ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಜಕ್ಕಲಿಯ ಶ್ರೀ ಮಾರುತೇಶ್ವರ ಹೊಂಡ ತುಳುಕಿಸುವ ಕಾರ್ಯಕ್ರಮದ ಅಂಗವಾಗಿ ಹಾಗೂ ದಿ. ಪೈಲ್ವಾನ್ ಮೂಕಪ್ಪಜ್ಜ ಸಂಕನೂರ ಇವರ 16ನೇ ವರ್ಷದ ಪುಣ್ಯಸ್ಮರಣೋತ್ಸವದ ನೆನಪಿಗಾಗಿ ಎರಡು ದಿನಗಳವರೆಗೆ ನಡೆದ ಪ್ರಖ್ಯಾತ ಪೈಲ್ವಾನರ ಬಯಲು ಕುಸ್ತಿ ಸ್ಪರ್ಧೆಯಲ್ಲಿ ಜಕ್ಕಲಿಯ ಪೈಲ್ವಾನ್ ಬಸವರಾಜ ಹಡಪದ ಪ್ರತಿಸ್ಪರ್ಧಿ ಬೆಳಗಾವಿಯ ಹನಮಂತ ಪೈಲ್ವಾನ್‌ನನ್ನು ಚಿತ್ ಮಾಡುವ ಮೂಲಕ ವಿರುಪಾಕ್ಷಪ್ಪ ಅಜ್ಜಪ್ಪ ಪಲ್ಲೇದ ಅವರು ನೀಡಿದ ನಗದು 7001ರೂ.ಗಳ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಗ್ರಾಮದ ಬಸ್ ನಿಲ್ದಾಣದ ಹತ್ತಿರದ ತೋಟಪ್ಪನವರು ಕಡಗದವರ ಜಮೀನಿನಲ್ಲಿ ಶ್ರೀ ಮಾರುತಿ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಈ ಕುಸ್ತಿ ಪಂದ್ಯಗಳು ನಡೆದವು.
ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಪ್ರಾಚಾರ್ಯ ಎಸ್.ಎಂ. ಕೋರಿಯವರ ಮಾತನಾಡಿ, ಗ್ರಾಮೀಣ ಸೊಗಡಿನ ಈ ಕ್ರೀಡೆಯನ್ನು ಉಳಿಸಿ ಬೆಳೆಸುವುದು ಇಂದಿನ ದಿನಗಳಲ್ಲಿನ ಅಗತ್ಯವಾಗಿದೆ. ಎಲ್ಲರೂ ಕ್ರಿಕೆಟ್ ಮತ್ತಿತರ ಆಟಗಳನ್ನೇ ಆಡುತ್ತ ಹೋದರೆ ಮೈಗೆ ಕಸುವನ್ನು, ಬುದ್ಧಿಗೆ ಬಲವನ್ನು ನೀಡಿ ಸದೃಢರನ್ನಾಗಿ ಮಾಡುವ ಈ ಕುಸ್ತಿ ಕ್ರೀಡೆಯನ್ನು ಆಡುವವರು ಇಲ್ಲವಾಗುತ್ತದೆ. ಹೀಗಾಗಿ, ಪಾಲಕರು ತಮ್ಮ ಮಕ್ಕಳಿಗೆ ಕುಸ್ತಿ ಕ್ರೀಡೆಯ ಕಡೆಗೆ ಗಮನ ನೀಡುವಂತೆ ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.
ಇಂದಿನ ದಿನಗಳಲ್ಲಿ ಕುಸ್ತಿ ನಶಿಸಿ ಹೋಗುತ್ತಿದೆ. ಇದಕ್ಕಾಗಿ ಯುವಕರು `ನನ್ನ ನಡಿಗೆ ಕುಸ್ತಿಯೆಡೆಗೆ’ ಎಂಬ ಪ್ರತಿಜ್ಞೆ ಮಾಡಿ ಕುಸ್ತಿಯನ್ನು, ಜೊತೆಗೆ ಗರಡಿ ಮನೆಗಳನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕು.
ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ, ಒಲಂಪಿಕ್ ಕ್ರೀಡೆಗಳಲ್ಲಿ ಕುಸ್ತಿಗೆ ಮಾನ್ಯತೆ ಇರುವುದನ್ನು ಗಮನಿಸಬೇಕು.
