Home Blog Page 99

ರಸ್ತೆಯಲ್ಲಿ ಚಲಿಸುತ್ತಿದ್ದಾಗಲೇ ದುರಂತ: ಮರದ ಕೊಂಬೆ ಬಿದ್ದು ಸವಾರ ಗಂಭೀರ!

ಬೆಂಗಳೂರು:- ಬಸವನಗುಡಿಯ ಬ್ರಹ್ಮ ಚೈತನ್ಯ ಮಂದಿರದ ಬಳಿ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗಲೇ ಮರದ ಕೊಂಬೆ ಬಿದ್ದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ. ಗಾಯಗೊಂಡ ಸವಾರನನ್ನು ಅಕ್ಷಯ್‌ ಎಂದು ಗುರುತಿಸಲಾಗಿದೆ. ಕೊಂಬೆ ಬೀಳುತ್ತಿದ್ದಂತೆ ನಿಯಂತ್ರಣ ತಪ್ಪಿ ಎದುರುಗಡೆ ನಿಲ್ಲಿಸಿದ್ದ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪ್ರಶಾಂತ್‌ ನೆಲಕ್ಕೆ ಬಿದ್ದಿದ್ದಾರೆ.

ಕೂಡಲೇ ಸ್ಥಳೀಯರು ಪ್ರಶಾಂತ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಯಿಂದ ಅಕ್ಷಯ್ ತಲೆಯ ಮಧ್ಯ ಭಾಗಕ್ಕೆ ತೀವ್ರ ಹಾನಿಯಾಗಿದೆ. ಮೂಗು, ಬಾಯಿ, ಕಿವಿಯಲ್ಲಿ ರಕ್ತಸ್ರಾವವಾಗಿದೆ. ಶ್ರೀನಿವಾಸನಗರದ ನಿವಾಸಿಯಾಗಿರುವ ಅಕ್ಷಯ್‌ ರಾಜಾಜಿನಗರದಲ್ಲಿ ಕಂಪನಿಯೊಂದದರಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Power Shock: ವಿದ್ಯುತ್ ತಂತಿ ತುಳಿದು ಎರಡು ಕಾಡಾನೆಗಳು ಸಾವು!

ಹಾಸನ:- ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಡ್ಡೆಬೆಟ್ಟ ಗ್ರಾಮದ ಬಳಿಯ ಎಬಿಸಿ ಎಸ್ಟೇಟ್‍ನಲ್ಲಿ ವಿದ್ಯುತ್ ಶಾಕ್‍ನಿಂದ ಎರಡು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ಜರುಗಿದೆ.

ಆಹಾರ ಹರಸಿ ಕಾಫಿ ತೋಟಕ್ಕೆ ಎರಡು ಕಾಡಾನೆಗಳು ಬಂದಿದ್ದವು. ಈ ವೇಳೆ ಕಾಫಿ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್‌ ತಂತಿ ಗಾಳಿ ಮಳೆಗೆ ತುಂಡಾಗಿ ಬಿದ್ದಿದ್ದು, ತಂತಿಯನ್ನು ತುಳಿದು ಕಾಡಾನೆಗಳು ಸಾವನ್ನಪ್ಪಿವೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸಿಹಿ ಪ್ರಿಯರೇ ಹುಷಾರ್: ಚಾಕೊಲೇಟ್‌ನಲ್ಲಿ ಸಿಕ್ತು ಮನುಷ್ಯನ ಹಲ್ಲು!

