ಬೆಳಗಾವಿ: ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಎಂದು ಕೆ.ಎನ್. ರಾಜಣ್ಣ ಬ್ಯಾಟಿಂಗ್ ಬೀಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಒಂದು ವೇಳೆ ಹೈಕಮಾಂಡ್ ಮನಸ್ಸು ಮಾಡಿದರೆ ಸಿಎಂ ರೇಸ್‌ನಲ್ಲಿ ಪರಮೇಶ್ವರ್ ಹಾಗೂ ಎಂ.ಬಿ. ಪಾಟೀಲ್ ಕೂಡ ಇದ್ದಾರೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಎರಡುವರೆ ವರ್ಷಕ್ಕೆ ಮಾತ್ರ ಸಿಎಂ ಆಗಿ ಆಯ್ಕೆ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಸಿಎಲ್‌ಪಿ ಸಭೆಯಲ್ಲಿ ಓಟಿಂಗ್ ನಡೆದು ಐದು ವರ್ಷಕ್ಕೆ ಮುಖ್ಯಮಂತ್ರಿ ಆಗಿದ್ದಾರೆ. ಮಧ್ಯೆ ಬದಲಾಗಬೇಕಾದರೆ ಅವರು ರಾಜೀನಾಮೆ ನೀಡಬೇಕು. ಅಲ್ಲಿಯವರೆಗೆ ಅವರೇ ಸಿಎಂ ಆಗಿರುತ್ತಾರೆ ಎಂದರು.
ಒಂದು ವೇಳೆ ಬದಲಾವಣೆ ಅನಿವಾರ್ಯವಾದರೆ ಡಿ.ಕೆ. ಶಿವಕುಮಾರ್ ಒಬ್ಬರೇ ಅನಿವಾರ್ಯಾನಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘2013 ರಲ್ಲಿ ಪರಮೇಶ್ವರ್ ಪಕ್ಷದ ಅಧ್ಯಕ್ಷರಾಗಿದ್ದರು, ಆಗ ಪಕ್ಷ ಅಧಿಕಾರಕ್ಕೆ ಬಂತು. ಅವರನ್ನು ಪರಿಗಣಿಸಬೇಕಲ್ಲಾ? ದಲಿತರು ಎಂಬ ಕಾರಣಕ್ಕೆ ಮಾತ್ರವಲ್ಲ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಶ್ರಮವೂ ಇದೆ. ಒಬ್ಬರಿಂದಲೇ ಅಧಿಕಾರಕ್ಕೆ ಬಂತು ಎನ್ನುವುದನ್ನು ನಾನು ಒಪ್ಪುವುದಿಲ್ಲ’ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್‌ಗೆ ಟಾಂಗ್ ನೀಡಿದರು.



