Home Blog Page 97

ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಜಾಗತೀಕರಣದ ಪರಿಣಾಮವಾಗಿ ಎಲ್ಲ ಕ್ಷೇತ್ರಗಳಲ್ಲೂ ಖಾಸಗಿ ಕಂಪನಿಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳಲು ಶಿಸ್ತು, ಕೆಲಸದ ಬದ್ಧತೆ, ಕಠಿಣ ಪರಿಶ್ರಮ, ಉದ್ಯೋಗದ ಮೇಲಿನ ನಿಷ್ಠೆ ಹಾಗೂ ಪ್ರಾಮಾಣಿಕತೆ ಅನಿವಾರ್ಯ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಶನಿವಾರ ಗಜೇಂದ್ರಗಡ ಪಟ್ಟಣದ ಬಿ.ಎಸ್.ಎಸ್. ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಉದ್ಯೋಗ ಭರವಸೆ ಕೋಶ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ, ಎಂಎನ್‌ಸಿ ಕಂಪನಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಮೇಳಗಳು ಅತ್ಯಂತ ಉಪಯುಕ್ತವಾಗಿದ್ದು, ಇವುಗಳ ಮೂಲಕ ನೇರವಾಗಿ ಕಂಪನಿಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ದೊರೆಯುತ್ತದೆ. ಸಮಾಜದಲ್ಲಿ ಶೇ. 60ರಷ್ಟು ಮಂದಿ ಉದ್ಯೋಗ ಅರಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ. ಸ್ಪರ್ಧಾತ್ಮಕ ಯುಗದಲ್ಲಿ ಆರಂಭಿಕ ಸಂಬಳದ ಬಗ್ಗೆ ಚಿಂತಿಸದೆ ಉದ್ಯೋಗವನ್ನು ಸ್ವೀಕರಿಸಿ ಅನುಭವ ಸಂಪಾದಿಸಿಕೊಳ್ಳುವುದು ಮಹತ್ವದ್ದು ಎಂದು ಸಲಹೆ ನೀಡಿದರು.

ಮುಖಂಡ ಅಶೋಕ ಭಾಗಮಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ಯುವಜನತೆಗೆ ಉಜ್ವಲ ಭವಿಷ್ಯದ ದಾರಿ ತೋರಿಸಿರುವುದು ಶ್ಲಾಘನೀಯ ಕಾರ್ಯ ಎಂದರು.

ಈ ಸಂದರ್ಭದಲ್ಲಿ ಗಜೇಂದ್ರಗಡ ನಗರ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಘೋರ್ಪಡೆ, ಅಶೋಕ ಭಾಗಮಾರ, ವಿ.ಬಿ. ಸೋಮನಕಟ್ಟಿಮಠ, ಎಚ್.ಎಸ್. ಸೋಂಪೂರ, ಬಸವರಾಜ ನವಲಗುಂದ ಸೇರಿದಂತೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.

ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳು ಭಾಗವಹಿಸಿ ಅಭ್ಯರ್ಥಿಗಳಿಂದ ಸಂದರ್ಶನ ನಡೆಸಿದವು.

ಗಜೇಂದ್ರಗಡವು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಗ್ರಾಮೀಣ ಪ್ರದೇಶದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಇಲ್ಲಿಗೆ ಬರುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳಗಳು ಉತ್ತಮ ವೇದಿಕೆಯಾಗಲಿವೆ ಎಂದು ಶಾಸಕ ಜಿ.ಎಸ್. ಪಾಟೀಲ ಅಭಿಪ್ರಾಯಪಟ್ಟರು.

ಗರ್ಭಿಣಿಯರಿಗೆ ಚಹಾ ಒಳ್ಳೆಯದೇ? ತಿಳಿಯಲೇಬೇಕಾದ ಮಾಹಿತಿ!

0

ಗರ್ಭಾವಸ್ಥೆಯಲ್ಲಿ ಆಹಾರ ಪದ್ಧತಿಗೆ ವಿಶೇಷ ಗಮನ ನೀಡುವುದು ಅತ್ಯಗತ್ಯ. ಈ ಅವಧಿಯಲ್ಲಿ ಮಹಿಳೆಯ ದೇಹವು ತನ್ನಿಗಷ್ಟೇ ಅಲ್ಲದೆ ಗರ್ಭದಲ್ಲಿರುವ ಶಿಶುವಿಗೂ ಪೋಷಕಾಂಶಗಳನ್ನು ಒದಗಿಸಬೇಕಾಗುತ್ತದೆ.

