ಕಳಪೆ ಕಾಮಗಾರಿ: ಈಜುಕೊಳ ಕಾಮಗಾರಿ ಸ್ಥಗಿತಗೊಳಿಸಲು ಶಾಸಕ ಜಿ.ಎಸ್. ಪಾಟೀಲ ಸೂಚನೆ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ 2 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈಜುಕೊಳದ ಸ್ಥಳಕ್ಕೆ ಶಾಸಕ ಜಿ.ಎಸ್. ಪಾಟೀಲ ಭೇಟಿ ನೀಡಿ, ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಘಟನೆ ರವಿವಾರ ಜರುಗಿತು.

Advertisement

ರೋಣ ಪಟ್ಟಣದ ಕ್ರೀಡಾಪಟುಗಳ ಇಚ್ಛೆಯಂತೆ ಕ್ರೀಡಾಂಗಣದಲ್ಲಿ ಈಜುಕೋಳವನ್ನು ನಿರ್ಮಿಸಲಾಗುತ್ತಿದೆ. ನಾಗರಿಕ ಸಮುದಾಯದ ಹಾಗೂ ಕ್ರೀಡಾಪಟುಗಳ ಬೆಳವಣಿಗೆಯ ಉದ್ದೇಶದಿಂದ 2 ಕೋಟಿ ರೂಗಳ ವೆಚ್ಚದಲ್ಲಿ ಈಜುಕೊಳವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಶಾಸಕ ಜಿ.ಎಸ್. ಪಾಟೀಲರು ವೀಕ್ಷಣೆಗೆ ತೆರಳಿದ್ದರು. ಅಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿಯನ್ನು ಕಂಡು ಕೆಲ ಕ್ಷಣ ತಬ್ಬಿಬ್ಬಾದ ಶಾಸಕರು, ಈ ರೀತಿ ಕೆಲಸ ನಿರ್ವಹಿಸುವ ಅಗತ್ಯವಿಲ್ಲ. 2 ಕೋಟಿ ರೂಗಳ ವೆಚ್ಚದಲ್ಲಿ ಈಜುಕೊಳವನ್ನು ನಿರ್ಮಿಸಲಾಗುತ್ತಿದೆ. ಸರಕಾರದ ಅನುದಾನಕ್ಕೆ ಬೆಲೆ ಇಲ್ಲವೇ ಎಂದು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಸರಕಾರ ನೀಡಿದ ಅನುದಾನ ಸದ್ಬಳಕೆಯಾಗಬೇಕು. ಇಲ್ಲಿ ನೋಡಿದರೆ ಕಾಮಗಾರಿ ಕಳಪೆ ಮಟ್ಟದ್ದಿದೆ. ಮುಖ್ಯವಾಗಿ ನೀರನ್ನು ಸಹ ಬಳಕೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸೂಚಿಸಿದರು.

ಒಟ್ಟಿನಲ್ಲಿ, ಈಜುಕೊಳದ ಕಾಮಗಾರಿ ವೀಕ್ಷಿಸಿ ಸ್ಥಗಿತಗೊಳಿಸಲು ಸೂಚನೆ ನೀಡಿದ ಶಾಸಕ ಜಿ.ಎಸ್. ಪಾಟೀಲರ ನಡೆಯಿಂದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಲ್ಲಿ ಭಯ ಆವರಿಸಿದಂತಾಗಿದೆ.

ಈಜುಕೊಳ ನಿರ್ಮಾಣಕ್ಕೆ ಉಪಯೋಗಿಸುತ್ತಿರುವ ಎಲ್ಲ ವಸ್ತುಗಳನ್ನು ಪರಿಶೀಲಿಸಿದ ಶಾಸಕ ಜಿ.ಎಸ್. ಪಾಟೀಲ, ನಿಮ್ಮ ಸ್ವಂತ ಮನೆಗಳನ್ನು ಹೀಗೆಯೇ ನಿರ್ಮಿಸುತ್ತೀರಾ, ಅಲ್ಲದೆ 2 ಕೋಟಿ ರೂ ಅನುದಾನದ ಈ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂಬ ಅರಿವು ನಿಮಗಿಲ್ಲವೇ ಎಂದು ಗುತ್ತಿಗೆದಾರರನ್ನು ಪ್ರಶ್ನಿಸಿದರು. ಇಂತಹ ಕಳಪೆ ಕಾಮಗಾರಿಗಳಿಂದ ಕೆಟ್ಟ ಹೆಸರು ತರುತ್ತೀರಿ. ನಾನು ಇದಕ್ಕೆ ಒಪ್ಪುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here