ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಸುಮಾರು 5 ಸಾವಿರ ಮಕ್ಕಳಿಗೆ ಅಕ್ಷರ ಜ್ಞಾನವೇ ಇಲ್ಲ ಎಂದು ಬಿಇಒ ಅರ್ಜುನ ಕಂಬೋಗಿ ಬೇಸರ ವ್ಯಕ್ತಪಡಿಸಿದರು.
ಅವರು ಶುಕ್ರವಾರ ತಾ.ಪಂ ಸಭಾಭವನದಲ್ಲಿ ತಾ.ಪಂ ಆಡಳಿತಾಧಿಕಾರಿ ನಂದಾ ಹಣಬರಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಈ ವಿಷಯವನ್ನು ಪ್ರಸ್ತಾಪಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆಗೆ ಕೈಗೊಂಡ ಮಾನದಂಡಗಳು, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಬಗ್ಗೆ ತಿಳಿಸಿಕೊಟ್ಟಿದ್ದಾರೆಯೇ ಎಂದು ತಾ.ಪಂ ಆಡಳಿತಾಧಿಕಾರಿ ನಂದಾ ಹಣಬರಟ್ಟಿಯವರು ಬಿಇಒರವರಿಗೆ ಪ್ರಶ್ನಿಸಿದರು. ಆಗ ಬಿಇಒ, ಪರೀಕ್ಷಾ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ಇಒ ಚಂದ್ರಶೇಖರ ಕಂದಕೂರ, 8 ಮತ್ತು 9ನೇ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ಕೊಟ್ಟು ಪರೀಕ್ಷೆಗಳನ್ನು ಎದುರಿಸುವ ಹಾಗೂ ಉತ್ತಮ ಫಲಿತಾಂಶ ಪಡೆಯುವ ಮನೋಸ್ಥೈರ್ಯ ಬೆಳೆಸಬೇಕು. ಮುಖ್ಯವಾಗಿ 9ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರುತ್ತಿಲ್ಲ ಅಂದರೆ ಇದೆಂಥಾ ಸ್ಥಿತಿ ಎಂದು ಪ್ರಶ್ನಿಸಿದರು. ಆಗ ಬಿಇಒರವರು ಅಕ್ಷರ ಬಾರದೆಯಿರುವ 5 ಸಾವಿರ ಮಕ್ಕಳಿದ್ದಾರೆ. ಅವರ ಸುಧಾರಣೆಗೆ ಆದ್ಯತೆ ನೀಡಲಾಗಿದೆ ಎಂದಾಗ ಮಧ್ಯ ಪ್ರವೇಶಿಸಿದ ಆಡಳಿತಾಧಿಕಾರಿ, ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದ್ದು, ಶೈಕ್ಷಣಿಕ ಸುಧಾರಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ತಾ.ಪಂ ಇಒರವರಿಗೆ ಸೂಚಿಸಿದರು.
ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು 13 ಅಂಕಗಳನ್ನು ಪಡೆದರೆ ಸಾಕು ಅವರು ಪಾಸಾಗುತ್ತಾರೆ. ಕಾರಣ ಎನ್‌ಸಿಆರ್‌ಟಿ ಪ್ರಕಾರ 20 ಅಂಕಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಕೇವಲ 13 ಅಂಕಗಳನ್ನು ಪಡೆದರೂ ತೇರ್ಗಡೆಯಾಗುತ್ತಾರೆ ಎಂದು ಬಿಇಒರವರು ಸಭೆಗೆ ವಿವರಿಸಿದರು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಬದಲಾಗಿ ಬಂದಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಸ್ವಂತ ಕಟ್ಟಡ, ಬಾಡಿಗೆ, ಶಾಲೆ, ಸಮುದಾಯ ಭವನಗಳಲ್ಲಿ ಸೇರಿ ಒಟ್ಟು 182 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಭೆಯ ಗಮನಕ್ಕೆ ತರುತ್ತಿದ್ದಂತೆ ತಾ.ಪಂ ಇಒರವರು, ನೀವು ತಾಲೂಕಿನಲ್ಲಿ 182 ಅಂಗನವಾಡಿ ಕೇಂದ್ರಗಳು ಇವೆ ಎಂದು ವಿವರಿಸುತ್ತೀರಿ. ಆದರೆ ಮಾಹಿತಿಯಲ್ಲಿ 171 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದಿದೆ, ಹಾಗಾದರೆ ಉಳಿದ 11 ಅಂಗನವಾಡಿ ಕೇಂದ್ರಗಳು ಎಲ್ಲಿ ಎಂದು ಪ್ರಶ್ನಿಸಿದರು.
ಆಡಳಿತಾಧಿಕಾರಿ ನಂದಾ ಹನಬರಟ್ಟಿ, ಇಒ ಚಂದ್ರಶೇಖರ ಕಂದಕೂರ, ಯೋಜನಾಧಿಕಾರಿ ಸಿ.ಎಸ್. ನೋಲಗುಂದ ಸೇರಿದಂತೆ ಅಧಿಕಾರಿಗಳಿದ್ದರು.
ಸಭೆಗೆ ಆಗಮಿಸಿದ್ದ ಪಿಡಬ್ಲ್ಯುಡಿ ಅಭಿಯಂತರರು ಇಲಾಖೆಯ ಹೆಸರನ್ನು ಬದಲಿಸಿಕೊಂಡು ಪ್ರಗತಿ ವರದಿ ಒಪ್ಪಿಸಲು ಮುಂದಾದರು. ಇದರಿಂದ ಗಲಿಬಿಲಿಗೊಂಡ ಆಡಳಿತಾಧಿಕಾರಿಗಳು ನಿಮ್ಮ ಇಲಾಖೆ ಯಾವುದು ಎಂದು ಅಭಿಯಂತರರನ್ನು ಪ್ರಶ್ನಿಸಿ, ನೀವು ಕೊಟ್ಟಿರುವ ವರದಿ ಸಂಪರ್ಕ ಮತ್ತು ಕಟ್ಟಡ ನಿರ್ಮಾಣ ಇಲಾಖೆ ಎಂದಿದೆ. ನೆಪ ಹೇಳಲು ಇಲಾಖೆಯ ಹೆಸರನ್ನೇ ಬದಲಿಸುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಅಧಿಕಾರಿ ಎಸ್.ಎಫ್. ತಹಸೀಲ್ದಾರ ಬಿಡುಗಡೆಯಾದ ಅನುದಾನದ ಬಗ್ಗೆ ವಿವರಿಸದೆ ಖರ್ಚು ಮಾಡಿದ ವಿವರವನ್ನು ಮಾತ್ರ ಸಭೆಯ ಗಮನಕ್ಕೆ ತರುತ್ತಿರುವುದನ್ನು ಗಮನಿಸಿದ ಆಡಳಿತಾಧಿಕಾರಿಗಳು, ಸರಕಾರ ಇಲಾಖೆಗೆ ಅನುದಾನ ಕೊಟ್ಟಿದೆಯೆಂದಾದರೆ, ಬಿಡುಗಡೆಗೊಂಡ ಅನುದಾನದ ಮಾಹಿತಿ ಏಕೆ ಇಲ್ಲ ಎನ್ನುತ್ತಿದ್ದಂತೆ ಪೇಚಿಗೆ ಸಿಲುಕಿದ ಅಧಿಕಾರಿಗಳು ಮುಂದಿನ ಸಭೆಗೆ ತರುವುದಾಗಿ ನುಣುಚಿಕೊಂಡರು.



