ವಿಜಯಸಾಕ್ಷಿ ಸುದ್ದಿ, ಗದಗ: ಪಂಚ ಗ್ಯಾರಂಟಿಗಳಿಂದ ದೂರವಾಗಿರುವ ಅರ್ಹ ಕುಟುಂಬಗಳನ್ನು ಪಂಚ ಗ್ಯಾರಂಟಿ ಯೋಜನೆ ವ್ಯಾಪ್ತಿಗೆ ಸೇರಿಸಲು ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ವತಿಯಿಂದ ಜುಲೈ 26 ಹಾಗೂ 27ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಗದಗ ತಾಲೂಕಿನಲ್ಲಿ ಶೇ. 98ಕ್ಕೂ ಅಧಿಕ ಕುಟುಂಬಗಳು ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದು, ಅರ್ಹ ಫಲಾನುಭವಿಗಳು ಯೋಜನೆಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ, ಕುಟುಂಬದ ಸದಸ್ಯರ ಫೊಟೊ ಬದಲಾವಣೆ, ಕುಟುಂಬದ ಮುಖ್ಯಸ್ಥರ ಬದಲಾವಣೆ ಸೇರಿ ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಯೋಜನೆಯಡಿ ಹೊಸದಾಗಿ ಅರ್ಜಿ ಹಾಕಲಾಗುವುದು. ಇದುವರೆಗೆ ಪಂಚ ಗ್ಯಾರಂಟಿ ಯೋಜನೆಗಳ ಉಪಯೋಗ ಪಡೆಯದಿರುವ ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ನೀಡಿ ಯೋಜನೆಯ ಸುದಪಯೋಗ ಪಡೆದುಕೊಳ್ಳಬಹುದಾಗಿದೆ.
ಅರ್ಹ ಫಲಾನುಭವಿಗಳು ಮುಳಗುಂದ ನಾಕಾ ಬಳಿಯ ಕೆಎಸ್‌ಆರ್‌ಟಿಸಿ ಡಿಪೋ ಎದುರಿನ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿರುವ ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಗೆ ಜುಲೈ 26 ಹಾಗೂ 27ರಂದು ಬೆಳಿಗ್ಗೆ 10ರಿಂದ ಸಂಜೆ 5ರೊಳಗಾಗಿ ಭೇಟಿ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.
“ಅಭಿಯಾನದಲ್ಲಿ ರೇಷನ್ ಕಾರ್ಡ್ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ, ಕುಟುಂಬದ ಸದಸ್ಯರ ಫೊಟೊ ಬದಲಾವಣೆ, ಕುಟುಂಬದ ಮುಖ್ಯಸ್ಥರ ಬದಲಾವಣೆ ಸೇರಿ ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಯೋಜನೆಯಡಿ ಹೊಸದಾಗಿ ಅರ್ಜಿ ಹಾಕಲಾಗುವುದು
– ಅಶೋಕ ಮಂದಾಲಿ.
ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ.



