HomeGadag Newsಅಕ್ರಮ ಬಡ್ಡಿ ದಂಧೆ ಮೇಲೆ ಪೊಲೀಸರ ಭರ್ಜರಿ ದಾಳಿ: ₹60 ಲಕ್ಷ ಮೌಲ್ಯದ ಚಿನ್ನ, ₹5.5...

ಅಕ್ರಮ ಬಡ್ಡಿ ದಂಧೆ ಮೇಲೆ ಪೊಲೀಸರ ಭರ್ಜರಿ ದಾಳಿ: ₹60 ಲಕ್ಷ ಮೌಲ್ಯದ ಚಿನ್ನ, ₹5.5 ಲಕ್ಷ ನಗದು ಸೇರಿದಂತೆ ಮಹತ್ವದ ದಾಖಲೆಗಳ ಜಪ್ತಿ

For Dai;y Updates Join Our whatsapp Group

Spread the love

ಗದಗ: ಅಕ್ರಮ ಹಣಕಾಸು ವ್ಯವಹಾರ, ದುಬಾರಿ ಬಡ್ಡಿ ವಸೂಲಿ ಹಾಗೂ ಸಾಲಗಾರರಿಗೆ ಬೆದರಿಕೆ ಹಾಕುತ್ತಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಗದಗ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳು, ಚಿನ್ನ ಹಾಗೂ ನಗದು ಜಪ್ತಿಯಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಆರು ವಿಶೇಷ ತಂಡಗಳನ್ನು ರಚಿಸಿ, ಆರೋಪಿ ಮನೋಹರ ಕಟ್ಟಿಮನಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಯಿತು.

ದಾಳಿಯ ವೇಳೆ 150ಕ್ಕೂ ಹೆಚ್ಚು ಚೆಕ್‌ಗಳು, 65ಕ್ಕೂ ಹೆಚ್ಚು ಖಾಲಿ ಬಾಂಡ್‌ಗಳು, ವಿವಿಧ ಒಪ್ಪಂದ ಪತ್ರಗಳು ಹಾಗೂ ದಾಖಲೆಗಳು, 9 ಬ್ಯಾಂಕ್ ಪಾಸ್‌ಬುಕ್‌ಗಳು, 11 ಚೆಕ್‌ಬುಕ್‌ಗಳು, 5ಕ್ಕೂ ಹೆಚ್ಚು ಎಟಿಎಂ ಕಾರ್ಡ್‌ಗಳು ಮತ್ತು 3 ಪ್ಯಾನ್ ಕಾರ್ಡ್‌ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದರ ಜೊತೆಗೆ ಯಾವುದೇ ಲೆಕ್ಕಪತ್ರಗಳಲ್ಲಿ ನಮೂದಿಸದ 422.4 ಗ್ರಾಂ ಚಿನ್ನವನ್ನು ಜಪ್ತಿ ಮಾಡಲಾಗಿದ್ದು, ಅದರ ಅಂದಾಜು ಮೌಲ್ಯ ಸುಮಾರು ₹60 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಸುಮಾರು ₹5.5 ಲಕ್ಷ ನಗದು ಹಣವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಶೋಧ ಕಾರ್ಯಾಚರಣೆಯಲ್ಲಿ 10 ಗೋವಾ ಮದ್ಯದ ಬಾಟಲಿಗಳೂ ಪತ್ತೆಯಾಗಿದ್ದು, ಅವುಗಳನ್ನು ಸಹ ಜಪ್ತಿ ಮಾಡಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ದುಬಾರಿ ಬಡ್ಡಿ ವಸೂಲಿ, ಸಾಲಗಾರರಿಗೆ ಬೆದರಿಕೆ ಹಾಗೂ ಅಕ್ರಮ ಹಣಕಾಸು ವ್ಯವಹಾರ ನಡೆಸುತ್ತಿರುವ ಕುರಿತು ಸಾಕ್ಷ್ಯಾಧಾರಗಳು ದೊರೆತ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸುಲಿಗೆ, ಬೆದರಿಕೆ, ಕ್ರಿಮಿನಲ್ ಇಂಟಿಮಿಡೇಷನ್ ಸೇರಿದಂತೆ ವಿವಿಧ ಕಲಂಗಳಡಿ ಹಾಗೂ ಮೈಕ್ರೋಫೈನಾನ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ದಾಖಲೆಗಳ ಪರಿಶೀಲನೆ ಹಾಗೂ ಹಣಕಾಸು ವ್ಯವಹಾರಗಳ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಬೆಟಗೇರಿ ಸಿಪಿಐ ದೀರಜ್ ಸಿಂಧೆ, ಬೆಟಗೇರಿ ಬಡಾವಣೆ ಪಿಎಸ್‌ಐ ಮಾರುತಿ ಜೋಗದಂಡಕರ್, ಎಎಸ್‌ಐ ಗುಡ್ಲಾನೂರು ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

“ಅಕ್ರಮ ಬಡ್ಡಿ ದಂಧೆ ನಡೆಸಿ ಜನರನ್ನು ಶೋಷಿಸುವವರ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಯಲಿದೆ. ಸಮಾಜಕ್ಕೆ ಹಾನಿಕಾರಕವಾಗಿರುವ ಇಂತಹ ಜಾಲಗಳನ್ನು ಬೇರು ಸಮೇತ ಕಿತ್ತೊಗೆಯುವುದು ಪೊಲೀಸ್ ಇಲಾಖೆಯ ಆದ್ಯತೆಯಾಗಿದೆ.”

– ರೋಹನ್ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!