ಅಸಮತೋಲಿತ ಆಹಾರದಿಂದ ದೌರ್ಬಲ್ಯ, ದಣಿವು, ತಲೆಸುತ್ತು, ಅನೀಮಿಯಾ, ಅಸಿಡಿಟಿ ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪೋಷಕಾಂಶಗಳ ಕೊರತೆ ಶಿಶುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು, ಏನು ತಪ್ಪಿಸಬೇಕು ಎಂಬ ಅರಿವು ಬಹಳ ಮುಖ್ಯ. ವಿಶೇಷವಾಗಿ ದಿನಚರಿ ಚಹಾದಿಂದ ಆರಂಭಿಸುವ ಮಹಿಳೆಯರಲ್ಲಿ “ಗರ್ಭಾವಸ್ಥೆಯಲ್ಲಿ ಚಹಾ ಕುಡಿಯುವುದು ಸುರಕ್ಷಿತವೇ?” ಎಂಬ ಪ್ರಶ್ನೆ ಸಾಮಾನ್ಯವಾಗಿದೆ.

ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಮಿತ ಪ್ರಮಾಣದಲ್ಲಿ ಚಹಾ ಸೇವಿಸುವುದು ಸಾಮಾನ್ಯವಾಗಿ ಸುರಕ್ಷಿತವಾಗಿದೆ. ಆದರೆ ಅತಿಯಾದ ಸೇವನೆ ಹಾನಿಕಾರಕವಾಗಬಹುದು. ಚಹಾದಲ್ಲಿರುವ ಕೆಫೀನ್ ದೇಹದಲ್ಲಿನ ಕಬ್ಬಿಣದ ಶೋಷಣೆಯನ್ನು ಕಡಿಮೆ ಮಾಡಬಹುದು. ಇದರಿಂದ ಅನೀಮಿಯಾ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಹೆಚ್ಚಾಗಿ ಚಹಾ ಕುಡಿಯುವುದರಿಂದ ಅಸಿಡಿಟಿ, ಗ್ಯಾಸು ಹಾಗೂ ಎದೆ ಉರಿಯುವ ಸಮಸ್ಯೆಗಳು ಹೆಚ್ಚಾಗಬಹುದು. ಗರ್ಭಾವಸ್ಥೆಯಲ್ಲಿಯೇ ಇಂತಹ ಸಮಸ್ಯೆಗಳು ಸಾಮಾನ್ಯವಾಗಿರುವುದರಿಂದ ಅವು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಕೆಲ ಮಹಿಳೆಯರಲ್ಲಿ ಚಹಾ ಸೇವನೆಯಿಂದ ನಿದ್ರೆ ಕೊರತೆ ಹಾಗೂ ಹೃದಯ ಬಡಿತ ವೇಗವಾಗುವ ಲಕ್ಷಣಗಳೂ ಕಾಣಿಸಿಕೊಳ್ಳಬಹುದು. ಆದ್ದರಿಂದ ದಿನಕ್ಕೆ ಒಂದು ಕಪ್‌ಗಿಂತ ಹೆಚ್ಚು ಚಹಾ ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಅಸಿಡಿಟಿ ಅಥವಾ ವಾಂತಿ ಸಮಸ್ಯೆ ಹೆಚ್ಚಿದ್ದರೆ ಚಹಾವನ್ನು ತಪ್ಪಿಸುವುದು ಒಳಿತು. ಯಾವುದೇ ಪಾನೀಯವನ್ನು ನಿಯಮಿತವಾಗಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ.

ಚಹಾಕ್ಕೆ ಪರ್ಯಾಯವಾಗಿ ಗರ್ಭಿಣಿಯರು ಆರೋಗ್ಯಕರ ಆಯ್ಕೆಗಳನ್ನು ಮಾಡಬಹುದು. ಬಿಸಿ ಹಾಲು ಕ್ಯಾಲ್ಸಿಯಂ ಒದಗಿಸಿ ಎಲುಬುಗಳ ಬಲವರ್ಧನೆಗೆ ಸಹಕಾರಿ. ಏಳನೀರು ದೇಹವನ್ನು ಹೈಡ್ರೇಟ್ ಮಾಡುತ್ತಿದ್ದು ದಣಿವು ಕಡಿಮೆ ಮಾಡಲು ನೆರವಾಗುತ್ತದೆ. ನಿಂಬು ನೀರು ಜೀರ್ಣಕ್ರಿಯೆ ಸುಧಾರಿಸಲು ಸಹಾಯಕ. ಶುಂಠಿ ಕಷಾಯ ವಾಂತಿಯ ಭಾವನೆ ಕಡಿಮೆ ಮಾಡಲು ಉಪಕಾರಿಯಾಗಬಹುದು. ಹರ್ಬಲ್ ಪಾನೀಯಗಳನ್ನೂ ಸೇವಿಸಬಹುದಾದರೂ, ಅವುಗಳ ಬಳಕೆಗೂ ಮುನ್ನ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಇಂತಹ ಪರ್ಯಾಯ ಪಾನೀಯಗಳು ದೇಹಕ್ಕೆ ಪೋಷಕಾಂಶ ಒದಗಿಸುವುದರ ಜೊತೆಗೆ ಅಸಿಡಿಟಿ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ.

