ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಕಲೋತ್ಸವ ಮತ್ತು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗುತ್ತವೆ. ಆದ್ದರಿಂದ ಮಕ್ಕಳ ಉತ್ಸಾಹವನ್ನು ಕುಂಠಿಸದೆ ಅವರಲ್ಲಿನ ಪ್ರತಿಭೆಗೆ ಮನ್ನಣೆ ನೀಡಬೇಕಾದುದು ಪಾಲಕರ ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದು ಎಸ್.ಎ.ವ್ಹಿ.ವ್ಹಿ.ಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಅಭಿಪ್ರಾಯಪಟ್ಟರು.
ಅವರು ಗದಗ ಜಿಲ್ಲಾ ಪಂಚಾಯಿತಿ, ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಪಟ್ಟಣದ ಎಸ್.ಎ.ವ್ಹಿ.ವ್ಹಿ.ಪಿ ಸಮಿತಿಯ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ 2024-25ನೇ ಸಾಲಿನ ನರೇಗಲ್ಲ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಅನಾವರಣ ಮಾಡುವ ಮೂಲಕ ಅವರ ಸರ್ವಾಂಗೀಣ ಬೆಳವಣಿಗೆಗೆ ಅವಕಾಶ ಕಲ್ಪಿಸಬೇಕು. ಗ್ರಾಮೀಣ ಮಕ್ಕಳು ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು. ಕೀಳರಿಮೆ ಬಿಟ್ಟು ತಮ್ಮಲ್ಲಿನ ಪ್ರತಿಭೆಯನ್ನು ಇತರ ಮಕ್ಕಳ ಎದುರು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಬೇಕು ಎಂದರು.
ಕೆವಿಬಿಎಮ್ ಉಚಿತ ಪ್ರಸಾದ ನಿಲಯದ ಚೇರಮನ್ ಮಲ್ಲಿಕಾರ್ಜುನಪ್ಪ ಮೆಣಸಗಿ, ಎಸ್.ಎ. ಬಾಲಕಿಯರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಸ್.ಎನ್. ಹೂಲಗೇರಿ, ಎಸ್.ಎ. ಬಾಲಕರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಮ್.ಬಿ. ಸಜ್ಜನ, ಶ್ರೀಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ.ಜಿ. ಶಿರ್ಸಿ ಎಸ್.ಎ.ವ್ಹಿ.ವ್ಹಿ.ಪಿ ಸಮಿತಿಯ ಆಡಳಿತ ಮಂಡಳಿಯ ಸದಸ್ಯ ನಿಂಗನಗೌಡ ಲಕ್ಕನಗೌಡ್ರ, ನರೇಗಲ್ಲ ಸಿಆರ್‌ಪಿ ಜ್ಯೋತಿ ಬೇಲೇರಿ, ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಿಕ್ಷಕರು ಸೇರಿದಂತೆ ಇನ್ನಿತರರು ಇದ್ದರು. ಶಿಕ್ಷಕ ಎಮ್.ವಿ. ಬಿಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಐ. ಕೋಳಿವಾಡ ನಿರೂಪಿಸಿದರು. ಐ.ಬಿ. ಒಂಟೆಲಿ ವಂದಿಸಿದರು.