ್ರೇಲ್ ದಾಳಿಯಲ್ಲಿ 200 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದಕ್ಕೆ ಪ್ರತಿಯಾಗಿ ಇರಾನ್ ಬಲವಾದ ಪ್ರತ್ಯುತ್ತರ ನೀಡುವುದಾಗಿ ಘೋಷಿಸಿದೆ. ಪ್ರದೇಶದಲ್ಲಿನ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಲಾಗುತ್ತಿದೆ.

ಉತ್ತರಾಧಿಕಾರಿಗಳ ಪೈಕಿ ಖಮೇನಿ ಅವರ ಎರಡನೇ ಪುತ್ರ ಮೊಜ್ತಬಾ ಖಮೇನಿ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. 1969ರಲ್ಲಿ ಜನಿಸಿದ ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾಗೂ ಇರಾನ್ ಧಾರ್ಮಿಕ ವ್ಯವಸ್ಥೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.

ದುಬೈನಲ್ಲಿ ಕನ್ನಡಿಗರು ಸಂಪರ್ಕಕ್ಕೆ ಸಿಗುತ್ತಿಲ್ಲ: ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿ – ಡಿಕೆ ಶಿವಕುಮಾರ್

ಬೆಂಗಳೂರು: ಇಸ್ರೇಲ್–ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ, ವಿಶೇಷವಾಗಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, “ನಮ್ಮ ಇಬ್ಬರು ಶಾಸಕರಾದ ಭೋಜೇಗೌಡ ಹಾಗೂ ಎ.ಸಿ. ಶ್ರೀನಿವಾಸ ಕೂಡ ದುಬೈನಲ್ಲಿ ಇದ್ದಾರೆ. ನಾನು ವೈಯಕ್ತಿಕವಾಗಿ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸಂಪರ್ಕಕ್ಕೆ ಸಿಗುತ್ತಿಲ್ಲ,” ಎಂದು ತಿಳಿಸಿದ್ದಾರೆ.

ಈ ಕುರಿತು ದೆಹಲಿಯ ರೆಸಿಡೆಂಟ್ ಕಮಿಷನರ್ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ತಿಳಿಸಿದ ಅವರು, ಎಲ್ಲ ನಾಗರಿಕರ ರಕ್ಷಣೆ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು. ಮಧ್ಯಪ್ರಾಚ್ಯದಲ್ಲಿ ಲಕ್ಷಾಂತರ ಭಾರತೀಯರು, ಅದರಲ್ಲೂ ಕರ್ನಾಟಕ ಹಾಗೂ ಕೇರಳ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಬೇಕು ಎಂದು ಒತ್ತಾಯಿಸಿದರು.

ನಡೆಯುತ್ತಿರುವ ದಾಳಿಗಳನ್ನು ಖಂಡಿಸಿದ ಡಿಸಿಎಂ, ಮಕ್ಕಳ ಶಾಲೆಗಳ ಮೇಲಿನ ದಾಳಿಗಳು ಖಂಡನೀಯ ಎಂದರು. “ನಮ್ಮ ದೇಶ ಶಾಂತಿಯನ್ನು ನಂಬುತ್ತದೆ. ಇಂತಹ ದಾಳಿಗಳು ಸರಿಯಲ್ಲ. ಆದರೆ ಆತಂಕಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಮೇಲೆ ಅಗತ್ಯ ಒತ್ತಡ ಹೇರಿ ಕ್ರಮ ಕೈಗೊಳ್ಳುವಂತೆ ಮಾಡುತ್ತೇವೆ,” ಎಂದು ಭರವಸೆ ನೀಡಿದರು.

