ಗದಗ: ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಎರಡನೇ ದಿನಕ್ಕೂ ಕಾಲಿಟ್ಟ ಉತ್ಖನನ ಕಾರ್ಯದ ವಿರುದ್ಧ ವೀರಭದ್ರೇಶ್ವರ ಭಕ್ತರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಾತತ್ತ್ವ ಇಲಾಖೆಯ ಶಿಫಾರಸ್ಸಿನ ಮೇರೆಗೆ ಈ ಪ್ರದೇಶವನ್ನು ಸೂಕ್ಷ್ಮ ವಲಯ ಎಂದು ಘೋಷಿಸಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಆದೇಶದಂತೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
“ಇದೇ ಸ್ಥಳದಲ್ಲಿ ನಾವು ಅಗ್ನಿಕುಂಡ ಮಾಡ್ತಿದ್ವಿ” ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾರ್ಚ್ 20ರಿಂದ ನಡೆಯಲಿರುವ ವೀರಭದ್ರೇಶ್ವರ ಜಾತ್ರೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಸರ್ಕಾರದ ಈ ಕ್ರಮ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ.
ಸುಮಾರು 45 ವರ್ಷಗಳ ಇತಿಹಾಸ ಹೊಂದಿರುವ ಜಾತ್ರೆಗೆ ಅಡ್ಡಿ ಬಂದರೆ ಹೋರಾಟ ಖಚಿತ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. “ಈಗಾಗಲೇ ಮೌಖಿಕವಾಗಿ ಮನವಿ ಮಾಡಿದ್ದೇವೆ. ಸರ್ಕಾರ ಸ್ಪಂದಿಸಿದ್ರೆ ಸರಿ, ಇಲ್ಲದಿದ್ರೆ ಬೀದಿಗೆ ಇಳಿಯುತ್ತೇವೆ” ಎಂಬುದು ಗ್ರಾಮಸ್ಥರ ಕಠಿಣ ನಿಲುವಾಗಿದೆ.



