ವಿಮಾನ ದುರಂತ: ಉಸಿರು ಚಲ್ಲಿದ 241 ಪ್ರಯಾಣಿಕರು.. ಕಂಬನಿ ಮಿಡಿದ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು!

0
Spread the love

ಗುಜರಾತ್:- ಅಹಮದಾಬಾದ್‌ನಲ್ಲಿ ಇಂದು(ಜೂನ್12) ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 241 ಜನರು ಮೃತಪಟ್ಟಿದ್ದಾರೆ. ಲಂಡನ್‌ಗೆ ಹೊರಟಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು. ಈ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನಲಾಗಿದೆ. ಈ ದುರಂತದಿಂದಾಗಿ ಇಡೀ ದೇಶ ಶೋಕ ಸಾಗರದಲ್ಲಿದೆ. ಇದು ಇತ್ತೀಚಿನ ಅತೀ ದೊಡ್ಡ ವಿಮಾನ ಅಪಘಾತ ಇದಾಗಿದೆ.

Advertisement

ಇಂದು(ಜೂನ್ 12) ವಿಮಾನ ಅಪಘಾತಕ್ಕೀಡಾದಾಗ 12 ಸಿಬ್ಬಂದಿ ಸೇರಿದಂತೆ ಸುಮಾರು 242 ಜನರು ಅಹಮದಾಬಾದ್-ಲಂಡನ್ ವಿಮಾನದಲ್ಲಿದ್ದರು. ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಆದರೆ, ಓರ್ವ ವ್ಯಕ್ತಿ ಮಾತ್ರ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.

ಪವಾಡದಂತೆ ಜೀವ ಉಳಿಸಿಕೊಂಡ ಒಬ್ಬ ವ್ಯಕ್ತಿ:

ವಿಮಾನ ಪತನವಾದ ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ ಪವಾಡಸದೃಶವಾಗಿ ಒಬ್ಬ ವ್ಯಕ್ತಿ ವಿಮಾನದಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದುರಂತದಲ್ಲಿ ಕರ್ನಾಟಕದ ಕ್ಲೈವ್ ಕುಂದರ್ ಸಾವು:

ಈ ವಿಮಾನದಲ್ಲಿ ಕೋ-ಪೈಲೆಟ್ ಆಗಿದ್ದ ಕರ್ನಾಟಕ ಮೂಲದ ಕ್ಲೈವ್ ಕುಂದರ್ ಅವರು ಕೂಡ ದುರಂತದಲ್ಲಿ ಪ್ರಾಣ ಬಿಟ್ಟಿದ್ದಾರೆ. ಕ್ಲೈವ್ ಕುಂದರ್ ನಿಧನಕ್ಕೆ ಬಾಲಿವುಡ್ ನಟ ವಿಕ್ರಾಂತ್ ಮಾಸಿ ಅವರು ಕಂಬನಿ ಮಿಡಿದ್ದಾರೆ.

ಮೃತರ ಕುಟುಂಬಸ್ಥರಿಗೆ ತಲಾ 1 ಕೋಟಿ ಪರಿಹಾರ ಘೋಷಿಸಿದ ಟಾಟಾ:

ಗುಜರಾತನ ಅಹಮದಾಬಾದ್​ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಟಾಟಾ ಗ್ರೂಪ್ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದೆ. ಈ ದುರಂತಕ್ಕೆ ಟಾಟಾ ಗ್ರೂಪ್​​ನ ಅಧ್ಯಕ್ಷ ಎನ್ ಚಂದ್ರಶೇಖರನ್​​​ ಅವರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂತಾಪ ಸೂಚಿಸಿದ್ದಾರೆ.

ಮೃತರಿಗೆ ಸೆಲೆಬ್ರಿಟಿಗಳಿಂದ ಸಂತಾಪ:

242 ಜನರು ಪ್ರಯಾಣ ಮಾಡುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾದ ಸುದ್ದಿ ಕೇಳಿ ವಿಶ್ವಾದ್ಯಂತ ಜನರು ಸಂತಾಪ ಸೂಚಿಸುತ್ತಿದ್ದಾರೆ. ಅಹಮದಾಬಾದ್​ನಲ್ಲಿ ನಡೆದ ಈ ಘಟನೆಯಿಂದ ಅನೇಕ ಸೆಲೆಬ್ರಿಟಿಗಳಿಗೂ ಶಾಕ್ ಆಗಿದೆ. ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಈಡಾಗಿದೆ. ಈ ಭೀಕರ ದುರಂತದ ಬಗ್ಗೆ ಯಶ್, ರಮ್ಯಾ, ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್, ರಾಧಿಕಾ ಪಂಡಿತ್ ಸೇರಿದಂತೆ ಅನೇಕ ಸೆಲಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

ರಾಜಕೀಯ ಗಣ್ಯರ ಸಂತಾಪ:

ದುರಂತಕ್ಕೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತ ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ಇದು ಪದಗಳಿಗೆ ಮೀರಿದ ಹೃದಯವಿದ್ರಾವಕ ಘಟನೆ. ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ಬಗ್ಗೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅದರಂತೆ ಕೇಂದ್ರ ಸಚಿವರು, ಸಂಸದರು, ಭಾರತ ದೇಶದ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು, ಶಾಸಕರು ಸೇರಿ ಸಾಕಷ್ಟು ರಾಜಕೀಯ ಮುಖಂಡರು ದುರಂತಕ್ಕೆ ಕಂಬನಿ ಮಿಡಿದಿದ್ದಾರೆ.


Spread the love

LEAVE A REPLY

Please enter your comment!
Please enter your name here