ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪವಿತ್ರಾ ಗೌಡ ಆಗಿದ್ದಾರೆ. ಎ1 ಪವಿತ್ರಾ ಗೌಡ, ಎ2 ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಈ ಹಿಂದೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಮತ್ತೆ ಎಲ್ಲಾ ಆರೋಪಿಗಳನ್ನು ಜೈಲಿಗೆ ಹಾಕಲಾಗಿತ್ತು.
ಆದರೆ ಇದೀಗ ಎ1 ಆರೋಪಿ ಪವಿತ್ರಾ ಗೌಡ ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಆದ್ರೆ ಪುನರ್ ಪರಿಶೀಲಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಕಳೆದ ಆಗಸ್ಟ್ 14 ರಂದು ಕೊಲೆ ಪ್ರಕರಣದಲ್ಲಿ A1 ಆಗಿರುವ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಜಾಮೀನು ರದ್ದು ಆದೇಶದಲ್ಲಿ ಕೆಲ ತಪ್ಪುಗಳಿವೆ.
ಮತ್ತೊಮ್ಮೆ ಪರಿಶೀಲಿಸಿ ಜಾಮೀನು ನೀಡುವಂತೆ ಪವಿತ್ರಾ ಗೌಡ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ. ಅರ್ಜಿ ವಿಚಾರಣೆ ನಡೆಸಿದ ಪೀಠ ನವೆಂಬರ್ 6 ರಂದು ಹೊರಡಿಸಿದ ಆದೇಶದಲ್ಲಿ, ತೀರ್ಪನ್ನು ಪರಿಶೀಲಿಸಲು ಯಾವುದೇ ಅವಕಾಶವಿಲ್ಲ ಎಂದು ಹೇಳಿದೆ.
ನಾವು ಆದೇಶ ಮತ್ತು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ. ನಮ್ಮ ಅಭಿಪ್ರಾಯದಲ್ಲಿ, ಪುನರ್ ಪರಿಶೀಲನೆಗೆ ಯಾವುದೇ ಪ್ರಕರಣವನ್ನು ಸಲ್ಲಿಸಲಾಗಿಲ್ಲ. ಈ ಹಿನ್ನೆಲೆ ಈ ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಪೀಠ ತಿಳಿಸಿದೆ.