ಇರಾನ್–ಅಮೆರಿಕ ಯುದ್ಧದ ಎಫೆಕ್ಟ್: ಕೆಂಪೇಗೌಡ ಏರ್‌ಪೋರ್ಟ್‌ನಿಂದ ವಿಮಾನ ಹಾರಾಟ ರದ್ದು

0

ದೇವನಹಳ್ಳಿ: ಅಮೆರಿಕ ಮತ್ತು ಇಸ್ರೇಲ್ ಸಂಯುಕ್ತವಾಗಿ ಇರಾನ್ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ವಾತಾವರಣ ನಿರ್ಮಾಣವಾಗಿದೆ. ಇರಾನ್ ಸಹ ಪ್ರತಿದಾಳಿ ನಡೆಸುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಯಾಗಿದೆ.

ಯುದ್ಧದ ಭೀತಿಯಿಂದ ಮುಂಜಾಗ್ರತಾ ಕ್ರಮವಾಗಿ ಹಲವು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಇದರ ಪರಿಣಾಮವಾಗಿ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ಹಾಗೂ ವಿದೇಶಗಳಿಂದ ಆಗಮಿಸಬೇಕಿದ್ದ ಹಲವು ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ದುಬೈ, ಅಬುಧಾಬಿ, ರಿಯಾದ್ ಮತ್ತು ಜಿದ್ದಾ ನಗರಗಳಿಗೆ ತೆರಳಬೇಕಿದ್ದ ವಿಮಾನಗಳನ್ನು ಏರ್‌ಲೈನ್ಸ್‌ಗಳು ರದ್ದುಪಡಿಸಿವೆ. ಈ ಕುರಿತು ಪ್ರಯಾಣಿಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ.

ವಿವರಗಳ ಪ್ರಕಾರ, ರಾತ್ರಿ 8.20ಕ್ಕೆ ದುಬೈಗೆ ತೆರಳಬೇಕಿದ್ದ ಎಮಿರೇಟ್ಸ್ ವಿಮಾನ ರದ್ದುಪಡಿಸಲಾಗಿದೆ. ಇದೇ ರೀತಿ ರಾತ್ರಿ 10.10ಕ್ಕೆ ರಿಯಾದ್‌ಗೆ, ರಾತ್ರಿ 12.10ಕ್ಕೆ ಅಬುಧಾಬಿಗೆ ಹಾಗೂ ರಾತ್ರಿ 12.35ಕ್ಕೆ ಜಿದ್ದಾಗೆ ತೆರಳಬೇಕಿದ್ದ ಇಂಡಿಗೋ ವಿಮಾನಗಳ ಹಾರಾಟವೂ ಸ್ಥಗಿತಗೊಂಡಿದೆ.

ಇನ್ನೂ ದುಬೈನಿಂದ ರಾತ್ರಿ 2.40ಕ್ಕೆ ಬೆಂಗಳೂರಿಗೆ ಆಗಮಿಸಬೇಕಿದ್ದ ಎಮಿರೇಟ್ಸ್ ವಿಮಾನ, ದೋಹಾದಿಂದ ರಾತ್ರಿ 2.50ಕ್ಕೆ ಹಾಗೂ ದುಬೈನಿಂದ ರಾತ್ರಿ 3.40ಕ್ಕೆ ಬರಬೇಕಿದ್ದ ಇಂಡಿಗೋ ವಿಮಾನಗಳೂ ರದ್ದು ಮಾಡಲಾಗಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ಹದಗೆಟ್ಟರೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಮಾನಗಳ ಹಾರಾಟ ರದ್ದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂತ್ರಾಲಯಕ್ಕೆ ಹೋಗಿ ನಿಗೂಢವಾಗಿ ನಾಪತ್ತೆಯಾದ ರಾಯರ ಭಕ್ತ!

0

ಚಾಮರಾಜನಗರ: ಅಪಾರ ಭಕ್ತಿಯಿಂದ ರಾಘವೇಂದ್ರ ಸ್ವಾಮಿಗಳು ಆರಾಧನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹರಕೆ ತೀರಿಸಲು ಮಂತ್ರಾಲಯಕ್ಕೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಚಾಮರಾಜನಗರದ ಗಾಳಿಪುರ ಬಡಾವಣೆಯ ನಿವಾಸಿ ದೊರೆಸ್ವಾಮಿ (55) ನಾಪತ್ತೆಯಾದವರು. ಕೂಲಿ ಕೆಲಸ ಮಾಡಿಕೊಂಡಿದ್ದರೂ ಪ್ರತಿ ಗುರುವಾರ ತಪ್ಪದೇ ರಾಯರ ಪೂಜೆ ಮಾಡುತ್ತಿದ್ದ ಅವರು, ಜೀವನದಲ್ಲಿ ಒಮ್ಮೆಯಾದರೂ ಮಂತ್ರಾಲಯಕ್ಕೆ ತೆರಳಿ ಮುಡಿ ಕೊಟ್ಟು ದರ್ಶನ ಪಡೆಯಬೇಕೆಂಬ ಕನಸನ್ನು ಹೊಂದಿದ್ದರು. ಫೆಬ್ರವರಿ 9ರಂದು ಚಾಮರಾಜನಗರದಿಂದ ರೈಲಿನಲ್ಲಿ ಮಂತ್ರಾಲಯಕ್ಕೆ ತೆರಳಿದ್ದ ದೊರೆಸ್ವಾಮಿಗೆ, ಪುತ್ರ ತೇಜಸ್ ಸ್ವತಃ ಟಿಕೆಟ್ ತೆಗೆಸಿಕೊಟ್ಟು 2 ಸಾವಿರ ರೂಪಾಯಿ ಖರ್ಚು ಹಣ ನೀಡಿ ಕಳುಹಿಸಿಕೊಟ್ಟಿದ್ದರು.