ರಾಜ್ಯ ಸರ್ಕಾರದಿಂದ ಪ್ರತ್ಯೇಕ ಹೆಲ್ಪ್‌ಲೈನ್ ಆರಂಭಿಸುವ ಸಾಧ್ಯತೆ ಇಲ್ಲ. ಯಾವುದೇ ಅಧಿಕೃತ ಮಾಹಿತಿ ವಿದೇಶಾಂಗ ಇಲಾಖೆಯಿಂದಲೇ ಬರಬೇಕು ಎಂದು ಸ್ಪಷ್ಟಪಡಿಸಿದ ಅವರು, ವಿದೇಶದಲ್ಲಿರುವ ಕನ್ನಡಿಗರಿಗೆ ಆತ್ಮಸ್ಥೈರ್ಯ ತುಂಬಲು ಕನ್ನಡ ಸಂಘಟನೆಗಳು ಮುಂದಾಗಬೇಕು ಎಂದು ಮನವಿ ಮಾಡಿದರು.

ಮಂಡ್ಯ ಹಾಲು ಒಕ್ಕೂಟ ನಿರ್ದೇಶಕ ದುಬೈನಲ್ಲಿ ಲಾಕ್: ವಿಡಿಯೋ ಮೂಲಕ ಪರಿಸ್ಥಿತಿ ವಿವರಿಸಿದ ಡಾಲು ರವಿ!

ಮಂಡ್ಯ: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಇರಾನ್ ನಡೆಸುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ದುಬೈನಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದೆ.

ಈ ತಾತ್ಕಾಲಿಕ ಸ್ಥಗಿತದಿಂದಾಗಿ ಹಲವು ಪ್ರಯಾಣಿಕರು ಅಲ್ಲೇ ಸಿಲುಕಿಕೊಂಡಿದ್ದಾರೆ. ಅಂತಹ ಪ್ರಯಾಣಿಕರಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ದುಬೈಗೆ ತೆರಳಿದ್ದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಮತ್ತು ಚಲನಚಿತ್ರ ಮನ್ ಮುಲ್ ನಿರ್ದೇಶಕ ಡಾಲು ರವಿ ಕೂಡ ಕೂಡ ಒಬ್ಬರು..

ಅವರು ದುಬೈನ ಖಾಸಗಿ ಹೋಟೆಲ್‌ನಲ್ಲಿ ಸುರಕ್ಷಿತವಾಗಿ ಉಳಿದಿದ್ದಾರೆ ಎಂದು ಸ್ಥಳದಿಂದ ವೀಡಿಯೋ ಸಂದೇಶ ಮೂಲಕ ಮಾಹಿತಿ ನೀಡಿದ್ದಾರೆ. ಡಾಲು ರವಿ ಹೇಳುವಂತೆ, ಯುದ್ಧದ ಪರಿಣಾಮ ಮತ್ತು ವಿಮಾನ ಸಂಚಾರ ಸ್ಥಗಿತದ ಕಾರಣವಾಗಿ ಸ್ಥಳದಲ್ಲಿ ಜನರ ನಡುವೆ ಆತಂಕವಾಗಿದೆ, ಆದರೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ಸುರಕ್ಷಿತರಾಗಿದ್ದೇವೆ ಎಂದು ಸ್ಥಳದ ಪರಿಸ್ಥಿತಿ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ವಿಜಯ್‌ ಪತ್ನಿ ಕೋರ್ಟ್‌ ಮುಂದೆ ಇಟ್ಟಿರುವ ಬೇಡಿಕೆಗಳೇನು?

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನ ಚರ್ಚೆಗೆ ಕಾರಣವಾಗಿದೆ. ಪತ್ನಿ ಸಂಗೀತ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರುವುದಾಗಿ ತಿಳಿದುಬಂದಿದೆ.

ಅರ್ಜಿಯಲ್ಲಿ 2021ರಲ್ಲಿ ಪತಿ ವಿವಾಹೇತರ ಸಂಬಂಧ ಹೊಂದಿರುವುದು ತಿಳಿದುಬಂದಿದೆ ಎಂದು ಸಂಗೀತ ಉಲ್ಲೇಖಿಸಿರುವುದಾಗಿ ವರದಿಯಾಗಿದೆ. ಆ ಹಿನ್ನೆಲೆಯಲ್ಲಿ ವಿಚ್ಛೇದನ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.