ಈಗಾಗಲೇ ವಿಶ್ವ ಮಟ್ಟದಲ್ಲಿ ಪ್ರೊ ಕಬ್ಬಡ್ಡಿಗೆ ಸಾಕಷ್ಟು ಮನ್ನಣೆ ಸಿಕ್ಕಿದೆ. ಹಾಗೆಯೇ ಒಂದಿಲ್ಲೊಂದು ದಿನ ಪ್ರೊ ಕುಸ್ತಿ ಪಂದ್ಯಗಳೂ ಬರಬಹುದು. ಅದಕ್ಕೆ ನೀವು ಈಗಿನಿಂದಲೇ ಸಿದ್ಧರಾಗಿ ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಧಾರವಾಡದ ಅಭಿಷೇಕ ಪೈಲ್ವಾನ್, ಬೆಳಗಾವಿಯ ಪರಶುರಾಮ ಪೈಲ್ವಾನ್‌ನನ್ನು ಚಿತ್ ಮಾಡುವ ಮೂಲಕ ದ್ವಿತೀಯ ಬಹುಮಾನ ಗಳಿಸಿ, ಶ್ರೀಮತಿ ಗಂಗವ್ವ ದ್ಯಾಮಪ್ಪ ಜಂಗಣ್ಣವರ ನೀಡಿದ ನಗದು 5001ರೂ.ಗಳನ್ನು ಪಡೆದುಕೊಂಡರು. ತೃತೀಯ ಸ್ಥಾನವನ್ನು ಬೊಮ್ಮನಹಳ್ಳಿಯ ಪ್ರತೀಕ್ ಪೈಲ್ವಾನ್ ಲಕ್ಕುಂಡಿ ದಾನೇಶ ಪೈಲ್ವಾನ್‌ನನ್ನು ಚಿತ್ ಮಾಡುವ ಮೂಲಕ ನಿವೃತ್ತ ಸೈನಿಕ ಪ್ರಕಾಶ ಎಮ್. ಕೋರಿಯವರು ನೀಡಿದ ನಗದು 3001ರೂ.ಗಳ ಬಹುಮಾನವನ್ನು ಪಡೆದುಕೊಂಡರು.
ಬಹುಮಾನ ವಿತರಣಾ ಸಮಯದಲ್ಲಿ ಉಮೇಶ ಮೇಟಿ, ಪ್ರಕಾಶ ಕೋರಿ, ಮಲ್ಲಪ್ಪ ಪಲ್ಲೇದ, ಬಸಪ್ಪ ಕೊಪ್ಪದ, ಬಸವರಾಜ ಶ್ಯಾಶೆಟ್ಟಿ, ಭೀಮಪ್ಪ ತಳವಾರ, ಮುತ್ತಣ್ಣ ಕಮ್ಮಾರ, ಬಸವರಾಜ ಕಡಗದ, ವಿರುಪಾಕ್ಷಪ್ಪ ಪಲ್ಲೇದ, ರಾಮಣ್ಣಮಾಸ್ತಾರ ತಳವಾರ, ದ್ಯಾಮಣ್ಣ ಜಂಗಣ್ಣವರ, ಹನಮಪ್ಪ ಜೋಗಿ, ಲಕ್ಷö್ಮಣ ಕುಲಕರ್ಣಿ, ಕಲ್ಲಪ್ಪ ಮರಬಸಪ್ಪನವರ ಇನ್ನಿತರರು ಉಪಸ್ಥಿತರಿದ್ದರು. ಹಿರಿಯ ಕುಸ್ತಿ ಪಟುಗಳಾದ ಸಣ್ಣದ್ಯಾಮಣ್ಣ ಮಡಿವಾಳರ, ಚನ್ನಬಸಪ್ಪ ಸೂಡಿ, ಗಾಂಧೆಪ್ಪ ಕುರಿ, ಯಲ್ಲಪ್ಪ ಮಡಿವಾಳರ ಪಂದ್ಯಗಳ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಪ್ರಕಾಶ ವಾಲಿ ಪಂದ್ಯಗಳ ವೀಕ್ಷಕ ವಿವರಣೆ ನೀಡಿದರು.
ಎರಡು ದಿನಗಳವರೆಗೆ ನಡೆದ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಪರ ಊರಿನ ಕುಸ್ತಿಪಟುಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪ್ರೇಕ್ಷಕರು ಸಿಳ್ಳೆ, ಕೇಕೆ, ಚಪ್ಪಾಳೆ ತಟ್ಟಿ ಕುಸ್ತಿಪಟುಗಳನ್ನು ಹುರಿದುಂಬಿಸುತ್ತಿದ್ದ ದೃಶ್ಯ ಕಂಡುಬಂದಿತು. ಬೆಳಗಾವಿ, ಚಿಕ್ಕನಾಳ, ಮಿಟ್ಲಕೋಡ್, ಕಲಘಟಗಿ, ಧಾರವಾಡ, ಕರಡಿಕೊಪ್ಪ, ಹಾತಲಗೇರಿ, ಶಿರೂಳ, ಶಲವಡಿ, ಪಡಚಿಂತಿ, ರೋಣ, ಹಳ್ಯಾಳ, ಲಕ್ಕುಂಡಿ, ಬೊಮ್ಮನಹಳ್ಳಿ, ಹುಯಿಲಗೋಳ ಹೀಗೆ ಅನೇಕ ಊರುಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಜೋಡಿಗಳು ರೋಮಾಂಚನಕಾರಿ ಆಟ ಪ್ರರ್ದಶಿಸಿದರು.