ವಿಜಯಸಾಕ್ಷಿ ಸುದ್ದಿ, ಗದಗ: ವೀರಶೈವ ಪಂಚಮಸಾಲಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, ಗದಗ ಸಂಸ್ಥೆಯ 2025–26ನೇ ಸಾಲಿನ 30ನೇ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ ಭಾನುವಾರ ಎಪಿಎಂಸಿ ಯಾರ್ಡ್ನ ಸ್ಟೇಟ್ ಬ್ಯಾಂಕ್ ಎದುರಿನ ಸಹಕಾರಿ ಕಚೇರಿ ಆವರಣದಲ್ಲಿ ನಡೆಯಿತು.
ಸಹಕಾರಿ ಅಧ್ಯಕ್ಷ ಎಸ್.ಎಂ. ಪಾಟೀಲ (ಮಲ್ಲಸಮುದ್ರ) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2025–26ನೇ ಸಾಲಿನ ಲೆಕ್ಕಪತ್ರ, ಜಮಾ–ಖರ್ಚು, ಲಾಭ–ಹಾನಿ, ಅಢಾವೆ ಪತ್ರಿಕೆ ಹಾಗೂ ಲೆಕ್ಕಪರಿಶೋಧನಾ ವರದಿಯ ಅನುಪಾಲನಾ ವರದಿ ಸೇರಿದಂತೆ ಅಜೆಂಡಾದ 1ರಿಂದ 23ರವರೆಗಿನ ವಿಷಯಗಳನ್ನು ಚರ್ಚಿಸಿ ಸರ್ವಾನುಮತದಿಂದ ಅನುಮೋದಿಸಲಾಯಿತು.
ಸಹಕಾರಿಯ ಮ್ಯಾನೇಜರ್ ವಿ.ಸಿ. ಕರಡಿ ಅವರು ಸಭೆಯಲ್ಲಿ ಸಂಸ್ಥೆಯ ಸಂಪೂರ್ಣ ಮಾಹಿತಿಯನ್ನು ಸದಸ್ಯರಿಗೆ ವಿವರಿಸಿದರು. 2026–27ನೇ ಸಾಲಿನ ಅಂದಾಜು ಆಯ–ವ್ಯಯ ಪತ್ರಿಕೆಯನ್ನೂ ಸಭೆಯಲ್ಲಿ ಮಂಡಿಸಲಾಯಿತು.
2025–26ನೇ ಸಾಲಿನಲ್ಲಿ ಸಹಕಾರಿಯು ₹5,11,104.28 ನಿವ್ವಳ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ.10ರಷ್ಟು ಲಾಭಾಂಶ (ಡಿವಿಡೆಂಡ್) ವಿತರಿಸಲು ಘೋಷಿಸಲಾಯಿತು.
ಸಭೆಯ ಆರಂಭದಲ್ಲಿ ಸಹಕಾರಿ ಸದಸ್ಯರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಎರಡು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಐ.ಬಿ. ಅವರಾದಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ವಿ.ಎಸ್. ಉಪ್ಪಿನ ಸ್ವಾಗತಿಸಿದರು.
ಸಮಾಜದ ಆಶಯದಂತೆ ಸಭೆಯಲ್ಲಿ ಪಂಚಮಸಾಲಿ ವಧು–ವರರ ಮಾಹಿತಿ ಕೇಂದ್ರವನ್ನು ಆರಂಭಿಸಲಾಯಿತು. ಇದರ ಪ್ರಯೋಜನವನ್ನು ಸಮಾಜದ ಎಲ್ಲರೂ ಪಡೆದುಕೊಳ್ಳುವಂತೆ ಮನವಿ ಮಾಡಲಾಯಿತು. ಮಲ್ಲಪ್ಪ ಯ. ಹುಣಸಿಕಟ್ಟಿ (ಹೊಂಬಳ) ಅವರು ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು. ನಿವೃತ್ತ ಜಿಲ್ಲಾ ಸರ್ಜನ್ ಡಾ. ಆರ್.ಎನ್. ಪಾಟೀಲ ಅವರು ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಿದರು.
ವೇದಿಕೆಯಲ್ಲಿ ಸಹಕಾರಿ ಉಪಾಧ್ಯಕ್ಷ ಡಿ.ಎನ್. ಆಸಂಗಿ, ನಿರ್ದೇಶಕರಾದ ಎಸ್.ಬಿ. ಕಲಕೇರಿ, ಎಸ್.ಎಲ್. ನೀಲಗುಂದ, ವಿ.ಎಸ್. ಉಪ್ಪಿನ, ಸವಿತಾ ಎಂ. ಪಾಟೀಲ ಹಾಗೂ ರಾಜೇಶ್ವರಿ ಐ. ಕಣವಿ ಉಪಸ್ಥಿತರಿದ್ದರು.
ನಿರ್ದೇಶಕ ಎಸ್.ಎಲ್. ನೀಲಗುಂದ ವಂದನಾರ್ಪಣೆ ಸಲ್ಲಿಸಿ, ಸಂಸ್ಥೆಯ ಸದಸ್ಯರು, ನೌಕರ ವರ್ಗ ಹಾಗೂ ಪಿಗ್ಮಿ ಏಜೆಂಟರಿಗೆ ಕೃತಜ್ಞತೆ ಸಲ್ಲಿಸಿದರು.
12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಸಹಕಾರಿ ಸದಸ್ಯರ ಮಕ್ಕಳಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಸ್ಎಸ್ಎಲ್ಸಿಯ 7 ವಿದ್ಯಾರ್ಥಿಗಳು ಹಾಗೂ ಪಿಯುಸಿಯ 5 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.