ಜೀವನಾಂಶವಾಗಿ ತಮ್ಮ ಸಾಮಾಜಿಕ ಸ್ಥಾನಮಾನಕ್ಕೆ ತಕ್ಕಂತೆ ಮೊತ್ತ ನಿಗದಿಪಡಿಸಬೇಕು, ಪ್ರಸ್ತುತ ಮನೆಯಲ್ಲಿ ವಾಸಿಸಲು ಅವಕಾಶ ಕೊಡಬೇಕು, ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ವಿಶೇಷ ನಿಧಿ ಸೃಷ್ಟಿಸಬೇಕು ಎಂದು ಬೇಡಿಕೆ ಇರಿಸಿದ್ದಾರೆ.

1999ರಲ್ಲಿ ವಿವಾಹವಾದ ಈ ಜೋಡಿಗೆ ಒಬ್ಬ ಗಂಡು ಮತ್ತು ಒಬ್ಬ ಹೆಣ್ಣು ಮಗು ಇದ್ದಾರೆ. 27 ವರ್ಷಗಳ ದಾಂಪತ್ಯ ಈಗ ಅಂತ್ಯಗೊಳ್ಳುವ ಹಂತ ತಲುಪಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ವಿಜಯ್ ಮತ್ತು ನಟಿ ತ್ರಿಷಾ ನಡುವೆ ಸಂಬಂಧವಿದೆ ಎಂಬ ವದಂತಿಗಳು ಈ ಹಿಂದೆಯೇ ಹರಿದಾಡಿದ್ದವು. ಈ ಕುರಿತಂತೆ ಯಾವುದೇ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ನಿರೀಕ್ಷಿಸಲಾಗಿದೆ.

ಕಮರ್ಷಿಯಲ್ ಎಲ್‌ಪಿಜಿ ಬೆಲೆ 3ನೇ ತಿಂಗಳು ಏರಿಕೆ: 6 ತಿಂಗಳಲ್ಲಿ ನಾಲ್ಕು ಬಾರಿ ಹೆಚ್ಚಳ!

0

ನವದೆಹಲಿ: ದೆಹಲಿ, ಮುಂಬೈ, ಕೋಲ್ಕತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಕಮರ್ಷಿಯಲ್ ಎಲ್‌ಪಿಜಿ ದರಗಳು ಹೆಚ್ಚಳ ಆಗಿದೆ.

ತಿಂಗಳ ಮೊದಲ ದಿನವಾದ ಮಾರ್ಚ್ 1ರಂದು ಭಾರತದಲ್ಲಿ 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ದರಗಳು 28ರಿಂದ 31ರೂವರೆಗೆ ಏರಿವೆ. ಬೆಂಗಳೂರಿನಲ್ಲಿ 19 ಕಿಲೋ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಬೆಲೆ 1,842.50 ರೂ.ಕ್ಕೆ ಏರಿದ್ದು, 47.5 ಕಿಲೋ ಸಿಲಿಂಡರ್ ಬೆಲೆ 4,600 ರೂ. ದಾಟಿ ಹೋಗಿದೆ.

ಈ ವರ್ಷದ ಮೊದಲ ಆರು ತಿಂಗಳುಗಳು ಉಳಿತಾಯದ ದರಗಳಲ್ಲಿ ಇಳಿಕೆಯೊಂದನ್ನು ಕಂಡಿದ್ದರೆ, ಕಳೆದ ಆರು ತಿಂಗಳಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ನಾಲ್ಕು ಬಾರಿ ಏರಿಕೆಯಾಗಿದೆ. ಗೃಹಬಳಕೆ 14.2 ಕಿಲೋ ಹಾಗೂ 5 ಕಿಲೋ ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ಮಧ್ಯಪ್ರಾಚ್ಯದಲ್ಲಿ ಆರಂಭವಾದ ಸಂಘರ್ಷ ಮತ್ತು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಪ್ರಭಾವದಿಂದ, ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸೇರಿದಂತೆ ಇಂಧನ ದರಗಳಲ್ಲಿ ಗಣನೀಯವಾಗಿ ಏರಿಕೆ ಆಗುವ ಸಂಭವ ಇದೆ.