“ಮೂರು ದಿನಗಳಲ್ಲಿ ವಾಪಸ್ ಬರುತ್ತೇನೆ” ಎಂದು ಹೇಳಿ ಹೋದವರು ಫೆಬ್ರವರಿ 28 ಕಳೆದರೂ ಮನೆಗೆ ಮರಳಿಲ್ಲ. ಮೊಬೈಲ್ ಫೋನ್ ಬಳಸದ ಕಾರಣ ಕುಟುಂಬಸ್ಥರಿಗೆ ಸಂಪರ್ಕ ಸಾಧ್ಯವಾಗಿಲ್ಲ. ಅವರ ಸುಳಿವು ಸಿಗದ ಹಿನ್ನೆಲೆಯಲ್ಲಿ ಪತ್ನಿ ರೇಖಾ ಹಾಗೂ ಪುತ್ರ ತೇಜಸ್ ಮಂತ್ರಾಲಯಕ್ಕೆ ತೆರಳಿ ರೈಲ್ವೆ ನಿಲ್ದಾಣ ಹಾಗೂ ಮಠದ ಸುತ್ತಮುತ್ತ ಹುಡುಕಾಟ ನಡೆಸಿ ಆರ್‌ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಚಾಮರಾಜನಗರ ಟೌನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಇಸ್ರೇಲ್–ಇರಾನ್ ಸಂಘರ್ಷ: ಕಚ್ಚಾ ತೈಲ ದರ ಏರಿಕೆ ಭೀತಿ: ಭಾರತೀಯರ ಜೇಬಿಗೆ ಹೊಡೆತ?

0

ದೆಹಲಿ: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಉಲ್ಬಣಗೊಂಡಿರುವ ಸಂಘರ್ಷವು ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ತಲ್ಲಣ ಉಂಟುಮಾಡಿದ್ದು, ಅದರ ಪರಿಣಾಮ ಭಾರತದಲ್ಲಿಯೂ ಇಂಧನ ಬೆಲೆ ಏರಿಕೆಯ ಆತಂಕವನ್ನು ಹುಟ್ಟಿಸಿದೆ.

ಇರಾನ್ ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ ಯುದ್ಧದ ಕಾರಣ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ವ್ಯಕ್ತವಾಗಿದೆ. ಇದರ ಪರಿಣಾಮವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಭಾರತವು ತನ್ನ ಅಗತ್ಯದ ಶೇ.80ಕ್ಕಿಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವ ಹಿನ್ನೆಲೆ ಇದು ದೇಶದ ಆರ್ಥಿಕತೆಯ ಮೇಲೆ ನೇರ ಹೊರೆ ತರಬಹುದಾಗಿದೆ.

ಪರ್ಷಿಯನ್ ಕೊಲ್ಲಿ ಮತ್ತು ಕೆಂಪು ಸಮುದ್ರ ಮಾರ್ಗಗಳಲ್ಲಿ ಅಡಚಣೆ ಉಂಟಾದರೆ ಸಾಗಾಣಿಕೆ ಹಾಗೂ ವಿಮೆ ವೆಚ್ಚಗಳು ಹೆಚ್ಚಾಗಿ, ಅಂತಿಮವಾಗಿ ಪೆಟ್ರೋಲ್–ಡೀಸೆಲ್ ದರ ಏರಿಕೆಗೆ ಕಾರಣವಾಗುವ ಸಾಧ್ಯತೆ ಇದೆ. ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚವೂ ಹೆಚ್ಚಾಗಿ ತರಕಾರಿ, ಹಣ್ಣು, ಹಾಲು ಸೇರಿದಂತೆ ದಿನಸಿ ವಸ್ತುಗಳ ಬೆಲೆ ಏರಿಕೆಯಾಗುವ ಆತಂಕವಿದೆ. ಜೊತೆಗೆ ಜಾಗತಿಕ ಅನಿಶ್ಚಿತತೆಯಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡಿದರೆ ರೂಪಾಯಿ ಮೌಲ್ಯ ಕುಸಿತ ಹಾಗೂ ಷೇರು ಮಾರುಕಟ್ಟೆ ಅಸ್ಥಿರತೆಯೂ ಹೆಚ್ಚಾಗಬಹುದು. ಆದರೆ ಸದ್ಯಕ್ಕೆ ದೇಶೀಯ ತೈಲ ಕಂಪನಿಗಳು ಬೆಲೆ ಏರಿಕೆ ಕುರಿತು ಅಧಿಕೃತ ಘೋಷಣೆ ಮಾಡಿಲ್ಲ; ಜಾಗತಿಕ ಪರಿಸ್ಥಿತಿಯ ಬೆಳವಣಿಗೆಯೇ ಮುಂದಿನ ನಿರ್ಧಾರವನ್ನು ನಿರ್ಧರಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಊಟ ಮಾಡಿದ ನಂತರ ಹೊಟ್ಟೆ ನೋವು ಏಕೆ ಬರುತ್ತದೆ? ತಿಳಿಯಬೇಕಾದ ಪ್ರಮುಖ ಕಾರಣಗಳು!

