ವಿಜಯಸಾಕ್ಷಿ ಸುದ್ದಿ, ಗದಗ : ಪಂಚಮಸಾಲಿ ಸಮಾಜದ ಸಂಘಟನೆ ಬಲಪಡಿಸುವುದೂ ಸೇರಿದಂತೆ ಸಮಾಜದ ಅಭಿವೃದ್ಧಿಗಾಗಿ ಪಂಚಮಸಾಲಿ ಸಮಾಜ ಸೇವಾ ಟ್ರಸ್ಟ್ ಆರಂಭಿಸಲಾಗುತ್ತಿದ್ದು, ಜು. 28ರಂದು ಟ್ರಸ್ಟ್ನ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ಮೋಹನ ಮಾಳಶೆಟ್ಟಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಸುವ್ಯವಸ್ಥಿತ ಸಮುದಾಯ ಭವನ ನಿರ್ಮಾಣ, ಜಿಲ್ಲೆಯ ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣದ ಜೊತೆಗೆ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಟ್ರಸ್ಟ್ನ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಜು. 28ರಂದು ಟ್ರಸ್ಟ್ ಉದ್ಘಾಟನೆ ಜೊತೆಗೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 75ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲಾ ವ್ಯಾಪ್ತಿಯ ಪಂಚಮಸಾಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಜು. 20ರೊಳಗಾಗಿ ತಮ್ಮ ಪಾಸ್‌ಪೋರ್ಟ್ ಸೈಜ್ ಫೋಟೊ ಜೊತೆಗೆ ಅಂಕಪಟ್ಟಿ ಝರಾಕ್ಸ ಪ್ರತಿ, ಆಧಾರ್ ಕಾರ್ಡ್ ಪ್ರತಿ ಲಗತ್ತಿಸಿ ಕೆಸಿ ರಾಣಿ ರಸ್ತೆಯಲ್ಲಿರುವ ಟ್ರಸ್ಟ್ನ ಕಚೇರಿಗೆ ತಲುಪಿಸಬೇಕು. ಮಾಹಿತಿಗಾಗಿ ಸಂಗಮೇಶ ಕವಳಿಕಾಳಿ (87222-22929), ಅನಿಲ್ ಪಾಟೀಲ (98452-98279) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಜು. 28ರಂದು ಪಂಚಮಸಾಲಿ ಸಮಾಜ ಸೇವಾ ಟ್ರಸ್ಟನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ವಿ.ಪ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಕಳಕಪ್ಪ ಬಂಡಿ, ವಿ.ಪ ಸದಸ್ಯ ಎಸ್.ವಿ. ಸಂಕನೂರ ಸೇರಿ ಹಲವು ಮುಖಂಡರು ಪಾಲ್ಗೊಳ್ಳುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ಮುಖಂಡರಾದ ಶಾಂತಣ್ಣ ಮುಳವಾಡ, ಅನಿಲ ಪಾಟೀಲ, ಸಂಗಮೇಶ ಕವಳಿಕಾಯಿ ಸೇರಿ ಹಲವರು ಇದ್ದರು.