ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನಲ್ಲಿ ಪಡಿತರ ಅಕ್ಕಿಯ ಅಕ್ರಮ ಮಾರಾಟ ಮತ್ತು ಸಾಗಾಟ ಜಾಲ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ದಂಧೆಕೋರರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆಯವರು ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ವೇಳೆ ಸಂಘಟನೆಯ ತಾಲೂಕು ಅಧ್ಯಕ್ಷ ಇಸ್ಮಾಯಿಲ್ ಆಡೂರ ಹಾಗೂ ಮುಖಂಡ ರಮೇಶ ಹಂಗನಕಟ್ಟಿ ಮಾತನಾಡಿ, “ಬಡಜನರ ಹಸಿವು ನೀಗಿಸಲು ಸರ್ಕಾರ ಉಚಿತವಾಗಿ ನೀಡುವ ಪಡಿತರ ಅಕ್ಕಿಯನ್ನು ಕೆಲ ದಂಧೆಕೋರರು ಮನೆಮನೆಗೆ ತೆರಳಿ ಕೆಜಿಗೆ ₹12ರಿಂದ ₹15ಕ್ಕೆ ಖರೀದಿಸಿ, ಬಳಿಕ ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಅಕ್ರಮವಾಗಿ ಸಂಗ್ರಹಿಸಲಾಗುವ ಅಕ್ಕಿಯನ್ನು ಲಾರಿಗಳ ಮೂಲಕ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ಸಾಗಾಟ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಈ ಜಾಲ ನಡೆಯುತ್ತಿದ್ದರೂ ಆಹಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಅಕ್ಕಿ ಖರೀದಿ, ಸಂಗ್ರಹ ಹಾಗೂ ಸಾಗಾಟದಲ್ಲಿ ತೊಡಗಿರುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಸಂಬಂಧಪಟ್ಟ ಅಧಿಕಾರಿಗಳ ಪಾತ್ರದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಲಕ್ಷ್ಮೇಶ್ವರ ತಾಲೂಕಿನಲ್ಲಿ ಚೆಕ್‌ಪೋಸ್ಟ್ ಹಾಗೂ ವಿಶೇಷ ನಿಗಾ ಘಟಕ ಸ್ಥಾಪಿಸಿ, ಬಡವರ ಪಾಲಿನ ಪಡಿತರ ಅಕ್ಕಿ ಕಾಳಸಂತೆಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಇಸಾಕಭಾಷಾ ಹರಪನಹಳ್ಳಿ, ಸದಾನಂದ ನಂದೆಣ್ಣವರ, ಶರಣಪ್ಪ ಬಸಾಪುರ, ಪೀರಸಾಬ್ ರಿತ್ತಿ, ಮೈನು ಮೊಮೀನ್, ತನ್ವೀರ್ ರಿತ್ತಿ, ಕರೀಂಸಾಬ್ ಶಿರಹಟ್ಟಿ, ಸಿದ್ದಲಿಂಗೇಶ ಮರಳಿಹಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