0

ಕೆಲವರಿಗೆ ಊಟ ಮಾಡಿದ ನಂತರ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಕಾಣುವ ಸಮಸ್ಯೆಯಾದರೂ, ಅದನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕೆಲ ಸಂದರ್ಭಗಳಲ್ಲಿ ಈ ನೋವು ಸಣ್ಣ ಮಟ್ಟದಲ್ಲಿದ್ದು ಸ್ವಲ್ಪ ಸಮಯದ ಬಳಿಕ ತಾನಾಗಿಯೇ ಕಡಿಮೆಯಾಗಬಹುದು.

ಆದರೆ ಕೆಲವರಿಗೆ ಇದೇ ನೋವು ಮರುಮರು ಕಾಣಿಸಿಕೊಂಡು ತೀವ್ರ ಸ್ವರೂಪ ಪಡೆಯುತ್ತದೆ. ಬಹಳಷ್ಟು ಜನರು ಇದನ್ನು ಗ್ಯಾಸ್ಟ್ರಿಕ್ ಸಮಸ್ಯೆ, ಜೀರ್ಣಕ್ರಿಯೆಯ ತೊಂದರೆ ಅಥವಾ ದಿನನಿತ್ಯದ ಸಾಮಾನ್ಯ ಸಮಸ್ಯೆ ಎಂದು ಲಘುವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಊಟ ಮಾಡಿದ ತಕ್ಷಣ ಅಥವಾ ಊಟದ ಕೆಲ ಹೊತ್ತಿನ ನಂತರ ನಿರಂತರವಾಗಿ ಹೊಟ್ಟೆ ನೋವು ಕಾಣಿಸುತ್ತಿದ್ದರೆ, ಅದು ದೇಹದ ಒಳಗಿರುವ ಯಾವುದೋ ಆರೋಗ್ಯ ಸಮಸ್ಯೆಯ ಮುನ್ಸೂಚನೆಯಾಗಿರಬಹುದು. ಈ ನೋವು ಹೊಟ್ಟೆಯ ಮೇಲ್ಭಾಗದಲ್ಲಿ, ನಾಭಿ ಸುತ್ತಮುತ್ತ, ಎಡ ಅಥವಾ ಬಲ ಭಾಗದಲ್ಲಿ ಅಥವಾ ಕೆಲವೊಮ್ಮೆ ಸಂಪೂರ್ಣ ಹೊಟ್ಟೆಯ ಭಾಗದಲ್ಲಿಯೇ ಅನುಭವವಾಗಬಹುದು.

ಇಂತಹ ಹೊಟ್ಟೆ ನೋವಿನಿಂದ ಬಳಲುವವರು ಕೆಲವೊಮ್ಮೆ ಊಟ ಮಾಡಲು ಭಯಪಡುವ ಸ್ಥಿತಿಗೂ ತಲುಪುತ್ತಾರೆ. ಪರಿಣಾಮವಾಗಿ ಹಸಿವು ಕಡಿಮೆಯಾಗುವುದು, ಸರಿಯಾಗಿ ಊಟ ಮಾಡದಿರುವುದು, ದೇಹದಲ್ಲಿ ಶಕ್ತಿ ಕೊರತೆ ಕಾಣಿಸಿಕೊಳ್ಳುವುದು ಹಾಗೂ ದಿನನಿತ್ಯದ ಕೆಲಸ ಕಾರ್ಯಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದಲ್ಲದೆ, ದೀರ್ಘಕಾಲ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಜೀರ್ಣಕ್ರಿಯೆ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ ಇರುತ್ತದೆ. ಅಸಮರ್ಪಕ ಆಹಾರ ಕ್ರಮ, ಅತಿಯಾದ ಮಸಾಲೆ, ಎಣ್ಣೆ ಪದಾರ್ಥಗಳ ಸೇವನೆ, ಅತಿಯಾದ ತಾಣತೆ, ಒತ್ತಡ, ನಿದ್ರಾಹೀನತೆ ಅಥವಾ ಕೆಲವೊಮ್ಮೆ ಒಳಾಂಗಿಕ ಸಮಸ್ಯೆಗಳು ಕೂಡ ಊಟದ ನಂತರ ಹೊಟ್ಟೆ ನೋವಿಗೆ ಕಾರಣವಾಗಬಹುದು.