ಕೋಲಾರ:- ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಅಂಗಡಿಯಿಂದ ಮಹಿಳೆಯೊಬ್ಬರು ಚಾಕೊಲೇಟ್‌ ತೆಗೆದುಕೊಂಡು ತಿನ್ನುತ್ತಿರ್ಬೇಕಾದ್ರೆ ಮನುಷ್ಯನ ಹಲ್ಲು ಸಿಕ್ಕಿದೆ. ಸ್ಥಳೀಯ ಗ್ರಾಹಕರಾದ ಭಾರತಮ್ಮ ಎಂಬುವವರು ಚಿಲ್ಲರೆ ಅಂಗಡಿಯೊಂದರಲ್ಲಿ ಖರೀದಿಸಿದ ಚಾಕೊಲೇಟ್‌ನಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಭಾರತಮ್ಮ ಎಂಬವರು ತಮ್ಮ ಮನೆಯ ಸಮೀಪದ ಚಿಲ್ಲರೆ ಅಂಗಡಿಯಲ್ಲಿ ಚಾಕೊಲೇಟ್ ಖರೀದಿಸಿದ್ದರು. ಚಾಕೊಲೇಟ್ ತಿನ್ನುವಾಗ ಅದರೊಳಗೆ ಗಟ್ಟಿಯಾದ ವಸ್ತುವೊಂದು ಕಾಣಿಸಿತು. ತಕ್ಷಣ ತೆಗೆದು ನೋಡಿದಾಗ ಅದು ಮನುಷ್ಯನ ಹಲ್ಲು ಎಂಬುದು ದೃಢಪಟ್ಟಿದೆ. ಈ ಘಟನೆಯಿಂದ ಗಾಬರಿಗೊಂಡ ಭಾರತಮ್ಮ, ತಕ್ಷಣ ಚಿಲ್ಲರೆ ಅಂಗಡಿಯ ಮಾಲೀಕರನ್ನು ಸಂಪರ್ಕಿಸಿದ್ದಾರೆ. ಚಿಲ್ಲರೆ ಅಂಗಡಿಯ ಮಾಲೀಕ, ಈ ಚಾಕಲೇಟ್ ತಾವು ಖರೀದಿಸಿದ ಡಿಸ್ಟ್ರಿಬ್ಯೂಟರ್‌ನಿಂದ ಬಂದಿದೆ ಎಂದು ತಿಳಿಸಿದ್ದಾರೆ. ಆದರೆ, ಚಾಕೊಲೇಟ್ ಯಾವ ಕಂಪನಿಯದ್ದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. “ನಾವು ಡಿಸ್ಟ್ರಿಬ್ಯೂಟರ್ ಕೊಟ್ಟ ಚಾಕಲೇಟ್‌ಗಳನ್ನು ಮಾರಾಟ ಮಾಡಿದ್ದೇವೆ. ಇಂತಹ ಘಟನೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ,” ಎಂದು ಅಂಗಡಿಯ ಮಾಲೀಕರು ಹೇಳಿದ್ದಾರೆ.

ಇನ್ನೂ ಚಾಕೊಲೇಟ್‌ನಲ್ಲಿ ಮನುಷ್ಯನ ಹಲ್ಲು ಕಂಡು ಭಾರತಮ್ಮ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ.

Breaking News: ನಾಲೆಗೆ ಬಿದ್ದು ಎರಡು ವರ್ಷದ ಮಗು ದುರ್ಮರಣ!

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿ ಪಟ್ಟಣ ವ್ಯಾಪ್ತಿಯ ಆಝಾದ್ ನಗರದಲ್ಲಿ ಎರಡು ವರ್ಷದ ಹೆಣ್ಣುಮಗು ನಾಲೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜರುಗಿದೆ. ಪೋಷಕರ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ.

ಶನಿವಾರ ಮಧ್ಯಾಹ್ನದ ವೇಳೆ ತೌಸೀಫ್ ಮತ್ತು ಅರ್ಜು ದಂಪತಿಯ ಎರಡು ವರ್ಷದ ಹೆಣ್ಣುಮಗು ಮನೆಯ ಹೊರಗೆ ಆಟವಾಡುತಿದ್ದ ವೇಳೆ ಎದುರಿಗಿದ್ದ ಕಾಲುವೆಯೊಳಗೆ ಬಿದ್ದಿದೆ. ಸ್ಥಳೀಯರು ತಕ್ಷಣ ಮಗುವನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದರೂ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅಸುನೀಗಿದೆ.

