ಇಂಡಿಯನ್ ಪ್ರೀಮಿಯರ್ ಲೀಗ್ ಹತ್ತೊಂಬತ್ತನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳಿಗೆ ಇಂದು ತೆರೆ ಬೀಳಲಿದ್ದು, ಪ್ಲೇಆಫ್‌ನ ಕೊನೆಯ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.
ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ. ರಾಜಸ್ಥಾನ್ ರಾಯಲ್ಸ್ ಪಾಲಿಗೆ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿದ್ದು, ಪ್ಲೇಆಫ್ ಪ್ರವೇಶಿಸಲು ಗೆಲುವು ಅನಿವಾರ್ಯವಾಗಿದೆ.
ಪ್ರಸ್ತುತ ರಾಜಸ್ಥಾನ್ 14 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಈಗಾಗಲೇ ಪೈಪೋಟಿಯಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಕೇವಲ ಔಪಚಾರಿಕ ಪಂದ್ಯವನ್ನಾಡುತ್ತಿದೆ. ಆದರೆ ಮುಂಬೈ ಗೆದ್ದರೆ ಪ್ಲೇಆಫ್ ಲೆಕ್ಕಾಚಾರ ಸಂಪೂರ್ಣ ಬದಲಾಗಲಿದೆ.
ಸದ್ಯ ಪಂಜಾಬ್ ಕಿಂಗ್ಸ್ 15 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ಅದರ ಭವಿಷ್ಯ ರಾಜಸ್ಥಾನ್ ಪಂದ್ಯದ ಫಲಿತಾಂಶದ ಮೇಲೆ ನಿಂತಿದೆ. ರಾಜಸ್ಥಾನ್ ಸೋತರೆ, ಸಂಜೆ ಪಂದ್ಯದಲ್ಲಿ ಪಂಜಾಬ್ ಮತ್ತು ಕೋಲ್ಕತ್ತಾ ನಡುವಿನ ಪಂದ್ಯ ನಿರ್ಣಾಯಕವಾಗಲಿದೆ.
ಒಂದು ವೇಳೆ ಕೋಲ್ಕತ್ತಾ ಗೆದ್ದರೆ ಪಂಜಾಬ್ ಹಾಗೂ ಕೋಲ್ಕತ್ತಾ ಎರಡೂ ತಂಡಗಳು 15 ಅಂಕಗಳನ್ನು ಹೊಂದಲಿವೆ. ಆಗ ರನ್‌ರೇಟ್ ಮುಖ್ಯವಾಗಲಿದೆ. ಸದ್ಯ ಪಂಜಾಬ್ ರನ್‌ರೇಟ್ +0.309 ಇದ್ದರೆ, ಕೋಲ್ಕತ್ತಾ ರನ್‌ರೇಟ್ +0.011 ಇದೆ.
ಹೀಗಾಗಿ ಕೋಲ್ಕತ್ತಾ ಪ್ಲೇಆಫ್‌ಗೆ ಪ್ರವೇಶಿಸಬೇಕಾದರೆ ಕೇವಲ ಗೆಲುವು ಸಾಲದು, ಭರ್ಜರಿ ಅಂತರದ ಜಯ ಸಾಧಿಸಬೇಕಿದೆ. ಮೊದಲು ಬ್ಯಾಟಿಂಗ್ ಮಾಡಿದರೆ ಕನಿಷ್ಠ 77 ರನ್‌ಗಳ ಅಂತರದಿಂದ ಗೆಲ್ಲಬೇಕು. ಗುರಿ ಬೆನ್ನಟ್ಟಿದರೆ 12.1 ಓವರ್‌ಗಳೊಳಗೆ ಪಂದ್ಯ ಮುಗಿಸಬೇಕಿದೆ.
ಇನ್ನೊಂದೆಡೆ ಮಳೆ ಕೂಡ ಲೆಕ್ಕಾಚಾರ ಬದಲಾಯಿಸುವ ಸಾಧ್ಯತೆ ಇದೆ. ಮುಂಬೈ-ರಾಜಸ್ಥಾನ್ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದು ಅಂಕ ಸಿಗಲಿದೆ. ಆಗ ರಾಜಸ್ಥಾನ್ 15 ಅಂಕಗಳನ್ನೇರಿದರೂ, ಉತ್ತಮ ರನ್‌ರೇಟ್ ಹೊಂದಿರುವ ಪಂಜಾಬ್ ಕಿಂಗ್ಸ್ ಯಾವುದೇ ಆತಂಕವಿಲ್ಲದೆ ಪ್ಲೇಆಫ್ ಪ್ರವೇಶಿಸಲಿದೆ.
ಇಂದಿನ ಪಂದ್ಯಗಳ ಫಲಿತಾಂಶದ ಮೇಲೆ ಮೂರು ತಂಡಗಳ ಭವಿಷ್ಯ ನಿಂತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.