ಆದ್ದರಿಂದ ಊಟ ಮಾಡಿದ ಬಳಿಕ ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರೆ, ಅದನ್ನು ಸಾಮಾನ್ಯ ಎಂದು ಬಿಟ್ಟುಬಿಡದೆ ಗಂಭೀರವಾಗಿ ಪರಿಗಣಿಸಬೇಕು. ನೋವಿನ ಸ್ವರೂಪ, ಸಮಯ, ತೀವ್ರತೆ ಹಾಗೂ ಇತರೆ ಲಕ್ಷಣಗಳನ್ನು ಗಮನಿಸಿ, ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತರೆ ಸಮಸ್ಯೆಯನ್ನು ನಿಯಂತ್ರಿಸಬಹುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ.

ಹೋಳಿ ಬಳಿಕ ಮೈಮೇಲೆ ಅಂಟಿದ ಬಣ್ಣವನ್ನು ತೆಗೆದು ಹಾಕಲು ಈ ಟಿಪ್ಸ್ ಫಾಲೋ ಮಾಡಿ!

0

ಹೋಳಿ ಅಂದ್ರೆ ಬಣ್ಣಗಳ ಹಬ್ಬ, ಆದರೆ ಸಂಭ್ರಮದ ನಂತರ ಮೈಗೆ ಬಿದ್ದ ಬಣ್ಣವನ್ನು ತೆಗೆಯುವುದು ಕೆಲವರಿಗೆ ಕಷ್ಟವಾಗಬಹುದು. ಆದರೆ ಈ ಕೆಲವು ಸರಳ ವಿಧಾನಗಳ ಮೂಲಕ ಬಣ್ಣವನ್ನು ಸುಲಭವಾಗಿ ಹೋಗಲಾಡಿಸಬಹುದು.

ಓಕುಳಿಯಾಡುವ ಮೊದಲು ಚರ್ಮ ಮತ್ತು ಕೂದಲಿಗೆ ತೆಂಗಿನ ಎಣ್ಣೆ ಹಚ್ಚಿ, ಬಣ್ಣ ಚರ್ಮಕ್ಕೆ ಆಳವಾಗಿ ತೂರಿಕೊಳ್ಳುವುದನ್ನು ತಡೆಯಬಹುದು. ಹೋಳಿ ನಂತರ, ಮುಖ ಮತ್ತು ದೇಹಕ್ಕೆ ಕಡ್ಲೆಹಿಟ್ಟು ಮತ್ತು ಮೊಸರು ಪೇಸ್ಟ್ ಹಚ್ಚಿ ಸ್ವಲ್ಪ ಒಣಗಿದ ಮೇಲೆ ಮಸಾಜ್ ಮಾಡಿ ತೊಳೆಯಬಹುದು. ಬಣ್ಣವನ್ನು ಹಗುರಗೊಳಿಸಲು ಮೊಸರು ಮತ್ತು ನಿಂಬೆ ರಸ ಬಳಸಿ 10–15 ನಿಮಿಷ ಬಿಟ್ಟರೆ ಸಹಾಯವಾಗುತ್ತದೆ.

ಹಸಿ ಹಾಲು ಮತ್ತು ಹತ್ತಿ ಅಥವಾ ಐಚ್ಛಿಕವಾಗಿ ಜೇನುತುಪ್ಪ ಬಳಸಿ ಬಣ್ಣವನ್ನು ತೆಗೆಯಬಹುದು. ತ್ವಚೆ ಕೆಂಪಾಗಿದರೆ ಅಥವಾ ಸೂಕ್ಷ್ಮವಾಗಿದ್ದರೆ, ರೋಸ್ ವಾಟರ್ ಮತ್ತು ಅಲೋವೆರಾ ಜೆಲ್ ಹಚ್ಚಿ ಶಾಂತಗೊಳಿಸಬಹುದು. ಕೂದಲಿಗೆ ಬಣ್ಣ ಹೋದರೆ ಮೊಸರು ಮತ್ತು ಜೇನುತುಪ್ಪ ಮಿಶ್ರಣ ಹಚ್ಚಿ 20 ನಿಮಿಷ ಬಿಟ್ಟು ತೊಳೆಯುವ ಮೂಲಕ ಕೂದಲು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡಬಹುದು.

ಈ ಸರಳ ಮನೆಮದ್ದುಗಳ ಬಳಕೆ ಮೂಲಕ ಹೋಳಿ ಬಣ್ಣವನ್ನು ಸುಲಭವಾಗಿ ತೆರವುಗೊಳಿಸಬಹುದು ಮತ್ತು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ರಕ್ಷಿಸಬಹುದು.

Ranji Trophy Final: ಕರ್ನಾಟಕವನ್ನು ಮಣಿಸಿ ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಜಮ್ಮುಕಾಶ್ಮೀರ!

0

ಹುಬ್ಬಳ್ಳಿ: ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿದ್ದವು. ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಜಮ್ಮು-ಕಾಶ್ಮೀರ ತಂಡ, ಬಲಿಷ್ಠ ಕರ್ನಾಟಕವನ್ನು ಮಣಿಸಿ ಐತಿಹಾಸಿಕವಾಗಿ ಚಾಂಪಿಯನ್ ಪಟ್ಟ ಕೈಸೇರಿಸಿಕೊಂಡಿದೆ.