ಘಟನೆ ಕುರಿತು ಪೋಷಕರು ಇದುವರೆಗೂ ಠಾಣೆಗೆ ದೂರು ನೀಡಿಲ್ಲ. ಇದೀಗ ಸಿಸಿ ಕ್ಯಾಮೆರಾದ ವಿಡಿಯೋ ತುಣುಕು ಹೊರಬಿದ್ದಿದ್ದು ಘಟನೆ ಬೆಳಕಿಗೆ ಬಂದಿದೆ.

ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಕೊಲೆ ಆರೋಪಿಗಳ ಕಾಲಿಗೆ ಗುಂಡೇಟು!

ಬೆಂಗಳೂರು:- ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಕೊಲೆ ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿರುವ ಘಟನೆ ಬೆಂಗಳೂರಿನ ಆರ್.ಆರ್.ನಗರದಲ್ಲಿ ಜರುಗಿದೆ. ಗುಂಡೇಟು ತಿಂದ ಆರೋಪಿಗಳನ್ನು ದೀಪು (28), ಅರುಣ್ (27) ಎಂದು ಗುರುತಿಸಲಾಗಿದೆ.

ಆರೋಪಿಗಳು ಜೂ. 14 ರಂದು ಯುವಕ ವಿಜಯ್ (26) ಎಂಬುವರನ್ನು ಮಾತುಕತೆಗೆ ಅಂತ ಜೆ.ಜೆ.ನಗರದ ಜನತಾ ಕಾಲೋನಿಗೆ ಕರೆಸಿ ಕೊಲೆ ಮಾಡಿದ್ದಾರೆ. ಕೇಸ್ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆರೋಪಿಗಳು ಆರ್.ಆರ್.ನಗರ ಠಾಣಾ ವ್ಯಾಪ್ತಿಯಲ್ಲಿ ಅವಿತು ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದರು.

ಆಗ, ಇನ್ಸ್​ಪೆಕ್ಟರ್ ಕೆಂಪೇಗೌಡ ಗಾಳಿಯಲ್ಲಿ ಗುಂಡು ಹಾರಿಸಿ ವಾರ್ನ್ ಮಾಡಿದ್ದರು. ಆದರೂ ಆರೋಪಿಗಳು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾದರು. ಈ ವೇಳೆ ಇಬ್ಬರ ಕಾಲಿಗೂ ಪೊಲೀಸರು ಗುಂಡು ಹೊಡೆದು ಬಂಧಿಸಿದರು. ಗಾಯಾಳು ಪೊಲೀಸ್ ಸಿಬ್ಬಂದಿ ಮತ್ತು ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಧಾರಕಾರ ಮಳೆಗೆ ಕಾರು ಪಲ್ಟಿ: ದತ್ತಪೀಠದಲ್ಲಿ ತಪ್ಪಿದ ಭಾರೀ ಅನಾಹುತ!

ಚಿಕ್ಕಮಗಳೂರು:- ಧಾರಕಾರ ಮಳೆಗೆ ಕಾರೊಂದು ಪಲ್ಟಿ ಹೊಡೆದಿದ್ದು, ಭಾರೀ ಅನಾಹುತವೊಂದು ತಪ್ಪಿರುವ ಘಟನೆ ಇಲ್ಲಿನ ದತ್ತಪೀಠದ ಮಾರ್ಗದ ಕವಿಕಲ್ ಗಂಡಿ ಬಳಿ ಜರುಗಿದೆ. ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಎದುರಿನಿಂದ ಬರುತ್ತಿದ್ದ ಕಾರಿಗೆ ಸೈಡ್ ಕೊಡಲು ಹೋದ ಕಾರು, ಕಲ್ಲಿನ ಮೇಲೆ ಹತ್ತಿದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ರಸ್ತೆ ಮಧ್ಯೆ ಕಾರು ಪಲ್ಟಿಯಾದ ಪರಿಣಾಮ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆ ಮಧ್ಯೆ ಕಾರು ಪಲ್ಟಿಯಾಗುತ್ತಿದ್ದಂತೆ ಅಲ್ಲೇ ಇದ್ದ ಪ್ರವಾಸಿಗರು ಪಲ್ಟಿಯಾದ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾರಿನಲ್ಲಿದ್ದ ಐವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರು ಪಲ್ಟಿ ಹೊಡೆದ ಪಕ್ಕದಲ್ಲಿ ಪ್ರಪಾತ ಇರುವುದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ.