ಖಮೇನಿ ಸಾವಿನ ಸುದ್ದಿ: ಚಿಕ್ಕಬಳ್ಳಾಪುರದ ಅಲೀಪುರ ಗ್ರಾಮದಲ್ಲಿ ನೀರವ ಮೌನ, 3 ದಿನ ‘ಕರಾಳ ದಿನ’ ಆಚರಣೆ

ಚಿಕ್ಕಬಳ್ಳಾಪುರ: ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ನಾಯಕ ಅಯಾತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿರುವ ಸುದ್ದಿಯ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಗ್ರಾಮದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಮೂರು ದಿನಗಳ ಕಾಲ ‘ಕರಾಳ ದಿನ’ ಆಚರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಗ್ರಾಮದಲ್ಲಿ ಶೋಕಭಾವನೆ ಮೇಳೈಸಿದೆ.

‘ಬೇಬಿ ಅಪ್ ಇರಾನ್’ ಎಂದು ಕರೆಯಲ್ಪಡುವ ಅಲೀಪುರ ಗ್ರಾಮಕ್ಕೆ 1986ರಲ್ಲಿ ಅಯಾತೊಲ್ಲಾ ಅಲಿ ಖಮೇನಿ ಭೇಟಿ ನೀಡಿದ್ದರು ಎನ್ನಲಾಗುತ್ತದೆ. ಅವರ ಹೆಸರಿನಲ್ಲಿ ಗ್ರಾಮದಲ್ಲೇ ಒಂದು ಆಸ್ಪತ್ರೆ ಕೂಡ ಇದೆ. ಖಮೇನಿ ಅವರಿಗೆ ಇಲ್ಲಿನ ಜನರಲ್ಲಿ ವಿಶೇಷ ಪೂಜ್ಯಭಾವವಿದೆ.

ಗ್ರಾಮದ ಕೆಲವರು ಧಾರ್ಮಿಕ ಶಿಕ್ಷಣಕ್ಕಾಗಿ ಇರಾನ್‌ನಲ್ಲಿ ನೆಲೆಸಿದ್ದು, ಕೆಲವು ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇರಾನ್‌ನಲ್ಲಿ ಯುದ್ಧದಂತಹ ಪರಿಸ್ಥಿತಿ ಉಂಟಾದಾಗಲೆಲ್ಲಾ ಅಲೀಪುರದ ಜನರಲ್ಲಿ ಆತಂಕ ಮನೆ ಮಾಡುತ್ತದೆ. ಇದೀಗ ಖಮೇನಿ ಸಾವಿನ ಸುದ್ದಿ ಗ್ರಾಮವನ್ನು ಸ್ತಬ್ಧಗೊಳಿಸಿದೆ.

ಮೊಬೈಲ್ ಮುಂದೆ ಕೆಮ್ಮಿದ್ರೆ ಸಾಕು ಕಾಯಿಲೆ ಪತ್ತೆ ಹಚ್ಚುತ್ತೆ ಈ AI ಟೂಲ್: ಏಮ್ಸ್ ನಿಂದಲೂ ಗ್ರೀನ್ ಸಿಗ್ನಲ್!

0

ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಕೆಯು ಹೆಚ್ಚಾಗುತ್ತಿದ್ದು, ರೋಗ ಪತ್ತೆ ಹಾಗೂ ಚಿಕಿತ್ಸೆ ಸುಗಮಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ.

