ಬೆಂಗಳೂರು: ವರ್ತೂರು ಪೊಲೀಸರಿಂದ ಮಹಿಳೆ ಮೇಲೆ ಅಮಾನುಷ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕ್ರೈಂ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಸಂಜಯ್ ರಾಥೋಡ್, ಸಂತೋಷ್ ಕುದರಿ, ಅರ್ಚನಾ ಅಮಾನತುಗೊಂಡ ಅಪರಾಧ ವಿಭಾಗದ ಸಿಬ್ಬಂದಿಗಳಾಗಿದ್ದಾರೆ. ಇನ್ಸ್ ಪೆಕ್ಟರ್ ಗಮನಕ್ಕೆ ತರದೇ ಆರೋಪಿತೆ ಸುಂದರಿ ಬೀಬಿ ಕರೆತಂದು ಹಲ್ಲೆ ಆರೋಪ ಕೇಳಿಬಂದಿದೆ.
ಪಶ್ಚಿಮ ಬಂಗಾಳ ಮೂಲದ ಸುಂದರಿ ಬೀಬಿ (34) ಬೆಂಗಳೂರಿನ ವರ್ತೂರು ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಮನೆ ಕೆಲಸ ಮಾಡಿಕೊಂಡಿದ್ದರು. ಅಕ್ಟೋಬರ್ 31ರಂದು ಫ್ಲ್ಯಾಟ್‌ನಲ್ಲಿ ಕಸ ಗುಡಿಸುವಾಗ ಕೆಳಗೆ ಬಿದ್ದಿರುವ 100 ರೂಪಾಯಿಯನ್ನು ಮಾಲೀಕರಿಗೆ ಕೊಟ್ಟಿದ್ದಾರೆ. ಆದರೆ ಹಣದ ಜೊತೆಗೆ ಮನೆಯಲ್ಲಿ ಚಿನ್ನದ ಉಂಗುರು ಕಳ್ಳತನವಾಗಿದೆ ಎಂದು ಆರೋಪಿಸಿದ್ದ ಫ್ಲ್ಯಾಟ್ ಮಾಲೀಕರು ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಸುಂದರಿ ಬೀಬಿ ಹಾಗೂ ಆಕೆಯ ಪತಿಯನ್ನು ಠಾಣೆಗೆ ಕರೆದೊಯ್ದಿದ್ದ ಪೊಲೀಸರು ಮನಬಂದಂತೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತರೊಬ್ಬರು ಮಧ್ಯ ಪ್ರವೇಶಿಸಿದ ಬಳಿಕ ದಂಪತಿಯನ್ನು ಬಿಟ್ಟು ಕಳಿಸಿರುವ ಪೊಲೀಸರ ವಿರುದ್ಧ ಮಹಿಳೆಗೆ ಶೌಚಕ್ಕೂ ಹೋಗಲಾರದಂತೆ ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿತ್ತು.