ಗಂಡನ ಮನೆಯಲ್ಲಿದ್ದ ಯುವತಿಯನ್ನು ಗೋಣಿಚೀಲದಲ್ಲಿ ಹೊತ್ತೊಯ್ದ ಪೋಷಕರು: ಅಷ್ಟಕ್ಕೂ ಆಗಿದ್ದೇನು?

ಹುಬ್ಬಳ್ಳಿ:– ಗಂಡನ ಮನೆಯಿಂದ ಬಲವಂತವಾಗಿ ಯುವತಿಯನ್ನು ಪೋಷಕರು ಹೊತ್ತೊಯ್ದಿರುವ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ. ಕಳೆದ ಎಂಟು ವರ್ಷಗಳಿಂದ ನಿರಂಜನ್ ಹಾಗೂ ಸುಷ್ಮಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಹೆತ್ತವರ ವಿರೋಧವಿತ್ತು. ಹೀಗಾಗಿ 2 ವರ್ಷದ ಹಿಂದೆಯೇ ಗದಗನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿ ಬಂದಿದ್ದರು. ಬಳಿಕ ಪೋಷಕರ ವಿರೋಧಕ್ಕೆ ಮಣಿದು, ಇಬ್ಬರು ದೂರವಾಗಿ ವೇದನೆ ಪಡುತ್ತಿದ್ದರು.

ಇದೀಗ ಪ್ರೀತಿಸಿ ಮದುವೆಯಾದ ಪತಿಯನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ನಿರಂಜನ್ ಮನೆಗೆ ಸುಷ್ಮಾ ಬಂದಿದ್ದರು. ಈ ವೇಳೆ ಯುವತಿ ತಂದೆ ಪರಶುರಾಮ, ಮಾವಂದಿರಾದ ಮಹಾಂತೇಶ್, ಮಂಜು ಸೇರಿ ನಿರಂಜನ್‌ಗೆ ಧಮ್ಕಿ ಹಾಕಿ ಗಂಡನ ಮನೆಯಲ್ಲಿ ಕುಳಿತಿದ್ದ ಸುಷ್ಮಾಳನ್ನು ಗೋಣಿ ಚೀಲದಲ್ಲಿ ಎತ್ತೊಯ್ದಿದ್ದಾರೆ. ಸುಷ್ಮಾ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪತಿ ನಿರಂಜನ್‌ಗೆ ಆಕೆ ಕುಟುಂಬಸ್ಥರು ಧಮ್ಕಿ ಹಾಕಿದ್ದಾರೆ. ಸದ್ಯ ಈ ಜೋಡಿ ರಕ್ಷಣೆಗಾಗಿ ಹುಬ್ಬಳ್ಳಿಯ ಪೊಲೀಸರ ಮೊರೆ ಹೋಗಿದ್ದಾರೆ.

ಸುಪಾರಿ ಕೊಟ್ಟು ಗೆಳೆಯನ ಸುಲಿಗೆ: 3 ಲಕ್ಷ ಮೌಲ್ಯದ ಚಿನ್ನ-ನಗದು ದೋಚಿದ ದುಷ್ಕರ್ಮಿಗಳು!

