ಪುಲಿಗೆರೆ ಉತ್ಸವದಲ್ಲಿ ಚಿತ್ರಕಲಾ ಶಿಬಿರ

0
kala
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬೆಂಗಳೂರಿನ ಇನ್ಫೋಸಿಸ್ ಪ್ರತಿಷ್ಠಾನದಿಂದ ನಡೆದ `ಪುಲಿಗೆರೆ ಉತ್ಸವ’ ಸಂದರ್ಭದಲ್ಲಿ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಲಕ್ಷ್ಮೇಶ್ವರ ದೃಶ್ಯ ವಲ್ಲರಿ ಚಿತ್ರಕಲಾ ಶಿಬಿರ ಆಯೋಜಿಸಲಾಗಿತ್ತು. ಈ ಚಿತ್ರ ಕಲಾ ಶಿಬಿರದಲ್ಲಿ ಕಲಾವಿದರು ಬಿಡಿಸಿದ ಲಕ್ಷ್ಮೇಶ್ವರದಲ್ಲಿರುವ ಪ್ರಾಚೀನ ದೇವಸ್ಥಾನ, ಸ್ಮಾರಕಗಳ ಎಲ್ಲ ಚಿತ್ರಗಳು ಭಾನುವಾರ ಸೋಮೇಶ್ವರ ದೇವಸ್ಥಾನದಲ್ಲಿ ಪ್ರದರ್ಶನಗೊಂಡು ಕಲಾರಸಿಕರ ಮನಸೂರೆಗೊಂಡವು.

Advertisement

ಕಲಾವಿದರು ಲಕ್ಷ್ಮೇಶ್ವರದ ಸೋಮೇಶ್ವರ, ಗೊಲ್ಲಾಳೇಶ್ವರ, ಲಕ್ಷ್ಮಿಲಿಂಗನ ದೇವಸ್ಥಾನ, ಬಸದಿ, ಮಸೀದಿ, ಜಾನಪದಗಳ ಶಿಲ್ಪಕಲೆಯನ್ನು ತಮ್ಮ ಕೈ ಚಳಕದಿಂದ ಚಿತ್ರಿಸುವ ಮೂಲಕ ನಾಡಿನ ಸಂಸ್ಕೃತಿ ಪರಂಪರೆಯನ್ನು ಜೀವಂತಗೊಳಿಸುವ ಪ್ರಯತ್ನ ಮಾಡಿದ್ದರು. ಕಲಾ ಶಿಬಿರದಲ್ಲಿ ವಿವಿಧ ಜಿಲ್ಲೆಗಳ ಕಲಾವಿದರಾದ ರಾಜು ತೇರದಾಳ, ಮಾರುತಿ, ಹೇಮರೆಡ್ಡಿ ಎನ್, ಶಂಕರ ಕಡಕುಂಟ್ಲ, ಗಂಗಧರ ಬಿ, ಪೂನಂ ಬಸವಾ, ಕೌಶಿಕ ಹೆಗಡೆ, ಮಹೇಶ ಹೊನಲು, ಕೌಶಿನಾಥ ಕಾಳೆ ಮತ್ತು ಲಕ್ಷ್ಮೇಶ್ವರದ ಚಿತ್ರಕಲಾ ಶಿಕ್ಷಕ ಪ್ರವೀಣ ಗಾಯಕರ ಸೇರಿದಂತೆ ಒಟ್ಟು 10 ಕಲಾವಿದರಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಭಾರತೀಯ ವಿದ್ಯಾಭವನದ ನಿರ್ದೇಶಕಿ ನಾಗಲಕ್ಷ್ಮಿ ರಾವ್, ನಮ್ಮ ಸಾಂಸ್ಕೃತಿಕ ಲೋಕದ ಗತವೈಭವವನ್ನು ಭವಿಷ್ಯದ ದಿನಗಳಿಗೆ ಪರಿಚಯಿಸುವ ಮಹತ್ತರ ಕಾರ್ಯ ಕಲಾವಿದರದ್ದಾಗಿದೆ. ಅವರ ಕಲಾ ಪ್ರತಿಭೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಕಾರ್ಯಕ್ಕೆ ಭಾರತೀಯ ವಿದ್ಯಾಭವನ ಕೈ ಜೋಡಿಸುತ್ತಿದೆ. ನಾಡಿನ ಅನೇಕ ಕಲಾವಿದರಿಂದ ಇಲ್ಲಿನ ಶಿಲ್ಪಕಲೆಗಳ ಕುರಿತ ಚಿತ್ರಗಳನ್ನು ಬರೆಸುವ ಎಲ್ಲ ಚಿತ್ರಗಳನ್ನು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಸಂರಕ್ಷಿಸಿ ಪ್ರದರ್ಶಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಈ ವೇಳೆ ಗೋವಿಂದ ಕುಲಕರ್ಣಿ, ಜಿ.ಎಸ್. ಗುಡಗೇರಿ, ರಾಘವೇಂದ್ರ ಪೂಜಾರ ಸೇರಿ ಸೋಮೇಶ್ವರ ಭಕ್ತರ ಸೇವಾ ಕಮಿಟಿಯ ಸದಸ್ಯರು ಇದ್ದರು.


Spread the love

LEAVE A REPLY

Please enter your comment!
Please enter your name here