ರಣಜಿ ಇತಿಹಾಸದಲ್ಲಿ 15ನೇ ಬಾರಿ ಫೈನಲ್ ತಲುಪಿದ್ದ ಕರ್ನಾಟಕ ತಂಡ ತವರು ನೆಲದ ಲಾಭ ಪಡೆದು ಸುಲಭವಾಗಿ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗಿತ್ತು. ತಂಡದಲ್ಲಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಮತ್ತು ದೇವದತ್ ಪಡಿಕ್ಕಲ್‌ರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳು ಇದ್ದರು. ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ್ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ಪ್ರಮುಖರಾಗಿದ್ದರು. ಆದರೂ ಪಂದ್ಯ ಆರಂಭದಿಂದಲೇ ಹಿಡಿತ ಸಾಧಿಸಿದ ಜಮ್ಮು-ಕಾಶ್ಮೀರ ತಂಡ, ಕರ್ನಾಟಕಕ್ಕೆ ಮರುಪ್ರವೇಶದ ಅವಕಾಶವೇ ನೀಡಲಿಲ್ಲ.

1959-60ರಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿಯಲ್ಲಿ ಭಾಗವಹಿಸಿದ್ದ ಜಮ್ಮು-ಕಾಶ್ಮೀರ ತಂಡಕ್ಕೆ ಇದುವರೆಗೆ ಪ್ರಶಸ್ತಿ ಸಿಕ್ಕಿರಲಿಲ್ಲ. ಬರೋಬ್ಬರಿ 67 ವರ್ಷಗಳ ಬಳಿಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ವಿಜೇತರನ್ನು ಘೋಷಿಸುವ ನಿಯಮದಂತೆ ಜಮ್ಮು-ಕಾಶ್ಮೀರ ತಂಡಕ್ಕೆ ಕಿರೀಟ ಒಲಿಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು-ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ಪ್ರತಿಯಾಗಿ ಕರ್ನಾಟಕ ತಂಡ 293 ರನ್‌ಗಳಿಗೆ ಆಲೌಟ್ ಆಯಿತು.

ಎರಡನೇ ಇನ್ನಿಂಗ್ಸ್‌ನಲ್ಲೂ ಜಮ್ಮು-ಕಾಶ್ಮೀರ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಆರಂಭಿಕ ಆಟಗಾರ ಕಮ್ರಾನ್ ಇಕ್ಬಾಲ್ 160 ರನ್‌ಗಳ ಸೊಗಸಾದ ಇನ್ನಿಂಗ್ಸ್ ಆಡಿದರು. ಸಾಹಿಲ್ ಕೂಡ ಶತಕ ಬಾರಿಸಿದರು. ಇದರಿಂದ ಒಟ್ಟು ಮುನ್ನಡೆ 630 ರನ್‌ಗಳನ್ನು ಮೀರಿತು. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ, ಮೊದಲ ಇನ್ನಿಂಗ್ಸ್‌ನಲ್ಲಿ 291 ರನ್‌ಗಳ ಮುನ್ನಡೆ ಪಡೆದಿದ್ದ ಜಮ್ಮು-ಕಾಶ್ಮೀರ ತಂಡವನ್ನು ನಿಯಮಾನುಸಾರ ಚಾಂಪಿಯನ್ ಎಂದು ಘೋಷಿಸಲಾಯಿತು.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹುಬ್ಬಳ್ಳಿಗೆ ಆಗಮಿಸಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಟಗಾರರನ್ನು ಅಭಿನಂದಿಸಿದರು. ಈ ಸಾಧನೆ ಭವಿಷ್ಯದ ಪೀಳಿಗೆಗಳಿಗೆ ಕ್ರೀಡೆಯಲ್ಲಿ ಸ್ಫೂರ್ತಿ ನೀಡಲಿದೆ ಎಂದು ಅವರು ಹೇಳಿದರು. ಜಮ್ಮು-ಕಾಶ್ಮೀರ ತಂಡದ ಈ ಗೆಲುವು ರಣಜಿ ಟ್ರೋಫಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಂತಾಗಿದೆ.

“ಶಸ್ತ್ರಾಸ್ತ್ರ ತ್ಯಜಿಸಿ, ಇಲ್ಲವೇ ಸಾವನ್ನು ಎದುರಿಸಿ”: ಇರಾನ್ʼಗೆ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ

0

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ತನ್ನ ಯುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇರಾನಿನ ಸೈನಿಕರಿಗೆ “ಶಸ್ತ್ರಾಸ್ತ್ರಗಳನ್ನು ಕೆಳಗಿಡಿ, ಇಲ್ಲವೇ ಸಾವನ್ನು ಎದುರಿಸಿ” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ಪೂರ್ವಭಾವಿ ವಾಯುದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಅಮೆರಿಕ ಪಡೆಗಳು ಇರಾನ್‌ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆಗಳನ್ನು ಆರಂಭಿಸಿವೆ ಎಂದು ಟ್ರಂಪ್ ಘೋಷಿಸಿದ್ದಾರೆ.

“ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಇರಾನ್‌ನಲ್ಲಿ ಯುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ. ಇರಾನ್ ಆಡಳಿತದಿಂದ ಎದುರಾಗಬಹುದಾದ ಬೆದರಿಕೆಗಳಿಂದ ಅಮೆರಿಕದ ಜನರನ್ನು ರಕ್ಷಿಸುವುದು ನಮ್ಮ ಉದ್ದೇಶ” ಎಂದು ಅವರು ಹೇಳಿದ್ದಾರೆ.

ಅಮೆರಿಕದ ಹಿತಾಸಕ್ತಿಗಳ ವಿರುದ್ಧ ದಶಕಗಳಿಂದ ಟೆಹ್ರಾನ್ ಸಂಚು ರೂಪಿಸುತ್ತಿದೆ. ಇನ್ನು ಮುಂದೆ ಇದನ್ನು ಸಹಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಇರಾನದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಸದಸ್ಯರು, ಸಶಸ್ತ್ರ ಪಡೆಗಳು ಮತ್ತು ಎಲ್ಲಾ ಪೊಲೀಸರಿಗೆ ಎಚ್ಚರಿಕೆ ನೀಡಿದ ಅವರು, “ನೀವು ನಿಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ. ನಮ್ಮ ಸೂಚನೆ ಪಾಲಿಸಿದರೆ ನ್ಯಾಯಯುತವಾಗಿ ವರ್ತಿಸಲಾಗುತ್ತದೆ. ಇಲ್ಲವೇ ಸಾವು ನಿಶ್ಚಿತ” ಎಂದು ಹೇಳಿದ್ದಾರೆ.

ಈ ಹೇಳಿಕೆಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇಸ್ರೇಲ್–ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ಜಾಗತಿಕ ಮಟ್ಟದಲ್ಲಿ ಭಾರಿ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ನಿಗಮ-ಮಂಡಳಿ ಅಧ್ಯಕ್ಷರ ಅವಧಿ ವಿಸ್ತರಣೆ: ಸಿಬ್ಬಂದಿ ಇಲಾಖೆ ಆದೇಶ

0

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ನಾಮನಿರ್ದೇಶನ ಗೊಂಡಿದ್ದ ಅಧ್ಯಕ್ಷರ ಅವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಈಗಾಗಲೇ ಅವಧಿ ಮುಕ್ತಾಯಗೊಂಡಿರುವ ಅಥವಾ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿರುವ ಅಧ್ಯಕ್ಷರಿಗೆ ಈ ಆದೇಶ ಅನ್ವಯವಾಗಲಿದೆ.

ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿರುವ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ನಾಮನಿರ್ದೇಶಿತ ಅಧ್ಯಕ್ಷರ ಅವಧಿಯನ್ನು ಮುಂದಿನ ಆದೇಶದವರೆಗೆ ಮುಂದುವರಿಸಲಾಗಿದೆ.

ಸಂಬಂಧಿತ ಅಧಿನಿಯಮ ಮತ್ತು ನಿಯಮಾವಳಿಗಳ ಪ್ರಕಾರ ತಕ್ಷಣದಿಂದಲೇ ಅಧ್ಯಕ್ಷರು ಕಾರ್ಯನಿರ್ವಹಿಸಲು ಸೂಕ್ತ ಅಧಿಸೂಚನೆ ಹೊರಡಿಸುವಂತೆ ಆಡಳಿತ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಉಪ ಕಾರ್ಯದರ್ಶಿ ಅಭಿಜಿನ್ ಬಿ. ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಕೆಲವು ಕಾಡಾ ಅಭಿವೃದ್ಧಿ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.

ವಿವಿಧ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ನಿಗಮ-ಮಂಡಳಿಗಳಿಗೆ ಡಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮುಖಂಡರನ್ನು ಎರಡು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿತ್ತು. ಫೆಬ್ರವರಿ 7ರ ಆದೇಶದಲ್ಲಿ ಪಟ್ಟಿಯಲ್ಲಿದ್ದ ಕೆಲವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ವಿಸ್ತರಣೆ ನೀಡಲಾಗಿತ್ತು. ಆದರೆ ಕೆಲವು ಕಾಡಾ ಅಭಿವೃದ್ಧಿ ಪ್ರಾಧಿಕಾರ ಮತ್ತು ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನು ಆ ಪಟ್ಟಿಯಿಂದ ಕೈಬಿಡಲಾಗಿತ್ತು.

ಪ್ರಸ್ತುತ ಆ ಪ್ರಾಧಿಕಾರಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡದಿರುವುದರಿಂದ, ಮುಂದಿನ ಆದೇಶದವರೆಗೆ ಅಥವಾ ಹೊಸ ನೇಮಕಾತಿ ನಡೆಯುವವರೆಗೆ ಹಾಲಿ ಅಧ್ಯಕ್ಷರನ್ನೇ ಮುಂದುವರಿಸುವಂತೆ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದರು.

error: Content is protected !!