ವಿಜಯಸಾಕ್ಷಿ ಸುದ್ದಿ, ಬೆಟಗೇರಿ : ಯಾವುದೇ ಸಾಧನೆಗೆ ಸತತ ಪ್ರಯತ್ನ ಹಾಗೂ ಪರಿಶ್ರಮವೇ ಕಾರಣ. ನಮ್ಮ ಸಮಾಜದಲ್ಲಿ ಉನ್ನತ ಪರೀಕ್ಷೆಗಳಾದ ಐ.ಎ.ಎಸ್., ಯುಪಿಎಸ್‌ಸಿ ಪರೀಕ್ಷೆ ಪಾಸಾಗಿ ಯಾವುದೇ ಇಲಾಖೆಯಲ್ಲಿ ಅಧಿಕಾರಿಗಳು ಇಲ್ಲದೇ ಇರುವುದು ವಿಷಾದನೀಯ. ಕಾರಣ ಸಮಾಜದ ವಿದ್ಯಾರ್ಥಿಗಳು ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಸಮಾಜಕ್ಕೆ ಕೀರ್ತಿ ತರಲು ಪ್ರಯತ್ನಿಸಬೇಕೆಂದು ಸಿಎ ಶಂಕರಸಾ ವಿ.ಲದವಾ ಹೇಳಿದರು.
ಇತ್ತೀಚೆಗೆ ಎಸ್.ಎಸ್.ಕೆ. ಸಮಾಜ ಬೆಟಗೇರಿಯ ಆಶ್ರಯದಲ್ಲಿ ಡಾ. ಎನ್.ವ್ಹಿ. ಬದಿ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ಎಸ್.ಎಸ್.ಎಲ್.ಸಿ., ಪಿಯುಸಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷರಾದ ಲೋಕನಾಥ ಬಿ.ಕಬಾಡಿ ಮಾತನಾಡುತ್ತ, ಸಮಾಜ ಹಾಗೂ ಸಮಾಜದ ಹಿರಿಯರು ನೀಡಿದ ಕೊಡುಗೆಗಳನ್ನು ಮತ್ತು ಸನ್ಮಾನವನ್ನು ಸ್ಮರಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಮತ್ತು ಸ್ನಾತಕೋತ್ತರ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ನಗದು ಪುರಸ್ಕಾರ ನೀಡಲಾಯಿತು. ಎಸ್‌ಎಸ್‌ಕೆ ಶ್ರೀ ಜಗದಂಬಾ ಶಿಕ್ಷಣ ಸಂಸ್ಥೆಯ ಶಿಕ್ಷಕಿಯರಾದ ಕವಿತಾ ಎಲ್.ಕಹಾರೆ ಹಾಗೂ ಪಿ.ಎಸ್. ಹಿರೇಮಠ ಇವರಿಗೆ 2023-24ನೇ ಸಾಲಿನಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ರಘು ಮೇರವಾಡೆ ಸ್ವಾಗತಿಸಿದರು. ಗೋವಿಂದರಾಜ ಬಸವಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸತ್ಯನಾರಾಯಣ ಆರ್.ಕಬಾಡಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರೆ, ಶಿಕ್ಷಕಿ ಮಮತಾ ನಡುವಿನಮನಿ ನಿರೂಪಿಸಿದರು. ಶ್ರೀಧರ ಬಾಕಳೆ ವಂದಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಫಕೀರಸಾ ಆರ್.ಮೇರವಾಡೆ, ಶ್ಯಾಮ ಎನ್.ಮಿಸ್ಕಿನ ಹಾಗೂ ಗೀತಾ ಡಿ.ಬದಿ ಉಪಸ್ಥಿತರಿದ್ದರು. ಎಸ್.ಎಸ್.ಕೆ. ಸಮಾಜ ಪಂಚ ಟ್ರಸ್ಟ ಕಮಿಟಿಯ ಸರ್ವ ಸದಸ್ಯರು, ಎಸ್.ಎಸ್.ಕೆ. ತರುಣ ಸಂಘ ಹಾಗೂ ಶ್ರೀ ಜಗದಂಬಾ ಮಹಿಳಾ ಮಂಡಳದ ಸರ್ವಸದಸ್ಯರು, ಎಸ್.ಎಸ್.ಕೆ. ಜಗದಂಬಾ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.
ಸಿಎ ಪರಶುರಾಮಸಾ ಮಿಸ್ಕಿನ ಡಾ. ಎನ್.ವ್ಹಿ. ಬದಿಯವರ ಜೀವನದ ಪ್ರಮುಖ ಘಟ್ಟಗಳನ್ನು ವಿವರಿಸುತ್ತಾ, ವ್ಯಕ್ತಿಯ ಜೀವನದಲ್ಲಿ ಗುರಿ ಮುಖ್ಯ. ಕಷ್ಟಪಟ್ಟು ಓದುವದದಷ್ಟೇ ಅಲ್ಲದೆ ಇಷ್ಟಪಟ್ಟು ಓದಿದರೆ ಜೀವನದಲ್ಲಿ ಉನ್ನತ ಸ್ಥಾನ ಪಡೆಯಬಹುದು. ಕಾರಣ ವಿದ್ಯಾರ್ಥಿಗಳು ಅವರನ್ನು ಅನುಸರಿಸಬೇಕೆಂದು ತಿಳಿಸಿದರು.