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾರ್ಟಿ ಮಾಡಲು ಪಬ್‌ಗೆ ಕರೆಸಿ, ಸುಪಾರಿ ನೀಡಿ ಗೆಳೆಯನ ಸುಲಿಗೆ ಮಾಡಿಸಿರುವ ಘಟನೆಯೊಂದು ಜರುಗಿದೆ. ಸುಲಿಗೆಗೆ ಒಳಗಾದ ಯುವಕನನ್ನು ಚಂದನ್ ಎಂದು ಗುರುತಿಸಲಾಗಿದೆ. ಕಳೆದ ಮೇ 1ರಂದು ಚಂದನ್‌ಗೆ ಪವನ್ ಮತ್ತು ಅಚಲ್ ಎಂಬ ಸ್ನೇಹಿತರು ಕರೆ ಮಾಡಿ ಚಿಕ್ಕಜಾಲ ಬಳಿಯ ಪಬ್‌ಗೆ ಬರಲು ಹೇಳಿದ್ದರು. ತಡರಾತ್ರಿ ತನಕ ಅಚಲ್ ಮತ್ತು ಪವನ್, ಚಂದನ್ ಮೂವರು ಸೇರಿ ಪಾರ್ಟಿ ಮಾಡಿದ್ದರು.

ನಂತರ ಜಾಲಿ ರೈಡ್ ಹೋಗೋಣ ಎಂದು ಚಂದನ್ ಕಾರಿನಲ್ಲೇ ಏರ್‌ಪೋರ್ಟ್ ಕಡೆಗೆ ಹೊರಟಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರಿನಲ್ಲಿದ್ದ ಮೂವರ ಮೇಲೂ ಹಲ್ಲೆ ಮಾಡಿ ಚಂದನ್ ಬಳಿಯಿದ್ದ 3 ಲಕ್ಷ ಮೌಲ್ಯದ ಚಿನ್ನ, ನಗದು ದೋಚಿ ಎಸ್ಕೇಪ್ ಆಗಿದ್ದರು. ಈ ವೇಳೆ ಜೊತೆಗಿದ್ದ ಅಚಲ್ ಮತ್ತು ಪವನ್ ಪೊಲೀಸರಿಗೆ ದೂರು ನೀಡೋದು ಬೇಡ ಎಂದು ಚಂದನ್ ಮನವೊಲಿಸಿದ್ದರು. ಇದಾದ 1 ವಾರದ ನಂತರದ ಘಟನೆ ಬಗ್ಗೆ ಅನುಮಾನಗೊಂಡ ಚಂದನ್ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸ್ ತನಿಖೆಯಲ್ಲಿ ಜೊತೆಗಿದ್ದ ಸ್ನೇಹಿತರೇ ಸುಪಾರಿ ನೀಡಿ, ಸುಲಿಗೆ ಮಾಡಿಸಿರುವುದು ಗೊತ್ತಾಗಿದೆ. ಸದ್ಯ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯಿಂದ BMTC ಡ್ರೈವರ್ ಗೆ ಚಪ್ಪಲಿಯಿಂದ ಹಲ್ಲೆ ಕೇಸ್: ಕಠಿಣ ಕ್ರಮಕ್ಕೆ ಸಾರಿಗೆ ಸಚಿವರ ಸೂಚನೆ!

ಬೆಂಗಳೂರು:- ಬಿಎಂಟಿಸಿ ಡ್ರೈವರ್‌ಗೆ ಚಪ್ಪಲಿಯಿಂದ ಮಹಿಳೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಹಾಗೂ ಪೊಲೀಸ್ ಕಮಿಷನರ್‌ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದಾರೆ. ಬಿಎಂಟಿಸಿ ಡ್ರೈವರ್‌ಗೆ ಚಪ್ಪಲಿಯಿಂದ ಮಹಿಳೆಯೊಬ್ಬರು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪತ್ರದ ಮುಖೇನ ಸಾರಿಗೆ ಸಚಿವರು ಆಗ್ರಹಿಸಿದ್ದಾರೆ.

