ವಿಜಯಸಾಕ್ಷಿ ಸುದ್ದಿ, ಡಂಬಳ : ಗ್ರಾಮದ ಜನ ಶಾಂತಿ-ಸೌಹಾರ್ದತೆಗೆ ವಿಶೇಷವಾದ ಮಹತ್ವ ನೀಡುತ್ತ ಬಂದಿದ್ದಾರೆ. ಮೊಹರಂ ಹಬ್ಬವನ್ನು ಅತ್ಯಂತ ಶಿಸ್ತುಬದ್ಧವಾಗಿ, ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕೆಂದು ಮುಂಡರಗಿ ಪಿಎಸ್‌ಐ ಸುಮಾ ಗೋರಬಾಳ ಹೇಳಿದರು.
ಡಂಬಳ ಗ್ರಾಮದ ಪೊಲೀಸ್ ಹೊರಠಾಣೆಯ ಆವರಣದಲ್ಲಿ ಮೊಹರಂ ಹಬ್ಬದ ನಿಮಿತ್ತ ಕರೆದಿದ್ದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.
ಅಹಿತಕರ ಘಟನೆಗಳು ನಡೆಯದಂತೆ ಮೊಹರಂ ಹಬ್ಬವನ್ನು ಆಚರಿಸಬೇಕು. ಕಾನೂನು ಮೀರಿದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಐಪಿಸಿ ಸೆಕ್ಷನ್ ಬದಲಾಗಿ ಬಿಎನ್‌ಎಸ್ ಸೆಕ್ಷನ್ ಜುಲೈ ತಿಂಗಳಿಂದ ಜಾರಿಗೆಯಾಗಿದ್ದು, ಈ ಕಾಯ್ದೆಗಳು ಬಹಳ ಕಠಿಣವಾಗಿದೆ. ಅನಗತ್ಯವಾಗಿ ಪ್ರಕರಣಗಳಲ್ಲಿ ಸಿಲುಕಿ ಜೀವನವನ್ನು ಹಾಳು ಮಾಡಿಕೊಳ್ಳದಿರಿ ಎಂದು ಎಚ್ಚರಿಸಿದರು.
ಗ್ರಾ.ಪಂ ಸದಸ್ಯ ಮರಿಯಪ್ಪ ಶಿದ್ದಣ್ಣವರ ಮಾತನಾಡಿ, ಡಂಬಳ ಗ್ರಾಮ ಡಾ.ಲಿಂ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಹಾಕಿ ಕೊಟ್ಟ ಸೌಹಾರ್ದತೆಯ ಪ್ರತೀಕವಾಗಿ ಎಲ್ಲಾ ಹಬ್ಬ-ಹರಿದಿನಗಳನ್ನು ಶಾಂತಿಯಿಂದ ಆಚರಿಸುತ್ತಾ ಬರುತ್ತಿದ್ದಾರೆ ಎಂದರು.
ಬುಡ್ನೆಸಾಬ ಅತ್ತಾರ ಮಾತನಾಡಿದರು. ಸಭೆಯಲ್ಲಿ ವಿರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ಧಣ್ಣ ನಂಜಪ್ಪನವರ, ಸುರೇಶ ಗಡಗಿ, ಶರಣು ಬಂಡಿಹಾಳ, ಖಾಜಾಹುಸೇನ ಹೊಸಪೇಟಿ, ಲಕ್ಷ್ಮಣ ಬೆಟಗೇರಿ, ಮೊಹದ್ದಿನ ಅಳವಂಡಿ, ಯಲ್ಲಪ್ಪ ಉಪ್ಪಾರ, ಸಿದ್ಧಯ್ಯ ಕಾಡಸಿದ್ದೇಶ್ವರಮಠ, ಸತ್ಯಪ್ಪ ಇಚ್ಚಂಗಿ, ಅಶೋಕ ತಳಗೇರಿ ಸೇರಿದಂತೆ ಯುವಕರು ಇದ್ದರು.