ಇತ್ತೀಚೆಗೆ ಉಸಿರಾಟ ಸಂಬಂಧಿ ಕಾಯಿಲೆಗಳನ್ನು ಗುರುತಿಸಲು ಹೊಸ ಎಐ ಆಧಾರಿತ ಅಪ್ಲಿಕೇಶನ್ “ಸ್ವಾಸ” ಅಭಿವೃದ್ಧಿಪಡಿಸಲಾಗಿದೆ. ಈ ಅಪ್ಲಿಕೇಶನ್ ಅತ್ಯಂತ ಸರಳ ವಿಧಾನದಲ್ಲಿ ಕೆಲಸ ಮಾಡುತ್ತದೆ. ರೋಗಿಯು ಮೊಬೈಲ್ ಫೋನ್ ಮುಂದೆ ಕೆಲ ಬಾರಿ ಕೆಮ್ಮುವುದರ ಮೂಲಕ, ಅಪ್ಲಿಕೇಶನ್ ಕೆಮ್ಮಿನ ಶಬ್ದವನ್ನು ದಾಖಲಿಸುತ್ತದೆ. ಆ ಶಬ್ದವನ್ನು ಎಐ ಅಲ್ಗಾರಿದಮ್ ಮೂಲಕ ವಿಶ್ಲೇಷಿಸಿ, ರೋಗಿಯ ಉಸಿರಾಟ ಸಂಬಂಧಿ ಕಾಯಿಲೆಗಳ ಬಗ್ಗೆ ವಿವರವಾದ ವರದಿಯನ್ನು ರೋಗಿಗೆ ಸುಲಭವಾಗಿ 8 ನಿಮಿಷಗಳ ಒಳಗೆ ನೀಡುತ್ತದೆ.

ಸಾಮಾನ್ಯವಾಗಿ ಉಸಿರಾಟ ಸಂಬಂಧಿ ಕಾಯಿಲೆ ಗುರುತಿಸಲು ಎಕ್ಸ್-ರೇ, ಸಿಟಿ ಸ್ಕ್ಯಾನ್ ಅಥವಾ ಸ್ಪೈರೋಮೆಟ್ರಿ ಸೇರಿದಂತೆ ವಿವಿಧ ಪರೀಕ್ಷೆಗಳು ಅಗತ್ಯವಿರುತ್ತವೆ. ಆದರೆ “ಸ್ವಾಸ” ಅಪ್ಲಿಕೇಶನ್ ಸಹಾಯದಿಂದ, ಉಸಿರಾಟದ ಕಾಯಿಲೆಗಳ ಆರಂಭಿಕ ಹಂತವನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ಇದು ವಿಶೇಷವಾಗಿ ವೈದ್ಯಕೀಯ ತಂತ್ರಜ್ಞಾನ ಲಭ್ಯವಿಲ್ಲದ ಪ್ರದೇಶಗಳಲ್ಲಿ ಬಹಳ ಉಪಯುಕ್ತವಾಗುತ್ತದೆ. ಇದರಿಂದ ಸಮಯ, ವೆಚ್ಚ ಹಾಗೂ ಪ್ರಯಾಣದ ಸಮಸ್ಯೆಗಳನ್ನು ಕಡಿಮೆ ಮಾಡಬಹುದಾಗಿದೆ.

ಈ ಅಪ್ಲಿಕೇಶನ್ ಉಪಯೋಗದಿಂದ, ರೋಗಿಯು ಯಾವ ಉಸಿರಾಟ ಕಾಯಿಲೆಯಿಂದ ಬಾಧಿತರಾಗಿದ್ದಾರೆ, ಅದರ ತೀವ್ರತೆ ಎಷ್ಟು ಮತ್ತು ತಕ್ಷಣದ ವೈದ್ಯಕೀಯ ಕ್ರಮ ತೆಗೆದುಕೊಳ್ಳಬೇಕೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುತ್ತದೆ. ಭವಿಷ್ಯದಲ್ಲಿ, ಈ ತಂತ್ರಜ್ಞಾನ ಕ್ಷಯರೋಗ ಮತ್ತು ಇತರ ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನೂ ಪತ್ತೆಹಚ್ಚಲು ಸಹಾಯ ಮಾಡುವಂತೆ ವಿಸ್ತಾರಗೊಳ್ಳಬಹುದು. ಇದರ ಪರಿಣಾಮವಾಗಿ, ಆರೋಗ್ಯ ವಲಯದಲ್ಲಿ ತ್ವರಿತ ಮತ್ತು ಪರಿಣಾಮಕಾರಿ ನಿರ್ವಹಣೆ ಸಾಧ್ಯವಾಗುವುದರ ಜೊತೆಗೆ, ರೋಗಿಗಳ ಆರೋಗ್ಯ ರಕ್ಷಣೆಗೆ ನಿಖರ ಪರಿಹಾರ ಒದಗಿಸಲು ಸಹಾಯವಾಗಲಿದೆ.

error: Content is protected !!