ಪತ್ರದ ಸಾರಾಂಶ ಹೀಗಿದೆ!

ಎರಡು ದಿನಗಳಿಂದಷ್ಟೇ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳಾ ಟೆಕ್ಕಿಯೊಬ್ಬರು ತಾವು ಕೋರಿದ ಕಡೆ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಚಾಲಕ ಹುಸೇನ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇತ್ತೀಚೆಗೆ ಬಸ್ ಚಾಲಕರು ಹಾಗೂ ನಿರ್ವಾಹಕರ ಮೇಲೆ ಇಂತಹ ಹಲ್ಲೆ ಮತ್ತು ಅವಮಾನಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ಕಿಡಿಗೇಡಿಗಳು ಪ್ರಾಣಕ್ಕೆ ಸಂಚಕಾರ ತರುವಂತಹ ಪ್ರಯತ್ನವನ್ನೂ ನಡೆಸಿದ್ದಾರೆ. ಚಾಕುವಿನಿಂದ ಹಲ್ಲೆ ಮಾಡಿದ ಘಟನೆಯೂ ಈ ಹಿಂದೆ ನಡೆದಿತ್ತು. ಹೀಗಾಗಿ, ಇಂತಹ ನಡೆಯನ್ನು ತಪ್ಪಿಸಲು ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ ಯಾವುದೇ ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಹಿತರಕ್ಷಣೆ ನಮ್ಮ ಬದ್ಧತೆಯಾಗಿದ್ದು, ನಮ್ಮ ಇಲಾಖೆಯ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆ ಮತ್ತು ಅವಮಾನವನ್ನು ಸಹಿಸಲಾಗದು. ನಮ್ಮ ಸಿಬ್ಬಂದಿಯಿಂದ ಏನಾದರೂ ಪ್ರಮಾದವಾದರೆ, ದೂರು ನೀಡಿದ ಕೂಡಲೇ ವಿಚಾರಣೆ ನಡೆಸಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ನಾವು ಕೂಡ ಮುಲಾಜಿಲ್ಲದೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ, ಕಾನೂನು ಮೀರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ಹೀಗಾಗಿ, ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಈ ರೀತಿಯ ಪ್ತಕರಣಗಳು ಮರುಕಳಿಸದಂತೆ ತಡೆಯಲು ಶಾಶ್ವತ ಪರಿಹಾರವನ್ನು ರೂಪಿಸಲು‌ ಕೋರಿದೆ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ನಾಲ್ಕು ಗುಂಟೆ ಜಾಗಕ್ಕಾಗಿ ತಮ್ಮನನ್ನೇ ಕೊಲೆಗೈದ ಅಣ್ಣಂದಿರು: ಓರ್ವ ಅರೆಸ್ಟ್- ತನಿಖೆ ಚುರುಕು!

0

ಕೋಲಾರ:- ಜಿಲ್ಲೆಯ ಕೆಜಿಎಫ್ ತಾಲೂಕಿನ ಎನ್.ಜಿ.ಹುಲ್ಕೂರು ಗ್ರಾಮದಲ್ಲಿ ಒಡಹುಟ್ಟಿದ ಅಣ್ಣಂದಿರಿಂದಲೇ ತಮ್ಮನ ಕೊಲೆ ನಡೆದಿರುವ ಘಟನೆ ಜರುಗಿದೆ. 60 ವರ್ಷದ ರಮೇಶ್ (೬೦) ಕೊಲೆಯಾದ ತಮ್ಮ. ಸಂಪಂಗಿ, ‌ಸೀನಪ್ಪ, ರಘುಪತಿ ಕೊಲೆ ಮಾಡಿದ ಆರೋಪಿಗಳು.

ನಾಲ್ಕು ಗುಂಟೆ ಜಮೀನು ವಿಚಾರಕ್ಕೆ ಈ ಕೊಲೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೀನಪ್ಪ ಬಂಧಿತ ಆರೋಪಿ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!